ಪದಸಾಗರ
ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ಅದೆಷ್ಟು ಕುಲಗೆಟ್ಟಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಕೊಡಬಹುದು. ಆದರೆ ಇದನ್ನು ಸರಿಪಡಿಸುವ ವಿಷಯ ದಲ್ಲಿ ಯಾರನ್ನು ಪ್ರಶ್ನಿಸಬೇಕು? ರಕ್ಷಣೆಗೆ ಯಾರಲ್ಲಿ ಮೊರೆ ಹೊಗಬೇಕು? ಈ ಪರಿಸ್ಥಿತಿಯಲ್ಲಿ ಮನೆ ಹೊಸ್ತಿಲಿ ನಿಂದ ಹೊರಗೆ ಕಾಲಿಟ್ಟವರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುತ್ತಾರೆ ಎಂಬುದಕ್ಕೆ ಏನು ಖಾತರಿ?
ಮೂರು ಪ್ರತ್ಯೇಕ ಘಟನೆಗಳ ಬಗ್ಗೆ ಮೊದಲು ಮಾತನಾಡ್ತೀನಿ. ಈ ಮೂರೂ ಬೆಂಗಳೂರಿನ ನಡೆದಿರುವ ಘಟನೆಗಳು.
ಘಟನೆ 1: ಮಧ್ಯಾಹ್ನ ಮೂರು ಗಂಟೆಯ ಸಮಯ. ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಕ್ಕೆ ಹೋಗುವ ಮಾರ್ಗ. ಸದಾ ವಾಹನಗಳಿಂದ ಮತ್ತು ಜನಸಂದಣಿಯಿಂದ ತುಂಬಿರುವ ರಸ್ತೆ ಯದು. ಮಂತ್ರಿ ಮಾಲ್‌ಗೆ ಕೇವಲ 150-200 ಮೀಟರ್ ದೂರವಷ್ಟೆ. ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಅರ್ಧ ಕಿಲೋಮೀಟರ್ ದೂರವಿದ್ದರೆ, ಮಲ್ಲೇಶ್ವರ ಪೊಲೀಸ್ ಠಾಣೆಗೆ ಒಂದೂವರೆ ಕಿಲೋಮೀಟರ್ ದೂರ. ಡಬಲ್ ರೋಡ್‌ನ ಒಂದು ರಸ್ತೆಯಲ್ಲಿ ದಿಢೀರ್ ಟ್ರಾಫಿಕ್ ಜಾಮ್ ಆಗುತ್ತದೆ. ರಸ್ತೆಯ ಇಕ್ಕೆಲದಲ್ಲೂ ರಾಶಿ ರಾಶಿ ಜನರು ಭಯಭೀತರಾಗಿ ನೋಡ್ತಿದ್ದಾರೆ. ನೋಡನೋಡುತ್ತಿದ್ದಂತೆ 18-20ರ ವಯಸ್ಸಿನ ಯುವಕನೊಬ್ಬ ಕಾಣಿಸಿ ಕೊಳ್ಳುತ್ತಾನೆ.
ಸ್ಲಮ್‌ನಿಂದ ಎದ್ದು ಬಂದಂತೆ ಕಾಣುವ, ರೌಡಿಸಂ ಸಿನಿಮಾದ ಪುಡಿ ವಿಲನ್‌ನಂತಿರುವ ತಮಿಳನಂತೆ ಕಾಣುತ್ತಿದ್ದಾನೆ. ಮಧ್ಯಾಹ್ನದ ಬಿಸಿಲಿಗೆ ಬೆವರಿದ್ದಾನೆ, ಕೆರಳಿದ್ದಾನೆ. ಟ್ರಾಫಿಕ್ ಯಾಕೆ ಜಾಮ್ ಆಗಿದೆ ಎಂದು ನೋಡುವಷ್ಟರಲ್ಲಿ ಸುಮಾರು ಹತ್ತು ಕೆಜಿ ತೂಕದ ದಪ್ಪ ಕಲ್ಲನ್ನೆತ್ತಿ ಒಂದು ಕಾರಿನ ವಿಂಡ್ ಶೀಲ್ಡ್ ಮೇಲೆ ಕುಕ್ಕುತ್ತಾನೆ.
ಇಡೀ ನೂರು ಮೀಟರ್ ಸುತ್ತಕ್ಕೂ ಬ್ಲಾಸ್ಟ್ ಆದಂಥ ಸೌಂಡ್ ಕೇಳುತ್ತದೆ. ಜನರೆಲ್ಲ ನೋಡು ತ್ತಿದ್ದಾರೆ. ಯಾರೊಬ್ಬರೂ ತಡೆಯೋಕಾಗಲೀ ವಿರೋಧಿಸುವುದಕ್ಕಾಗಲೀ ಹೋಗುತ್ತಿಲ್ಲ. ಶೂಟಿಂಗ್ ಇರಬಹುದಾ ಎಂದು ಸುತ್ತ ನೋಡಿದರೆ ಯಾವ ಕ್ಯಾಮೆರಾವೂ ಇಲ್ಲ.
