ಪದಸಾಗರ
ಕೆಲವೊಮ್ಮೆ ಮನಸಿಗೆ ಯಾಕೋ ಒಂದು ರೀತಿಯ ಒತ್ತಡ. ಏನೂ ಆಗಿರುವುದಿಲ್ಲ. ಯಾರೂ ನಮ್ಮನ್ನು ಬಯ್ದಿರುವುದಿಲ್ಲ. ಯಾವುದೇ ದೊಡ್ಡ ಸಮಸ್ಯೆಯೂ ಎದುರಾಗಿರುವುದಿಲ್ಲ. ಆದರೂ ಮನಸು ಮಾತ್ರ ಯಾವುದೋ ತಳಮಳದಲ್ಲಿರುತ್ತದೆ. ನೂರಾರು ಆಲೋಚನೆಗಳು ಒಂದರ ಹಿಂದೆ ಒಂದರಂತೆ ಓಡುತ್ತಿರುತ್ತವೆ. ಯಾವುದೋ ಒಂದು ವಿಷಯದ ಬಗ್ಗೆ ಆತಂಕ, ಇನ್ನಾವುದೋ ವಿಷಯದ ಬಗ್ಗೆ ಭಯ, ಮತ್ತೊಂದರ ಬಗ್ಗೆ ಅಸಮಾಧಾನ.
ಎಲ್ಲವನ್ನೂ ಬದಿಗಿಟ್ಟು ಸ್ವಲ್ಪ ಹೊತ್ತು ನೆಮ್ಮದಿಯಿಂದ ಇರೋಣ ಎಂದರೂ ಮನಸು ಕೇಳುವುದೇ ಇಲ್ಲ. ಇಂಥದ್ದೊಂದು ಸಂದರ್ಭದಲ್ಲಿ ನಾನು ಶುರು ಮಾಡಿದ್ದು ಓಂಕಾರ ಪಠಣ. ಒಮ್ಮೆ ಕಣ್ಮುಚ್ಚಿ ಕುಳಿತುಕೊಂಡು, ನಿಧಾನವಾಗಿ ಉಸಿರಾಡುತ್ತ, ಉಸಿರಾಟದ ಲಯಕ್ಕೆ ಹೊಂದಿಸಿಕೊಂಡು ‘ಓಂ... ಓಂ...’ ಎಂದು ಹೇಳಲು ಆರಂಭಿಸಿದೆ.
ಬೇರೆ ಎಲ್ಲ ಆಲೋಚನೆಗಳನ್ನು ಅವುಗಳ ಪಾಡಿಗೆ ಬಿಟ್ಟು ಓಂ ಶಬ್ದದ ಮೇಲೆ ಕೇಂದ್ರೀಕರಿಸಿದೆ. ಐದು ನಿಮಿಷಗಳ ನಂತರ ನಿಧಾನವಾಗಿ ಕಣ್ಣು ತೆರೆದರೆ ನನ್ನೊಳಗಿನ ಗದ್ದಲ ಸ್ವಲ್ಪ ಕಡಿಮೆಯಾಗಿ, ಮನಸು ತುಸು ಹಗುರ!
ಓಂಕಾರದ ಮ್ಯಾಜಿಕಲ್ ಪವರ್ ಗೊತ್ತಿಲ್ಲದ ವಿಷಯವಲ್ಲ. ಸಂಧ್ಯಾವಂದನೆ, ಪೂಜೆಗಳನ್ನು ಬಲ್ಲ ನಮಗೆ ಹೊಸತೂ ಅಲ್ಲ. ನಮ್ಮ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಓಂಕಾರಕ್ಕೆ ಕೊಟ್ಟಿರುವ ಸ್ಥಾನ ಬಹಳ ದೊಡ್ಡದು. ಅದು ಬರೀ ಒಂದು ಶಬ್ದವಲ್ಲ. ಅದೊಂದು ಮಂತ್ರ. ಅದೊಂದು ನಾದ. ಅದೊಂದು ತತ್ತ್ವ. ಅದಕ್ಕಿಂತ ಮುಖ್ಯವಾಗಿ, ನಮ್ಮೊಳಗಿನ ಮನಸ್ಸನ್ನು ನಮ್ಮ ಬಳಿಯೇ ಕೂರಿಸುವ ಒಂದು ಸರಳ ಸಾಧನ. ಓಂಕಾರವನ್ನು ಮಂತ್ರಗಳ ರಾಜ ಎಂದು ಕರೆಯುವುದಕ್ಕೆ ಕಾರಣವಿದೆ.
