ಪದಸಾಗರ
ಕನ್ನಡದಲ್ಲಿ ನೀನು ಅತಿಯಾಗಿ ಮಿಸ್ ಮಾಡಿಕೊಳ್ಳುವ ಮ್ಯಾಗಜಿನ್ ಯಾವುದು ಅಂತ ನನ್ನನ್ನು ಕೇಳಿದರೆ, ನಾನು ಹಿಂದೆ ಮುಂದೆ ಯೋಚಿಸದೆ ಹೇಳುವ ಉತ್ತರ ‘ರಾಜುಪತ್ರಿಕೆ’.
ನಾನು ಅಂದಿನ ರೂಪತಾರಾ ಮಿಸ್ ಮಾಡಿಕೊಳ್ತೇನೆ. ಅಂದಿನ ಪ್ರಜಾಮತ ಮಿಸ್ ಮಾಡಿ ಕೊಳ್ತೇನೆ. ಚಂದಮಾಮ, ಬಾಲಮಿತ್ರಕ್ಕಿಂತ ಹೆಚ್ಚು ಆಪ್ತವೆನಿಸಿದ್ದ ಬೊಂಬೆಮನೆ ಮಿಸ್ ಮಾಡಿಕೊಳ್ತೇನೆ. ಅಭಿಮಾನಿ ಪ್ರಕಾಶನದ ಅಂದಿನ ಅರಗಿಣಿ ಪತ್ರಿಕೆಯನ್ನು ಬಹಳವಾಗಿ ಮಿಸ್ ಮಾಡ್ಕೋತೇನೆ. ತುಷಾರಕ್ಕಿಂತ ಮಯೂರವನ್ನು ಹೆಚ್ಚು ಮಿಸ್ ಮಾಡ್ಕೋತಿದ್ದೆ.
ಒಂದೊಂದು ಕಾರಣಕ್ಕೆ ಒಂದೊಂದು ಪತ್ರಿಕೆ ಇಷ್ಟವಾಗುತ್ತಿತ್ತು. ಆದರೆ ಯಾವುದೇ ಪತ್ರಿಕೆ ಇರಲಿ ಕಾಮನ್ ಫ್ಯಾಕ್ಟರ್ ಎಂಬಂತೆ ಕ್ರಿಕೆಟ್ ಮತ್ತು ಸಿನಿಮಾಗಳು ಪ್ರಥಮ ಆಕರ್ಷಣೆ ಯಾಗಿರುತ್ತಿದ್ದವು. ಆ ನಂತರ ಇನ್ನಿತರ ವಿಷಯಗಳತ್ತ ಹೊರಳುತ್ತಿದ್ದೆ. ಬಹುತೇಕ ಎಲ್ಲರ ಶುರುವಾತಿನ ಓದೂ ಹೀಗೆಯೇ ಇದ್ದಿರುತ್ತದೆ.
ಮಯೂರ, ತುಷಾರ, ಕಸ್ತೂರಿ, ಸುಧಾ, ತರಂಗ, ಇವೆಲ್ಲ ಕೈಗೆ ಸಿಕ್ಕಾಗ ಮೊದಲು ಒಂದು ರೌಂಡ್ ಕೇವಲ ಕಾರ್ಟೂನ್ ಜೋಕ್‌ಗಳನ್ನು, ಚುಟುಕಗಳನ್ನು ಓದಿ ಮುಗಿಸಿ ನಂತರ ದೊಡ್ಡ ಬರಹಗಳ ಕಡೆ ಹೋಗುತ್ತಿದ್ದೆ.
ಇದನ್ನೂ ಓದಿ: Naveen Sagar Column: ಧನರೇಖೆಯಿಲ್ಲದ ಅಂಗೈ.. ಬಡತನ ರೇಖೆಯಡಿ ಇಲ್ಲದ ಜೀವನ..!
ಮಯೂರದ ‘ಅಂಗೈಯಲ್ಲಿ ಅರಮನೆ’ ಮತ್ತು ‘ಬುತ್ತಿಚಿಗುರು’ ಎಂಬ ಹಾಸ್ಯ ಬರಹದ ಅಂಕಣಗಳು ನನ್ನ ಅಚ್ಚುಮೆಚ್ಚಿನವು. ನಾನು ತೀರಾ ಎರಡನೇ ತರಗತಿಯಲ್ಲಿದ್ದಾಗಲೇನೋ ‘ಅಂಗೈಯಲ್ಲಿ ಅರಮನೆ’ ಅಂಕಣಕ್ಕೆ ಸ್ವಾನುಭವದ ಒಂದು ಹಾಸ್ಯ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ರಸವತ್ತಾಗಿ ಬರೆದು ಕಳಿಸಿದ್ದೆ. ಅದು ಪ್ರಕಟವೂ ಆಗಿಬಿಟ್ಟಿತ್ತು.
