ವಿದೇಶವಾಸಿ
ಎಷ್ಟೋ ಬಾರಿ ನಾವು ‘ನನಗೆ ಒಂದೇ ಬಯಕೆ ಇದೆ, ಬೇರೆ ಬಯಕೆಯೇ ಇಲ್ಲ, ಅದೊಂದು ಈಡೇರಿದರೆ ನಾನು ಬೇರೇನನ್ನೂ ಬಯಸುವುದಿಲ್ಲ’ ಎಂದು ಹೇಳಿಕೊಳ್ಳುತ್ತೇವೆ. ಆದರೆ ಅದು ‘ಆ ಒಂದು ಬಯಕೆ’ ಈಡೇರುವವರೆಗೆ ಮಾತ್ರ. ಮನುಷ್ಯನ ಮನಸ್ಸು ಚಂಚಲ, ಒಂದೆಡೆ ಸ್ಥಿರವಾಗಿ ನಿಲ್ಲುವುದೇ ಇಲ್ಲ. ಅದರದ್ದೇ ಆದ ಮಾದರಿಯಲ್ಲಿ, ಒಂದೆಡೆಯಿಂದ ಇನ್ನೊಂದೆಡೆಗೆ ಅಲೆದಾಡುತ್ತಲೇ ಇರುತ್ತದೆ. ಒಂದು ಆಸೆ ಮುಗಿಯುತ್ತಿದ್ದಂತೆಯೇ ನಾವು ಇನ್ನೊಂದರ ಬೆನ್ನು ಹತ್ತಿ ಓಡಲಾರಂಭಿಸುತ್ತೇವೆ.
ಒಂದು ಮಗುವಿನ ಮುಂದೆ ಚಿನ್ನಾಭರಣ, ಹಣ, ಮಿಠಾಯಿ, ಆಟಿಕೆಯನ್ನು ಇಟ್ಟರೆ ಮಗುವು ಆಭರಣ, ಹಣ ಬಿಟ್ಟು ಆಟಿಕೆಯನ್ನೋ, ಮಿಠಾಯಿಯನ್ನೋ ಆರಿಸಿಕೊಳ್ಳುತ್ತದೆ. ವಯಸ್ಕ ವ್ಯಕ್ತಿಯ ಮುಂದೆ ಇದೇ ವಸ್ತುಗಳನ್ನಿಟ್ಟರೆ ಆತನಿಗೆ ಹಣ ಮತ್ತು ಚಿನ್ನ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ. ಇದೆ ಆಯಾ ಸಂದರ್ಭದಲ್ಲಿ, ಯಾರ‍್ಯಾರಿಗೆ ಯಾವ್ಯಾವ ಅವಶ್ಯಕತೆ ಇರುತ್ತದೋ ಅದಕ್ಕನುಗುಣ ವಾಗಿ ಉಂಟಾಗುವ ಬಯಕೆಗಳು. ಮನೆಯಿಲ್ಲದವನಿಗೆ ಮನೆ, ಬಟ್ಟೆಯಿಲ್ಲದವನಿಗೆ ಬಟ್ಟೆ, ಉದ್ಯೋಗವಿಲ್ಲದವನಿಗೆ ಉದ್ಯೋಗ, ಹಸಿದವನಿಗೆ ಊಟ ಅವಶ್ಯಕವಾಗಿಯೂ, ಆಕರ್ಷಕ ವಾಗಿಯೂ ಕಾಣಿಸುತ್ತವೆ.
ಪ್ರತಿಯೊಬ್ಬನ ದೃಷ್ಟಿಕೋನವೂ ಬಯಕೆಯೂ ಬೇರೆ ಬೇರೆಯಾಗಿರುವುದರಿಂದಲೇ ಈ ಲೋಕದಲ್ಲಿ ವಿವಿಧ ಬಗೆಯ ಜನರಿzರೆ. ಅದಕ್ಕೆ ತಕ್ಕಂತೆ ವೈವಿಧ್ಯಮಯ ವಸ್ತುಗಳೂ ಮಾರಾಟವಾಗುತ್ತವೆ.
ಎಲ್ಲರ ಬಯಕೆಗಳೂ ಒಂದೇ ರೀತಿಯದ್ದಾಗಿರುವುದಿಲ್ಲ. ಕ್ರೀಡಾಪಟುವಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಬಯಕೆಯಿದ್ದರೆ, ರಾಜಕಾರಣಿಗೆ ಮಂತ್ರಿಯಾಗಬೇಕು, ಮುಖ್ಯಮಂತ್ರಿ ಯಾಗಬೇಕು ಅಥವಾ ಪ್ರಧಾನಮಂತ್ರಿಯಾಗಬೇಕು ಎಂಬ ಬಯಕೆ ಇರುತ್ತದೆ.
