ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ನಾವ್ಯಾರೂ ಮನುಷ್ಯರಲ್ಲ.. ಕೇವಲ ಕಂಟೆಂಟ್‌ಗಳು!

ಅಂದಿಗೆ ಕಾಲ್ಪನಿಕ ಹಾಸ್ಯವಾಗಿದ್ದ ಇದು, ಇಂದು ವಾಸ್ತವದ ಭಾಗವಾಗಿದೆ ಮತ್ತು ಮನುಷ್ಯನಿಗೆ ಅದು ಕಾಮನ್ ಅನಿಸಿಹೋಗಿದೆ. ಇತ್ತೀಚೆಗೆ ಪೊಲೀಸ್ ಸ್ಟೇಷನ್ನೊಂದಕ್ಕೆ ಹೋಗಿದ್ದೆ. ಸೈಬರ್ ಕ್ರೈಮ್ ವಿಭಾಗ. ಅಸಹಾಯಕ ವೃದ್ಧರಿಂದ ಸಾಫ್ಟ್‌ʼವೇರ್ ಟೆಕ್ಕೀಗಳ ತನಕ ಹತ್ತಾರು ಜನ ಪೊಲೀಸರ ಎದುರು ತಲೆ ಮೇಲೆ ಕೈ ಹೊತ್ತು ನಿಂತಿದ್ದರು. ಸೈಬರ್ ವಂಚನೆಯಿಂದ ಹಣ ಕಳೆದುಕೊಂಡವರು. ಐವತ್ತು ಸಾವಿರದಿಂದ ಐದು ಕೋಟಿ ತನಕ ಕಳೆದುಕೊಂಡವರು ಅಲ್ಲಿದ್ದರು

ಪದಸಾಗರ

ಮನುಷ್ಯನ ಸಂವೇದನೆಗಳು ದಿನದಿಂದ ದಿನಕ್ಕೆ ಜಡ್ಡುಗಟ್ಟಿ ಹೋಗ್ತಾ ಇವೆಯಾ? ಸಾವಿಗೆ, ನೋವಿಗೆ ಅವಮಾನಕ್ಕೆ, ಅತ್ಯಾಚಾರಕ್ಕೆ, ಮೋಸಕ್ಕೆ, ಕೊಲೆಗೆ ಎಲ್ಲದಕ್ಕೂ ಒಂದು ನಿರ್ಲಿಪ್ತ ಪ್ರತಿಕ್ರಿಯೆ ಕೊಡು ವಷ್ಟು ನಮ್ಮ ಮನಸುಗಳು ಕಗುತ್ತಿದೆಯಾ? ಈ ಎಲ್ಲವೂ ಅತಿ ಅನಿಸುವಷ್ಟು ನಮ್ಮ ಕಣ್ಣುಕಿವಿಗಳಿಗೆ ತಲುಪುತ್ತಿರುವುದರಿಂದ ಇವೆಲ್ಲವೂ ಸಾಮಾನ್ಯ ಎಂಬ ಮನಸ್ಥಿತಿ ನಮ್ಮಲ್ಲಿ ಹುಟ್ಟಿಕೊಂಡಿದೆಯಾ? ಹುಟ್ಟಿದ ಮನುಷ್ಯ ಸಾಯಬೇಕು ಅನ್ನುವಷ್ಟು ನಾರ್ಮಲ್ ಆಗಿ ಹುಟ್ಟಿದ ಮನುಷ್ಯ ಕೊಲೆ ಯಾಗಲೇಬೇಕು, ಹೆಣ್ಣು ಅಂದಮೇಲೆ ಅತ್ಯಾಚಾರ ನಡೆಯೋದು ಸಹಜ, ಹಣ ಇರೋವ್ನು ಅಂದ ಮೇಲೆ ಅವನನ್ನು ದೋಚುವುದು ಸಹಜ, ರಾಜಕಾರಣಿ ಅಂದ ಮೇಲೆ ಅವನು ಭ್ರಷ್ಟನಾಗಿರುವುದು ಪ್ರಕೃತಿ ನಿಯಮ..