ಇದನ್ನೂ ಓದಿ: Naveen Sagar Column: ವಿಷ್ಣು ಸಹಸ್ರನಾಮಕ್ಕೆ ತಲೆದೂಗುವ ಮೀನುಗಳು!
ನೀವು ಯಾವುದೇ ಮಂತ್ರವನ್ನು ಗಮನವಿಟ್ಟು ಕೇಳಿ. ಅನೇಕ ಮಂತ್ರಗಳ ಆರಂಭದಲ್ಲಿ ಓಂಕಾರದ ಉದ್ಗಾರವನ್ನು ಕಾಣಬಹುದು. ಓಂ ನಮಃ ಶಿವಾಯ, ಓಂ ನಮೋ ನಾರಾಯಣಾಯ, ಓಂ ಗಂ ಗಣಪತಯೇ ನಮಃ... ಹೀಗೆ ಅನೇಕ ಮಂತ್ರಗಳಲ್ಲಿ ಓಂಕಾರವೇ ಮೊದಲ ಧ್ವನಿಯಾಗಿ ಕಾಣಿಸಿ ಕೊಳ್ಳುತ್ತದೆ. ಒಂದು ಆಧ್ಯಾತ್ಮಿಕ ವ್ಯಾಖ್ಯಾನದ ಪ್ರಕಾರ ಓಂಕಾರ ಪರಬ್ರಹ್ಮನ ಸ್ವರೂಪ. ಅಂದರೆ ಇಡೀ ಸೃಷ್ಟಿಗೆ ಮೂಲವಾದ ಪರಮತತ್ತ್ವವನ್ನು ಪ್ರತಿನಿಧಿಸುವ ಧ್ವನಿ.
ಇನ್ನೊಂದು ವ್ಯಾಖ್ಯಾನದ ಪ್ರಕಾರ ಓಂಕಾರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸ್ವರೂಪ ಅಡಗಿದೆ. ಸೃಷ್ಟಿ, ಸ್ಥಿತಿ ಮತ್ತು ಲಯಗಳ ಸಂಕೇತವಾಗಿ ಇದನ್ನು ಪರಿಗಣಿಸ ಲಾಗುತ್ತದೆ. ನಾವು ಬರಿಗಣ್ಣಿನಿಂದ ನೋಡಿದಾಗ ಓಂ ಒಂದೇ ಅಕ್ಷರದಂತೆ ಕಾಣಿಸುತ್ತದೆ. ಆದರೆ ಇದರ ರಚನೆಯನ್ನು ಗಮನಿಸಿದರೆ ಅ, ಉ ಮತ್ತು ಮ್ ಎಂಬ ಮೂರು ಧ್ವನಿಗಳ ಸಂಯೋಜನೆ ಎಂಬ ವಿವರಣೆ ಸಿಗುತ್ತದೆ.
ಇಲ್ಲಿ ‘ಅ’ ಸೃಷ್ಟಿಯನ್ನು, ‘ಉ’ ವಿಕಾಸ ಅಥವಾ ಸ್ಥಿತಿಯನ್ನು, ‘ಮ’ ಲಯವನ್ನು ಪ್ರತಿನಿಧಿಸುತ್ತದೆ ಎಂದು ಆಧ್ಯಾತ್ಮಿಕ ಪರಂಪರೆ ಹೇಳುತ್ತದೆ. ಅಂದರೆ ಜಗತ್ತಿನ ಆರಂಭ, ಅದರ ಬೆಳವಣಿಗೆ ಮತ್ತು ಅಂತ್ಯ ಎಂಬ ಮೂರೂ ಸಂಗತಿಗಳು ಈ ಒಂದು ಧ್ವನಿಯಲ್ಲಿ ಅಡಕವಾಗಿವೆ. ಇನ್ನೊಂದು ವಿಶೇಷ ಸಂಗತಿಯೆಂದರೆ ಓಂಕಾರವನ್ನು ಆದಿ ಮತ್ತು ಅಂತ್ಯವಿಲ್ಲದ ಪರಮತತ್ತ್ವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ ಸೃಷ್ಟಿಯ ಆರಂಭದಿಂದ ಅಂತ್ಯದವರೆಗಿನ ಎಲ್ಲವನ್ನೂ ಒಳಗೊಂಡಿರುವ ಧ್ವನಿ ಎಂದೂ ವಿವರಿಸಲಾಗುತ್ತದೆ.