ಒಬ್ಬ ಬರಹಗಾರ ತನ್ನ ಕೃತಿ ಜನಪ್ರಿಯವಾಗಬೇಕು ಎಂದು ಬಯಸಿದರೆ, ಕಲಾವಿದ ತನಗೆ ಪ್ರಶಸ್ತಿ ಬರಬೇಕು ಎಂದು ಬಯಸುತ್ತಾನೆ. ಹಾಗಾದರೆ ಆಟಿಕೆಯನ್ನು ಆರಿಸಿಕೊಳ್ಳುವ ಮಗುವಿನ ಬಯಕೆ ಶಾಶ್ವತವಲ್ಲ. ಮಗುವಿzಗ ತಾನು ಆಡಲು ಬಯಸಿದ ಆಟಿಕೆಯನ್ನು ಪಡೆಯಲು ಅದು ಏನೆಲ್ಲ ಕಸರತ್ತು ಮಾಡುತ್ತದೆ. ಆ ಕ್ಷಣದಲ್ಲಿ ಮಗುವಿಗೆ ಅದು ಪ್ರಮುಖವಾಗಿರುತ್ತದೆ.
ಕ್ರಮೇಣ ಮಗು ಬೆಳೆದು ದೊಡ್ಡದಾದಾಗ ಆಟಿಕೆಗಾಗಿ ಜಗಳವಾಡುವುದು, ಹಠ ಮಾಡುವುದು ಮೂರ್ಖತನವೆಂದು ಅದಕ್ಕೆ ಅನಿಸುತ್ತದೆ. ಆಟಿಕೆಯ ಬಯಕೆ ಬದಲಾಗಿ ನಿಜವಾದ ವಸ್ತುವನ್ನು ಪಡೆಯಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಆಟಿಕೆಯ ಕಾರಿನ ಬದಲು ಐಷಾರಾಮಿ ಕಾರು, ಆಟಿಕೆಯ ಮನೆಯ ಬದಲು ಸ್ವಂತ ಮನೆ, ಹೀಗೆ.
ಇದನ್ನೂ ಓದಿ: Kiran Upadhyay Column: ಬವಣೆಯ ಬೆಂಕಿಯಲ್ಲಿ ಬೆಂದು ಬಳಲಿ ಬಂದ ಬೆನ್ಜ್ ಕಾರು
ಹೋಗಲಿ ಸ್ವಂತ ಮನೆಯಾದ ಮೇಲೆ ಅದರದರೂ ಸಮಾಧಾನವಿದೆಯೆಂದರೆ ಹಾಗೂ ಇಲ್ಲ. ಅಲ್ಲಿಯೂ ಬಯಕೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಯೌವನದಲ್ಲಿ ಮನೆ ಕಟ್ಟುವಾಗ, ಮಲಗುವ ಕೋಣೆ ಮೊದಲನೇ ಮಹಡಿಯಲ್ಲಿದ್ದರೆ ಚೆನ್ನ ಎಂದು ಅಲ್ಲಿ ನಿರ್ಮಿಸಿಕೊಂಡಿರುತ್ತೇವೆ. ವಯಸ್ಸಾದಂತೆ ಮೊಣಕಾಲು ನೋವು ಆರಂಭವಾಗಿ ಮೆಟ್ಟಿಲು ಹತ್ತುವುದು ದುಸ್ತರ ಎನಿಸಿದಾಗ, ನೆಲಮಹಡಿಯಲ್ಲಿಯೇ ಮಲಗುವ ಕೋಣೆ ಇರಬೇಕಿತ್ತು ಎನಿಸುತ್ತದೆ. ಸಾಧ್ಯವಾದರೆ ಅದನ್ನು ಬದಲಾಯಿಸಿಕೊಳ್ಳುತ್ತೇವೆ.