ಸೋಷಿಯಲ್ ಮೀಡಿಯಾ ಅಂದಮೇಲೆ ಅಲ್ಲಿ ವೈಯಕ್ತಿಕ ದಾಳಿ, ಕೆಟ್ಟ ಬಯ್ಗುಳ ಕಾಮನ್.. ಹೀಗೆ ನಾವು ಎಲ್ಲವನ್ನೂ ಕಾಮನ್ ಬಿಡು ಎಂಬ ಸ್ಥಿತಿ ತಲುಪುತ್ತಿದ್ದೇವಾ? ವ್ಯವಸ್ಥೆಯೂ ನಮ್ಮನ್ನು ಹಾಗೆ ಅಸಹಾಯ ಕತೆಗೆ ತಳ್ಳಿ ಗಟ್ಟಿಗೊಳಿಸುತ್ತಿದೆಯಾ?

ಇಂಥ ಹಲವು ಪ್ರಶ್ನೆಗಳು ನನ್ನಲ್ಲಿ ಪದೇಪದೆ ಹುಟ್ಟಿ ಸಾಯುತ್ತವೆ. ನಾವು ಯಾವ ಸಾವಿಗೂ ಈಗ ತಿಂಗಳು ಗಟ್ಟಲೆ ಬಿಡಿ ದಿನಗಟ್ಟಲೆ ಕೂಡ ಮರುಗುತ್ತಿಲ್ಲ, ಕೊರಗುತ್ತಿಲ್ಲ. ಫೇಸ್‌ಬುಕ್ಕನ್ನೇ ಉದಾ ಹರಣೆಯಾಗಿ ತೆಗೆದುಕೊಂಡರೆ, ಯಾರದ್ದೋ ಸಾವಿಗೆ ಸೆಕೆಂಡುಗಳಷ್ಟು ಮರುಗಿ, ಕಮೆಂಟ್ ಹಾಕಿ ಹೆಬ್ಬೆರಳಿಂದ ಸ್ಕ್ರೀನ್ ಎಳೆದ ಮರುಕ್ಷಣ ಯಾವುದೋ ಜೋಕಿಗೆ ನಗುವಷ್ಟು ಕ್ಷಣಿಕವಾಗಿ ಹೋಗಿವೆ ನಮ್ಮ ಭಾವನೆಗಳು. ಒಂದು ಭಾವನೆಯಲ್ಲಿ ಒಂದಷ್ಟು ಹೊತ್ತು ಮುಳುಗಲಾಗದ ಚಂಚಲತೆ ಯನ್ನು ಜಗತ್ತು ನಮ್ಮ ಮೇಲೆ ಹೇರಿಟ್ಟು ಬಿಟ್ಟಿದೆ. ಅದರಿಂದ ಬಿಡಿಸಿಕೊಳ್ಳಲೂ ಆಗದ ಅನಿವಾರ್ಯತೆ.

ಇದನ್ನೂ ಓದಿ: Naveen Sagar Column: ಸೆಂಚುರಿ ಹೊಡೆದ ಬಾಣಂತಿ, ಮಾರ್ಟಿನಾ ಎಂಬ ಗಟ್ಟಿಗಿತ್ತಿ!

ಪ್ರತಿಯೊಂದು ವಿಷಯವೂ ಇನ್ನೊಬ್ಬರ ಪಾಲಿಗೆ ಕಂಟೆಂಟ್. ಎಷ್ಟೋ ಸಲ ಖುದ್ದು ಆ ಘಟನೆಯ ಪಾತ್ರಧಾರಿಗಳಿಗೂ ಅದೊಂದು ಕಂಟೆಂಟ್. ಪ್ರಪಂಚದ ತುಂಬ ಒಂದು ಅಸೂಕ್ಷ್ಮತೆ ತಾಂಡವ ವಾಡುತ್ತಿದೆ ಎಂಬ ಭಾವ. ದಿನವೂ ಸಾಯುವ ಜಗತ್ತಿಗೋಸ್ಕರ ಯಾಕಳಬೇಕು ಎಂಬ ಒರಟುತನ.

