ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Harish Kera Column: ಬೆಳಕು ಮತ್ತು ಬೆಂಕಿ: ಇದು ಪೆಟ್ರೋಲಿಯಂ

ಜರ್ಮನಿ ‘ಪ್ಯಾಂಥರ್’ ಎಂಬ ಯುದ್ಧ ನೌಕೆಯನ್ನು ಮೊರೊಕ್ಕೊದ ಅಟ್ಲಾಂಟಿಕ್ ಕರಾವಳಿಯ ಅಗದೀರ್ ಬಂದರಿಗೆ ಕಳುಹಿಸಿತು. ಇದರ ಉದ್ದೇಶ ಆಫ್ರಿಕಾದಲ್ಲಿ ಫ್ರಾನ್ಸ್‌ನ ಪ್ರಭಾವವನ್ನು ತಡೆಯುವುದು ಮತ್ತು ಜರ್ಮನಿಯ ಮೇಲುಗೈ. ಈ ಘಟನೆ ಜಾಗತಿಕ ರಾಜಕೀಯ ಸಂಕಷ್ಟಕ್ಕೆ ಕಾರಣವಾಯಿತು.

ಕಾಡುದಾರಿ

1911ನೇ ಇಸವಿ. ವಿನ್‌ಸ್ಟನ್ ಚರ್ಚಿಲ್ ಆಗ ಬ್ರಿಟನ್‌ನ ಗೃಹ ಕಾರ್ಯದರ್ಶಿಯಾಗಿದ್ದ. ಆಗ ಜರ್ಮನಿ ತನ್ನ ನೌಕಾಪಡೆಯ ಶಕ್ತಿ ಹೆಚ್ಚಿಸಿಕೊಳ್ಳುತ್ತಿತ್ತು. ಜರ್ಮನಿಯೊಂದಿಗೆ ನಡೆಯು ತ್ತಿದ್ದ ನೌಕಾಪಡೆಯ ಸ್ಪರ್ಧೆಗಾಗಿ ಹೆಚ್ಚು ಯುದ್ಧ ನೌಕೆಗಳನ್ನು ನಿರ್ಮಿಸುವ ಬದಲು, ಆ ಹಣವನ್ನು ಕಲ್ಯಾಣ ಕಾರ್ಯಗಳಿಗೆ ಬಳಸಬೇಕು ಎನ್ನುತ್ತಿದ್ದ ಚರ್ಚಿಲ್.

ಜರ್ಮನಿಯ ಉದ್ದೇಶ ಆಕ್ರಮಣ ಅಲ್ಲ, ಯುದ್ಧವೂ ಅನಿವಾರ್ಯವಲ್ಲ ಎಂಬುದು ಅವನ ಅಭಿಪ್ರಾಯವಾಗಿತ್ತು. ಆಗೆ ಯುದ್ಧನೌಕೆಗಳು ಕಲ್ಲಿದ್ದಲು ಇಂಧನದಿಂದ ನಡೆಯುತ್ತಿದ್ದವು. ಆದರೆ 1911ರ ಜುಲೈ 1ರಂದು ನಡೆದ ಒಂದು ಘಟನೆ ಎಲ್ಲವನ್ನೂ ಬದಲಿಸಿತು.

ಜರ್ಮನಿ ‘ಪ್ಯಾಂಥರ್’ ಎಂಬ ಯುದ್ಧ ನೌಕೆಯನ್ನು ಮೊರೊಕ್ಕೊದ ಅಟ್ಲಾಂಟಿಕ್ ಕರಾವಳಿಯ ಅಗದೀರ್ ಬಂದರಿಗೆ ಕಳುಹಿಸಿತು. ಇದರ ಉದ್ದೇಶ ಆಫ್ರಿಕಾದಲ್ಲಿ ಫ್ರಾನ್ಸ್‌ನ ಪ್ರಭಾವವನ್ನು ತಡೆಯುವುದು ಮತ್ತು ಜರ್ಮನಿಯ ಮೇಲುಗೈ. ಈ ಘಟನೆ ಜಾಗತಿಕ ರಾಜಕೀಯ ಸಂಕಷ್ಟಕ್ಕೆ ಕಾರಣವಾಯಿತು.