ಎಷ್ಟೋ ಬಾರಿ, ಹಳ್ಳಿಯಲ್ಲಿದ್ದವರಿಗೆ ಪಟ್ಟಣದಲ್ಲಿ ಒಂದು ಮನೆ ಮಾಡಿಕೊಂಡಿರಬೇಕೆಂಬ ಬಯಕೆ ಉಂಟಾಗುತ್ತದೆ. ಕ್ರಮೇಣ ಪಟ್ಟಣ ಬೆಳೆದು ಶಹರವಾದಾಗ, ಅಲ್ಲಿಯ ಜನಜಂಗುಳಿ, ಅತಿಯಾದ ವಾಹನಗಳು, ಶಬ್ದಮಾಲಿನ್ಯ, ವಾಯುಮಾಲಿನ್ಯಗಳನ್ನೆಲ್ಲ ಕಂಡು ಹಳ್ಳಿಯೇ ಒಳಿತು ಅನಿಸುತ್ತದೆ. ಒಂದು ವೇಳೆ ಹಳ್ಳಿಯಲ್ಲೇ ಮನೆ ಮಾಡಿಕೊಂಡು ಉಳಿದ ನಂತರ ಅಲ್ಲಿ ಮಕ್ಕಳಿಗೋ ಮೊಮ್ಮಕ್ಕಳಿಗೋ ಬೇಕಾಗುವ ಶಿಕ್ಷಣ ವ್ಯವಸ್ಥೆ, ಸಮೀಪದಲ್ಲಿ ಆಸ್ಪತ್ರೆ ಇರದಿದ್ದರೆ, ಮೊಬೈಲ್ ನೆಟ್‌ವರ್ಕ್ ಬರದಿದ್ದರೆ, ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದ್ದರೆ, ಧಾರಾವಾಹಿ ನೋಡಲು ಆಗದಿದ್ದರೆ ಏನು ಗತಿ? ಎಲ್ಲವೂ ಸರಿಯಾಗಿದ್ದು ಊರಿನ ಕೊನೆಯಲ್ಲಿರುವ ಮನೆಯಲ್ಲಿ ಚಿರತೆ ಯೊಂದು ಕರುವನ್ನೋ, ನಾಯಿಮರಿಯನ್ನೋ ಕಚ್ಚಿಕೊಂಡು ಹೋಯಿತು ಎಂದರೆ ಮತ್ತೆ ‘ಪಟ್ಟಣವೇ ಒಳ್ಳೆಯದು, ಅಲ್ಲಿಯೇ ಹೋಗಿ ಉಳಿಯುವುದು ಒಳಿತು’ ಎಂಬ ಬಯಕೆ ಮೂಡಿದರೂ ಆಶ್ಚರ್ಯವಿಲ್ಲ.
ಎಷ್ಟೋ ಬಾರಿ ನಾವು ‘ನನಗೆ ಒಂದೇ ಬಯಕೆ ಇದೆ, ಬೇರೆ ಬಯಕೆಯೇ ಇಲ್ಲ, ಅದೊಂದು ಈಡೇರಿದರೆ ನಾನು ಬೇರೇನನ್ನೂ ಬಯಸುವುದಿಲ್ಲ’ ಎಂದು ಹೇಳಿಕೊಳ್ಳುತ್ತೇವೆ. ಆದರೆ ಅದು ‘ಆ ಒಂದು ಬಯಕೆ’ ಈಡೇರುವವರೆಗೆ ಮಾತ್ರ. ಮನುಷ್ಯನ ಮನಸ್ಸು ಚಂಚಲ, ಒಂದೆಡೆ ಸ್ಥಿರವಾಗಿ ನಿಲ್ಲುವುದೇ ಇಲ್ಲ. ಅದರದ್ದೇ ಆದ ಮಾದರಿಯಲ್ಲಿ, ಒಂದೆಡೆಯಿಂದ ಇನ್ನೊಂದೆಡೆಗೆ ಅಲೆದಾಡು ತ್ತಲೇ ಇರುತ್ತದೆ.
ಒಂದು ಆಸೆ ಮುಗಿಯುತ್ತಿದ್ದಂತೆಯೇ ನಾವು ಇನ್ನೊಂದರ ಬೆನ್ನು ಹತ್ತಿ ಓಡಲಾರಂಭಿಸುತ್ತೇವೆ. ವರ್ಷಾನುಗಟ್ಟಲೆ ಬಯಸಿದ ವಸ್ತು ಅಥವಾ ಸ್ಥಾನ ದಕ್ಕಿದಾಗ ಅದನ್ನು ಕೆಲವು ತಿಂಗಳೂ ನಾವು ಅನುಭವಿಸುವುದಿಲ್ಲ, ಖುಷಿಪಡುವುದಿಲ್ಲ. ಬಯಸಿದ್ದನ್ನು ಪಡೆದ ಸಂತೃಪ್ತಿ ಕೆಲವೇ ಕ್ಷಣಗಳದ್ದಾ ಗಿರುತ್ತದೆ. ಏಕೆಂದರೆ, ಬಯಸಿದ್ದನ್ನು ಪಡೆದ ಮರುಕ್ಷಣದಿಂದ ನಮ್ಮಲ್ಲಿಯೇ ಸುಪ್ತವಾಗಿ ಬಿದ್ದಿದ್ದ ಇನ್ಯಾವುದೋ ಬಯಕೆ ಚಿಗುರೊಡೆದುಕೊಳ್ಳುತ್ತದೆ.
