ವೀಕೆಂಡ್ ವಿತ್ ಮೋಹನ್
camohanbn@gmail.com
ಸಿಂಧೂ ನದಿನೀರಿನ ಹಂಚಿಕೆಯ ಒಪ್ಪಂದವು ಪಾಕಿಸ್ತಾನದ ಪರವಾಗಿದ್ದರೂ ಅಸಮಾಧಾನ ವ್ಯಕ್ತಪಡಿಸದೆ ನೆಹರು ನೇತೃತ್ವದಲ್ಲಿ 1960ರಲ್ಲಿ ಇದಕ್ಕೆ ಸಹಿ ಹಾಕಲಾಗಿತ್ತು. ಪಾಕಿಸ್ತಾನದ ರೈತರ ಜಮೀನುಗಳನ್ನು ಹಸಿರಾಗಿಡುವ ಸಿಂಧೂ ಕಣಿವೆ ನದಿಗಳ ನೀರಿನ ಮೂಲವನ್ನು ಭಾರತವು ಶಾಶ್ವತವಾಗಿ ಸ್ಥಗಿತಗೊಳಿಸುವುದರಿಂದ, ಬಾಂಬ್‌ಗಳಿಂದ ಧ್ವಂಸಗೊಳಿಸಬಹುದಾದುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪಾಕಿಸ್ತಾನದ ಭೂಮಿಯನ್ನು ಧ್ವಂಸಗೊಳಿಸಬಹುದು. ‘ಆಕ್ವಾ ಬಾಂಬ್’ ಎಂದು ಕರೆಯಲ್ಪಡುವ ಸಿಂಧೂ ಕಣಿವೆ ನದಿಗಳ ನೀರಿನ ಸ್ಥಗಿತವು ನಿಜವಾಗಿ ಯೂ ಪಾಕಿಸ್ತಾನದ ವಿರುದ್ಧ ಭಾರತವು ಪ್ರಯೋಗಿಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರ ವಾಗಿದೆ. ಮೇಲ್ಭಾಗದ ನದೀತೀರದ ದೇಶವಾಗಿ ಭಾರತವು ಸಿಂಧೂ ಜಲಾನಯನ ಪ್ರದೇಶಕ್ಕೆ ಹರಿಯುವ ಏಳು ನದಿಗಳ ಹರಿವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
ಕಳೆದ 77 ವರ್ಷಗಳಲ್ಲಿ ಒಮ್ಮೆ ಮಾತ್ರ ನೀರನ್ನು ನಿಲ್ಲಿಸುವ ಪ್ರಯತ್ನವು ಅಧಿಕಾರಿಗಳಿಂದ ಆಗಿತ್ತು; ಆದರೆ ಅಧಿಕಾರಿಗಳ ಮಾತು ಕೇಳದೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ನೆಹರು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರು. 1948ರ ಏಪ್ರಿಲ್ 1ರಂದು, ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಭಾರತದಲ್ಲಿ ಪಂಜಾಬ್‌ನ ಎಂಜಿನಿಯರ್‌ಗಳು ಫಿರೋಜ್‌ಪುರದ ಮುಖ್ಯ ಕಾಮಗಾರಿ ಪ್ರದೇಶದಿಂದ ದೇಪಾಲ್ಪುರ ಕಾಲುವೆ ಮತ್ತು ಲಾಹೋರ್‌ಗೆ ನೀರು ಸರಬರಾಜನ್ನು ಸ್ಥಗಿತಗೊಳಿಸಿದ್ದರು.
ಇದನ್ನೂ ಓದಿ: Mohan Vishwa Column: ಪುರಾತನ ವಕ್ಫ್ ಕಾಯ್ದೆಗೆ ಎಳ್ಳು-ನೀರು
ಪಾಕಿಸ್ತಾನದ, ಸಾಗುವಳಿ ಮಾಡಬಹುದಾದ ಅಚ್ಚುಕಟ್ಟು ಪ್ರದೇಶದ ಶೇ.8ರಷ್ಟು ಭಾಗದಲ್ಲಿ ಖಾರಿಫ್ ಬಿತ್ತನೆ ಋತುವಿನಲ್ಲಿ ನೀರಿಲ್ಲದಂತಾಗಿತ್ತು. ಇದರ ಜತೆಗೆ ಲಾಹೋರ್ ನಗರಸಭೆಯ ಪ್ರದೇಶದಲ್ಲಿ ನೀರಿನ ಮುಖ್ಯಮೂಲಗಳು ಇಲ್ಲದಂತಾಗಿದ್ದವು. ‘ಮಂಡಿ’ ಜಲವಿದ್ಯುತ್ ಯೋಜನೆಯಿಂದ ವಿದ್ಯುತ್ ಸರಬರಾಜನ್ನು ಸಹ ಕಡಿತಗೊಳಿಸಲಾಯಿತು.