ಸಿನಿಮಾ ತಂಡವೂ ಅಲ್ಲಿಲ್ಲ. ಮರುಕ್ಷಣವೇ ಆ ಕಲ್ಲನ್ನೆತ್ತಿ ಮತ್ತೆರಡು ಹೆಜ್ಜೆ ಬಂದು, ಹಿಂದಿ ರುವ ಇನ್ನೊಂದು ಕಾರಿನ ಮುಂಬದಿ ಗಾಜನ್ನು ಅದೇ ರೀತಿ ಪುಡಿಗಟ್ಟುತ್ತಾನೆ. ಏನು ನಡೀತಾ ಇದೆ ಅಂತ ಯೋಚಿಸಲೂ ಪುರುಸೊತ್ತು ಕೊಡದಂತೆ, ಒಂದಾದ ಮೇಲೊಂದು ಕಾರ್ ಬಳಿ ಬಂದು ಕಾರೊಳಗೆ ಇರುವವರನ್ನು ಕೆಕ್ಕರಿಸಿ ಅವರ ಕಾರ್‌ಗಳ ಗಾಜನ್ನು ಒಡೆದು ರಾಜಾರೋಷದಿಂದ ಫಿಲ್ಮಿ ಸ್ಟೈಲಿನಲ್ಲಿ ನಡೆದು ಹೋಗಿ ಬಿಡುತ್ತಾನೆ.
ಇದನ್ನೂ ಓದಿ: Naveen Sagar Column: ಜೇಬಲ್ ನಯಾಪೈಸಾ ಇಲ್ಲ ಅಂದ್ರು ಓಕೆ.. ಜೀವ್ನಾ ನಡೀತದೆ ಆಲ್ ಓಕೆ !
ಕಾರ್ ಒಳಗಿದ್ದವರು ಯಾವ ಧೈರ್ಯ ಇಟ್ಟುಕೊಂಡು ಆತನನ್ನು ತಡೆಯಲು ಹೋದಾರು? ಕಾರ್ ಮೇಲೆ ಕಲ್ಲು ಎತ್ತಿ ಚಚ್ಚುವ ಆತ, ವಿರೋಧಿಸಲು ಹೊರ ಬಂದರೆ ತಲೆ ಮೇಲೆ ಕತ್ತಿ ಹಾಕೋದಿಲ್ಲ ಅಂತ ಏನು ಗ್ಯಾರಂಟಿ? ಒಂದು ವೇಳೆ ಕಾರಲ್ಲಲ್ಲದೆ ಬೈಕಲ್ಲಿದ್ದವರ ಮೇಲೆ ಆತ ದಾಳಿ ಮಾಡಿದ್ದಿದ್ದರೆ ಅಂದು ಕನಿಷ್ಠ ಐದು ಜೀವಗಳು ಸ್ಥಳದಲ್ಲೇ ಹೋಗುತ್ತಿದ್ದ ವೇನೋ!
ಕೆಲವರು ಜೀವ ಉಳಿದ ನಿಟ್ಟುಸಿರಲ್ಲಿ ಅಲ್ಲಿಂದ ಮೊದಲು ಕಾರ್ ಚಲಾಯಿಸಿಕೊಂಡು ಹೋದರೆ, ಕೆಲವರು ಪೊಲೀಸ್ ಠಾಣೆಗೆ ಹೋದರು. ಆದರೆ ಪೊಲೀಸ್ ಠಾಣೆಯಲ್ಲಿ ಸಿಕ್ಕಿದ್ದು ನಿರಾಶಾದಾಯಕ ಪ್ರತಿಕ್ರಿಯೆ. ಜೀವ ಉಳಿದಿದೆಯಲ್ಲ.
ಹೋಗ್ರೀ ಇನ್ಶೂರೆ ಕ್ಲೈಮ್ ಮಾಡ್ಕೊಳಿ ಎಂಬ ಉಡಾಫೆಯ ಉತ್ತರ. ಅಷ್ಟು ಮಂದಿ ರಸ್ತೆ ಯಲ್ಲಿ ಶೂಟಿಂಗ್ ನೋಡಿದಂತೆ ನೋಡ್ತಾ ಇದ್ದರೂ ಸಹಾಯಕ್ಕೆ ಧಾವಿಸದೇ ಇದ್ದದ್ದಕ್ಕೆ ಕಾರಣ ಏನು? ಪೊಲೀಸರ ನಿರ್ಲಕ್ಷ್ಯದ ಪ್ರತಿಕ್ರಿಯೆಗೆ ಕಾರಣ ಏನು? ಸ್ಥಳೀಯವಾಗಿ ವಿಚಾರಿಸಿದಾಗ ಗೊತ್ತಾದದ್ದೇನಂದರೆ ಆ ಹುಡುಗರು ಗಾಂಜಾ ಮತ್ತು ಡ್ರಗ್ ಮೇಲೆ ಬದುಕುತ್ತಿರುವವರು.