ಪರಿಣಾಮವಾಗಿ ನಮ್ಮ ಮನಸ್ಸಿನಲ್ಲಿ ಬೇರೆ ಬಯಕೆಗಳು ಹುಟ್ಟಿಕೊಂಡು ಅದರ ಬೆನ್ನು ಹತ್ತಿ ಓಡಲಾರಂಭಿಸುತ್ತದೆ. ಅಂದರೆ, ನಮ್ಮ ಬಯಕೆಗೆ ಯಾವತ್ತೂ ಕೊನೆಯೆಂಬುದೇ ಇಲ್ಲ. ನಮ್ಮ ಬಯಕೆ ಈಡೇರಲು 2 ಅಂಶಗಳು ಪ್ರಮುಖವಾಗಿರುತ್ತವೆ. ಒಂದು, ನಮ್ಮ ಮನಸ್ಥಿತಿ.
ಇನ್ನೊಂದು, ನಮ್ಮ ಹೊರಗಿನ ವಾತಾವರಣ. ಆದರೆ, ಎರಡೂ ವಸ್ತುಗಳು ಸ್ಥಿರವಲ್ಲ. ಅವನ್ನು ಹತೋಟಿಯಲ್ಲಿಡುವುದು ಯಾರಿಂದಲೂ ಸಾಧ್ಯವಿಲ್ಲ. ಬಯಕೆ ಎಂಬುದು ಆ ಕ್ಷಣಕ್ಕೆ ಸಂಬಂಧ ಪಟ್ಟದ್ದಾದರೂ, ಅದೇ ಜೀವನದ ಮುಖ್ಯ ಉದ್ದೇಶವಾಗಿ ಮಾರ್ಪಟ್ಟರೂ ಕೆಲವೊಮ್ಮೆ ನಮ್ಮ ಬಯಕೆ ಈಡೇರುವುದಿಲ್ಲ.
ಎಷ್ಟೋ ಸಲ ನಾವು ಸರಿಯಾಗಿ ಯೋಚಿಸದೆಯೇ ಯಾವುದು ಮುಖ್ಯವಲ್ಲವೋ, ಪ್ರಯೋಜನ ಕಾರಿಯಲ್ಲವೋ ಅಥವಾ ಅವಶ್ಯವಲ್ಲವೋ ಅದಕ್ಕೆ ಮಹತ್ವ ಕೊಟ್ಟು ಅದರ ಹಿಂದೆ ಓಡುತ್ತೇವೆ. ಆದರೆ ಗುರಿ ತಲುಪಿದಾಗ, ‘ನಮ್ಮ ಗುರಿ ಇದಲ್ಲವಾಗಿತ್ತು’ ಎಂದು ಪಶ್ಚಾತ್ತಾಪ ಪಡುವುದೂ ಇದೆ. ಇದು ಒಂದು ರೀತಿಯಲ್ಲಿ ದೀಪದ ಆಕರ್ಷಣೆಗೆ ಒಳಗಾಗುವ ಮಗುವಿನಂತೆ. ಮಗುವಿಗೆ ದೀಪ ಸುಂದರವಾಗಿ ಕಾಣುತ್ತದೆ.
ಬೇಕೋ-ಬೇಡವೋ, ಅದನ್ನು ಹಿಡಿಯಲು ಹೋಗುತ್ತದೆ. ಕೈಸುಟ್ಟುಕೊಂಡು ಅಳುತ್ತದೆ. ಹಾಗೆಯೇ ನಾವು ದೊಡ್ಡವರಾದ ಮೇಲೂ ಎಷ್ಟೋ ಬಾರಿ ಉದ್ಯೋಗ ಮಾಡುತ್ತಾ, ಉದ್ದಿಮೆ ಆರಂಭಿಸಿ ಅಥವಾ ಇನ್ಯಾವುದೋ ನಿರ್ಣಯ ತೆಗೆದುಕೊಂಡು, ಕೆಲವು ದಿನ ಕಳೆದ ಮೇಲೆ ‘ನಮ್ಮ ನಿರ್ಣಯ ಸರಿಯಾಗಿರಲಿಲ್ಲ’ ಎನಿಸುವುದಿದೆ.
