ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

ಭಕ್ತನ ಮೊರೆಯನ್ನು ಆಲಿಸಿದ ಭಗವಂತನು ಗರುಡನ ಹೆಗಲೇರಿ ಬಂದು ತನ್ನ ಸುದರ್ಶನ ಚಕ್ರವನ್ನು ಮೊಸಳೆಯ ಮೇಲೆ ಪ್ರಯೋಗಿಸಿದನು. ಈ ರೀತಿಯಾಗಿ ಗಜೇಂದ್ರನಿಗೆ ಮೋಕ್ಷ ಪ್ರಾಪ್ತಿಯಾಯಿತು. ಅಂದಿನಿಂದ ‘ಗಂಡಕಿ’ ನದಿ ಕ್ಷೇತ್ರವು ಪರಮ ಪಾವನವಾದ ವಿಷ್ಣು ಕ್ಷೇತ್ರ ವಾಯಿತು. ಈ ಗಂಡಕೀ ನದಿಯಲ್ಲಿ ಸಿಗುವ ಶಿಲೆಗಳ ಮೇಲೆ ಚಕ್ರದ ಚಿಹ್ನೆ ಮೂಡಿರುತ್ತದೆ ಅದು ಸಾಲಿಗ್ರಾಮವಾಗಿ ಪೂಜಿಸಲ್ಪಡುತ್ತದೆ.

ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

-

ಒಂದೊಳ್ಳೆ ಮಾತು

ತೃಣಬಿಂದುವೆಂಬ ಮಹರ್ಷಿಯ ಮಗಳು ದೇವಹೂತಿ. ಆಕೆಗೆ ಕರ್ದಮ ಪ್ರಜಾಪತಿಯಿಂದ ಇಬ್ಬರು ಪುತ್ರರು ಜನಿಸಿದರು. ಅವರಲ್ಲಿ ಹಿರಿಯನನ್ನು ಜಯ, ಎರಡನೇಯವನನ್ನು ವಿಜಯನೆಂದು ಕರೆದರು. ಅವರಿಬ್ಬರೂ ವಿಷ್ಣುವಿನ ಮಹಾ ಭಕ್ತರು. ಯಾವಾಗಲೂ ನಾರಾಯಣ ಅಷ್ಟಾಕ್ಷರಿ ಮಂತ್ರವನ್ನು ಜಪಿಸಿದ್ದರ ಫಲವಾಗಿ ವೇದ ವಿದ್ಯೆಯನ್ನೂ, ವಿಷ್ಣು ಸಾಕ್ಷಾತ್ಕಾರವನ್ನೂ ಬಹುಬೇಗ ಗಳಿಸಿದರು.

ದೊಡ್ಡ ದೊಡ್ಡ ಯಜ್ಞ ಯಾಗಾದಿಗಳನ್ನು ನಿರ್ವಹಿಸುವುದರಲ್ಲಿ ಪರಿಣತಿಯನ್ನು ಪಡೆದರು. ಹೀಗಿರುವಾಗ ಮರುತ್ ಎಂಬ ರಾಜನು ಇವರಿಬ್ಬರಿಂದ ಒಂದು ಮಹಾಯಜ್ಞ ವನ್ನು ಮಾಡಿಸಿದನು. ಯಜ್ಞ ಯಶಸ್ವಿಯಾಗಿ ನಡೆದಾಗ ಸಂತುಷ್ಟನಾದ ರಾಜನು ಅವರಿಗೆ ಹೇರಳವಾದ ಹಣವನ್ನು ದಕ್ಷಿಣೆಯಾಗಿ ನೀಡಿದನು.