ಸ್ಥಳೀಯರಾಗಲೀ ಜನಸಾಮಾನ್ಯರಾಗಲೀ ಅವರ ವಿರುದ್ಧ ಹೋಗಲು ಸಾಧ್ಯವೇ ಇಲ್ಲ. ಪೊಲೀಸರೇ ಇಂಥವರನ್ನು ಬೆಳೆಸಿಟ್ಟುಕೊಳ್ಳುತ್ತಿದ್ದಾರೆ. ಗಾಂಜಾ ವ್ಯವಹಾರದ ಹಿಂದೆ ಅವರಿದ್ದಾರೆ. ಆಗೊಮ್ಮೆ ಈಗೊಮ್ಮೆ ಹಿಡಿದಂತೆ ಮಾಡುವುದು, ಬಿಟ್ಟು ಕಳಿಸುವುದು, ಒಂದು ಕಡೆ ಸೀಜ್ ಮಾಡೋ ಗಾಂಜಾ, ಇನ್ನೊಂದು ಕಡೆ ತಂದು ಮಾರುವುದು ಇಂಥ ಹಲವು ದಂಧೆಗಳನ್ನು ಪೊಲೀಸರೇ ಮಾಡುತ್ತಿದ್ದಾರೆ. ರಾಜಕಾರಣಿಗಳಿಗೂ ಪೊಲೀಸರಿಗೂ ಗಾಂಜಾ ಗಿರಾಕಿಗಳಿಗೂ ನಂಟಿದೆ. ಹೀಗಾಗಿ ಅವರನ್ನು ತಡೆಯೋವ್ರೇ ಇಲ್ಲದಂತಾಗಿದೆ.
ಘಟನೆ 2: ಸಂಜೆ ಏಳು ಗಂಟೆ. ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ʼನಲ್ಲಿ ಬಸ್ ಹಿಡಿಯಲೆಂದು ಎಪ್ಪತ್ತೆಂಟರ ವೃದ್ಧರೊಬ್ಬರು ನಡೆದು ಹೋಗುತ್ತಿದ್ದಾರೆ. ವ್ಯಕ್ತಿಯೊಬ್ಬ ಬಂದು ವೃದ್ಧರ ಬಳಿ ನೂರು ರುಪಾಯಿ ಕೇಳುತ್ತಾನೆ. ಕೊಡುವುದಿಲ್ಲ ಎಂದಾಗ ನಿಮ್ಮನ್ನು ಆಟೋದಲ್ಲಿ ಮನೆ ತಲುಪಿಸುತ್ತೇನೆ, ನೂರು ರುಪಾಯಿ ಕೊಡಿ ಎಂದು ಆಫರ್ ಕೊಡುತ್ತಾನೆ.
ಅವನನ್ನು ನೋಡಿದರೆ ಒಳ್ಳೆಯ ವ್ಯಕ್ತಿ ಅನಿಸುವ ಯಾವ ಕುರುಹೂ ಕಾಣುವುದಿಲ್ಲ. ತಪ್ಪಿಸಿ ಕೊಂಡು ಹೋಗ್ತಾ ಇದ್ದರೆ ಹಿಂದೆ ಬೀಳುತ್ತಾನೆ. ಲಕ್ಷಾಂತರ ಜನರಿರುವ, ಹೆಜ್ಜೆ ಹೆಜ್ಜೆಗೂ ಪೊಲೀಸ್ ಇರುವ ಮೆಜೆಸ್ಟಿಕ್‌ನಲ್ಲಿ ವೃದ್ಧರನ್ನು ಬೆದರಿಸಿ ನಿಲ್ಲಿಸಿಕೊಳ್ಳುತ್ತಾನೆ.
ವೃದ್ಧರು ಸಹಾಯಕ್ಕಾಗಿ ಕೂಗುತ್ತಾರೆ. ಮೆಜೆಸ್ಟಿಕ್‌ನ ಸದ್ದಿನ ನಡುವೆ ಅವರ ಕೂಗಿಗೆ ಯಾರೂ ಕಿವಿಗೊಡುವುದಿಲ್ಲ. ಏಕಾಏಕಿ ಆಟೋವೊಂದು ಬರುತ್ತದೆ. ಆಟೋ ಡ್ರೈವರ್ ಮತ್ತು ಈ ಅಪರಿಚಿತ ಇಬ್ಬರೂ ಸೇರಿ ವೃದ್ಧರನ್ನು ಎಳೆದುಕೊಂಡು ಆಟೋದಲ್ಲಿ ತುಂಬು ತ್ತಾರೆ.