ಒಬ್ಬಾತ ಖಾಲಿ ಜಾಗದಲ್ಲಿ ಒಂದು ಮನೆ ನಿರ್ಮಿಸಿ ತುಂಬಾ ಸಂತಸದಲ್ಲಿರುತ್ತಾನೆ ಅಂದುಕೊಳ್ಳಿ. ಕಾಲಕ್ರಮೇಣ ಆತನ ಮನೆಯ ಪಕ್ಕದಲ್ಲಿ ಒಂದು ಹಿಟ್ಟಿನ ಗಿರಣಿ ಆರಂಭವಾಗುತ್ತದೆ. ಇನ್ನೊಂದು ಪಕ್ಕದಲ್ಲಿ ಮೋಟಾರ್‌ಬೈಕ್ ರಿಪೇರಿಯ ಗ್ಯಾರೇಜ್ ಆರಂಭವಾಗುತ್ತದೆ. ಮನೆಯ ಮುಂದೆ ವಾಹನ ಸಂಚಾರ ಹೆಚ್ಚಾಗುತ್ತದೆ.
ಎದುರು ಮನೆಯ ನಾಯಿ ಸದಾ ಬೊಗಳುತ್ತಿರುತ್ತದೆ. ಸುತ್ತಲಿನ ವಾತಾವರಣ ಬದಲಾಗಿ ಉಸಿರು ಕಟ್ಟಿದ ಅನುಭವವಾಗುತ್ತದೆ. ತಾನಿಲ್ಲಿ ಮನೆ ಕಟ್ಟಬಾರದಾಗಿತ್ತು ಎನಿಸುತ್ತದೆ. ತಾನೇ ಬಯಸಿದ ಜಾಗದಲ್ಲಿ ಕಟ್ಟಿದ ಮನೆಯಲ್ಲಿ ಆತ ಕಿರಿಕಿರಿ ಅನುಭವಿಸುತ್ತಾನೆ.
ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳುವ ಹಂತದಲ್ಲಿ ನಾವು ನಮ್ಮ ಅಕ್ಕ ಪಕ್ಕದಲ್ಲಿ ಆಗುತ್ತಿರುವ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ, ನಮ್ಮ ಬಯಕೆಯ ಬಗ್ಗೆಯೇ ಯೋಚಿಸು ತ್ತಿರುತ್ತೇವೆ. ಆಗ ನಾವು ಹಿಂದೆ ಗಳಿಸಿದ್ದಕ್ಕೆ ಯಾವುದೇ ಅರ್ಥವಿಲ್ಲದಂತಾಗುತ್ತದೆ. ಏಕೆಂದರೆ ನಮ್ಮಸಂಪೂರ್ಣ ಲಕ್ಷ್ಯ ಮುಂದೆ ಗಳಿಸಬೇಕಾದುದ್ದರ ಕಡೆಗೆ ಇರುತ್ತದೆಯೇ ವಿನಾ, ಹಿಂದೆ ಗಳಿಸಿದ್ದರ ಕಡೆಗೆ ಇರುವುದೇ ಇಲ್ಲ.
ನಮ್ಮ ಬಯಕೆಗಳು ಪೂರ್ಣಗೊಂಡ ನಂತರ ನಾವು ಅದನ್ನು ಬಲುಬೇಗ ಮರೆಯುತ್ತೇವೆ. ಪೂರ್ಣಗೊಳ್ಳದ ಬಯಕೆಗಳೇ ನಮ್ಮನ್ನು ಕಾಡುತ್ತಿರುತ್ತವೆ. ಅಪೂರ್ಣ ಬಯಕೆ ನಮ್ಮ ದೇಹದಲ್ಲಿನ ಒಂದು ಸಣ್ಣ ಗಾಯವಿದ್ದಂತೆ. ಅದರ ಮೇಲೇ ನಮ್ಮ ಗಮನ ಇರುತ್ತದೆಯೇ ವಿನಾ, ಆರೋಗ್ಯ ದಿಂದಿರುವ ದೇಹದ ಇನ್ನಿತರ ಭಾಗದ ಕಡೆಗಲ್ಲ. ಕಾಲಿನ ಒಂದು ಬೆರಳಿನಲ್ಲಿ ನೋವಾದರೂ ನಮ್ಮ ಸಂಪೂರ್ಣ ಗಮನ ಅದರ ಕಡೆಗೆ ಇರುತ್ತದೆಯೇ ವಿನಾ, ಆರೋಗ್ಯವಾಗಿರುವ ಉಳಿದ 9 ಬೆರಳುಗಳ ಕಡೆಗೂ ಅಲ್ಲ, ಎರಡು ಕಾಲಿನ ಕಡೆಗೂ ಅಲ್ಲ.
