ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಪರಸ್ಪರರಿಗೆ ಕೇಡು ಬಗೆದು, ನಗೆಪಾಟಲಾದ ನಾರದ, ತುಂಬೂರರು

ನಾರದ ಮತ್ತು ತುಂಬೂರರು ತಮ್ಮ ಮುಖದ ನಿಜಸ್ವರೂಪವನ್ನು ಕನ್ನಡಿಯಲ್ಲಿ ನೋಡಿ ಬೆಚ್ಚಿಬಿದ್ದರು. ಅವರು ವಿಷ್ಣುವಿನ ಲೀಲೆಯನ್ನು ಅರಿತುಕೊಂಡರು. “ನಾವು ಸ್ವಾರ್ಥದಿಂದ ದೇವರನ್ನೇ ಮೋಸಗೊಳಿ ಸಲು ಯತ್ನಿಸಿದ್ದೇವೆ. ಆದರೆ ಈ ಲೀಲೆಯಿಂದ ನಾವು ಅಹಂಕಾರದಿಂದ ಮುಕ್ತಿ ಹೊಂದಿದ್ದೇವೆ, ಅಂತರಾತ್ಮದ ಭಕ್ತಿಯಲ್ಲಿ ಸೌಂದರ್ಯ ಅಡಗಿರು ತ್ತದೆ " ಎಂದು ಮನಸಲ್ಲಿ ಅರಿತು ವಿಷ್ಣುವಿಗೆ ಶರಣಾ ದರು.

ಪರಸ್ಪರರಿಗೆ ಕೇಡು ಬಗೆದು, ನಗೆಪಾಟಲಾದ ನಾರದ, ತುಂಬೂರರು

-

ಒಂದೊಳ್ಳೆ ಮಾತು

ಒಮ್ಮೆ ಸ್ವರ್ಗದಲ್ಲಿ ದೇವತೆಗಳು, ಋಷಿಗಳು,ಗಂಧರ್ವರು ಎಲ್ಲರೂ ಅಪೂರ್ವ ಸೌಂದರ್ಯವತಿ ದಿವ್ಯಕನ್ಯೆಯಾದ ಶ್ರೀಮತಿಯ ಸ್ವಯಂವರಕ್ಕೆ ಹೊರಟಿದ್ದರು. ಆಕೆ ಅತ್ಯಂತ ಸುಂದರಳಾಗಿದ್ದು ಲಾವಣ್ಯ ವಿನಯ, ಗುಣ, ರೂಪ ಎಲ್ಲದರಲ್ಲಿಯೂ ಶ್ರೇಷ್ಠಳಾಗಿದ್ದಳು. ಅವಳಿಗೆ ವರನಾಗಿ ಯೋಗ್ಯ ನಾದವರು ಯಾರು ಎಂಬುದನ್ನು ನಿರ್ಧರಿಸಲು ಸ್ವಯಂವರವನ್ನು ಏರ್ಪಡಿಸಲಾಗಿತ್ತು.

ನಾರದ ಹಾಗೂ ತುಂಬೂರರು ಇಬ್ಬರೂ ಶ್ರೀಮತಿಯ ಸೌಂದರ್ಯವನ್ನು ಕಂಡು ಆಕೆಯನ್ನು ವರಿಸಲು ಉತ್ಸುಕರಾದರು. ಆದರೆ ತಮ್ಮ ಸ್ವರೂಪವು ಅಷ್ಟೊಂದು ಆಕರ್ಷಕವಿಲ್ಲವೆಂದು ಅವರಿಬ್ಬರೂ ಬೇರೆಬೇರೆಯಾಗಿ ವಿಷ್ಣುವಿನ ಬಳಿಗೆ ಹೋಗಿ ತಮ್ಮ ಪ್ರಾರ್ಥನೆಯನ್ನು ಮುಂದಿಟ್ಟರು.

ಮೊದಲಿಗೆ ಹೋದ ನಾರದರು, “ಮಹಾಪ್ರಭು, ನಾನು ಮತ್ತು ತುಂಬೂರರಿಬ್ಬರೂ ಶ್ರೀಮತಿಯ ವರನಾಗಲು ಬಯಸುತ್ತೇವೆ. ಆದರೆ ನಮಗೆ ದೈವೀ ಸೌಂದರ್ಯವಿಲ್ಲ. ನಿಮ್ಮ ಕೃಪೆಯಿಂದ ನನ್ನ ಮುಖವನ್ನು ಸುಂದರಗೊಳಿಸಿ, ತುಂಬೂರನ ಮುಖ ಕೋತಿಯಂತೆ ಕಾಣಲು ಮಾಡಿ ಶ್ರೀಮತಿ ನನ್ನನ್ನು ವರಿಸುವಂತೆ ಮಾಡಬೇಕು" ಎಂದು ಪ್ರಾರ್ಥಿಸಿದನು.

