ತನ್ನಿಮಿತ್ತ
ರವಿ ರಾ. ಕಂಗಳ
(ಇಂದು ಶಿಕ್ಷಕರ ದಿನಾಚರಣೆ)
ನಾವೆಲ್ಲರೂ ದೇವರೆಂದು ಕೈಮುಗಿಯುವುದು ದೇಗುಲದಲ್ಲಿರುವ ವಿಗ್ರಹಕ್ಕೆ, ಜನ್ಮ ನೀಡಿದ ತಂದೆ-ತಾಯಿಗಳಿಗೆ ಹಾಗೂ ಸಮಾಜವನ್ನು ಉದ್ಧರಿಸುವ ಕಾಯಕದಲ್ಲಿ ತೊಡಗಿ, ಅಂಧಕಾರದಲ್ಲಿ ಮುಳುಗಿದ ಜೀವನಕ್ಕೆ ಸುಜ್ಞಾನದ ಬೆಳಕನ್ನು ನೀಡುವ ಗುರುಗಳಿಗೆ.
ಗುರುವಾದವನು ಸರಿ-ತಪ್ಪು, ಅಹಿತ-ವಿಹಿತ, ಧರ್ಮ- ಅಧರ್ಮ, ನೀತಿ-ಅನೀತಿ ಮುಂತಾದ ವಿಚಾರ ಗಳ ಬಗ್ಗೆ ಸರಿಯಾದ ತಿಳಿವಳಿಕೆ ನೀಡಿ, ಪ್ರಬುದ್ಧ ಜನಾಂಗವನ್ನು ನಿರ್ಮಾಣ ಮಾಡುವಾತ. ಇಂಥ ಗುರುವಿನ ಮಹಿಮೆಯನ್ನು ಇಡೀ ಜಗತ್ತಿಗೆ ಪರಿಚಯಿಸಿ, ವಿಶ್ವಮಾನ್ಯ ಗುರುವಾಗಿ, ಶ್ರೇಷ್ಠ ತತ್ವ ಜ್ಞಾನಿ ಎನಿಸಿಕೊಂಡವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಇವರು ‘ಭಾರತರತ್ನ’ ಎನಿಸಿ ಕೊಂಡರೂ, ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರೂ ತಾವೊಬ್ಬ ಶಿಕ್ಷಕ ಎಂಬುದನ್ನು ಮರೆಯಲಿಲ್ಲ.
ಅಂಥ ಆದರ್ಶ ವ್ಯಕ್ತಿತ್ವ ಇವರದು. ಹೀಗಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ ೫ನ್ನು ‘ಶಿಕ್ಷಕರ ದಿನ’ವಾಗಿ ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರ ಹೆತ್ತವರು ಜೀವನೋಪಾಯಕ್ಕಾಗಿ ತಮಿಳು ನಾಡಿನ ತಿರುತ್ತಣಿ ಎಂಬಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಾ ಮಗನ ಶ್ರೇಯೋಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದರು.
ತಮ್ಮ ಮಗ ತಿರುಪತಿ ತಿಮ್ಮಪ್ಪನ ಸೇವೆ ಮಾಡುವ ಪುರೋಹಿತನಾಗಲೆಂದು ಅವರು ಬಯಸಿದ್ದರು. ಅವರಿಗೆ ಬರುತ್ತಿದ್ದ ಅಲ್ಪಾದಾಯದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿತ್ತು. ಆದರೆ ರಾಧಾ ಕೃಷ್ಣನ್‌ರಿಗೆ ಓದಿನ ಬಗ್ಗೆ ಅಪಾರ ಹಂಬಲ. ಹೀಗಾಗಿ ಮನೆಯಿಂದ ಆರ್ಥಿಕ ನೆರವು ಸಿಗಲಿಲ್ಲ ವೆಂದು ಸುಮ್ಮನೆ ಕೂರದೆ ಸ್ಕಾಲರ್‌ಶಿಪ್ ಹಣದಲ್ಲೇ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದರು.