ಅದು ನನ್ನ ಜೀವನದ ಪ್ರಥಮ ಪ್ರಕಟಿತ ಬರಹವಾಗಿ ಇಂದಿಗೂ ನೆನಪಲ್ಲುಳಿದಿದೆ. ವಿಶುಕುಮಾರ್, ನಾ.ಡಿಸೋಜರವರು ತರಂಗಕ್ಕೆ ಬರೆಯುತ್ತಿದ್ದ ಧಾರಾವಾಹಿಗಳು ನಾನು ಓದಿದ ಮೊದಲ ಧಾರಾವಾಹಿಗಳು. ಆ ನಂತರದಲ್ಲಿ ರಾಜಕೀಯದತ್ತ ಆಸಕ್ತಿ ಮೂಡಿಸಿದ ಬರಹಗಳೆಂದರೆ ಲಂಕೇಶ್ ಪತ್ರಿಕೆಯ ವರದಿಗಳು ಮತ್ತು ಟೀಕೆ-ಟಿಪ್ಪಣಿ. ಆದರೆ ಟ್ಯಾಬ್ಲಾಯ್ಡ್ ಮಾದರಿಯಲ್ಲದೆಯೂ ಒಂದು ಖಡಕ್ ತನದಿಂದ ಬಹಳ ಇಂಟರೆಸ್ಟಿಂಗ್ ಅನಿಸುವಂತೆ ಬರೆಯುತ್ತಿದ್ದ ಬಿ.ವಿ.ವೈಕುಂಠರಾಜು ಅವರ ಬರಹಗಳು ಪ್ರಭಾವ ಬೀರಿದ್ದವು. ‘ಸಂಪಾದಕರ ಡೈರಿ’ ಎಂಬ ನಡುಪುಟದ ದೀರ್ಘ ಅಂಕಣ ಪ್ರೈಮರಿ ಶಾಲೆಯಲ್ಲಿದ್ದ ನನ್ನಂಥವನಲ್ಲೂ ಓದುವ ಆಸಕ್ತಿ ಮೂಡಿಸುತ್ತಿತ್ತು.
ವಯಸ್ಸಿಗೆ ಬರುತ್ತಿದ್ದ ಹಾಗೆ ಲಂಕೇಶ್ ಪತ್ರಿಕೆಯ ತುಂಟಾಟ, ನೀಲು ಕವನಗಳು ನಮ್ಮೊಳ ಗಿನ ಪೋಲಿತನವನ್ನು ಜಾಗೃತಗೊಳಿಸಲಾರಂಭಿಸಿದವು. ಗೃಹಶೋಭಾದಂಥ ಹೆಣ್ಮಕ್ಕಳ ಪುಸ್ತಕ ಬೇರೆಯದೇ ಕಾರಣಕ್ಕೆ ನಮ್ಮಂಥ ಹದಿಹರೆಯದವರನ್ನು ಆಕರ್ಷಿಸ ತೊಡಗಿತ್ತು.
ಕಾಲೇಜ್ ಲೈಬ್ರರಿಯಲ್ಲಿ ಯಾವುದೋ ರತಿವಿಜ್ಞಾನದ ಪುಸ್ತಕ ಕೇಳುವಂತೆ ಗೃಹಶೋಭಾ ವನ್ನು ಕೇಳಿ ಕದ್ದು ಓದುತ್ತಿದ್ದೆವು. ಹುಡುಗರನ್ನು ಹುಡುಗಿಯರ ಮ್ಯಾಗಜಿನ್ ಮೂಲಕ ಸೆಳೆಯುವ ತಂತ್ರವೊಂದನ್ನು ಗೃಹಶೋಭಾದ ಸಂಪಾದಕರು ಬೇಕೆಂದೇ ಬಳಸಿದ್ದಿರಲೂ ಸಾಕು. ಹೀಗೆ ಭಿನ್ನ ಓದುಗಳ, ಭಿನ್ನ ಆಸಕ್ತಿಗಳ ಮಧ್ಯ ನಮ್ಮ ಆಯ್ಕೆಗಳು ಬದಲಾಗುತ್ತಾ ಸಾಗಿತ್ತು.
