ಶಶಾಂಕಣ
ನಮ್ಮ ಜನಪದರು, ಗ್ರಾಮೀಣ ಜನರು ಕೆಲವು ಹಕ್ಕಿಗಳಿಗೆ ಇಟ್ಟಿರುವ ಹೆಸರನ್ನು ಕಂಡರೆ ಒಮ್ಮೊಮ್ಮೆ ಚೋದ್ಯ ಎನಿಸುತ್ತದೆ. ‘ಮಳೆ ಕೋಂಗಿಲ’ ಎಂಬುದು ನಮ್ಮ ಹಳ್ಳಿಯಲ್ಲಿ ಕಾಣ ಸಿಗುವ ವಿಶಿಷ್ಟ ಮತ್ತು ದೊಡ್ಡ ಗಾತ್ರದ ಹಕ್ಕಿ. ಮಳೆಗಾಲದ ದಿನಗಳಲ್ಲಿ ಇವುಗಳು ಅತ್ತಿಂದಿತ್ತ, ಮರದಿಂದ ಮರಕ್ಕೆ ಹಾರಾಡುವುದನ್ನು ನೋಡಬಹುದು.
ಸಂಜೆಯ ಹೊತ್ತಿನಲ್ಲಿ ಒಮ್ಮೆಗೇ ಮನೆಯ ಹಿಂದಿನ ಹಾಡಿಯಲ್ಲೋ, ಗದ್ದೆಯಾಚೆಗಿನ ಹಕ್ಕಲಿನಲ್ಲೋ ಆರೆಂಟು ಹಕ್ಕಿಗಳು ಸದ್ದು ಮಾಡುತ್ತಾ ಪ್ರತ್ಯಕ್ಷವಾಗುತ್ತವೆ. ಬರಬರ ಸದ್ದು ಮಾಡುತ್ತಾ ಹಾರುವ ಅವುಗಳ ಸಂಚಾರವನ್ನು ಕಂಡು ‘ಹಾಂ, ಮಳೆ ಕೋಂಗಿಲ ಬಂದೊ ಕಾಣಿ, ನಾಳೆ ಇನ್ನೂ ಜಾಸ್ತಿ ಮಳೆ ಬತ್ತತಾ ಕಾಣತ್’ ಎನ್ನುತ್ತಿದ್ದರು ನಮ್ಮ ಹಳ್ಳಿಯ ಜನ.
ಇಲ್ಲಿ ಅವುಗಳ ‘ಸಂಚಾರ’ ಎಂದು ಕರೆದದ್ದು ಸುಮ್ಮನೆ ಅಲ್ಲ, ಹಾಗಿರುತ್ತದೆ ಅವುಗಳ ಆಗಮನ, ನಿರ್ಗಮನ! ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸ್ಥಳೀಯವಾಗಿ ವಲಸೆ ಹೋಗಲು ಅವು ಆರಿಸಿಕೊಳ್ಳುವುದು ಇದೇ ಶ್ರಾಯವನ್ನು. ಮಳೆ ಕೋಂಗಿಲ ಹಕ್ಕಿಗಳು ಒಂದು ರೀತಿಯಲ್ಲಿ ಪಕ್ಷಿಲೋಕದ ವಿದೂಷಕರು.
ಇಂಗ್ಲಿಷಿನಲ್ಲಿ ಅವುಗಳನ್ನು ಮಲಬಾರ್ ಪೈಡ್ ಹಾರ್ನ್‌ಬಿಲ್ ಎಂದು ಕರೆದಿದ್ದಾರೆ. ಅವುಗಳನ್ನು ನಮ್ಮ ಹಳ್ಳಿಯ ಜನಪದರು ‘ಮಳೆ ಕೋಂಗಿಲ’ ಎಂದು ಕರೆದರೂ, ಈ ಹಕ್ಕಿಗಳು ಹಾಡಲಾರವು! ಏಕೆಂದರೆ, ಅವುಗಳ ದನಿ ಕರ್ಕಶ. ಅದಕ್ಕೇ, ವಿರುದ್ಧಾರ್ಥಕವಾಗಿ ‘ಮಳೆ ಕೋಂಗಿಲ’ ಎಂದು ಗ್ರಾಮೀಣರು ಕರೆದರೋ ಏನೋ.