ದಶಕಗಳ ಹಿಂದೆ ಒಂದು ಸಿನಿಮಾ ಬಂದಿತ್ತು. ಗಣೇಶನ ಗಲಾಟೆ ಅಂತ. ಅದರಲ್ಲಿ ಕಾಂಟ್ರ್ಯಾಕ್ಟ್ ಕಿಲ್ಲರ್ ಮನೆಗೆ ಬರುವ ಒಬ್ಬ ಪಾತ್ರಧಾರಿ, ಮನೆ ಎದುರಿರುವ ಸೆಕ್ಯೂರಿಟಿಯನ್ನು ಕೇಳ್ತಾನೆ- ‘ಏನಪ್ಪಾ ಕೊಲೆಗಾರರು ಇದಾರಾ?’ ಅದಕ್ಕೆ ಬಹಳ ತಣ್ಣಗೆ, ಕ್ಯಾಶುಯಗಿ ಸೆಕ್ಯೂರಿಟಿ ಉತ್ತರಿಸುತ್ತಾನೆ- ‘ಇಲ್ಲೇ ಕೊಲೆ ಮಾಡೋಕ್ ಹೋಗಿದಾರೆ. ಬರ್ತಾರೆ ಕೂತ್ಕೊಳಿ’!

ಅಂದಿಗೆ ಕಾಲ್ಪನಿಕ ಹಾಸ್ಯವಾಗಿದ್ದ ಇದು, ಇಂದು ವಾಸ್ತವದ ಭಾಗವಾಗಿದೆ ಮತ್ತು ಮನುಷ್ಯನಿಗೆ ಅದು ಕಾಮನ್ ಅನಿಸಿ ಹೋಗಿದೆ. ಇತ್ತೀಚೆಗೆ ಪೊಲೀಸ್ ಸ್ಟೇಷನ್ನೊಂದಕ್ಕೆ ಹೋಗಿದ್ದೆ. ಸೈಬರ್ ಕ್ರೈಮ್ ವಿಭಾಗ. ಅಸಹಾಯಕ ವೃದ್ಧರಿಂದ ಸಾಫ್ಟ್‌ʼವೇರ್ ಟೆಕ್ಕೀಗಳ ತನಕ ಹತ್ತಾರು ಜನ ಪೊಲೀಸರ ಎದುರು ತಲೆ ಮೇಲೆ ಕೈ ಹೊತ್ತು ನಿಂತಿದ್ದರು. ಸೈಬರ್ ವಂಚನೆಯಿಂದ ಹಣ ಕಳೆದುಕೊಂಡವರು. ಐವತ್ತು ಸಾವಿರದಿಂದ ಐದು ಕೋಟಿ ತನಕ ಕಳೆದುಕೊಂಡವರು ಅಲ್ಲಿದ್ದರು. ಪೊಲೀಸರಿಗೆ ಫೈನಾನ್ಶಿ ಯಲ್ ಕ್ರೈಮ್ ಪ್ರಕರಣಗಳು ಎಷ್ಟು ಕಾಮನ್ ಆಗಿ ಹೋಗಿವೆ ಅಂದರೆ, ಯಾವೊಂದು ಕೇಸ್ ಕುರಿತೂ ಅವರಲ್ಲಿ ಒಂದು ಶಾಕ್, ಅಚ್ಚರಿ, ಬೇಸರ ಇಲ್ಲವೇ ಇಲ್ಲ.

