ವಿದೇಶವಾಸಿ
ವಿಶ್ವ ಟೆನಿಸ್ ಶ್ರೇಯಾಂಕಿತರ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದವರೆಗೂ ಏರಿದ್ದ ಜೇಮ್ಸ್ ಬ್ಲೇಕ್, ವಿಧಿಯ ಆಟಗಳಿಗೆ ತುತ್ತಾದವನು. ಟೆನಿಸ್ ಜೀವನದಲ್ಲಿ ಸಾಕಷ್ಟು ಮೇಲೇರಿ ಮೊದಲೆರಡು ಸ್ಥಾನದಲ್ಲಿದ್ದವರನ್ನು ಸೋಲಿಸಿದರೂ ಚಾಂಪಿಯನ್ ಆಗಲಿಲ್ಲ. ಆತನ ಬದುಕು ಹಾವು ಏಣಿ ಆಟದಂತೆ ಏರಿಳಿಯುತ್ತಾ ಹೋಯಿತು.
ಒಬ್ಬ ವ್ಯಕ್ತಿಯನ್ನು ಯಾವುದಾದರೂ ಪ್ರಸಿದ್ಧ ವ್ಯಕಿಗಳೊಂದಿಗೆ ಹೋಲಿಸಿದರೆ ಖುಷಿಯಾಗುತ್ತದೆ. ಪ್ರಸಿದ್ಧ ಚಲನಚಿತ್ರ ತಾರೆ, ಕ್ರೀಡಾಪಟು, ರಾಜಕಾರಣಿ ಇತ್ಯಾದಿ. ಅದೇ ಯಾವುದಾದರೂ ಕಳ್ಳ, ದರೋಡೆಕೋರ ರಂತಹ ಕುಖ್ಯಾತ ವ್ಯಕ್ತಿಗಳೊಂದಿಗೆ ಹೋಲಿಸಿದರೆ ಬೇಸರವಾಗುತ್ತದೆ, ಕೆಲವೊಮ್ಮೆ ಸಿಟ್ಟೂ ಬರುತ್ತದೆ. ಹೊಗಳಿದಾಗ ಸಂತೋಷವಾಗುವುದು, ತೆಗಳಿದಾಗ ಬೇಸರವಾಗುವುದು, ಮನುಷ್ಯನ ಸಹಜ ಗುಣ ಬಿಡಿ.
ಇದಕ್ಕಿಂತಲೂ ಭಿನ್ನವಾದದ್ದು ಇನ್ನೊಂದಿದೆ, ಮೊದಲು ಒಳ್ಳೆಯವರಿಗೆ ಹೋಲಿಸಿ, ನಂತರ ಕೆಟ್ಟವ ರೊಂದಿಗೆ ಹೋಲಿಸುವುದಿದೆಯಲ್ಲ, ಅದರಂಥ ಅವಮಾನ ಇನ್ನೊಂದಿಲ್ಲ. ಅದಕ್ಕಿಂತಲೂ, ಜೀವನವಿಡೀ ಕಷ್ಟಪಟ್ಟು ಏನನ್ನಾದರೂ ಸಾಧಿಸಿ, ಸಮಾಜದಲ್ಲಿ ಗೌರವಯುತ ಸ್ಥಾನಕ್ಕೆ ಏರಿದಂಥ ವರ ಮೇಲೆ ಸುಳ್ಳು ಆರೋಪ ಹೊರಿಸಿದರೆ, ಆ ವ್ಯಕ್ತಿಯ ಪರಿಸ್ಥಿತಿ ಹುಯಿಲೋ ಹುಯಿಲು.
