ನರೇಂದ್ರ ಮೋದಿ, ಪ್ರಧಾನಿ
ಇಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಜನ್ಮದಿನ. ಆರ್‌ಎಸ್‌ಎಸ್ ತನ್ನ ಶತಮಾನೋತ್ಸವ ಆಚರಿಸುತ್ತಿರುವ ಇದೇ ವರ್ಷ ಭಾಗವತ್ ಅವರ 75ನೇ ಜನ್ಮದಿನವೂ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರು ಅವರನ್ನು ಗೌರವದಿಂದ ಪೂಜನೀಯ ಸರಸಂಘಚಾಲಕ್ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ ಬರೆದಿದ್ದಾರೆ. ಭಾಗವತ್‌ರ ವ್ಯಕ್ತಿತ್ವದ ವೈಶಿಷ್ಟ್ಯವನ್ನು ಮೋದಿ ವರ್ಣಿಸಿದ್ದಾರೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ ಇಂದು ಸೆಪ್ಟೆಂಬರ್ 11. ಈ ದಿನ ನನಗೆ ಎರಡು ವ್ಯತಿರಿಕ್ತ ನೆನಪು ಗಳು ಮರುಕಳಿಸುತ್ತವೆ. ಮೊದಲನೆಯದು, 1893ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಶಿಕಾಗೋ ಭಾಷಣ ಮಾಡಿದ್ದು. ಅಮೆರಿಕದ ಸಹೋದರಿ ಮತ್ತು ಸಹೋದರರೇ ಎಂಬ ಕೆಲವೇ ಪದಗಳೊಂದಿಗೆ ಅವರು ಸಭಾಂಗಣದಲ್ಲಿದ್ದ ಸಾವಿರಾರು ಜನರ ಹೃದಯಗಳನ್ನು ಗೆದ್ದರು.
ಅವರು ಭಾರತದ ಅನಾದಿ ಆಧ್ಯಾತ್ಮಿಕ ಪರಂಪರೆಯನ್ನು ಮತ್ತು ಜಾಗತಿಕ ಭಾತೃತ್ವದ ಮಹತ್ವ ವನ್ನು ವಿಶ್ವವೇದಿಕೆಗೆ ಪರಿಚಯಿಸಿದರು. ಎರಡನೆಯ ನೆನಪು ಭಯಾನಕ 9/11 ದಾಳಿಯದ್ದು, ಭಯೋತ್ಪಾದನೆ ಮತ್ತು ಮೂಲಭೂತವಾದದ ಬೆದರಿಕೆಯಿಂದಾಗಿ ವಿವೇಕಾನಂದರ ತತ್ತ್ವವು ದಾಳಿಗೆ ಒಳಗಾಯಿತು.
ಈ ದಿನದ ಬಗ್ಗೆ ಇನ್ನೂ ಒಂದು ಗಮನಾರ್ಹ ವಿಷಯವಿದೆ. ವಸುಧೈವ ಕುಟುಂಬಕಂ ತತ್ತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜಿಕ ಪರಿವರ್ತನೆ, ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟ ವ್ಯಕ್ತಿತ್ವದ ಜನ್ಮದಿನ ಇಂದು. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರು ಅವರನ್ನು ಗೌರವದಿಂದ ಪೂಜನೀಯ ಸರಸಂಘಚಾಲಕ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: Roopa Gururaj Column: ಅನಂತ ಪದ್ಮನಾಭ ಪೂಜಾಫಲ
ಹೌದು, ನಾನು ಶ್ರೀ ಮೋಹನ್ ಭಾಗವತ್‌ಜೀ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರ 75ನೇ ಹುಟ್ಟುಹಬ್ಬವು ಕಾಕತಾಳೀಯವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋ ತ್ಸವವನ್ನು ಆಚರಿಸುತ್ತಿರುವ ಇದೇ ವರ್ಷದಲ್ಲಿ ಬರುತ್ತದೆ. ನಾನು ಅವರಿಗೆ ನನ್ನ ಶುಭಾಶಯ ಗಳನ್ನು ಕೋರುತ್ತೇನೆ ಮತ್ತು ಅವರ ಸುದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸು ತ್ತೇನೆ.