ಇದನ್ನೂ ಓದಿ: Shashidhara Halady Column: ಪ್ರವಾಸಿ ಪ್ರಪಂಚದಲ್ಲೊಂದು ಸುತ್ತು
ಇನ್ನು ಅವುಗಳ ಕೊಕ್ಕು ಸಹ ವಿದೂಷಕನ ಸ್ವರೂಪಕ್ಕೆ ಅನ್ವರ್ಥಕ. ನಸು ಹಳದಿ ಬಣ್ಣದ ಉದ್ದನೆಯ, ಡೊಂಕಾದ ಕೊಕ್ಕು, ಆ ದೊಡ್ಡ ಕೊಕ್ಕಿನ ತುದಿಯಲ್ಲೊಂದು ಕೊಂಬು, ಆ ಕೊಂಬಿ ನಲ್ಲಿ ಕರಿಬಣ್ಣದ ಅಲಂಕಾರ. ಕೊಕ್ಕಿನ ಮೇಲೊಂದು ಕೊಕ್ಕು ಹೊಂದಿರುವುದು ಈ ಹಕ್ಕಿಯ ಹೆಗ್ಗಳಿಕೆಯಾದರೂ, ನೋಡುವುದಕ್ಕೆ ಅದು ಅಷ್ಟೊಂದು ಚಂದವಲ್ಲ. ತಲೆಯ ಮೇಲೆ ಅರ್ಧ ಅಡಿಗಿಂತಲೂ ದೊಡ್ಡದಾದ ಕೊಕ್ಕನ್ನು ಹೊತ್ತು ಹಾರುವುದೇ ಆ ಹಕ್ಕಿಗೆ ಒಂದು ದೊಡ್ಡ ಕೆಲಸ!
ನಮ್ಮ ಹಳ್ಳಿಯವರು ಅದನ್ನು ಮಳೆ ಕೋಂಗಿಲ ಎಂದು ಕರೆದರೂ, ಅವುಗಳ ವರ್ತನೆಯ ಕುರಿತು ಹೆಚ್ಚಿನ ಮಾಹಿತಿ ಅವರಲ್ಲಿ ಇಲ್ಲ ಎನಿಸುತ್ತದೆ. ಎರಡು ಅಡಿಗೂ ಉದ್ದ ಇರುವ, ಕಪ್ಪನೆಯ ಬಣ್ಣದ ಆ ಹಕ್ಕಿಗಳು ನಮ್ಮೂರಿನ ಕಾಡು ಪ್ರದೇಶದಲ್ಲಿ ಸ್ಥಳೀಯವಾಗಿ ವಲಸೆ ಹೋಗುವುದನ್ನು ಗುರುತಿಸಿ ದ್ದಾರಾದರೂ, ಅವುಗಳ ನಡವಳಿಕೆಗೆ ಯಾವುದೇ ಕಥೆಗಳನ್ನು ಕಟ್ಟಿದಂತಿಲ್ಲ.
ಜತೆಗೆ, ಇವು ಗೂಡು ಕಟ್ಟುವ ಪರಿ, ಗಂಡು ಹಕ್ಕಿಯು ತನ್ನ ಕುಟುಂಬಕ್ಕಾಗಿ ಆಹಾರ ತರಲು ಶ್ರಮಿಸುವುದು, ಹೆಣ್ಣು ಹಕ್ಕಿಯು ಮರದ ಪೊಟರೆಯಲ್ಲಿ ತನ್ನನ್ನು ತಾನೇ ಬಂಧಿಯನ್ನಾಗಿಸಿ ಕೊಂಡು ಮರಿಯನ್ನು ಸಲಹುವುದು ಇವೇ ವಿಚಾರಗಳ ಕುರಿತು ನಮ್ಮ ಹಳ್ಳಿಯವರು ಮಾತನಾಡಿ ದ್ದನ್ನು ನಾನೆಂದೂ ಕೇಳಿಲ್ಲ.
ಇವುಗಳನ್ನೇ ಹೋಲುವ, ತುಸು ಚಿಕ್ಕದಾದ, ಮೈಪೂರ್ತಿ ಬೂದು ಬಣ್ಣದ ಇನ್ನೊಂದು ಹಾರ್ನ್ ಬಿಲ್ ಹಕ್ಕಿಯನ್ನು ‘ಚಪ್ಪು ಕೋಂಗಿಲ’ ಎಂದು ಕರೆಯುತ್ತಾರೆ. ಇವೆರಡೂ ಒಂದಕ್ಕೊಂದು ದೂರದ ಸಂಬಂಧಿಗಳು, ಈ ಕುಟುಂಬದ ಎಲ್ಲಾ ಪ್ರಭೇದದ ಹಕ್ಕಿಗಳು ಮರಿಮಾಡುವ ಕ್ರಮವೇ ಬಹು ವಿಭಿನ್ನ; ಹೆಣ್ಣು ಹಕ್ಕಿಯು ದೊಡ್ಡ ಮರದ ಪೊಟರೆಯೊಳಗೆ ತನ್ನನ್ನು ತಾನೇ ಬಂಧನಕ್ಕೆ ಒಳಪಡಿಸಿಕೊಂಡು, ಮೊಟ್ಟೆಯಿಟ್ಟು, ಕಾವುಕೊಟ್ಟು ಮರಿಮಾಡುತ್ತದೆ.