ಇದನ್ನೂ ಓದಿ: Roopa Gururaj Column: ಕೃಷ್ಣನನ್ನೂ ಕಾಡಿದ ಚೌತಿ ಚಂದ್ರ ದರ್ಶನದ ಶಾಪ

ಮಹಾವಿಷ್ಣುವು ಅವನ ಮಾತುಗಳನ್ನು ಕೇಳಿ ನಸುನಗುತ್ತಾ, “ನೀನು ಹೇಳಿದಂತೆಯೇ ಆಗಲಿ ಅವಳಿಗೆ ತುಂಬೂರರ ಮುಖವು ಕೋತಿಯಂತೆ ಕಾಣಲಿ" ಎಂದನು. ಇದಾದ ಸ್ವಲ್ಪ ಸಮಯದ ನಂತರ ತಂಬೂರ ವಿಷ್ಣುವಿನ ಬಳಿಗೆ ಹೋಗಿ “ಮಹಾಪ್ರಭು, ನಾನು ಮತ್ತು ನಾರದರಿಬ್ಬರೂ ಶ್ರೀಮತಿಯ ವರನಾಗಲು ಬಯಸುತ್ತೇವೆ. ಆದರೆ ನಮಗೆ ದೈವೀ ಸೌಂದರ್ಯವಿಲ್ಲ.

ನಿಮ್ಮ ಕೃಪೆಯಿಂದ ನನ್ನ ಮುಖವನ್ನು ಸುಂದರಗೊಳಿಸಿ, ನಾರದನ ಮುಖ ಕರಡಿಯಂತೆ ಮಾಡಿ ಶ್ರೀಮತಿ ನನ್ನನ್ನು ವರಿಸುವಂತೆ ಮಾಡಬೇಕು" ಎಂದು ಪ್ರಾರ್ಥಿಸಿದನು.

ಮಹಾವಿಷ್ಣುವು ತುಂಬೂರರ ಮಾತುಗಳನ್ನು ಕೇಳಿ ನಸುನಗುತ್ತಾ, “ನೀನು ಹೇಳಿದಂತೆಯೇ ಆಗಲಿ ಅವಳಿಗೆ ನಾರದರ ಮುಖವು ಕರಡಿಯಂತೆ ಕಾಣಲಿ" ಎಂದನು. ವಿಷ್ಣುವಿನ ಆಶೀರ್ವಾದಿಸಿದ ಮೇಲೆ ಕೇಳಬೇಕೇ? ನಾರದರಿಗೆ ತುಂಬೂರರ ಮುಖವು ಕೋತಿಯ ಮುಖದಂತೆ ಹಾಗೂ ತುಂಬೂರರಿಗೆ ನಾರದರ ರೂಪವು ಕರಡಿಯ ಮುಖದಂತೆ ಕಾಣಿಸತೊಡಗಿತು.

ಇಬ್ಬರೂ ಅದನ್ನು ಅರಿಯದೆ, ತಮ್ಮನ್ನು ಅತ್ಯಂತ ಸುಂದರರೆಂದು ಭಾವಿಸಿದರು. ಅವರು ಹಿಗ್ಗಿ ತಾವು ಶ್ರೀಮತಿಯ ಸ್ವಯಂವರದಲ್ಲಿ ಜಯ ಸಾಧಿಸುವ ವಿಶ್ವಾಸದಿಂದ ಅಲ್ಲಿಗೆ ಹೋದರು. ಸ್ವಯಂ ವರ ಸಭೆಯಲ್ಲಿ ಅನೇಕ ದೇವತೆಗಳು, ಗಂಧರ್ವರು, ಯಕ್ಷರು, ರಾಕ್ಷಸರ ರಾಜರು, ಮಹರ್ಷಿ ಗಳು ಎಲ್ಲರೂ ಹಾಜರಿದ್ದರು.

