ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ನಂಬಿದವರ ಹೃದಯದೊಳಗೆ ನೆಲೆಸುವ ಶ್ರೀಕೃಷ್ಣ

ಸೂರ್ಯೋದಯವಾಯಿತು, ಹುಡುಗರಿಬ್ಬರೂ ಬರುವುದನ್ನು ನೋಡಿ ಕಳ್ಳ ಮರದಿಂದ ಕೆಳಗಿಳಿದು, ಅವರ ಬಳಿಗೆ ನಡೆದ. ಮನಮೋಹಕ ಬಾಲಕೃಷ್ಣನನ್ನು ಕಂಡು ಮೈಮರೆತ. ತನಗೇ ಅರಿವಿಲ್ಲದಂತೆ ಕೈಗಳನ್ನೆತ್ತಿ ಜೋಡಿಸಿದ. ಅವನ ಕಣ್ಣುಗಳು ಆನಂದದಿಂದ ತುಂಬಿಬಂದವು... ಕಣ್ಣ ನೋಟವನ್ನು ಶ್ರೀಕೃಷ್ಣನ ಮೇಲಿಂದ ಕದಲಿಸಿ ಬೇರೆಡೆಗೆ ಹರಿಸುವುದು ಕಳ್ಳನಿಗೆ ಸಾಧ್ಯವಾಗಲೇ ಇಲ್ಲ.

ನಂಬಿದವರ ಹೃದಯದೊಳಗೆ ನೆಲೆಸುವ ಶ್ರೀಕೃಷ್ಣ

-

ಒಂದೊಳ್ಳೆ ಮಾತು

rgururaj628@gmail.com

ಅದು ಓರ್ವ ಧನಿಕನ ಮನೆ. ಅಲ್ಲಿ ಬ್ರಾಹ್ಮಣನೊಬ್ಬ ಶ್ರೀಮದ್ಭಾಗವತದ ಉಪನ್ಯಾಸವನ್ನು ನೀಡುತ್ತಿದ್ದ. ಅದೇ ಸಮಯದಲ್ಲಿ ಕಳ್ಳನೊಬ್ಬ ಆ ಧನಿಕನ ಮನೆಗೆ ನುಗ್ಗಿದ, ಒಂದು ಮೂಲೆಯಲ್ಲಿ ಅಡಗಿ ಕುಳಿತ. ಸಹಜವಾಗಿ ಶ್ರೀಮದ್ಭಾಗವತದ ಕಥೆಯು ಕಳ್ಳನ ಕಿವಿಗೆ ಬೀಳುತ್ತಿತ್ತು.

ಶ್ರೀಮದ್ಭಾಗವತ ಎಂದರೆ ಶ್ರೀಕೃಷ್ಣನ ಅಪಾರ ಮಹಿಮೆಯ ಅದ್ಭುತ ಕಥೆಗಳ ಸಂಗ್ರಹ. ಬಾಲಕೃಷ್ಣ ನು ಧರಿಸಿದ್ದ ಸುಂದರ ಆಭರಣಗಳನ್ನು ಆ ಬ್ರಾಹ್ಮಣ ವರ್ಣಿಸುತ್ತಿದ್ದ. ತಾಯಿ ಯಶೋದೆಯು ಪುಟ್ಟ ಕೃಷ್ಣನಿಗೆ ಯಾವ ರೀತಿ ಶೃಂಗಾರ ಮಾಡಿ ಗೋವುಗಳೊಂದಿಗೆ ಕಳುಹಿಸುತ್ತಿದ್ದಳು ಎಂಬು ದನ್ನು ಮನಮುಟ್ಟುವಂತೆ ವಿವರಿಸುತ್ತಿದ್ದ.

