ಪದಸಾಗರ
ಕಳೆದ ವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿತ್ತು. ತಮಾಷೆ ಅಂದರೆ ಪಾಕಿಸ್ತಾನ ಈ ಸಭೆಯಲ್ಲಿ ಶಾಂತಿದೂತನ ಸೋಗಿನಲ್ಲಿ ಕಾಣಿಸಿಕೊಂಡಿದ್ದು. ಇಸ್ರೇಲ್ ದೇಶವನ್ನು ಕೋರ್ಟ್ ಮಾರ್ಷಲ್ ಮಾಡಿ ಕ್ಷಮೆ ಕೇಳಿಸಬೇಕೆಂದು ಆ ಸಭೆ ಏರ್ಪಾಡಾದಂತಿತ್ತು. ಪಾಕಿಸ್ತಾನದ ರಾಯಭಾರಿ ಆಸಿಫ್ ಇಫ್ತಿಕಾರ್ ಅಹ್ಮದ್ ಎಂಬಾತ ಮಹಾನ್ ಶಾಂತಿಪ್ರಿಯನಂತೆ ಇಸ್ರೇಲನ್ನು ತರಾಟೆಗೆ ತೆಗೆದು ಕೊಳ್ಳಲು ಹೊರಟ.
ಇಸ್ರೇಲ್ ಭಯೋತ್ಪಾದನೆ ಮಾಡ್ತಾ ಇದೆ. ಅಮಾಯಕ ದೇಶಗಳಾಗಿರೋ ಕತಾರ್, ಸಿರಿಯಾ, ಲೆಬನಾನ್ ಮತ್ತು ಯೆಮೆನ್ ಗಳ ಮೇಲೆ ದಾಳಿ ಮಾಡಿ ರಾಕ್ಷಸೀಯ ಪ್ರವೃತ್ತಿ ತೋರುತ್ತಾ ಇದೆ ಅಂತ ನೇರವಾಗಿ ಆರೋಪಗಳ ಸುರಿಮಳೆ ಸುರಿಸೋಕೆ ಶುರು ಮಾಡಿದ. ಗಾಜಾ ಪಟ್ಟಿಯ ಯುದ್ಧಕ್ಕಾಗಿ ನೀವು ಮುಗ್ಧ ವಿದೇಶಗಳನ್ನು ಯಾಕೆ ಟಾರ್ಗೆಟ್ ಮಾಡ್ತಿದೀರಿ ಅಂತ ಭಾರೀ ಉತ್ಸಾಹದಲ್ಲಿ ಗದರಲಾರಂಭಿಸಿದ.
ಭೂತದ ಬಾಯಲ್ಲಿ ಭಗವದ್ಗೀತೆ ಅಂತ ಸುಮ್ಮನೆ ಗಾದೆ ಸೃಷ್ಟಿಯಾಗಿಲ್ಲ ಅಲ್ವಾ? ಎದುರಲ್ಲಿ ಕೂತಿದ್ದ ಇಸ್ರೇಲ್ ನ ರಾಯಭಾರಿ ಡ್ಯಾನಿ ಡೆನಾನ್ ಒಂದೇ ಉತ್ತರದಲ್ಲಿ ಪಾಕಿಸ್ತಾನದ ರಾಯಭಾರಿಗೆ ಚೆಕ್ ಮೇಟ್ ಇಟ್ಟುಬಿಟ್ಟ. ’ಅಮೆರಿಕದ ಟ್ವಿನ್ ಟವರ್‌ಗೆ ಜೆಟ್ ನುಗ್ಗಿಸಿದ್ದ ಭಯೋತ್ಪಾದಕ ಒಸಾಮಾ ಬಿನ್ ಲ್ಯಾಡನ್‌ಗೆ ಆಶ್ರಯ ಕೊಟ್ಟಿದ್ದು ಸೋ ಕಾಲ್ಡ್ ವಿದೇಶ ಪಾಕಿಸ್ತಾನವೇ ಅನ್ನೋ ಸತ್ಯವನ್ನು ಇತಿಹಾಸದಿಂದ ಅಳಿಸೋದಕ್ಕೆ ಸಾಧ್ಯವಿಲ್ಲ.’ !
