ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಕ್ರಿಕೆಟ್‌ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು

30 ಬಾಲುಗಳನ್ನು ತಡೆದು ನಿಂತಿದ್ದ ಸಿರಾಜ್, ಆ ಬಾಲನ್ನೂ ಯಶಸ್ವಿಯಾಗಿಯೇ ತಡೆದಿದ್ದರು ಪಾಪ. ಆದರೆ ಅದು ನಿಧಾನವಾಗಿ ಉರುಳಿಕೊಂಡು ಹೋಗಿ ವಿಕೆಟ್ಟಿಗೆ ಮುತ್ತಿಕ್ಕಿ, ಬೇಲ್ಸ್ ಕೆಳಗೆ ಬಿತ್ತು. ತನ್ನಿಂದ ಸೋಲಾಯಿತ ಎನ್ನುವ ಭಾವನೆಯಿಂದ ಸಿರಾಜ್ ಕಣ್ಣೀರಾದರು. ಜಡೇಜಾ ಮಾತ್ರ ಸ್ತಬ್ಧವಾಗಿ ನಿಂತೇ ಇದ್ದರು.

ವಿದ್ಯಮಾನ

vinayakavbhat@autoaxle.com

ಕ್ರೀಡೆ ಅಂದ ಮೇಲೆ ಸೋಲು ಗೆಲುವು ಎರಡೂ ಇದ್ದದ್ದೇ. ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ ಭಾರತ ಅನೇಕ ಪಂದ್ಯಗಳನ್ನು ಗೆದ್ದಿದ್ದಿದೆ, ಹಾಗೆ ಸೋತಿದ್ದೂ ಬೇಕಾದಷ್ಟಿದೆ. ಆದರೆ ಎಲ್ಲ ಗೆಲುವೂ ಸ್ಮರಣೀಯವಾಗಿಲ್ಲ. ಹಾಗೆಯೇ ಸೋಲುಗಳೂ ಅಷ್ಟೆ, ಎಲ್ಲವೂ ನೆನಪಿನಲ್ಲಿ ಉಳಿಯುವಂಥದ್ದಲ್ಲ. ಆದರೆ ಕೆಲವು ಸೋಲು ಗೆಲುವುಗಳನ್ನು ಮರೆಯುವುದು ಬಹಳ ದುಸ್ತರ. ಸೋಲಿಗೆ ಅತಿ ಸಮೀಪವಿದ್ದ ‘ಹೀರೋ ಕಪ್’ ಸೆಮಿಫೈನಲ್‌ನಲ್ಲಿನ ಸಚಿನ್‌ನ ಜಾದೂಭರಿತ ಕೊನೆಯ ಓವರ್‌ ನಿಂದ ಭಾರತಕ್ಕೆ ಸಿಕ್ಕ ಗೆಲುವು ಹಾಗೂ ಮದ್ರಾಸಿನ ಚೆಪಾಕ್ ಮೈದಾನದಲ್ಲಿ ಐತಿಹಾಸಿಕವಾಗಿ ‘ಟೈ’ ಆದ ಟೆಸ್ಟ್ ಪಂದ್ಯಗಳನ್ನು ಮರೆಯಲಾಗುವುದೇ ಇಲ್ಲ.

ಹಾಗೆಯೇ, ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಮೊನ್ನೆ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಕಂಡ 22 ರನ್‌ಗಳ ವೀರೋಚಿತ ಪರಾಭವದಿಂದಾಗಿಯಷ್ಟೇ ಅಲ್ಲದೇ, ಇನ್ನೂ ಅನೇಕ ಕಾರಣಗಳಿಗಾಗಿ ಬಹಳಕಾಲ ಮರೆಯಲಾಗದ ಪಂದ್ಯವಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.