ಮೋಹನ್‌ಜೀ ಅವರ ಕುಟುಂಬದೊಂದಿಗೆ ನನಗೆ ಗಾಢವಾದ ಬಾಂಧವ್ಯವಿದೆ. ಮೋಹನ್‌ಜೀ ಅವರ ತಂದೆ ದಿವಂಗತ ಮಧುಕರ್ ರಾವ್ ಭಾಗವತ್‌ಜೀ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ದೊರಕಿತು. ನನ್ನ ಜ್ಯೋತಿಪುಂಜ್ ಪುಸ್ತಕದಲ್ಲಿ ಅವರ ಬಗ್ಗೆ ವಿವರವಾಗಿ ಬರೆದಿದ್ದೇನೆ. ಕಾನೂನು ಜಗತ್ತಿನೊಂದಿಗೆ ಒಡನಾಟದ ಜೊತೆಗೆ, ಅವರು ರಾಷ್ಟ್ರ ನಿರ್ಮಾಣಕ್ಕೂ ತಮ್ಮನ್ನು ಅರ್ಪಿಸಿಕೊಂಡರು.
ಗುಜರಾತಿನಾದ್ಯಂತ ಆರ್‌ಎಸ್‌ಎಸ್ ಅನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರ ನಿರ್ಮಾಣದ ಬಗ್ಗೆ ಮಧುಕರ್ ರಾವ್‌ಜೀ ಅವರ ಉತ್ಸಾಹ ಎಷ್ಟು ಆಳವಾಗಿತ್ತೆಂದರೆ ಅವರ ಮಗ ಮೋಹನ್‌ಜೀ ಅವರನ್ನು ಭಾರತದ ಪುನರುತ್ಥಾನಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿತು. ಇದು ಸ್ಪರ್ಶಮಣಿ ಮಧುಕರ್ ರಾವ್ ಅವರು ಮೋಹನ್ ರಾವ್ ಅವರಲ್ಲಿ ಮತ್ತೊಂದು ಸ್ಪರ್ಶಮಣಿ ಯನ್ನು ಸೃಷ್ಟಿಸಿದಂತಿದೆ.
ಮೋಹನ್‌ಜೀ 1970ರ ದಶಕದ ಮಧ್ಯಭಾಗದಲ್ಲಿ ಪ್ರಚಾರಕರಾದರು. ‘ಪ್ರಚಾರಕ’ ಎಂಬ ಪದವನ್ನು ಕೇಳಿದ ತಕ್ಷಣ, ಅದು ಕೇವಲ ಪ್ರಚಾರ ಮಾಡುವ ಅಥವಾ ವಿಚಾರಗಳನ್ನು ಪ್ರಚುರಪಡಿಸುವ ವ್ಯಕ್ತಿ ಎಂದು ತಪ್ಪು ತಿಳಿಯಬಹುದು. ಆದರೆ, ಆರ್‌ಎಸ್‌ಎಸ್ ಕಾರ್ಯವೈಖರಿಯ ಬಗ್ಗೆ ತಿಳಿದಿರುವವರಿಗೆ ಪ್ರಚಾರಕ ಪರಂಪರೆಯು ಸಂಘಟನೆ ಕೆಲಸದ ಮೂಲವಾಗಿದೆ ಎಂದು ತಿಳಿದಿದೆ.

ಕಳೆದ ನೂರು ವರ್ಷಗಳಲ್ಲಿ, ದೇಶಭಕ್ತಿಯ ಉತ್ಸಾಹದಿಂದ ಪ್ರೇರಿತರಾಗಿ, ಸಾವಿರಾರು ಯುವಜನರು ತಮ್ಮ ಮನೆ ಮತ್ತು ಕುಟುಂಬಗಳನ್ನು ತೊರೆದು ಭಾರತ ಮೊದಲು ಎಂಬ ಧ್ಯೇಯವನ್ನು ನನಸಾಗಿ ಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಆರ್‌ಎಸ್‌ಎಸ್‌ನಲ್ಲಿನ ಅವರ ಆರಂಭಿಕ ವರ್ಷ ಗಳು ಭಾರತೀಯ ಇತಿಹಾಸದಲ್ಲಿನ ಅತ್ಯಂತ ಕರಾಳ ಅವಧಿಯಾಗಿದ್ದವು.