6.2 ಒ

ಒಂದು ಗೇಲಿಯ ಧಾಟಿಯಲ್ಲಿ.. ‘ಎಷ್ಟು ಹೋಯ್ತು? ಎಷ್ಟು ನಾಮ ಬಿತ್ತು? ಮರ್ತ್ ಬಿಡಿ.. ಬುದ್ಧಿ ಇಲ್ವಾ? ನಿಮ್ಮಂಥವ್ರು ಇರೋ ತನಕ ಮೋಸ ನಡೀತಾನೇ ಇರತ್ತೆ ಬಿಡಿ, ಇದು ಹೋಯ್ತು ಅಂದ್ಕೊಳಿ.. ಇನ್ಮುಂದೆ ಹುಷಾರಾಗಿರಿ ಅಷ್ಟೆ. ಯಾವ್ದಕ್ಕೂ 1930ಗೆ ಒಂದು ಕಂಪ್ಲೇಂಟ್ ಹಾಕಿ ಹೋಗಿ’ ಅಂತ ತಣ್ಣಗೆ ಹೇಳಿ ಸಾಗಹಾಕ್ತಾ ಇದ್ದರು. ಪೊಲೀಸರು ಒಂದು ಹಂತಕ್ಕೆ ನಿಷ್ಠುರವಾಗಿ, ನಿರ್ಲಿಪ್ತವಾಗಿ ಇರುವುದು ಅಗತ್ಯ. ನಿತ್ಯವೂ ಇಂಥ ಸಾವಿರ ಪ್ರಕರಣ ನೋಡಿದಾಗ, ಸ್ಮಶಾನದಲ್ಲಿ ಹೆಣ ಸುಡುವವನಿಗೆ ಬರುವಂಥ ಕಲ್ಲುತನ ಬರುವುದೂ ಸಹಜವೇ. ಆದರೆ ರಕ್ಷಣೆ, ನ್ಯಾಯ ಕೇಳಿ ಬರುವವರಿಗೆ ಸಿಗುವ ಸಂದೇಶವೇನು?

ಇನ್ನೊಂದು ಕೇಸ್ ಬಂದಿತ್ತು. ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್ ಮಾಡಿಕೊಂಡು ಒಬ್ಬಾತನ ನಿರಂತರ ಚಾರಿತ್ರ್ಯವಧೆ. ಆತ ಕೊನೆಯ ಹಾದಿ ಎಂಬಂತೆ ಪೊಲೀಸರ ಎದುರು ಬಂದು ನಿಂತಿದ್ದ. ಆತನ ಫೋಟೋಗಳನ್ನು ಸಭ್ಯ ಹೆಣ್ಣುಮಕ್ಕಳ ಫೋಟೋ ಜೊತೆ ಇರುವಂತೆ ಮಾ- ಮಾಡಿ ಅದನ್ನು ಅವರ ಮುಖಗಳಿಗೆ ಅಶ್ಲೀಲ ಫೋಟೋಗಳ ದೇಹ ಹಚ್ಚಿ, ಕೆಟ್ಟಕೊಳಕ ಶಬ್ದಗಳಿಂದ ನಿಂದಿಸುವ ಪೋ‌ಸ್ಟ್‌ʼಗಳನ್ನು ಫೋಕ್ ಅಕೌಂಟ್‌ನಿಂದ ತೇಲಿ ಬಿಡಲಾಗುತ್ತಿತ್ತು.

ಬ್ಲಾಕ್ ಮಾಡಿದರೆ ಮತ್ತೊಂದು ಫೇಕ್ ಅಕೌಂಟ್ ಓಪನ್. ಅದರಿಂದ ಮತ್ತದೇ ಅಶ್ಲೀಲ ನಿಂದನೆಯ ಪೋಸ್ಟ್. ಪರಿಚಿತರಿಗೆ, ಕಾಮನ್ ಫ್ರೆಂಡ್‌ಗಳಿಗೆ ಎಲ್ಲರಿಗೂ ತಲುಪುವಂತೆ ಎಡೆ ವಾಲ್ ಪೋಸ್ಟರ್‌ ನಂತೆ ಅಂಟಿಸುತ್ತಾ ಹೋಗುವುದು. ಸತತ ಒಂದು ವರ್ಷದಿಂದ ಇದನ್ನು ಸಹಿಸಿಕೊಂಡು, ಪೊಲೀಸರ ಸಹಾಯ ಇಲ್ಲದೆಯೇ ನಿವಾರಿಸಿಕೊಳ್ಳಲು ಪ್ರಯತ್ನಿಸಿ ಅಂತಿಮವಾಗಿ ಆತ ಪೊಲೀಸರ ಮೊರೆಹೊಕ್ಕಿದ್ದ. ಆದರೆ ಪೊಲೀಸರು ಆತನ ಕೇಸಿಗೆ ಕೊಟ್ಟ ರಿಯಾಕ್ಷನ್ ಏನು ಗೊತ್ತಾ? ‘ಸೋಷಿ ಯಲ್ ಮೀಡಿಯಾದಲ್ಲಿ ಇವೆಲ್ಲ ಕಾಮನ್ ಕಣ್ರೀ.. ಇಂಥದ್ದಕ್ಕೆಲ್ಲ ಕೇಸ್ ಹಾಕ್ತಾ ಹೋದ್ರೆ ಮುಗಿಯೋದಿಲ್ಲ. ಇಗ್ನೋರ್ ಮಾಡ್ರಿ. ಬ್ಲಾಕ್ ಮಾಡ್ರಿ ಇಲ್ಲಾಂದ್ರೆ ಸೋಷಿಯಲ್ ಮೀಡಿಯಾದಿಂದ ದೂರ ಇರಿ.’ ಪೊಲೀಸರಿಗೆ ಇದು ಕಾಮನ್ ಇರಬಹುದು. ಆದರೆ ಒಂದು ವರ್ಷ ಅದರಿಂದ ನೊಂದಾತನಿಗೆ, ಮಾನಹಾನಿಗೆ ಒಳಪಟ್ಟವನಿಗೆ, ಮಾನಸಿಕ ಕಿರಿಕಿರಿ ಅನುಭವಿಸಿದವನಿಗೆ, ನ್ಯಾಯ ಬೇಡವೇ?