ಲಾರ್ಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳ ಇತಿಹಾಸವು ಸ್ಮರಣೀಯ ಕ್ಷಣಗಳು ಮತ್ತು ತೀವ್ರ‌ ಹೋರಾಟಗಳಿಂದ ಸಮೃದ್ಧವಾಗಿದೆ. ಕ್ರಿಕೆಟ್‌ಗೆ ತವರು ಮೈದಾನವಾದ ಲಾರ್ಡ್ಸ್‌ ಈ ಎರಡು ರಾಷ್ಟ್ರಗಳ ನಡುವಿನ ಕೆಲವು ರೋಮಾಂಚಕ ಮುಖಾಮುಖಿಗಳಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Vinayaka V Bhat Column: ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

1986ರಲ್ಲಿ ಕಪಿಲ್‌ದೇವ್ ನಾಯಕತ್ವದ ಭಾರತ ತಂಡವು ಲಾರ್ಡ್ಸ್‌ನಲ್ಲಿ ಪಡೆದ ಮೊದಲ ಟೆಸ್ಟ್‌ ಗೆಲುವಿನಿಂದ ಹಿಡಿದು ಇತ್ತೀಚಿನ ಅದ್ಭುತ ಪಂದ್ಯದವರೆಗೆ, ಪ್ರತಿ ಪಂದ್ಯವೂ ಐತಿಹಾಸಿಕವೇ. ಆ ಮೈದಾನವೇ ಹಾಗೆ ಮತ್ತು ಯಾವುದೇ ದೇಶದ ಆಟಗಾರನಿಗೆ ಅಲ್ಲಿ ಆಡುವುದೇ ಒಂದು ಗೌರವ. ಅಲ್ಲಿ ಶತಕ ಬಾರಿಸುವ ಅಥವಾ ಐದು ವಿಕೆಟ್ ಕೀಳುವ ಆಸೆ ಎಲ್ಲ ಆಟಗಾರನಿಗೂ ಇದ್ದೇ ಇರುತ್ತದೆ.

ಇಂಗ್ಲೆಂಡ್ ಮತ್ತು ಭಾರತದ ನಡುವಿನ ಪಂದ್ಯಗಳಲ್ಲಿ, ಪಾಕಿಸ್ತಾನದ ವಿರುದ್ಧ ಆಡುವಾಗಿನ ಉದ್ವಿಗ್ನತೆ ಇರುವುದಿಲ್ಲವಾದರೂ, ಆಡುತ್ತಿರುವ ಅಂಗಳ ‘ಲಾರ್ಡ್ಸ್’ ಅಗಿರುವುದರಿಂದ, ಶತಾಯ ಗತಾಯ ಇಬ್ಬರೂ ಗೆಲುವಿಗಾಗಿ ಹೋರಾಡುವುದು ಅನಿವಾರ್ಯವಾಗುತ್ತದೆ. ಒಟ್ಟಾರೆ, ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಸ್ವಲ್ಪ ಹೆಚ್ಚು ಸ್ನೇಹಪರವಾಗಿದೆ ಎನ್ನಬಹುದು.

7 ಋ

ಏಕೆಂದರೆ ಆಟಗಾರರು ಪ್ರಪಂಚದಾದ್ಯಂತದ ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಒಟ್ಟಿಗೆ ಆಡುತ್ತಾರಲ್ಲ! ಅದರಿಂದ ಒಂದು ರೀತಿಯ ಸ್ನೇಹ ಆಟಗಾರರಲ್ಲಿ ಮೂಡಿರುತ್ತದೆ. ಸ್ವಲ್ಪ ಕ್ರಿಕೆಟ್ ಮೈದಾನ, ಸ್ವಲ್ಪ ವಸ್ತುಸಂಗ್ರಹಾಲ ಯದಂತಿರುವ ಲಾರ್ಡ್ಸ್‌ನಲ್ಲಿ, ಕೊನೆಯ ದಿನ ಎಲ್ಲಾ 30000 ಟಿಕೆಟ್‌ಗಳು ಮಾರಾಟವಾಗಿದ್ದವು. ರಜಾದಿನವಲ್ಲದಿದ್ದರೂ, ಮೈದಾನವು ಇತ್ತಂಡದ ಅಭಿಮಾನಿ ಗಳಿಂದ ಕಿಕ್ಕಿರಿದು ತುಂಬಿತ್ತು.