ಅಂತಹ ಪರಿಸ್ಥಿತಿಯಲ್ಲೂ ಜಯಿಸಲು ಸಾಧ್ಯ ಎನ್ನುವುದಕ್ಕೆ ಆತ ಉದಾಹರಣೆ. ಟೆನಿಸ್ ಇಷ್ಟಪಡು ವವರು ಆತನ ಹೆಸರು ಕೇಳದೇ ಇರುವ ಸಾಧ್ಯತೆ ಕಮ್ಮಿ. ಆತ ವಿಶ್ವದ ನಾಲ್ಕು ಪ್ರತಿಷ್ಠಿತ ಪ್ರಶಸ್ತಿ ಗಳಾದ ವಿಂಬಲ್ಡನ್, ಯುಎ ಓಪನ್, ಫ್ರೆಂಚ್ ಓಪನ್ ಅಥವಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾಟಗಳ ಪೈಕಿ ಯಾವುದೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನೂ, ಒಮ್ಮೆಯೂ ಗೆಲ್ಲಲಿಲ್ಲ. ಗೆಲ್ಲುವುದು ಬಿಡಿ, ತನ್ನ ಹದಿಮೂರು ವರ್ಷದ ಟೆನಿಸ್ ಜೀವನದಲ್ಲಿ ಒಮ್ಮೆ ಮಾತ್ರ ಗ್ರ್ಯಾಂಡ್ ಸ್ಲ್ಯಾಮ್ ಉಪಾಂತ್ಯದ ಹಂತದವರೆಗೆ ತಲುಪಿದ್ದು. ಅದೂ ಡಬಲ್ಸ್ನಲ್ಲಿ.
ಇದನ್ನೂ ಓದಿ: Kiran Upadhyay Column: ಜಾಗೃತಿಗೆ ಹುಚ್ಚು; ಜೆನ್-ಝೀಗೆ ಮಾದರಿ
ಒಮ್ಮೆ ಡೇವಿಸ್ ಕಪ್ ಮತ್ತು ಎರಡು ಬಾರಿ ಹಾಪ್ಮನ್ ಕಪ್ ಸೇರಿದಂತೆ ಆತ ಒಟ್ಟೂ ಹತ್ತು ಪಂದ್ಯಾಟಗಳನ್ನು ಮಾತ್ರ ಜಯಿಸಿದ್ದು. ಆದರೆ ಆತನ ಪರಿಶ್ರಮ, ಸಾಧನೆ, ಅನುಭವಿಸಿದ ಅವಮಾನ ಮತ್ತು ಅದನ್ನು ಕಳೆದು ಪುನಃ ಪುಟಿದೆದ್ದು ಬಂದದ್ದನ್ನು ಪದಗಳಲ್ಲಿ ಕಟ್ಟಿಕೊಡುವುದು ತೀರಾ ಕಷ್ಟದ ಕೆಲಸ. ಆತ ಜನಿಸಿದ್ದು ಅಮೆರಿಕದ ನ್ಯೂಯಾರ್ಕ್ನಲ್ಲಿ. ತಂದೆ ಥಾಮಸ್ ರೇನಾಲ್ಡ್ಸ್ ಬ್ಲೇಕ್, ಆಫ್ರಿಕನ್ ಅಮೇರಿಕನ್. ನಾಲ್ಕು ಜನ ಅಣ್ಣಂದಿರ ಪೈಕಿ ಥಾಮಸ್ ಟೆನಿಸ್ ಆಡುತ್ತಿದ್ದ. ಆತ ಐದು ವರ್ಷದವನಿರುವಾಗಲೇ ಅಣ್ಣನ ಆಟದಿಂದ ಪ್ರಭಾವಿತನಾಗಿದ್ದ. ತನ್ನಷ್ಟೇ ಉದ್ದದ ಟೆನಿಸ್ ರ್ಯಾಕೆಟ್ ಹಿಡಿದು ಅಣ್ಣನೊಂದಿಗೆ ಆಡಲು ಹೋಗುತ್ತಿದ್ದ. ಆದರೆ ಹದಿಮೂರು ವರ್ಷದ ಸಣ್ಣ ಪ್ರಾಯದ ಮೊದಲ ಬಾರಿ ಬದುಕಿನ ಮೊದಲ ವಕ್ರಕ್ಕೆ ಗುರಿಯಾಗಿದ್ದ. ಆತನಿಗೆ ಸ್ಕೋಲಿಯೋಸಿಸ್ ಇದೆ ಎಂದು ತಿಳಿಯಿತು.