ಇದನ್ನೇ ಭೌತಿಕ ಜಗತ್ತಿಗೆ ಹೋಲಿಸಿದರೆ, ಈಡೇರದ ಬಯಕೆಗಳನ್ನು ಹಿಂಬಾಲಿಸಿ, ಇದುವರೆಗೆ ಈಡೇರಿದ ವಿಷಯದ ಕಡೆಗೆ ನಾವು ಸಂಪೂರ್ಣ ಗಮನ ಹರಿಸದೆ ಮುಂದುವರಿಯುತ್ತೇವೆ. ಬೇಕಾ ದಷ್ಟು ಶ್ರೀಮಂತಿಕೆ ಇದ್ದರೂ, ಬೇಕಾದ ವಸ್ತುಗಳಿದ್ದರೂ, ನಮ್ಮ ಜತೆಯಲ್ಲಿ ಖುಷಿ ಕೊಡುವ ವ್ಯಕ್ತಿ ಗಳಿದ್ದರೂ ಅದನ್ನು ಅನುಭವಿಸುವುದಿಲ್ಲ. ಬದಲಾಗಿ ಮುಂದೆ ಗಳಿಸಬೇಕಾದುರ ಬಯಕೆ ಯಲ್ಲಿಯೇ ಇರುತ್ತೇವೆ.
ಈ ಪ್ರಪಂಚದಲ್ಲಿ ಪ್ರತಿಯೊಬ್ಬನೂ ತಾನು ಏನನ್ನಾದರೂ ಸಾಧಿಸಬೇಕು ಎಂದು ಬಯಸುತ್ತಾನೆ. ಆದರೆ ಎಷ್ಟೋ ಸಲ ಆ ಬಯಕೆ ಈಡೇರದೆ ನಿರಾಶನೂ ಆಗುತ್ತಾನೆ. ನಿರಂತರವಾಗಿ ಈಡೇರದ ಬಯಕೆಯ ಬಂದಿಯಾಗಿರುವುದರಿಂದ ವರ್ತಮಾನದ ಬದುಕನ್ನು ಆಸ್ವಾದಿಸದೇ ಕಳೆಯುತ್ತಾನೆ. ಇದಕ್ಕೆ ಒಂದು ಉದಾಹರಣೆ ಹೇಳಿ ಬಿಡುತ್ತೇನೆ.
ಒಬ್ಬ ಸಂಸಾರಸ್ಥ ಬಾಡಿಗೆಯ ಮನೆಯಲ್ಲಿದ್ದಾನೆ ಎಂದುಕೊಳ್ಳಿ. ಅವನಿಗೆ ‘ಸ್ವಂತ ಮನೆ ಕಟ್ಟಿ ಅದರಲ್ಲಿ ವಾಸಮಾಡಬೇಕು’ ಎಂಬ ಬಯಕೆಯಾಗುತ್ತದೆ, ತಪ್ಪಲ್ಲ. ಹೀಗಾಗಿ ಆತ ಒಂದು ಜಾಗ ಖರೀದಿಸಿ ಮನೆಯ ನಿರ್ಮಾಣಕ್ಕೆ ತೊಡಗುತ್ತಾನೆ. ಆ ಸಂದರ್ಭದಲ್ಲಿ ಆತ ಬೆಳಗ್ಗೆ ಬೇಗನೆ ಎದ್ದು, ಹೊಸಮನೆ ಕಟ್ಟಿಸುತ್ತಿರುವ ಜಾಗಕ್ಕೆ ಹೋಗಿ, ಅಲ್ಲಿಯ ದೇಖ-ರೇಖಿ ನೋಡಿಕೊಂಡು, ಕೆಲಸಗಾರರಿಗೆ ಆ ದಿನದ ಕೆಲಸ ಹೇಳಿ, ಬೇಕಾದ ಹಣ, ವಸ್ತುಗಳನ್ನು ಪೂರೈಸಿ, ತನ್ನ ಕೆಲಸಕ್ಕೆ ಹೋಗುತ್ತಾನೆ.
ಕೆಲಸದಿಂದ ಹಿಂದಿರುವಾಗ ಮನೆ ಕಟ್ಟುತ್ತಿರುವ ಜಾಗಕ್ಕೆ ಪುನಃ ಹೋಗಿ, ಅಂದಿನ ಕೆಲಸಗಳನ್ನೆಲ್ಲ ವೀಕ್ಷಿಸಿ, ನಾಳಿನ ಕೆಲಸವನ್ನು ವಿವರಿಸಿ, ಸಾಧ್ಯವಾದರೆ ಅಂದು ಕಟ್ಟಿದ ನಾಲ್ಕು ಕಲ್ಲಿಗೆ ನೀರುಣಿಸಿ, ರಾತ್ರಿ ಮಡದಿ-ಮಕ್ಕಳು ಮಲಗಿದ ನಂತರ ಅಥವಾ ಮಲಗುವ ವೇಳೆಗೆ ಮನೆಗೆ ಹಿಂದಿರುಗುತ್ತಾನೆ.