ಶರವೇಗದಲ್ಲಿ ಆಟೋ ಚಲಿಸಲಾರಂಭಿಸುತ್ತದೆ. ಕೂಗಲೂ ಆಗದಂತೆ, ತಪ್ಪಿಸಿಕೊಳ್ಳಲೂ ಸಾಧ್ಯವಾಗದಂತೆ ಹಿಡಿದುಕೊಂಡು ಮೆಜೆಸ್ಟಿಕ್ ದಾಟುತ್ತಾರೆ. ವೃದ್ಧರ ಕೈಲಿದ್ದ ಹಣ, ಮೊಬೈಲ್ ಎಲ್ಲವನ್ನೂ ಕಿತ್ತುಕೊಂಡು ದೈಹಿಕವಾಗಿ ಹಲ್ಲೆ ನಡೆಸುತ್ತಾರೆ. ಯಾವುದೋ ಒಂದು ಕ್ಷಣದಲ್ಲಿ ಜೀವ ಹೋದರೂ ಸರಿಯೆಂದು ವೃದ್ಧರು ತಮ್ಮೆಲ್ಲ ಶಕ್ತಿ ಬಳಸಿ ಆಟೋ ದಿಂದ ಜಿಗಿದೇ ಬಿಡುತ್ತಾರೆ.
ಜಿಗಿದ ವೇಗಕ್ಕೆ ಮೈಕೈ ಗಾಯಗಳಾಗುತ್ತವೆ. ಆಟೋ ನಂಬರ್ ನೋಡಲು ಸಾಧ್ಯವಾಗುವು ದಿಲ್ಲ. ಆಟೋ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಮೊಬೈಲ್ ಮತ್ತು ಹಣದೊಂದಿಗೆ.
ಘಟನೆ 3: ಕುಕ್ಕೆ ಸುಬ್ರಹ್ಮಣ್ಯದಿಂದ ನಡುರಾತ್ರಿ ಮೂರರ ಹೊತ್ತಿಗೆ ಕುಟುಂಬವೊಂದು ಬಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇಳಿಯುತ್ತದೆ. ಆಟೋ ಚಾಲಕರು ಎಂದಿನಂತೆಯೇ ಬಂದು ಕುಟುಂಬವನ್ನು ಮುತ್ತುತ್ತಾರೆ. ಓಲಾ, ಊಬರ್ ಬುಕ್ ಮಾಡಲೂ ಬಿಡದಂತೆ ಕಾಡುತ್ತಾರೆ. ಅವರಲ್ಲೊಬ್ಬ ‘ಓಲಾದಲ್ಲೂ ಡಬಲ್ ಮೀಟರ್‌ನಷ್ಟೇ ಆಗುತ್ತದೆ. ಡಬಲ್ ಕೊಡಿ ಸಾಕು’ ಎಂದು ಹೇಳುತ್ತಾನೆ. ಆಟೋದಲ್ಲಿ ಓಡಾಡಿ ಅರಿವಿರುವ ಕುಟುಂಬದ ಯಜಮಾನನಿಗೆ ಮೆಜೆಸ್ಟಿಕ್‌ನಿಂದ ತನ್ನ ಮನೆಗೆ ಎಷ್ಟಾಗಬಹುದೆಂಬ ಅಂದಾಜಿರುತ್ತದೆ.
ಸಾಮಾನ್ಯವಾಗಿ ಮೆಜೆಸ್ಟಿಕ್‌ನಿಂದ ಇವರಿರುವ ಜಾಗಕ್ಕೆ 175 ರುಪಾಯಿ ಆಗುತ್ತಿತ್ತು. ಹೀಗಾಗಿ ಡಬಲ್ ಅಂದರೂ 400 ರುಪಾಯಿ ಕೊಡಲು ಆತ ಮಾನಸಿಕವಾಗಿ ಸಿದ್ಧನಾಗಿದ್ದ. ಆದರೆ ಮೀಟರ್ ತೋರಿಸಿದ್ದು ಬರೋಬ್ಬರಿ 333 ರುಪಾಯಿ. ಚಾಲಕ 670 ರುಪಾಯಿ ಡಿಮ್ಯಾಂಡ್ ಮಾಡಲಾರಂಭಿಸುತ್ತಾನೆ.