ಈ ಒಂದು ಮಾತು ಪಾಕಿಸ್ತಾನಕ್ಕೆ ಮಾತ್ರವಲ್ಲ ಭಯೋತ್ಪಾದನೆಯನ್ನೇ ಕಸುಬು ಮಾಡಿಕೊಂಡಿ ರುವ ಮುಸಲ್ಮಾನ ರಾಷ್ಟ್ರಗಳೆಲ್ಲವಕ್ಕೂ, ಅದೇ ರೀತಿ ಅವರಿಗೆ ಕುಮ್ಮಕ್ಕು ಕೊಡುತ್ತಿರುವ ಎಲ್ಲ ದೇಶಗಳಿಗೂ ಕೊಟ್ಟ ಉತ್ತರವಾಗಿತ್ತು.
ಇದನ್ನೂ ಓದಿ: Naveen Sagar Column: ದಿ ಬೆಂಗಾಲ್ ಫೈಲ್ಸ್..ಲದ್ದಿ ಜೀವಿಗಳಿಗೆ ತಂದಿದೆ ಪೈಲ್ಸ್ !
ಇಫ್ತಿಕಾರ್ ಅಹ್ಮದ್ ನಾಜೂಕಯ್ಯನ ಮಾದರಿಯಲ್ಲಿ ಇಸ್ರೇಲನ್ನು ವಿಲನ್ ಎಂದು ಬಿಂಬಿಸಲು ಟ್ರೈ ಮಾಡಿದ್ದ. ಹಮಾಸ್ ಉಗ್ರರಿಗೆ ಯೆಮೆನ್, ಸಿರಿಯಾ, ಈಜಿ, ಲೆಬನಾನ್, ಕತಾರ್ ಇತ್ಯಾದಿ ದೇಶಗಳು ಆಶ್ರಯ ಕೊಟ್ಟರೆ, ಆ ದೇಶಗಳಿಗೇ ನುಗ್ಗಿ ಹೊಡೆಯಬೇಕಾಗುತ್ತದೆ ಎಂಬುದು ಇಸ್ರೇಲ್‌ನ ಸ್ಪಷ್ಟ ಸಂದೇಶ. ಅಮೆರಿಕದಲ್ಲಿ ಭಯೋತ್ಪಾದನೆ ಮಾಡಿ ಪಾಕಿಸ್ತಾನಕ್ಕೆ ಬಂದು ಲ್ಯಾಡನ್ ಅಡಗಿಕೊಂಡರೆ, ಅಮೆರಿಕದ ಮೇಲೆ ದಾಳಿ ಮಾಡೋಕಾಗತ್ತಾ? ಲ್ಯಾಡನ್ ಎಲ್ಲಿದ್ದಾನೋ ಅಲ್ಲಿಯೇ ನುಗ್ಗಬೇಕು.
ಆಶ್ರಯ ಕೊಟ್ಟ ದೇಶಕ್ಕೂ ಪೆಟ್ಟು ಕೊಡಬೇಕು. ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಇಷ್ಟು ದಿಟ್ಟತನ ತೋರಿರಲಿಲ್ಲ. ಇಸ್ರೇಲ್ ಆ ಪರಿಯ ಧೈರ್ಯವನ್ನು ಮಾತಿನಲ್ಲೂ ಕೃತಿಯಲ್ಲೂ ತೋರು ತ್ತಿದೆ. ಪದೇಪದೆ ಹೇಳಿದಂತಾಗಬಹುದು. ಆದರೂ ಓಕೆ, ಇಸ್ರೇಲಿನಿಂದ ಭಾರತ ಬಹಳ ಕಲಿಯುವು ದಿದೆ.
