ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ಪ್ರತಿವರ್ಷ ಜೂನ್ 25 ಬಂತೆಂದರೆ, ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದ ಕಾಂಗ್ರೆಸ್ಸಿನ ನಿರ್ಧಾರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಾಗರಿಕರ ಸಂವಿಧಾನ ಪ್ರದತ್ತವಾದ ಹಕ್ಕು ಗಳನ್ನು ಕಸಿದುಕೊಂಡ ಈ ಕರಾಳ ಘಟನೆಗೆ 50 ವರ್ಷ ಸಂದ ಈ ಸಲ ಕೇಳಬೇಕೆ? ದೇಶದ ಎಲ್ಲ ಭಾಷೆಗಳ ಮಾಧ್ಯಮಗಳು ಸುಮಾರು ಒಂದು ತಿಂಗಳಿನಿಂದ ಈ ಘಟನೆಯ ಕುರಿತು ಪುಂಖಾನುಪುಂಖ ವಾಗಿ ಬರೆದವು.

ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ವಿದ್ಯಮಾನ

vinayakavbhat@autoaxle.com

ಯಾವುದೇ ದೇಶದ ಅಥವಾ ಅದರ ಒಂದು ಭಾಗದ ಭದ್ರತೆಗೆ ಯುದ್ಧ, ಬಾಹ್ಯದಾಳಿ ಅಥವಾ ಆಂತರಿಕ ಸಶಸ್ತ್ರ ದಂಗೆಯಿಂದ ಬೆದರಿಕೆ ಉಂಟಾದಾಗ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವುದು ವಾಡಿಕೆ. ನಮ್ಮ ದೇಶದಲ್ಲೂ ಇಂಥ ಪರಿಸ್ಥಿತಿ ತಲೆದೋರಿದಾಗ, ರಾಷ್ಟ್ರಪತಿಗಳು ವಿಧಿ 352ರ ಅಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದಾಗಿದೆ.

ಆದರೆ, ಅರ್ಧ ಶತಮಾನದ ಕೆಳಗೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಯನ್ನು ರಾಷ್ಟ್ರಪತಿಗಳ ಮೂಲಕ ಘೋಷಿಸುವಲ್ಲಿ ಸಫಲರಾದಾಗ, ಭಾರತದ ಯಾವುದೇ ಭಾಗ ದಲ್ಲಿ ಯುದ್ಧ, ಬಾಹ್ಯದಾಳಿ ಅಥವಾ ಆಂತರಿಕ ಸಶಸ್ತ್ರ ದಂಗೆ ಯಾವುದೂ ಇರಲಿಲ್ಲ. ಆದರೂ ವಾಮಮಾರ್ಗವನ್ನು ಬಳಸಿ ತುರ್ತು ಪರಿಸ್ಥಿತಿಯನ್ನು ಘೋಷಿಸುವಲ್ಲಿ ಅವರು ಸಫಲರಾಗಿದ್ದರು ಎನ್ನುವುದು ಈಗ ಇತಿಹಾಸ.

ಪ್ರತಿವರ್ಷ ಜೂನ್ 25 ಬಂತೆಂದರೆ, ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದ ಕಾಂಗ್ರೆಸ್ಸಿನ ನಿರ್ಧಾರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಾಗರಿಕರ ಸಂವಿಧಾನ ಪ್ರದತ್ತವಾದ ಹಕ್ಕುಗಳನ್ನು ಕಸಿದುಕೊಂಡ ಈ ಕರಾಳ ಘಟನೆಗೆ 50 ವರ್ಷ ಸಂದ ಈ ಸಲ ಕೇಳಬೇಕೆ? ದೇಶದ ಎಲ್ಲ ಭಾಷೆಗಳ ಮಾಧ್ಯಮಗಳು ಸುಮಾರು ಒಂದು ತಿಂಗಳಿನಿಂದ ಈ ಘಟನೆಯ ಕುರಿತು ಪುಂಖಾನುಪುಂಖವಾಗಿ ಬರೆದವು.