ಪ್ರಶ್ನಿಸಿದರೆ ತಿರುಗಿ ಬೀಳಲಾರಂಭಿಸಿದ ಅವನ ವರ್ತನೆಗೆ ಹೆದರಿ, ಹೆಂಡತಿ ಮಕ್ಕಳೆದುರು ಈ ನಡುರಾತ್ರಿಯಲ್ಲಿ ಜಗಳ ಬೇಡವೆಂದು ನಾಲ್ಕು ಪಟ್ಟು ಹಣ ಕೊಡಲು ಒಪ್ಪುತ್ತಾನೆ.
ಡಿಜಿಟಲ್ ಪೇಮೆಂಟ್‌ಗೆ ಒಪ್ಪದೇ ನಗದು ಹಣಕ್ಕೆ ಒತ್ತಡ ಹೇರುತ್ತಾನೆ ಆಟೋ ಚಾಲಕ. ಹಣ ತೆಗೆದು ಎಣಿಸಿಕೊಡಲು ಟಾರ್ಚ್‌ಲೈಟ್ ಆನ್ ಮಾಡಿದರೆ, ಆಟೋದ ಗ್ಯಾಸ್ ಬರ್ಸ್ಟ್ ಆಗುತ್ತದೆ ಎಂದು ಗದರಿ ಟಾರ್ಚ್ ಆಫ್ ಮಾಡಿಸುತ್ತಾನೆ.
ಹೇಳಿದಷ್ಟು ಹಣ ಕೊಟ್ಟ ನಂತರವೂ ಅವನ ಸುಲಿಗೆ ನಿಲ್ಲುವುದಿಲ್ಲ. ‘ನೀನು ಕೊಟ್ಟದ್ದು ಇನ್ನೂರೇ ರುಪಾಯಿ’ ಎಂದು ಸುಳ್ಳು ಹೇಳಿ ಬೆದರಿಸುತ್ತಾನೆ. ಆಟೋ ನಂಬರ್ ನೋಟ್ ಮಾಡಿಕೊಳ್ಳಲು ಹೋದರೆ ಅವರೆದುರು ಅಶ್ಲೀಲವಾಗಿ ಕುಣಿದು, ವಿಚಿತ್ರವಾಗಿ ವರ್ತಿಸಿ ಭಯ ಮೂಡಿಸುತ್ತಾನೆ. ನಿರ್ಜನ ರಸ್ತೆಯಲ್ಲಿ ನಡುರಾತ್ರಿಯಲ್ಲಿ ಜೀವಕ್ಕೇನಾದರೂ ಅಪಾಯ ಉಂಟು ಮಾಡಿದರೆ ಎಂದು ಹೆದರಿ ಅವನು ಕೇಳಿದಷ್ಟು ಹಣ ಕೊಟ್ಟು ಕುಟುಂಬ ಪ್ರಾಣ ಕೈಲಿ ಹಿಡಿದುಕೊಂಡು ಮನೆ ಸೇರಿಕೊಳ್ಳುತ್ತದೆ.
ಈ ಮೂರು ಘಟನೆಗಳು ನನ್ನ ಸುತ್ತ ನಡೆದಿರುವ ಘಟನೆಗಳಾದ್ದರಿಂದ ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ. ಬೆಂಗಳೂರಿನ ‘ಲಾ ಆಂಡ್ ಆರ್ಡರ್’ ಯಾವ ಹಂತಕ್ಕೆ ಕುಲಗೆಟ್ಟಿದೆ ಎಂಬುದಕ್ಕೆ ಇನ್ನೇನಾದರೂ ಪುರಾವೆಗಳು ಬೇಕೇ? ಯಾರನ್ನು ಪ್ರಶ್ನಿಸಬೇಕು? ಯಾರಲ್ಲಿ ರಕ್ಷಣೆಗೆ ಮೊರೆ ಹೊಗಬೇಕು? ಈ ಪರಿಸ್ಥಿತಿಯಲ್ಲಿ ಮನೆ ಹೊಸ್ತಿಲಿನಿಂದ ಹೊರಗೆ ಕಾಲಿಟ್ಟ ವರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುತ್ತಾರೆ ಎಂಬುದಕ್ಕೆ ಏನು ಖಾತರಿ? ರಾಜಕೀಯವನ್ನು ಬದಿಗಿಟ್ಟೇ ನೋಡುವುದಾದರೂ ನಾವು ಪ್ರಶ್ನಿಸಬೇಕಿರುವುದು ಗೃಹ ಮಂತ್ರಿಯನ್ನೇ. ಪೊಲೀಸ್ ಇಲಾಖೆ ಇರುವುದು ಅವರದ್ದೇ ಸುಪರ್ದಿಯಲ್ಲಿ. ಆದರೆ ಹೋಮ್ ಮಿನಿಸ್ಟರ್ ನಿಜಕ್ಕೂ ಸಮರ್ಥರಿದ್ದಾರಾ? ಕಳೆದ ಮೂರು ವರ್ಷದಲ್ಲಿ ಇವರು ಹೋಮ್ ಮಿನಿಸ್ಟರೋ ಅಥವಾ ವರ್ಕ್ ಫ್ರಮ್ ಹೋಮ್ ಮಿನಿಸ್ಟರೋ ಎಂಬ ಅನುಮಾನ ಮೂಡುತ್ತಿದೆ.