ಆತ ಕಟ್ಟುತ್ತಿರುವ ಮನೆ ತಿಂಗಳೊಪ್ಪತ್ತಿನಲ್ಲಿ ಮುಗಿದರೆ ಅಡ್ಡಿಯಿಲ್ಲ. ಕಾರಣಾಂತರಗಳಿಂದ ಇದೇ ರೀತಿ ಕೆಲವು ವರ್ಷ ಮುಂದುವರಿದರೆ? ಸಣ್ಣ ಮಕ್ಕಳು ದೊಡ್ಡವರಾಗಿ ಬೆಳೆದಿರುತ್ತಾರೆ, ಮಡದಿಗೂ ವಯಸ್ಸಾಗಿರುತ್ತದೆ, ಸ್ವತಃ ಆತನೂ ಕುಗ್ಗಿರುತ್ತಾನೆ. ಆತ ಕಟ್ಟಿಸಿದ ಸ್ವಂತ ಮನೆಗೆ ಹೋಗಿ ಉಳಿದು ಕೊಳ್ಳಬಹುದು, ಆದರೆ ಈ ನಡುವೆ ಆತ ತನ್ನ ಸಂಸಾರದೊಂದಿಗೆ ಕಳೆಯಬಹುದಾದ ಮಧುರ ಕ್ಷಣಗಳಿಂದ ವಂಚಿತನಾಗಿರುತ್ತಾನೆ.
ಆ ಕ್ಷಣಗಳಲ್ಲಿ ಬಹುಶಃ ಮಕ್ಕಳಿಗೆ ತಂದೆ ಕಟ್ಟಿಸುತ್ತಿರುವ ಮನೆಗಿಂತ ತಂದೆ ತಮ್ಮ ಜತೆ ಕಳೆಯ ಬೇಕಾಗಿದ್ದ ಸಮಯ ಹೆಚ್ಚು ಅವಶ್ಯವಾಗಿರುತ್ತದೆ. ಕೆಲವು ಸಮಯದ ನಂತರ ತಂದೆಗೂ ಹೀಗೇ ಅನಿಸಿದರೂ ಆಶ್ಚರ್ಯವಿಲ್ಲ, ಇರಲಿ. ಆತ ಆ ಮನೆಗೆ ಹೋಗಿ ಉಳಿದ ನಂತರವೂ ಸಂತೋಷ ವಾಗಿರುತ್ತಾನೆ ಎಂದುಕೊಳ್ಳಬೇಕಾಗಿಲ್ಲ.
ಆ ಕಾಲದಲ್ಲಿ ಮಕ್ಕಳು ಬೆಳೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಬೇಕಾಗಬಹುದು. ಮಡದಿಯ ಅವಶ್ಯಕತೆಯೂ ಬದಲಾಗಬಹುದು, ಸ್ವತಃ ಆತನ ಬಯಕೆಯೂ ಬದಲಾಗಬಹುದು. ಹಾಗಾದರೆ ಏನು ಸಾಧಿಸಿದಂತಾಯಿತು? ನಂತರ ಆತನಿಗೆ ತಾನು ಮನೆಯ ಹಿಂದೆ ಸಮಯ ವ್ಯರ್ಥ ಮಾಡುವುದಕ್ಕಿಂತ ಮಕ್ಕಳ ಜತೆಗೆ ಹೆಚ್ಚಿನ ಸಮಯವನ್ನು ಕಳೆಯಬಹುದಾಗಿತ್ತು ಎನಿಸಿದರೆ ತಪ್ಪೇನಿಲ್ಲ, ಆದರೆ ಆಗ ಅದನ್ನು ಆಲೋಚಿಸಿ ಯಾವ ಪ್ರಯೋಜನವೂ ಇಲ್ಲ.