ಜಿಯೋಪೊಲಿಟಿಕಲ್ ದೃಷ್ಟಿಯಿಂದ ಇಸ್ರೇಲನ್ನು ನೋಡಿದರೆ, ಅದರ ಗಡಿಯ ಸುತ್ತ ಇರುವ ದೇಶಗಳನ್ನು ನೋಡಿದರೆ, ಭಾರತಕ್ಕಿಂತ ವಿಪರೀತ ಅಪಾಯಕಾರಿ ಸ್ಥಿತಿಯಲ್ಲಿದೆ ಇಸ್ರೇಲ್. ಆದರೂ ಇಷ್ಟೊಂದು ಕೆಚ್ಚು ಪ್ರದರ್ಶಿಸುತ್ತದೆ. ಆದರೆ ಭಾರತ ಯಾಕೆ ಪಾಕ್ ವಿರುದ್ಧ ಇಸ್ರೇಲ್ ನಂತೆ ಧೈರ್ಯ ತೋರುವುದಿಲ್ಲ ಎಂದು ಪ್ರಶ್ನೆ ಹುಟ್ಟುವುದು ಸಹಜ.
ಆದರೆ ಸ್ವತಂತ್ರ ಭಾರತ ದೇಶ ನಿಜಕ್ಕೂ ಇಸ್ರೇಲ್ ನಷ್ಟು ಸ್ವತಂತ್ರವಾಗಿದೆಯಾ? ಇಸ್ರೇಲ್ ನಷ್ಟು ಸನ್ನದ್ಧವಾಗಿದೆಯಾ? ಇಸ್ರೇಲನ್ನು ಕೆಣಕಿ ಉಳಿದವರಿಲ್ಲ, ಉಳಿಯುವುದೂ ಇಲ್ಲ. ಆದರೆ ಭಾರತದ ವಿಷಯದಲ್ಲಿ ಹಾಗೆ ಹೇಳಬಲ್ಲ ಸ್ಥಿತಿ ಇದೆಯಾ? ಭಾರತ ಆಂತರಿಕವಾಗಿ ಸ್ವತಂತ್ರವಾಗಿರಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರವಲ್ಲ.
ಭಾರತ ಮಾತ್ರವಲ್ಲ. ಹಲವಾರು ದೇಶಗಳು ರಾಜತಾಂತ್ರಿಕ ದೃಷ್ಟಿಯಿಂದ, ವ್ಯಾಪಾರ ದೃಷ್ಟಿಯಿಂದ, ಭದ್ರತಾ ದೃಷ್ಟಿಯಿಂದ ಬಾಗಿ ನಡೆಯಲೇಬೇಕಿರುವ, ಹೊಂದಾಣಿಕೆ ಮನೋಭಾವ ತೋರಲೇ ಬೇಕಿರುವ ಅನಿವಾರ್ಯತೆಯಲ್ಲಿವೆ. ಮೋದಿ ಸಮರ್ಥರಿರಬಹುದು, ಬಲಿಷ್ಟರಿರಬಹುದು. ದೇಶ ವನ್ನು ಮೇಲಕ್ಕೆ ಕೊಂಡೊಯ್ದಿರಬಹುದು. ಆದರೆ ಕೆಲವು ವಿಷಯಗಳಲ್ಲಿ ಜಾಣನಡೆ ತೋರು ವುದು, ಸೂಕ್ಷ್ಮವಾಗಿ ವರ್ತಿಸುವುದು ಅನಿವಾರ್ಯ.
ಇದು ಪಾಕ್ ವಿರುದ್ಧ ಭಾರತ ಆಡಿದ ಪಂದ್ಯವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬರೆದ ಪೀಠಿಕೆ ಅಲ್ಲ. ಪಹಲ್ಗಾಮ್ ಹತ್ಯಾಕಾಂಡದ ನಂತರ ಪಾಕ್ ಜೊತೆಗೆ ಆಟ ಮಾತ್ರವಲ್ಲ ಯಾವ ರೀತಿಯ ಸಂಬಂಧವನ್ನೂ ಸಹಿಸಲು ಅಸಾಧ್ಯವೇ. ಹಾಗಂತ ನಾವು ಪಾಕ್ ಮೇಲೆ ಅಣುಬಾಂಬ್ ಉದುರಿಸಿ ಇಡೀ ದೇಶವನ್ನು ನಿರ್ನಾಮ ಮಾಡಲು ಸಾಧ್ಯವಿತ್ತಾ? ಖುದ್ದು ಇಸ್ರೇಲ್ ಕೂಡ ಹಮಾಸ್ ದಾಳಿಯ ನಂತರ ಅಂಥ ತೀವ್ರ ನಿರ್ಧಾರಕ್ಕೆ ಹೋಗಿಲ್ಲ. ಒಂದಕ್ಕೆ ಹತ್ತು ಪಟ್ಟು ಏಟು ಕೊಟ್ಟು ಎದುರಾಳಿಯ ಸದ್ದಡಗಿಸುವ ಕೆಲಸವನ್ನಷ್ಟೇ ಮಾಡಬೇಕಾಗುತ್ತೆ.