ಹಾಗಾದರೆ ಯಾವುದು ಸರಿ? ಎರಡೂ ತಮ್ಮದೇ ಆದ ತಾತ್ವಿಕ ಅರ್ಥದಲ್ಲಿ ಸರಿ ಎನ್ನಬಹುದು. ಏಕೆಂದರೆ ಓಂಕಾರವನ್ನು ಕೇವಲ ಭಾಷೆಯ ಒಂದು ಅಕ್ಷರವಾಗಿ ನೋಡುವುದಕ್ಕಿಂತಲೂ ವಿಶ್ವತತ್ತ್ವದ ಸಂಕೇತವಾಗಿ ನೋಡಬೇಕು. ಮನುಷ್ಯನ ಜಾಗೃತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿಗಳನ್ನು ಅ, ಉ ಮತ್ತು ಮ್ ಎಂಬ ಧ್ವನಿಗಳ ಮೂಲಕ ವಿವರಿಸುತ್ತದೆ. ಅಂದರೆ ಓಂಕಾರ ವೆಂಬುದು ಬರೀ ದೇವರ ಹೆಸರನ್ನು ಹೇಳುವ ಮಂತ್ರವಲ್ಲ.
ಮನುಷ್ಯನ ಅಸ್ತಿತ್ವ, ಪ್ರಜ್ಞೆ ಮತ್ತು ಆತ್ಮತತ್ತ್ವವನ್ನು ಅರ್ಥಮಾಡಿಕೊಳ್ಳುವ ಒಂದು ಆಧ್ಯಾತ್ಮಿಕ ಮಾರ್ಗವೂ ಹೌದು. ಅದಕ್ಕಾಗಿಯೇ ಜಗತ್ತಿನ ಅತ್ಯಂತ ಶಕ್ತಿಶಾಲಿ ಮಂತ್ರಗಳಲ್ಲಿ ಓಂಕಾರಕ್ಕೆ ಪ್ರಮುಖ ಸ್ಥಾನವಿದೆ. ವೇದ, ಉಪನಿಷತ್ತುಗಳಲ್ಲಿರುವ ಮಹತ್ವದ ಜತೆಗೆ, ಆಧುನಿಕ ಜಗತ್ತಿನಲ್ಲಿಯೂ ಓಂಕಾರದ ಧ್ವನಿ ಮತ್ತು ಧ್ಯಾನದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ.
ಆಕ್ಸ್ʼಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಹೆಸರಿನಲ್ಲಿ ಓಂಕಾರವನ್ನು ಪರಮಶಕ್ತಿಯ ಸೂತ್ರವೆಂದು ಬಣ್ಣಿಸುವ ಮಾತುಗಳು ಕೇಳಿಬರುತ್ತವೆ. ಓಂಕಾರವನ್ನು ಮನಸಿನಲ್ಲಿಯೇ ಜಪಿಸ ಬೇಕೆಂಬ ನಿಯಮವಿಲ್ಲ. ಗಟ್ಟಿಯಾಗಿ ಕೂಗಬೇಕೆಂಬ ನಿಯಮವೂ ಇಲ್ಲ. ಆದರೆ ಧ್ವನಿಯನ್ನು ಹೊರಹಾಕಿ ಪಠಿಸುವುದರಿಂದ ಅದರ ಕಂಪನವನ್ನು ನಮ್ಮ ದೇಹದಲ್ಲಿಯೇ ಅನುಭವಿಸಲು ಸಾಧ್ಯವಾಗುತ್ತದೆ. ‘ಅ’ ಎಂಬ ಧ್ವನಿಯನ್ನು ಆರಂಭಿಸಿ, ‘ಉ’ ಎಂಬ ಧ್ವನಿಗೆ ಸಾಗುತ್ತಾ, ಕೊನೆಯಲ್ಲಿ ‘ಮ’ ಎಂಬ ಗುಂಯ್ಗುಡುವ ನಾದದಲ್ಲಿ ಮುಕ್ತಾಯಗೊಳಿಸಬೇಕು. ಆ ಧ್ವನಿ ನಿಧಾನವಾಗಿ ಮೌನ ದಲ್ಲಿ ಲೀನವಾಗುವುದನ್ನು ಗಮನಿಸಬೇಕು.