ಆತ ತಿರುಗಿ ಕೂಗಾಡಿದ್ದ. ‘ದರ್ಶನ್- ರೇಣುಕಾಸ್ವಾಮಿ ಥರದ ಪ್ರಕರಣಗಳು ಮತ್ತೆ ಮತ್ತೆ ಆಗೋಕೆ ಪೊಲೀಸ್ ವ್ಯವಸ್ಥೆಯೇ ಕಾರಣ ಅಂತ ನಂಗೆ ಸ್ಪಷ್ಟವಾಯ್ತು. ತೇಜೋವಧೆ, ಅಶ್ಲೀಲ ಬಯ್ಗುಳ, ಸೈಬರ್ ವಂಚನೆ, ಧಮಕಿ, ಇದ್ಯಾವುದಕ್ಕೂ ನಿಮ್ಮಿಂದ ಪರಿಹಾರ ಇಲ್ಲ ಅಂದ್ರೆ ಏನು ಮಾಡಬೇಕು? ನಾವೇ ಒಂದು ಗತಿ ಕಾಣಿಸಬೇಕು. ಆದರೇನು ಮಾಡೋದು. ಅಂಥ ಎಕ್ಸ್‌ʼಟ್ರೀಮ್ ಸ್ಟೆಪ್ ತಗೊಳೋ ಹಾಗೆ ಮಾಡಿ, ಕೊನೆಗೆ ನಮ್ಮನ್ನೇ ಜೈಲಿಗಟ್ಟುತ್ತೆ ನಿಮ್ಮ ಕಾನೂನು. ಒಂದೋ ನಾವು ತಪ್ಪು ಮಾಡಿ ಜೈಲಿಗೆ ಹೋಗಬೇಕು ಅಥವಾ ಇವರ ತೇಜೋವಧೆ ತಾಳಲಾಗದೇ ಆತ್ಮಹತ್ಯೆ ಮಾಡ್ಕೋಬೇಕು. ಅಷ್ಟೇ ಅಲ್ವಾ ಪರಿಹಾರ?’

ಎಲ್ಲವನ್ನೂ ಗಮನಿಸುತ್ತಾ ನಿಂತಿದ್ದೆ. ಅವನ ಮಾತಲ್ಲಿ ಸತ್ಯವಿದೆಯಲ್ಲವಾ ಅನಿಸಿತು. ಪೊಲೀಸ ರಿಗೂ ಅವರದೇ ಆದ ಮಿತಿ ಇದೆ. ಅಸಹಾಯಕತೆ ಇದೆ. ಆದರೆ ಸಾಂತ್ವನ ಹೇಳಿ, ಭರವಸೆ ನೀಡಿ ಕಳಿಸಲೂ ಆಗದಷ್ಟು ಕಗಿzರಲ್ಲ ಎಂದು ಬೇಸರವಾಯ್ತು.

