ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Ra Kangala Column: ನಮ್ಮ ಈ ಗಣೇಶ ಸಂಘಟನಾ ಶಕ್ತಿಯ ಪ್ರತೀಕ

ಗಣೇಶ ಉತ್ಸವವು ಹಿಂದೂಗಳ ಪವಿತ್ರ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಆಚರಣೆಗಾಗಿ ಹಲವು ದಿನಗಳಿಂದಲೂ ಸಿದ್ಧತೆ ಮಾಡಿಕೊಂಡು, ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಿ ಪ್ರಾರ್ಥಿಸುವುದು ನಾಡಿನ ಉದ್ದಗಲಕ್ಕೂ ಕಾಣಬರುವ ಪರಿಪಾಠ. ಆದರೆ ನಾವು ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಯು ‘ಪರಿಸರ-ಸ್ನೇಹಿ’ ಆಗಿದೆಯಾ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಬೇಕು.

Ravi Ra Kangala Column: ನಮ್ಮ ಈ ಗಣೇಶ ಸಂಘಟನಾ ಶಕ್ತಿಯ ಪ್ರತೀಕ

Ashok Nayak Ashok Nayak Aug 27, 2025 5:05 AM

ತನ್ನಿಮಿತ್ತ

ರವಿ ರಾ.ಕಂಗಳ

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಯಾವುದೇ ಶುಭಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮುನ್ನ ಈ ಶ್ಲೋಕವನ್ನು ಹೇಳುವುದು ಭಾರತೀಯ ಸಂಪ್ರದಾಯದಲ್ಲಿ ರೂಢಿಗತವಾಗಿದೆ. ‘ಶ್ರೇಯಾಂಸಿ ಬಹು ವಿಘ್ನಾನಿ’ ಎಂಬಂತೆ ಶುಭ ಕಾರ್ಯಗಳಿಗೆ ವಿಘ್ನಗಳೇ ಹೆಚ್ಚು. ಅದನ್ನು ಪೂರ್ಣಗೊಳಿಸುವವರೆಗೆ ಅನೇಕ ಸಂಕಷ್ಟಗಳು ತಲೆ ದೋರುತ್ತವೆ. ಅದಕ್ಕಾಗಿ ಯಾವುದೇ ವಿಘ್ನಗಳು ಬಾರದಂತೆ ಸಂಕಷ್ಟಹರ, ವಿಘ್ನ ನಿವಾರಕ ವಿಘ್ನೇಶ್ವರನನ್ನು ಮೊದಲು ಪ್ರಾರ್ಥಿಸುತ್ತೇವೆ.

ಭಾರತದಲ್ಲಿನ ಧಾರ್ಮಿಕ ಆಚರಣೆಗಳು, ನಮ್ಮ ಸಂಸ್ಕೃತಿಯ ಸಾರವನ್ನು ತಿಳಿಸುವು ದರೊಂದಿಗೆ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಭಾದ್ರಪದ ಮಾಸದ ಶುಕ್ಲ ಚೌತಿಯ ತಿಥಿಯಂದು ಪ್ರತಿಯೊಂದು ಮನೆ, ಶಾಲೆ, ಕಚೇರಿಗಳು, ಗಲ್ಲಿ ಗಲ್ಲಿಗಳಲ್ಲಿ ಶ್ರೀ ಗಣಪನ ವೈವಿಧ್ಯಮಯ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅನಂತ ಚತುರ್ದಶಿಯವರೆಗೆ ಪೂಜಿಸಿ ದಿನಕ್ಕೊಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿ, ಭಕ್ತಿ-ಭಾವದಲ್ಲಿ ಮಿಂದೆದ್ದು, ಅಂತಿಮ ದಿನ ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ವಿಸರ್ಜಿಸುವುದು ವಾಡಿಕೆಯಾಗಿದೆ.