ಆಗಿನ ಕಾಂಗ್ರೆಸ್ ಸರ್ಕಾರವು ಕಠಿಣ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಸಮಯ ಅದು. ಪ್ರಜಾ ಪ್ರಭುತ್ವದ ತತ್ತ್ವಗಳನ್ನು ಗೌರವಿಸುವ ಮತ್ತು ಭಾರತವು ಅಭಿವೃದ್ಧಿ ಹೊಂದಬೇಕೆಂದು ಬಯಸುವ ಯಾರಾದರೂ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಗೆ ಸೇರುವುದು ಸಹಜ.
ಮೋಹನ್‌ಜೀ ಮತ್ತು ಅಸಂಖ್ಯಾತ ಆರ್‌ಎಸ್‌ಎಸ್ ಸ್ವಯಂಸೇವಕರು ಅದನ್ನೇ ಮಾಡಿದರು. ಅವರು ಮಹಾರಾಷ್ಟ್ರದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ, ವಿಶೇಷವಾಗಿ ವಿದರ್ಭದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದರು. ಇದು ಬಡವರು ಮತ್ತು ದೀನದಲಿತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರ ತಿಳಿವಳಿಕೆಯನ್ನು ರೂಪಿಸಿತು.
ಹಲವು ವರ್ಷಗಳಲ್ಲಿ, ಭಾಗವತ್‌ಜೀ ಆರ್‌ಎಸ್‌ಎಸ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಅವರು ಪ್ರತಿಯೊಂದು ಜವಾಬ್ದಾರಿಯನ್ನು ಬಹಳ ದಕ್ಷತೆಯಿಂದ ನಿರ್ವಹಿಸಿದರು. 1990ರ ದಶಕ ದಲ್ಲಿ ಅಖಿಲ ಭಾರತೀಯ ಶಾರೀರಿಕ್ ಪ್ರಮುಖ್ ಆಗಿ ಮೋಹನ್‌ಜೀ ಅವರ ಅಧಿಕಾರಾವಧಿ ಯನ್ನು ಇನ್ನೂ ಅನೇಕ ಸ್ವಯಂಸೇವಕರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ, ಅವರು ಬಿಹಾರದ ಹಳ್ಳಿಗಳಲ್ಲಿ ಕೆಲಸ ಮಾಡುವುದರಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಈ ಅನುಭವಗಳು ಅವರ ತಳಮಟ್ಟದ ಸಮಸ್ಯೆಗಳೊಂದಿಗಿನ ಸಂಪರ್ಕವನ್ನು ಮತ್ತಷ್ಟು ಗಾಢಗೊಳಿಸಿ ದವು.
2000ರಲ್ಲಿ ಸರಕಾರ್ಯವಾಹ ಆದ ಅವರು ಇಲ್ಲಿಯೂ ತಮ್ಮ ವಿಶಿಷ್ಟ ಕಾರ್ಯಶೈಲಿಯನ್ನು ತೋರಿಸಿದರು. ಅತ್ಯಂತ ಸಂಕೀರ್ಣ ಸಂದರ್ಭಗಳನ್ನು ಸುಲಭವಾಗಿ ಮತ್ತು ನಿಖರತೆಯಿಂದ ನಿಭಾಯಿಸಿದರು. 2009ರಲ್ಲಿ, ಅವರು ಸರಸಂಘಚಾಲಕ್ ಆದರು ಮತ್ತು ಇನ್ನೂ ಹೆಚ್ಚಿನ ಚೈತನ್ಯ ದಿಂದ ಕೆಲಸ ಮಾಡುತ್ತಿದ್ದಾರೆ.