ವಿಸ್ಮಿತನಾಗಿ ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಕಳ್ಳ, ‘ಹೇಗಾದರೂ ಮಾಡಿ ಆ ಪುಟ್ಟ ಹುಡುಗನನ್ನು ಹುಡುಕಿ, ಅವನು ಧರಿಸಿರುವ ಆಭರಣಗಳನ್ನೆಲ್ಲಾ ಸೆಳೆದು ನನ್ನದಾಗಿಸಿಕೊಂಡರೆ, ಪ್ರತಿನಿತ್ಯವೂ ಸಣ್ಣಪುಟ್ಟ ಕಳ್ಳತನ ಮಾಡುವ ಕಷ್ಟ ತಪ್ಪುತ್ತದೆ’ ಎಂದು ಆಲೋಚಿಸಿದ. ಆ ಪುಟ್ಟ ಹುಡುಗ ಎಲ್ಲಿರುತ್ತಾನೆ ಎಂದು ತಿಳಿಯ ಬಯಸಿದ ಕಳ್ಳನು ಆ ಬ್ರಾಹ್ಮಣನನ್ನು ಹಿಂಬಾಲಿಸಿ ನಡೆದ. ಕಳ್ಳ ನನ್ನು ಕಂಡ ಬ್ರಾಹ್ಮಣ, ಪ್ರವಚನದಲ್ಲಿ ದೊರೆತ ಅಲ್ಪ ದಕ್ಷಿಣೆಯನ್ನು ಕಳೆದುಕೊಳ್ಳುವ ಭಯದಲ್ಲಿ ಕಂಗಾಲಾಗಿ, “ನನ್ನಲ್ಲಿ ಏನೂ ಇಲ್ಲ" ಎಂದು ಬಡಬಡಿಸಿದ.

ಇದನ್ನೂ ಓದಿ: Roopa Gururaj Column: ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಮಹಿಮೆ

“ನನಗದೆಲ್ಲಾ ಬೇಡ. ಆಗಲೇ ನೀನು ಹೇಳಿದಂತೆ ಆ ಬಾಲಕೃಷ್ಣ ಎಲ್ಲಿ ಸಿಗುತ್ತಾನೆ? ಆ ಸ್ಥಳದ ಗುರುತು ಹೇಳು, ನಾನು ಅಲ್ಲಿಗೆ ಹೋಗಬೇಕು" ಎಂದ ಕಳ್ಳ. ಬೀಸುವ ದೊಣ್ಣೆಯಿಂದ ತಪ್ಪಿಸಿ ಕೊಳ್ಳುವ ಆಲೋಚನೆಯಲ್ಲಿ ಆ ವಿಪ್ರನು, “ವೃಂದಾವನದಲ್ಲಿ ಯಮುನಾ ನದಿಯ ದಡದಲ್ಲಿ ಇಬ್ಬರು ಬಾಲಕರು ಗೋವುಗಳನ್ನು ಮೇಯಿಸುತ್ತಿರುತ್ತಾರೆ.

ಅವರಲ್ಲಿ ಒಬ್ಬ ಬೆಳ್ಳಗಿದ್ದಾನೆ, ಮತ್ತೊಬ್ಬ ಕಪ್ಪಗಿದ್ದಾನೆ. ಕಪ್ಪು ಹುಡುಗನ ಕೈಯಲ್ಲಿ ಒಂದು ಕೊಳಲು ಇದೆ, ತಲೆಯಲ್ಲೊಂದು ನವಿಲುಗರಿಯಿದೆ. ಅವನೇ ಶ್ರೀಕೃಷ್ಣ" ಎಂದ. ಇದನ್ನು ಸಂಪೂರ್ಣವಾಗಿ ನಂಬಿದ ಕಳ್ಳ ಕೂಡಲೇ ವೃಂದಾವನದ ಕಡೆಗೆ ತೆರಳಿದ. ಆ ಬ್ರಾಹ್ಮಣನು ಶ್ರೀಮದ್ಭಾಗವತದ ಉಪನ್ಯಾಸದಲ್ಲಿ ವಿವರಿಸಿದಂತೆ ಆ ಸುಂದರವಾದ ಸ್ಥಳವನ್ನು ಹುಡುಕಿ, ಅಲ್ಲಿಯೇ ಮರವೊಂದನ್ನು ಹತ್ತಿ, ಹುಡುಗರಿಗಾಗಿ ಕಾದುಕುಳಿತ.