ಗೃಹಮಂತ್ರಿ ಅಂದ್ರೆ ಮನೆಯೊಳಗೆ ಕೂತಿರುವ ಮಂತ್ರಿ ಅಂತೇನಾದರೂ ತಪ್ಪು ತಿಳಿದಿ ದ್ದಾರಾ? ವ್ಯಕ್ತಿಯಾಗಿ ಅತ್ಯಂತ ಘನತೆ ಉಳ್ಳವರಾಗಿರುವ ಪರಮೇಶ್ವರ್ ಗೃಹಮಂತ್ರಿಯಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ರಾಜ್ಯದಲ್ಲಿ ನಡೆಯುವ ಯಾವುದೇ ಕ್ರೈಂ ಅಥವಾ ಗಲಭೆ-ಗದ್ದಲಗಳ ಕುರಿತು ಕೇಳಿದರೆ ಅವರಿಂದ ಬರುವ ರೆಡಿಮೇಡ್ ಉತ್ತರ ಒಂದೇ- ‘ಗೊತ್ತಿಲ್ಲ.. ಮಾಹಿತಿ ಇಲ್ಲ’! ಕಳೆದ ಸರಕಾರದ ಅವಧಿಯಲ್ಲೂ ನಾವು ನಿಷ್ಕ್ರಿಯ, ಅಸಮರ್ಥ ಅನಿಸುವ ಗೃಹಸಚಿವರನ್ನು ಕಂಡಿದ್ದೇವೆ. ಪ್ರತಿ ಕ್ರೈಮ್ ಅಥವಾ ಗಲಭೆ ಸಮಯದಲ್ಲೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದ ಮಂತ್ರಿಗಳ ವರಸೆ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿತ್ತು.
ಆದರೆ ಪರಮೇಶ್ವರ್ ಗೃಹಖಾತೆಯನ್ನು ನಿಷ್ಕ್ರಿಯತೆಯ ಪಾತಾಳಕ್ಕೆ ಕರೆದೊಯ್ದಿದ್ದಾರೆ. ಪೊಲೀಸರು ರಕ್ಷಣೆ ಕೊಡುವಲ್ಲಿ ಅಸಮರ್ಥರಾಗಿzರೆ, ಶಿಕ್ಷಿಸುವ ಕೈಗಳನ್ನು ಕಳೆದು ಕೊಂಡಿದ್ದಾರೆ. ಇನ್ನೂ ಬೇಸರವೆಂದರೆ ಪೊಲೀಸರ ಜೀವಕ್ಕೆ ಮಾನಕ್ಕೆ ಇಲ್ಲಿ ಭದ್ರತೆ ಇಲ್ಲದಂತಾಗಿದೆ.
ಇದು ದುಸ್ಥಿತಿಯ ಪರಮಾವಧಿ ಅಲ್ಲದೇ ಇನ್ನೇನು? ಹುಬ್ಬಳ್ಳಿಯ ಮಹಿಳೆಯನ್ನು ವಿವಸ್ತ್ರ ಗೊಳಿಸಿದ ಪ್ರಕರಣದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಿದ್ದುದು ಗೃಹಮಂತ್ರಿ. ಆದರೆ ಗೃಹಮಂತ್ರಿ ಈ ಬಗ್ಗೆ ಮಾಹಿತಿಯೇ ಇಲ್ಲದಂತೆ ವರ್ತಿಸುತ್ತಾರೆ. ಗೃಹಮಂತ್ರಿಯನ್ನು ಓವರ್‌ಟೇಕ್ ಮಾಡಿ ಡಿಸಿಎಂ ಪ್ರಕರಣಕ್ಕೆ ತೇಪೆ ಹಚ್ಚಲು ಹೋಗುತ್ತಾರೆ.