ಇದನ್ನೂ ಓದಿ: Ravi Ra Kangala Column: ನಮ್ಮ ಈ ಗಣೇಶ ಸಂಘಟನಾ ಶಕ್ತಿಯ ಪ್ರತೀಕ
ಈಗಿನ ಚೆನ್ನೈನ ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದ ಮೇಲೆ ಬಿ.ಎ ಮತ್ತು ಎಂ.ಎ ಪದವಿಗಳನ್ನು ಪಡೆದುಕೊಂಡರು. ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ‘ದಿ ಎಥಿಕ್ಸ್ ಆಫ್ ವೇದಾಂತ’ ಎಂಬ ಪ್ರಬಂಧವು ಅವರ ಬದುಕಿನ ದಿಕ್ಕನ್ನೇ ಬದಲಿಸಿತು.
ಕೇವಲ 20ರ ಹರೆಯದ ಅವರಲ್ಲಿ ತುಂಬಿಕೊಂಡಿದ್ದ ಬಗೆಬಗೆಯ ಸಿದ್ಧಾಂತಗಳು, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ಉನ್ನತಿಗೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜಿನಲ್ಲಾಗಲೇ ಗುರುತಿಸಿದ್ದರಂತೆ. ಅಂತೆಯೇ ರಾಧಾಕೃಷ್ಣನ್ ಅವರು ತತ್ವಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಪಡೆದು ವಿಶ್ವಮಾನ್ಯರಾಗಿದ್ದು ಇತಿಹಾಸ.
ಹಿಂದೂ ಧರ್ಮದ ಸಾರ ಮತ್ತು ಆಚಾರ್ಯತ್ರಯರ ಸಿದ್ಧಾಂತಗಳನ್ನು ಮಾತ್ರವಲ್ಲದೆ, ಪ್ಲೇಟೋ, ಪ್ಲಾಟಿನಸ್ ಮುಂತಾದ ಮಹನೀಯರ ತತ್ವಜ್ಞಾನವನ್ನೂ ಅರಗಿಸಿಕೊಂಡ ರಾಧಾಕೃಷ್ಣನ್, ಸತತ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದಾಗಿ ಸಾಧನೆಯ ಶಿಖರವನ್ನೇರಿದರು. ಯಾವುದೇ ಗಹನ ಪ್ರಶ್ನೆಗೂ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದ್ದರು.
ಹೀಗಾಗಿ ಅವರನ್ನು ‘ಚಲಿಸುವ ವಿಶ್ವಕೋಶ’ ಎನ್ನುತ್ತಿದ್ದರು. ಬಾವಿಯಲ್ಲಿ ನೀರಿದ್ದರೆ ಮಾತ್ರವೇ ಬಿಂದಿಗೆಯನ್ನು ಬಿಟ್ಟು ನೀರನ್ನು ಸೇದಿಕೊಳ್ಳಲು ಸಾಧ್ಯವಾಗುವಂತೆ, ಶಿಕ್ಷಕರು ಕೂಡ ಸದಾ ಅಧ್ಯಯನಶೀಲರಾಗಿರುವ ಪ್ರವೃತ್ತಿಯನ್ನು ಬೆಳೆಸಿಕೊಂಡು, ಜ್ಞಾನವೆಂಬ ನೀರು ತುಂಬಿದ ಬಾವಿ ಗಳಾಗಬೇಕು. ಎಷ್ಟೇ ಅಧ್ಯಯನ ಮಾಡಿದ್ದರೂ ಅದನ್ನು ಸತತ ಅಭ್ಯಾಸದಿಂದ ಬೆಳಗಿಸದಿದ್ದರೆ, ಅದು ಕ್ರಮೇಣ ನಿರುಪಯುಕ್ತವಾಗುತ್ತದೆ.
ಸ್ವತಃ ತಾನು ಉರಿಯದ ದೀಪವು ಇನ್ನೊಂದು ದೀಪವನ್ನು ಬೆಳಗಿಸಲಾಗದು, ಅಲ್ಲವೇ? ಹಾಗಾಗಿ, ಶಿಕ್ಷಕ ವೃತ್ತಿಯಲ್ಲಿರುವವರೆಲ್ಲರೂ ಯಾವಾಗಲೂ ವಿದ್ಯಾರ್ಥಿಗಳಾಗಿಯೇ ಇದ್ದು, ಸತತ ಅಧ್ಯಯನ- ಅಧ್ಯಾಪನದಲ್ಲಿ ತೊಡಗಿದಾಗ ಮಾತ್ರ, ಮತ್ತೊಂದು ದೀಪವನ್ನು ಬೆಳಗಿಸಲು ಸಾಧ್ಯ. ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಬೇಕಾಗಿರುವ ಮಾನವ ಸಂಪನ್ಮೂಲ ನಿರ್ಮಾಣದಂಥ ಬಹುದೊಡ್ಡ ಕಾರ್ಯವನ್ನು ಮಾಡುವ ಏಕೈಕ ರಂಗವೆಂದರೆ ಶಿಕ್ಷಣ ಕ್ಷೇತ್ರ.