ಸರಸಂಘಚಾಲಕ್ ಆಗಿರುವುದು ಕೇವಲ ಒಂದು ಸಂಘಟನೆಯ ಜವಾಬ್ದಾರಿಗಿಂತ ಹೆಚ್ಚಿನದು. ಅಸಾಧಾರಣ ವ್ಯಕ್ತಿಗಳು ವೈಯಕ್ತಿಕ ತ್ಯಾಗ, ಸ್ಪಷ್ಟ ಉದ್ದೇಶ ಮತ್ತು ಭಾರತಮಾತೆಗೆ ಅಚಲವಾದ ಬದ್ಧತೆಯ ಮೂಲಕ ಈ ಪಾತ್ರವನ್ನು ವ್ಯಾಖ್ಯಾನಿಸಿದ್ದಾರೆ.
ಮೋಹನ್‌ಜೀ ಈ ಜವಾಬ್ದಾರಿಯ ಅಗಾಧತೆಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ, ತಮ್ಮ ಶಕ್ತಿ, ಬೌದ್ಧಿಕ ಆಳ ಮತ್ತು ಸಹಾನುಭೂತಿಯ ನಾಯಕತ್ವದ ಸಾಮರ್ಥ್ಯಗಳನ್ನು ಪ್ರದರ್ಶಿಸಿದ್ದಾರೆ, ಇವೆಲ್ಲವೂ ರಾಷ್ಟ್ರ ಮೊದಲು ಎಂಬ ತತ್ತ್ವದಿಂದ ಪ್ರೇರಿತವಾಗಿವೆ. ಮೋಹನ್‌ಜೀ ತಮ್ಮ ಹೃದಯಕ್ಕೆ ಹತ್ತಿರವಾದ ಮತ್ತು ತಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿರುವ ಎರಡು ವಿಶಿಷ್ಟತೆಗಳ ಬಗ್ಗೆ ನಾನು ನೆನಪಿಸಿಕೊಳ್ಳಬಹುದಾದರೆ, ಅವು ಸ್ಥಿರತೆ ಮತ್ತು ಹೊಂದಾಣಿಕೆ. ಅವರು ಅತ್ಯಂತ ಸಂಕೀರ್ಣ ಸಂದರ್ಭಗಳಲ್ಲಿಯೂ ಸಹ ಸಂಘಟನೆಯನ್ನು ಮುನ್ನಡೆಸಿದ್ದಾರೆ.
ನಾವೆಲ್ಲರೂ ಹೆಮ್ಮೆಪಡುವ ಮೂಲ ಸಿದ್ಧಾಂತದ ಮೇಲೆ ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ ಮತ್ತು ಅದೇ ಸಮಯದಲ್ಲಿ ಸಮಾಜದ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಿದ್ದಾರೆ. ಅವರು ಯುವಕರೊಂದಿಗೆ ಸಹಜ ಸಂಪರ್ಕವನ್ನು ಹೊಂದಿದ್ದಾರೆ. ಆದ್ದರಿಂದ ಅವರು ಯಾವಾಗಲೂ ಹೆಚ್ಚುಹೆಚ್ಚು ಯುವಜನರನ್ನು ಸಂಘ ಪರಿವಾರಕ್ಕೆ ತರುವತ್ತ ಗಮನಹರಿಸಿದ್ದಾರೆ.
ಅವರು ಸಾರ್ವಜನಿಕ ಸಂವಾದಗಳಲ್ಲಿ ಭಾಗವಹಿಸುವುದು ಮತ್ತು ಜನರೊಂದಿಗೆ ಸಂವಹನ ನಡೆಸುವುದನ್ನು ಹೆಚ್ಚಾಗಿ ಕಾಣಬಹುದು. ಇದು ಇಂದಿನ ಕ್ರಿಯಾತ್ಮಕ ಮತ್ತು ಡಿಜಿಟಲ್ ಜಗತ್ತಿನಲ್ಲಿ ಬಹಳ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ. ವಿಶಾಲವಾಗಿ ಹೇಳುವುದಾದರೆ, ಭಾಗವತ್‌ಜೀ ಅವರ ಅಧಿಕಾರಾವಧಿಯನ್ನು ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣದಲ್ಲಿ ಅತ್ಯಂತ ಪರಿವರ್ತನಾಶೀಲ ಅವಧಿ ಎಂದು ಪರಿಗಣಿಸಲಾಗುತ್ತದೆ.