ಆ ಪೊಟರೆಯ ಸಂದಿಯಲ್ಲಿ ಕೊಕ್ಕು ತೂರಿಸಿ ಆ ತಾಯಿ ಹಕ್ಕಿಗೆ ನಿರಂತರವಾಗಿ ಆಹಾರ ನೀಡುವುದು ಗಂಡು ಹಕ್ಕಿಯ ಕೆಲಸ. ಚಪ್ಪು ಕೋಂಗಿಲಗಳು ಸಾಮಾನ್ಯವಾಗಿ ಜೋಡಿಯಾಗಿ ಕಾಣಿಸಿಕೊಳ್ಳುತ್ತವೆ; ಮೈಬಣ್ಣವು ಒಣರೆಂಬೆಯ ಬಣ್ಣವನ್ನು ಹೋಲುತ್ತದೆ. ಆದ್ದರಿಂದಲೇ, ನಮ್ಮ ಹಳ್ಳಿಗರು ಅದನ್ನು ಚಪ್ಪು (ಒಣರೆಂಬೆ) ಕೋಂಗಿಲ ಎಂದು ಕರೆದರು! ಈ ಹಕ್ಕಿಗಳು ನಮ್ಮ ರಾಜ್ಯದ ಬಯಲು ಸೀಮೆಯಲ್ಲೂ ಸಾಕಷ್ಟು ಕಾಣಸಿಗುತ್ತವೆ.
ಆದರೆ, ದೊಡ್ಡ ಗಾತ್ರದ ಮಳೆ ಕೋಂಗಿಲಗಳು, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್‌ಗಳು ಕಷ್ಟದ ದಿನಗಳನ್ನು ಎದುರಿಸುತ್ತಿವೆ. ಕೆಲವೇ ದಶಕಗಳ ಹಿಂದೆ ಸಾಕಷ್ಟು ಸಂಖ್ಯೆಯ ಮಳೆ ಕೋಂಗಿಲಗಳು ನಮ್ಮ ಹಳ್ಳಿಯ ಸುತ್ತಮುತ್ತಲೂ ಇದ್ದವು; ಅವುಗಳಿಗೆ ಆಶ್ರಯ ನೀಡಲು ಅಂದು ನೂರಾರು ಹಳೆಯ, ಬೃಹದಾಕಾರದ ಮರಗಳು ತಮ್ಮಷ್ಟಕ್ಕೆ ತಾವೇ ಬೆಳೆದುಕೊಂಡಿದ್ದವು. ಆದರೆ ಈಚಿನ ವರ್ಷಗಳಲ್ಲಿ ಅಂಥ ಹಳೆಯ ಮರಗಳು ಬಹುಮಟ್ಟಿಗೆ ಕಣ್ಮರೆಯಾಗಿ, ಅಲ್ಲೆಲ್ಲಾ ಅಕೇಶಿಯಾ ಕಾಡು ಬೆಳೆದಿರುವುದರಿಂದ, ನಮ್ಮ ಹಳ್ಳಿಯಲ್ಲಿದ್ದ ಹೆಚ್ಚಿನ ಮಳೆ ಕೋಂಗಿಲಗಳು ಬೇರೆ ಕಡೆ ಹೊರಟು ಹೋಗಿವೆ ಅಥವಾ ನಿಧಾನವಾಗಿ ಕಣ್ಮರೆಯಾಗುತ್ತಿವೆ.