ಇತ್ತ ಅದೇ ಸಮಯದಲ್ಲಿ ಕೇತನ್ ಅಗರವಾಲ್ ಹತ್ಯೆ ಪ್ರಕರಣ ಎಡೆ ಚರ್ಚೆಯಾಗುತ್ತಿತ್ತು. ಒನ್ಸ್ ಅಗೇನ್ ಅದು ನ್ಯೂಸ್ ಚಾನೆಲ್ಲುಗಳಿಂದ ಹಿಡಿದು ಯೂಟ್ಯೂಬರ್ಸ್, ಫೇಸ್‌ಬುಕ್ ಕಂಟೆಂಟ್ ಕ್ರಿಯೇಟರ್ಸ್ ತನಕ ಎಲ್ಲರಿಗೂ ಅದೊಂದು ಕಂಟೆಂಟ್. ಸುದ್ದಿ ಜಗತ್ತು ಈಗಂತೂ ದಿನವೂ ಇಂಥದ್ದೊಂದು ಸುದ್ದಿಗಾಗಿ ರಣಹದ್ದಿನಂತೆ ಕಾದು ಕೂತಿರುತ್ತದೆ. ಹೆಣ ಬೀಳದಿದ್ದರೆ ನಮಗೆ ಊಟವಿಲ್ಲ ಎಂಬಂತೆ. ಮೊನ್ನೆ ಗಾಯಕಿ ಎಸ್ ಜಾನಕಿ ನಿಧನದ ಸುದ್ದಿ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಭರ್ಜರಿ ಊಟ ಸಿಕ್ಕ ಸಂಭ್ರಮ. ಅದರ ಮಧ್ಯ ಇನ್ನೊಬ್ಬ ಮಾಧ್ಯಮಜೀವಿ, ಗಾಯಕಿಯ ಅಂತ್ಯ ಸಂಸ್ಕಾರ ಮುಗಿದ ನಂತರ ಇನ್ನೊಂದು ಸುದ್ದಿ ಹರಿಬಿಡುತ್ತಾನೆ. ಜಾನಕಿ ಸತ್ತಿರುವುದು ಸುಳ್ಳು ಅಂತ. ನಿಜ ಏನೆಂಬುದು ಗೊತ್ತಿದ್ದರೂ ಬೇಕಂತಲೇ ಇಂಥದ್ದೊಂದು ವ್ಯತಿರಿಕ್ತ ಸುದ್ದಿ ಮಾಡಿ ವೈರಲ್ ಆಗುವ ಹಪಾಹಪಿ. ವರ್ಷಗಳ ಹಿಂದೆ ತೀರಿಕೊಂಡ ಜಯಂತಿ, ಕಾಶಿ ಮುಂತಾದ ಸೆಲೆಬ್ರಿಟಿಗಳನ್ನು ಫ್ರೆಶ್ ಆಗಿ ಮತ್ತೆ ಸಾಯಿಸಿ ಶ್ರದ್ಧಾಂಜಲಿ ಫೋಟೋ ಹಾಕುತ್ತಾರೆ. ಅದಕ್ಕೊಂದಿಷ್ಟು ಜನ ಉಗಿದು ಉಪ್ಪು ಹಾಕುತ್ತಿದ್ದರೆ, ಇನ್ನೊಂದಿಷ್ಟು ಮಂದಿ ಹಿಂದುಮುಂದು ನೋಡದೆ RIP RIP ಎಂದು ಬರೆದು ಹೋಗುತ್ತಿರುತ್ತಾರೆ.