ನಮ್ಮ ‘ವಿಶ್ವವಾಣಿ’ಯನ್ನೂ ಸೇರಿ ಎಲ್ಲ ಪತ್ರಿಕೆಗಳಲ್ಲಿ ನೂರಾರು ಲೇಖನಗಳು ಪ್ರಕಟವಾದವು. ದೃಶ್ಯ ಮಾಧ್ಯಮಗಳಂತೂ, ದಿನಬಿಟ್ಟು ದಿನ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು. ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಕಂಡು ಅನುಭವಿಸಿದವರು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಾಗೂ ಅದರ ರೂವಾರಿಯಾಗಿದ್ದ ಇಂದಿರಾ ಗಾಂಧಿ ಯವರನ್ನು ವಿಧವಿಧವಾಗಿ ಹಳಿದರು. ತುರ್ತು ಪರಿಸ್ಥಿತಿಯ ಘೋಷಣೆಯ ವಿರುದ್ಧದ, ಇಂದಿರಾ ಗಾಂಧಿಯವರು ನಿರೀಕ್ಷಿಸಿರದಿದ್ದ, ಸಮಷ್ಟಿಯ ಹೋರಾಟ ಹಾಗೂ ಜನಾಂದೋಲನಗಳ ಕಾರಣ ದಿಂದ ಅದು ಅಂತ್ಯವಾಗಿ, ಮುಂದೆ 1977ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನು ಕಂಡಿತು.

ಇದನ್ನೂ ಓದಿ: Vinayaka V Bhatta Column: ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಪರಿಣಾಮವಾಗಿ, ಭಾರತದಲ್ಲಿ ಪ್ರಜಾಪ್ರಭುತ್ವ ಪುನಃ ಸ್ಥಾಪನೆಯಾಗುವಂತಾಯ್ತು. ಅದಲ್ಲದಿದ್ದರೆ, ಸರ್ವಾಧಿಕಾರಿ ಆಡಳಿತ ಮುಂದುವರಿಯುತ್ತಿತ್ತು ಎಂದು ವಿಶ್ಲೇಷಣೆ ಮಾಡಲಾಯಿತು. ಪ್ರತಿವರ್ಷ, ‘ತುರ್ತುಪರಿಸ್ಥಿತಿ ಜಾರಿಯಾದ ದಿನ’ ಬಂತೆಂದರೆ, ಈಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅದರ ನಾಯಕತ್ವಕ್ಕೆ ಗಂಟಲಿನಲ್ಲಿ ನೀರಿಳಿಯದಂತಾಗುತ್ತದೆ. ನಾಯಕರುಗಳು ಮುಖ ಹಿಂಡಿಕೊಂಡು ಓಡಾಡುವ ಹಾಗಾಗುತ್ತದೆ.

ಅದು ಸ್ವಾಭಾವಿಕ ಕೂಡಾ ಬಿಡಿ. ಸಂವಿಧಾನದ ವಿಡಂಬನೆ ಮಾಡಿದ ತಮ್ಮ ಪಕ್ಷದ ಆ ನಿರ್ಧಾರ ವನ್ನು ಸಮರ್ಥನೆ ಮಾಡಿಕೊಳ್ಳುವ ಹಾಗೂ ಇಲ್ಲ, ವಿರೋಧಿಸಲಂತೂ ಸಾಧ್ಯವೇ ಇಲ್ಲ. ಬಿಸಿತುಪ್ಪ ವನ್ನು ಬಾಯಿಗೆ ಸುರಿದುಕೊಂಡವರ ಸ್ಥಿತಿ ಕಾಂಗ್ರೆಸ್ಸಿಗರದ್ದು; ಉಗುಳಲೂ ಆಗದು, ನುಂಗಿದರೆ ಗಂಟಲು ಸುಡುವುದಂತೂ ಗ್ಯಾರಂಟಿ. ತುರ್ತುಪರಿಸ್ಥಿತಿಯ ಘೋಷಣೆ, ದೆಹಲಿಯಲ್ಲಿ ನಡೆದ ಸಿಖ್ಖರ ಹತ್ಯಾಕಾಂಡ ಇವೆರಡು ಘಟನೆಗಳು, ಕಾಂಗ್ರೆಸ್ಸೆಂಬ ಪಕ್ಷ ಇರುವವರೆಗೂ ಬೆಂಬಿಡದ ಭೂತವಾಗಿ ಕಾಡುವುದರಲ್ಲಿ ಅನುಮಾನವಿಲ್ಲ.