ನಮ್ಮ ಹಳ್ಳಿಯಲ್ಲಿ ಅತಿ ಹೆಚ್ಚು ಕಣ್ಣಿಗೆ ಬೀಳುವ ಹಕ್ಕಿಗಳೆಂದರೆ, ನಾನಾ ರೀತಿಯ ಕೊಕ್ಕರೆಗಳು! ಗದ್ದೆ ಕೊಯ್ಲಾದ ನಂತರ, ಗದ್ದೆಯಂಚಿನ ಉದ್ದಕ್ಕೂ ಅವು ಕುಳಿತು, ಆ ಪರಿಸರಕ್ಕೆ ರಂಗೋಲಿ ಬರೆದ ಅನುಭವವನ್ನು ನೀಡುತ್ತವೆ! ಬತ್ತದ ಬೆಳೆಗಾಗಿ ಗದ್ದೆ ಹೂಟಿ ನಡೆದು, ಇನ್ನೂ ನಾಟಿಯಾಗದೇ ಇರುವ ದಿನಗಳಲ್ಲಿ, ಗದ್ದೆಯ ತುಂಬಾ ನೀರು ನಿಂತು, ಪ್ರತಿಯೊಂದು ಗದ್ದೆಯೂ ಒಂದೊಂದು ವಿಶಾಲ ಕನ್ನಡಿಯಾಗುತ್ತದೆ, ಆಗಸದ ನೀಲಿಯನ್ನು ಪ್ರತಿಫಲಿಸುತ್ತಿರುತ್ತದೆ.
ಆ ಗದ್ದೆಯ ಅಂಚಿನಲ್ಲಿ ಸಾಲಾಗಿ ಕುಳಿತುಕೊಳ್ಳುವ ಬಿಳಿ ಕೊಕ್ಕರೆಗಳ ಪ್ರತಿಬಿಂಬವು ನೀರಿನಲ್ಲಿ ಮೂಡಿ, ಸುಂದರ ಭಾವಚಿತ್ರವನ್ನೇ ಕಟ್ಟಿಕೊಡುತ್ತವೆ. ಏನಾದರೂ ಸದ್ದಾದಾಗ, ಒಮ್ಮೆಗೇ ಎದ್ದು ಹಾರುವ ಹತ್ತಾರು ಕೊಕ್ಕರೆಗಳು, ನೀರಿನಲ್ಲೂ ಹಾರುತ್ತಾ ಹೋಗುವ ಅವುಗಳ ಪ್ರತಿಬಿಂಬಗಳು ಪುಟ್ಟ ಕಾವ್ಯವನ್ನೇ ರೂಪಿಸುವ ಪರಿ ಅನನ್ಯ, ಅದ್ಭುತ.
ಅವು ಗದ್ದೆಯಲ್ಲಿನ ಮೀನು, ಏಡಿ, ಕಪ್ಪೆಗಳನ್ನು, ಕೊಯ್ಲಾದ ನಂತರ ಗದ್ದೆಗಳಲ್ಲಿರುವ ಮಿಡತೆ, ಕೀಟಗಳನ್ನು ಹಿಡಿದು ತಿನ್ನುತ್ತವೆ. ಆದರೆ, ನಮ್ಮ ಹಳ್ಳಿಯ ಕೊಕ್ಕರೆಗಳನ್ನು ಕೆಲವರು ಸಾಯಿಸುತ್ತಿದ್ದ ದಿನಗಳೂ ಇದ್ದವು! ಚರೆ ಕೋವಿಯಿಂದ ಒಂದು ಢಂ ಎನಿಸಿದರೆ, ಸಾಲಾಗಿ ಗದ್ದೆ ಯಂಚಿನಲ್ಲಿ ಕುಳಿತಿದ್ದ ನಾಲ್ಕಾರು ಕೊಕ್ಕರೆಗಳು ಒಮ್ಮೆಗೇ ಸತ್ತುಬಿದ್ದಾವು!
ಸಂಜೆಯ ಹೊತ್ತಿನಲ್ಲಿ ಒಮ್ಮೊಮ್ಮೆ ಢಂ ಎಂದು ಈಡು ಮಾಡಿದ ಸದ್ದು ಅಪರೂಪಕ್ಕೆ ಕೇಳಿ ಬರುತ್ತಿತ್ತು. ಆಗ ‘ಹಾಂ, ಯಾರೋ ಕೊಕ್ಕಾನಕ್ಕಿಗೆ ಈಡು ಹೊಡೆದರು!’ ಎಂದು ನಮ್ಮ ಅಮ್ಮಮ್ಮ ಉದ್ಗರಿಸುತ್ತಿದ್ದರು. 1970ರ ದಶಕದಲ್ಲಿ ಜಾರಿಗೊಂಡ ವನ್ಯಜೀವಿ ಸಂರಕ್ಷಣಾ ಕಾಯಿದೆಯಿಂದಾಗಿ ಹಕ್ಕಿಗಳಿಗೂ ರಕ್ಷಣೆ ದೊರಕಿದೆ, ಹಿಂದೆ ನಡೆಯುತ್ತಿದ್ದ ಅಂಥ ಹಕ್ಕಿಬೇಟೆ ಬಹುಮಟ್ಟಿಗೆ ನಮ್ಮೂರಲ್ಲಿ ನಿಂತುಹೋಗಿದೆ. ಆದರೇನು ಮಾಡುವುದು, ಸರಿಸುಮಾರು ಅದೇ ಸಮಯದಲ್ಲಿ, ಅಂದರೆ 1970ರ ದಶಕದಲ್ಲಿ ಆರಂಭಗೊಂಡ ಕ್ರಿಮಿನಾಶಕಗಳ ವ್ಯಾಪಕ ಬಳಕೆಯಿಂದಾಗಿ, ತಮ್ಮ ಬದುಕಿಗೆ ಗದ್ದೆಯನ್ನೇ ಆಶ್ರಯಿಸಿದ್ದ ಕೊಕ್ಕರೆಗಳ ಸಂತತಿಗೆ ಬೇರೊಂದೇ ತೆರನ ಅಪಾಯ ಒದಗಿದೆ ಎನ್ನಬಹುದು.