ಓಂಕಾರ ಜಪಿಸುವುದರಿಂದ ಕುಬೇರನ ಖಜಾನೆಯ ಬೀಗದ ಕೈ ಸಿಗುತ್ತದೆ, ರಾತ್ರಿ ಬೆಳಗಾಗುವು ದರೊಳಗೆ ಶ್ರೀಮಂತರಾಗಬಹುದು, ಕೇಳಿzಲ್ಲ ಸಿಗುತ್ತದೆ ಎಂಬ ಕಥೆಗಳನ್ನೆಲ್ಲ ಕೇಳಿರಬಹುದು. ಆದರೆ ಅಂಥ ಅತಿರೇಕಗಳನ್ನು ನಂಬದಿರಿ. ಓಂ ಮೊದಲು ನಮ್ಮ ಮನಸಿನ ಮೇಲೆ ಕೆಲಸ ಮಾಡು ತ್ತದೆ. ಪ್ರತಿದಿನ ಒಂದೇ ಧ್ವನಿಯನ್ನು ಏಕಾಗ್ರತೆಯಿಂದ ಉಚ್ಚರಿಸುವಾಗ ನಮ್ಮ ಗಮನ ಬೇರೆ ಆಲೋಚನೆಗಳಿಂದ ದೂರ ಸರಿಯುತ್ತದೆ. ಉಸಿರಾಟ ನಿಧಾನವಾಗಿ ಲಯಬದ್ಧವಾಗುತ್ತದೆ. ಮನಸು ವರ್ತಮಾನದ ಕ್ಷಣದ ಮೇಲೆ ನಿಲ್ಲಲು ಆರಂಭಿಸುತ್ತದೆ.
ನಿರಂತರವಾಗಿ ಧ್ಯಾನ ಮತ್ತು ಓಂಕಾರ ಜಪ ಮಾಡುವುದರಿಂದ ಕೆಲವರಲ್ಲಿ ಆತಂಕ, ಮಾನಸಿಕ ಒತ್ತಡ ಮತ್ತು ಉದ್ವಿಗ್ನತೆ ಕಡಿಮೆಯಾಗಲು ಸಹಾಯವಾಗುತ್ತದೆ. ನಿಧಾನವಾದ ಉಸಿರಾಟ ಮತ್ತು ಧ್ವನಿಯ ಕಂಪನ ದೇಹಕ್ಕೆ ವಿಶ್ರಾಂತಿಯ ಅನುಭವ ನೀಡುತ್ತದೆ. ಓಂಕಾರ ಪಠಣವು ಮನಸಲ್ಲಿರುವ ಭಯ, ಅಸಮಾಧಾನ ಮತ್ತು ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಅದರಲ್ಲೂ ಏಕಾಂಗಿಯಾಗಿ ಕುಳಿತುಕೊಂಡು ನಮ್ಮೊಳಗಿನ ಧ್ವನಿಯನ್ನು ನಾವೇ ಆಲಿಸುವ ಅಭ್ಯಾಸ ಬಹಳ ಮುಖ್ಯ.
ಓಂಕಾರ ಪಠಣ ನಮ್ಮ ಅನಾರೋಗ್ಯವನ್ನೆಲ್ಲ ಸರಿಪಡಿಸುವುದಿಲ್ಲ ನಿಜ. ಆದರೆ ಒತ್ತಡವನ್ನು ಕಡಿಮೆ ಮಾಡುವ ಅಭ್ಯಾಸಗಳು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡಬಲ್ಲವು. ದಿನಕ್ಕೆ ಹತ್ತು ನಿಮಿಷಗಳ ಕಾಲ ಓಂಕಾರ ಧ್ಯಾನಕ್ಕೆ ಮೀಸಲಿಟ್ಟರೆ, ದಿನದ ಆರಂಭದಲ್ಲಿಯೇ ಒಂದು ರೀತಿಯ ಮಾನಸಿಕ ಸಿದ್ಧತೆಯನ್ನು ಪಡೆಯಬಹುದು.
ದಿನವಿಡೀ ಎದುರಾಗುವ ಸವಾಲುಗಳನ್ನು ತುಸು ಸಮಾಧಾನದಿಂದ ಎದುರಿಸುವ ಮನಸ್ಥಿತಿಯೂ ಬೆಳೆಯಬಹುದು. ಓಂಕಾರ ಜಪವೆಂಬುದು ಔಷಧಿಗೆ ಪರ್ಯಾಯವಲ್ಲ. ಅದು ನಮ್ಮ ದೈನಂದಿನ ಬದುಕಿನಲ್ಲಿ ಮಾನಸಿಕ ನೆಮ್ಮದಿಗಾಗಿ ಅಳವಡಿಸಿಕೊಳ್ಳಬಹುದಾದ ಸರಳ ಅಭ್ಯಾಸ. ಓಂಕಾರದ ಮಹತ್ವವನ್ನು ವಿವರಿಸುವ ಒಂದು ಸುಂದರ ಕಥೆಯಿದೆ.
ಒಂದು ಊರಿನಲ್ಲಿ ಚಿಕ್ಕ ವಯಸ್ಸಿನ ಸನ್ಯಾಸಿಯೊಬ್ಬನಿದ್ದ. ಅವನಿಗೆ ಒಂದು ದಿನ ಕುಬೇರನ ಖಜಾನೆಯ ಬಗ್ಗೆ ಮಾಹಿತಿ ಸಿಗುತ್ತದೆ. ಆ ಖಜಾನೆಗೆ ಭಾರೀ ಬೀಗವಿದೆಯಂತೆ. ಅದನ್ನು ತೆರೆಯ ಬೇಕಾದರೆ ಒಂದು ವಿಶೇಷವಾದ ಕೀಲಿ ಬೇಕಂತೆ. ಅಷ್ಟೇ ಅಲ್ಲ, ಆ ಕೀಲಿಯನ್ನು ಬಳಸಿ ಬೀಗ ತೆರೆಯುವುದಕ್ಕೂ ಒಂದು ರಹಸ್ಯ ಮಂತ್ರವಿದೆಯಂತೆ! ಈ ವಿಷಯ ತಿಳಿದ ಸನ್ಯಾಸಿಗೆ ಅದನ್ನು ತಿಳಿದುಕೊಳ್ಳುವ ಆಸೆಯಾಗುತ್ತದೆ. ಆ ಮಂತ್ರವನ್ನು ತಿಳಿದಿರುವ ಗುರುವನ್ನು ಹುಡುಕಿಕೊಂಡು ಊರೂರು ಅಲೆಯುತ್ತಾನೆ.
ಕೊನೆಗೆ ಒಬ್ಬ ಗುರು ಸಿಗುತ್ತಾರೆ. ಗುರುಗಳ ಬಳಿ ಹೋಗಿ, ನನಗೆ ಆ ರಹಸ್ಯ ಮಂತ್ರವನ್ನು ಹೇಳಿಕೊಡಿ ಎಂದು ಕೇಳಿಕೊಳ್ಳುತ್ತಾನೆ. ಗುರುಗಳು ಅವನನ್ನು ತಮ್ಮ ಆಶ್ರಮದಲ್ಲಿ ಉಳಿದುಕೊಂಡು ಸೇವೆ ಮಾಡುತ್ತಾ, ಬೇರೆ ವಿದ್ಯೆಗಳನ್ನೂ ಕಲಿತುಕೊಳ್ಳುವಂತೆ ಸೂಚಿಸುತ್ತಾರೆ. ಖಜಾನೆಯ ಮಂತ್ರವನ್ನು ತಿಳಿದುಕೊಳ್ಳುವ ಆಸೆಯಿಂದ ಶಿಷ್ಯನೂ ಗುರುಗಳು ಹೇಳಿದ ಎಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾನೆ. ಕೊನೆಗೊಂದು ದಿನ, ಗುರುಗಳೇ, ಈಗಲಾದರೂ ಆ ರಹಸ್ಯ ಬೀಜಮಂತ್ರವನ್ನು ಹೇಳಿಕೊಡುತ್ತೀರಾ? ಎಂದು ಕೇಳುತ್ತಾನೆ. ಗುರುಗಳು ಅವನನ್ನು ಹತ್ತಿರ ಕರೆದು ಕಿವಿಯಲ್ಲಿ ಒಂದು ಮಂತ್ರವನ್ನು ಪಿಸುಗುಡುತ್ತಾರೆ.
ಅದೇ ಓಂಕಾರ! ಶಿಷ್ಯನಿಗೆ ಬಹಳ ಖುಷಿಯಾಗುತ್ತದೆ. ಇಷ್ಟು ದಿನಗಳ ಹುಡುಕಾಟಕ್ಕೆ ಕೊನೆಗೂ ಫಲ ಸಿಕ್ಕಿತಲ್ಲ ಎಂದುಕೊಂಡು ನೇರವಾಗಿ ಒಂದು ಬೀಗ ಹಾಕಿದ ಖಜಾನೆಯ ಬಳಿ ಹೋಗುತ್ತಾನೆ. ಓಂಕಾರ ಜಪಿಸುತ್ತಾ ಬೀಗ ತೆರೆಯಲು ಪ್ರಯತ್ನಿಸುತ್ತಾನೆ. ಆದರೆ ಬೀಗ ಮಾತ್ರ ತೆರೆಯುವುದಿಲ್ಲ! ಮತ್ತೆ ಮತ್ತೆ ಓಂಕಾರ ಜಪಿಸುತ್ತಾನೆ. ಎಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಆಗ ಅವನಿಗೆ ಗುರುಗಳ ಮೇಲೆಯೇ ಅನುಮಾನ ಶುರುವಾಗುತ್ತದೆ. ತನಗೆ ತಪ್ಪು ಮಂತ್ರ ಹೇಳಿಕೊಟ್ಟಿರ ಬಹುದೇ? ಅಥವಾ ಈ ಮಂತ್ರದಲ್ಲಿ ಯಾವ ಶಕ್ತಿಯೂ ಇಲ್ಲವೇ? ಎಂಬ ಪ್ರಶ್ನೆಗಳು ಕಾಡುತ್ತವೆ. ಸಿಟ್ಟಿನಿಂದ ಆಶ್ರಮದ ಕಡೆಗೆ ಹೊರಡುತ್ತಾನೆ. ದಾರಿಯಲ್ಲಿ ಒಬ್ಬ ತಾಯಿ ತನ್ನ ಮಗುವನ್ನು ಕರೆಯುತ್ತಿರುತ್ತಾಳೆ.
ಓಂ... ಓಂ... ಎಂದು ಜೋರಾಗಿ ಕೂಗುತ್ತಿದ್ದಾಳೆ. ಅಚ್ಚರಿಯಿಂದ ಆಕೆಯನ್ನು ನೋಡಿದಾಗ, ಆಕೆಯ ಮಗನ ಹೆಸರೇ ಓಂ ಎಂಬುದು ತಿಳಿಯುತ್ತದೆ. ಸ್ವಲ್ಪ ಮುಂದೆ ಹೋದಾಗ ಕೆಲವು ಯೋಗಿಗಳು ತಮ್ಮ ಪಾಡಿಗೆ ತಾವು ಓಂಕಾರ ಜಪಿಸುತ್ತಾ ಹೋಗುತ್ತಿರುವುದು ಕಾಣಿಸುತ್ತದೆ. ಹೀಗೆ ದಾರಿಯು ದ್ದಕ್ಕೂ ಅನೇಕ ಜನರ ಬಾಯಲ್ಲಿ ಅದೇ ಓಂಕಾರ ಕೇಳಿಸುತ್ತದೆ.
‘ಅರೆ! ಇದೇನು, ಈ ಮಂತ್ರ ಎಲ್ಲರಿಗೂ ಗೊತ್ತಿದೆಯಲ್ಲ! ಹಾಗಾದರೆ ಗುರುಗಳು ನನಗೆ ಹೇಳಿಕೊಟ್ಟದ್ದ ರಲ್ಲಿ ವಿಶೇಷವೇನಿದೆ?’ ಎಂದುಕೊಂಡು ಇನ್ನಷ್ಟು ಬೇಸರಗೊಳ್ಳುತ್ತಾನೆ. ಆಶ್ರಮಕ್ಕೆ ಹೋಗಿ ಗುರುಗಳ ಮುಂದೆ ನಿಂತು ತನ್ನ ಅಸಮಾಧಾನವನ್ನು ಹೊರಹಾಕುತ್ತಾನೆ. ಗುರುಗಳು ಶಾಂತವಾಗಿ, ಮಂತ್ರ ಸರಿಯಾಗಿಯೇ ಇದೆಯಲ್ಲ. ಹಾಗಿದ್ದರೆ ನಿನಗೇಕೆ ಅನುಮಾನ? ಎಂದು ಕೇಳುತ್ತಾರೆ. ನಂತರ ಒಂದು ಕಲ್ಲನ್ನು ಅವನ ಕೈಗೆ ಕೊಟ್ಟು, ಈ ಕಲ್ಲಿನ ಬೆಲೆ ಎಷ್ಟು ಎಂಬುದನ್ನು ಊರಿನಲ್ಲಿರುವ ಎಲ್ಲರನ್ನೂ ಕೇಳಿ ತಿಳಿದುಕೊಂಡು ಬಾ. ಆದರೆ ಇದನ್ನು ಯಾರಿಗೂ ಮಾರಬಾರದು ಎಂದು ಹೇಳುತ್ತಾರೆ.