ಪಾಕಿಸ್ತಾನದ ಎರಡನೇ ದೊಡ್ಡ ನಗರವೆನಿಸಿದ ಲಾಹೋರ್ ನಲ್ಲಿ ಕುಡಿಯುವ ನೀರಿಗಾಗಿ ಜನರಿಗೆ ಪಡಿತರ ವ್ಯವಸ್ಥೆಯನ್ನು ಪರಿಚಯಿಸಬೇಕಾದಂಥ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿತ್ತು. ಭಾರತೀಯ ಸೈನಿಕರು ಯುದ್ಧದಲ್ಲಿ ಹೋರಾಡುತ್ತಿದ್ದರು. ಮತ್ತೊಂದೆಡೆ ಪಾಕಿಸ್ತಾನದ ನೀರಿನ ಮೂಲವನ್ನು ಸ್ಥಗಿತಗೊಳಿಸುವ ಮೂಲಕ ಪಂಜಾಬಿನ ಎಂಜಿನಿಯರ್‌ಗಳು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ, ಪಾಕಿಸ್ತಾನದ ಒಣಗಿಹೋದ ಗಂಟಲಿನ ಮೇಲೆ ಕಾಲಿಟ್ಟಾಗ, ಜವಾಹರಲಾಲ್ ನೆಹರು ಇಸ್ಲಾಮಾಬಾದ್ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬೇಕಿತ್ತು.
ಆದರೆ ಅವರು ಪಾಕಿಸ್ತಾನದ ಮೇಲಿದ್ದ ಭಾರತದ ಹಿಡಿತವನ್ನು ಸಡಿಲಿಸುವ ಮೂಲಕ ಮೊದಲ ‘ಹಿಮಾಲಯನ್ ಬ್ಲಂಡರ್’ ಮಾಡಿಬಿಟ್ಟರು. ಪಂಜಾಬ್‌ನ ಎಂಜಿನಿಯರ್‌ಗಳು ಪಾಕಿಸ್ತಾನಕ್ಕೆ ನೀರು ನಿಲ್ಲಿಸಲು ಸರಿಯಾದ ಕಾರಣ ಹೊಂದಿದ್ದರು. ಭಾರತದ ರಕ್ಷಣಾ ಪಡೆಗಳ ದಂಗೆಗಳ ಹಿನ್ನೆಲೆಯಲ್ಲಿ ಭಯಭೀತರಾದ ಬ್ರಿಟಿಷ್ ಅಧಿಕಾರಿಗಳು ಭಾರತ ಮತ್ತು ಪಾಕಿಸ್ತಾನದ ಗಡಿಗಳನ್ನು ಅಸ್ತವ್ಯಸ್ತವಾಗಿ ಗುರುತಿಸಿದ್ದರೂ, ಜಲಸಂಪನ್ಮೂಲಗಳ ವಿತರಣೆಯ ಬಗ್ಗೆ ಚರ್ಚಿಸಿರಲಿಲ್ಲ.
ಆದ್ದರಿಂದ, ತಾತ್ಕಾಲಿಕ ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನಗಳು 1947ರ ಡಿಸೆಂಬರ್ 20ರಂದು ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದು 1948ರ ಮಾರ್ಚ್ 31ರವರೆಗೆ ಯಥಾಸ್ಥಿತಿಯನ್ನು ಕಾಯ್ದು ಕೊಂಡಿತ್ತು. ಏಪ್ರಿಲ್ 24ರಂದು, ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಸಿಂಧೂ ಕಣಿವೆಯ ನೀರು ಸರಬರಾಜನ್ನು ತಕ್ಷಣ ಮರು ಸ್ಥಾಪಿಸುವಂತೆ ನೆಹರುರನ್ನು ಕೇಳಿಕೊಂಡರು.
