Naveen Sagar Column: 8 ವರ್ಷದ ಹಿಂದೆ ನಡೆದಿತ್ತು ಆಪರೇಷನ್ ಸಿಂದೂರ್ !
ಆಪರೇಶನ್ ಸಿಂದೂರ್‌ಗೆ ವಿರಾಮ ಸಿಕ್ಕು ವಾರಗಳೇ ಕಳೆದರೂ ಅದರ ಪ್ರಭಾವಳಿಯಿಂದ ಹೊರ ಬರೋದಕ್ಕೆ ಆಗಿಲ್ಲ. ಈ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಮೀಮ್‌ಗಳು ಹರಿದಾಡುತ್ತಿದ್ದವು. ಅಕ್ಷಯ್ ಕುಮಾರ್‌ಗೆ ಹೊಸ ಸಿನಿಮಾ ಮಾಡೋದಕ್ಕೆ ಕಥೆ ಸಿಕ್ತು, ಟೈಟಲ್ ಸಿಕ್ತು ಅಂತ. ದೇಶದಲ್ಲಿ ಯಾವುದೇ ಸ್ಪೂರ್ತಿದಾಯಕ ಘಟನೆ ನಡೆಯಲಿ, ರಿಯಲ್ ಹೀರೋ ಬಗ್ಗೆ ಸುದ್ದಿ ಬರಲಿ, ರಾಷ್ಟ್ರಪ್ರೇಮಕ್ಕೆ ಸಂಬಂಧಿಸಿದ ವಿಚಾರ ಚರ್ಚೆಯಾಗಲಿ ಅಥವಾ ಸೆನ್ಸೇಷನಲ್ ಸುದ್ದಿ ಹೊರ ಬರಲಿ, ಅಕ್ಷಯ್ ಕುಮಾರ್ ಈಗ ಅದನ್ನಿಟ್ಕೊಂಡು ಸಿನಿಮಾ ಮಾಡ್ತಾನೆ ಅಂತ ವ್ಯಂಗ್ಯವಾಣಿ ಶುರು ವಾಗುತ್ತೆ


ಪದಸಾಗರ
ಪಹಲ್ಗಾಮ್ ಉಗ್ರ ದಾಳಿಯ ನಂತರ ಪಾಕಿಸ್ತಾನಕ್ಕೆ ಭಾರತ ಕೊಟ್ಟ ಪ್ರತ್ಯುತ್ತರ ಇಂದು ಕೋಟ್ಯಂ ತರ ಭಾರತೀಯರ ಎದೆ ಉಬ್ಬುವಂತೆ ಮಾಡಿದೆ. ದೇಶದ ನಾಯಕತ್ವ ಸರಿಯಾದ ಕೈಗಳಲ್ಲಿದೆ ಎಂಬ ನಂಬಿಕೆಯನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ದುರದೃಷ್ಟವಶಾತ್ ಕೂಡ ಎಂದಿಗೂ ಈ ದೇಶದ ಚುಕ್ಕಾಣಿ ತಪ್ಪು ಕೈಗಳಿಗೆ ಸಿಕ್ಕದಿರಲಿ. ಒಂದು ವೇಳೆ ಹಾಗೇನಾದರೂ ಆದಲ್ಲಿ ಅದು ಈ ದೇಶವನ್ನು ದಶಕಗಳಷ್ಟು ಹಿಂದೊಯ್ಯುವುದಷ್ಟೇ ಅಲ್ಲ, ಗುಲಾಮಿ ದೇಶವನ್ನಾಗಿಸೋದು ಮಾತ್ರವೂ ಅಲ್ಲ.. ಈ ಹತ್ತು ವರ್ಷಗಳ ಹೆಮ್ಮೆಯ ಇತಿಹಾಸವನ್ನು ಅಳಿಸಿ ಅಥವಾ ತಿರುಚಿ ಹಾಕುತ್ತದೆ ಎಂಬ ಮಾತನ್ನ ಬರೆದಿಟ್ಟುಕೊಳ್ಳಿ. ಅನುಮಾನವಿದ್ದರೆ, ನಮ್ಮ ಪಠ್ಯಗಳಲ್ಲಿ ನಾವು ಓದಿದ ಸುಳ್ಳು ಇತಿಹಾಸವನ್ನು, ತಿರುಚಲ್ಪಟ್ಟ ಹಿಸ್ಟರಿಯನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ.