2023ರಿಂದ ಇಂದಿನ ತನಕ ನಡೆದ ಪ್ರತಿ ಪ್ರಕರಣದಲ್ಲೂ ಗೃಹಮಂತ್ರಿಗಳದ್ದು ಒಂದೇ ಪ್ರತಿಕ್ರಿಯೆ- ‘ಗೊತ್ತಿಲ್ಲ, ಮಾಹಿತಿ ಇಲ್ಲ, ಅಂಥದ್ದೇನೂ ನಡೆದೇ ಇಲ್ಲ’ ಎಂದು. ಇನ್ನೂ ಗಮನಿಸಬೇಕಾದ ಅಂಶ ಅಂದರೆ, ಮುಖ್ಯಮಂತ್ರಿಗಳ ಹಾಗೂ ಉಪಮುಖ್ಯಮಂತ್ರಿಗಳ ಹೇಳಿಕೆ ಹೊರ ಬರುವ ತನಕ ಗೃಹಮಂತ್ರಿಗಳು ಬಾಯಿ ತೆರೆಯುವುದೇ ಇಲ್ಲ.
ಆನಂತರ ಅವರ ಹೇಳಿಕೆಯನ್ನೇ ಪುನರುಚ್ಚರಿಸುತ್ತಾರೆ. ಏನಿದರ ಅರ್ಥ? ಗೃಹಖಾತೆ ಸ್ವಾತಂತ್ರ್ಯ ಕಳೆದುಕೊಂಡಿದೆಯೇ? ಪರಮೇಶ್ವರ್ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆಯೇ?ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣದಿಂದ ಇತ್ತೀಚಿನ ಅಪ್ರಾಪ್ತೆ ಮೇಲಿನ ಅತ್ಯಾ ಚಾರ ಪ್ರಕರಣದ ತನಕ ಯಾವ ಪ್ರಕರಣಕ್ಕೂ ತಾರ್ಕಿಕ ಅಂತ್ಯಗಳು ಸಿಗುತ್ತಿಲ್ಲ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಿಲ್ಲ. ಕಣ್ಮುಂದೆ ನಡೆದ ಹತ್ಯೆಗಳಿಗೂ ನ್ಯಾಯ ಸಿಗುತ್ತಿಲ್ಲ ವೆಂದರೆ ಇದರ ಹೊಣೆಗಾರಿಕೆ ಯಾರದ್ದು? ಕಲಬುರಗಿಯ ಟ್ರಿಪಲ್ ಮರ್ಡರ್, ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಕೋಲಾರದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷನ ಹತ್ಯೆ, ಅಸೆಂಚರ್ ಉದ್ಯೋಗಿಯ ಹತ್ಯೆ, ನಿವೃತ್ತ ಐಪಿಎಸ್ ಆಫೀಸರ್ ಓಂ ಪ್ರಕಾಶ್ ಹತ್ಯೆ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ಪಟ್ಟಿ ಮಾಡುತ್ತಾ ಹೋದರೆ ಮುಗಿಯಲಿಕ್ಕಿಲ್ಲ.
ಇವೆಲ್ಲವೂ ಪತ್ರಿಕೆಯಲ್ಲಿ ಸುದ್ದಿಯಾಗಿ ಹೆಡ್ ಲೈನ್‌ಗಳಲ್ಲಿ ಮೆರೆದ ಪ್ರಕರಣಗಳು. ಸುದ್ದಿಯೇ ಆಗದೇ ಪೊಲೀಸ್ ಪುಸ್ತಕಗಳಲ್ಲಿ ದಾಖಲಾಗುತ್ತಿರುವ, ದಾಖಲೂ ಆಗದೇ ಹೋಗಿರುವ ಪ್ರಕರಣಗಳ ಸಂಖ್ಯೆ ಇನ್ನೆಷ್ಟಿರಬಹುದು? ಸರಕಾರ ಕೊಡೋ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆಯಾಗಿದೆಯಂತೆ.