ಅದು ಬೆನ್ನುಮೂಳೆ ಅಡ್ಡಡ್ಡ ಬಾಗಿ, ಓರೆಕೋರೆಯಾಗಿರುವ ಸ್ಥಿತಿ. ಬೆನ್ನಿಗೆ ಪ್ರತಿನಿತ್ಯ ಹದಿನೆಂಟು ಗಂಟೆ ಗಳವರೆಗೆ ಕಟ್ಟುಪಟ್ಟಿ ಕಟ್ಟಿಕೊಂಡಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಒಪ್ಪದೇ ಬೇರೆ ಉಪಾಯವಿರಲಿಲ್ಲ. ಟೆನಿಸ್ ಆಡುವ ಸಮಯದಲ್ಲಿ ಅದನ್ನು ತೆಗೆಯಬಹುದಾಗಿತ್ತು. ಆದರೆ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆಯ ವರ್ಗಾವಣೆ ಆತನನ್ನು ಕೆಲಕಾಲ ಆಟದಿಂದ ದೂರ ಇರುವಂತೆ ಮಾಡಿತು. ಆತ ಟೆನಿಸ್ ಆಟಗಾರ ಆರ್ತರ್ ಆಶೆಯನ್ನು ಇಷ್ಟಪಡುತ್ತಿದ್ದ. ಆರ್ತರ್ನ ಆಟದೊಂದಿಗೆ ಮಾತೂ ಆತನಿಗೆ ಇಷ್ಟವಾಗುತ್ತಿತ್ತು. ಆರ್ತರ್ನ ಮಾತುಗಳಿಂದ ಪ್ರೇರೇಪಿತನಾಗಿ ಮತ್ತೆ ಟೆನಿಸ್ ಆಡಲು ನಿರ್ಧರಿಸಿದ.
ಹತ್ತನೆಯ ತರಗತಿ ಮುಗಿಯುತ್ತಿದ್ದಂತೆ, ಟೆನಿಸ್ ಆಟದಲ್ಲಿಯೇ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ, ಓದಿಗೆ ಬೈ ಬೈ ಹೇಳಿದ. ಟೆನಿಸ್ ಗುರು ಬ್ರಿಯಾನ್ ಬಾರ್ಕರ್ನ ಇಷ್ಟದ ಶಿಷ್ಯನಾದ. ಆತ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ. ಆಡಿದ ಮೊದಲ ಡೇವಿಸ್ ಕಪ್ ಪಂದ್ಯಾಟ ದಲ್ಲಿ ಆತ ಭಾರತವನ್ನು ಎದುರಿಸಿದ್ದ. ಜತೆಗೆ, ಆರ್ತರ್ ಆಶೆ ಮತ್ತು ವಾಲಿವೈ ವಾಶಿಂಗ್ಟನ್ ನಂತರ ಅಮೆರಿಕದ ಪರವಾಗಿ ಡೆವಿಸ್ ಕಪ್ನಲ್ಲಿ ಆಡಿದ ಮೂರನೆಯ ಆಫ್ರಿಕನ್ ಅಮೆರಿಕನ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.