ಇದನ್ನೂ ಓದಿ: Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

ಆದರೆ ಅದನ್ನು ಹಂಚಿಕೊಳ್ಳುವ ಬಗ್ಗೆ ಅಣ್ಣ-ತಮ್ಮಂದಿರಲ್ಲಿ ವಿವಾದ ಉಂಟಾಯಿತು. ತನಗೆ ಸರಿಯಾಗಿ ಅರ್ಧ ಪಾಲು ಸಿಗಬೇಕೆಂದು, ಜಯನು ವಾದಿಸಿದನು, ವಿಜಯನು ತನಗೆ ಹೆಚ್ಚು ಪಾಲು ಸಿಗಬೇಕೆಂದು ಕೋರಿದನು. ಈ ಜಗಳದಲ್ಲಿ ಜಯನು ಕೋಪದಿಂದ ವಿಜಯ ನನ್ನು ‘ನೀನು ನೀರಿನಲ್ಲಿ ಮೊಸಳೆಯಾಗು’ ಎಂದು ಶಪಿಸಿದನು. ಅದಕ್ಕೆ ಪ್ರತಿ ಶಾಪವಾಗಿ ವಿಜಯನು, ‘ನೀನು ಅರಣ್ಯದಲ್ಲಿ ಮದವೇರಿದ ಆನೆಯಾಗು’ ಎಂದನು.

ಹೀಗೆ ಪರಸ್ಪರ ಶಪಿತರಾದ ಅವರು ದಿಕ್ಕು ತೋಚದೆ ಭಗವಂತನ ಮೊರೆ ಹೊಕ್ಕರು. ತಾವು ಮಾಡಿದ ತಪ್ಪಿನ ಅರಿವು ಅವರಿಗಾಗಿತ್ತು. ಅವರ ಮಾತನ್ನು ಕೇಳಿದ ಶ್ರೀಹರಿಯ, ‘ನನ್ನ ಭಕ್ತರಾದವರ ಮಾತನ್ನು ನಾನು ಎಂದೂ ಸುಳ್ಳು ಮಾಡಲಾರೆ. ಇದು ನನಗೆ ನಾನೇ ಹಾಕಿ ಕೊಂಡ ನಿಯಮ.

ಹಿಂದೆ ಪ್ರಹ್ಲಾದ ರಾಜಕುಮಾರನಿಗಾಗಿ ಕಂಬವನ್ನು ಸೀಳಿಕೊಂಡು ನಾನು ಹೊರ ಬಂದೆ, ಪ್ರಾಣಿಗಳ ರೂಪಗಳನ್ನು ದಶಾವತಾರಿಯಾಗಿ ತಾಳಿದೆ. ಆದ್ದರಿಂದ ನೀವು ನಿಮ್ಮ ನಿಮ್ಮ ಶಾಪವನ್ನು ಪಾಲಿಸದೇ ವಿಧಿ ಇಲ್ಲ. ಶಾಪದ ಕೊನೆಯಲ್ಲಿ ನೀವು ವೈಕುಂಠಕ್ಕೆ ಬರುತ್ತೀರಿ’ ಎಂದು ಭರವಸೆ ನೀಡಿ ಅದೃಶ್ಯನಾದನು.

ಜಯ-ವಿಜಯರು ಗಂಡಕೀ ನದಿ ತೀರದಲ್ಲಿ ಮೊಸಳೆ ಹಾಗೂ ಸಮೀಪದ ಅರಣ್ಯದಲ್ಲಿ ಆನೆಯಾಗಿ ಜನಿಸಿದರು. ಆದರೆ ಪೂರ್ವಜನ್ಮದ ಜ್ಞಾನ ಅವರಿಗಿತ್ತು. ಪ್ರಾಣಿಗಳಾಗಿ ಜನಿಸಿ ದರೂ ಸಹ ಅವರು ಸದಾ ವಿಷ್ಣು ಧ್ಯಾನಾಸಕ್ತರಾಗಿದ್ದರು. ಹೀಗಿರುವಾಗ ಒಂದು ಕಾರ್ತೀಕ ಮಾಸವು ಬಂದಿತು. ಆನೆಯ ಜನ್ಮದಲ್ಲಿದ್ದ ಜಯನು ಸ್ನಾನಕ್ಕಾಗಿ ಗಂಡಕೀ ನದಿಗೆ ಇಳಿದನು. ಆನೆಯು ನೀರಿಗಿಳಿದ ತಕ್ಷಣ ಮೊಸಳೆಯಾಗಿದ್ದ ವಿಜಯನು ಅದರ ಕಾಲನ್ನು ಬಲವಾಗಿ ಹಿಡಿದೆಳೆದನು.