ಶಿಷ್ಯ ಕಲ್ಲನ್ನು ಹಿಡಿದು ಊರೆಲ್ಲ ಸುತ್ತುತ್ತಾನೆ. ಒಬ್ಬೊಬ್ಬರನ್ನೂ ಕೇಳುತ್ತಾನೆ. ಆದರೆ ಎಲ್ಲರೂ ಅದನ್ನು ಸಾಮಾನ್ಯ ಕಂದು ಭಾವಿಸುತ್ತಾರೆ. ಕೆಲವರು ಅದಕ್ಕೆ ಬೆಲೆಯೇ ಇಲ್ಲ ಎನ್ನುತ್ತಾರೆ. ಇನ್ನೂ ಕೆಲವರು ಉಚಿತವಾಗಿ ಕೊಟ್ಟರೂ ಬೇಡ ಎನ್ನುತ್ತಾರೆ. ಕೊನೆಗೆ ಸುಸ್ತಾಗಿ ಒಬ್ಬ ಅಕ್ಕಸಾಲಿಗನ ಬಳಿಗೆ ಹೋಗುತ್ತಾನೆ. ಅಕ್ಕಸಾಲಿಗ ಆ ಕಲ್ಲನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತಾನೆ. ತಕ್ಷಣವೇ ಅವನ ಮುಖದಲ್ಲಿ ಅಚ್ಚರಿ ಮೂಡುತ್ತದೆ.
ಅರೆ! ಇದೆಲ್ಲಿಂದ ಸಿಕ್ಕಿತು ನಿನಗೆ? ಇದು ಸಾಮಾನ್ಯ ಕಲ್ಲಲ್ಲ. ಅತ್ಯಂತ ಅಮೂಲ್ಯವಾದ ರತ್ನ! ಎಂದು ಹೇಳುತ್ತಾನೆ. ಶಿಷ್ಯನಿಗೆ ಆಶ್ಚರ್ಯವಾಗುತ್ತದೆ. ಕಲ್ಲು ಎಂದು ಎಲ್ಲರೂ ತಿರಸ್ಕರಿಸಿದ ವಸ್ತುವನ್ನು ಅಕ್ಕಸಾಲಿಗ ಮಾತ್ರ ಅಮೂಲ್ಯ ರತ್ನವೆಂದು ಗುರುತಿಸಿದನಲ್ಲ! ಅವನು ತಕ್ಷಣ ಆಶ್ರಮಕ್ಕೆ ಹಿಂದಿರುಗಿ ನಡೆದದ್ದನ್ನೆಲ್ಲ ಗುರುಗಳಿಗೆ ವಿವರಿಸುತ್ತಾನೆ. ಆಗ ಗುರುಗಳು ಹೇಳುತ್ತಾರೆ. ನೋಡಿದೆಯಾ ಮಗನೇ? ಎಲ್ಲರ ಕಣ್ಣಿಗೂ ಇದು ಬರೀ ಕಲ್ಲಿನಂತೆ ಕಾಣಿಸಿತು. ಆದರೆ ಅದರ ನಿಜವಾದ ಮೌಲ್ಯ ವನ್ನು ತಿಳಿದವನಿಗೆ ಮಾತ್ರ ಇದು ಅಮೂಲ್ಯ ರತ್ನವಾಗಿ ಕಂಡಿತು. ಅದೇ ರೀತಿ ಓಂಕಾರದ ಮೌಲ್ಯವೂ ಎಲ್ಲರಿಗೂ ಅರ್ಥವಾಗುವುದಿಲ್ಲ. ಅದರ ಮಹತ್ವವನ್ನು ತಿಳಿದು, ಶ್ರದ್ಧೆಯಿಂದ ಅನುಸರಿಸಿದಾಗ ಮಾತ್ರ ಅದರ ನಿಜವಾದ ಅನುಭವ ದೊರೆಯುತ್ತದೆ.