ಆ ನಂತರ ‘ಹಾಯ್ ಬೆಂಗಳೂರ್’, ‘ಓ ಮನಸೇ’ ಪತ್ರಿಕೆಗಳಿಗೆ ಅಡಿಕ್ಟ್ ಆದ ನಂತರ ಮಾತ್ರ ಇನ್ಯಾವುದೂ ಬರಹವೇ ಅಲ್ಲ ಎಂಬಂತಾಗಿ ಹೋಗಿದ್ದು ಸುಳ್ಳಲ್ಲ. ಅದೊಂದು ಡೇಂಜರಸ್ ಅಡಿಕ್ಷನ್. ಓದಿನ ಮೇಲೆ, ಬರಹದ ಮೇಲೆ, ವ್ಯಕ್ತಿತ್ವ, ಗುಣಸ್ವಭಾವ, ಯೋಚನಾಶಕ್ತಿ ಎಲ್ಲದರ ಮೇಲೆ ಪ್ರಭಾವ ಬೀರಿದ ಎರಡು ಪತ್ರಿಕೆಗಳು ಅವು. ಕಾಲವೇ ನನ್ನನ್ನು ಆ ವ್ಯಸನದಿಂದ ಮತ್ತು ಪ್ರಭಾವದಿಂದ ಮುಕ್ತವಾಗಿಸಿತು.
ಕಾಲಕ್ಕೊಂದು ಥ್ಯಾಂಕ್ಸ್. ಇಂದಿಗೆ ನಾನು ಆ ಪತ್ರಿಕೆಗಳನ್ನು ಮಿಸ್ ಮಾಡಿಕೊಳ್ತಿಲ್ಲ. ಈಗ ಈ ಅಂಕಣದ ಮೊದಲ ಸಾಲಿಗೆ ವಾಪಸ್ ಬರುತ್ತೇನೆ. ಹೌದು ನಾನು ಇಂದಿಗೂ ಅತಿ ಎನ್ನುವಷ್ಟು ಮಿಸ್ ಮಾಡಿಕೊಳ್ಳುವುದು ರಾಜುಪತ್ರಿಕೆ ಎಂಬ ಕ್ರೀಡಾಪತ್ರಿಕೆಯನ್ನು. ‘ಸ್ಪೋರ್ಟ್ಸ್ ಸ್ಟಾರ್’ ಓದಿ ಅರ್ಥ ಮಾಡಿಕೊಳ್ಳುವಷ್ಟು ಇಂಗ್ಲಿಷ್ ಗೊತ್ತಿರಲಿಲ್ಲ.
ಫೋಟೋಗಳು, ಸ್ಕೋರ್ ಬೋರ್ಡ್‌ಗಳು, ಚಿಕ್ಕಪುಟ್ಟ ಸಾಲುಗಳು ಒಂದು ಮಟ್ಟಕ್ಕೆ ಅರ್ಥ ವಾಗುತ್ತಿದ್ದವು. ಆಗ ‘ಇವೆಲ್ಲ ಕನ್ನಡದಲ್ಲಿದ್ದಿದ್ದರೆ!’ ಎಂದು ಆಸೆಯಾಗುತ್ತಿತ್ತು. ಸ್ಪೋರ್ಟ್ಸ್ ಸ್ಟಾರ್ ಮತ್ತು ಸ್ಪೋರ್ಟ್ಸ್ ವೀಕ್ ಎಂಬ ಎರಡು ಪುಸ್ತಕಗಳನ್ನು ಕೊಂಡು ಓದುವ ಮಿನಿಮಮ್ ಸಿರಿವಂತಿಕೆಯೂ ನಮಗಿರಲಿಲ್ಲ. ಲೈಬ್ರರಿಯಲ್ಲೋ, ಕಟಿಂಗ್ ಶಾಪ್‌ನಲ್ಲೋ ಸಿಕ್ಕರೆ ಕಣ್ಣಾಡಿಸಿ ಖುಷಿಪಡುವುದು, ಶ್ರೀಮಂತರ ಮನೆಯಿಂದ ರದ್ದಿಯಾಗಿ ಬರುತ್ತಿದ್ದ ಅವುಗಳನ್ನು ಬೇಡಿ ಹೆಕ್ಕಿತಂದು ಸಂಗ್ರಹ ಮಾಡಿಟ್ಟುಕೊಳ್ಳುವುದು ಇಷ್ಟರ ತೃಪ್ತಿ.
ಇಂಥ ಸಮಯದಲ್ಲಿ ಬಂದದ್ದು ರಾಜುಪತ್ರಿಕೆ. ವೈಕುಂಠರಾಜು ಅವರ ಮಗ ಕ್ರಿಕೆಟ್ ಆಡ್ತಾನಂತೆ. ಸನತ್ ಕುಮಾರ್ ಅಂತ ಅವನ ಹೆಸರಂತೆ. ಅವನೇ ರಾಜುಪತ್ರಿಕೆಯ ಸಂಪಾ ದಕನಂತೆ ಅಂತೆಲ್ಲ ಸುದ್ದಿ ಕೇಳಿ ರೋಮಾಂಚನ. ಕನ್ನಡದಲ್ಲಿ ಅದೇ ಮೊದಲ ಕ್ರೀಡಾ ಪತ್ರಿಕೆಯಾ? ಗೊತ್ತಿಲ್ಲ. ನನ್ನ ಪಾಲಿಗೆ ಅದೇ ಮೊದಲಿನದ್ದು.