Vinayak V

ಅದಕ್ಕೇ ಹೇಳುವುದು ‘ಏಕಃ ಪಾಪಾನಿ ಕುರುತೇ ಫಲಂಭುಂಕ್ತೇ ಮಹಾ ಜನಾಃ’ ಅಂತ. ಪಾಪಕಾರ್ಯ ವೆಸಗಿದವನು ಒಬ್ಬನಾದರೆ, ಅದರ ಫಲವನ್ನು ಎಲ್ಲರೂ ಉಣ್ಣಬೇಕಾಗಿ ಬರುತ್ತದೆ. ಒಬ್ಬ ಇಂದಿರಾ ಮಾಡಿದ ಕರ್ಮದಿಂದ, ಇಂದು ಮತ್ತು ಎಂದೆಂದೂ ಆ ಪಕ್ಷದ ಎಲ್ಲರೂ ತಲೆತಗ್ಗಿಸಿ ನಡೆಯ ಬೇಕಾಗಿದೆ. ಪಾಪ, ಕಾಂಗ್ರೆಸ್ಸಿನ ಈಗಿನ ಅಥವಾ ಮುಂಬರುವ ನಾಯಕತ್ವದ ಪರಿಸ್ಥಿತಿ ನೋಡಿ! ಬಹುತೇಕ ನಾಯಕರು ತುರ್ತುಪರಿಸ್ಥಿತಿಯ ಆ ಸಮಯದಲ್ಲಿ ಇರಲೇ ಇಲ್ಲ (ಸ್ವತಃ ಮೇರು ನಾಯಕ ರಾದ ರಾಹುಲ್ ಗಾಂಧಿಯವರಿಗೆ ಆಗ ಆರೇಳು ವರ್ಷಗಳಾಗಿದ್ದವೇನೋ).

ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮುಂತಾದ ಸ್ವಲ್ಪ ಜನವಿದ್ದರೂ, ಆ ಕೆಟ್ಟ ನಿರ್ಧಾರ ದಲ್ಲಿ ಅವರು ಪಾಲುದಾರರಾಗಿರಲಿಲ್ಲ. ಆದರೆ, ಇವರುಗಳು ಪಕ್ಷದಲ್ಲಿ ಇರುವವರೆಗೂ, ಹಾವೂ ಸಾಯದಂತೆ ಕೋಲೂ ಮುರಿಯದಂತೆ ನಯವಾಗಿ ಎಲ್ಲರಿಗೂ ಉತ್ತರ ಹೇಳಬೇಕು. ಈಗಾಗಿದ್ದೂ ಅದೇ ತಾನೆ? ಕಾಂಗ್ರೆಸ್ಸೆಂಬ ಪಕ್ಷ ಅಥವಾ ಒಬ್ಬ ವ್ಯಕ್ತಿ, ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅಥವಾ ಭಾರತದ ರಾಜಕೀಯ ಬಾನಂಗಳದಲ್ಲಿ ತನ್ನ ಪ್ರಸ್ತುತಿಯನ್ನು ಉಳಿಸಿಕೊಳ್ಳಲು ಅಂದು ತೆಗೆದುಕೊಂಡ ಒಂದು ಕೆಟ್ಟ ನಿರ್ಧಾರದಿಂದ, ಇಡೀ ಪಕ್ಷ ಶಾಶ್ವತವಾಗಿ ತಲೆತಗ್ಗಿಸುವಂತಾಯ್ತು.