ತನ್ನ ಕಾಲನ್ನು ಮೊಸಳೆಯಿಂದ ಬಿಡಿಸಿಕೊಳ್ಳಲಾಗದೆ, ಆನೆಯು ತನ್ನ ಪೂರ್ವ ಜನ್ಮ ಸಂಸ್ಕಾರದಿಂದ ಶ್ರೀಮನ್ನಾರಾಯಣನನ್ನು, ‘ಹೇ ಭಗವಂತ ! ನನ್ನನ್ನು ಈ ಆಪತ್ತಿನಿಂದ ಕಾಪಾಡು ಅನಾಥರಕ್ಷಕನಾದ ನೀನು ನನ್ನನ್ನು ರಕ್ಷಿಸು’ ಎಂದು ವಿಷ್ಣುವನ್ನು ಪ್ರಾರ್ಥಿಸುತ್ತ ನಿಂತನು. ಭಕ್ತನ ಮೊರೆಯನ್ನು ಆಲಿಸಿದ ಭಗವಂತನು ಗರುಡನ ಹೆಗಲೇರಿ ಬಂದು ತನ್ನ ಸುದರ್ಶನ ಚಕ್ರವನ್ನು ಮೊಸಳೆಯ ಮೇಲೆ ಪ್ರಯೋಗಿಸಿದನು. ಈ ರೀತಿಯಾಗಿ ಗಜೇಂದ್ರನಿಗೆ ಮೋಕ್ಷ ಪ್ರಾಪ್ತಿಯಾಯಿತು. ಅಂದಿನಿಂದ ‘ಗಂಡಕಿ’ ನದಿ ಕ್ಷೇತ್ರವು ಪರಮ ಪಾವನವಾದ ವಿಷ್ಣು ಕ್ಷೇತ್ರವಾಯಿತು. ಈ ಗಂಡಕೀ ನದಿಯಲ್ಲಿ ಸಿಗುವ ಶಿಲೆಗಳ ಮೇಲೆ ಚಕ್ರದ ಚಿಹ್ನೆ ಮೂಡಿರುತ್ತದೆ ಅದು ಸಾಲಿಗ್ರಾಮವಾಗಿ ಪೂಜಿಸಲ್ಪಡುತ್ತದೆ.

ಹೀಗೆ ಅಪಾರವಿದ್ಯೆಗಳಿಸಿದ್ದರೂ, ಜ್ಞಾನಿ ಗಳಾಗಿದ್ದರೂ ಕೆಲವೊಮ್ಮೆ ಅನುಚಿತವಾಗಿ ವರ್ತಿಸುತ್ತೇವೆ. ವಿದ್ಯೆಯ ಅಹಂಕಾರ ಹೆಚ್ಚಾದಾಗ ನಾವು ನಮ್ಮವರು ಎನ್ನುವ ಪರಿಜ್ಞಾನ ವಿಲ್ಲದೆ ಉದ್ಧಟತನದಿಂದ ಅಧಿಕಾರದ ಮದದಿಂದ, ಮತ್ತೊಬ್ಬರಿಗೆ ನೋವು ಉಂಟಾಗು ವಂತೆ ವರ್ತಿಸಿದಾಗ ಆ ಕ್ಷಣಕ್ಕೆ ಅದಕ್ಕೆ ಯಾರೂ ಎದುರಾಡದೆ ಇರಬಹುದು, ಆದರೆ ಕರ್ಮ ಸದಾ ನಮ್ಮ ಬೆನ್ನತ್ತಿ ಬರುತ್ತದೆ.

ಮತ್ತೊಬ್ಬರ ಜೊತೆಗೆ ಅನುಚಿತವಾಗಿ ನಡೆದುಕೊಂಡಾಗ, ಅಹಂಕಾರದಿಂದ ಮೆರೆದಾಗ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ, ಆಗ ಚಿಂತಿಸಿ ಪ್ರಯೋಜನವಿಲ್ಲ. ವಿದ್ಯೆಗೆ ವಿನಯವೇ ಭೂಷಣ.