ಕೆಲವು ವಾರ ಯುರೋಪ್‌ನಲ್ಲಿ ಯುದ್ಧದ ಭೀತಿ ಆವರಿಸಿತು. ಚರ್ಚಿಲ್ ನೋಟ ಬದಲಾ ಯಿತು. ಜರ್ಮನಿ ಜಗತ್ತಿನ ಮೇಲೆ ಪ್ರಭುತ್ವ ಸಾಧಿಸಲು ಯತ್ನಿಸುತ್ತಿದೆ ಎಂಬ ನಂಬಿಕೆ ಆತನಿಗೆ ಬಂತು. ಅಗದೀರ್ ಘಟನೆಯ ನಂತರ ಚರ್ಚಿಲ್‌ನನ್ನು ಬ್ರಿಟನ್ ನೌಕಾ ಪಡೆಯ ಮುಖ್ಯಸ್ಥನಾಗಿ ನೇಮಿಸಲಾಯಿತು. ಜರ್ಮನಿಯ ಸವಾಲನ್ನು ಎದುರಿಸಲು ಬ್ರಿಟಿಷ್ ನೌಕಾಪಡೆಯನ್ನು ಆತ ಸಂಪೂರ್ಣವಾಗಿ ಸಿದ್ಧಗೊಳಿಸಬೇಕಿತ್ತು. ಈ ಸಂದರ್ಭ ದಲ್ಲಿ ಆತ ಎದುರಿಸಿದ ಪ್ರಮುಖ ಪ್ರಶ್ನೆ - ನೌಕಾಪಡೆಯ ಇಂಧನವನ್ನು ಕಲ್ಲಿದ್ದಲಿನಿಂದ ತೈಲಕ್ಕೆ ಬದಲಿಸಬೇಕೇ ಎಂಬುದು.

ಇದನ್ನೂ ಓದಿ: Harish Kera Column: ಗಾಯದ ಬಿರುಕಿಲ್ಲದೆ ಬೆಳಕು ಒಳನುಸುಳುವುದು ಹೇಗೆ!

ಇದಕ್ಕೆ ವಿರೋಧವೂ ಬಹಳ ಇತ್ತು. ಕಲ್ಲಿದ್ದಲು ಬ್ರಿಟನ್‌ನ ದೊರೆಯುತ್ತಿತ್ತು. ತೈಲವನ್ನು ಪರ್ಷಿಯಾದಿಂದ ತರಬೇಕಾಗುತ್ತಿತ್ತು. ಭದ್ರತೆ ಕಡಿಮೆ. ಆದರೂ ತೈಲದಿಂದ ನೌಕೆಗಳಿಗೆ ಹೆಚ್ಚು ವೇಗ ಮತ್ತು ಕಾರ್ಯಕ್ಷಮತೆ ಎಂಬುದು ಗೊತ್ತಿತ್ತು. ಕೊನೆಗೂ ಬ್ರಿಟನ್ ನೌಕಾಪಡೆ ಯ ಇಂಧನವನ್ನು ತೈಲಕ್ಕೆ ಬದಲಿಸಲಾಯಿತು. ಈ ನಿರ್ಧಾರ ಜಗತ್ತಿನ ಇತಿಹಾಸದಲ್ಲಿ ಮಹತ್ವದ್ದೆನಿಸಿತು.