ಅದೇ ವರ್ಷ ಆತ ಸಿನ್ಸಿನಾಟಿ ಮಾಸ್ಟರ್ಸ್ ಪಂದ್ಯಾಟದಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದು, ನೂರಿಪ್ಪತ್ತನೇ ಶ್ರೇಯಾಂಕಿತನಾಗಿ ವಿಶ್ವದ ಅಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದ. ಎಲ್ಲಕ್ಕಿಂತ ಮಿಗಿಲಾಗಿ, ಆ ವರ್ಷ ಯುಎಸ್ ಓಪನ್ ಪಂದ್ಯಾಟದಲ್ಲಿ ಜಯಿಸಿದ ಅಗ್ರ ಶ್ರೇಯಾಂಕಿತ ಆಸ್ಟ್ರೇಲಿಯಾದ ಲೆವ್ಟನ್ ಹೆವಿಟ್ ವಿರುದ್ಧದ ಪಂದ್ಯದಲ್ಲಿ ಕೊನೆಯವರೆಗೂ ಸೆಣಸಿದ. ತನ್ನ ಆಟದಿಂದ ಮೊದಲ ಬಾರಿ ವಿಶ್ವದ ಗಮನ ಸೆಳೆದ. ಅದಾಗಿ ಒಂದು ವರ್ಷದ ನಂತರ ಮೊದಲ ಎಟಿಪಿ ಟೂರ್ ಮತ್ತು ಎಟಿಪಿ ಮಾಸ್ಟರ್ಸ್ ಪ್ರಶಸ್ತಿಯನ್ನೂ ಪಡೆದ. ಆ ವರ್ಷ ಆತ ಆಂಡ್ರಿ ಅಗಾಸಿಯಂತಹ ದಿಗ್ಗಜರನ್ನು ಸೋಲಿಸಿದ್ದ. 2004ರ ಮೇ ತಿಂಗಳಿನಲ್ಲಿ ಆತ ಆಘಾತದ ಮೇಲೆ ಆಘಾತ ಕಂಡಿದ್ದ. ಆ ವರ್ಷ ಮಾಸ್ಟರ್ಸ್ ಪಂದ್ಯಾಟಕ್ಕೆ ರೋಮ್ನಲ್ಲಿ ಅಭ್ಯಾಸ ನಡೆಸಿದ್ದ.
ಮಣ್ಣಿನ ಕೋರ್ಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಆತನ ಕಾಲು ಜಾರಿ ಬಿದ್ದು ಟೆನಿಸ್ ಕಂಬಕ್ಕೆ ಡಿಕ್ಕಿ ಹೊಡೆದ. ಡಿಕ್ಕಿಯ ಹೊಡೆತಕ್ಕೆ ಆರು ಅಡಿ ಒಂದು ಇಂಚು ಎತ್ತರದ ಕಟ್ಟುಮಸ್ತು ಆಳಿನ ಕತ್ತಿನ ಮೂಳೆ ಮುರಿದಿತ್ತು. ಅದೃಷ್ಟವಶಾತ್ ನರಗಳಿಗೆ ತೊಂದರೆ ಆಗದ ಕಾರಣ, ಕೆಲವೇ ತಿಂಗಳಿನಲ್ಲಿ ಚೇತರಿಸಿಕೊಂಡ. ಆದರೆ ಅದೇ ಸಂದರ್ಭದಲ್ಲಿ ಹೊಟ್ಟೆಯ ಕ್ಯಾನ್ಸರ್ನಿಂದಾಗಿ ಆತನ ತಂದೆ ತೀರಿಹೋದರು.
ಪ್ರೀತಿಯ ತಂದೆಯನ್ನು ಕಳೆದುಕೊಂಡು ಅನಾಥ ಭಾವದಿಂದ ಹೊರಬರುವುದಕ್ಕೆ ಮುಂಚೆಯೇ ಆತನಿಗೆ ಇನ್ನೊಂದು ಆಘಾತ ಕಾದಿತ್ತು. ಸರ್ಪಸುತ್ತಿನಿಂದಾಗಿ ಆತನ ಅರ್ಧ ಮುಖ ತಾತ್ಕಾಲಿಕವಾಗಿ ಸ್ಪರ್ಶತೆಯ ಅನುಭವವನ್ನು ಕಳೆದುಕೊಂಡಿತ್ತು. ಆತನ ಒಂದು ಕಣ್ಣೂ ಮಂಜಾಯಿತು. ಆ ಸಂದರ್ಭದಲ್ಲಿ ಆತ ತನ್ನ ಟೆನಿಸ್ ಜೀವನ ಇಲ್ಲಿಗೇ ಮುಗಿಯಿತು ಎಂಬ ಆತಂಕಕ್ಕೆ ಒಳಗಾದ. ವಿಶ್ವ ಶ್ರೇಯಾಂಕದಲ್ಲಿ ಆತ ಇನ್ನೂರ ಹತ್ತನೆಯ ಸ್ಥಾನಕ್ಕೆ ಕುಸಿದಿದ್ದ. ಎಷ್ಟೇ ಕಷ್ಟವಾದರೂ ಸರಿ, ಮತ್ತೊಮ್ಮೆ ಆಡಲೇ ಬೇಕು ಎಂಬ ಸಂಕಲ್ಪದೊಂದಿಗೆ ಮತ್ತೆ ಮೈದಾನಕ್ಕಿಳಿದ.