ಉಗ್ರರಿಗೆ, ಉಗ್ರದೇಶಕ್ಕೆ ಬುದ್ಧಿ ಕಲಿಸುವ ಹಾದಿಯಲ್ಲಿ ಸಿವಿಲಿಯನ್‌ಗಳ ಪ್ರಾಣಗಳೂ ಹೋಗಬಹುದು. ಆದರೆ ಸಾರಾಸಗಟಾಗಿ ದೇಶವನ್ನೇ ನಾಶ ಮಾಡಲಾಗುವುದಿಲ್ಲ. ಭಾರತ ಮಾಡಿದ್ದು ಇದನ್ನೇ. ಪಹಲ್ಗಾಮ್ ದಾಳಿಗೆ ಉತ್ತರವಾಗಿ ಆಪರೇಶನ್ ಸಿಂಧೂರ್ ಮೂಲಕ ಪಾಕಿ ಉಗ್ರರಿಗೆ ಪಾಠ ಕಲಿಸಿದ್ದಲ್ಲದೇ, ನೀರು ತಡೆ ಹಿಡಿದು ಬಾಯಿ ಒಣಗುವಂತೆ ಮಾಡಿದ್ದಾಯ್ತು.
ಅಮೆರಿಕದ ಟ್ರಂಪನ ಮಾತಿಗೂ ಕ್ಯಾರೇ ಅನ್ನದೇ ಪಾಕಿಸ್ತಾನವೇ ಬಿಟ್ಟುಬಿಡು ಗುರೂ ಅಂತ ಕಾಲು ಹಿಡಿದ ಮೇಲೆ ಅಘೋಷಿತ ಕದನಕ್ಕೆ ವಿರಾಮ ಹೇಳಿದ್ದು. ಆ ನಂತರವೂ ಪಾಕಿಸ್ತಾನಕ್ಕೆ ಪದ್ಪದೆ ಎಚ್ಚರಿಕೆ ರವಾನೆ ಆಗುತ್ತಲೇ ಇದೆ. ಇಸ್ರೇಲ್ ಪಾಕ್ ವಿಶ್ವಸಂಸ್ಥೆಯಲ್ಲಿ ಮುಖಾಮುಖಿಯಾದಂತೆ, ಭಾರತ ಮತ್ತು ಪಾಕ್ ಮುಖಾಮುಖಿಯಾದರೆ ಬಹುಶಃ ಭಾರತ ಪಾಕ್‌ಗೆ ಇದೇ ರೀತಿ ಮುಟ್ಟಿ ನೋಡಿ ಕೊಳ್ಳುವಂತೆ ಮಾತನಾಡಿರುತ್ತಿತ್ತೇನೋ.