ಗಳಿಸಿದ ಪ್ರತಿ ಬೌಂಡರಿ ಮತ್ತು ವಿಕೆಟ್ಟಿಗೂ ಅಭಿಮಾನಿಗಳ ಪ್ರೋತ್ಸಾಹದ ಧ್ವನಿ ಮೈದಾನದ ತುಂಬಾ ಪ್ರತಿಧ್ವನಿಸುತ್ತಿತ್ತು. ಇದು ಐದನೇ ದಿನ, ಬಹುಶಃ ಕೆಲವೇ ಗಂಟೆಗಳ ಪಂದ್ಯವಾಗಿರುತ್ತದೆ, ಊಟದ ವಿರಾಮದ ಹೊತ್ತಿಗೆ ಪಂದ್ಯ ಮುಗಿದೇ ಹೋಗುತ್ತದೆ ಎಂದು ಭಾವಿಸಲಾಗಿತ್ತಾದರೂ, ಭಾರತ ತಂಡದ ವೀರೋಚಿತ ಹೋರಾಟದಿಂದಾಗಿ, ಪಂದ್ಯ ಕೊನೆಯ ಅವಧಿಯವರೆಗೂ ಮುಂದುವರಿಯುವಂತಾಯ್ತು. ಪಂದ್ಯ ಐದನೇ ದಿನಕ್ಕೆ ಕಾಲಿಟ್ಟಾಗ, ಗೆಲುವಿಗೆ ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳು ಬೇಕಾಗಿದ್ದವು.

ಭಾರತವು ಇಡೀ ದಿನದಲ್ಲಿ ಕೇವಲ 135 ರನ್‌ಗಳನ್ನು ಗಳಿಸಬೇಕಾಗಿತ್ತು. ಸರಣಿಯಲ್ಲಿ ಇನ್ನೂ ಎರಡು ಟೆಸ್ಟ್‌ಗಳು ಬಾಕಿ ಇರುವಾಗ, 2-1 ಮುನ್ನಡೆ ಸಾಧಿಸುವಲ್ಲಿ ಇಬ್ಬರಿಗೂ ತವಕ ಇತ್ತು. ನಾಲ್ಕನೇ ದಿನ ಆತಿಥೇಯ ಭಾರತ ತಂಡವು ವಾಷಿಂಗ್ಟನ್ ಸುಂದರ್ ಅವರ ಸುಂದರ ಸ್ಪಿನ್ ದಾಳಿಯಿಂದ, ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ, ಆ ತಂಡದ ಮಾನಸಿಕ ಸ್ಥೈರ್ಯವನ್ನು ಅಕ್ಷರಶಃ ನುಚ್ಚುನೂರು ಮಾಡಿ ಬಿಟ್ಟಿತ್ತು.

ಈ ಪಂದ್ಯವನ್ನು ಆಂಗ್ಲರು ಗೆಲ್ಲಲು ಪವಾಡವೇ ಅಗಬೇಕು ಎನ್ನುವಂತಿತ್ತು, ಆದರೆ ಆ ಪವಾಡ ಆಗೇಹೋಯ್ತು. ಕೇವಲ 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ಭಾರತ ತಂಡವು, ನಾಲ್ಕನೇ ದಿನದ ಕೊನೆಗೆ ಹೆಚ್ಚೂ ಕಡಿಮೆ 60 ರನ್ ಗಳಿಸುವಷ್ಟರಲ್ಲಿ 4 ಪ್ರಮುಖ ವಿಕೆಟ್‌ಗಳನ್ನು ಕೈಚೆಲ್ಲಿಯೂ ಆಗಿತ್ತು. ಅಗ್ರಕ್ರಮಾಂಕದ ನಾಲ್ಕು ಆಟಗಾರರು ಪೆವಿಲಿಯನ್ ಗೂಡು ಸೇರಿ ಬಿಟ್ಟಿದ್ದರು.

ಆ ಘಟ್ಟದಲ್ಲಿ, ಭಾರತೀಯ ಆಟಗಾರರಿಗೆ ನಾಲ್ಕನೇ ದಿನ ನಾವು ಆಂಗ್ಲರನ್ನು ಆಲೌಟ್ ಮಾಡದಿದ್ದರೇ ಒಳ್ಳೆಯದಿತ್ತೇನೋ ಎಂದು ಅನಿಸಿರಲಿಕ್ಕೆ ಸಾಕು! ಪ್ರತಿಭಾವಂತ ಆರಂಭಿಕ ದಾಂಡಿಗ ಯಶಸ್ವೀ ಜೈಸ್ವಾಲ್, ಈ ಬಾರಿಯಾದರೂ ಆಡುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕನ್ನಡಿಗ ಕರುಣ್ ನಾಯರ್ ಹಾಗೂ‌ ಹಿಂದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ನಾಯಕ ಶುಭಮನ್ ಗಿಲ್ ನೋಡ ನೋಡುತ್ತಿದ್ದಂತೆ ತಮ್ಮ ವಿಕೆಟ್ ಚೆಲ್ಲಿಬಿಟ್ಟಿದ್ದರು.