ಯಾವುದನ್ನಾದರೂ ಕೇವಲ ಲಾಭದ ಆಸೆಯಿಂದ ಪಡೆಯಲು ಪ್ರಯತ್ನಿಸಿದರೆ ಅದರ ನಿಜವಾದ ಅರ್ಥ ತಿಳಿಯುವುದಿಲ್ಲ. ಅದಕ್ಕೆ ಪ್ರೀತಿ, ಶ್ರದ್ಧೆ ಮತ್ತು ಭಕ್ತಿ ಬೇಕು. ದುರಾಸೆ ಇರಬಾರದು ಎನ್ನುತ್ತಾರೆ. ಶಿಷ್ಯನಿಗೆ ಆಗ ತನ್ನ ತಪ್ಪಿನ ಅರಿವಾಗುತ್ತದೆ. ಓಂಕಾರವನ್ನು ಜಪಿಸುವುದರಿಂದ ಕುಬೇರನ ಖಜಾನೆಯ ಬೀಗ ತೆರೆಯದಿರಬಹುದು. ಆದರೆ ನಮ್ಮ ಮನಸಿನೊಳಗಿನ ನೆಮ್ಮದಿಯ ಬಾಗಿಲು ತೆರೆಯಲು ಅದು ಕೀಲಿಕೈ ಹೌದೇ ಹೌದು. ನಾವು ಜೀವನದಲ್ಲಿ ಎಲ್ಲವನ್ನೂ ಬಯಸುತ್ತೇವೆ.
ಹಣ, ಅಧಿಕಾರ, ಹೆಸರು, ಕೀರ್ತಿ, ಯಶಸ್ಸು, ಸಂಪತ್ತು... ಇವೆಲ್ಲವನ್ನೂ ಪಡೆಯುವ ಓಟದಲ್ಲಿ ನಮ್ಮನ್ನು ನಾವೇ ಮರೆತುಬಿಡುತ್ತೇವೆ. ಮನಸಿಗೆ ಸ್ವಲ್ಪ ವಿಶ್ರಾಂತಿ ಕೊಡುವುದನ್ನೂ ಮರೆತು ಬಿಡುತ್ತೇವೆ. ನಮ್ಮ ಸುತ್ತಲಿನ ಜಗತ್ತನ್ನು ಗೆಲ್ಲುವ ಆತುರದಲ್ಲಿ ನಮ್ಮೊಳಗಿನ ಜಗತ್ತನ್ನೇ ಕಳೆದು ಕೊಳ್ಳುತ್ತೇವೆ. ಅಂಥ ಸಂದರ್ಭದಲ್ಲಿ ಓಂಕಾರ ಒಂದು ನೆನಪಿನ ಗಂಟೆಯಂತೆ ಕೆಲಸ ಮಾಡುತ್ತದೆ.
ಸ್ವಲ್ಪ ಹೊತ್ತು ಎಲ್ಲವನ್ನೂ ಬದಿಗಿಟ್ಟು ನಮ್ಮ ಉಸಿರಾಟವನ್ನು ಗಮನಿಸುವಂತೆ ಮಾಡುತ್ತದೆ. ನಮ್ಮೊಳಗಿನ ಮೌನವನ್ನು ಆಲಿಸುವಂತೆ ಮಾಡುತ್ತದೆ. ಓಂಕಾರವೇ ಆಗಿರಲಿ, ಇನ್ಯಾವುದೇ ಬೀಜಮಂತ್ರವಾಗಿರಲಿ, ಪ್ರಾರ್ಥನೆಯೇ ಆಗಿರಲಿ... ಅದರ ಹಿಂದಿರುವ ಉದ್ದೇಶ ಮುಖ್ಯ. ಏನನ್ನೋ ಪಡೆಯಬೇಕು, ಯಾರನ್ನೋ ಮೀರಿಸಬೇಕು, ಯಾವುದೋ ಲಾಭವನ್ನು ಗಳಿಸಬೇಕು ಎಂಬ ದುರಾಸೆಗಿಂತಲೂ ಮನಸನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದಾಗಿರಬೇಕು. ಹಾಗಂತ ಓಂಕಾರ ವನ್ನು ಜಪಿಸಿದರೆ ಜೀವನದಲ್ಲಿ ಸಮಸ್ಯೆಗಳೇ ಬರುವುದಿಲ್ಲ ಎಂದಲ್ಲ. ಸಮಸ್ಯೆಗಳು ಬರುತ್ತವೆ.
ಸವಾಲುಗಳು ಎದುರಾಗುತ್ತವೆ. ನೋವು, ಆತಂಕ, ಸೋಲು ಎಲ್ಲವೂ ಸಹಜ. ಆದರೆ ಅವುಗಳನ್ನು ಎದುರಿಸುವಾಗ ಮನಸ್ಸು ಕುಸಿಯದಂತೆ ನೋಡಿಕೊಳ್ಳಲು ಇಂಥ ಸರಳ ಅಭ್ಯಾಸಗಳು ನೆರವಾಗಬಹುದು. ಟ್ರೈ ಮಾಡಿ ನೋಡಿ.