ಆದರೆ ಭಾರತದ ಎದುರು ಪಾಕ್ ಏನೇನೂ ಅಲ್ಲಎಂಬುದಕ್ಕೆ ಸಾಕ್ಷಿ ಒದಗಿಸಿದ್ದು ಎರಡು ವಾರಗಳ ಹಿಂದೆ ಚೀನಾದಲ್ಲಿ ನಡೆದ ಸಭೆ. ಪ್ರಧಾನಿ ಮೋದಿ ಕಿಂಗ್ ಥರ ಕಂಗೊಳಿಸ್ತಾ ಇದ್ದರೆ, ಪಾಕ್ ಪ್ರಧಾನಿ ಸೈಡ್ ವಿಂಗ್‌ನಲ್ಲಿ ನಿಂತು ದೈನ್ಯದಿಂದ ನೋಡುತ್ತಿದ್ದ. ಪಾಕ್‌ಗೆ ಇನ್ನೆಷ್ಟು ಹೊಡೆಯಬೇಕು? ಸತ್ತಿರೋ ಹಾವಲ್ಲದೇ ಹೋದ್ರೂ ಅದು ಸದ್ಯಕ್ಕೆ ಸತ್ತಂತಿರೋ ಹಾವು. ಅದನ್ನು ಮೇಲೇಳದಂತೆ ಇಟ್ಟರೆ ಸಾಕು ಎಂಬುದು ಭಾರತದ ಸದ್ಯದ ಧೋರಣೆ. ಆ ಹೊತ್ತಿನ ಬಂದಿರುವುದು ಏಷ್ಯಾಕಪ್. ಪಾಕ್ ಜೊತೆ ಕ್ರಿಕೆಟ್ ಬೇಕಾ ಎಂಬುದು ಪುಲ್ವಾಮಾ ದಾಳಿ ಸಮಯದಿಂದ ಹರಿದಾಡುತ್ತಲೇ ಇರುವ ಪ್ರಶ್ನೆ. ಖಂಡಿತ ಇದು ಯಾರಿಗೂ ಇಷ್ಟವಿಲ್ಲದ್ದು. ಬಹುತೇಕ ಭಾರತೀಯ ಕ್ರಿಕೆಟಿಗರೂ ಪಾಕ್ ಜೊತೆ ಆಡುವುದನ್ನು ಇಷ್ಟಪಡುವುದಿಲ್ಲ.
ಪಾಕಿಸ್ತಾನಿಗಳನ್ನು ಐಪಿಎಲ್ ನಿಂದ ಒದ್ದಾಡಿಸಲಾಗಿದೆ. ಕಮೆಂಟರಿ, ಅಂಪೈರಿಂಗ್ ನೆಪದಲ್ಲೂ ಪಾಕಿಗಳನ್ನು ಭಾರತದೊಳಗೆ ಸೇರಿಸುತ್ತಿಲ್ಲ. ದ್ವಿಪಕ್ಷೀಯ ಪಂದ್ಯಗಳಿಗೆ ಎಂದೋ ಎಳ್ಳುನೀರು ಬಿಟ್ಟಾಗಿದೆ. ವರ್ಲ್ಡ್ ಕಪ್ ಪಂದ್ಯ ಆಡೋಕೂ ಪಾಕ್‌ಗೆ ಕಾಲಿಡೋದಿಲ್ಲ ಎಂದು ನ್ಯೂಟ್ರಲ್ ಗ್ರೌಂಡಲ್ಲಿ ಆಡಿ, ಪಾಕಿಗಳ ಆದಾಯಕ್ಕೆ, ಇಲ್ಲದ ಮಾನಕ್ಕೆ ಪೆಟ್ಟು ಕೊಟ್ಟಿದೆ.
ಇನ್ನೇನು ಬೇಕು? ಈಗ ಏಷ್ಯಾ ಕಪ್ ಆಗಲೀ ಐಸಿಸಿ/ ಎಸಿಸಿ ಟೂರ್ನಮೆಂಟುಗಳಾಗಲೀ ಭಾರತ ಆಡದೇ ಹೋದಲ್ಲಿ ನಷ್ಟವಾಗುವುದು ಭಾರತಕ್ಕೇ. ಹಾಗೂ ಅದರ ಲಾಭ ಪಡೆಯುವುದು ಪಾಕಿಸ್ತಾನವೇ. ಈ ಲೆಕ್ಕಾಚಾರ ಗೊತ್ತಿದ್ದೂ ಆಡದೇ ಇರುವುದು ಭಾರತದ ಮೂರ್ಖತನವಾಗುತ್ತದೆ. ಮಹಾರಾಷ್ಟ್ರದಲ್ಲಿ ಕನ್ನಡಕ್ಕೆ ಅವಮಾನವಾಯ್ತು ಎಂದು ಕರ್ನಾಟಕ ಬಂದ್ ಮಾಡುವುದು ಎಂಥ ದಡ್ಡತನವೋ, ಪಾಕ್‌ಗೆ ಬುದ್ಧಿ ಕಲಿಸಲು ಏಷ್ಯಾ ಕಪ್ ಪಂದ್ಯವನ್ನು ಬಹಿಷ್ಕರಿಸುವುದು ಅಷ್ಟೇ ಹುಂಬ ನಿರ್ಧಾರ.