ಕ್ರಿಮಿನಾಶಕ ಬಳಸಿದ ಗದ್ದೆಯಲ್ಲಿನ ಮೀನುಗಳನ್ನು ತಿಂದರೆ, ಹಕ್ಕಿಗಳ ಮೊಟ್ಟೆಯ ಕವಚ ತೆಳುವಾಗುತ್ತದೆ ಎಂದಿದ್ದಾರೆ ವಿಜ್ಞಾನಿಗಳು. ಹಲವು ದಶಕಗಳಿಂದ ಕೊಕ್ಕರೆಗಳು ಅದೇ ಗದ್ದೆಗಳಲ್ಲಿ ಮೀನು, ಕಪ್ಪೆ ಹಿಡಿದು ತಿನ್ನುತ್ತಿವೆ; ನಿಧಾನವಾಗಿ ಅವುಗಳ ಮೊಟ್ಟೆಯ ಕವಚ ಕಡಿಮೆಯಾಗಿರ ಬಹುದೋ ಏನೋ!
ಈ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯ. ಆದರೂ ಈಗಲೂ ನಮ್ಮ ಹಳ್ಳಿಯಲ್ಲಿ ಸಾಕಷ್ಟು ಸಂಖ್ಯೆಯ ಕೊಕ್ಕರೆಗಳಿವೆ. ಹಿಂದೆ ನಮ್ಮೂರಿನಲ್ಲಿ ಬಿಳೀ ರೆಕ್ಕೆಯ ಸ್ಮಾಲ್ ಈಗ್ರೆಟ್, ಬಿಗ್ ಈಗ್ರೆಟ್, ಕ್ಯಾಟಲ್ ಈಗ್ರೆಟ್ ಗಳು, ಪಾಂಡ್ ಹೆರಾನ್‌ಗಳು ಅಧಿಕ ಸಂಖ್ಯೆಯಲ್ಲಿದ್ದವು.
ಈಗ ಅವುಗಳೂ ಸಾಕಷ್ಟು ಸಂಖ್ಯೆಯಲ್ಲಿವೆ; ಜತೆಗೆ, ಓಪನ್ ಬಿಲ್, ಬಣ್ಣದ ಕೊಕ್ಕರೆ, ಕಪ್ಪು ಐಬೀಸು, ಅಡುಜಾಂಟ್ (ಅಪೂರ್ವಕ್ಕೆ), ಗ್ರೇ ಪೆಲಿಕನ್‌ಗಳು ಸಹ ಆಗಾಗ ಕಾಣಿಸಿಕೊಳ್ಳುತ್ತಿವೆ. ನಮ್ಮ ಪರಿಸರ ದಲ್ಲಿ ಕಳೆದ ಐದು ದಶಕದಲ್ಲಿ ಅದೇನು ಬದಲಾವಣೆಯಾಯಿತೋ ಗೊತ್ತಿಲ್ಲ, ದೊಡ್ಡ ದೊಡ್ಡ ಕೊಕ್ಕರೆಗಳು ಸಹ ನಮ್ಮ ಹಳ್ಳಿಗೆ ಈಗ ಪ್ರಾದೇಶಿಕವಾಗಿ ವಲಸೆ ಬರತೊಡಗಿವೆ. ಈ ಹಕ್ಕಿಗ ಳನ್ನು ನಮ್ಮೂರಿನಲ್ಲಿ ಕಂಡು ಸಣ್ಣಗೆ ಸಂತೋಷವಾದರೂ, ಹಿಂದೆ ಒಮ್ಮೆಯೂ ಬಾರದೇ ಇದ್ದ ಈ ಹಕ್ಕಿಗಳು, ಈಚಿನ ವರ್ಷಗಳಲ್ಲಿ ನಮ್ಮ ಹಳ್ಳಿಗೆ ಬರುತ್ತಿವೆ ಅಂದರೆ, ಅವುಗಳ ಜೀವನಕ್ರಮದಲ್ಲಿ ವ್ಯತ್ಯಯವಾಗಿರಬಹುದು ಅಥವಾ ಅವುಗಳಿಗೆ ಹಿಂದೆ ಆಶ್ರಯ ನೀಡಿದ್ದ ಜಲಾಶ್ರಯಗಳು ಕಣ್ಮರೆ ಯಾಗಿರಬೇಕು ಎಂದು ತರ್ಕಿಸಬಹುದು ಮತ್ತು ಅದು ನಿಜವಾಗಿದ್ದಲ್ಲಿ, ಒಟ್ಟೂ ಪರಿಸರದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.