ಸಮವಸ್ತ್ರದಲ್ಲಿನ ಬದಲಾವಣೆಗಳಿಂದ ಹಿಡಿದು ಶಿಕ್ಷಾ ವರ್ಗ (ತರಬೇತಿ ಶಿಬಿರ) ಗಳಲ್ಲಿನ ಬದಲಾವಣೆಗಳವರೆಗೆ, ಅವರ ನಾಯಕತ್ವದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾದವು. ಮನುಕುಲವು ಶತಮಾನದ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದ್ದ ಕೋವಿಡ್ ಅವಽಯಲ್ಲಿ ಮೋಹನ್‌ಜೀ ಅವರ ಪ್ರಯತ್ನಗಳನ್ನು ನಾನು ವಿಶೇಷವಾಗಿ ನೆನಪಿಸಿಕೊಳ್ಳುತ್ತೇನೆ. ಆ ಸಮಯದಲ್ಲಿ, ಆರ್‌ಎಸ್‌ಎಸ್‌ನ ಸಾಂಪ್ರದಾಯಿಕ ಚಟುವಟಿಕೆಗಳನ್ನು ಮುಂದುವರಿಸುವುದು ಸವಾಲಿನ ಸಂಗತಿಯಾಗಿತ್ತು.
ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವಂತೆ ಮೋಹನ್‌ಜೀ ಸೂಚಿಸಿದರು. ಜಾಗತಿಕ ಸವಾಲುಗಳ ಸಂದರ್ಭದಲ್ಲಿ, ಸಾಂಸ್ಥಿಕ ರಚನೆಗಳನ್ನು ಅಭಿವೃದ್ಧಿಪಡಿಸುವಾಗ ಅವರು ಜಾಗತಿಕ ದೃಷ್ಟಿಕೋನ ದೊಂದಿಗೆ ಸಂಪರ್ಕ ಹೊಂದಿದ್ದರು. ಆ ಸಮಯದಲ್ಲಿ, ಎಲ್ಲಾ ಸ್ವಯಂಸೇವಕರು ತಮ್ಮ ಮತ್ತು ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಂಡು, ಅಗತ್ಯವಿರುವವರನ್ನು ತಲುಪಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಅನೇಕ ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸ ಲಾಗಿತ್ತು.
ನಾವು ನಮ್ಮ ಅನೇಕ ಶ್ರಮಶೀಲ ಸ್ವಯಂಸೇವಕರನ್ನು ಕಳೆದುಕೊಂಡೆವು, ಆದರೆ ಮೋಹನ್‌ಜೀ ಅವರ ಸೂರ್ತಿ, ಅವರ ದೃಢಸಂಕಲ್ಪ ಎಂದಿಗೂ ಅಲುಗಾಡಲಿಲ್ಲ. ಈ ವರ್ಷದ ಆರಂಭದಲ್ಲಿ, ನಾಗಪುರದಲ್ಲಿ ಮಾಧವ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭದಲ್ಲಿ, ಆರ್‌ಎಸ್‌ಎಸ್ ಅಕ್ಷಯವತ್ ಇದ್ದಂತೆ, ನಮ್ಮ ರಾಷ್ಟ್ರದ ರಾಷ್ಟ್ರೀಯ ಸಂಸ್ಕೃತಿ ಮತ್ತು ಸಾಮೂಹಿಕ ಪ್ರಜ್ಞೆಯನ್ನು ಚೈತನ್ಯಗೊಳಿಸುವ ಶಾಶ್ವತ ಆಲದ ಮರ ಎಂದು ನಾನು ಹೇಳಿದೆ. ಈ ಅಕ್ಷಯವತ್ ಬೇರುಗಳು ಆಳವಾದವು ಮತ್ತು ಬಲವಾದವು. ಏಕೆಂದರೆ ಅವು ಮೌಲ್ಯಗಳಲ್ಲಿ ಬೇರೂರಿವೆ. ಮೋಹನ್ ಭಾಗವತ್‌ಜೀ ಈ ಮೌಲ್ಯಗಳನ್ನು ಪೋಷಿಸಲು ಮತ್ತು ಮುನ್ನಡೆಸಲು ತಮ್ಮನ್ನು ಸಮರ್ಪಿಸಿ ಕೊಂಡಿರುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ.