ಅಂದಿನ ಕೈಗಳಿಗೆ ಮತ್ತೆ ಅಧಿಕಾರ ಸಿಕ್ಕರೆ ಅದರಲ್ಲಿ ಸರ್ಜಿಕಲ್ ಸ್ಟ್ರೈಕ್ ಉಲ್ಲೇಖವಿರುವುದಿಲ್ಲ. ಬಾಲಾಕೋಟ್ ಅಟ್ಯಾಕ್ ಬಗ್ಗೆ ಪಾಠ ಇರುವುದಿಲ್ಲ. ಉಗ್ರದಮನದ ಬಗ್ಗೆ ಪ್ರಸ್ತಾಪ ಇರುವುದಿಲ್ಲ. ಕಾರ್ಗಿಲ್ ವಿಜಯವೂ ಇರುವುದಿಲ್ಲ. ಆಪರೇಶನ್ ಸಿಂದೂರದ ಸುಳುಹೇ ಇರೋದಿಲ್ಲ. ನ್ಯಾಯಾ ಲಯದ ತೀರ್ಪನ್ನೂ ಮರೆಮಾಚಿ ‘ಮೋದಿ ಎಂಬ ನರಹಂತಕ’ ಎಂಬ ಪಾಠ ಇಡಲಾಗುತ್ತೆ.
‘ಡೀಮಾನಿಟೈಸೇಷನ್ ಮಾಡಿ ದೇಶದ ಆರ್ಥಿಕತೆ ಹಾಳು ಮಾಡಿದ ಸರ್ವಾಧಿಕಾರಿ’ ಎಂಬ ಸಾಲು ಗಳನ್ನು ಬರೆಯಲಾಗುತ್ತೆ. ‘ಜಿಎಸ್‌ಟಿ ಹೆಸರಿನಲ್ಲಿ ತೆರಿಗೆ ಸುಲಿದು ಪ್ರಜೆಗಳ ಬದುಕು ನರಕವಾಗಿಸಿದ್ದ ದೊರೆ’ ಅಂತ ಬಿಂಬಿಸಲಾಗುತ್ತೆ.
ನಿಜಕ್ಕೂ ಅಂಥದ್ದೊಂದು ಭವಿಷ್ಯ ಊಹಿಸಿದರೂ ಆತಂಕವಾಗುತ್ತದೆ. ಸುಶಿಕ್ಷಿತರು, ರಾಷ್ಟಪ್ರೇಮಿ ಗಳು ಮತದಾನದಿಂದ ವಿಮುಖರಾಗದೇ ದೇಶದ ಧರ್ಮದ ಹಿತ ಬಯಸುವ ನಾಯಕರನ್ನು ಆಯ್ಕೆ ಮಾಡಲಿ ಎಂದು ಪ್ರಾರ್ಥಿಸುವಂತಾಗುತ್ತದೆ.
ಇದನ್ನೂ ಓದಿ: Naveen Sagar Column: ಮಗ ಎಲ್ಲಾ ಬಿಟ್ಟ, ಭಂಗಿ ನೆಟ್ಟ ಎಂಬಂತೆ ಆಗಬಾರದಲ್ಲವೇ ?!
ಆಪರೇಶನ್ ಸಿಂದೂರ್‌ಗೆ ವಿರಾಮ ಸಿಕ್ಕು ವಾರಗಳೇ ಕಳೆದರೂ ಅದರ ಪ್ರಭಾವಳಿಯಿಂದ ಹೊರ ಬರೋದಕ್ಕೆ ಆಗಿಲ್ಲ. ಈ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಮೀಮ್‌ಗಳು ಹರಿದಾಡುತ್ತಿದ್ದವು. ಅಕ್ಷಯ್ ಕುಮಾರ್‌ಗೆ ಹೊಸ ಸಿನಿಮಾ ಮಾಡೋದಕ್ಕೆ ಕಥೆ ಸಿಕ್ತು, ಟೈಟಲ್ ಸಿಕ್ತು ಅಂತ. ದೇಶದಲ್ಲಿ ಯಾವುದೇ ಸ್ಪೂರ್ತಿದಾಯಕ ಘಟನೆ ನಡೆಯಲಿ, ರಿಯಲ್ ಹೀರೋ ಬಗ್ಗೆ ಸುದ್ದಿ ಬರಲಿ, ರಾಷ್ಟ್ರಪ್ರೇಮಕ್ಕೆ ಸಂಬಂಧಿಸಿದ ವಿಚಾರ ಚರ್ಚೆಯಾಗಲಿ ಅಥವಾ ಸೆನ್ಸೇಷನಲ್ ಸುದ್ದಿ ಹೊರಬರಲಿ, ಅಕ್ಷಯ್ ಕುಮಾರ್ ಈಗ ಅದನ್ನಿಟ್ಕೊಂಡು ಸಿನಿಮಾ ಮಾಡ್ತಾನೆ ಅಂತ ವ್ಯಂಗ್ಯವಾಣಿ ಶುರುವಾಗುತ್ತೆ.