ಕೇತನ್ ಅಗರವಾಲ್ ಹತ್ಯೆ ಜಗತ್ತಿನ ಪಾಲಿಗೆ ಒಂದು ಸಿನಿಮಾ ಆಗಬಲ್ಲ ಸರಕು. ಕ್ರೈಮ್ ಸೀರೀಸ್‌ಗೆ ಹೇಳಿ ಮಾಡಿಸಿದ ಘಟನೆ.. ಇನ್ನೂ ಎರಡು ಹೆಜ್ಜೆ ಮುಂದೆ ಹೋದರೆ, ಆತನನ್ನು ತಳ್ಳಿ ಕೊಂದ ಜಾಗ ವೈರಲ್ ಇನ್ಸ್ಟಾಗ್ರಾಮ್ ಫೋಟೋ ಸ್ಪಾಟ್! ಆ ಜಾಗದಲ್ಲಿ ಒಬ್ಬಾಕೆ ತಳ್ಳುವಂತೆ, ಮತ್ತೊಬ್ಬ ಬೀಳು ವಂತೆ ಫೋಟೋ ತೆಗೆಸಿಕೊಳ್ಳುವುದು ವೈರಲ್ ಟ್ರೆಂಡ್. ಎತ್ತ ಸಾಗುತ್ತಿದೆ ಜಗತ್ತು? ನಮಗೇನಾಗುತ್ತಿದೆ?

ಪ್ರತಿ ದಿನ ಒಂದು ಸಾವು. ಎರಡು ದಿನ ಅದೇ ಬ್ರೇಕಿಂಗ್ ನ್ಯೂಸ್. ನಂತರ ಅದೇ ವಾಟ್ಸಾಪ್ ಫಾರ್ವರ್ಡ್. ಆನಂತರ ಅದು ಸಿನಿಮಾ ಕಂಟೆಂಟ್. ಆಮೇಲೆ? ಇನ್ನೊಂದು ಸಾವಿಗೆ ಕಾಯೋದು!

ಕೊಲೆ ಎಂಬುದು ಇಷ್ಟೊಂದು ಸಲೀಸು ವಿಷಯಗಳಾಗಿ ಹೋದವೇ? ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಸೇರಿ ಮಾಡಿದ್ದಾರೆ ಎನ್ನಲಾಗಿರುವ ಈ ಕೊಲೆ ಆ ಕ್ಷಣದಲ್ಲಿ ಸಂಭವಿಸಿರುವುದಲ್ಲ. ದಿನಗಟ್ಟಲೆ ವಾರಗಟ್ಟಲೆ ಪ್ರೊಫೆಶನಲ್ ಕಿಲ್ಲರ್‌ಗಳ ಮಾದರಿಯಲ್ಲಿ ಪ್ಲಾನ್ ಮಾಡಿದ ಕೊಲೆಗಳಿವು. ಯಾರೋ ಒಬ್ಬರು ನಮ್ಮ ಪಕ್ಕದಲ್ಲಿ ಕುಳಿತು, ನಮ್ಮ ಜೊತೆ ಊಟ ಮಾಡುತ್ತಾ, ನಮ್ಮ ಜೊತೆ ನಗುತ್ತಾ, ನಮ್ಮ ಜೊತೆ ರೂಮ್ ಹಂಚಿಕೊಳ್ಳುತ್ತಾ, ನಮ್ಮನ್ನೇ ಕೊಲ್ಲಲು ಹೊಂಚು ಹಾಕುತ್ತಿದ್ದಾರೆ ಅಂತ ಇಮ್ಯಾಜಿನ್ ಆದರೂ ಮಾಡಿಕೊಳ್ಳಲು ಸಾಧ್ಯವಾ? ಮನುಷ್ಯನ ಬೇಸಿಕ್ ನಂಬಿಕೆಯನ್ನೇ ಹೊಡೆದುಹಾಕುವ ವಿಷಯವಲ್ಲವೇ ಇದು? ಇಂಥದ್ದೊಂದು ವಿಚಾರವನ್ನು ಕೂಡ ನಾವು ಕಂಟೆಂಟ್‌ನಂತೆ ನೋಡುವಷ್ಟು ಅಸೂಕ್ಷ ರಾಗಿ ಹೋಗಿದ್ದಾದ್ರೂ ಹೇಗೆ? ನಾವು ಸೆನ್ಸಿಬಲಿಟಿ ಮರೆತು ಸೆನ್ಸೇಷನಲೈಸ್ ಮಾಡುವ ಹುಕಿಗೆ ಬಿದ್ದಿದ್ದೇವೆ ಅನಿಸುತ್ತಿಲ್ಲವೇ? ಪ್ರತಿ ಹತ್ಯೆ, ಸಾವು, ಇನ್ನಿತರ ಘಟನೆಗಳಿಗೆ ನಾವು ತನಿಖಾಧಿಕಾರಿಗಳಾಗುತ್ತಿದ್ದೇವೆ. ಮನಃಶಾಸ್ತ್ರಜ್ಞರಾಗುತ್ತಿದ್ದೇವೆ. ನ್ಯಾಯಾಧೀಶ ರಾಗುತ್ತಿದ್ದೇವೆ. ಆ ಕ್ಷಣದ ತಜ್ಞರಾಗುತ್ತಿದ್ದೇವೆ. ಒಂದು ಕ್ರಿಕೆಟ, ಪೊಲಿಟಿP ಅಥವಾ ಸಿನಿಮಾ ಕುರಿತು ಹೇಗೆ ಚರ್ಚೆ ಮಾಡುತ್ತೇವೆಯೋ ಹಾಗೆ ಇದೂ ಒಂದು ಹೊತ್ತಿನ ಚರ್ಚೆಯ ವಿಷಯವಾಗಿಸಿ ಕೊಂಡು ಮುಂದಿನ ಹೆಣಕ್ಕೆ ಕಾಯುತ್ತಿದ್ದೇವೆ. ಮೊಬೈಲ್ ಸ್ಕ್ರೀನ್ ಸ್ಕ್ರೋಲ್ ಮಾಡಲು ಶುರುವಿಡುತ್ತೇವೆ.