ಮೋಹನ್‌ಜೀ ಅವರ ವ್ಯಕ್ತಿತ್ವದ ಮತ್ತೊಂದು ಪ್ರಶಂಸನೀಯ ಗುಣವೆಂದರೆ ಅವರ ಮೃದು-ಮಾತಿನ ಸ್ವಭಾವ. ಅವರು ಅಸಾಧಾರಣವಾದ ಆಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಗುಣವು ಆಳವಾದ ದೃಷ್ಟಿಕೋನವನ್ನು ಖಾತ್ರಿಗೊಳಿಸಿದೆ ಮತ್ತು ಅವರ ವ್ಯಕ್ತಿತ್ವ ಮತ್ತು ನಾಯಕತ್ವಕ್ಕೆ ಸೂಕ್ಷ್ಮತೆ ಮತ್ತು ಘನತೆಯನ್ನು ತಂದಿದೆ. ಇಲ್ಲಿ, ವಿವಿಧ ಜನಾಂದೋಲನಗಳಲ್ಲಿ ಅವರ ತೀವ್ರ ಆಸಕ್ತಿಯ ಬಗ್ಗೆಯೂ ನಾನು ಬರೆಯಲು ಬಯಸುತ್ತೇನೆ.
ಸ್ವಚ್ಛ ಭಾರತ ಮಿಷನ್‌ನಿಂದ ಬೇಟಿ ಬಚಾವೋ-ಬೇಟಿ ಪಡಾವೋವರೆಗೆ, ಅವರು ಇಡೀ ಆರ್‌ಎಸ್ ಎಸ್ ಪರಿವಾರವನ್ನು ಈ ಆಂದೋಲನಗಳಿಗೆ ಶಕ್ತಿ ನೀಡುವಂತೆ ಕರೆ ನೀಡಿದ್ದಾರೆ. ಸಾಮಾಜಿಕ ಕಲ್ಯಾಣವನ್ನು ಉತ್ತೇಜೀಸಲು, ಮೋಹನ್ ಜೀ ಅವರು ಸಾಮಾಜಿಕ ಸಾಮರಸ್ಯ, ಕುಟುಂಬ ಮೌಲ್ಯ ಗಳು, ಪರಿಸರ ಜಾಗೃತಿ, ರಾಷ್ಟ್ರೀಯ ಅಸ್ಮಿತೆ ಮತ್ತು ನಾಗರಿಕ ಕರ್ತವ್ಯವನ್ನು ಒಳಗೊಂಡಿ ರುವ ’ಪಂಚ ಪರಿವರ್ತನ’ವನ್ನು ನೀಡಿದ್ದಾರೆ.
ಇವು ಎಲ್ಲಾ ವರ್ಗದ ಭಾರತೀಯರಿಗೆ ಸೂರ್ತಿ ನೀಡಬಲ್ಲವು. ಪ್ರತಿಯೊಬ್ಬ ಸ್ವಯಂಸೇವಕನು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರದ ಕನಸು ಕಾಣುತ್ತಾನೆ. ಈ ಕನಸನ್ನು ನನಸಾಗಿಸಲು, ಸ್ಪಷ್ಟ ದೃಷ್ಟಿಕೋನ ಮತ್ತು ನಿರ್ಣಾಯಕ ಕ್ರಮ ಎರಡೂ ಅಗತ್ಯವಿದೆ. ಮೋಹನ್‌ಜೀ ಅವರಲ್ಲಿ ಈ ಎರಡೂ ಗುಣಗಳು ಅಪಾರವಾಗಿವೆ.