ಶನಿವಾರ ಸಂಜೆ ಜ್ಯಾಕ್ ಕ್ರಾಲೆ ಸಮಯ ವ್ಯರ್ಥಮಾಡಲು ಪ್ರಯತ್ನಿಸಿದಾಗ ಭಾರತ ಆಕ್ರೋಶಗೊಂಡಿತು. ಆದರೆ, ಭಾನುವಾರ ಸಂಜೆ, ರಾತ್ರಿ ಕಾವಲುಗಾರನಾಗಿ ಬಂದಿದ್ದ ಆಕಾಶ್ ದೀಪ್ ಅದೇ ರೀತಿ ಕಾಲ ವ್ಯರ್ಥಮಾಡಲಾಗದೇ ದಿನದ ಕೊನೆಯ ಕ್ಷಣದಲ್ಲಿ ತಮ್ಮ ಆಫ್ ಸ್ಟಂಪ್ ಅನ್ನು ಬೆನ್ ಸ್ಟೋಕ್ಸ್ ಗೆ ಒಪ್ಪಿಸಿಬಿಟ್ಟಿದ್ದರು.

ಎಂದಿನಂತೆ, ಭಾರತ ತಂಡದ ಸ್ಥಿರತೆಯಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೊಂಡರೆ, ನಾಲ್ಕನೇ ದಿನದಾಟದ ಕೊನೆಗೆ 33 ರನ್‌ಗಳೊಂದಿಗೆ ಅಜೇಯರಾಗಿದ್ದ ಕೆ.ಎಲ್.ರಾಹುಲ್, ಐದನೇ ದಿನ ಬೆಳಗ್ಗೆ ಕೇವಲ ಐದು ರನ್ ಸೇರಿಸುವಷ್ಟರಲ್ಲಿ ವೋಕ್ಸ್‌ಗೆ ಔಟ್ ಆದರು. ಉತ್ತಮ ಫಾರ್ಮ್‌ನಲ್ಲಿರುವ‌ ರಿಷಭ್ ಪಂತ್ ಆಡುತ್ತಾರೆ ಎಂದುಕೊಂಡರೆ, ಅದೂ ಆಗಲಿಲ್ಲ.

ಅವರು ಆಡಿದರೆ ಕಣ್ಣು ಮಿಟುಕಿಸುವುದರೊಳಗೆ ಈ ಪಂದ್ಯವನ್ನು ಗೆಲ್ಲಬಹುದು ಎಂದು ಕೊಂಡವರಿಗೆ ನಿರಾಸೆಯಾಯಿತು. ಅಂದು ಯಾರು ಒತ್ತಡವನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬುದು ಮುಖ್ಯವಾಗಿತ್ತು. ಇಂಗ್ಲೆಂಡ್ ತಂಡವು, ತವರು ತಂಡ ಮತ್ತು ಸ್ವಲ್ಪ ಹೆಚ್ಚು ಅನುಭವಿ ತಂಡ ಎಂದು ಪರಿಗಣಿಸಲಾಗಿತ್ತಾದರೂ, ಅಂದು ಪಂತ್ ಎಂದಿನಂತೆ ಆಕ್ರಮಣಕಾರಿಯಾಗಿ ಆಡಿದರೆ ಇದ್ಯಾವುದೂ ಮುಖ್ಯವಾಗುತ್ತಿರಲಿಲ್ಲ.

ಈ ಮೈದಾನದಲ್ಲಿ, ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ತಂಡ ಮಾತ್ರ, 387ಕ್ಕೂ ಹೆಚ್ಚು ರನ್ ಗಳಿಸಿ ಗೆಲುವು ಸಾಧಿಸಿದೆ. ಭಾರತವು ಇದೇ ರೀತಿಯ ಆಟವನ್ನು ಪುನರಾವರ್ತಿಸಿದ್ದರೆ, 95 ವರ್ಷಗಳ ಹಿಂದೆ ಡೊನಾಲ್ಸ್ ಬ್ರಾಡ್ಮನ್, ಬ್ಯಾಗಿ ಗ್ರೀನ್ ಕಾಲದಲ್ಲಿ ಆಸ್ಟ್ರೇಲಿಯಾದ ಸಾಧನೆ‌ಯನ್ನು ಸರಿಗಟ್ಟಬಹುದಾಗಿತ್ತು.