ಕಠಿಣ ಅಭ್ಯಾಸದ ನಂತರ ಸಣ್ಣ ಸಣ್ಣ ಪಂದ್ಯಾಟಗಳಲ್ಲಿ ಭಾಗವಹಿಸಲು ಆರಂಭಿಸಿದ. ಆ ವರ್ಷದ ಅಂತ್ಯದಲ್ಲಿ ವಿಶ್ವ ಶ್ರೇಯಾಂಕಿತರ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿದ್ದ ರೋಜರ್ ಫೆಡರರ್ ಮತ್ತು ಎರಡನೆಯ ಸ್ಥಾನದಲ್ಲಿದ್ದ ರಫೆಲ್ ನಡಾಲ್ರನ್ನು ಸೋಲಿಸಿ ಎಲ್ಲರೂ ಆಶ್ಚರ್ಯಪಡು ವಂತೆ ಮಾಡಿದ. ವರ್ಷಾಂತ್ಯಕ್ಕೆ ವಿಶ್ವ ಶ್ರೇಯಾಂಕಿತರ ಪಟ್ಟಿಯಲ್ಲಿ ಮೇಲೇರಿ ಇಪ್ಪತ್ತೆರಡನೆಯ ಸ್ಥಾನದಲ್ಲಿದ್ದ. ಎಲ್ಲಕ್ಕಿಂತ ಹೆಚ್ಚಾಗಿ, ತನ್ನ ಆತ್ಮವಿಶ್ವಾಸವನ್ನು ಶಿಖರದೆತ್ತರಕ್ಕೆ ವೃದ್ಧಿಸಿಕೊಂಡಿದ್ದ. ಅದರ ಮುಂದಿನ ವರ್ಷ ಆತನ ಟೆನಿಸ್ ಜೀವನದ ಸುವರ್ಣ ಯುಗ.
ಕೆಲವು ದಿಗ್ಗಜರನ್ನು ಮಣಿಸಿ ಆತ ಶ್ರೇಯಾಂಕಿತರ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನಕ್ಕೇರಿದ್ದ. ಆ ವರ್ಷ ಆತ ಅಮೇರಿಕದ ಅಗ್ರ ಶ್ರೇಯಾಂಕಿತ ಆಟಗಾರನಾಗಿದ್ದ. ನಂತರದ ಮೂರು ವರ್ಷ ಸಣ್ಣ ಪುಟ್ಟ ಏರಿಳಿತ ಕಂಡರೂ ವಿಶ್ವದ ಹತ್ತು ಅಗ್ರಮಾನ್ಯರಲ್ಲಿ ಒಬ್ಬನಾಗಿದ್ದ. ಆಗ ವಿಧಿ ಮತ್ತೊಮ್ಮೆ ಆತನೆಡೆಗೆ ವಕ್ರದೃಷ್ಟಿ ಬೀರಿತ್ತು. ಮೊಣಕಾಲಿನ ಗಾಯದಿಂದಾಗಿ ಆತ ಮತ್ತೆ ಕೆಲವು ದಿನ ಆಟದ ಅಂಗಳದಿಂದ ಹೊರಗುಳಿಯುವಂತಾಯಿತು.