ಮನೆ ಕಟ್ಟಬೇಕೆಂಬ ಬಯಕೆ ಉಂಟಾಯಿತು ಅಂದುಕೊಳ್ಳಿ, ಆಗ ನಮ್ಮೆ ಶಕ್ತಿಯು ಆ ಬಯಕೆಯ ಸುತ್ತಲೇ ಸುತ್ತುತ್ತಿರುತ್ತದೆ. ನಮ್ಮೆಲ್ಲಾ ವಿಚಾರಗಳೂ, ನಿರ್ಣಯಗಳೂ ಆ ಮನೆಯ ಸುತ್ತಲೇ ಇರುವು ದರಿಂದ, ಜೀವನದ ಇತರ ವರ್ತಮಾನಗಳನ್ನು ಮರೆತುಬಿಡುತ್ತೇವೆ. ನಮ್ಮ ಬಯಕೆಯು ಮನದಲ್ಲಿ ಮಹತ್ವಾಕಾಂಕ್ಷೆಯನ್ನು ಮೂಡಿಸುತ್ತದೆ. ಮಹತ್ವಾಕಾಂಕ್ಷೆ ಸದಾ ಭವಿಷ್ಯತ್ತಿನಲ್ಲಿಯೇ ಇರುತ್ತ ದೆಯೇ ಹೊರತು ಭೂತದಲ್ಲಿಯೂ, ವರ್ತಮಾನದಲ್ಲಿಯೂ ಅಲ್ಲ. ಆದರೆ ಒಂದು ವಿಚಾರ ತಿಳಿದಿರಲಿ, ಭವಿಷ್ಯ ಯಾವತ್ತೂ ಸ್ಥಿರವಲ್ಲ. ಭವಿಷ್ಯವನ್ನು ಕಡಾಕಡಿ ಹೇಳಲು ಸಾಧ್ಯವಿಲ್ಲ. ಭವಿಷ್ಯ ಯಾವತ್ತೂ ದೂರದಲ್ಲಿರುವ ಬೆಟ್ಟದಂತೆ, ಚಲಿಸುವ ಮೋಡದಂತೆ. ನಾವೆಷ್ಟೇ ಪ್ರಯತ್ನಿಸಿದರೂ ಭವಿಷ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವೇ ಇಲ್ಲ.
ಹಾಗಾದರೆ ಬಯಕೆಗಳಿಲ್ಲದೆ ಬದುಕಲು ಸಾಧ್ಯವೇ? ಬಯಕೆಯೇ ಇಲ್ಲದ ಬದುಕು ಬೆಂಗಾಡು. ಆಸ್ಪತ್ರೆಯಲ್ಲಿ ಮಲಗಿದ ರೋಗಿಯೂ ತಾನು ಬೇಗ ಗುಣಮುಖನಾಗಿ ಮನೆಗೆ ಹೋಗಬೇಕೆಂದು ಬಯಸುತ್ತಾನೆ. ಅದೇ ಒಬ್ಬ ಮನುಷ್ಯ ತನಗೆ ರೋಗವೇ ಬರಬಾರದು, ತಾನು ಸಾಯಲೂಬಾರದು ಎಂದು ಬಯಸಿದರೆ? ಆದ್ದರಿಂದ ನಮ್ಮ ಬೇಕು-ಬೇಡಗಳನ್ನು ನಿರ್ಣಯಿಸಿ ಬಯಕೆಗಳನ್ನು ಗಾಳಿಸಬೇಕು, ಸಾಣಿಸಬೇಕು.
ಇನ್ನು, ಬಹಳಷ್ಟು ಜನ ತಮ್ಮ ಬಯಕೆಯ ಗುರಿ ತಲುಪುವುದೇ ಪ್ರಮುಖವೆಂದು ತಪ್ಪಾಗಿ ಭಾವಿಸು ತ್ತಾರೆ. ಬಯಕೆಯ ಪರ್ವತದ ಶಿಖರ ತಲುಪುವ ತವಕದಲ್ಲಿ ಆರಂಭ ಮತ್ತು ಅಂತ್ಯದ ನಡುವಿ ನಲ್ಲಿರುವ ಪ್ರಯಾಣದ ದಾರಿಯೆಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ.
ತಲುಪುವ ಗುರಿಗಿಂತ ಪ್ರಯಾಣದ ಹಾದಿ ಇನ್ನೂ ಸೊಗಸಾಗಿರಬಾರದೇಕೆ? ದಾರಿಯುವುದಕ್ಕೂ ಸಿಗುವ ಸುಂದರ ದೃಶ್ಯ, ಮರೆಯಲಾಗದ ಅನುಭವ, ಗುರಿಗಿಂತಲೂ ವಿಶಿಷ್ಟವಾಗಿರಬಾರದೇಕೆ? ಆದ್ದರಿಂದ ಗುರಿಯೆಡೆಗೆ ತಲುಪುವಾಗ ಪ್ರಯಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎಷ್ಟೋ ಬಾರಿ ನಮ್ಮ ಬದುಕೇ ಸುಂದರವಾದ ಕ್ಷಣಗಳನ್ನು ನಮಗೆ ಉಡುಗೊರೆಯಾಗಿ ನೀಡುತ್ತದೆ. ಬದುಕು ಸುಂದರ ಪ್ರಯಾಣವಷ್ಟೇ ಅಲ್ಲ, ಅತಿದೊಡ್ಡ ಬಹುಮಾನವೂ ಆಗುತ್ತದೆ.