ಭಾಗವತ್‌ಜೀ ಯಾವಾಗಲೂ ’ಏಕ್ ಭಾರತ್ ಶ್ರೇಷ್ಠ ಭಾರತ್ ’ನ ಪ್ರಬಲ ಪ್ರತಿಪಾದಕರಾಗಿದ್ದಾರೆ, ಅವರು ಭಾರತದ ವೈವಿಧ್ಯತೆ ಮತ್ತು ನಮ್ಮ ನೆಲದ ಭಾಗವಾಗಿರುವ ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಆಚರಣೆಯಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ, ಮೋಹನ್‌ಜೀ ಯಾವಾಗಲೂ ಸಂಗೀತ ಮತ್ತು ಹಾಡುಗಾರಿಕೆಯಂತಹ ಹವ್ಯಾಸಗಳಿಗೆ ಸಮಯವನ್ನು ಮೀಸಲಿಟ್ಟಿದ್ದಾರೆ. ಅವರು ವಿವಿಧ ಭಾರತೀಯ ಸಂಗೀತ ವಾದ್ಯ ಗಳಲ್ಲಿ ಪರಿಣಿತರು ಎಂದು ಹಲವರಿಗೆ ತಿಳಿದಿಲ್ಲ. ಓದುವ ಅವರ ಉತ್ಸಾಹವನ್ನು ಅವರ ಹಲವಾರು ಭಾಷಣಗಳು ಮತ್ತು ಸಂವಾದಗಳಲ್ಲಿ ಕಾಣಬಹುದು.
ಈ ವರ್ಷ, ಇನ್ನು ಕೆಲವೇ ದಿನಗಳಲ್ಲಿ, ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸ ಲಿದೆ. ಈ ವರ್ಷ ವಿಜಯದಶಮಿ, ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಮತ್ತು ಆರ್‌ಎಸ್‌ಎಸ್ ಶತಾಬ್ದಿ ಆಚರಣೆಗಳು ಒಂದೇ ದಿನ ಬರುತ್ತಿರುವುದು ಸಂತೋಷದ ವಿಷಯವಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರಿಗೆ ಇದೊಂದು ಐತಿಹಾಸಿಕ ಮೈಲಿಗಗಲಿದೆ ಮತ್ತು ಈ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಮೋಹನ್‌ಜೀ ಅವರಲ್ಲಿ ಅತ್ಯಂತ ತಿಳುವಳಿಕೆ ಮತ್ತು ಕಠಿಣ ಪರಿಶ್ರಮಿ ಸರಸಂಘಚಾಲಕ್ ಇದ್ದಾರೆ.
ನಾವು ಎಲ್ಲೆಗಳನ್ನು ಮೀರಿ ಎಲ್ಲರನ್ನೂ ನಮ್ಮವರೆಂದು ಪರಿಗಣಿಸಿದಾಗ, ಅದು ಸಮಾಜದಲ್ಲಿ ನಂಬಿಕೆ, ಸಹೋದರತ್ವ ಮತ್ತು ಸಮಾನತೆಯನ್ನು ಬಲಪಡಿಸುತ್ತದೆ. ಇಂತಹ ವಸುಧೈವ ಕುಟುಂಬಕಂನ ಜ್ವಲಂತ ಉದಾಹರಣೆ ಮೋಹನ್‌ಜೀ ಎಂದು ಹೇಳುವ ಮೂಲಕ ನಾನು ಈ ಬರಹವನ್ನು ಮುಕ್ತಾಯಗೊಳಿಸುತ್ತೇನೆ. ಭಾರತಮಾತೆಯ ಸೇವೆಯಲ್ಲಿ ಮೋಹನ್‌ಜೀ ಅವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಾನು ಮತ್ತೊಮ್ಮೆ ಹಾರೈಸುತ್ತೇನೆ.