ಭಾರತ ಪಾಕ್ ಕ್ರಿಕೆಟ್ ಮಾತ್ರವಲ್ಲ, ಓಲಿಂಪಿಕ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ಹಲವಾರು ಕಡೆ, ಹಲವಾರು ಆಟಗಳಲ್ಲಿ ಮುಖಾಮುಖಿ ಆಗುವ ಸಂದರ್ಭ ಬರುತ್ತದೆ. ಅದೆಲ್ಲವನ್ನೂ ನಿರಾಕರಿಸಿ ದಲ್ಲಿ ನಷ್ಟವಾಗುವುದು ಭಾರತಕ್ಕೆ, ನಮ್ಮ ಕ್ರೀಡಾಪಟುಗಳಿಗೆ ಹೊರತು ಪಾಕ್ ಗಲ್ಲ. ನಾವು ಮಾಡುವುದೇ ಆದರೆ, ಪಾಕಿಸ್ತಾನವನ್ನು ಎಲ್ಲ ರೀತಿಯ ಕ್ರೀಡಾಕೂಟಗಳಿಂದ ನಿಷೇಧಿಸು ವಂತೆ ಮಾಡಬೇಕೇ ಹೊರತು, ನಾವು ಮೂಗು ಕೊಯ್ದುಕೊಳ್ಳುವುದಲ್ಲ.
ಪಾಕಿಸ್ತಾನ ತನ್ನ ಟೆರರಿಸ್ಟ್ ಮನಸ್ಥಿತಿಯಿಂದ ಹೊರಬರದೇ ಹೋದಲ್ಲಿ ಒಂದಲ್ಲ ಒಂದು ದಿನ ಇಂಥ ಕ್ರೀಡಾಕೂಟಗಳಿಂದ, ಸರ್ವದೇಶಗಳ ಸಮಿತಿಗಳಿಂದ, ವಿಶ್ವಸಂಸ್ಥೆಯಿಂದ ಬಹಿಷ್ಕೃತಗೊಳ್ಳ ಬಹುದು. ಆ ದಿಸೆಯಲ್ಲಿ ಭಾರತ ಒತ್ತಡ ಹೇರಬಹುದು. ಅದು ಬಿಟ್ಟು ಐಸಿಸಿ ಟೂರ್ನಿಗಳಲ್ಲಿ ಪಾಕ್ ದೇಶವನ್ನು ಎದುರಿಸದಿರುವುದು ಉತ್ತರವಲ್ಲ. ಎದುರಿಸಬೇಕು. ಎದುರಿಸಿ ಹೀನಾಮಾನವಾಗಿ ಸೋಲಿಸಿ ಬರಬೇಕು. ಅದು ಭಾರತದಿಂದ ನಿರೀಕ್ಷಿಸಬೇಕಿರೋದು.
ಬಿಜೆಪಿ ಬದಲು ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ, ದೇಶಭಕ್ತರ ನಿಲುವು ಇದೇ ಇರುತ್ತಿತ್ತಾ ಎಂಬೊಂದು ಪ್ರಶ್ನೆ ಹರಿದಾಡುತ್ತಿದೆ. ಇದೇ ಇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇದೇ ಇರಬೇಕು. ಬಿಜೆಪಿ ವಿರೋಧ ಪಕ್ಷದಲ್ಲಿದ್ದಿದ್ದರೆ, ಭಾರತ ಪಾಕ್ ವಿರುದ್ಧ ಆಡುವುದನ್ನು ವಿರೋಧಿಸು ತ್ತಿತ್ತೇನೋ. ಅದು ಟಿಪಿಕಲ್ ರಾಜಕೀಯ. ಪಹಲ್ಗಾಮ್ ದಾಳಿಯ ಬಗ್ಗೆ ಒಂದು ಸಂತಾಪದ ಮಾತು ಆಡದವರು, ಆಪರೇಶನ್ ಸಿಂದೂರವನ್ನು ಬೆಂಬಲಿಸದವರು, ನಂಬದವರು, ಭಾರತ ಪಾಕ್ ಪಂದ್ಯದ ದಿನ, ಪಿಚ್ ಪಕ್ಕ ಪಹಲ್ಗಾಮ್ ದುರಂತದ ಐಕಾನ್ ಚಿತ್ರ ಹಾಕಿಕೊಂಡು ದೇಶಪ್ರೇಮ ಮೆರೆದಿದ್ದೇ ಮೆರೆದಿದ್ದು.