ಶ್ರೀಮತಿ ತನ್ನ ಹಾರವನ್ನು ಕೈಯಲ್ಲಿ ಹಿಡಿದು, ತನ್ನ ವರನನ್ನು ಆಯ್ಕೆ ಮಾಡಲು ತಯಾರಾಗಿದ್ದಳು. ಎಲ್ಲರಿಗೂ ಅವಳು ಗೌರವದಿಂದ ನೋಟ ಹರಿಸಿದಳು. ನಾರದ ಮತ್ತು ತುಂಬೂರರೂ ತಾವು ಅತ್ಯಂತ ಸುಂದರರು ಎಂದು ಭಾವಿಸಿ ಗರ್ವದಿಂದ ಕುಳಿತಿದ್ದರು. ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ ನಗುತ್ತಿದ್ದರು. ಹಾರ ಹಿಡಿದು ಬಂದ ಶ್ರೀಮತಿ, ಎಲ್ಲರನ್ನೂ ವೀಕ್ಷಿಸಿದಳು.

ನಾರದನ ಕರಡಿ ಮುಖವನ್ನು ಹಾಗೂ ತುಂಬೂರನ ಕೋತಿ ಮುಖವನ್ನು ನೋಡಿ ನಗತೊಡಗಿ ದಳು. ಅವರಿಬ್ಬರ ಮಧ್ಯದಲ್ಲಿ ಸುರಸುಂದರಾಂಗನಾದ ಮಹಾವಿಷ್ಣು ಮದುಮಗದ ನಂತೆ ಮಿಂಚುತ್ತಿದ್ದನು. ಅವನು ಸದಾ ಯುಗಾಂತರಗಳಲ್ಲಿಯೂ ಸುಂದರ, ಶಾಂತ, ಕರುಣಾಮಯ. ಅವಳ ಹೃದಯವು ಅವನಲ್ಲೇ ಹುದುಗಿತು. ಅವಳು ತನ್ನ ವರಮಾಲೆಯನ್ನು ತೆಗೆದುಕೊಂಡು, ಶ್ರೀಮಹಾ ವಿಷ್ಣುವಿನ ಕಂಠಕ್ಕೆ ಹಾಕಿದಳು. ಅಲ್ಲಿ ಹಾಜರಿದ್ದ ದೇವತೆಗಳು, ಋಷಿಗಳು, ಗಂಧರ್ವರು ಎಲ್ಲರೂ “ಜಯ! ಜಯ!" ಎಂದು ಘೋಷಿಸಿದರು. ಅವರು ನವ ದಂಪತಿಗಳಿಗೆ ಪ್ರೀತಿ ಮತ್ತು ಭಕ್ತಿಯಿಂದ ನಮಿಸಿದರು. ನಾರದ ಮತ್ತು ತುಂಬೂರರು ತಮ್ಮ ಮುಖದ ನಿಜಸ್ವರೂಪವನ್ನು ಕನ್ನಡಿಯಲ್ಲಿ ನೋಡಿ ಬೆಚ್ಚಿಬಿದ್ದರು. ಅವರು ವಿಷ್ಣುವಿನ ಲೀಲೆಯನ್ನು ಅರಿತುಕೊಂಡರು. “ನಾವು ಸ್ವಾರ್ಥದಿಂದ ದೇವರನ್ನೇ ಮೋಸಗೊಳಿಸಲು ಯತ್ನಿಸಿದ್ದೇವೆ. ಆದರೆ ಈ ಲೀಲೆಯಿಂದ ನಾವು ಅಹಂಕಾರದಿಂದ ಮುಕ್ತಿ ಹೊಂದಿದ್ದೇವೆ, ಅಂತರಾತ್ಮದ ಭಕ್ತಿಯಲ್ಲಿ ಸೌಂದರ್ಯ ಅಡಗಿರು ತ್ತದೆ " ಎಂದು ಮನಸಲ್ಲಿ ಅರಿತು ವಿಷ್ಣುವಿಗೆ ಶರಣಾದರು. ಜೀವನದಲ್ಲಿ ಇತರರಿಗೆ ಕೇಡು ಬಗೆದು ನಾವು ಎಂದಿಗೂ ಸಂತೋಷದಿಂದ ಬದುಕಲು ಸಾಧ್ಯವಿಲ್ಲ. ಅದು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮನ್ನು ಸುಟ್ಟೇ ಸುಡುತ್ತದೆ.