ಇಂಥ ಅಮೂಲ್ಯ ನಿರ್ಮಾಣಕಾರ್ಯದಲ್ಲಿ ಪಾಲ್ಗೊಳ್ಳುವವರೇ ಶಿಕ್ಷಕರು. ಗುರುವಾದವನು- ಸಂಸ್ಕಾರ ನೀಡುವ ಸೃಷ್ಟಿಕರ್ತ ಬ್ರಹ್ಮನಾಗಿ, ಬದುಕಿನ ಸಂಕಷ್ಟಗಳನ್ನು ಪರಿಹರಿಸಿ ಕಾಪಾಡುವ ವಿಷ್ಣುವಾಗಿ, ವಿಧ್ವಂಸಕ ಚಿತ್ತಸ್ಥಿತಿಯನ್ನು ಹರಣ ಮಾಡುವ ಮಹೇಶ್ವರನಾಗಿ ಮಹತ್ತರ ಪಾತ್ರ ವನ್ನು ನಿರ್ವಹಿಸುತ್ತಾನೆ.
“ನಿನ್ನ ಮುಂದೆ ಏಕಕಾಲದಲ್ಲಿ ಗುರು ಮತ್ತು ಗೋವಿಂದ (ದೇವರು) ಪ್ರತ್ಯಕ್ಷರಾದರೆ, ಯಾರಿಗೆ ಮೊದಲು ನಮಸ್ಕರಿಸುವೆ?" ಎಂದು ಗುರುಗಳು ಕೇಳಿದಾಗ, “ಮೊದಲು ಗುರುವಿಗೆ ನಮಸ್ಕರಿಸುವೆ; ಏಕೆಂದರೆ ಆತನೇ ಅಲ್ಲವೇ ನನಗೆ ದೇವರನ್ನು ಪರಿಚಯಿಸಿದ್ದು..." ಎಂದರಂತೆ ಕಬೀರದಾಸರು. ಗುರುವಿನ ಶ್ರೇಷ್ಠತೆಯನ್ನು ಸಾರುವ ದೃಷ್ಟಾಂತವಿದು.
ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸಿ, ಸುಜ್ಞಾನವೆಂಬ ಬೆಳಕನ್ನು ನೀಡಿ ಕಣ್ಣು ತೆರೆಸು ವಾತನೇ ಗುರು. ಪ್ರತಿಯೊಬ್ಬರ ಜೀವನ ರೂಪುಗೊಳ್ಳುವುದೇ ’ಗುರು’ ಎಂಬ ಶ್ರೇಷ್ಠ ವ್ಯಕ್ತಿಯ ಮಾರ್ಗ ದರ್ಶನದಿಂದ. ಶಿಷ್ಯನಿಗೆ ಅಕ್ಷರಗಳನ್ನು ತಿದ್ದಿಸುವಾಗಿನಿಂದ ಮೊದಲ್ಗೊಂಡು, ಭಾವನೆಗಳನ್ನು ಬರಹ ರೂಪದಲ್ಲಿ ಕಲಿಸುವ, ತರುವಾಯದಲ್ಲಿ ಬದುಕನ್ನು ಕಟ್ಟಿಕೊಳ್ಳುವ ದಾರಿಯನ್ನು ತೋರಿಸುವವರೆಗೆ ಗುರುವಿನ ಹೆಜ್ಜೆಗುರುತುಗಳಿರುತ್ತವೆ.