ಹೌದು ಅಕ್ಷಯ್ ಕುಮಾರ್ ಸಾಕಷ್ಟು ರಾಷ್ಟ್ರವೀರರ, ಪ್ರೇರಣಾದಾಯಕ ವ್ಯಕ್ತಿಗಳ ಬಯೋಪಿಕ್ ಗಳನ್ನು ನಿರ್ಮಿಸಿದ್ದಾನೆ, ನಟಿಸಿದ್ದಾನೆ. ಹಾಗಂತ ಆತ ಮಾತ್ರವೇ ನೈಜ ಘಟನೆ ಆಧರಿತ ಚಿತ್ರಗಳಲ್ಲಿ ನಟಿಸಿರೋದಾ? ಖಂಡಿತ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಹಲವಾರು ನಟರು, ದೇಶದ ಹೆಮ್ಮೆಯ ವ್ಯಕ್ತಿತ್ವಗಳ, ಆತ್ಮಕತೆಯಲ್ಲಿ ನಟಿಸಿzರೆ, ಚಿತ್ರನಿರ್ಮಾಣವನ್ನೂ ಮಾಡಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ, ಸೇನೆಯ ಬಗ್ಗೆ ಹೆಮ್ಮೆ ತರುವಂಥ, ಪಾಕಿಸ್ತಾನದಂಥ ನೀಚ ದೇಶದ ಬಣ್ಣ ಬಯಲುಮಾಡುವಂಥ ಚಿತ್ರಗಳು ಹೆಚ್ಚು ಬಂದಿವೆ. ನಮ್ಮ ರಿಯಲ್ ಹೀರೋಗಳ ಆತ್ಮಕತೆ ಗಳು ಸಿನಿಮಾ ಆಗಿವೆ. ಅಂಥ ಸಿನಿಮಾ ಅಕ್ಷಯ ಕುಮಾರನೇ ಜಾಸ್ತಿ ಮಾಡಿದಾನೆ ಅಂತಾಗ್ಲಿ. ಏನೀಗ? ಜನರಿಗೆ ನೈಜ ಇತಿಹಾಸವನ್ನು, ಸತ್ಯಗಳನ್ನು ತಿಳಿಸೋದಕ್ಕೆ, ಅದ್ಭುತ ವ್ಯಕ್ತಿಗಳನ್ನು ಪರಿಚಯಿ ಸೋದಕ್ಕೆ ಸಿನಿಮಾಗಿಂತ ಅತ್ಯುತ್ತಮ ಮಾಧ್ಯಮ ಬೇರೆ ಯಾವುದಿದೆ? ಪಾಕಿಸ್ತಾನಿ ಭೂಗತ ದೊರೆ ಗಳನ್ನು ಹೀರೋಗಳಾಗಿ ತೋರಿಸುತ್ತಿದ್ದ, ಮುಘಲ್ ದೊರೆಗಳನ್ನು ಮಾನವತಾ ಮೂರ್ತಿಗಳಾಗಿ ತೋರುತ್ತಿದ್ದ ಸಿನಿಮಾಗಳ ಕಾಲ ಹತ್ತು ವರ್ಷದ ಹಿಂದೆಯೇ ಮುಗಿದಿದೆ.
ಪಾಕಿಸ್ತಾನದ ಆಡಿಯೆನ್ಸ್ ಗಳನ್ನೇ ಗಮನದಲ್ಲಿಟ್ಟುಕೊಂಡು, ಜಿಹಾದಿ ಲವ್ ಸ್ಟೋರಿಗಳನ್ನು ಬರೆಯುತ್ತಿದ್ದ ನೌಟಂಕಿ ಕತೆಗಳ ಸಿನಿಮಾ ಈಗ ನಡೆಯುವುದಿಲ್ಲ. ಹಿಂದೆಲ್ಲ ಪಾಕ್, ಅರಬ್ ದೇಶದ ಫ್ಯಾನ್ ಗಳಿಗೋಸ್ಕರವೇ ಸಿನಿಮಾ ಮಾಡ್ತಾ ಇದ್ದ ಖಾನ್‌ಗಳೂ ತಮ್ಮ ಉಳಿವಿಗೆ ದೇಶಭಕ್ತಿಯ ಸಿನಿಮಾಗಳ ಮೊರೆ ಹೊಕ್ಕಿದ್ದಾರೆ. ಆದರೆ ಈ ನಕಲೀತನ ನಂಬುವಷ್ಟು ಅಮಾಯಕರು ಇಂದಿನ ಭಾರತದಲ್ಲಿಲ್ಲ.
ಈಗ ಅಕ್ಷಯ್ ಕುಮಾರ್, ವಿವೇಕ್ ಅಗ್ನಿಹೋತ್ರಿ, ಸುದಿಪ್ತೋ ಸೇನ್, ಶಿವಂ ನಾಯರ್, ಮುಂತಾದ ನಿರ್ದೇಶಕರು ದೇಶಭಕ್ತಿ ಪಸರಿಸೋ ನೈಜ ಘಟನೆ ಆಧರಿತ ಚಿತ್ರಗಳನ್ನು ನಿರ್ಮಿಸಿದರೆ, ಇನ್ನೊಂದು ಕೊಂಕು ಏಳುತ್ತಿದೆ. ಇವರೆಲ್ಲ ದೇಶಭಕ್ತಿಯನ್ನು ವ್ಯಾಪಾರ ಮಾಡ್ಕೊಳ್ತಾ ಇದಾರೆ, ಸಿನಿಮಾ ಮಾಡಿ ಜನರನ್ನು ಮರುಳು ಮಾಡಿ ಹಣ ಮಾಡ್ಕೊಳ್ತಾ ಇದಾರೆ ಅಂತ!
ಅರೆ ಸ್ವಾಮೀ... ಮಾಡ್ಕೊಳ್ಲಿ ಬಿಡಿ. ನೆಗೆಟಿವಿಟಿ ಬಿತ್ತೋ, ಸುಳ್ಳು ಪ್ರೊಪಗ್ಯಾಂಡಾ ಹರಡೋ, ಭಯೋ ತ್ಪಾದನೆ ಪ್ರೊತ್ಸಾಹಿಸೋ, ಉಗ್ರರನ್ನು ಹೀರೋ ಮಾಡೋ, ಶತ್ರುದೇಶವನ್ನು ಸ್ವರ್ಗ ಎಂಬಂತೆ ತೋರೋ ಸಿನಿಮಾಗಳನ್ನ ಮಾಡಿ ಹಣ ಮಾಡ್ಕೊಳ್ತಾ ಇಲ್ವಲ್ಲ!
ಹೀಗೆ ಕೊಂಕು ನುಡಿಯೋ ವ್ಯಕ್ತಿಗಳಿಗೂ ಅವಕಾಶ ಇದೆಯಲ್ಲ.. ಅವ್ರೂ ದೇಶಭಕ್ತಿಯ ಸಿನಿಮಾ ಮಾಡಿ ಹಣ ಮಾಡಲಿ. ಬೇಡ ಅಂದವರಾರು? ಅಥವಾ ಅಂಥ ಸಿನಿಮಾ ಮಾಡಿ, ಬರುವ ಲಾಭ ವನ್ನೆಲ್ಲ ದೇಶದ ಒಳಿತಿಗೆ ದಾನ ನೀಡಲಿ. ಉಹೂಂ. ಅವರಿಂದ ಸಾಧ್ಯವಿಲ್ಲ.
ಇದೆಲ್ಲ ಆಲೋಚನೆಗಳು ಬರೋದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಯಾದ ‘ದಿ ಡಿಪ್ಲೊಮೆಟ್’ ಎಂಬ ಹಿಂದಿ ಚಲನಚಿತ್ರ. 2017ರಲ್ಲಿ ನಡೆದ ಒಂದು ನೈಜ ಘಟನೆಯ ಆಧರಿಸಿ ಬಂದಿರೋ ಚಿತ್ರ ಡಿಪ್ಲೊಮೆಟ್. 2017 ಅಂದ್ರೆ ಬಹಳ ಹಳೆಯ ಕಥೆ ಏನಲ್ಲ. ಇದೇ ಮೇ ತಿಂಗಳಿಗೆ ಎಂಟು ವರ್ಷ. ದೇಶ ಕಂಡ ಹೆಮ್ಮೆಯ ರಾಜಕಾರಣಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದ ಹೊತ್ತು. ಬಹುಶಃ ಸರಿಯಾಗಿ ಯೋಚಿಸಿ ನೋಡಿದರೆ 2017ರಲ್ಲಿ ಸುಷ್ಮಾ ಸ್ವರಾಜ್ ನಡೆಸಿದ ಆ ಆಪರೇಶನ್‌ಗೆ ‘ಆಪರೇಶನ್ ಸಿಂದೂರ’ ಎಂಬ ಹೆಸರಿಡಬಹುದಿತ್ತು.
ಯಾವತ್ತಿಗೂ ದೊಡ್ಡ ಹಣೆ ಬೊಟ್ಟು, ಬೈತಲೆಯಲ್ಲಿ ಕುಂಕುಮ ಹೊತ್ತು ಸಾಂಪ್ರದಾಯಿಕ ಸೀರೆ ಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಷ್ಮಾ ಸ್ವರಾಜ್ ಅಂದು ನೀಚನೊಬ್ಬನ ಕೈಗೆ ಸಿಕ್ಕು ಪಾಕಿಸ್ತಾನದ ಪಾಲಾಗಿ ನರಕ ಅನುಭವಿಸುತ್ತಿದ್ದ ಭಾರತೀಯ ಹೆಣ್ಮಗಳನ್ನು ಬಿಡಿಸಿಕೊಂಡು ಬಂದ ಕಥೆ ಇದೆಯಲ್ಲ. ಅದು ಕೂಡ ಆಪರೇಷನ್ ಸಿಂದೂರವೇ.
ಉಜ್ಮಾ ಅಹ್ಮದ್ ಎಂಬ ಮುಸಲ್ಮಾನ ಹೆಣ್ಮಗಳು, ಅಪರೂಪದ ಕಾಯಿಲೆಗೆ ತುತ್ತಾದ ತನ್ನ ಮಗಳನ್ನು ಉಳಿಸಿಕೊಳ್ಳುವ ಹೋರಾಟ ನಡೆಸುತ್ತಾ ಇರ್ತಾಳೆ. ಮಲೇಶಿಯಾದಲ್ಲಿ ಗೆಳತಿಯ ಕುಟುಂಬದ ಜತೆ ಇದ್ದಾಗ ಅಲ್ಲಿ ಆಕೆಗೆ ತಾಹಿರ್ ಎಂಬ ಟ್ಯಾಕ್ಸಿ ಡ್ರೈವರ್ ಪರಿಚಯವಾಗ್ತಾನೆ. ಸಂಭಾವಿತನಂತೆ ನಟಿಸಿ, ನಂಬಿಕೆ ಹುಟ್ಟಿಸಿ, ನಿನ್ನ ಮಗಳ ಜವಾಬ್ದಾರಿ ಇನ್ಮುಂದೆ ನನ್ನದು ಕೂಡ ಎಂದು ಹೇಳಿ, ಎಮೋಷನಲಿ ಟ್ರ್ಯಾಪ್ ಮಾಡುತ್ತಾನೆ.
ಪಾಕಿಸ್ತಾನಕ್ಕೆ ಹೋಗೋಣ. ನ್ಯಾಚುರೋಪಥಿ ಚಿಕಿತ್ಸೆಯಿಂದ ಆಕೆ ಗುಣವಾಗ್ತಾಳೆ ಅಂತ ಭರವಸೆ ಹುಟ್ಟಿಸುತ್ತಾನೆ. ಆತನ ಪ್ರೀತಿ ಕಾಳಜಿ ನಿಜವೆಂದು ನಂಬುವ ಉಜ್ಮಾ ಅವನೊಂದಿಗೆ ಪಾಕಿಸ್ತಾನಕ್ಕೆ ಹೋಗಲು ಸಿದ್ಧವಾಗಿ ಬಿಡ್ತಾಳೆ. ಆದರೆ ಭಾರತದ ಗಡಿ ದಾಟುತ್ತಿದ್ದಂತೆಯೇ ಅವಳ ಬದುಕು ನರಕ ವಾಗುತ್ತದೆ.
ಬುನೇರ್ ಎಂಬ ಪ್ರದೇಶಕ್ಕೆ ಅವಳನ್ನು ಕರೆದೊಯ್ಯುವ ತಾಹಿರ್ ತನ್ನ ನಿಜರೂಪ ತೋರಿಸುತ್ತಾನೆ. ಆಗಲೇ ಮದುವೆಯಾಗಿ ಮಕ್ಕಳಿರುವ ಈತನ ಭಯಂಕರ ಹ್ಯೂಮನ್ ಟ್ರಾಫಿಕಿಂಗ್ ಜಾಲದಲ್ಲಿ ಉಜ್ಮಾ ಸಿಲುಕಿರುತ್ತಾಳೆ. ಆಕೆಯನ್ನು ದೈಹಿಕವಾಗಿ ಮಾನಸಿಕವಾಗಿ, ಲೈಂಗಿಕವಾಗಿ ಹಿಂಸಿಸಲಾಗುತ್ತೆ. ಕೊನೆಗೆ ಹರಸಾಹಸಪಟ್ಟು ಮಲೇಶಿಯಾದಲ್ಲಿದ್ದ ತನ್ನ ಗೆಳತಿಗೆ ಫೋನ್ ಮಾಡುವಲ್ಲಿ ಉಜ್ಮಾ ಯಶಸ್ವಿಯಾಗುತ್ತಾಳೆ. ಗೆಳತಿಯ ಪತಿ ನೀಡುವ ಸಲಹೆಯಂತೆ ಇಂಡಿಯನ್ ಹೈಕಮಿಷನ್ ತಲುಪಲು ಪ್ಲ್ಯಾನ್ ಮಾಡಿ, ಜೆಪಿ ಸಿಂಗ್ ಎದುರಲ್ಲಿ ತನ್ನ ದಾರುಣ ಕತೆಯನ್ನು ಎಳೆಎಳೆಯಾಗಿ ಹೇಳಿಕೊಳ್ಳುತ್ತಾಳೆ. ಅಲ್ಲಿಂದ ಶುರುವಾಗುವುದೇ ಡಿಪ್ಲೊಮ್ಯಾಟಿಕ್ ವಾರ್.
ಸುಷ್ಮಾ ಸ್ವರಾಜ್ ಮತ್ತು ಜೆಪಿ ಸಿಂಗ್ ಉಜ್ಮಾಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಟೊಂಕ ಕಟ್ಟಿ ನಿಲ್ಲುತ್ತಾರೆ. ರಾಜತಾಂತ್ರಿಕ ಅಡೆತಡೆಗಳು, ಪಾಕಿಸ್ತಾನಿಗಳ ಕುತಂತ್ರಗಳು, ಅವ್ಯವಸ್ಥಿತ ನ್ಯಾಯ ವ್ಯವಸ್ಥೆಗಳು ಎಲ್ಲವನ್ನೂ ನಿವಾರಿಸಿಕೊಂಡು, ಉಜ್ಮಾಳನ್ನು ವಾಘಾ ಬಾರ್ಡರ್ ಮೂಲಕ ಬರ ಮಾಡಿಕೊಳ್ಳುವ ತನಕದ ಸಾಹಸಗಾಥೆಯನ್ನು ತಣ್ಣನೆಯ ನಿರೂಪಣೆಯಲ್ಲಿ, ಯಾವ ವೈಭವೀ ಕರಣವೂ ಇಲ್ಲದಂತೆ ನಿರ್ದೇಶಕ ಶಿವಂ ನಾಯರ್ ನಿರೂಪಿಸುತ್ತಾ ಹೋಗುತ್ತಾರೆ.
ಚಿತ್ರದ ಪ್ರಾರಂಭದಲ್ಲಿ ನೀಡುವ ಡಿಸ್‌ಕ್ಲೈಮರ್ ಹೇಳುವಂತೆ, ಸಿನಿಮಾದಲ್ಲಿ ತೋರಿಸಿದ್ದು ಬಹಳ ಸಂಕ್ಷಿಪ್ತ ರೂಪ. ಉಜ್ಮಾ ಅಹ್ಮದ್ ಅನುಭವಿಸಿದ್ದು ಸಿನಿಮಾದಲ್ಲಿ ತೋರಿಸಿದ ಹತ್ತುಪಟ್ಟು ಹೆಚ್ಚು ನರಕ. ಪಾಕಿಸ್ತಾನ ಎಂಥಾ ಭಯಾನಕ ದೇಶ ಎಂಬುದನ್ನು, ಇಲ್ಲಿ ಭಾರತೀಯರು ಒಂದೊಮ್ಮೆ ಸಿಕ್ಕಿಕೊಂಡರೆ ಗತಿ ಏನು ಎಂಬುದನ್ನು, ಇತರ ದೇಶಗಳಿಗಿಂತ ಈ ದೇಶದಲ್ಲಿ ಬದುಕು ಎಷ್ಟು ಉಸಿರು ಕಟ್ಟಿಸುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ, ಅಲ್ಲಲ್ಲಿ ವಾಚ್ಯದಲ್ಲಿ ಸೂಕ್ಷ್ಮವಾಗಿ ಹೇಳುತ್ತಾ ಹೋಗತ್ತೆ ಸಿನಿಮಾ.
ಡಿಪ್ಲೊಮ್ಯಾಟಿಕ್ ಆಗಿ ಈ ವಿಷಯವನ್ನು ನಿಭಾಯಿಸದೇ ಹೋಗಿದ್ದಿದ್ದರೆ, ಉಜ್ಮಾಳನ್ನು ಭಾರತಕ್ಕೆ ಕರೆತರೋದು ಸಾಧ್ಯವೇ ಇರಲಿಲ್ಲ. ಉಜ್ಮಾ ಭಾರತದ ಗಡಿಯೊಳಗೆ ಬಂದಾಗ ಸುಷ್ಮಾ ಸ್ವರಾಜ್ ಅವರಿಗೆ ಕೈ ಮುಗಿದು ಹೇಳುತ್ತಾಳೆ- ‘ನಮ್ಮ ನಂಬಿಕೆ ಉಳಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್’ ಅಂತ. ಅದಕ್ಕೆ ಪ್ರತಿಯಾಗಿ ಸುಷ್ಮಾಜೀ ಆಕೆಯನ್ನು ತಬ್ಬಿ ಹೇಳುತ್ತಾರೆ- ‘ನಮ್ಮ ಮೇಲೆ ನಂಬಿಕೆ ಇಟ್ಟದ್ದಕ್ಕೆ ಥ್ಯಾಂಕ್ಸ್’ ಅಂತ.
ಈ ಎರಡು ಸಂಭಾಷಣೆಗಳು ಸಾಕಷ್ಟು ಸಂದೇಶಗಳನ್ನು ರವಾನೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಅಂದಹಾಗೆ ಈ ಸಿನಿಮಾವನ್ನು ಪಾಕಿಸ್ತಾನವೂ ಸೇರಿದಂತೆ ಅರಬ್ ಮತ್ತು ಮುಸಲ್ಮಾನ ದೇಶಗಳು ಬಹಿಷ್ಕರಿಸಿವೆ. ಅಲ್ಲಿ ಪ್ರದರ್ಶನಕ್ಕೆ ಅನುಮತಿ ಇಲ್ಲ. ಅದೇ ರೀತಿ ನಮ್ಮದೇ ದೇಶದ ಕೆಲವು ಎಡಬಿಡಂಗಿ ಪತ್ರಿಕೆಗಳು, ಈ ಸಿನಿಮಾವನ್ನು ತಮ್ಮ ಹಳದಿ ಹಸಿರು ಕನ್ನಡಕದಲ್ಲಿ ನೋಡಿ, ಕೆಟ್ಟ ವಿಮರ್ಶೆ ಕೊಟ್ಟಿವೆ.
ಉಜ್ಮಾ ಅಹ್ಮದ್‌ಳ ಮೊದಲ ಪತಿಯ ಬಗ್ಗೆ ಸಿನಿಮಾದಲ್ಲಿ ಪ್ರಸ್ತಾಪ ಇಲ್ಲ, ಆಕೆಯನ್ನು ಒಳ್ಳೆಯ ವಳಂತೆ ತೋರಿಸಿದ್ದಾರೆ ಎಂದು ಆಕೆಯ ಚಾರಿತ್ರ್ಯವಧೆಗೂ ಮುಂದಾಗಿದ್ದಾರೆ. ಆಕೆಯನ್ನು ಸುರಕ್ಷಿತವಾಗಿ ಕಳಿಸಿದ್ದು ಪಾಕಿಸ್ತಾನದ ಒಳ್ಳೇತನಕ್ಕೆ ಸಾಕ್ಷಿ ಅಂತಲೂ ಸರ್ಟಿಫಿಕೇಟ್ ನೀಡಿದ್ದಾರೆ. ಆ ವಿಮರ್ಶಕರನ್ನು ಕೇಳಬೇಕು ಅನ್ಸುತ್ತೆ. ಉಜ್ಮಾ ಜಾಗದಲ್ಲಿ ಭಾರತೀಯ ಹೆಣ್ಮಗಳು ಇದ್ದಿದ್ದರೆ ಬಿಟ್ಟು ಕಳಿಸುತ್ತಿದ್ದರಾ? ಆಕೆಯನ್ನು ರಕ್ಷಿಸೋದಕ್ಕೆ, ಭಾರತಕ್ಕೆ ಮರಳಿಸೋದಕ್ಕೆ, ಆಕೆ ಮುಸ್ಲಿಂ ಎಂಬ ಡಿಪ್ಲೊಮ್ಯಾಟಿಕ್ ಕಾರ್ಡನ್ನು ಕೂಡ ತೋರಿಸಬೇಕಾಯ್ತು ಅನ್ನೋದನ್ನು ವಿಮರ್ಶಕರು ಗಮನಿ ಸಿಲ್ವಾ? ಹಿಂದೂಪರ, ಮುಸ್ಲಿಂ ವಿರೋಧಿ ಸರಕಾರ ಎಂದೇ ಹಣೆಪಟ್ಟಿ ಹಾಕುತ್ತಿದ್ದ ವಿಮರ್ಶಕರಿಗೆ, ಆಕೆ ಮುಸಲ್ಮಾನ ಹೆಣ್ಮಗಳಾದರೂ ಭಾರತೀಯ ಪ್ರಜೆ ಎಂದಷ್ಟೇ ನೋಡಿ ಆಕೆಯನ್ನು ಕಾಪಾಡಿದ ಸರಕಾರದ ನಡೆಯನ್ನು ಪ್ರಯತ್ನವನ್ನು ಮೆಚ್ಚಬೇಕು ಅನಿಸಲಿಲ್ಲ ಎಂಬುದು ದುರಂತ.
ಉಜ್ಮಾ ಅಹ್ಮದ್ ಆ ಒಂದು ತಿಂಗಳ ನರಕಯಾತನೆಯನ್ನು, ಇಂಡಿಯನ್ ಹೈಕಮಿಷನ್ ಮತ್ತು ಜೆಪಿ ಸಿಂಗ್ ತೆಗೆದುಕೊಂಡ ರಿಸ್ಕನ್ನು, ಸುಷ್ಮಾ ಸ್ವರಾಜ್ ಅವರ ಪಾತ್ರವನ್ನು ಸಾರ್ವಜನಿಕವಾಗಿ ಮಾಧ್ಯಮಗಳು ಎದುರು ವಿವರಿಸಿದ ವಿಡಿಯೋಗಳಿವೆ. ಆದರೂ ಅದನ್ನು ಕಪೋಲಕಲ್ಪಿತ ಎಂದು ಗೇಲಿ ಮಾಡುತ್ತಿವೆ ಕೆಲ ಮೀಡಿಯಾಗಳು ಮತ್ತು ಸೋಷಿಯಲ್ ಮೀಡಿಯಾ ಬುದ್ಧಿಜೀವಿಗಳು.
ಇವರೇ ನೈಜ ಇತಿಹಾಸವನ್ನು ತಿರುಚಿ, ಮರೆಮಾಚಿ ಸುಳ್ಳುಕತೆಗಳನ್ನು ಹುಟ್ಟುಹಾಕುವವರು. ಉಜ್ಮಾ ಅಹ್ಮದ್ ಇಂದಿಗೂ ತನ್ನ ಮಗಳನ್ನು ನೋಡಿಕೊಳ್ಳುತ್ತಾ, ಬ್ಯೂಟಿ ಪಾರ್ಲರ್ ನಡೆಸುತ್ತಾ, ಹೆತ್ತವರಿಂದ, ಬಂಧುಬಳಗದಿಂದ ದೂರವಿಡಲ್ಪಟ್ಟು ಹೋರಾಟದ ಬದುಕು ಜೀವಿಸುತ್ತಾ ಇದ್ದಾಳೆ. ಆದರೆ ಆಕೆ ಎಂಟು ವರ್ಷದ ಹಿಂದೆ ಪಾಕಿಸ್ತಾನದಲ್ಲಿ ಬದುಕಿದ ಆ ಒಂದು ತಿಂಗಳ ಬದುಕು ಏಳು ಜನ್ಮದ ನರಕಕ್ಕಿಂತ ಯಾತನಾಮಯವಾದದ್ದು.
ಸಾಧ್ಯವಾದರೆ ಒಮ್ಮೆ ‘ದಿ ಡಿಪ್ಲೊಮೆಟ್’ ನೋಡಿ. ಇಂಥ ಚಿತ್ರಗಳು ಹೆಚ್ಚೆಚ್ಚು ಬಂದು ಸಿನಿಮಾ ರೂಪದ ಇತಿಹಾಸದ ಪುಟಗಳಾಗಿ ಇಲ್ಲಿ ಉಳಿಯಬೇಕು. ದೇಶದ ಮುಂದಿನ ಪೀಳಿಗೆಗೂ ಇವು ತಲುಪ ಬೇಕು. ವ್ಯಾಕ್ಸಿನ್ ವಾರ್, ಮಿಶನ್ ಮಾರ್ಸ್, ಕೇರಳ ಸ್ಟೋರಿ, ಕಾಶ್ಮೀರ್ ಫೈಲ್ಸ್, ತಾಷ್ಕೆಂಟ್ ಫೈಲ್ಸ್, ದಿ ಡಿಪ್ಲೊಮೆಟ್, ಉರಿ, ಛಾವಾ ಇಂಥ ಸಿನಿಮಾಗಳು ಇತಿಹಾಸದ ಪಠ್ಯಪುಸ್ತಕದ ದೃಶ್ಯ ರೂಪಗಳಾಗಿ ಜನರನ್ನು ತಲುಪಿದಷ್ಟೂ ರಾಷ್ಟ್ರಪ್ರೇಮ ಹೆಚ್ಚುಕಾಲ ಜೀವಂತವಾಗಿರುತ್ತದೆ. ಉದ್ದೀಪನಗೊಳ್ಳು ತ್ತಿರುತ್ತದೆ.