ಏಪ್ರಿಲ್ 30ರಂದು ನೆಹರು ಅವರು ಪೂರ್ವ ಪಂಜಾಬ್, ಲಾಹೋರ್ ಮತ್ತು ದೀಪಲ್ಪುರಕ್ಕೆ ನೀರಿನ ಸರಬರಾಜುಗಳನ್ನು ಮರುಸ್ಥಾಪಿಸಲು ಸೂಚಿಸಿರುವುದಾಗಿ ಉತ್ತರಿಸಿದರು. ನೀರು ಹಂಚಿಕೆಯ ವಿವಾದವನ್ನು ಬಗೆಹರಿಸಲು ಮಾತುಕತೆಗೆ ಕರೆಯುವ ಪಾಕಿಸ್ತಾನದ ಪ್ರಸ್ತಾವಕ್ಕೂ ಒಪ್ಪಿಕೊಂಡರು. ಲಾಹೋರಿನ ಜನರು ನೀರಿಗಾಗಿ ಪರದಾಡುತ್ತಿರುವಾಗ, 1948ರ ಮೇ ತಿಂಗಳಲ್ಲಿ ಪಾಕಿಸ್ತಾನವು ದೆಹಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ನಂತರ ಸಿಂಧೂ ಕಣಿವೆಯ ನೀರಿನ ಸರಬರಾಜನ್ನು ಪ್ರಾರಂಭಿಸ ಲಾಯಿತು.
ನರಿಬುದ್ಧಿಯ ಪಾಕಿಸ್ತಾನ ನಂತರದಲ್ಲಿ ತಾನು ಒತ್ತಡದಿಂದಾಗಿ ದೆಹಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ಹೇಳಿತು ಮತ್ತು ಅದರ ಅವಧಿ ಮುಗಿದಿದೆಯೆಂದು 1950ರ ಆಗಸ್ಟ್ 23ರಂದು ಭಾರತ ಸರಕಾರಕ್ಕೆ ಬರೆದ ಟಿಪ್ಪಣಿಯಲ್ಲಿ ತಿಳಿಸಿತು. ಎರಡೂ ದೇಶಗಳು ನದೀತಿರುವು ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಅಂದಿನ ಪ್ರಧಾನಿ ನೆಹರು ಅವರು ಪಾಕಿಸ್ತಾನದ ಲಿಯಾಕತ್ ಅಲಿ ಖಾನ್‌ರಿಗೆ ಪತ್ರ ಬರೆದು, ಎರಡೂ ದೇಶಗಳು ತಮ್ಮ ನಡುವಿನ ಯಾವುದೇ ವಿವಾದದ ಬಗ್ಗೆ ಯುದ್ಧಕ್ಕೆ ಹೋಗುವುದಿಲ್ಲ ಎಂಬ ಜಂಟಿ ಘೋಷಣೆಯನ್ನು ಪ್ರಸ್ತಾಪಿಸಿದರು.
ಎರಡೂ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಶಾಂತಿಯುತ ಮಾರ್ಗಗಳನ್ನು ಹುಡುಕುತ್ತವೆ ಎಂದು ನೆಹರು ಪ್ರಸ್ತಾಪಿಸಿದರು. ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆಯ ರೂಪ ದಲ್ಲಿ ಮೂರನೇ ವ್ಯಕ್ತಿ ಅಥವಾ ಚರ್ಚಾವಿಷಯ/ ವಿವಾದವನ್ನು ಬಗೆಹರಿಸಲು ವಿಶೇಷವಾಗಿ ಸ್ಥಾಪಿಸಲಾದ ಸಂಸ್ಥೆಗಳು ಅಥವಾ ಎರಡೂ ದೇಶಗಳಿಂದ ಗುರುತಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರವೇಶಿಸಬಹುದೆಂದು ಅವರು ಹೇಳಿಬಿಟ್ಟರು. ಶತ್ರುದೇಶ ಪಾಕಿಸ್ತಾನಕ್ಕೂ ಇದೇ ಬೇಕಿತ್ತು, ಹಾಗಾಗಿ ನೆಹರುರ ಮಾತನ್ನು ಲಿಯಾಕತ್ ಅಲಿ ಖಾನ್ ಖುಷಿಯಿಂದ ಒಪ್ಪಿಕೊಂಡರು.
ಎರಡೂ ಕಡೆಯ ಸಮಾನ ಸಂಖ್ಯೆಯ ತಜ್ಞರನ್ನು ಹೊಂದಿರುವ ನೀರುಹಂಚಿಕೆ ನ್ಯಾಯಮಂಡಳಿ ಯನ್ನು ಸ್ಥಾಪಿಸಲು ಭಾರತವು ಒಲವು ತೋರಿದರೂ, ವಿದೇಶಿ ಮಧ್ಯಸ್ಥಿಕೆ, ಅದರಲ್ಲೂ ಅಂತಾ ರಾಷ್ಟ್ರೀಯ ನ್ಯಾಯಾಲಯದ ಉಪಸ್ಥಿತಿಯ ಕುರಿತಾಗಿ ಪಾಕಿಸ್ತಾನ ಒತ್ತಾಯಿಸುತ್ತಲೇ ಇತ್ತು, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಮ್ಮುಖದಲ್ಲಿ ವಿವಾದವನ್ನು ಕೊಂಡೊಯ್ಯಲು ಅದು ಸಿದ್ಧ ವಾಗಿತ್ತು. ಕೊನೆಗೆ ವಿಶ್ವಬ್ಯಾಂಕ್ ಮಧ್ಯೆ ಪ್ರವೇಶಿಸಿತು, ಪಾಕಿಸ್ತಾನಕ್ಕೆ ಬೇಕಿದ್ದ ಫಲಿತಾಂಶ ಸಿಕ್ಕಿತ್ತು. ಆದರೆ ವಿಶ್ವಬ್ಯಾಂಕ್‌ನ ಉದ್ದೇಶಗಳ ಬಗ್ಗೆ ಹಲವು ಭಾರತೀಯರಿಗೆ ಅನುಮಾನ ಉಂಟಾಗಿತ್ತು.
ಎರಡು ದೇಶಗಳ ನಡುವಿನ ನೀರಿನ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯನ್ನಾಗಿ ಮಾಡಿ, ಇಂದಿಗೂ ಭಾರತೀಯರು ತಮ್ಮ ಈ ಶತ್ರುದೇಶದ ಭಯೋತ್ಪಾದಕತೆಯಿಂದ ಕಿರಿಕಿರಿ ಅನು ಭವಿಸುವಂತೆ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲಬೇಕು. ನೆಹರು ಪಾಕಿಸ್ತಾನದ ಅನುಕೂಲ ಕ್ಕೆ ತಕ್ಕಂತೆ ವರ್ತಿಸಿ, ಸಿಂಧೂ ಕಣಿವೆ ನದಿಗಳ ಹೆಚ್ಚಿನ ನೀರು ಪಾಕಿಸ್ತಾನದ ಪಾಲಾಗುವಂತೆ ಮಾಡಿ ದ್ದರು.
ಭಾರತವು ವಿಶ್ವಬ್ಯಾಂಕ್ ಮಧ್ಯಸ್ಥಿಕೆಗೆ ಒಪ್ಪಿಕೊಂಡಿತು, ಮೇಲ್ಭಾಗದ ನದೀತೀರದ ದೇಶವಾಗಿದ್ದರೂ ತನ್ನ ಎಲ್ಲಾ ಅನುಕೂಲಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು. ಸಿಂಧೂ ಕಣಿವೆ ನದಿನೀರಿನ ವಿವಾದವನ್ನು ಕಾಶ್ಮೀರ ಸಮಸ್ಯೆಯ ಇತ್ಯರ್ಥಕ್ಕೆ ಬಳಸಿಕೊಳ್ಳಲು ನೆಹರು ನಿರಾಕರಿಸಿದರು. ಅವರು ವಿಶ್ವಬ್ಯಾಂಕ್‌ಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದು ಹೀಗೆ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ಕಣಿವೆ ನೀರಿನ ವಿವಾದ ಮತ್ತು ಕಾಶ್ಮೀರ ಸಮಸ್ಯೆಗೆ ಯಾವುದೇ ಸಂಬಂಧವಿಲ್ಲ. ಅದು ಪೂರ್ವ ಮತ್ತು ಪಶ್ಚಿಮ ಪಂಜಾಬ್‌ನ ನೀರಾವರಿ ವ್ಯವಸ್ಥೆಗಳೊಂದಿಗೆ ಮಾತ್ರ ಪ್ರಾರಂಭ ವಾಯಿತು ಮತ್ತು ಅಲ್ಲಿಗೆ ಮಾತ್ರ ಸೀಮಿತವಾಗಿದೆ.
ಸುಮಾರು ಮೂರು ವರ್ಷಗಳ ಮಾತುಕತೆಯ ನಂತರ, 1953ರಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಪ್ರಸ್ತಾವಗಳನ್ನು ಮಂಡಿಸಿದವು. ಪಾಕಿಸ್ತಾನದ ಕಡೆಗಿನ ನೆಹರು ಉದಾರತೆ ಮತ್ತೊಮ್ಮೆ ಎದ್ದು ಕಾಣಿಸಿತು. ಪೂರ್ವದ ಮೂರು ನದಿಗಳ ನೀರಿನಲ್ಲಿ ಪಾಕಿಸ್ತಾನಕ್ಕೆ ಶೇ.76ರಷ್ಟು ಪಾಲನ್ನು ನೀಡಲು ನೆಹರು ಸಿದ್ಧವಿದ್ದರು. ಪಾಕಿಸ್ತಾನದ ಕಡೆಗಿನ ನೆಹರು ಅವರ ಮೃದು ಸ್ವಭಾವವನ್ನು ಗ್ರಹಿಸಿದ ವಿಶ್ವಬ್ಯಾಂಕ್, ಪಾಕಿಸ್ತಾನಕ್ಕೆ ಶೇ.82 ಮತ್ತು ಭಾರತಕ್ಕೆ ಶೇ.18ರಷ್ಟು ನೀರನ್ನು ಮಾತ್ರ ಹಂಚಿಕೆ ಮಾಡಲು ಸಿದ್ಧವಿತ್ತು. ಈ ಯೋಜನೆಗೆ ನೆಹರು ಸ್ವತಃ ಬೆಂಬಲ ನೀಡಿದ್ದರು.
ನಂತರ 1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ಕಣಿವೆಯ ನದೀನೀರಿನ ಹಂಚಿಕೆ ಒಪ್ಪಂದಕ್ಕೆ ನೆಹರು ಮತ್ತು ಅಯೂಬ್ ಖಾನ್ ಸಹಿ ಹಾಕಿದರು. ಈ ಒಪ್ಪಂದ ದ ಪ್ರಕಾರ ಪಾಕಿಸ್ತಾನಕ್ಕೆ ಶೇ.70ರಷ್ಟು ಮತ್ತು ಭಾರತಕ್ಕೆ ಶೇ.30ರಷ್ಟು ನೀರಿನ ಹಂಚಿಕೆ ಯಾಯಿತು.
1965ರ ಯುದ್ಧದ ಸಂದರ್ಭದಲ್ಲಿ ನೆಹರು ಅವರು ಸಿಂಧು ಕಣಿವೆ ಒಪ್ಪಂದವನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬಹುದಿತ್ತು. 1971ರ ಯುದ್ಧದ ವೇಳೆಯಲ್ಲಿ ಕೂಡ ಇಂದಿರಾ ಗಾಂಧಿಯವರು ಒಪ್ಪಂದವನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಬಹುದಿತ್ತು. 2008ರ ನವೆಂಬರ್ 26ರಂದು ಮುಂಬೈ ನಗರದ ರಸ್ತೆಗಳಲ್ಲಿ ಅಮಾಯಕ ಭಾರತೀಯರ ಮೇಲೆ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರ ದಾಳಿ ನಡೆಯಿತು; ಇದರ ವಿರುದ್ಧ ತಕ್ಕ ಪಾಠ ಕಲಿಸಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಂಧೂ ಕಣಿವೆ ಒಪ್ಪಂದವನ್ನು ರದ್ದುಗೊಳಿಸಬಹುದಿತ್ತು.
ಈಗಾಗಲೇ ಜಗತ್ತಿನ ‘ಭಿಕ್ಷುಕ ದೇಶ’ವೆಂದು ಕುಖ್ಯಾತಿ ಪಡೆದಿರುವ ಪಾಕಿಸ್ತಾನವನ್ನು ಇನ್ನಷ್ಟು ನಾಶಗೊಳಿಸಲು ಸಿಂಧೂ ಕಣಿವೆ ನೀರಿನ ಹರಿವನ್ನು ನಿಲ್ಲಿಸಿದರೆ ಸಾಕು. ಪಾಕಿಸ್ತಾನದ ಶೇ.90ರಷ್ಟು ರೈತರು ಸಿಂಧೂ ಕಣಿವೆಯ ನದಿಗಳ ನೀರನ್ನು ಅವಲಂಬಿಸಿದ್ದಾರೆ. ಪಾಕಿಸ್ತಾನದ ಜಿಡಿಪಿಯ ಶೇ.24ರಷ್ಟು ಉತ್ಪನ್ನಗಳಿಗೆ ಸಿಂಧೂ ಕಣಿವೆ ನೀರಿನ ಅವಶ್ಯಕತೆ ಇದೆ. ಪ್ರತಿನಿತ್ಯ 187 ಬಿಲಿಯನ್ ಗ್ಯಾಲನ್ ನೀರು ಪಾಕಿಸ್ತಾನಕ್ಕೆ ಹರಿಯುತ್ತದೆ. ಈ ಕಣಿವೆ ಒಪ್ಪಂದದಿಂದಾಗಿ ವರ್ಷಕ್ಕೆ 99 ಟಿಎಂಸಿ ನೀರು ಪಾಕಿಸ್ತಾನಕ್ಕೆ ಹರಿಯುತ್ತದೆ.
ಪಾಕಿಸ್ತಾನದ ಆರ್ಥಿಕತೆಯನ್ನು ಮಕಾಡೆ ಮಲಗಿಸಿ, ಉಗ್ರರಿಗೆ ನೀಡುತ್ತಿರುವ ಹಣ ಬೆಂಬಲವನ್ನು ಸ್ಥಗಿತಗೊಳಿಸಲು ನೀರಿನ ಹರಿವನ್ನು ನಿಲ್ಲಿಸಬೇಕಿರುವುದು ಅನಿವಾರ್ಯ. ಪಹಲ್ಗಾಮ್ ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕತೆಗೆ ತಕ್ಕ ಉತ್ತರ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಿಂಧೂ ಕಣಿವೆ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ, ತನ್ಮೂಲಕ ಮೊದಲ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಒಪ್ಪಂದ ರದ್ದತಿ ಯಿಂದಾಗಿ ಪಾಕಿಸ್ತಾನಿಗಳು ವಿಚಲಿತರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಈಗಾಗಲೇ ಆಂತರಿಕ ಸಂಘರ್ಷ, ಬಲೂಚಿಸ್ತಾನದ ಜತೆಗಿನ ಜಗಳ, ಅಫ್ಘಾನಿಸ್ತಾನದ ದಾಳಿಗಳಿಂದ ತತ್ತರಿಸಿರುವ ನರಿಬುದ್ಧಿಯ ಪಾಕಿಸ್ತಾನಕ್ಕೆ, ನೀರಿನ ಹಂಚಿಕೆಯ ಒಪ್ಪಂದದ ರದ್ದತಿಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತೀಯರ ಮೇಲೆ ನಡೆಸಿದ ದಾಳಿಗೆ ಭೀಕರವಾಗಿ ಪ್ರತ್ಯು ತ್ತರ ನೀಡುತ್ತೇವೆಂದು ಮೋದಿ ಹೇಳಿದ್ದಾರೆ. ಸಿಂಧೂ ಕಣಿವೆ ನೀರಿನ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ನರೇಂದ್ರ ಮೋದಿಯವರು, ಭಾರತದ ಇತಿಹಾಸದಲ್ಲಿ ನೆಹರು ಮಾಡಿದ್ದ ಮತ್ತೊಂದು ಪ್ರಮಾದವನ್ನು ಅಂತ್ಯಗೊಳಿಸಿದ್ದಾರೆ.