ತಾರುಣ್ಯದಲ್ಲಿ ಹಾಯ್ ಬೆಂಗಳೂರ್‌ಗಾಗಿ ಚಡಪಡಿಸುತ್ತಾ ಇದ್ದ ಹಾಗೆ ಬಾಲ್ಯದಲ್ಲಿ ರಾಜುಪತ್ರಿಕೆಗಾಗಿ ಚಡಪಡಿಸುತ್ತಿದ್ದೆ. ಕಣ್ಣಿಗೆ ಕಟ್ಟುವ ಹಾಗೆ ರಣಜಿ ಪಂದ್ಯಗಳ ಮತ್ತು ಟೆಸ್ಟ್ ಏಕದಿನ ಪಂದ್ಯಗಳ ವಿವರಣೆ, ತಕ್ಷಣಕ್ಕೆ ಸೆಳೆದುಕೊಳ್ಳುವ ಹೆಡ್‌ಲೈನ್‌ಗಳು, ಬ್ಲ್ಯಾಕ್ ಆಂಡ್ ವೈಟೇ ಆದರೂ ಕಟ್ ಮಾಡಿಟ್ಟುಕೊಳ್ಳಬೇಕು ಅನಿಸುವಂಥ ಫೋಟೋಗಳು, ಕ್ರಿಕೆಟಿನ ಆಸಕ್ತಿಕರ ಅಂಕಿ-ಅಂಶಗಳು, ಎಲ್ಲೂ ಕೇಳಿರದ ಸಂಗತಿಗಳು, ವಿಶಿಷ್ಟ ದಾಖಲೆಗಳು ಎಲ್ಲವೂ ತುಂಬಿರುತ್ತಿದ್ದವು.
ಆರ್.ಜಿ. ವಿಜಯಸಾರಥಿ, ಪ್ರೇಮಾನಂದ ಕಾಮತ್ ಸೇರಿದಂತೆ ಹಲವರು ಬರೆಯುತ್ತಿದ್ದರು. ರಾಜುಪತ್ರಿಕೆ ಒಂದು ಸಮೃದ್ಧ ಕ್ರೀಡಾಪತ್ರಿಕೆಯಾಗಿತ್ತು. ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆ ಗಳಿಗೂ ಒಂದಷ್ಟು ಪುಟ ಮೀಸಲಿರುತ್ತಿದ್ದವು. ಅವು ಕೂಡ ರುಚಿಕಟ್ಟಾಗಿ ಓದಿಸಿ ಕೊಳ್ಳುತ್ತಿದ್ದವು.
ವೈಕುಂಠರಾಜು ನಿಧನದ ನಂತರ ರಾಜುಪತ್ರಿಕೆ ನಿಂತು ಹೋಯ್ತಾ? ಸರಿಯಾಗಿ ನೆನಪಿಲ್ಲ. ಆ ನಂತರ ಸನತ್ ಕುಮಾರ್ ಮತ್ತೆ ಕಂಡದ್ದು ‘ಎದ್ದೇಳು ಮಂಜುನಾಥ’ ಚಿತ್ರದ ನಿರ್ಮಾಪಕರಾಗಿ. ಆ ನಂತರ ವಿಪರೀತ ದೈಹಿಕ ಸಮಸ್ಯೆಗಳಿಂದಾಗಿ, ಆರ್ಥಿಕವಾಗಿಯೂ ಬಸವಳಿದು ತೀರಿಕೊಂಡರೆಂಬ ಸುದ್ದಿ ಕೇಳಿದ್ದು ನೆನಪು. ರಾಜುಪತ್ರಿಕೆಗೆ ಸ್ಪರ್ಧಿಯಾಗಿ ಕ್ರಿಕೆಟ್ ಎಂಬ ಪತ್ರಿಕೆ ಬಂತು, ಇಂದ್ರಜಿತ್ ಲಂಕೇಶ್ ಅವರ ಆಲ್ ರೌಂಡರ್ ಬಂತು. ಆದರೆ ಯಾವುದಕ್ಕೂ ರಾಜುಪತ್ರಿಕೆಯ ಸ್ಥಾನ ತುಂಬಲಾಗಲಿಲ್ಲ.
ಕ್ರಿಕೆಟ್ ಬಗ್ಗೆ ಉದ್ದುದ್ದವಾಗಿ, ಅತಿರಂಜಿತವಾಗಿ ಬರೆಯುವ ಹಲವರು ಇಂದಿಗೆ ಸೋಷಿ ಯಲ್ ