ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ಒಬ್ಬ ಮತ್ತು ಇನ್ನೊಬ್ಬನಂತೆ ಮತ್ತೊಬ್ಬನಿಲ್ಲ

ಒಬ್ಬ ಹುಟ್ಟಿದ್ದು 1985ರ ಫೆಬ್ರವರಿ 5ರಂದು. ಇನ್ನೊಬ್ಬ ಹುಟ್ಟಿದ್ದು ಅದಾಗಿ 870 ದಿನಗಳ ನಂತರ, 1987ರ ಜೂನ್ 24ರಂದು. ಒಬ್ಬ ಹುಟ್ಟಿದ್ದು ಪೋರ್ಚುಗಲ್ ದೇಶಕ್ಕೆ ಸೇರಿದ ಮಡೈರಾ ದ್ವೀಪದಲ್ಲಿ. ಇನ್ನೊಬ್ಬ ಹುಟ್ಟಿದ್ದು ಅರ್ಜೆಂಟೀನಾದದ ರೊಸಾರಿಯೋದಲ್ಲಿ. ಇಷ್ಟೇ ಹೇಳಿದರೆ ಪೂರ್ತಿ ಹೇಳಿ ದಂತಾಗುವುದಿಲ್ಲ

ವಿದೇಶವಾಸಿ

ಒಬ್ಬನಿದ್ದ, ಇನ್ನೊಬ್ಬನಿದ್ದ. ಇಬ್ಬರೂ ಎರಡು ದಶಕಗಳ ಕಾಲ ಜಗತ್ತನ್ನೇ ಆಳಿದರು. ಇಬ್ಬರೂ ಒಂದೇ ದೇಶದವರಲ್ಲ. ತೀರಾ ಆತ್ಮೀಯರೂ ಅಲ್ಲ. ಅವರಿಬ್ಬರೂ ಎದುರಾಳಿಗಳಾಗಿದ್ದರೂ ಅವರ ನಡುವೆ ವೈರತ್ವ ಇರಲಿಲ್ಲ. ಆದರೆ ಸ್ಪರ್ಧೆ ಇತ್ತು, ಸದಾ ಪೈಪೋಟಿ ನಡೆಯುತ್ತಿತ್ತು. ಇಬ್ಬರೂ ತುಳಿದದ್ದು ಗೋಲಾಕಾರವಾದದ್ದನ್ನೇ ಆದರೂ ಅದು ಭೂಮಿಯಾಗಿರಲಿಲ್ಲ. ಆದರೂ ಅವರ ಕಸರತ್ತು, ಸೆಣೆಸಾಟ ಭೂಮಿಯ ಮೇಲೇ ನಡೆಯುತ್ತಿತ್ತು. ಒಮ್ಮೆ ಆತ ಗೆದ್ದರೆ ಇನ್ನೊಮ್ಮೆ ಈತ ಗೆಲ್ಲುತ್ತಿದ್ದ. ಒಮ್ಮೆ ಒಬ್ಬನ ಕಾಲು ಮೇಲಾದರೆ ಇನ್ನೊಮ್ಮೆ ಇನ್ನೊಬ್ಬನ ಕಾಲು ಮೇಲಾಗುತ್ತಿತ್ತು.

ಒಬ್ಬ ಹುಟ್ಟಿದ್ದು 1985ರ ಫೆಬ್ರವರಿ 5ರಂದು. ಇನ್ನೊಬ್ಬ ಹುಟ್ಟಿದ್ದು ಅದಾಗಿ 870 ದಿನಗಳ ನಂತರ, 1987ರ ಜೂನ್ 24ರಂದು. ಒಬ್ಬ ಹುಟ್ಟಿದ್ದು ಪೋರ್ಚುಗಲ್ ದೇಶಕ್ಕೆ ಸೇರಿದ ಮಡೈರಾ ದ್ವೀಪದಲ್ಲಿ. ಇನ್ನೊಬ್ಬ ಹುಟ್ಟಿದ್ದು ಅರ್ಜೆಂಟೀನಾದದ ರೊಸಾರಿಯೋದಲ್ಲಿ. ಇಷ್ಟೇ ಹೇಳಿದರೆ ಪೂರ್ತಿ ಹೇಳಿ ದಂತಾಗುವುದಿಲ್ಲ. ಇಬ್ಬರ ಕತೆಯನ್ನೂ ವಿಸ್ತಾರವಾಗಿ ತಿಳಿದಾಗ, ಅದು ಕಷ್ಟವನ್ನು ಕರಗಿಸುವ ಕುಲುಮಯಾಗಿ ಕಾಣುತ್ತದೆ, ಬದುಕಿಗೆ ಬೇಕಾದ ಸೂರ್ತಿಯ ಚಿಲುಮೆಯಾಗಿ ಕಂಗೊಳಿಸುತ್ತದೆ.

ಒಬ್ಬ ಹುಟ್ಟುವುದಕ್ಕೂ ಮೊದಲು ಅವನ ತಾಯಿ ಗರ್ಭಪಾತ ಮಾಡಿಸುವುದಕ್ಕೆ ಮುಂದಾಗಿದ್ದ ಳಂತೆ. ಕಾರಣ, ಕೆಂಡದಂತೆ ಸುಡುವ ಬಡತನ. ಮನೆಯಲ್ಲಿ ಇದ್ದವರಿಗೇ ಉಣ್ಣಲು ಗತಿ ಇಲ್ಲದಿರು ವಾಗ ಇನ್ನೊಂದನ್ನು ಹೆರಬೇಕೇ ಎಂದು ಆಕೆ ಚಿಂತಿಸುತ್ತಿದ್ದಳು. ಸಂಸಾರದ ಭಾರ ಹಗುರಾಗಲೆಂದು ಆಕೆ ಬೇರೆಯವರ ಮನೆಗೆ ಅಡುಗೆ ಮಾಡುವುದರ ಜತೆಗೆ ಸ್ವಚ್ಛತೆಯ ಕೆಲಸಕ್ಕೂ ಹೋಗುತ್ತಿದ್ದಳು. ಗಂಡ ಸ್ಪೋಟ್ಸ ಕ್ಲಬ್ ಒಂದರಲ್ಲಿ ಆಟದ ಕಿಟ್ ಬ್ಯಾಗ್ ಹೊತ್ತುಕೊಂಡು ಹೋಗುವ, ವಸ್ತುಗಳ ಲೆಕ್ಕ ಇಡುವ ಕಿಟ್ ಮ್ಯಾನ್ ಕೆಲಸದ ಜತೆಗೆ ಗಿಡಗಳಿಗೆ ನೀರು ಹಾಕುವ, ಹುಲ್ಲು ಬೆಳೆಸುವ ಮಾಲಿಯ ಕೆಲಸ ಮಾಡುತ್ತಿದ್ದ. ಆ ಕೆಲಸ ಮುಗಿದಮೇಲೆ ಸಣ್ಣ ಪುಟ್ಟ ಸಾಮಾನು ಸಾಗಿಸುವ ಕೆಲಸವನ್ನೂ ಮಾಡುತ್ತಿದ್ದ. ಆದರೆ ಆತ ದುಡಿದದ್ದು ಆತನ ಕುಡಿತಕ್ಕೇ ಸಾಲುತ್ತಿರಲಿಲ್ಲ. ಮದ್ಯಪಾನದ ವ್ಯಸನ ಆ ಸಂಸಾರವನ್ನು ಅವಸಾನದ ಅಂಚಿನಲ್ಲಿ ತಂದು ನಿಲ್ಲಿಸಿತ್ತು.

ಇದನ್ನೂ ಓದಿ: Kiran Upadhyay Column: ಎತ್ತರಕ್ಕೆ ಏರುತ್ತಿರುವ ಕಿಲೋಮೀಟರ್‌ ರೇಸ್

ಸೂರಾದರೂ ಸರಿಯಾಗಿದೆಯೇ ಎಂದರೆ ಅದೂ ಇಲ್ಲ. ಒಂದೇ ಕೋಣೆಯಲ್ಲಿ ಅಪ್ಪ, ಅಮ್ಮ, ಮೂವರು ಸಹೋದರರು ಮತ್ತು ಒಬ್ಬ ಸಹೋದರಿ, ಒಟ್ಟೂ ಆರು ಮಂದಿ ಮಲಗಬೇಕಿತ್ತು. ಮಳೆಗಾಲದಲ್ಲಿ ಸದಾ ಸೋರುತ್ತಿದ್ದ ಮನೆಯ ಮಾಳಿಗೆ. ಮನೆಯ ತಗಡಿನ ಛಾವಣಿ ಮುಚ್ಚೋಣ ವೆಂದರೆ, ಮಾನ ಮುಚ್ಚುವುದಕ್ಕೇ ಬಟ್ಟೆಗೆ ತತ್ವಾರ, ಇನ್ನು ಮಾಡು ಮುಚ್ಚುವುದು ಹೇಗೆ? ದಿನ ಕಳೆಯುತ್ತಿದ್ದಂತೆ ಮನೆಯ ಹಿರಿಯ ಮಗನೂ ಸಣ್ಣ ವಯಸ್ಸಿನಲ್ಲಿಯೇ ಮದ್ಯಪಾನದ ಚಟಕ್ಕೆ ಬಿದ್ದಿದ್ದ. ಎಷ್ಟೋ ದಿನ ಮನೆಯವರೆಲ್ಲ ಊಟದ ಕನಸು ಕಂಡು ಖಾಲಿ ಹೊಟ್ಟೆಯಲ್ಲಿ ಮಲಗು ತ್ತಿದ್ದರು. ಮನೆಯ ಇತರ ಸದಸ್ಯರ ಉದರದಲ್ಲಿ ಹಸಿವಿನ ಬೆಂಕಿ ಸುಡುತ್ತಿದ್ದರೆ, ಒಬ್ಬನಲ್ಲಿ ಮಾತ್ರ ಮಹತ್ವಾಕಾಂಕ್ಷೆಯ ಕಿಚ್ಚು ಹೊತ್ತಿಕೊಂಡಿತ್ತು.

ಬೆಳಗಿನಿಂದ ಕತ್ತಲಾಗುವವರೆಗೂ ಆತ ಮೈದಾನದಲ್ಲಿರುತ್ತಿದ್ದ. ಕತ್ತಲಾದ ನಂತರವೂ ಬಹಳ ಹೊತ್ತು ಅಲ್ಲಿಯೇ ಇರುತ್ತಿದ್ದ. ಮನೆಗೆ ಹೋದರೆ ತಾನು ಬಯಸಿದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಆತ ಮನಗಂಡಿದ್ದ. ಶಾಲೆಗೆ ಹೋಗೋಣವೆಂದರೆ, ಯಾವುದೋ ಕಾರಣಕ್ಕೆ ಶಿಕ್ಷಕರ ಮೇಲೆ ಮುನಿಸಿಕೊಂಡು, ತಾನು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ಎಸೆದು ಬಂದಿದ್ದ. ತಂದೆ ಮಾಡಿ ಕೊಟ್ಟ ಬಟ್ಟೆಯ ಗಂಟಿನ ಚೆಂಡು ಬಿಟ್ಟರೆ ಅವನಲ್ಲಿ ಏನೂ ಇರಲಿಲ್ಲ. ಇನ್ನು ಊರಲ್ಲಿದ್ದು ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಅನಿಸಲು ಶುರುವಾಗಿತ್ತು.

ಅವನ ಮುಂದೆ ಎರಡು ದಾರಿ ಇತ್ತು. ಮೊದಲನೆಯದು, ಆಗಲೇ ಇದ್ದ ಎಲ್ಲ ಕಷ್ಟಗಳನ್ನೂ ತಾನೂ ಕಟ್ಟಿಕೊಂಡು, ಅವುಗಳ ಜತೆಯೇ ಒಂದಾಗಿ ಊರಿನಲ್ಲಿಯೇ ಬದುಕುವುದು. ಎರಡನೆಯದು, ಈ ಎಲ್ಲ ಜಂಜಾಟಗಳನ್ನು ಬಿಟ್ಟು ತನ್ನ ಇಷ್ಟದ ಆಟದ ಬೆನ್ನು ಹತ್ತಿ ಓಡುವುದು. ಆತ ಎರಡನೆಯ ದಾರಿಯನ್ನು ಆಯ್ದುಕೊಂಡ. ಅಂದು ಹನ್ನೊಂದು ವರ್ಷದ ಬಾಲಕನೊಬ್ಬ ಮನೆ ಬಿಟ್ಟಿದ್ದ. ಹಾಗೆ ಮನೆ ಬಿಟ್ಟು ದೇಶದ ರಾಜಧಾನಿ ಲಿಸ್ಬನ್‌ಗೆ ಬಂದು, ಅಲ್ಲಿಯ ಒಂದು ಫುಟ್ಬಾಲ್ ಕ್ರೀಡೆಯ ಅಕಾಡೆಮಿಗೆ ಸೇರಿಕೊಂಡ. ಹಾಗೆ ಸೇರಿಕೊಳ್ಳುವುದಕ್ಕೆ ಮೂಲ ಕಾರಣ, ಆತನಲ್ಲಿದ್ದ ಅದೇ -ಟ್ಬಾಲ್ ಹುಚ್ಚು, ಅಲ್ಲ, ಕಿಚ್ಚು.

7 R

ಆದರೆ ಅಲ್ಲಿಯೂ ಆತನ ಬದುಕು ಸುಗಮವಾಗಿರಲಿಲ್ಲ. ಹಳ್ಳಿಗಾಡಿನಿಂದ ಬಂದವನೊಬ್ಬನ ಭಾಷೆ, ಉಚ್ಛಾರವನ್ನು ಅವನ ಜತೆಗಿರುವವರೇ ಟೀಕಿಸುತ್ತಿದ್ದರು. ಆತ ತೊಡುತ್ತಿದ್ದ ಬಟ್ಟೆಯನ್ನು ನೋಡಿ ಗೇಲಿ ಮಾಡುತ್ತಿದ್ದರು. ದಿನವೂ ಅಮ್ಮನ ನೆನಪು ಕಾಡುತ್ತಿತ್ತು, ಮನೆಯ ನೆನಪಾಗುತ್ತಿತ್ತು. ಪ್ರತಿ ನಿತ್ಯ ರಾತ್ರಿ ಒಬ್ಬನೇ ಕುಳಿತು ಅಳುತ್ತಿದ್ದ.

ಎಷ್ಟೋ ಬಾರಿ ಮನೆಗೆ ಹಿಂತಿರುಗಿ ಹೋಗಬೇಕು ಎಂದು ಅನಿಸುತ್ತಿತ್ತು. ಆದರೆ, ಅಲ್ಲಿ ಹೋದರೆ ಪುನಃ ಅದೇ ನರಕದ ಜೀವನ ಎಂಬುದು ನೆನಪಾಗಿ ಸುಮ್ಮ ನಾಗುತ್ತಿದ್ದ. ಅವಮಾನ, ಅಸಹಾಯ ಕತೆಯನ್ನೆಲ್ಲ ಸಾಧನೆಯ ಪಥವನ್ನು ಕ್ರಮಿಸಲು ಇಂಧನ ವನ್ನಾಗಿಸಿಕೊಂಡ. ಕಣ್ಣೀರಿನ ಪ್ರತಿ ಬಿಂದುವೂ ಅವನ ಕಾಲಿನ ಬಲವಾಗಿ ಪರಿವರ್ತನೆಗೊಂಡಿತು. ಆ ಸಂದರ್ಭದಲ್ಲಿ ಅವನೇನಾದರೂ ಹಿಂತಿರುಗಿ ಹೋಗಿರುತ್ತಿದ್ದರೆ, ಇಂದು ಇತಿಹಾಸ ನಿರ್ಮಿಸುವು ದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಹದಿನಾಲ್ಕು ವರ್ಷವಾಗುತ್ತಿದ್ದಂತೆಯೇ ಆತನಿಗೆ ಇನ್ನೊಂದು ಆಘಾತ ಕಾದಿತ್ತು. ಆತನ ಹೃದಯ ದಲ್ಲಿ ತೊಂದರೆ ಇದೆ ಎಂದು ತಿಳಿದುಬಂತು. ಅದಕ್ಕಾಗಿ ಲೇಸರ್ ಚಿಕಿತ್ಸೆ ಮಾಡಬೇಕಾಗಿತ್ತು. ಆ ಚಿಕಿತ್ಸೆ ನೂರಕ್ಕೆ ನೂರು ಯಶಸ್ವಿಯಾಗುತ್ತದೆ ಎಂಬ ವಾಗ್ದಾನವನ್ನು ಯಾವ ವೈದ್ಯರೂ ನೀಡುತ್ತಿರ ಲಿಲ್ಲ. ಅದೊಂದು ಪ್ರಯತ್ನವಾಗಿತ್ತು. ಯಶಸ್ವಿಯಾದರೆ ಆಯಿತು, ಇಲ್ಲವಾದರೆ ಇಲ್ಲ, ಅಷ್ಟೇ. ಆತನ ಅದೃಷ್ಟ, ಅಲ್ಲ, ಕೋಟಿಗಟ್ಟಲೆ ಜನರ ಅದೃಷ್ಟ ಚೆನ್ನಾಗಿತ್ತು. ಚಿಕಿತ್ಸೆ ಫಲಪ್ರದವಾಯಿತು.

ಕೆಲವೇ ದಿನಗಳಲ್ಲಿ ಆತ ಮೈದಾನಕ್ಕಿಳಿದ. ಲೆಕ್ಕವಿಡಲಾಗದಷ್ಟು ಗಂಟೆಗಳನ್ನು ಮೈದಾನದಲ್ಲಿ, ಜಿಮ್‌ನಲ್ಲಿ ಕಳೆದ. ಶಾಲೆಯಲ್ಲಿ ಕುರ್ಚಿ ಎಸೆದು ಬಂದಿದ್ದ ಅಶಿಸ್ತಿನ ಹುಡುಗನೊಬ್ಬ ತನ್ನ ಶಿಸ್ತು ಮತ್ತು ಕಾರ್ಯವೈಖರಿಗೆ ಹೆಸರಾದ. ಇದು ಆತನನ್ನು ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಮತ್ತು ಇತ್ತೀಚೆಗೆ ಸೌದಿ ಅರೇಬಿಯಾದ ಅಲ್ ನಾಸಿರ್‌ನಂತಹ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಆಡಲು ಅವಕಾಶ ನೀಡಿದ್ದಷ್ಟೇ ಅಲ್ಲ, ಆತನನ್ನು ದಾಖಲೆಯ ಎತ್ತರಕ್ಕೆ ಏರಿಸಿತು.

ಅದೇ ಕಾಲಘಟ್ಟದಲ್ಲಿ ಇನ್ನೊಂದು ಕಡೆ, ಇನ್ನೊಬ್ಬ ಬಾಲಕ ತಯಾರಾಗುತ್ತಿದ್ದ. ಅರ್ಜೆಂಟೀನಾದ ರೊಸಾರಿಯೋ ನಗರ ಎರಡು ವಿಷಯಕ್ಕೆ ಪ್ರಸಿದ್ಧಿಯಾಗಿತ್ತು. ಒಂದು ಆ ಊರಿನ ಕಷ್ಟ, ಇನ್ನೊಂದು ಫುಟ್ಬಾಲ್. ‌

ಅಂಥ ಊರಿನಲ್ಲಿ ಇನ್ನೊಬ್ಬ ಬಾಲಕ ಜನಿಸಿದ್ದ. ಆತ ಯಾರೊಂದಿಗೂ ಹೆಚ್ಚು ಮಾತಾಡುತ್ತಿರ ಲಿಲ್ಲ. ಆತ ಮಾತಾಡುತ್ತಿದ್ದದ್ದು ಫುಟ್ಬಾಲ್ ಜತೆಗೆ. ಅದು ಆತನ ಮಾತಿಗೆ ಸ್ಪಂದಿಸುತ್ತಿತ್ತು, ಆತ ಹೇಳಿದಂತೆ ಕೇಳುತ್ತಿತ್ತು. ಆತನ ತಂದೆ ಕಟ್ಟಡಗಳಿಗೆ ಬೇಕಾಗುವ ಕಬ್ಬಿಣದ ಸರಳು ತಯಾರಿಸುವ ಕಾರ್ಖಾನೆಯಲ್ಲಿ ಕಾರ್ಮಿಕರಾಗಿಯೂ, ತಾಯಿ ಆಯಸ್ಕಾಂತ ತಯಾರಿಸುವ ಕಾರ್ಖಾನೆಯಲ್ಲಿ ಸ್ವಚ್ಛತೆಯ ಕೆಲಸವನ್ನೂ ಮಾಡುತ್ತಿದ್ದರು. ತಂದೆ ಮತ್ತು ಅಣ್ಣಂದಿರಿಗೆ ಫುಟ್ಬಾಲ್ ಆಟದಲ್ಲಿ ಆಸಕ್ತಿಯಿತ್ತು. ಹಾಗಾಗಿ ಆತನಿಗೂ ಅದರಲ್ಲಿ ಆಸಕ್ತಿ ಹುಟ್ಟಿಕೊಂಡಿತು.

ತನ್ನ ನಾಲ್ಕನೆಯ ವರ್ಷಕ್ಕೇ ಆತ ಆಡಲು ಆರಂಭಿಸಿದ. ಐದನೆಯ ವರ್ಷಕ್ಕೆ ಆತ ತನಗಿಂತ ವಯಸ್ಸಿನಲ್ಲೂ, ಆಳ್ತನದಲ್ಲೂ ದೊಡ್ಡವರಾಗಿದ್ದ ಮಕ್ಕಳೊಂದಿಗೆ ಆಡಲು ಆರಂಭಿಸಿದ್ದ. ತಮ್ಮ ಕಾಲ್ತುಳಿತಕ್ಕೆ ಸಿಕ್ಕು ಅಪ್ಪಚ್ಚಿ ಯಾಗುತ್ತೀಯ ಎಂದು ಅವರು ಆತನನ್ನು ಛೇಡಿಸುತ್ತಿದ್ದರೂ ಆತ ಮಾತ್ರ ಛಲ ಬಿಡಲಿಲ್ಲ. ಅವರೊಂದಿಗೇ ಪೈಪೋಟಿ ನಡೆಸುತ್ತಿದ್ದ. ಯಾವ ಮಾಯೆಯೋ, ಸಾಧನೆ ಯೋ, ಚೆಂಡು ಆತನ ಕಾಲು ಬಿಟ್ಟು ಹೋಗುತ್ತಿರಲಿಲ್ಲ. ಒಂದು ವೇಳೆ ಅದು ಆತನನ್ನು ಬಿಟ್ಟು ಹೋಗುತ್ತಿದ್ದರೆ, ನೇರವಾಗಿ ವಿರೋಧಿಗಳ ಗೋಲ್ ಕಂಬದೊಳಗೆ.

ಇದಕ್ಕೆಲ್ಲ ಅಜ್ಜಿ ಆತನಿಗೆ ಆಧಾರಸ್ತಂಭವಾಗಿ ನಿಂತಿದ್ದಳು. ಅಪ್ಪ ಅಮ್ಮ ಇಬ್ಬರೂ ಕೆಲಸದಲ್ಲಿರು ತ್ತಿದ್ದುದರಿಂದ ಆತನನ್ನು ಅಜ್ಜಿಯೇ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಳು. ಆತನನ್ನು ಆಡಲು ಕರೆದು ಕೊಂಡು ಹೋಗುವುದರಿಂದ ಆದಿಯಾಗಿ ಎಲ್ಲ ರೀತಿಯ ಕಾಳಜಿಯನ್ನೂ ವಹಿಸುತ್ತಿದ್ದಳು. ಸುಮಾರು ಐದು ವರ್ಷ ಆತ ಸುತ್ತ ನಾಲ್ಕು ಕಡೆಯೂ ಹೆಸರು ಮಾಡಿದ. ಆದರೆ ಹತ್ತನೆಯ ವರ್ಷ ದಲ್ಲಿ ಒಂದು ಆತಂಕಕಾರಿ ವಿಷಯ ತಿಳಿದು ಮನೆಯವರೆಲ್ಲ ಕುಸಿದು ಕುಳಿತರು.

ಹತ್ತು ವರ್ಷವಾಗುತ್ತಿದ್ದಂತೆ, ಆತನಲ್ಲಿ ಬೆಳವಣಿಗೆ ನಿಂತು ಹೋಗಿದೆ ಎಂದು ಹೆತ್ತವರಿಗೆ ಅನಿಸಲು ಶುರುವಾಗಿತ್ತು. ವೈದ್ಯರು ತಪಾಸಣೆ ಮಾಡಿದಾಗ, ಬೆಳವಣಿಗೆಗೆ ಬೇಕಾದ ಹಾರ್ಮೋನಿನ ಕೊರತೆ ಯಿಂದಾಗಿ ಆತನಲ್ಲಿ ಬೆಳವಣಿಗೆ ನಿಂತು ಹೋಗಿದೆ ಎಂಬ ವಿಷಯ ಬೆಳಕಿಗೆ ಬಂತು. ಅದಕ್ಕಾಗಿ ಪ್ರತಿನಿತ್ಯ ಒಂದು ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಿತ್ತು. ಒಂದು ಚುಚ್ಚುಮದ್ದಿನ ಬೆಲೆ ಎಷ್ಟು ಎಂದರೆ, 900 ಡಾಲರ್. ಕಾರ್ಮಿಕ ವರ್ಗದವರಾಗಿದ್ದ ಪಾಲಕರಿಗೆ ಈ ಮೊತ್ತ ಭರಿಸುವುದು ಕಷ್ಟ ವಾಗಿತ್ತು. ಊರಿನಲ್ಲಿ ಇದ್ದ ಎರಡು ಸ್ಪೋಟ್ಸ ಕ್ಲಬ್‌ಗಳನ್ನು ಸಂಪರ್ಕಿಸಿ ಸಹಾಯ ಕೇಳಿದಾಗ, ನಿರಾಕರಣೆಯೇ ಉತ್ತರವಾಯಿತು. ಸ್ಪೇನ್ ದೇಶದಲ್ಲಿರುವ ಬಾರ್ಸಿಲೋನಾ ಕ್ಲಬ್‌ನ ನಿರ್ದೇಶಕ ರೊಬ್ಬರಿಗೆ ಸಹಾಯ ಮಾಡುವ ಮನಸ್ಸಾಯಿತು.

ಆದರೆ ಆತ ಮುಂದೆ ಬೆಳೆಯುತ್ತಾನೆಯೇ? ಒಮ್ಮೆ ಬೆಳೆದರೂ ಒಳ್ಳೆಯ ಆಟಗಾರನಾಗುತ್ತಾನೆಯೇ? ನಮ್ಮ ತಂಡಕ್ಕಾಗಿ ಆಡುತ್ತಾನೆಯೇ? ಇತ್ಯಾದಿ ಪ್ರಶ್ನೆಗಳಿದ್ದವು. ಆಗ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಚಾರ್ಲಿ ರೆಕ್ಸಾಕ್ ಆ ಜವಾಬ್ದಾರಿಯನ್ನು ಹೊತ್ತುಕೊಂಡರು. ಆ ಕ್ಷಣದಲ್ಲಿ ಕಾಗದ ದೊರೆಯದಿzಗ ಟಿಶ್ಯೂ ಪೇಪರ್ ಮೇಲೆ ಒಂದು ಒಪ್ಪಂದ ಮಾಡಿಕೊಂಡರು. ಬಾಲಕನ ಚುಚ್ಚುಮದ್ದಿಗೆ ಬೇಕಾದ ಧನ ಸಹಾಯ ಒದಗಿಬಂತು. ಅಂದಿನಿಂದ ಪ್ರತಿನಿತ್ಯ ರಾತ್ರಿ ಆತನ ತಂದೆ ಆತನ ಕಾಲಿಗೆ ಚುಚ್ಚು ಮದ್ದು ಚುಚ್ಚುತ್ತಿದ್ದರು.

ನಾಲ್ಕು ಅಡಿಗಿಂತ ಹೆಚ್ಚು ಬೆಳೆಯದಿದ್ದ ಬಾಲಕ ಒಂದು ವರ್ಷದಲ್ಲಿ ಎತ್ತರವಾಗಲು ಆರಂಭಿಸಿದ್ದ. ಪ್ರಾಯ ತುಂಬುವಾಗ ಹೆಚ್ಚು ಕಮ್ಮಿ ಐದೂಮುಕ್ಕಾಲು ಅಡಿ ಎತ್ತರವಾಗಿ ಬೆಳೆದ. ಆ ಚುಚ್ಚುಮದ್ದಿ ನಲ್ಲಿ ಅದ್ಯಾವ ದಿವ್ಯ ಔಷಧವಿತ್ತೋ ಗೊತ್ತಿಲ್ಲ, ಆತನ ಕಾಲಿಗೆ ಅದು ಗಜಬಲವನ್ನೇ ನೀಡಿತ್ತು. ನಂತರ ಆತ ನೂರಾರು ಪಂದ್ಯಗಳಲ್ಲಿ ಆಡಿದ. ಪ್ರತಿ ಬಾರಿಯೂ ಆತನನ್ನು ಕಟ್ಟಿಹಾಕಲು ವಿರೋಧಿ ಗಳು ತಂತ್ರ ನಿರ್ಮಿಸುತ್ತಿದ್ದರು. ನಾಲ್ಕು-ಐದು ಜನರನ್ನು ಆತನನ್ನು ಕಟ್ಟಿ ಹಾಕಲು ಆತನ ಸುತ್ತಲೇ ಇಡುತ್ತಿದ್ದರು. ಹೆಚ್ಚು ಕಮ್ಮಿ ಪ್ರತಿ ಬಾರಿಯೂ ಸೋಲುತ್ತಿದ್ದರು.

ಈ ನಡುವೆ ಆತ ಅತಿಯಾಗಿ ಪ್ರೀತಿಸುತ್ತಿದ್ದ ಅಜ್ಜಿ ತೀರಿಹೋದರು. ಆತನ ಮನ ನೊಂದಿತ್ತು. ಆದರೆ ಅದರ ನಂತರ ಆತ ಹೊಡೆಯುತ್ತಿದ್ದ ಪ್ರತಿ ಗೋಲನ್ನೂ ಆಕಾಶದ ಕಡೆ ಬೆರಳು ತೋರಿಸಿ, ಅಜ್ಜಿಗೆ ಸಮರ್ಪಿಸಿದ.

ಆದರೆ ಒಂದಿತ್ತು, ಆತ ತಾನು ಆಡುತ್ತಿದ್ದ ಕ್ಲಬ್ ಪರವಾಗಿ ಸಾಕಷ್ಟು ಗೋಲ್ ಹೊಡೆಯುತ್ತಿದ್ದ. ಆದರೆ ದೇಶಕ್ಕಾಗಿ ಆಡುವಾಗ ಗೋಲ್ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದ. ಇದರಿಂದ ಆತನ ಮನಸ್ಸೂ ನೊಂದಿತ್ತು. ಕಳೆದ ವಿಶ್ವಕಪ್ ಪಂದ್ಯಾಟ, ೨೦೨೨ರಲ್ಲಿ ಆತ ತನ್ನ ತಂಡಕ್ಕೆ ಜಯಸಿರಿಯನ್ನು ತಂದುಕೊಟ್ಟಿದ್ದ.

ಆ ಒಬ್ಬ ಮತ್ತು ಇನ್ನೊಬ್ಬ, ಇಬ್ಬರೂ 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾಗವಹಿಸಿದರು. ಇದುವರೆಗೆ ಅತಿ ಹೆಚ್ಚು ವಿಶ್ವಕಪ್ ಪಂದ್ಯಾಟದಲ್ಲಿ ಭಾಗವಹಿಸಿದವರು ಎಂಬ ಕೀರ್ತಿಗೆ ಪಾತ್ರ ರಾದರು. ಒಬ್ಬ ತನ್ನ ಜೀವಮಾನದಲ್ಲಿ ಇದುವರೆಗೆ 974 ಗೋಲ್ ಹೊಡೆದಿದ್ದಾನೆ, ಇನ್ನೊಬ್ಬ 917 ಗೋಲ್ ಬಾರಿಸಿದ್ದಾನೆ. ವಿಶ್ವಕಪ್‌ನಲ್ಲಿ ಒಬ್ಬ 11 ಗೋಲ್ ಗಳಿಸಿದ್ದರೆ, ಇನ್ನೊಬ್ಬ ಅತಿ ಹೆಚ್ಚು 20 ಗೋಲ್‌ನ ದಾಖಲೆ ಬರೆದಿದ್ದಾನೆ.

ಕ್ಲಬ್ ಪಂದ್ಯಗಳಲ್ಲಿ ಒಬ್ಬ 828 ಗೋಲ್, ಇನ್ನೊಬ್ಬ 794 ಗೋಲ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಬ್ಬ 146 ಗೋಲ್, ಇನ್ನೊಬ್ಬ 123 ಗೋಲ್ ನುಗ್ಗಿಸಿದ್ದಾರೆ. ಒಬ್ಬ 66 ಬಾರಿ ಹ್ಯಾಟ್ರಿಕ್ ಗಳಿಸಿದರೆ ಇನ್ನೊಬ್ಬ 60 ಬಾರಿ ಹ್ಯಾಟ್ರಿಕ್ ಗಳಿಸಿದ್ದಾನೆ. ‌

‘ಬಾಲೊನ್ ಡಿ ಒರ್’ ಪ್ರಶಸ್ತಿಯನ್ನು ಒಬ್ಬ 5 ಬಾರಿ ಗೆದ್ದರೆ, ಇನ್ನೊಬ್ಬ ಎಂಟು ಬಾರಿ ಗೆದ್ದಿದ್ದಾನೆ. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಒಬ್ಬ 168 ಬಾರಿ ತನ್ನ ಜೋಳಿಗೆಗೆ ಹಾಕಿಕೊಂಡರೆ, ಇನ್ನೊಬ್ಬ 333 ಬಾರಿ ಇಳಿಸಿಕೊಂಡಿದ್ದಾನೆ. ಯುರೋಪಿಯನ್ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಒಬ್ಬ 4 ಬಾರಿ ಪಡೆದರೆ, ಇನ್ನೊಬ್ಬ 6 ಬಾರಿ ಪಡೆದಿದ್ದಾನೆ. ಫಿಫಾ ದಿ ಬೆಸ್ಟ್ ಪ್ರಶಸ್ತಿಯನ್ನು ಒಬ್ಬ 3 ಬಾರಿ ಪಡೆದರೆ ಇನ್ನೊಬ್ಬ 4 ಬಾರಿ ತನ್ನದಾಗಿಸಿಕೊಂಡಿzನೆ. ಒಟ್ಟಿನಲ್ಲಿ, ಇಬ್ಬರೂ ಸದ್ಯ ಯಾರೂ ಇವರಿಬ್ಬರ ಹತ್ತಿರವೂ ಸುಳಿಯದ ದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತದ ಗೋವಾದಲ್ಲಿ ಒಬ್ಬನ, ನಾಲ್ಕು‌ ನೂರ ಹತ್ತು ಕಿಲೋ ತೂಕದ ಹಿತ್ತಾಳೆಯ ಮೂರ್ತಿ ಯನ್ನು ನಿಲ್ಲಿಸಿದ್ದಾರೆ. ಕೊಲ್ಕೋತಾದಲ್ಲಿ ಇನ್ನೊಬ್ಬನ, ಇಪ್ಪತ್ತೊಂದು ಮೀಟರ್ ಎತ್ತರದ ವಿಗ್ರಹ ವನ್ನು ಅನಾವರಣಗೊಳಿಸಿzರೆ. ಇದು ಭಾರತದಲ್ಲಿಯೂ ಇಬ್ಬರ ಜನಪ್ರಿಯತೆಯನ್ನು ತೋರಿಸು ತ್ತದೆ.

ಈ ಒಬ್ಬ ಮತ್ತು ಇನ್ನೊಬ್ಬ, ಇಬ್ಬರೂ ಕೊನೆಯ ಬಾರಿ ಜೀವವನ್ನೇ ಪಣಕ್ಕಿಟ್ಟವರಂತೆ ಆಡುವು ದನ್ನು ನೋಡಬೇಕು ಅನಿಸಿದರೆ, ಈಗ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ನೋಡಿ. ಇಲ್ಲವಾದರೆ ಈ ಅವಕಾಶವನ್ನು ಶಾಶ್ವತವಾಗಿ ತಪ್ಪಿಸಿಕೊಳ್ಳುತ್ತೀರಿ. ಏಕೆಂದರೆ ಈಗ ಒಬ್ಬನಿಗೆ ನಲವತ್ತೊಂದು ವರ್ಷ, ಇನ್ನೊಬ್ಬನಿಗೆ ಮೂವತ್ತೊಂಬತ್ತು ವರ್ಷ. ಮುಂದಿನ ವಿಶ್ವಕಪ್‌ನಲ್ಲಿ ಇಬ್ಬರೂ ಆಡುವ ಸಂಭವನೀಯತೆ ಶೂನ್ಯ. ಸದ್ಯಕ್ಕಂತೂ ಈ ಕ್ಷೇತ್ರದಲ್ಲಿ ಒಬ್ಬ ಮತ್ತು ಇನ್ನೊಬ್ಬ ನಂತೆ ಮತ್ತೊಬ್ಬನಿಲ್ಲ. ಯುಗಾಂತ್ಯದ ಅಂಚಿನಲ್ಲಿರುವ ಇಬ್ಬರೂ ಪ್ರೇಕ್ಷಕರನ್ನು ನಿರಾಸೆ ಗೊಳಿಸುವುದಿಲ್ಲ. ಎರಡು ದಂತಕತೆಗಳು, ಎರಡು ಬೇರೆ ಬೇರೆ ಮಾರ್ಗ, ಒಂದೇ ಯುಗ, ಇಬ್ಬರಿಗೂ ‘ಗೋಲ’ ಒಂದೇ ಗುರಿ.

ಅಂದಹಾಗೆ, ಒಬ್ಬ- ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಇನ್ನೊಬ್ಬ- ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ.

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author