ಸೂರ್ಯೋದಯವಾಯಿತು, ಹುಡುಗರಿಬ್ಬರೂ ಬರುವುದನ್ನು ನೋಡಿ ಕಳ್ಳ ಮರದಿಂದ ಕೆಳಗಿಳಿದು, ಅವರ ಬಳಿಗೆ ನಡೆದ. ಮನಮೋಹಕ ಬಾಲಕೃಷ್ಣನನ್ನು ಕಂಡು ಮೈಮರೆತ. ತನಗೇ ಅರಿವಿಲ್ಲದಂತೆ ಕೈಗಳನ್ನೆತ್ತಿ ಜೋಡಿಸಿದ. ಅವನ ಕಣ್ಣುಗಳು ಆನಂದದಿಂದ ತುಂಬಿಬಂದವು... ಕಣ್ಣ ನೋಟವನ್ನು ಶ್ರೀಕೃಷ್ಣನ ಮೇಲಿಂದ ಕದಲಿಸಿ ಬೇರೆಡೆಗೆ ಹರಿಸುವುದು ಕಳ್ಳನಿಗೆ ಸಾಧ್ಯವಾಗಲೇ ಇಲ್ಲ.

ಇಂಥ ತೇಜೋಮೂರ್ತಿಗಳನ್ನು ಇಷ್ಟೊಂದು ಬೆಲೆಬಾಳುವ ಆಭರಣಗಳಿಂದ ಸಿಂಗರಿಸಿ ನದೀತೀರಕ್ಕೆ ಕಳುಹಿಸಿದ ಆ ತಾಯಿಯನ್ನು ನೆನೆದು ದಿಗ್ಭ್ರಮೆಗೊಂಡ. “ನಿಲ್ಲು" ಎನ್ನುತ್ತಾ ಶ್ರೀಕೃಷ್ಣನ ಕೈಹಿಡಿದು ಕೂಗಿದ.... ಗೋವಿಂದನನ್ನು ಸ್ಪರ್ಶಿಸಿದ ಆ ಕ್ಷಣವೇ ಅವನ ಹಿಂದಿನ ಪಾಪಗಳೆಲ್ಲವೂ ಬೆಂಕಿಯಲ್ಲಿ ಸುಟ್ಟ ಹತ್ತಿಯ ಉಂಡೆಗಳಂತೆ ಕ್ಷಯಿಸಿಬಿಟ್ಟವು. ಅವನ ಕೈಯಿಂದ ಬಿಡಿಸಿಕೊಳ್ಳಲು ತುಂಟ ಕೃಷ್ಣನು, “ನನ್ನ ಈ ಎಲ್ಲಾ ಆಭರಣಗಳನ್ನು ತೆಗೆದುಕೋ, ನನ್ನನ್ನು ಬಿಟ್ಟುಬಿಡು" ಎಂದ.

ಗೊಂದಲಗೊಂಡ ಕಳ್ಳ, “ಹೀಗೆ ಎಲ್ಲವನ್ನೂ ನನಗೆ ಕೊಟ್ಟರೆ ನಿನ್ನ ತಾಯಿ ನಿನ್ನನ್ನು ಗದರುವು ದಿಲ್ಲವೇ?" ಎಂದು ಕೇಳಿದ. ಕೃಷ್ಣನು ನಗುನಗುತ್ತಾ, “ನಾನು ನಿನಗಿಂತ ದೊಡ್ಡ ಕಳ್ಳ. ಇಂಥವು ನನ್ನಲ್ಲಿ ಹೇರಳವಾಗಿವೆ, ಅದರ ಬಗ್ಗೆ ಚಿಂತೆ ಮಾಡಬೇಡ. ಆದರೆ ನನಗೂ ನಿನಗೂ ಒಂದು ವ್ಯತ್ಯಾಸವಿದೆ.