2023ರಲ್ಲಿ 1293 ಹತ್ಯೆಗಳಾಗಿದ್ದವು; ಈ ವರ್ಷಅದು 1131ಕ್ಕೆ ಇಳಿದಿದೆ. ಅತ್ಯಾಚಾರ ಪ್ರಕರಣಗಳು 632ರಿಂದ 517ಕ್ಕೆ ಇಳಿದಿದೆ ಎಂದು ಗೃಹ ಇಲಾಖೆ ಬೆನ್ನು ತಟ್ಟಿಕೊಳ್ಳುತ್ತಿದೆ. ವರ್ಷಕ್ಕೆ ಐನೂರಕ್ಕೂ ಹೆಚ್ಚು ಅತ್ಯಾಚಾರ, ಸಾವಿರಕ್ಕೂ ಹೆಚ್ಚು ಕೊಲೆಗಳು ನಡೆಯುತ್ತಿದೆ ಎಂಬುದು ನಾಚಿಕೆಗೇಡಿನ ಸಂಗತಿ ಅಲ್ಲವೇ? ಬೆಂಗಳೂರು ಸೈಬರ್ ಅಪರಾಧಗಳ ಹಬ್ ಆಗಿ ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ದಿನ ಬೆಳಗಾದರೆ ಬೆಂಗಳೂರಿನಲ್ಲಿ ನೂರಾರು ಸೈಬರ್ ವಂಚನೆಗಳು ನಡೆಯುತ್ತಿವೆ. ಹಣ ಕಳೆದುಕೊಂಡವರಿಗೆ ಹಣ ಸಿಗುತ್ತಿಲ್ಲ. ಬ್ಲ್ಯಾಕ್‌ಮೇಲ್‌ಗೆ ಒಳಗಾಗುತ್ತಿರುವವರಿಗೆ ನ್ಯಾಯ-ಅಭಯ ಸಿಗುತ್ತಿಲ್ಲ. ಇದರಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೇವಲ ಬೆಂಗಳೂರಿನ ಕಥೆಯೇ ಹೀಗಾದರೆ, ಕರ್ನಾಟಕದ ಇತರ ಭಾಗಗಳ ಕಥೆ ಏನು? ಬೆಂಗಳೂರಿ ನಲ್ಲಿ ನಡೆದ ಕ್ರೈಮ್‌ಗಳ ಬಗ್ಗೆಯೇ ಗೃಹಸಚಿವರಿಗೆ ಮಾಹಿತಿ ಇರುವುದಿಲ್ಲ ಅಂದರೆ ರಾಜ್ಯದ ಇತರ ಭಾಗಗಳಲ್ಲಿ ನಡೆಯುವ ಕ್ರೈಮ್‌ಗಳ ಮಾಹಿತಿ ಹೇಗಿದ್ದೀತು? ಇನ್ಯಾವ ಖಾತೆ ಇನ್ಯಾವ ಮಂತ್ರಿ ನಿಷ್ಕ್ರಿಯರಾಗಿ ಅಸಮರ್ಥರಾಗಿ ಇದ್ದರೂ ನಡೆದೀತು.
ಗೃಹ ಇಲಾಖೆ ನಿರ್ವೀರ್ಯವಾದರೆ ರಾಜ್ಯ ನೆಮ್ಮದಿ ಕಳೆದುಕೊಳ್ಳುತ್ತದೆ. ಪ್ರಜೆಗಳು ಸುಖ ನಿದ್ರೆ ಮಾಡದಂತಾಗುತ್ತದೆ. ಜೀವ ಕೈಲಿ ಹಿಡಿದುಕೊಂಡು ಬದುಕುವಂತಾಗುತ್ತದೆ. ಸಾಫ್ಟ್ ಆಗಿ ವರ್ತಿಸಬೇಕಿರುವ ಮಂತ್ರಿಗಳು ಇಲ್ಲಿ ವೈಲ್ಡ್ ಆಗಿ ವರ್ತಿಸುತ್ತಿದ್ದಾರೆ. ಟಫ್ ಆಗಿ ಇರಬೇಕಿರುವ ಗೃಹಮಂತ್ರಿ ಮೆದುವಾಗಿಬಿಟ್ಟಿದ್ದಾರೆ. ಇದು ರಾಜ್ಯದ ಸುರಕ್ಷತೆಗೆ ಒಳ್ಳೆಯ ದಲ್ಲ.
ಇನ್ನಾದರೂ ಪರಮೇಶ್ವರ್ ಗೃಹಖಾತೆಗೆ ತಕ್ಕುದಾಗಿ ವರ್ತಿಸಲಿ. ರಸ್ತೆಗಳಲ್ಲಿ ಹಗಲು ಹೊತ್ತೇ ಲಾಂಗು-ಮಚ್ಚು ಮಿಂಚುತ್ತಿವೆ. ರಸ್ತೆಗಳಲ್ಲಿ ವೀಲಿಂಗ್ ಹಾವಳಿ ಮಿತಿಮೀರಿದೆ. ಡ್ರಗ್, ಗಾಂಜಾ ವ್ಯವಹಾರ ಮತ್ತು ಸೇವನೆ ಎಗ್ಗಿಲ್ಲದೆ ಸಾಗುತ್ತಿದೆ. ಚಿಕ್ಕಪುಟ್ಟ ಹಣಕ್ಕಾಗಿ ಡಕಾಯತಿ ಮರ್ಡರ್, ಹಾಫ್ ಮರ್ಡರ್ ಗಳಾಗುತ್ತಿವೆ. ಆಟೋಚಾಲಕರ ವೇಷದಲ್ಲಿ ದರೋಡೆ ಕೋರರು ಸೃಷ್ಟಿಯಾಗಿದ್ದಾರೆ. ಇನ್ನಾದರೂ ಗೃಹಮಂತ್ರಿಗಳು ಮೈಚಳಿ ಬಿಟ್ಟು ಹೊರ ಬಂದು ಖದರ್ ತೋರಲಿ.