ನಮಗೆ ಇಂಥ ಸುವರ್ಣಾವಕಾಶ ಸಿಕ್ಕಿರುವುದಕ್ಕೆ ಭಾಗಶಃ ಆಫ್‌ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕಾರಣರಾಗಿದ್ದರು. ಅವರು ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 4-22 ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೇ ಬದಲಿಸಿದ್ದರು. ಆದರೆ, ಕೊನೆಗೆ ಆಗಿದ್ದೇ ಬೇರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಲಾರ್ಡ್ಸ್‌ನಲ್ಲಿ ಸೋತಿದ್ದಕ್ಕೆ, ಕ್ರಿಕೆಟ್ ತಜ್ಞರುಗಳು ವಿವಿಧ ಕಾರಣಗಳನ್ನು ನೀಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ ಅವರ ಅನವಶ್ಯಕ ರನೌಟ್ ಮತ್ತು ಎರಡೂ ಇನ್ನಿಂಗ್ಸ್‌ಗಳಲ್ಲಿ ಕರುಣ್ ನಾಯರ್ ಅವರ ನೀರಸ ಪ್ರದರ್ಶನ ಭಾರತಕ್ಕೆ ಭಾರಿ ಹೊಡೆತ ನೀಡಿತು ಎಂದು ವಿಶ್ಲೇಷಿ ಸಿದರು. ಆದಾಗ್ಯೂ, 193 ರನ್‌ಗಳನ್ನು ಬೆನ್ನಟ್ಟುವಾಗ ಜೈಸ್ವಾಲ್ ವಿಕೆಟ್ ಬೇಗನೆ ಕಳೆದುಕೊಂಡರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆಯುತ್ತಿತ್ತು.

ಆದರೆ ಕರುಣ್ ನಾಯರ್ ಅವರ ಆ ಎಲ್‌ಬಿಡಬ್ಲ್ಯೂ ಭಾರತ ಮತ್ತು ಇಂಗ್ಲೆಂಡ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಇಂಗ್ಲೆಂಡ್, ಆಟಕ್ಕೆ ಮತ್ತೆ ಚೆನ್ನಾಗಿ ಮರಳಿತು ಮತ್ತು ಅದರ ನಂತರ, ಅವರು ಚೆನ್ನಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದರು. ಮೈದಾನದಲ್ಲಿ ಬೌಲರ್‌ಗಳ ತೀವ್ರತೆ, ಅವರ ಫೀಲ್ಡರ್‌ಗಳು ತೋರಿಸಿದ ಚುರುಕುತನ ಅದ್ಭುತವಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ನೋಡಲು ಬಯಸುವುದು ಅದನ್ನೇ ತಾನೆ? ಎಲ್ಲಾ 11 ಆಟಗಾರರು ಒಟ್ಟಾಗಿ ಸೇರಿದರೆ ಮಾತ್ರ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಅಂದು ಮೈದಾನದಲ್ಲಿ ಆಂಗ್ಲರ ಆಕ್ರಮಕ ವರ್ತನೆ‌ ಯನ್ನು‌ ನೋಡಲು ತುಂಬಾ ಸಂತೋಷವಾಗುತ್ತಿತ್ತು.

ಭಾರತ ನಿಜವಾಗಿಯೂ ಉತ್ತಮವಾಗಿ ಹೋರಾಡಿದರೂ, ಮತ್ತೊಮ್ಮೆ, ಗೆಲುವಿನ ಕೀರ್ತಿ ಮಾತ್ರ ಇಂಗ್ಲೆಂಡ್ ತಂಡಕ್ಕೆ ಸೇರಿತು ಎಂದು ತಜ್ಞರುಗಳು ಅಭಿಪ್ರಾಯಪಟ್ಟರು. ಗೆಲ್ಲಬಹುದಾಗಿದ್ದ ಈ ಪಂದ್ಯವನ್ನು ಭಾರತ ಎಲ್ಲಿ ಸೋತಿತು ಎಂಬುದರ ಕುರಿತು ನೋಡುವಾಗ, ಕೆ.ಎಲ್.ರಾಹುಲ್ ಮತ್ತು ರಿಷಭ್ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅವರ ಪಾಲುದಾರಿಕೆ ಅದ್ಭುತ ವಾಗಿತ್ತು. ಅವರು ಸುಂದರವಾಗಿ ಬ್ಯಾಟಿಂಗ್ ಮಾಡಿದರು.