ಅದೇನೆಂದರೆ, ನಾನು ಕದ್ದರೆ ಯಾರೂ ದೂರುವುದಿಲ್ಲ, ಹಾಗಾಗಿಯೇ ನಾನು ಚಿತ್ತಚೋರ. ನಿನಗೆ ಇದು ಗೊತ್ತಿಲ್ಲ, ಎಲ್ಲರ ಚಿತ್ತವನ್ನೂ ಕದ್ದು ನನ್ನಲ್ಲೇ ಇಟ್ಟುಕೊಳ್ಳುವ ಕಳ್ಳ ನಾನು..." ಎಂದ. ನಂತರ ಇಬ್ಬರು ಹುಡುಗರೂ ಅಲ್ಲಿಂದ ಮಾಯವಾದರು. ಆಶ್ಚರ್ಯ! ಕಳ್ಳನ ಕೈಯಲ್ಲಿ ಆಭರಣಗಳಿಂದ ತುಂಬಿದ ಚೀಲವೊಂದಿತ್ತು.

ಕೃಷ್ಣನ ಕಥೆ ಹೇಳಿದ್ದ ಬ್ರಾಹ್ಮಣನ ಮನೆಗೆ ಬಂದ ಕಳ್ಳ, ನಡೆದಿದ್ದೆಲ್ಲವನ್ನೂ ಅವರಿಗೆ ವಿವರಿಸಿದ. ಆನಂದಬಾಷ್ಪಭರಿತನಾದ ಸಜ್ಜನ ಬ್ರಾಹ್ಮಣನು, ಆ ಕಪ್ಪು ಹುಡುಗನನ್ನು ಕಳ್ಳನು ನೋಡಿದ ಜಾಗಕ್ಕೆ ಅವನನ್ನು ಕರೆದುಕೊಂಡು ಹೋದ. ಆದರೆ ಎಷ್ಟು ಕಾದರೂ ಅಲ್ಲಿ ಯಾರೂ ಕಾಣಿಸಲಿಲ್ಲ. “ಹೇ ದೇವದೇವಾ! ಕಳ್ಳನಿಗೆ ಕಂಡವನು ನನಗೆ ಕಾಣಿಸಲಾರೆಯಾ?" ಎಂದು ಬ್ರಾಹ್ಮಣ ಮೊರೆಯಿಟ್ಟ. ಕೃಷ್ಣ ಕಾಣಿಸಲಿಲ್ಲ, ಆದರೆ ಅವನ ದನಿ ಕೇಳಿಸಿತು.

“ನೀನು ಶ್ರೀಮದ್ಭಾಗವತದ ಕಥೆಯನ್ನು ಇತರ ಎಲ್ಲಾ ಕಥೆಗಳಂತೆಯೇ ಸುಮ್ಮನೇ ಓದಿದೆಯಷ್ಟೇ; ಆದರೆ ನೀನು ಹೇಳಿದ ಕಥೆಯನ್ನು ಮತ್ತು ನನ್ನ ಬಗೆಗಿನ ವಿವರಗಳನ್ನು ಈತ ಕಳ್ಳನಾದರೂ ನಂಬಿ ನಡೆದ, ಅದನ್ನು ಒಪ್ಪಿ ನನ್ನನ್ನು ನೋಡಲು ಬಂದ. ನನ್ನನ್ನು ನಂಬಿದವರಿಗೆ ನಾನು ಖಂಡಿತ ಕಾಣಿಸುವೆ, ನಂಬಿ ನಡೆದರೆ ನಿನ್ನೊಳಗೂ ನೆಲೆಸುವೆ" ಎಂದ ಶ್ರೀಕೃಷ್ಣ...