ನಮ್ಮ ಹಳ್ಳಿಯ ಜನರು ಹಕ್ಕಿಗಳ ಬೇಟೆ ಮಾಡುವುದು, ಅವುಗಳನ್ನು ತಿನ್ನುವುದು ಬಹಳ ಕಡಿಮೆ. ಮಳೆಗಾಲದಲ್ಲಿ, ಆಹಾರಕ್ಕೆ ತೀರಾ ಕೊರತೆಯಾಗುವ ದಿನಗಳಲ್ಲಿ, ಗೆರೆ ಹಕ್ಕಿಗಳು (ಗೀಜುಗ, ಬಾಯಾ ವೀವರ್ ಬರ್ಡ್) ಒಮ್ಮೊಮ್ಮೆ ಬೇಟೆಗೆ ಬಲಿಯಾಗುವುದುಂಟು. ಅಂಥ ಹಕ್ಕಿಬೇಟೆಯನ್ನು ನಮ್ಮ ಮನೆಯ ಹತ್ತಿರ ಕಂಡ ನೆನಪಿದೆ. ಅವು ಆಷಾಢದ ದಿನಗಳು. ಮನೆಯ ಹಿಂದಿನ ಗದ್ದೆಯಂಚಿನಲ್ಲಿದ್ದ ನಾಲ್ಕು ತೆಂಗಿನ ಮರಗಳ ಗರಿಗಳ ತುದಿಯಲ್ಲಿ ಹತ್ತೈವತ್ತು ಗೆರೆಹಕ್ಕಿಗಳು ತಮ್ಮ ಸುಂದರ, ನಾಜೂಕಾದ ಗೂಡುಗಳನ್ನು ಕಟ್ಟುತ್ತಿದ್ದವು.
ಪ್ರತಿ ದಿನ ಮಳೆ ಸುರಿಯುವಂಥ ಕಾಲವದು; ಅಂಥ ದಿನಗಳಲ್ಲಿ ಆ ಹಕ್ಕಿಗಳಿಗೂ ಪಾಪ ಆಹಾರದ ಕೊರತೆ. ಮನೆಯಂಗಳದಲ್ಲಿದ್ದ ಹುಲ್ಲುಕುತ್ರಿಯ ಬಳಿ ಬಂದು, ಬತ್ತ ಬಡಿದ ನಂತರ ಒಣಹುಲ್ಲಿನಲ್ಲಿ ಉಳಿದುಕೊಂಡಿರುವ ಬತ್ತದ ಕಾಳುಗಳನ್ನು ಹುಡುಕಿ ಹುಡುಕಿ ತಿನ್ನುತ್ತಿದ್ದವು. ಹಸುಗಳಿಗೆ ಹಾಕಲೆಂದು ಮನೆಯವರು ಹುಲ್ಲನ್ನು ಕುತ್ರಿಯ ಬುಡದಿಂದಲೇ ತೆಗೆಯುವುದರಿಂದ, ಆ ಹುಲ್ಲಿನಿಂದ ಉದುರಿದ ಒಂದಷ್ಟು ಬತ್ತ, ಹೊಟ್ಟು ಬತ್ತವು ಅಲ್ಲೇ ನೆಲದ ಮೇಲೆ ಬಿದ್ದಿರುತ್ತಿತ್ತು.