ಇಂಥ ಮಾಗದರ್ಶಿತ ಶಿಷ್ಯನು ತನ್ನ ಸಾಧನೆಯಿಂದ ಗುರುತಿಸಲ್ಪಟ್ಟಾಗ, ಗುರುವಿಗೆ ಸಿಗುವ ಸಂತೃಪ್ತ ಭಾವಕ್ಕೆ ಬೆಲೆಕಟ್ಟಲಾಗದು. ಇಂದು ಯಾರೇ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ತಮ್ಮ ಸಾಧನೆಗೆ ಕಾರಣರಾದ ಗುರುಗಳನ್ನು ಸ್ಮರಿಸದಿರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಅಂದು ನಾನು ಶಾಲೆ ಬಿಟ್ಟ ಸಂದರ್ಭದಲ್ಲಿ, ರಾಜಪ್ಪ ಮೇಷ್ಟ್ರು ಮನೆಮನೆಗೆ ಬಂದು, ಶಾಲೆ ಬಿಟ್ಟ ನನ್ನಂಥ ಹತ್ತಾರು ವಿದ್ಯಾರ್ಥಿಗಳನ್ನು ನೇರವಾಗಿ ೫ನೇ ತರಗತಿಗೆ ಸೇರಿಸಿಕೊಂಡು ಅಕ್ಷರ ಜ್ಞಾನವನ್ನು ನೀಡದಿದ್ದಿದ್ದರೆ, ನಾನಿಂದು ಇಂಥ ಸಾಧನೆಯನ್ನು ಮಾಡಲಾಗುತ್ತಿರಲಿಲ್ಲ" ಎಂದು ತಮ್ಮ ಶಾಲಾ ಗುರುಗಳನ್ನು ಸ್ಮರಿಸಿ ಕೊಂಡು ಭಾವುಕರಾಗಿ ಹೇಳಿದ್ದಿದೆ.
ಹುಟ್ಟುವ ಪ್ರತಿಯೊಂದು ಮಗುವೂ ವಿಶ್ವಮಾನವನೇ; ಆದರೆ ಸುತ್ತಲಿನ ಪರಿಸರದ ಪ್ರಭಾವ ಬೀಳುತ್ತಾ ಹೋದಂತೆ ಅದರ ಸಂಸ್ಕಾರದಲ್ಲಿ ವ್ಯತ್ಯಯವಾಗಿ ‘ಅಲ್ಪಮಾನವ’ನಂತೆ ಅದು ವರ್ತಿಸ ತೊಡಗುತ್ತದೆ. ಆ ಸಂದರ್ಭದಲ್ಲಿ ಮಗುವಿಗೆ ಉತ್ತಮ ಸಂಸ್ಕಾರವನ್ನು ದೊರಕಿಸಿ ಕೊಡುವಲ್ಲಿ ಗುರುವಿನ ಪಾತ್ರ ಅತಿಮುಖ್ಯವಾಗುತ್ತದೆ.
ಅನ್ನದಾನದಂತೆ ವಿದ್ಯಾದಾನವೂ ಶ್ರೇಷ್ಠವಾದುದು. ಅನ್ನದಿಂದ ಸಿಗುವ ತೃಪ್ತಿಯು ಆ ಕ್ಷಣದ್ದಾದರೆ, ವಿದ್ಯೆಯಿಂದ ಸಿಗುವ ತೃಪ್ತಿಯು ಶಾಶ್ವತವಾದದ್ದು. ತಾಯಿ ಉಸಿರು ಕೊಟ್ಟರೆ, ತಂದೆ ಹೆಸರು ಕೊಡುತ್ತಾನೆ; ಆದರೆ ಗುರುಗಳು, ‘ಉಸಿರು ಇರೋವರೆಗೂ ಹೆಸರು ಉಳಿಸಿಕೊಳ್ಳೋ ವಿದ್ಯೆ’ಯನ್ನು ಕೊಡುತ್ತಾರೆ. ಅಂಥ ವಿದ್ಯಾದಾನಕ್ಕೆ ಕಾರಣರಾಗುವ ಗುರುಗಳಂಥ ಪ್ರಾತಃ ಸ್ಮರಣೀಯರನ್ನು ಮರೆಯಲಾದೀತೇ? ‘ಅಭ್ಯಾಸವಿದ್ದಂತೆ ವಿದ್ಯೆ, ಕರ್ಮವಿದ್ದಂತೆ ಬುದ್ಧಿ, ಪ್ರಯತ್ನವಿದ್ದಂತೆ ಸಂಪತ್ತು, ಭಾಗ್ಯವಿದ್ದಂತೆ ಫಲ’ ಎಂಬುದನ್ನು ಬೋಧಿಸುವ ಗುರುತರ ಜವಾಬ್ದಾರಿಯನ್ನು ಹೊತ್ತವರೇ ಗುರುಗಳು.