ನಂತರ 2013ರ ವರೆಗೂ ಆಗಾಗ ಗಾಯಾಳುವಾಗಿ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಇಳಿಯುತ್ತಿದ್ದರೂ, ಮೊದಲಿನ ಸ್ಥಾನಕ್ಕೆ ಏರಲು ಆಗಲೇ ಇಲ್ಲ. ಕೊನೆಗೆ 2013ರಲ್ಲಿ ಆತ ಟೆನಿಸ್ ಅಂಗಳಕ್ಕೆ ವಿದಾಯ ಹೇಳಿದ. ಟೆನಿಸ್ ಇತಿಹಾಸದಲ್ಲಿ ಅತ್ಯಂತ ವೇಗದ (ಪ್ರತಿ ಗಂಟೆಗೆ ಇನ್ನೂರು ಕಿಲೋಮೀಟರ್) ಮುಂಗೈ ಆಟಗಾರ ಎಂಬ ಕೀರ್ತಿಗೆ ಪಾತ್ರನಾದವ, ಆಟದಿಂದಲೇ ಸುಮಾರು ಎಂಟು ಮಿಲಿಯನ್ ಡಾಲರ್ನಷ್ಟು ಬಹುಮಾನ ಪಡೆದವ ಟೆನಿಸ್ ಆಟದಿಂದ ಸನ್ಯಾಸ ಸ್ವೀಕರಿಸಿದ್ದ. ಆದರೆ ಅಲ್ಲಿಗೆ ಕತೆ ಮುಗಿಯಲಿಲ್ಲ.
ಆತ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಸುಖದ ಜೀವನ ನಡೆಸುತ್ತಿದ್ದ. 2015ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ದಿನ ಆತ ನ್ಯೂಯಾರ್ಕ್ ನಗರದ ಗ್ರ್ಯಾಂಡ್ ಹಯಾತ್ ಹೊಟೇಲಿನ ಹೊರಗೆ ನಿಂತಿದ್ದ. ಇದ್ದಕ್ಕಿದ್ದಂತೆ ಅವನ ಮೇಲೆ ಎರಗಿದ ಸಮವಸ್ತ್ರ ಧರಿಸದ ಪೊಲೀಸ್ ಸಿಬ್ಬಂದಿಯೊಬ್ಬ ಆತನನ್ನು ನೆಲಕ್ಕೆ ಕೆಡವಿ, ಕೈಗೆ ಕೊಳ ತೊಡಿಸಿದ. ಸುಮಾರು ಹದಿನೈದು ನಿಮಿಷದವರೆಗೂ ತನ್ನೊಂದಿಗೆ ಏನಾಗುತ್ತಿದೆ ಎಂಬುದೇ ಆತನಿಗೆ ತಿಳಿಯಲಿಲ್ಲ. ಕಾರಣ ತಿಳಿದಾಗ ಆತ ಕಂಗಾಲಾಗಿದ್ದ.
ವಿಷಯ ಏನೆಂದರೆ, ಆತ ಉಳಿದುಕೊಂಡಿದ್ದ ಹೊಟೇಲಿನಲ್ಲಿಯೇ ಕ್ರೆಡಿಟ್ ಕಾರ್ಡ್ ವಂಚನೆಯ ಪ್ರಕರಣ ಮಾಡಿದ ವ್ಯಕ್ತಿಯೊಬ್ಬ ಉಳಿದುಕೊಂಡಿದ್ದ. ಈ ಮಾಹಿತಿಯನ್ನು ಅನುಸರಿಸಿದ ಪೊಲೀಸರು ವಂಚಕ ನನ್ನು ಹಿಡಿಯುವುದಕ್ಕೆ ಹೊಟೇಲಿನ ಹೊರಗೆ ಕಾದು ಕುಳಿತಿದ್ದರು. ಆತನ ದುರದೃಷ್ಟಕ್ಕೆ, ಆತನಿಗೂ, ವಂಚಕನಿಗೂ ತೀರಾ ಹತ್ತಿರದ ಸಾಮ್ಯತೆ ಇತ್ತು. ಇಬ್ಬರ ನಡುವೆ ಭೇದ ಗುರುತಿಸಲಾಗದ ಪೊಲೀಸ್ ಸಿಬ್ಬಂದಿಯೊಬ್ಬ ಆತನನ್ನೇ ವಂಚಕನೆಂದು ತಪ್ಪಾಗಿ ತಿಳಿದು ಆತನನ್ನು ಬಂಧಿಸಿದ್ದ.