ಆದರೆ ಭಾರತಕ್ಕೆ 75-100 ರನ್‌ಗಳ ಕೊರತೆಯಾಯ್ತು. 4 ಮತ್ತು 5ನೇ ದಿನ ಬ್ಯಾಟಿಂಗ್ ಮಾಡುವುದು ಸ್ವಲ್ಪ ಕಷ್ಟ ಎಂದು ನಮಗೆಲ್ಲರಿಗೂ ತಿಳಿದಿದೆ. ರನ್ ಗಳಿಸುವುದು ಸುಲಭವಲ್ಲ. ಹೌದು, ಇಂಗ್ಲೆಂಡ್ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿತು. ಆದರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆ ದೊಡ್ಡ ಸ್ಕೋರ್ ಗಳಿಸುವ ಅವಕಾಶವನ್ನು ಕಳೆದುಕೊಂಡಿರುವುದೇ ಸೋಲಿಗೆ ಪ್ರಮುಖ ಕಾರಣವಾಯ್ತು ಎಂದು ವಿಶ್ಲೇಷಕರು ಭಾವಿಸುತ್ತಾರೆ.

ಇದರ ಜತೆಗೆ ಇನ್ನೂ ಕೆಲವು ಕಾರಣಗಳನ್ನು ತಜ್ಞರುಗಳು ಗುರುತಿಸುತ್ತಾರೆ. ಭಾರತದ ರಕ್ಷಣಾತ್ಮಕ ವಿಧಾನ, ಎಕ್ಸ್‌ಟ್ರಾಗಳನ್ನು ಬಿಟ್ಟುಕೊಡುವುದು, ಪಂತ್-ರಾಹುಲ್ ರನೌಟ್, ಅಗ್ರ ಕ್ರಮಾಂಕದ ಕುಸಿತವು ತಂಡಕ್ಕೆ ದೊಡ್ಡ ಪೆಟ್ಟನ್ನು ಕೊಟ್ಟಿತು. ಅಷ್ಟೇ ಅಲ್ಲದೆ, ಅಂತಿಮ ಇನ್ನಿಂಗ್ಸ್‌ನಲ್ಲಿ 193 ರನ್‌ಗಳ ಗುರಿ ಬೆನ್ನತ್ತಿದ ಭಾರತ, ಅಗತ್ಯಕ್ಕಿಂತ ಹೆಚ್ಚಿನದಾದ ರಕ್ಷಣಾತ್ಮಕ ಆಟ ಪ್ರದರ್ಶಿಸಿತು.

ಅವರ ಶಾಟ್ ಆಯ್ಕೆಗಳು, ಇಂಗ್ಲಿಷ್ ಬೌಲರ್‌ಗಳ ಪ್ರಾಬಲ್ಯವನ್ನು ಹೆಚ್ಚಿಸಿತು. ಅಪ್ರತಿಮ ಹೋರಾಟ ನಡೆಸಿ ಅರ್ಧಶತಕ ಗಳಿಸಿ ಅಜೇಯರಾಗುಳಿದ ರವೀಂದ್ರ ಜಡೇಜಾ ಮತ್ತು ಕೆ.ಎಲ್. ರಾಹುಲ್ 39 ರನ್ ಗಳಿಸಿರುವುದನ್ನು ಹೊರತುಪಡಿಸಿ, ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು, ಇಂಗ್ಲಿಷ್ ವೇಗದ ದಾಳಿಯ ಮುಂದೆ ಸುಲಭವಾಗಿ ಮಂಡಿಯೂರಿಬಿಟ್ಟರು.

ಭಾರತದ ಆರಂಭ ಮತ್ತು 3ನೇ ಕ್ರಮಾಂಕವು ಉತ್ತಮ ಆರಂಭವನ್ನು ನೀಡಲು ವಿಫಲವಾಯಿತು. ಯಶಸ್ವಿ ಜೈಸ್ವಾಲ್ 13 ಮತ್ತು 0 ರನ್ ಗಳಿಸಿದರೆ, ಕರುಣ್ ನಾಯರ್ ಉತ್ತಮ ಆರಂಭ ಪಡೆದರೂ ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು. ಆಕಾಶ್ ದೀಪ್ ಅವರನ್ನು ರಾತ್ರಿ ಕಾವಲುಗಾರನಾಗಿ ಕಳುಹಿಸುವ ಭಾರತದ ಕಾರ್ಯತಂತ್ರವೂ ಹಿನ್ನಡೆ ಅನುಭವಿಸಿತು. ಭಾರತೀಯ ಬೌಲರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ 31 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 32 ಹೆಚ್ಚುವರಿ ರನ್‌ಗಳನ್ನು ಬಿಟ್ಟು ಕೊಟ್ಟರು.