ಕೊಲೆಗಾರ ತನ್ನ ಮನುಷ್ಯತ್ವವನ್ನು ಒಮ್ಮೆ ಕಳೆದುಕೊಳ್ಳುತ್ತಾನೆ. ನಾವು ಅದನ್ನು ಇನ್ಸ್ಟಾಲ್‌ ಮೆಂಟ್‌ಗಳಲ್ಲಿ ಕಳೆದುಕೊಳ್ಳುತ್ತೇವೆ. ಅಷ್ಟೇ ವ್ಯತ್ಯಾಸ. ಸಾವು, ಕ್ರೈಮ, ವಂಚನೆ ಇವೆಲ್ಲವನ್ನೂ ಕಂಟೆಂಟ್ ಎಂಬಂತೆ ಜಗತ್ತು ಎಂಜಾಯ್ ಮಾಡುತ್ತಿದೆ ಅಂದರೆ ಯೂನಿವರ್ಸ್ ಅದನ್ನೇ ಕೊಡುತ್ತಾ ಹೋಗುತ್ತದೆ. ಡಿಜಿಟಲ್ ಜಗತ್ತು ಮಾಡುತ್ತಿರುವುದು ಅದನ್ನೇ ಅಲ್ವೇ? ನಾವೇನು ನೋಡುತ್ತೀವೋ ಅದನ್ನೇ ಸರ್ವ್ ಮಾಡುತ್ತದೆ. ಹಾಗೆಯೇ ಅಸಲಿ ಜಗತ್ತು ಕೂಡ ನಾವು ಬಯಸುತ್ತಿರುವುದನ್ನೇ ಕೊಡುತ್ತಾ ಹೋಗುತ್ತದೆ. ಒಂದು ದಿನ ನಮ್ಮನ್ನೇ ಅದರ ಕಂಟೆಂಟ್ ಆಗಿಸಿಕೊಳ್ಳುತ್ತದೆ. ಅದು ನಮ್ಮ ಅಂತ್ಯ. ಇನ್ನೊಂದು ವರ್ಗ ಅದನ್ನು ಎಂಜಾಯ್ ಮಾಡುತ್ತಾ ತಮಗೇ ಗೊತ್ತಿಲ್ಲದಂತೆ ತಮ್ಮ ಟರ್ನ್‌ಗೆ ಕಾಯುತ್ತಿರುತ್ತದೆ. ದುರಂತ!

ನವೀನ್‌ ಸಾಗರ್‌

View all posts by this author