ಹತ್ತಾರು ಗೆರೆ ಹಕ್ಕಿಗಳು ಅಲ್ಲಿ ಹುಲ್ಲನ್ನು ಕೆದಗಿ, ಬತ್ತವನ್ನು ಹುಡುಕುತ್ತಿರುವಾಗ, ಅಲ್ಲೊಂದು ಬುಟ್ಟಿಯನ್ನು ಓರೆಯಾಗಿಟ್ಟು, ದೂರದಲ್ಲಿ ಕುಳಿತ ಕುಯಿರ ನಾಯಕನು ಬುಟ್ಟಿಗೆ ಕಟ್ಟಿದ್ದ ಹಗ್ಗವನ್ನು ಸದ್ದಿಲ್ಲದೇ ಎಳೆಯುತ್ತಿದ್ದ. ಹೆಚ್ಚಿನ ಹಕ್ಕಿಗಳು ಗಾಬರಿಯಿಂದ ಹಾರಿ ಹೋದರೂ, ನಾಲ್ಕಾರು ಅಬ್ಬೆಪಾರಿಗಳು ಬುಟ್ಟಿಯೊಳಗೆ ಸಿಕ್ಕಿ ಬೀಳುತ್ತಿದ್ದವು!
ಆ ಪುಟಾಣಿ ಹಕ್ಕಿಗಳನ್ನು ಹಿಡಿದುಕೊಂಡು ಆತ ಹೋಗುತ್ತಿದ್ದ. ಒಂದು ಬೆರಳಿನಷ್ಟು ಉದ್ದದ ಆ ಹಕ್ಕಿಗಳನ್ನು ಹಿಡಿದು ತಿಂದರೆ, ಅದೆಷ್ಟು ತಾನೆ ಹಸಿವು ನೀಗೀತು ಎಂದು ಅದನ್ನು ಕಂಡವರು ಉದ್ಗರಿಸುತ್ತಿದ್ದರೂ, ಈ ವಿದ್ಯಮಾನವು ಅಂದು ಕೃಷಿ ಕಾರ್ಮಿಕರಿಗಿದ್ದ ಹಸಿವು ಮತ್ತು ಸಂಕಷ್ಟ ಗಳನ್ನು ಪ್ರತಿನಿಧಿಸುತ್ತದೆ ಎಂದೇ ನನ್ನ ಅಭಿಪ್ರಾಯ.
ಈಚಿನ ದಶಕಗಳಲ್ಲಿ ಸರಕಾರವು ಅಕ್ಕಿಯನ್ನು ಉಚಿತವಾಗಿಯೋ ಅಥವಾ ತೀರಾ ಕಡಿಮೆ ಬೆಲೆಗೋ ಹಂಚುತ್ತಿರುವುದರಿಂದ, ಅಂಥ ಕಡುಬಡತನ ತುಸು ಕಡಿಮೆಯಾಗಿದೆ, ಮಳೆಗಾಲದಲ್ಲೂ ಕೃಷಿ ಕಾರ್ಮಿಕರಿಗೆ ಸರಳವಾದ ಊಟ ಸಿಗುತ್ತಿದೆ, ಅವರು ಗೆರೆ ಹಕ್ಕಿಯಂಥ ಪುಟಾಣಿ ಹಕ್ಕಿಗಳನ್ನು ಹಿಡಿದು ತಿನ್ನುವ ಅನಿವಾರ್ಯ ಸ್ಥಿತಿ ದೂರಾಗಿದೆ.
ಹಗಲಿಡೀ ಹಾಡಿಯ ಮರದ ನೆರಳಿನಲ್ಲಿ ಕುಳಿತು ಕಾಲ ಕಳೆದು, ಸಂಜೆಯಾಗುತ್ತಲೇ ಬೇಟೆಗೆ ಹೊರಡುವ ಗುಮ್ಮ ಅಥವಾ ಗೂಬೆಗಳು ನಮ್ಮ ಹಳ್ಳಿಯ ಬದುಕಿನ ಮೇಲೆ ಪರಿಣಾಮ ಬೀರಿದ ರೀತಿ ವಿಶಿಷ್ಟ. ಮನುಷ್ಯನಂತೆಯೇ ಕಣ್ಣುಗಳನ್ನು ಹೊರಳಿಸಿ ಅತ್ತಿತ್ತ ನೋಡುವ ಅವುಗಳನ್ನು ಕಂಡರೆ ಮಕ್ಕಳಿಗೆಲ್ಲಾ ಬಹಳ ಭಯ; ಮಕ್ಕಳನ್ನು ಹೆದರಿಸಲು ದೊಡ್ಡವರು ಗುಮ್ಮದ ಹೆಸರನ್ನು ಪದೇ ಪದೆ ಹೇಳಿ, ಬೆದರಿಸಿ ಇಟ್ಟಿದ್ದರಿಂದ, ಗುಮ್ಮ ಎಂದರೆ ಅಶುಭ ಸೂಚಕ ಎಂಬ ಭಾವನೆಯೇ ನಮ್ಮೂರಲ್ಲಿದೆ.