ಆಡಳಿತ ಪಕ್ಷವಾದ ಬಿಜೆಪಿಯನ್ನು ಬಿಡಿ, ತಟಸ್ಥ ಮಾಧ್ಯಮಗಳು ಇಂದು, ತಿಂಗಳಾನುಗಟ್ಟಲೇ ದೇಶಾದ್ಯಂತ ಜನಾಭಿಪ್ರಾಯ ಮೂಡುವಂತೆ ಕಾಂಗ್ರೆಸ್ಸಿನ ಬಣ್ಣಬಯಲು ಮಾಡುವ ಕಾರ್ಯ ಕ್ಕಿಳಿದರೆ, ಇನ್ನೇನು ಮುಳುಗುವ ಸ್ಥಿತಿಯಲ್ಲಿರುವ ಹಡಗಿನ ಮೇಲೆ ಸುನಾಮಿ ಪ್ರವಾಹವೇರಿ ಬಂದತಾಗುವುದಿಲ್ಲವೆ? ಹಾಗಾಗಿ, ಕಾಂಗ್ರೆಸ್ ನಾಯಕರ ಚಡಪಡಿಕೆ ಜನರಿಗೆ ಅರ್ಥವಾಗು ವಂಥಾದ್ದೇ ಆಗಿದೆ. ಎಂದಿನಂತೆ, ಮಾಧ್ಯಮದವರನ್ನು ಬಯ್ದಾಡುವಂತೆಯೂ ಇಲ್ಲ. ಸುಮ್ಮನಿರಲೂ ಸಾಧ್ಯವಿಲ್ಲ.

1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯ ದಿನವನ್ನು ‘ಸಂವಿಧಾನ ಹತ್ಯಾ ದಿವಸ್’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ತುರ್ತು ಪರಿಸ್ಥಿತಿ ವಿರೋಧಿ ಹೋರಾಟ ಮತ್ತು ಅದರಲ್ಲಿ ಭಾಗವಹಿಸಿದವರ ತ್ಯಾಗಗಳನ್ನು ಗೌರವಿಸಲು ಕೇಂದ್ರ ಸರಕಾರ ಈ ನಿರ್ಣಯವನ್ನು ಅಂಗೀಕರಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರುಗಳು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ವಿರುದ್ಧ ವಿವಿಧ ವೇದಿಕೆಗಳಲ್ಲಿ ಹರಿಹಾಯ್ದಿದ್ದಾರೆ.

ಇದಕ್ಕೆ ಪ್ರತಿಯಾಗಿ ಸ್ವಾತಂತ್ರ ಹೋರಾಟ ಅಥವಾ ಸಂವಿಧಾನ ರಚನೆಗೆ ಏನೂ ಕೊಡುಗೆ ನೀಡದವರು, ಈಗ ಅದನ್ನು ಸಮರ್ಥಿಸಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ದೇಶವು ಮರೆತು ಹೋಗಿರುವ ಸಂಗತಿಯನ್ನು ಪದೇ ಪದೆ ಕೆದುಕುವ ಮೂಲಕ, ಅದನ್ನು ಒಂದು ಸಮಸ್ಯೆಯಾಗಿ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕೂಡ ಬಿಜೆಪಿಯ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದೆ.

“ಅವರು ಸಂವಿಧಾನವನ್ನು ಬದಲಾಯಿಸುವ ಮತ್ತು ದೇಶದಲ್ಲಿ ಮನುಸ್ಮೃತಿಯನ್ನು ಹೇರುವ ಮನಸ್ಥಿತಿಯನ್ನು ಹೊಂದಿದ್ದಾರೆ. ಐವತ್ತು ವರ್ಷಗಳ ಹಿಂದಿನ ಯಾವುದೋ ಘಟನೆಯನ್ನು ಹಿಡಿದುಕೊಂಡು ಬಿಜೆಪಿಯವರು ಹಾಗೂ ಸಂಘದವರು ಎಳೆದಾಡುತ್ತಿದ್ದಾರೆ.