ಆತ ನಿರಪರಾಧಿ ಎಂದು ತಿಳಿದು ಆತನನ್ನು ಬಿಡುಗಡೆ ಮಾಡಿದ್ದೂ ಆಯಿತು, ನ್ಯೂಯಾರ್ಕ್ ಸಿಟಿ ಪೋಲೀಸ್ ಡಿಪಾರ್ಟ್ಮೆಂಟ್ನ ಕಮಿಷನರ್ ತಮ್ಮ ಇಲಾಖೆಯಿಂದ ತಪ್ಪಾಗಿದೆ ಎಂದು ಒಪ್ಪಿದ್ದೂ ಆಯಿತು. ಆದರೆ ಅಮೆರಿಕದ ತುಂಬ ಆಗಲೇ ಇದು ದೊಡ್ಡ ಸುದ್ದಿಯಾಗಿತ್ತು. ಕೆಲವರು ಅದಕ್ಕೆ ವರ್ಣಭೇದದ ಬಣ್ಣ ಬಳಿದಿದ್ದರು. ಮೊದಲಿಗೆ ಆತನೂ ಹಾಗೆಯೇ ತಿಳಿದಿದ್ದ. ತನ್ನನ್ನು ಬಂಧಿಸಿದ ಪೊಲೀಸ್ ಅಧಿಕಾರಿಯ ಮೇಲೆ ದಾವೆಯನ್ನೂ ಹೂಡಿದ. ಅದು ಬೇಕಂತಲೇ ದುರುದ್ದೇಶದಿಂದ ಮಾಡಿದ ಕೆಲಸವಲ್ಲ ಎಂದು ಅರಿತಾಗ ಅದನ್ನು ಕೈಬಿಟ್ಟನಾದರೂ ಅವನೊಳಗೆ ಒಬ್ಬ ಸಾಮಾಜಿಕ ಕಾರ್ಯಕರ್ತ ಜನ್ಮತಳೆದಿದ್ದ.
ಆಟದ ಮೈದಾನ ಬಿಟ್ಟು ಬಂದವನ ಒಳಗೆ, ವರ್ಣಭೇದ ನೀತಿಯನ್ನು ವಿರೋಧಿಸುವ ಒಬ್ಬ ಚಳುವಳಿಕಾರ ಹುಟ್ಟಿಕೊಂಡಿದ್ದ. ಈ ಎಲ್ಲಾ ಸಂಗತಿಗಳನ್ನೂ ಆತ ಆಂಡ್ರ್ಯೂ ಫ್ರೈಡ್ ಮನ್ ಜತೆ ಸೇರಿ ಬರೆದ Breaking back- How I lost everything and won back my life ಮತ್ತು ಕರೋಲ್ ಟೈಲರ್ ಜತೆ ಸೇರಿ ಬರೆದ Ways of grace- Stories of activism, adverscity, and how sports can bring us together ಪುಸ್ತಕದಲ್ಲಿ ಸ್ವತಃ ಹೇಳಿಕೊಂಡಿದ್ದಾನೆ. ಆತ ಇಂದಿಗೂ ತನ್ನ ಜೇಮ್ಸ್ ಬ್ಲೇಕ್ ಫೌಂಡೇಷನ್ ವತಿಯಿಂದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಮತ್ತು ಕ್ಯಾನ್ಸರ್ ರೋಗದ ಕುರಿತು ಸಂಶೋಧನೆಗೆ ಸಹಾಯ ನೀಡುತ್ತಿದ್ದಾನೆ. ಬದುಕಿನ ಸಾರ್ಥಕತೆಗೆ ಇನ್ನೇನು ಬೇಕು?