ಶ್ರೀ ಗಣೇಶ, ಏಕದಂತ, ವಿನಾಯಕ, ವಿಘ್ನೇಶ್ವರ, ಮೋದಕ ಪ್ರಿಯ, ಲಂಬೋದರ ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಮೂಷಿಕವಾಹನ ಗಣೇಶನು ವಿದ್ಯೆ ಮತ್ತು ಜ್ಞಾನದ ಅಧಿಪತಿ ಯಾಗಿದ್ದು, ಸಂಪತ್ತು ಹಾಗೂ ಅದೃಷ್ಟದ ಅಧಿನಾಯಕನಾಗಿ ಪ್ರಥಮ ಪೂಜಿತ ದೈವವಾಗಿದ್ದಾನೆ.

ಶಿವಪುರಾಣದಲ್ಲಿ ಗಣೇಶನ ಅವತಾರದ ಉಲ್ಲೇಖ ಹೀಗಿದೆ- ಪರಶಿವನ ಪತ್ನಿಯಾದ ಪಾರ್ವತಿಯು, ತಾನು ಏಕಾಂತದಲ್ಲಿದ್ದಾಗ ಹಾಗೂ ತನ್ನ ಸಖಿಯರೊಡನೆ ಇರುವ ಸಮಯದಲ್ಲಿ ಅನುಮತಿ ಯಿಲ್ಲದೆ, ಅನಪೇಕ್ಷಿತವಾಗಿ ಬರುವವರನ್ನು ತಡೆಯಲು ದ್ವಾರದ ಬಳಿ ಕಾಯಲು ಗಣಪಡೆಯನ್ನು ಇಟ್ಟಿರುತ್ತಾಳೆ.

ಇದನ್ನೂ ಓದಿ:Ganesh Chaturthi: ಗಣೇಶ ಚತುರ್ಥಿ 2025: ಪೂಜಾ ಸಮಯ, ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಒಮ್ಮೆ ತನ್ನ ಪತಿಯೇ ಅನುಮತಿಯಿಲ್ಲದೆ ಪ್ರವೇಶ ಮಾಡಿದಾಗ ಕುಪಿತಳಾದ ಪಾರ್ವತಿಯು ಮತ್ತೊಮ್ಮೆ ಈ ಘಟನೆ ಮರುಕಳಿಸಬಾರದೆಂದು ತನ್ನ ಮೈಯಲ್ಲಿರುವ ಅವನಿಯ ಪ್ರತೀಕವಾದ ಮಣ್ಣನ್ನು ತೆಗೆದು ಮುದ್ದಾದ ಬಾಲಕನನ್ನು ಸೃಜಿಸಿ ಅದಕ್ಕೆ ಜೀವವನ್ನು ತುಂಬುತ್ತಾಳೆ.

ದ್ವಾರದ ಬಳಿ ಕಾವಲಿರಲು ಹೇಳಿ, “ಯಾರೇ ಬಂದರೂ ನನ್ನ ಅನುಮತಿಯಿಲ್ಲದೆ ಒಳಗೆ ಪ್ರವೇಶ ನೀಡಬೇಡ" ಎಂದು ಕಟ್ಟಪ್ಪಣೆ ಮಾಡಿ ಸ್ನಾನಕ್ಕೆ ತೆರಳುತ್ತಾಳೆ. ಹೀಗಿರುವಾಗ ಕೈಲಾಸಪತಿಯಾದ ಪರಶಿವನ ಆಕಸ್ಮಿಕ ಆಗಮನವಾದಾಗ ಈ ಬಾಲಕ ಆತನನ್ನು ತಡೆಯುತ್ತಾನೆ. ರೌದ್ರಾವತಾರ ತಾಳಿದ ಪರಶಿವನು, ರುದ್ರತಾಂಡವ ನೃತ್ಯವನ್ನು ಆಡುತ್ತ ತನ್ನಲ್ಲಿನ ತ್ರಿಶೂಲದಿಂದ ಆ ಬಾಲಕನ ಶಿರಚ್ಛೇದ ಮಾಡುತ್ತಾನೆ.

ಇದರಿಂದ ಕುಪಿತಗೊಂಡ ಪಾರ್ವತಿಯನ್ನು ಸಮಾಧಾನಪಡಿಸಲು ಶಿವನು ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ ಆನೆಯ ಶಿರವನ್ನು ತರಿಸಿ, ಬಾಲಕನ ಮುಂಡಕ್ಕೆ ಸೇರಿಸಿ ಬದುಕಿಸಿ ಅವನನ್ನು ತನ್ನ ಮಗನಾಗಿ ಸ್ವೀಕರಿಸಿ “ಸರ್ವಕಾರ್ಯಗಳಲ್ಲೂ ಪ್ರಥಮ ಪೂಜಿತನಾಗಿ ಭೂಲೋಕದಲ್ಲಿ ಪೂಜಿಸಲ್ಪಡಲಿ, ನನ್ನ ಎಲ್ಲ ರುದ್ರಗಣಗಳಿಗೆ ಈತನೇ ಅಧಿಪತಿಯಾಗಿ ಗಣಪತಿ ಎಂದು ಹೆಸರುವಾಸಿ ಯಾಗಲಿ" ಎಂದು ಹರಸುತ್ತಾನೆ.

ಲಿಂಗ ಪುರಾಣದಲ್ಲಿ ಗಣೇಶನ ಅವತಾರದ ಉಲ್ಲೇಖ ಹೀಗಿದೆ- ಒಮ್ಮೆ ಅಸುರರ ಉಪಟಳವು ಹೆಚ್ಚಾಗಿ ದೇವಾನುದೇವತೆಗಳಿಗೆ ಬಹಳ ತೊಂದರೆಯಾಗುತ್ತದೆ. ಆಗ ದೇವಗುರು ಬೃಹಸ್ಪತಿಯು, ದೇವತೆಗಳು ಅಸುರರಿಂದ ಎದುರಿಸುತ್ತಿರುವ ಸಂಕಷ್ಟಗಳನ್ನು ಪರಶಿವನಲ್ಲಿ ವಿವರಿಸಿದಾಗ ಪರಶಿವನು “ಅಸುರರು ಆತ್ಮವೇದ್ಯದಿಂದ ಕಠಿಣ ಉಪಾಸನೆ ಮಾಡಿ ನನ್ನಿಂದ ವರವನ್ನು ಪಡೆದಿದ್ದಾರೆ. ಅವರು ಒಳ್ಳೆಯ ಕಾರ್ಯದ ಬದಲು ಕೆಟ್ಟ ಕಾರ್ಯಗಳನ್ನು ಮಾಡುತ್ತಿರುವುದು ವಿಪರ್ಯಾಸ; ನನ್ನಿಂದ ಯಾರೇ ವರಗಳನ್ನು ಪಡೆಯುವುದು ಲೋಕಕಲ್ಯಾಣಕ್ಕಾಗಿಯೇ ಹೊರತು ಲೋಕಪೀಡನೆ ಗಾಗಿ ಅಲ್ಲ. ಧರ್ಮದಿಂದ ಮಾತ್ರ ಜಯ, ಅಧರ್ಮದಿಂದ ಅಪಜಯವಾಗಲಿ" ಎಂದು ಹೇಳುತ್ತಾನೆ.

ನಂತರ ಶಿವ-ಪಾರ್ವತಿಯರು ಒಗ್ಗೂಡಿ ಒಂದು ಮಹಾಶಕ್ತಿಯಿಂದ ತೇಜೋರೂಪವಾದ ಆನೆಯ ಮುಖವನ್ನು ಹೊಂದಿರುವ ಮಹಾತೇಜಸ್ವಿ ಗಣೇಶನನ್ನು ಸೃಷ್ಟಿ ಮಾಡುತ್ತಾರೆ. ಕೆಡುಕನ್ನು ಮಾಡು ತ್ತಿದ್ದ ಅಸುರರಿಗೆ ವಿಘ್ನಗಳು ಎದುರಾಗಿ ವಿನಾಶ ಹೊಂದುತ್ತಾರೆ. ಅಂದಿನಿಂದ ಗಣೇಶನು ಅಧಮರಿಗೆ ವಿಘ್ನಗಳನ್ನು ನೀಡಿ, ಧರ್ಮಮಾರ್ಗದಲ್ಲಿ ನಡೆಯುವವರಿಗೆ ಎದುರಾದ ವಿಘ್ನಗಳನ್ನು ನಿವಾರಿಸುತ್ತ ವಿಘ್ನೇಶ್ವರ, ವಿನಾಯಕ, ಸಂಕಷ್ಟಹರ ಎಂಬ ಹಲವು ನಾಮಾಂಕಿತಗಳೊಂದಿಗೆ ಲೋಕಪೂಜಿತ ನಾಗಿದ್ದಾನೆ.

ಗಣೇಶನ ವಿಶೇಷತೆಗಳು

ಜಗತ್ತಿನಲ್ಲಿ ಚೇತನ, ಚಿತ್ತ, ಅಹಂಕಾರ, ಬುದ್ಧಿ, ಮನಸ್ಸು ಮುಂತಾಗಿ 25 ಅಂಶಗಳಿವೆ. ಇವುಗಳಲ್ಲಿ 20ನೆಯದು ‘ಆಕಾಶ’. ಇದರ ಅಭಿಮಾನಿ ದೇವತೆ ಗಣೇಶ. ಆದ್ದರಿಂದ ಗಣೇಶನಿಗೆ 21 ಸಂಖ್ಯೆ ಬಹಳ ಪ್ರಿಯ. ಹೀಗಾಗಿ, ‘ವಿಘ್ನ ವಿನಾಶಕ, ನಿನಗೆ 21 ನಮಸ್ಕಾರಗಳು’ ಎಂದು ಹೇಳುತ್ತೇವೆ. ಪ್ರಾಚೀನರು ಅಶ್ವಶಕ್ತಿಯನ್ನು ಬುದ್ಧಿಶಕ್ತಿಯ ಪ್ರತೀಕವಾಗಿ, ಗಜಶಕ್ತಿಯನ್ನು ಪ್ರತಿರೋಧ ಶಕ್ತಿಯ ಪ್ರತೀಕವಾಗಿ ಬಳಸುತ್ತಿದ್ದರು. ಹೀಗಾಗಿ ಗಣಪ ಬಲದ ಸಂಕೇತ. ಗಣಪನು ಹಿಡಿದಿರುವ ಪಾಶ, ಅಂಕುಶ, ಪರಶು ಎಂಬ ಆಯುಧಗಳು ಧರ್ಮಪಾಲನೆಯ ಸಂಕೇತವಾಗಿವೆ.

ನಮ್ಮ ಆಲೋಚನೆಗಳು ವಿಭಿನ್ನವಾಗಿರಬೇಕು, ವಿನಯ ಮತ್ತು ವಿವೇಕದ ಬುದ್ಧಿಯನ್ನು ಹೊಂದಿರ ಬೇಕು ಎಂಬುದನ್ನು ಗಣಪನ ಬೃಹತ್ ತಲೆಯು ಸೂಚಿಸುತ್ತದೆ. ಯಾವಾಗಲೂ ಸದ್ವಿಚಾರಗಳನ್ನು ಹೆಚ್ಚು ಹೆಚ್ಚು ಶ್ರವಣ ಮಾಡಬೇಕು, ಕಷ್ಟದಲ್ಲಿರುವ ಜನರ ಆರ್ತನಾದವನ್ನು ಕೇಳಿದೊಡನೆ ಕೈಲಾ ದಷ್ಟು ಸಹಾಯ ನೀಡಬೇಕು ಎಂಬುದರ ಸೂಚಕವಾಗಿವೆ ಬೃಹತ್ ಕಿವಿಗಳು. ಹೆಚ್ಚು ಶ್ರವಣ ಮಾಡಿ ಕಡಿಮೆ ಮಾತನಾಡಬೇಕು ಎಂಬುದಕ್ಕೆ ಸಣ್ಣ ಬಾಯಿ ದ್ಯೋತಕವಾಗಿದೆ.

ಗಣಪತಿಯ ನಾಲ್ಕು ಕೈಗಳು ಪುರುಷಾರ್ಥದ ಸಂಕೇತವಾಗಿವೆ. ದಕ್ಷತೆಯೊಂದಿಗೆ ಹೊಂದಾಣಿಕೆ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು ಎಂಬುದನ್ನು ಉದ್ದನೆಯ ಸೊಂಡಿಲು ತಿಳಿ ಹೇಳುತ್ತದೆ. ದೊಡ್ಡದಾದ ಉದರವನ್ನು ಹೊಂದಿರುವ ಕಾರಣಕ್ಕೆ ಗಣಪನನ್ನು ‘ಲಂಬೋದರ’ ಎಂದು ಕರೆಯುತ್ತೇವೆ.

ಅದು ಸಮೃದ್ಧಿಯ ಸಂಕೇತವಾಗಿದ್ದು ಆಹಾರದ ಕಣಜವಾಗಿದೆ. ರೈತನು ದವಸ-ಧಾನ್ಯವನ್ನು ಸಮೃದ್ಧಿಯಾಗಿ ಬೆಳೆದು ಸಂಗ್ರಹಿಸುವಂತಾಗಲಿ ಎಂಬುದು ಅದರ ಆಶಯವಾಗಿದೆ. ಹೀಗೆ ಸಂಗ್ರಹಿ ಸಿದ ಆಹಾರದ ಕಣಜವನ್ನು ರೈತನ ಶತ್ರುವಾದ ಇಲಿಯು ನಾಶಮಾಡದಿರಲೆಂದು ಗಣೇಶನು ಅದನ್ನು ನಿಯಂತ್ರಿಸಲೆಂದು ಸರ್ಪವನ್ನು ಹೊಟ್ಟೆಗೆ ಬಿಗಿದುಕೊಂಡಿರುತ್ತಾನೆ.

ವಿನಯ ಮತ್ತು ವಿಜಯದ ಪ್ರತೀಕನಾದವನೇ ‘ವಿನಾಯಕ’. ಈ ಹೆಸರಿನ ಒಂದೊಂದು ಅಕ್ಷರ ವನ್ನೂ ವಿಶ್ಲೇಷಿಸೋಣ. ‘ವಿ’- ವಿದ್ಯೆಯೊಂದಿಗೆ ವಿನಯ ಮತ್ತು ವಿವೇಕವನ್ನೂ ನೀಡಿ, ವಿಘ್ನ ಗಳನ್ನು ನಿವಾರಿಸುವ ವಿಘ್ನೇಶ್ವರ. ‘ನಾ’- ನಾಯಕತ್ವದ ಗುಣವನ್ನು ಬೆಳೆಸಿ, ನ್ಯಾಯ-ನೀತಿ -ಧರ್ಮ ದಲ್ಲಿ ನಡೆಯುವ ಪ್ರಬುದ್ಧರನ್ನು ಸೃಜಿಸಿ ಮುನ್ನಡೆಸುವ ಗಣನಾಯಕ.

‘ಯ’- ಯಶಸ್ಸು ಬದುಕಿನ ಅತಿ ಮೌಲ್ಯಯುತ ಅಂಶವಾಗಿದ್ದು, ಅದನ್ನು ಸಂಪಾದಿಸುವ ಸದ್ಬುದ್ಧಿಯನ್ನು ನೀಡುವ ದೇವತೆಗಳ ಯಜಮಾನ ಈ ಪ್ರಥಮ ಪೂಜಿತ. ‘ಕ’- ಮನುಷ್ಯನು ಕರ್ಮ ಮಾಡುವುದು ಅನಿವಾರ್ಯವಾಗಿದ್ದು, ಅದಕ್ಕೆ ಬೇಕಾದ ಆತ್ಮಬಲವನ್ನು ತುಂಬಿ, ಕರ್ತೃತ್ವ ಶಕ್ತಿ ನೀಡುವ ಮೂಲಕ, ನಿರ್ವಿಘ್ನವಾಗಿ ಸತ್ಕರ್ಮಗಳನ್ನು ಮಾಡಿಸುವ ಲೋಕವಂದ್ಯನಾಗಿದ್ದಾನೆ ಗಣೇಶ.

ಗಣೇಶ ಉತ್ಸವವು ಹಿಂದೂಗಳ ಪವಿತ್ರ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಆಚರಣೆಗಾಗಿ ಹಲವು ದಿನಗಳಿಂದಲೂ ಸಿದ್ಧತೆ ಮಾಡಿಕೊಂಡು, ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಿ ಪ್ರಾರ್ಥಿಸುವುದು ನಾಡಿನ ಉದ್ದಗಲಕ್ಕೂ ಕಾಣಬರುವ ಪರಿಪಾಠ. ಆದರೆ ನಾವು ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಯು ‘ಪರಿಸರ-ಸ್ನೇಹಿ’ ಆಗಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಮಣ್ಣಿನಿಂದ ತಯಾರಿಸಿದ ಮತ್ತು ಬಣ್ಣಗಳ ಹೆಸರಲ್ಲಿ ರಾಸಾಯನಿಕಗಳ ಲೇಪವಿಲ್ಲದ ಗಣೇಶನ ಮೂರ್ತಿಯನ್ನೇ ಸ್ಥಾಪಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕು. ಮೂರ್ತಿಯನ್ನು ಪ್ರತಿಷ್ಠಾಪಿ ಸುವಾಗ ಹಾಗೂ ವಿಸರ್ಜಿಸುವಾಗ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಅದನ್ನು ಮೆರವಣಿಗೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಆಕಾಶದೆತ್ತರದಲ್ಲಿ ಮೂಡುವ ಪಟಾಕಿಗಳ ಚಿತ್ತಾರ, ಸಂಗೀತದ ಲಯಕ್ಕೆ ಹೆಜ್ಜೆಹಾಕುವವರ ಸಂಭ್ರಮ ಕಣ್ಣಿಗೆ ರಸದೌತಣವನ್ನು ನೀಡುತ್ತದೆ ನಿಜ.

ಆದರೆ ಇದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾವ ಕಾರಣಕ್ಕೂ, ಪ್ರಚೋದನಕಾರಿ ಕಿಡಿಯು ಹೊತ್ತದಂತೆ, ಅದು ಕೋಮು ಸೌಹಾರ್ದಕ್ಕೆ ಧಕ್ಕೆ ಯುಂಟುಮಾಡದಂತೆ ನೋಡಿಕೊಂಡು, ‘ಗಣಪತಿ ಬಪ್ಪಾ ಮೋರಯಾ’ ಎಂಬ ಜಯಘೋಷ ದೊಂದಿಗೆ, ಸರಕಾರದ ನಿರ್ದೇಶನದಂತೆ ಮೂರ್ತಿಯನ್ನು ವಿಸರ್ಜನೆ ಮಾಡಬೇಕು.

ಇಂದು ವರ್ಷಾವಧಿಯ ಗಣೇಶನ ಹಬ್ಬ. ಸರ್ವರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಸಂಘಟನಾ ಶಕ್ತಿಯ ಪ್ರತೀಕವಾದ ವಿಘ್ನೇಶ್ವರನನ್ನು ಭಕ್ತಿಯಿಂದ ಪೂಜಿಸಿ, ‘ಲೋಕಕಲ್ಯಾಣವಾಗಲಿ’ ಎಂದು ಪ್ರಾರ್ಥಿಸೋಣ. ಭಾವೈಕ್ಯತೆಯ ಬೀಜ ಬಿತ್ತಿ, ಕೋಮುಸೌಹಾರ್ದದ ಶಾಂತಿಮಂತ್ರವನ್ನು ಜಪಿಸಿ, ಸರ್ವರೊಳಗೆ ಒಂದಾಗುವ ಔದಾರ್ಯದ ಫಲವನ್ನು ಪಡೆದು, ಹೊಸ ಮನ್ವಂತರಕ್ಕೆ ಸಾಕ್ಷಿಯಾಗೋಣ.

(ಲೇಖಕರು ಶಿಕ್ಷಕರು)