ಕೇವಲ ಪುಸ್ತಕ ಜ್ಞಾನವೊಂದೇ ಉಪಯುಕ್ತವಲ್ಲ, ಅದನ್ನು ಮಗುವಿನ ತಲೆಯಲ್ಲಿ ಯಥಾವತ್ತಾಗಿ ತುಂಬಿದರೂ ಪ್ರಯೋಜನವಿಲ್ಲ. ಪುಸ್ತಕಜ್ಞಾನವು ಬಾಯಿಪಾಠವಾಗಬೇಕು, ನಂತರ ಹೃದ್ಗತವಾಗ ಬೇಕು, ತರುವಾಯದಲ್ಲಿ ಪ್ರತಿನಿತ್ಯವೂ ಬುದ್ಧಿಯ ಮೂಲಕ ವ್ಯವಹಾರದಲ್ಲಿ ತೇಜೋ ರೂಪದಿಂದ ಪ್ರಕಟವಾಗಬೇಕು. ಆಗ ಮಾತ್ರವೇ ಶಿಕ್ಷಣಕ್ಕೆ ಸಾರ್ಥಕತೆ ದಕ್ಕೀತು.
ಮೇಣದಬತ್ತಿಯು ತನ್ನನ್ನು ತಾನು ಸುಟ್ಟುಕೊಂಡು ಜಗಕ್ಕೆ ಬೇಳಕು ನೀಡುವಂತೆ ಶಿಕ್ಷಕರ ವೃತ್ತಿಯು ಶ್ರೇಷ್ಠವಾದುದಾಗಿದೆ. ಆದರೆ, ಮಕ್ಕಳು ತಪ್ಪು ಮಾಡಿದಾಗ ತಿಳಿಹೇಳುವ ಶಿಕ್ಷಕರಿಗೆ ನೈತಿಕ ಬೆಂಬಲ ಸಿಗದಿದ್ದರೆ ಶಿಕ್ಷಕರು ತಮ್ಮ ಜವಾಬ್ದಾರಿಯಿಂದ ವಿಮುಖರಾಗುವಂತಾಗುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಕೆಲವು ನ್ಯೂನತೆಗಳಿಂದಾಗಿ, ಗುರುವಿನ ಗುರುತರ ಜವಾಬ್ದಾರಿಯನ್ನು ಪ್ರಶ್ನಿಸು ವಂತೆ ಆಗುತ್ತಿದೆ.
ಬೆರಳೆಣಿಕೆಯಷ್ಟು ಶಿಕ್ಷಕರ ವಿಲಕ್ಷಣ ವರ್ತನೆಗಳಿಂದಾಗಿ ಇಡೀ ಶಿಕ್ಷಕ ಸಮುದಾಯವನ್ನೇ ದೂಷಿಸುವ ಬೆಳವಣಿಗೆಗಳು ಕೆಲವೆಡೆ ಕಾಣಬರುತ್ತಿವೆ. ಆದ್ದರಿಂದ, ಗುರು ಸ್ಥಾನದಲ್ಲಿರುವವರು ತಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ಅರಿಯಬೇಕು. ಅದೇ ರೀತಿಯಲ್ಲಿ, ನಿಷ್ಠೆಯಿಂದ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಉತ್ತಮ ಸಂಸ್ಕಾರವನ್ನೂ ನೀಡುವುದಕ್ಕೆ ಶಿಕ್ಷಕರಿಗೆ ಅನುವು ಮಾಡಿಕೊಡಬೇಕು, ಅಂಥವರಿಗೆ ಸಮಾಜದ ಇತರರು ಗೌರವ ನೀಡಬೇಕು.
“ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಏವ ಕೇವಲಂ" ಎಂಬುದೊಂದು ಮಾತಿದೆ. ಅಂದರೆ, ‘ಸಾಕ್ಷರಾ’ ಎಂಬ ಪದವನ್ನು ವಿಲೋಮ ಮಾಡಿ ಓದಿದಾಗ ಅದು ‘ರಾಕ್ಷಸಾ’ ಎಂದಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದಿನ ಕೆಲವೊಂದು ತಥಾಕಥಿತ ‘ವಿದ್ಯಾವಂತರು’ ರಾಕ್ಷಸೀ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು, ಅಮಾಯಕರನ್ನು ಗುರಿಯಾಗಿಸಿಕೊಂಡು ಹೀನಕೃತ್ಯಗಳನ್ನು ಎಸಗುತ್ತಾ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ.
“ವಿದ್ಯೆ ಬಂತು ವಿನಯ ಹೋಯಿತು, ಸಮೃದ್ಧಿ ಬಂತು ಸಂಸ್ಕೃತಿ ಹೋಯಿತು, ಜಾತಿ ಬಂತು ಪ್ರೀತಿ ಹೋಯಿತು, ಸ್ವಾತಂತ್ರ್ಯ ಬಂತು ಸೌಜನ್ಯ ಹೋಯಿತು" ಎಂದಿದ್ದಾರೆ ಸಿದ್ದಯ್ಯ ಪುರಾಣಿಕರು. ಅವರ ನೋವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಆದರೆ ಇದಕ್ಕೆಲ್ಲ ಶಿಕ್ಷಕರೇ ಹೊಣೆ ಎಂದು ದೋಷಾರೋಪ ಹೊರಿಸುವುದು ಎಷ್ಟು ಸರಿ? ನಾವು ಮಾಡುವ ಅಭ್ಯಾಸ ಮತ್ತು ಅನು ಸರಣೆಯ ಮೇಲೆ ವಿದ್ಯೆ ಪ್ರಾಪ್ತವಾಗುತ್ತದೆ, ಸಾರ್ಥಕತೆಯನ್ನು ಪಡೆದು ಕೊಳ್ಳುತ್ತದೆ ಎಂಬುದನ್ನು ಸಮಾಜದ ಪ್ರತಿಯೊಬ್ಬರೂ ಅರಿಯಬೇಕು.
ಮಕ್ಕಳ ಮಾರ್ಗಚ್ಯುತಿಗೆ ಅವರನ್ನು ತಿದ್ದದ ಶಿಕ್ಷಕರೇ ಕಾರಣ ಎಂದು ಟೀಕಿಸದೆ, ತಂದೆ-ತಾಯಿ- ಕುಟುಂಬಿಕರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಮಕ್ಕಳನ್ನು ಪ್ರೀತಿಸು ವುದು, ಮುದ್ದಿಸುವುದು ಎಷ್ಟು ಮುಖ್ಯವೋ, ಮಕ್ಕಳು ತಪ್ಪುಮಾಡಿದಾಗ ಕಿವಿ ಹಿಂಡಿ ಅವರನ್ನು ತಿದ್ದುವುದೂ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ಅಂಥ ಮಕ್ಕಳ ಭವಿಷ್ಯವು ಭದ್ರವಾಗುವುದಿಲ್ಲ, ಭವ್ಯ ವಾಗುವುದಿಲ್ಲ. ಸಮಾಜಕ್ಕೆ ಮತ್ತಷ್ಟು ಮುಠ್ಠಾಳರ ಸೇರ್ಪಡೆ ಆದಂತಾಗುತ್ತದೆ.
ಆದ್ದರಿಂದ, ಸುಶಿಕ್ಷಿತ ಶಿಷ್ಯವರ್ಗವನ್ನು ಸೃಜಿಸಿ ಆದರ್ಶಮಯವಾದ ಸದೃಢ ಸಮಾಜವನ್ನು ನಿರ್ಮಿಸಲು ಕಟಿಬದ್ಧರಾಗುವ ಗುರುವೃಂದಕ್ಕೆ ನಾವೆಲ್ಲರೂ ನಮಿಸೋಣ. ಗುರುವಿನ ಮಹಿಮೆ ಯನ್ನು ವಿಶ್ವಕ್ಕೇ ತೋರಿಸಿಕೊಟ್ಟ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ಜೀವನವನ್ನು ಅನುಸರಿಸೋಣ.
ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಮಾತ್ರವೇ ‘ಗುರುಸ್ಮರಣೆ’ ಮಾಡದೆ, ಬದುಕಿನುದ್ದಕ್ಕೂ ಗುರುಗಳನ್ನು ಗೌರವಿಸೋಣ. ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು...
(ಲೇಖಕರು ಶಿಕ್ಷಕರು)