ಪಾಕಿಸ್ತಾನದ ಏಜೆಂಟ್ ಥರ ಆಡುವ ಕಾಂಗ್ರೆಸ್‌ಗೂ ಇದ್ದಕ್ಕಿದ್ದಂತೆ ದೇಶಪ್ರೇಮ ಉಕ್ಕಿ ಹರಿದು, ಪಾಕ್ ವಿರುದ್ಧ ಕ್ರಿಕೆಟ್ ಆಡಬಾರದು. ಪಹಲ್ಗಾಮ್ ಕೃತ್ಯವನ್ನು ಮರೆಯಬಾರದು ಅಂತೆಲ್ಲ ಬಡಬಡಿಸಿ ಬಿಟ್ಟಿತು. ಕಾಂಗ್ರೆಸ್ ನಂಥ ಕಾಂಗ್ರೆಸ್ ನಲ್ಲಿ ದೇಶ ಪ್ರೇಮ ಮೊಳಕೆ ಒಡೆಯಲು ಭಾರತ ಪಾಕ್ ಪಂದ್ಯ ನಡೆದದ್ದು ಮೂಲವಾಯ್ತು ಅಂದ್ರೆ ಈ ಪಂದ್ಯವನ್ನು ಬೆಂಬಲಿಸೋದ್ರಲ್ಲಿ ತಪ್ಪಿಲ್ಲ.
ಅಂದ ಹಾಗೆ ಪಾಕ್ ನಿನ್ನೆ ಪಂದ್ಯ ಸೋತಿತು. ಭಾರತ ಟಾಸ್‌ಗೆ ಹೋದಾಗಲೂ ಹ್ಯಾಂಡ್‌ಶೇಕ್ ಮಾಡಲಿಲ್ಲ. ಪಂದ್ಯ ಗೆದ್ದಾಗಲೂ ಹ್ಯಾಂಡ್ ಶೇಕ್ ಮಾಡಲಿಲ್ಲ. ಇಡೀ ಪಂದ್ಯದಲ್ಲಿ ಒಂದೇ ಒಂದು ಬಾರಿಯೂ ಪಾಕಿಗಳನ್ನು ನೋಡಿ ಸ್ಮೈಲ್ ಕೂಡ ಕೊಡಲಿಲ್ಲ.
ಭಾಯಿ ಭಾಯಿ ಎಂಬಂತಾಡಲಿಲ್ಲ. ಪ್ಯಾಡ್ ಕಟ್ಟೋಕೆ, ಶೂ ಲೇಸ್ ಕಟ್ಟೋಕೆ ಹೋಗಲಿಲ್ಲ. ವಿನಾ ಕಾರಣ ಹೋಗಿ ದೋಸ್ತಿ ಥರ ಮಾತಾಡಿ ಹಲ್ಲು ಕಿಸಿಯಲಿಲ್ಲ. ಬಹಳ ಸ್ಪಷ್ಟವಾಗಿ ಸಂದೇಶ ಕೊಟ್ಟಿತ್ತು ಟೀಮ್ ಇಂಡಿಯಾ. ಅಷ್ಟೇ ಅಲ್ಲ. ಈ ಪಂದ್ಯವನ್ನು ಯಾವ ಕಾರಣಕ್ಕೂ ಸೋಲಬಾರದು ಎಂಬಂತೆಯೇ ಆಡಿತ್ತು ಸೂರ್ಯಪಡೆ.