ಮುಂದೆ ನಡೆದ ಎರಡು ವಿಶ್ವಯುದ್ಧಗಳಲ್ಲಿ ಜರ್ಮನಿಯ ಮಹಾಸೈನ್ಯದೊಂದಿಗೆ ಹೋರಾಡಲು ಬ್ರಿಟನ್ನೂ ಸೇರಿದಂತೆ ಮಿತ್ರಪಡೆಗಳು ಕಲ್ಲಿದ್ದಲಿನೊಂದಿಗೆ ತೈಲವನ್ನೂ ಯಥೇಚ್ಛವಾಗಿ ಬಳಸಿದವು. ತೈಲವೇ ಶಕ್ತಿಯ ಸಂಕೇತ ಎಂಬುದನ್ನು ಚರ್ಚಿಲ್ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದ. ಅವನು ಊಹಿಸಿದಂತೆಯೇ ಇಪ್ಪತ್ತನೇ ಶತಮಾನದಲ್ಲಿ ತೈಲವೇ ಜಗತ್ತಿನ ಎನರ್ಜಿಯ, ಅಽಕಾರದ ಕೀಲಿಕೈ ಆಯಿತು.

1930ರ ದಶಕ. ಆ ಸಮಯದಲ್ಲಿ ಇನ್ನೂ ಸೌದಿ ಅರೇಬಿಯಾ ಸಂಪೂರ್ಣ ಮರಳುಗಾಡು ಮತ್ತು ಬಡ ದೇಶ. ಅಲ್ಲಿ ತೈಲ ಇದೆಯೋ ಇಲ್ಲವೋ ಎಂದು ಯಾರಿಗೂ ಖಚಿತವಿರಲಿಲ್ಲ. ಆದರೂ ಅಮೆರಿಕಾದ ಸ್ಟಾಂಡರ್ಡ್ ಆಯಿಲ್ ಆಫ್ ಕ್ಯಾಲಿಫೋರ್ನಿಯಾ ಕಂಪನಿಯ ಕೆಲ ಭೂವಿeನಿಗಳು ಇಲ್ಲಿ ತೈಲಶೋಧದ ಒಂದು ದೊಡ್ಡ ಸಾಹಸಕ್ಕೆ ಹೊರಟರು.

ಕಾರುಗಳಲ್ಲಿ ಹೋಗುವಂಥ ರಸ್ತೆ ಇರಲಿಲ್ಲ. ಹಾಗಾಗಿ ಅವರು ಒಂಟೆಗಳ ಮೇಲೆ ಕ್ಯಾರವಾನ್‌ನಲ್ಲಿ ಸಾಗಿದರು. ಅವರ ಜೊತೆ ಇದ್ದದ್ದು ಹಳೆಯ ನಕ್ಷೆಗಳು, ಭೂವಿಜ್ಞಾನ ಉಪಕರಣಗಳು, ಕುಡಿಯುವ ನೀರಿನ ಡಬ್ಬಿಗಳು ಮತ್ತು ಅಪಾರ ಆಶೆ. ವಾರಗಳ ಕಾಲ ಮರು ಭೂಮಿಯಲ್ಲಿ ಸುತ್ತಿದರು. ಕೆಲವೊಮ್ಮೆ ದಿಕ್ಕೇ ತಪ್ಪುತ್ತಿದ್ದರು. ಕೆಲ ದಿನ ನೀರು ಇರುತ್ತಿರಲಿಲ್ಲ.

Screenshot_1 R

ಒಮ್ಮೆ ಒಬ್ಬ ಭೂವಿಜ್ಞಾನಿ ಒಂದು ಕಡೆ ಮರಳನ್ನು ಕೈಯಲ್ಲಿ ಹಿಡಿದು ನೋಡಿದ. ಅದರಲ್ಲಿ ಸ್ವಲ್ಪ ತೈಲದ ವಾಸನೆ ಇದ್ದಂತೆ ಅನಿಸಿತು. ಕೆಲ ವರ್ಷಗಳ ನಂತರ ಅಲ್ಲಿ ತೋಡಿದ ಬಾವಿಯಿಂದ ಭಾರೀ ಪ್ರಮಾಣದ ತೈಲ ಹೊರಬಂತು. ಅದು ದಮ್ಮಾಮ್ ಪ್ರದೇಶದ ಪ್ರಸಿದ್ಧ ತೈಲಬಾವಿ. ಆ ಒಂದು ಶೋಧದಿಂದ ಸೌದಿ ಅರೇಬಿಯಾ ವಿಶ್ವದ ದೊಡ್ಡ ತೈಲ ಶಕ್ತಿಯಾಯಿತು.