ಅದರಿಂದ ಆಗುವ ಸಾಧನೆಯಾದರೂ ಏನು? ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ, ಹಾಗಾಗಿ ಈ ಕೆಲಸ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ಸಿನ ಪಂಚಾಯತ್ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗಿನ ನಾಯಕರುಗಳು ಮಾತಾಡುತ್ತಿದ್ದಾರೆ. ಇನ್ನು ಕೆಲವರು, “ಈಗ ಮೋದಿ ಯವರ ಕಾಲದಲ್ಲಿ, ದೇಶದಲ್ಲಿ ತುರ್ತುಪರಿಸ್ಥಿತಿಗಿಂತ ಕೆಟ್ಟ ವಾತಾವರಣವಿದೆ, ಸಂವಿಧಾನ ಅಪಾಯದಲ್ಲಿದೆ" ಎನ್ನುತ್ತಾ ಓಡಾಡುತ್ತಿದ್ದಾರೆ.

ಹೀಗೆ, ದೇಶಾದ್ಯಂತ ತುರ್ತುಪರಿಸ್ಥಿತಿಯ ವಿರುದ್ಧದ ಮನಸ್ಥಿತಿ ರೂಪುಗೊಳ್ಳುತ್ತಿರುವಾಗ, ಈ ನಕಾರಾತ್ಮಕ ಪ್ರಚಾರಕ್ಕೆ ವಿರುದ್ಧವಾಗಿ, ಏನು ಮಾಡುವುದೆಂದು ತೋಚದೇ ಕಾಂಗ್ರೆಸ್ ನಾಯಕತ್ವ ಚಿಂತಿಸುತ್ತಿರುವ ಹೊತ್ತಿನಲ್ಲಿ, ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆಯವರ ಭಾಷಣ ವೊಂದು, ಪ್ರವಾಹದಲ್ಲಿ ಮುಳುಗೇಳುತ್ತಿರುವವರಿಗೆ ಕಟ್ಟಿಗೆಯೊಂದು ಸಿಕ್ಕಹಾಗೆ ಒದಗಿತು.

ಕಾಂಗ್ರೆಸ್ಸಿನ ಕೇಂದ್ರ ನಾಯಕತ್ವದಿಂದ ಹಿಡಿದು ಪಂಚಾಯತ್ ಮಟ್ಟದವರೆಗೆ ಎಲ್ಲ ನಾಯಕರೂ ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಹಾಗೂ ಬಿಜೆಪಿಯ ಮೇಲೆ ಒಂದೇ ಸಮನೇ ಮುಗಿಬಿದ್ದು ಹೇಳಿಕೆ ಗಳನ್ನು ಕೊಡಲು ಶುರು ಮಾಡಿದರು. “ಹೊಸಬಾಳೆ ಅವರು ಒಬ್ಬ ಮನುಸ್ಮೃತಿಯ ವ್ಯಕ್ತಿ. ಬಡವರ್ಗದ ಜನರು ಏಳಿಗೆ ಹೊಂದುವುದು ಅವರಿಗೆ ಇಷ್ಟವಿಲ್ಲ. ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಪಾಲಿಸಿಕೊಂಡು ಬಂದಿರುವುದನ್ನು ಅವರು ಇನ್ನೂ ಮುಂದುವರಿಸಲು ಬಯಸುತ್ತಿದ್ದಾರೆ.

ಅದಕ್ಕಾಗಿಯೇ ಅವರು ಸಮಾಜವಾದ, ಜಾತ್ಯತೀತತೆ, ಧರ್ಮ ನಿರಪೇಕ್ಷ ಒಕ್ಕೂಟ ವ್ಯವಸ್ಥೆ, ಸ್ವಾತಂತ್ರ್ಯ, ಸಮಾನತೆ ಅಥವಾ ಭ್ರಾತೃತ್ವದಲ್ಲಿ ನಂಬಿಕೆ ಇಡುವುದಿಲ್ಲ. ಎಲ್ಲಾ ಮೌಲ್ಯಗಳನ್ನು ತಿರಸ್ಕರಿಸುತ್ತಾರೆ" ಎಂದು ವಾಗ್ದಾಳಿ ನಡೆಸಿದರು. ಹಾಗೆ ನೋಡಿದರೆ, ಹೊಸಬಾಳೆಯವರು ಹೊಸದಾಗಿ ಏನನ್ನೂ ಹೇಳಿರಲಿಲ್ಲ, ಇದ್ದ ವಿಷಯವನ್ನೇ ಪ್ರಸ್ತಾಪ ಮಾಡಿದ್ದರು. “ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತುರ್ತು ಪರಿಸ್ಥಿತಿ ಸಂದರ್ಭ ದಲ್ಲಿ ಸಂಸತ್ತಿನಲ್ಲಿ ಚರ್ಚೆಗೊಳಪಡಿಸದೇ ಒತ್ತಾಯವಾಗಿ ಸೇರಿಸಲಾಗಿದ್ದು, ಇವುಗಳ ಅಗತ್ಯತೆಯ ಬಗ್ಗೆ ದೇಶ ಇದೀಗ ಚರ್ಚೆ ನಡೆಸಬೇಕಿದೆ" ಎಂದಷ್ಟೇ ಹೊಸಬಾಳೆಯವರು ಅಭಿಪ್ರಾಯಪಟ್ಟಿದ್ದರು.

‘ತುರ್ತು ಪರಿಸ್ಥಿತಿಗೆ 50 ವರ್ಷ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “ಸಂವಿಧಾನದ ಮೂಲ ಪೀಠಿಕೆಯ ಭಾಗವಾಗಿರದ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಬಳಸಿಕೊಂಡು ಸೇರಿಸಲಾದ ಈ ಪದಗಳು ಅವಶ್ಯಕವೇ? ಎಂಬುದನ್ನು ಚರ್ಚೆಯ ಮೂಲಕ ದೇಶ ನಿರ್ಧರಿಸಲಿ" ಎಂದು ಕರೆ ನೀಡಿದ್ದರು. ತುರ್ತು ಪರಿಸ್ಥಿತಿಯ ದುರ್ಲಾಭ ಪಡೆದು, ಈ ಪದಗಳನ್ನು ದೇಶದ ಮೇಲೆ ಹೇರಿದ ಜನರೇ, ಇಂದು ಸಂವಿಧಾನದ ಪ್ರತಿಗಳೊಂದಿಗೆ ದೇಶ ಸುತ್ತುತ್ತಿದ್ದಾರೆ.

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಅವರು ಇದುವರೆಗೂ ಭಾರತದ ಜನರಲ್ಲಿ ಕ್ಷಮೆ ಯಾಚಿಸಿಲ್ಲ ಎನ್ನುವುದು ಅವರ ಭಾಷಣದ ಸಾರಾಂಶ ವಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಜೈಲಿಗೆ ಹಾಕಲಾ ಗಿತ್ತು.

ತುರ್ತು ಪರಿಸ್ಥಿತಿ ವಿರೋಧಿಸಿದ್ದ 250ಕ್ಕೂ ಹೆಚ್ಚು ಪತ್ರಕರ್ತರಿಗೆ ಜೈಲುಶಿಕ್ಷೆ ವಿಧಿಸಲಾಗಿತ್ತು. ಜನರಿಂದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದ್ದ ಸರಕಾರ, 60 ಲಕ್ಷ ಭಾರತೀಯರನ್ನು ಒತ್ತಾಯಪೂರ್ವಕವಾಗಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿತ್ತು. ನ್ಯಾಯಾಂಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಸರ್ವಾಧಿಕಾರಿಯಂತೆ ಮೆರೆದವರು ಈಗ ‘ಸಂವಿಧಾನ ಅಪಾಯ ದಲ್ಲಿದೆ’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭದದ ಇಷ್ಟೆ ಅನಾಹುತಕ್ಕೆ, ಈಗ ಆ ಪಕ್ಷವನ್ನು ಮುನ್ನಡೆಸು ತ್ತಿರುವವರು ನೇರವಾಗಿ ಹೊಣೆಗಾರರಲ್ಲವಾದರೂ, ಅವರ ಪೂರ್ವಜರು ಮಾಡಿದ ತಪ್ಪಿಗೆ ಕ್ಷಮೆಯ ನ್ನಾದರೂ ಕೇಳುವ ಸೌಜನ್ಯವನ್ನು ತೋರಬಹುದಾಗಿತ್ತು ಎನ್ನುವುದು ಹೊಸಬಾಳೆ ಅವರ ವಾದ. ಈ ಮಾತನ್ನು ಹೊಸಬಾಳೆಯವರು ಹೇಳಿದ್ದಲ್ಲ, ಬಿಜೆಪಿಯವರು ಅವರ ಬಾಯಿಂದ ಹೇಳಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಇಷ್ಟುದಿನ ಆರೆಸ್ಸೆಸ್ ತನ್ನ ಮಾತನ್ನು ಬಿಜೆಪಿಯ ಮುಖಾಂತರ ಆಡಿಸುತ್ತಿದೆ ಎನ್ನುತ್ತಿದ್ದವರು, ಈಗ ‘ಯು-ಟರ್ನ್’ ಹೊಡೆದಿದ್ದಾರೆ.

ಸಂಘಟನೆಯಲ್ಲಿ ಸರಸಂಘಚಾಲಕರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಹೊಸಬಾಳೆಯವರು, ಬಿಜೆಪಿಯವರ ಆಣತಿಯಂತೆ ಕೆಲಸಮಾಡುತ್ತಿದ್ದಾರೆ ಅಥವಾ ಆರೆಸ್ಸೆಸ್ ಅಷ್ಟು ದುರ್ಬಲವಾಗಿದೆ ಎಂದು ನನಗಂತೂ ಅನಿಸುವುದಿಲ್ಲ. ಮುಂದಿನ ಸರಸಂಘಚಾಲಕರು ಎಂದು ಬಿಂಬಿಸಲ್ಪಡುವ ಅವರು, ಬಿಜೆಪಿಗೆ ಮಾರ್ಗದರ್ಶನ ಮಾಡುವ ಕ್ಷಮತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎನಿಸುತ್ತದೆ.

ದೇಶದ ಭವಿಷ್ಯದ ಕುರಿತು ತಮ್ಮದೇ ಆದ ಅಭಿಪ್ರಾಯ ಹೊಂದುವ ಸಾಮರ್ಥ್ಯವನ್ನು ಹಾಗೂ ಸ್ವಾತಂತ್ರ್ಯವನ್ನು ಅವರು ಖಂಡಿತ ಹೊಂದಿಯೇ ಇದ್ದಾರೆ. ಅಷ್ಟಕ್ಕೂ, ಅವರು ಸುಳ್ಳನ್ನಂತೂ ಹೇಳಿಲ್ಲ, ಇರುವ ವಿಷಯವನ್ನೇ ಪುನಃ ಪ್ರತಿಪಾದಿಸಿದ್ದಾರೆ ಅಷ್ಟೇ. ಕಾಂಗ್ರೆಸ್ ಪಕ್ಷಕ್ಕೆ, ಸಂವಿಧಾನ ದಲ್ಲಿ ಜಾತ್ಯತೀತ ಶಬ್ದ ಇರಬೇಕು. ಆದರೆ, ಜನಗಣತಿ ಮಾತ್ರ ಜಾತಿ ಆಧಾರದ ಆಗಬೇಕು. ಹೇಳಿಕೊಳ್ಳಲು ಮಾತ್ರ ದೇಶವು ‘ಧರ್ಮ ನಿರಪೇಕ್ಷ’ವಾಗಿರಬೇಕು.

ಆದರೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತಮಗೆ ಬೇಕಾದ ಕೆಲವು ಧರ್ಮಗಳಿಗೆ ಮೀಸಲಾತಿ ಸೌಲಭ್ಯ ನೀಡುವುದು ಅಪೇಕ್ಷಣೀಯವಾಗಬೇಕು. ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಯವರು, ಮನುಸ್ಮೃತಿಯನ್ನು ಪಾಲಿಸುವ ಜನಿವಾರಧಾರಿ (ಜನೇವುಧಾರಿ) ಬ್ರಾಹ್ಮಣರಾಗಬೇಕು, ಅದಾದ ಮೇಲೆ ಮನುಸ್ಮೃತಿಯನ್ನು ತಿರಸ್ಕರಿಸಬೇಕು.

ತಮಗೆ ಬೇಕಾದಾಗ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧಿಯವರನ್ನು ಸ್ಮರಿಸಬೇಕು. ಆದರೆ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತರುವಾಗ ಮಾತ್ರ, ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳಬೇಕು. ದೇಶದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿದ್ದಾಗ ಸಂವಿಧಾನ ನಿಂತ ನೀರಾಗೇ ಇರಬೇಕು. ಅದೇ, ತಾವು ಅಧಿಕಾರದಲ್ಲಿದ್ದಾಗ, ಅದೇ ಸಂವಿಧಾನದ ವಿಡಂಬನೆಮಾಡಿ, ಸ್ವಾರ್ಥಕ್ಕಾಗಿ ತುರ್ತುಪರಿಸ್ಥಿತಿಯನ್ನು ಹೇರುವುದೂ ಸೇರಿದಂತೆ ತಮಗೆ ಬೇಕಾದ ಬದಲಾವಣೆಗಳನ್ನು ತರಬಹುದು ಎಂದರೆ, ಇದು ಕಾಂಗ್ರೆಸ್ಸಿನ ವಿರೋಧಾಭಾಸದ ಹಾಗೂ ದ್ವಂದ್ವಮಯ ಧೋರಣೆಯಲ್ಲದೇ ಮತ್ತಿನ್ನೇನು? ಹಾಗೊಮ್ಮೆ ಕಾಂಗ್ರೆಸ್ಸಿನ ನಾಯಕತ್ವ, ಐವತ್ತು ವರ್ಷಗಳ ಕೆಳಗಿನ ಪಕ್ಷದ ಅಥವಾ ಅದರ ಅಧಿನಾಯಕಿ ಇಂದಿರಾ ಅವರ ಈ ನಿರ್ಧಾರವನ್ನು ಕುರಿತು, ‘ಅವರು ಯಾಕೆ ಆ ನಿರ್ಧಾರ ಮಾಡಿದರೋ ನಮಗೆ ತಿಳಿಯದು.

ಆದರೆ, ಅದೊಂದು ತಪ್ಪು ನಿರ್ಧಾರವಾಗಿತ್ತು, ಅಂದು ಹಾಗಾಗಬಾರದಿತ್ತು ಎನ್ನುವುದು ನಮಗೂ ಮನವರಿಕೆಯಾಗಿದೆ’ ಎಂದು ಒಪ್ಪಿಕೊಂಡು, ಜನರಲ್ಲಿ ಕ್ಷಮೆ ಕೇಳಿ ಮುಂದೆ ಸಾಗುವ ಧೈರ್ಯ ಮಾಡಿದ್ದರೆ, ಈ ಪಕ್ಷ ಇಂದಿರುವ ಪರಿಸ್ಥಿತಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತಿತ್ತೇನೊ!

‘ಅವಶ್ಯಮನುಭೋಕ್ತವ್ಯಂ ಕ್ರತಂಕರ್ಮ ಶುಭಾಶುಭಮ’ ಎಂಬ ಕರ್ಮಸಿದ್ಧಾಂತದ ಈ ಮಾತಿನಂತೆ, ಶುಭವಾಗಲಿ ಅಶುಭವಾಗಲಿ, ತಾವು ಮಾಡಿದ ಕರ್ಮದ ಫಲವನ್ನು ತಾವೇ ಅನುಭವಿಸಬೇಕು. ಕನ್ನಡದಲ್ಲಿ ‘ಮಾಡಿದ್ದುಣ್ಣೋ ಮಾರಾಯಾ’ ಎನ್ನುತ್ತಾರ, ಹಾಗೆ....!