ಒಟ್ಟು 63 ಎಕ್ಸ್‌ಟ್ರಾ ರನ್ನುಗಳನ್ನು ಉಡುಗೊರೆಯಾಗಿ ನೀಡಲಾಯಿತು, ಇದು ಕೊನೆಯಲ್ಲಿ ಭಾರತದ ಸೋಲಿಗೆ ನಿರ್ಣಾಯಕವಾಯಿತು. ತನ್ನ ಕಣ್ಣ ಮುಂದೆ ವಿಕೆಟ್ಟಿನ ಮೇಲೆ ವಿಕೆಟ್ಟುಗಳು ಬೀಳುತ್ತಿದ್ದರೂ, ತಾನು ಮಾತ್ರ ಗಟ್ಟಿಯಾಗಿ ನಿಂತು ಹೋರಾಡಿದ ರವೀಂದ್ರ ಜಡೇಜಾ ಭಾರತದ ಭರವಸೆಯನ್ನು ಹೆಚ್ಚಿಸಿದರು.

ಭಾರತದ 10ನೇ ಕ್ರಮಾಂಕದ ಆಟಗಾರ ಜಸ್ಪ್ರೀತ್ ಬುಮ್ರಾ 54 ಮತ್ತು 11ನೇ ಕ್ರಮಾಂಕದ ಮೊಹಮ್ಮದ್ ಸಿರಾಜ್ ಅವರು 30 ಬೆಂಕಿಯುಂಡೆಯಂತಿರುವ ಬಾಲುಗಳನ್ನು ಎದುರಿಸಿ ಜಡೇಜಾ ಅವರಿಗೆ ನೀಡಿದ ಬೆಂಬಲವೇನಿದೆ, ಅದು ಅವಿಸ್ಮರಣೀಯವಾಗಿತ್ತು. ಈ ಬಾಲಂಗೋಚಿಗಳ ಆಟವಂತೂ ನಿಜಕ್ಕೂ ಅಗ್ರ ಕ್ರಮಾಂಕದ ಆಟಗಾರರಿಗೆ ನಾಚಿಕೆ ಹುಟ್ಟಿಸುವಂತಿತ್ತು.

5ನೇ ದಿನದಾಟದಲ್ಲಿ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್, ರಿಷಭ್ ಪಂತ್ ಮತ್ತು ಕೆ.ಎಲ್.‌ ರಾಹುಲ್ ಅವರನ್ನು ಔಟ್ ಮಾಡಿದಾಗ ಇಂಗ್ಲೆಂಡ್ ಸ್ಮರಣೀಯ ಗೆಲುವು ಹೆಚ್ಚೂ ಕಡಿಮೆ ಖಚಿತ ವಾಗಿತ್ತು. ವಾಷಿಂಗ್ಟನ್ ಸುಂದರ್ ಅವರ ಪತನವಾದ ಮೇಲಂತೂ, ಪಂದ್ಯ ಕೇವಲ ಔಪಚಾರಿಕ ವಾಗಿ ಬಿಟ್ಟಿತು. 82 ರನ್ನುಗಳು ಆಗುವಷ್ಟರಲ್ಲಿ ಭಾರತದ ಏಳು ವಿಕೆಟ್ ಪತನವಾಗಿ ಹೋಗಿತ್ತು. ಇಷ್ಟಾದರೂ ಗೆಲುವಿನ ಆಸೆಯನ್ನು ಕೈಚೆಲ್ಲದ ಜಡೇಜಾ, ರೆಡ್ಡಿಯವರ ಜತೆಗೂಡಿ 30 ರನ್ ಸೇರಿಸಿದರು. ನಂತರ, ಬುಮ್ರಾ ಜತೆಗೂಡಿ 35 ರನ್ ಹಾಗೂ ಸಿರಾಜ ಜತೆಗೂಡಿ 23 ರನ್ನುಗಳನ್ನು ನಿಧಾನವಾಗಿ ಕಲೆಹಾಕಿ ತಂಡವನ್ನು ಗೆಲುವಿನ ತೋರಣಬಾಗಿಲಿನವರೆಗೆ ತಂದು ನಿಲ್ಲಿಸಿಬಿಟ್ಟರು.

ಜಡೇಜಾ ಅವರ ಈ ಕಠಿಣ ಹೋರಾಟದ ನಡುವೆಯೂ, ತಂಡದ ಗೆಲುವಿನ ದೋಣಿ ದಡ ಸೇರಲು ಸಾಧ್ಯವಾಗಲೇ ಇಲ್ಲ. ಪಂದ್ಯದಲ್ಲಿ ಇಂಗ್ಲೆಂಡ್ 22 ರನ್ನುಗಳ ಸ್ಮರಣೀಯ ಜಯ ಸಾಧಿಸಿ, ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಜಡೇಜಾ, ಬುಮ್ರಾ ಮತ್ತು ಸಿರಾಜ್ ಅವರ ಅಪ್ರತಿಮ ಹೋರಾಟದಿದಾಗಿ ನಮಗೆ ಈ ಪಂದ್ಯ ಬಹಳ ಕಾಲ ನೆನಪಿನಲ್ಲುಳಿಯಲಿದೆ.

30 ಬಾಲುಗಳನ್ನು ತಡೆದು ನಿಂತಿದ್ದ ಸಿರಾಜ್, ಆ ಬಾಲನ್ನೂ ಯಶಸ್ವಿಯಾಗಿಯೇ ತಡೆದಿದ್ದರು ಪಾಪ. ಆದರೆ ಅದು ನಿಧಾನವಾಗಿ ಉರುಳಿಕೊಂಡು ಹೋಗಿ ವಿಕೆಟ್ಟಿಗೆ ಮುತ್ತಿಕ್ಕಿ, ಬೇಲ್ಸ್ ಕೆಳಗೆ ಬಿತ್ತು. ತನ್ನಿಂದ ಸೋಲಾಯಿತ ಎನ್ನುವ ಭಾವನೆಯಿಂದ ಸಿರಾಜ್ ಕಣ್ಣೀರಾದರು. ಜಡೇಜಾ ಮಾತ್ರ ಸ್ತಬ್ಧವಾಗಿ ನಿಂತೇ ಇದ್ದರು.

ತನ್ನ ಅವಿಸ್ಮರಣೀಯ ಗೆಲುವನ್ನು ಸಂಭ್ರಮಿಸುವುದನ್ನೂ‌ ಬಿಟ್ಟು, ನಾಯಕ ಉಪನಾಯಕನೂ ಸೇರಿ ಇಂಗ್ಲಿಷ್ ತಂಡದ ಪ್ರಮುಖ ಆಟಗಾರರು, ಸೋಲಿನ ಆಘಾತದಲ್ಲಿದ್ದ ಜಡೇಜಾ ಮತ್ತು ಸಿರಾಜ್ ಅವರನ್ನು ಸಂತೈಸಲು ಧಾವಿಸಿದ ಪರಿಯೇನಿದೆ, ಅದು, ಕ್ರಿಕೆಟ್ ಆಟದ, ಆಂಗ್ಲ ಆಟಗಾರರ ಮತ್ತು ಲಾರ್ಡ್ಸ್ ಮೈದಾನದ ಗೌರವವನ್ನು ಹೆಚ್ಚಿಸಿತು.

ಪಂದ್ಯವನ್ನೊಂದಲ್ಲದೇ, ಮಾನವೀಯತೆಯನ್ನು ಮೆರೆದು,‌ ಜಾಗತಿಕವಾಗಿ ಕ್ರಿಕೆಟ್ ಪ್ರೇಮಿಗಳ ಹೃದಯವನ್ನೂ ಅಂದು ಆಂಗ್ಲರು ಗೆದ್ದುಬಿಟ್ಟರು. ಈ ಪಂದ್ಯ ಸ್ಮರಣೀಯವಾಗಲು ಈ ಸಂತೈಕೆಯ ಘಟನೆಯೂ ಕಾರಣವಾಯ್ತು.

ವಿನಾಯಕ ವೆಂ ಭಟ್ಟ

View all posts by this author