ನಂತರ ಸೌದಿ ಅರೇಬಿಯಾ ಎಂಬ ಮಹಾಕಂಪನಿ ಹುಟ್ಟಿತು. ಮಧ್ಯಪ್ರಾಚ್ಯ ಜಾಗತಿಕ ರಾಜಕೀಯದ ಕೇಂದ್ರವಾಯಿತು. ಇಂಥ ಬಹಳಷ್ಟು ಘಟನೆಗಳು, ಜಾಗತಿಕ ತೈಲ ಇತಿಹಾಸ ದ ಒಳನೋಟಗಳು, ಪೆಟ್ರೋಲಿಯಂ ಜಗತ್ತಿನ ಪ್ರಮುಖ ಇಂಧನ ಹಾಗೂ ಅಧಿಕಾರದ ಮೂಲವಾದ ಬಗೆಯನ್ನು ಇಂಧನ ತಜ್ಞ ಡೇನಿಯಲ್ ಯೆರ್ಗಿನ್ ಎಂಬಾತ ಬರೆದ "The Prize: The Epic Quest for Oil, Money and Power' ಎಂಬ ಪುಸ್ತಕ ವಿವರಿಸುತ್ತದೆ.

ಬೋರಿಂಗ್ ಇತಿಹಾಸದಂತಿರದೆ, ಸ್ವಾರಸ್ಯಕರ ಸಂಗತಿಗಳೊಂದಿಗೆ ಇದು ಓದಿಸಿಕೊಳ್ಳುತ್ತದೆ. 19ನೇ ಶತಮಾನದ ಆರಂಭದಿಂದ 20ನೇ ಶತಮಾನದ ಅಂತ್ಯದವರೆಗಿನ ಜಾಗತಿಕ ತೈಲ ಉದ್ಯಮದ ಇತಿಹಾಸವನ್ನು ವಿವರಿಸುವ ಇದು 1991ರ ಪ್ರಕಟವಾಗಿ, 1992ರ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡರೂ ಇಂದಿಗೂ ಪ್ರಸಕ್ತವಾಗಿಯೇ ಇದೆ.

ಇಂದು ತೈಲದ ರಾಜಕೀಯದ ಸುಳಿಯಲ್ಲಿ ಸಿಕ್ಕಿದ ತರಗೆಲೆಗಳಾಗಿರುವ ನಾವು ಈ ಕೃತಿ ಯನ್ನು ಓದಿದರೆ, ಕಲ್ಲೆಣ್ಣೆಯು ಜಾಗತಿಕ ಇತಿಹಾಸವನ್ನೇ ಬದಲಿಸಿದ ಚಿತ್ರಣ ಕಾಣುತ್ತದೆ. ಆದ್ದರಿಂದ ವರ್ತಮಾನವೂ ತೈಲವನ್ನೇ ನೆಚ್ಚಿದೆ ಎಂಬುದು ನಾವು ಅರ್ಥ ಮಾಡಿಕೊಳ್ಳ ಬೇಕಾದ ಸಂಗತಿ.

ಒಂದೊಂದು ತೈಲಬಾವಿಯ ಶೋಧವೂ ಒಂದೊಂದು ಕತೆಯ ಮೂಲ. ಉದಾಹರಣೆಗೆ ಇರಾನನ್ನೇ ನೋಡಬಹುದು. 1900ರ ಆರಂಭದಲ್ಲಿ ಬ್ರಿಟಿಷ್ ಉದ್ಯಮಿ ವಿಲಿಯಂ ನಾಕ್ಸ್ ಡಿಆರ್ಕಿ ಎಂಬಾತ ಇರಾನ್‌ನಲ್ಲಿ ತೈಲ ಹುಡುಕಲು ದೊಡ್ಡ ಪ್ರಮಾಣದ ಹಣ ಹೂಡಿದ್ದ. ಆದರೆ ವರ್ಷಗಳು ಕಳೆದರೂ ಏನೂ ಸಿಗಲಿಲ್ಲ.