ಗೂಬೆಯ ಇನ್ನೊಂದು ಪ್ರಭೇದ ಎನನಿಸಿರುವ ‘ಭೂತ ಹಕ್ಕಿ’ಯ ಕೂಗು ಭಯ ಹುಟ್ಟಿಸುವಂತಿದ್ದು, ಬೆಳಗಿನ ಜಾವ ಅದು ಕೂಗಿದರೆ ಸನಿಹದ ಮನೆಯಲ್ಲಿ ಮರಣ ಸಂಭವಿಸುತ್ತದೆ ಎಂಬ ಮೂಢ ನಂಬಿಕೆಯೂ ಇದೆ!
ಚೌಳಿಹರ ಎಂಬ ಇನ್ನೊಂದು ಪ್ರಭೇದದ, ದೊಡ್ಡ ಗಾತ್ರದ ಗೂಬೆ ನಡುರಾತ್ರಿಯಲ್ಲಿ ಕೂಗಿದರೆ, ಅದನ್ನು ಕೇಳಿದ ಧೈರ್ಯಶಾಲಿಗಳೂ ಒಮ್ಮೆಗೆ ನಡುಗಬೇಕು! ತೀಕ್ಷ್ಣ ಸ್ವರ, ದೀರ್ಘ ಪ್ರಲಾಪದ ಆ ಕೂಗು ಅಷ್ಟು ವಿಶಿಷ್ಟ, ರಾತ್ರಿ ಹೊತ್ತಿನಲ್ಲಿ ದಿಗಿಲು ಹುಟ್ಟಿಸುವಂಥದ್ದು.
ನಮ್ಮೂರಿನಲ್ಲಿ ಮೀನು ಗೂಬೆ, ಕೊಂಬಿನ ಗೂಬೆ, ಚಿಟ್ಟು ಗೂಬೆ, ಭೂತ ಹಕ್ಕಿ, ಚೌಳಿ ಹರ ಎಂಬ ಹೆಸರಿನ ಐದು ಪ್ರಭೇದದ ಗೂಬೆಗಳಿರುವುದನ್ನು ನಾನು ಗುರುತಿಸಿದ್ದೇನೆ. ಆದರೆ, ಈಚಿನ 2-3 ದಶಕ ಗಳಲ್ಲಿ, ನಮ್ಮ ಹಳ್ಳಿಯ ಸುತ್ತಲಿನ ಸಹಜ ಕಾಡು ಸಾಕಷ್ಟು ಕಡಿಮೆಯಾಗಿ, ಅಲ್ಲೆಲ್ಲಾ ಅಪಾರ ಪ್ರಮಾಣದಲ್ಲಿ ಅಕೇಶಿಯಾ ಕಾಡು ಹಬ್ಬಿರುವುದರಿಂದ, ಎಲ್ಲಾ ಜೀವಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದಂತೂ ನಿಜ. ಹಕ್ಕಿಗಳೂ ಅಂಥ ಒಂದು ಬಿಕ್ಕಟ್ಟಿಗೆ ಸಿಲುಕಿರಲೇಬೇಕು. ಆದರೆ, ದೂರದ ಜಾಗವನ್ನು ಹುಡುಕಲು ಅನುಕೂಲವಾಗುವಂತೆ ಹಕ್ಕಿಗಳಿಗೆ ರೆಕ್ಕೆಗಳಿವೆ ಹಾರಬಹುದು ಎಂದು ಒಂದು ಸಮಾಧಾನ ಹೇಳಿಕೊಳ್ಳಬಹುದಾದರೂ, ಅದು ಕ್ಷಣಿಕ ಸಮಾಧಾನವೇ ಆದೀತು!
‘ಧರೆಯೆ ಹೊತ್ತಿ ಉರಿಯುವಾಗ, ಬದುಕಲೆಲ್ಲಿ ಓಡುವೆ’ ಎಂದಂತೆ, ಎಲ್ಲಾ ಕಡೆ ಕಾಡು, ಕುರುಚಲು ಕಾಡು, ಹಾಡಿ, ಹಕ್ಕಲು, ಬಳ್ಳಿ, ಗಿಡ, ಹುಲ್ಲುಗಾವಲುಗಳು ನಾಶವಾಗುತ್ತಿರುವಾಗ, ರೆಕ್ಕೆ ಕಟ್ಟಿಕೊಂಡ ಹಕ್ಕಿಯೊಂದು ಎಷ್ಟು ದೂರ ತಾನೆ ಹಾರಲು ಸಾಧ್ಯ?