ಗೆಲುವನ್ನು ಉಗ್ರರಿಂದ ಹತರಾದ ಅಮಾಯಕ ಭಾರತೀಯರಿಗೆ ಮತ್ತು ಭಾರತೀಯ ಸೇನೆಗೆ ಅರ್ಪಿಸುವುದಕ್ಕೆ, ನೇರವಾಗಿ ಈ ಮಾತುಗಳನ್ನು ಆಡುವುದಕ್ಕೆ, ಹ್ಯಾಂಡ್‌ಶೇಕ್ ಮಾಡದಿರುವುದಕ್ಕೆ ಸ್ಪಷ್ಟ ನಿರ್ದೇಶನವೂ ಇತ್ತು ಎಂಬುದು ತಿಳಿಯದ ವಿಚಾರವೇನಲ್ಲ. ಭಾರತ ಈ ಪಂದ್ಯ ಆಡುವ ಮೂಲಕ ಕೊಟ್ಟಿರುವ ಸಂದೇಶ ಬಹುದೊಡ್ಡದು.
ಟೂರ್ನಿಯಲ್ಲಿ ಮತ್ತೆ ಪಾಕ್ ಮೇಲೆ ಆಡಬೇಕಾಗಬಹುದು. ಗೆಲುವು ಸೋಲು ಊಹಿಸಲಾಗದು. ಫಲಿತಾಂಶ ಏನೇ ಬಂದರೂ ಭಾರತದ ಆಟಿಟ್ಯೂಡ್ ಇದೇ ಇರಬೇಕು. ಅಕಸ್ಮಾತ್ ಒಂದು ವೇಳೆ ಮುಂದಿನ ಪಂದ್ಯದಲ್ಲಿ ಭಾರತ ಸೋತರೆ, ಆ ಸೋಲನ್ನು ಸಂಭ್ರಮಿಸಲು ಭಾರತದ ಒಂದು ದೊಡ್ಡ ಸಮೂಹ ಕಾದು ಕೂತಿದೆ. ಆರ್ಮಿಗೆ ಅರ್ಪಿಸಿದ್ದನ್ನು ಮೂದಲಿಸಲು, ಮೋದಿಯ ಸರಕಾರವನ್ನು ಹಿಂಡಾಡಲು, ಅಮಿತ್ ಶಾ ಕುಟುಂಬವನ್ನು ಟ್ರೋಲ್ ಮಾಡಲು. ಈಗಾಗಲೇ ಅಮಿತ್ ಶಾ, ಆಫ್ರಿದಿ ಜೊತೆಯಲ್ಲಿ ಕೂತಿರುವ ಹಳೆಯ ವಿಡಿಯೋವನ್ನು ಮೊನ್ನೆಯದು ಎಂದು ನಂಬಿಸುವ ಆಟವೂ ಶುರುವಾಗಿದೆ. ಆದರೆ ಪಾಕ್ ವಿಚಾರದಲ್ಲಿ ಭಾರತದ ನಿರ್ಧಾರ ಮತ್ತು ನಡೆಗಳು ಸರಿದಿಕ್ಕಿನಲ್ಲಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಇಸ್ರೇಲಿನಂತೆ ವರ್ತಿಸುವ, ಪ್ರತಿಕ್ರಿಯಿಸುವ ಮಟ್ಟಕ್ಕೆ ಭಾರತ ಹೋಗಬೇಕು ಎಂಬ ಆಸೆ ತಪ್ಪಲ್ಲ. ಆದರೆ ಇಂದಿನ ಭಾರತದ ಗಟ್ಸ್ ಮತ್ತು ಜಾಣ್ಮೆ ಕಮ್ಮಿಯೇನಲ್ಲ. ಏನೇ ಹೇಳಿ, ಶೇಕ್ ಆಗಿರೋ ಪಾಕಿಸ್ತಾನ ಒಂದು ಹ್ಯಾಂಡ್ ಶೇಕ್‌ಗಾಗಿ ಅಳುವಂತಾಯ್ತಲ್ಲ. ಅದರಲ್ಲಿ ನಿಜಕ್ಕೂ ನಮಗೊಂದು ಕಿಕ್ ಸಿಕ್ಕಿದೆ ಬಿಡಿ.