ಮರಳುಗಾಡು, ಕಾಡು ಬೆಟ್ಟಗಳು, ರೋಗಗಳು, ದೂಳಿನ ಬಿರುಗಾಳಿ- ಎಲ್ಲವೂ ಸಮಸ್ಯೆ. ಹಣ ಖಾಲಿಯಾಗುತ್ತಿತ್ತು. ಅವನಿಗಾಗಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಜಾರ್ಜ್ ಬರ್ನಾರ್ಡ್ ರೆನಾಲ್ಡ್ಸ್ ಎಂಬಾತ ಮಸ್ಜೆದ್ ಸೊಲೆಮಾನಿ ಎಂಬ ಒಂದು ಪರ್ವತ ಪ್ರದೇಶ ದಲ್ಲಿ ತೋಡುತ್ತಿದ್ದ. 1908ರ ವೇಳೆಗೆ ಪರಿಸ್ಥಿತಿ ತುಂಬಾ ಕಷ್ಟಕರವಾಯಿತು.

ಹಣ ಮುಗಿದಿದೆ. ಕೆಲಸ ನಿಲ್ಲಿಸಿ ಎಂಬ ಸಂದೇಶ ಲಂಡನ್ ನಿಂದ ಹೊರಟಿತು. ಆದರೆ ಆ ಸಂದೇಶ ತಲುಪುವ ಮೊದಲು ರೆನಾಲ್ಡ್ಸ್ ಕೊನೆಯ ಪ್ರಯತ್ನ ಮಾಡಲು ತೀರ್ಮಾನಿಸಿದ. ಮೇ ತಿಂಗಳ ಒಂದು ಬೆಳಿಗ್ಗೆ ಹಠಾತ್ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿಸಿತು ಕೆಲವೇ ಕ್ಷಣಗಳಲ್ಲಿ ಕಪ್ಪು ದ್ರವ ಮೇಲಕ್ಕೆ ಸ್ಫೋಟಿಸಿದಂತೆ ನುಗ್ಗಿ ಬಂದಿತು.

ಇದು ಮಧ್ಯಪ್ರಾಚ್ಯದ ಮೊದಲ ದೊಡ್ಡ ತೈಲ ಶೋಧ. ಇದರಿಂದ ಹುಟ್ಟಿದ ಕಂಪನಿಯೇ ಆಂಗ್ಲೋ ಪರ್ಷಿಯನ್ ತೈಲ ಕಂಪನಿ. ಮುಂದೆ ಈ ಬಾವಿಯೇ ಬ್ರಿಟನ್‌ನ ನೌಕಾಪಡೆಗೆ ತೈಲ ಒದಗಿಸಿತು. ಮಧ್ಯಪ್ರಾಚ್ಯದ ತೈಲ ಯುಗವನ್ನು ಆರಂಭಿಸಿತು. ಮುಂದೆ ಇರಾನ್‌ನ ತೈಲದ ಮೇಲೆ ಬ್ರಿಟನ್‌ನ ಹಿಡಿತ ಹೆಚ್ಚಿತು.

ಆಂಗ್ಲೋ ಪರ್ಷಿಯನ್ ತೈಲ ಕಂಪನಿಯಲ್ಲಿ ಬ್ರಿಟನ್ ಸರ್ಕಾರ ದೊಡ್ಡ ಪಾಲು ಹೊಂದಿತ್ತು. ತೈಲ ತಮ್ಮ ದೇಶzದರೂ ಲಾಭದ ದೊಡ್ಡ ಭಾಗ ಬ್ರಿಟನ್ಗೆ ಹೋಗುತ್ತಿದ್ದುದು ಇರಾನ್‌ನ ಜನರಲ್ಲಿ ಅಸಮಾಧಾನ ಹೆಚ್ಚಿಸಿತು. ಆಗ ಇರಾನ್‌ನ ಪ್ರಧಾನಿಯಾಗಿದ್ದ ಮೊಹಮ್ಮದ್ ಮೊಸಾದೇಕ್ ಒಂದು ಧೈರ್ಯದ ನಿರ್ಧಾರ ತೆಗೆದುಕೊಂಡರು.

1951ರಲ್ಲಿ ಇರಾನ್‌ನ ತೈಲ ಇರಾನ್‌ಗೆ ಸೇರುತ್ತದೆ ಎಂದರು. ದೇಶದ ತೈಲ ಉದ್ಯಮವನ್ನು ರಾಷ್ಟ್ರೀಕರಣ ಮಾಡಿದರು. ಬ್ರಿಟನ್ ಕಂಪನಿಯ ನಿಯಂತ್ರಣವನ್ನು ತೆಗೆದು ಹಾಕಿದರು. ಈ ನಿರ್ಧಾರದಿಂದ ಬ್ರಿಟನ್ ತುಂಬಾ ಕೋಪಗೊಂಡಿತು. ಅಲ್ಲಿ ತೈಲ ಸರಬರಾಜು ಕಡಿತ ವಾಯಿತು. ಆರ್ಥಿಕ ಒತ್ತಡ ಶುರುವಾಯಿತು. ಕೊನೆಗೆ ಒಂದು ಗುಪ್ತ ಕಾರ್ಯಾಚರಣೆ ಆರಂಭವಾಯಿತು.

1953ರಲ್ಲಿ ಅಮೆರಿಕದ ಸಿಐಎ ಮತ್ತು ಬ್ರಿಟನ್‌ನ ಎಂ16 ಬೇಹುಗಾರಿಕೆ ಸಂಸ್ಥೆಗಳು ಸಂಚು ಹೂಡಿ ಇರಾನಿನಲ್ಲಿ ದಂಗೆ ಎಬ್ಬಿಸಿದವು. ಮೊಸದೇಕ್ ಅಧಿಕಾರ ಕಳೆದುಕೊಂಡರು. ಶಾಹ್ ಮತ್ತೆ ಅಧಿಕಾರದಲ್ಲಿ ಬಲವಾದ ಸ್ಥಾನ ಪಡೆದರು. ಈ ಘಟನೆ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ಇರಾನ್‌ನಲ್ಲಿ ಅನುಮಾನ ಹೆಚ್ಚಿಸಿದ್ದಲ್ಲದೆ, ನಂತರದ ಹಲವಾರು ರಾಜಕೀಯ ಘಟನೆಗಳಿಗೆ ನೆಲೆ ಸೃಷ್ಟಿಸಿತು.

ದ್ವಿತೀಯ ವಿಶ್ವಯುದ್ಧದಲ್ಲಿಯೂ ತೈಲ ಮಹತ್ವದ ಪಾತ್ರ ವಹಿಸಿತು. ಜಪಾನ್ ವೆಸ್ಟ್‌ ಇಂಡೀಸ್‌ನ ತೈಲ ಸಂಪತ್ತನ್ನು ಪಡೆಯಲು ಹೋಗುತ್ತಿದ್ದಾಗ ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆಸಿತು. ಹಿಟ್ಲರ್ ಸೋವಿಯತ್ ಒಕ್ಕೂಟದ ಮೇಲೆ ದಾಳಿ ಮಾಡಿದ ಪ್ರಮುಖ ಕಾರಣಗಳಲ್ಲಿ ಒಂದು, ಕಾಕಸಸ್ ಪ್ರದೇಶದ ತೈಲ ಕ್ಷೇತ್ರಗಳನ್ನು ಹಿಡಿಯುವುದು. ಆದರೆ ಅಮೆರಿಕದ ತೈಲ ಉತ್ಪಾದನೆಯ ಶಕ್ತಿ ಯುದ್ಧದ ಫಲಿತಾಂಶವನ್ನು ನಿರ್ಧರಿಸಿತು.

ಯುದ್ಧದ ಅಂತ್ಯದ ವೇಳೆಗೆ ಜರ್ಮನಿ ಮತ್ತು ಜಪಾನ್‌ನ ಇಂಧನ ಟ್ಯಾಂಕ್‌ಗಳು ಖಾಲಿ ಯಾಗಿದ್ದವು. ತೈಲ ಅಪಾರ ಸಂಪತ್ತನ್ನು ನೀಡುವ ಸಾಮರ್ಥ್ಯ ಹೊಂದಿದ್ದರೂ, ಕೆಲವೊಮ್ಮೆ ಅದು ‘ಮೂರ್ಖನ ನಿಧಿ’ಯೂ ಆಗಬಹುದು. ಉದಾಹರಣೆಗೆ ಇರಾನ್‌ನ ಶಾಹ್ ತನ್ನ ಅತ್ಯಂತ ದೊಡ್ಡ ಆಸೆಯಾದ ತೈಲ ಸಂಪತ್ತನ್ನು ಪಡೆದರು. ಆದರೆ ಅದೇ ಸಂಪತ್ತು ಕೊನೆಗೆ ಅವರ ಆಡಳಿತದ ಕುಸಿತಕ್ಕೆ ಕಾರಣವಾಯಿತು. ಮೆಕ್ಸಿಕೋ ದೇಶದ ಆರ್ಥಿಕತೆ ಯನ್ನೂ ತೈಲ ಒಂದು ಹಂತದಲ್ಲಿ ಬಲಪಡಿಸಿತು. ಆದರೆ ನಂತರ ಅದೇ ಆರ್ಥಿಕತೆಯನ್ನು ದುರ್ಬಲಗೊಳಿಸಿತು.

ತೈಲ ಉದ್ಯಮದ ಆರಂಭಿಕ ದಿನಗಳಲ್ಲಿ, ಸೀಮೆ ಎಣ್ಣೆ ಪ್ರಮುಖ ಉತ್ಪನ್ನವಾಗಿತ್ತು. ಕೈಗಾರಿಕೀಕರಣಕ್ಕೂ ಕಾರಣವಾದ ಈ ಕೆರೋಸಿನ್ ರಾತ್ರಿ ಕತ್ತಲೆಯನ್ನು ದೂರ ಮಾಡಿ ಕೆಲಸದ ಸಮಯವನ್ನು ವಿಸ್ತರಿಸಿತು. ಹೀಗಾಗಿ ಅದನ್ನು ಹೊಸ ಬೆಳಕು ಎಂದು ಕರೆಯ ಲಾಗುತ್ತಿತ್ತು. 19ನೇ ಶತಮಾನದ ಅಂತ್ಯದ ವೇಳೆಗೆ ಕೆರೋಸಿನ್ ಮಾರಾಟದಿಂದಲೇ ಜಾನ್ ಡಿ. ರಾಕ್ ಫೆಲ್ಲರ್ ಅಮೆರಿಕದ ಅತಿ ಶ್ರೀಮಂತ ವ್ಯಕ್ತಿಯಾದರು. ಆಗ ಪೆಟ್ರೋಲ್ ಬಹುತೇಕ ಉಪಯೋಗವಿಲ್ಲದ ಉಪ ಉತ್ಪನ್ನವಾಗಿತ್ತು.

ಕೆಲವೊಮ್ಮೆ ಅದನ್ನು ಗ್ಯಾಲನ್ʼಗೆ ಎರಡು ಸೆಂಟ್‌ಗೆ ಮಾರಲಾಗುತ್ತಿತ್ತು. ಮಾರಾಟವಾಗ ದಿದ್ದರೆ ನದಿಗಳ ಸುರಿಯಲಾಗುತ್ತಿತ್ತು. ವಿದ್ಯುತ್ ದೀಪದ ಶೋಧದ ನಂತರ ತೈಲ ಉದ್ಯಮ ಮುಗಿಯಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಪೆಟ್ರೋಲ್ ಬಳಸಿ ಓಡುವ ಆಂತರಿಕ ದಹನ ಎಂಜಿನ್ ಆವಿಷ್ಕಾರವಾದ ಬಳಿಕ ತೈಲ ಉದ್ಯಮಕ್ಕೆ ಹೊಸ ಮಾರುಕಟ್ಟೆ ಸಿಕ್ಕಿತು- ಮತ್ತು ಹೊಸ ನಾಗರಿಕತೆ ಹುಟ್ಟಿತು.

ಈ ಪುಸ್ತಕ ಓದುತ್ತ ಹೋದರೆ ಹಲವು ವಿಷಯಗಳು ಸ್ಪಷ್ಟವಾಗುತ್ತ ಹೋಗುತ್ತವೆ- ಬಂಡವಾಳಶಾಹಿ ಮತ್ತು ಆಧುನಿಕ ಜಾಗತಿಕ ವ್ಯವಹಾರದ ಬೆಳವಣಿಗೆ, ತೈಲ ಮತ್ತು ಜಾಗತಿಕ ರಾಜಕೀಯದ ಸಂಬಂಧ. ಜಗತ್ತಿನ ರಾಜಕೀಯವನ್ನು ತೈಲದ ನಕ್ಷೆ ಅರ್ಥ ಮಾಡಿಕೊಳ್ಳದೆ ತಿಳಿಯಲು ಸಾಧ್ಯವಿಲ್ಲ.

ಯಾವ ದೇಶದಲ್ಲಿ ತೈಲ ಇದೆ, ಯಾರ ಕೈಯಲ್ಲಿ ಅದನ್ನು ನಿಯಂತ್ರಿಸುವ ಶಕ್ತಿ ಇದೆ, ಮತ್ತು ಯಾವ ಮಾರ್ಗಗಳಿಂದ ಅದು ಸಾಗುತ್ತದೆ - ಇವೆಲ್ಲವೂ ಜಗತ್ತಿನ ಅಧಿಕಾರದ ಸಮತೋಲನ ವನ್ನು ನಿರ್ಧರಿಸುತ್ತವೆ. ಇಂದಿನ ಪರಿಸ್ಥಿತಿಯನ್ನೇ ನೋಡಿ. ಹೊರ್ಮುಜ್ ಜಲಸಂಧಿ ಯಂತಹ ಒಂದು ಸಣ್ಣ ಭೌಗೋಳಿಕ ಮಾರ್ಗವೇ ವಿಶ್ವದ ಆರ್ಥಿಕತೆಯನ್ನು ನಡುಗಿಸ ಬಹುದು. ಇಲ್ಲಿರುವ ದುರಂತವನ್ನೂ ನಾವು ಗಮನಿಸಬೇಕು.

ತೈಲದಿಂದಾಗಿ ನಾವು- ನಮ್ಮ ಸಮಾಜವೇ ಹೈಡ್ರೋಕಾರ್ಬನ್ ಸಮಾಜವಾಗಿ ಬದಲಾಗಿದೆ. ಅಂದರೆ ಮಾನವ ಜೀವನವೇ ತೈಲ ಮತ್ತು ಅನಿಲದ ಮೇಲೆ ಅವಲಂಬಿತವಾಗಿದೆ. ಒಂದು ತಿಂಗಳು ಎಲ್‌ಪಿಜಿ ಬರಲಿಲ್ಲ ಎಂದರೆ ಭಾರತದ ಒಲೆಗಳಿಗಲ್ಲ, ಮನೆಗಳಿಗೇ ಬೆಂಕಿ ಬೀಳುತ್ತದೆ.

ಹರೀಶ್‌ ಕೇರ

View all posts by this author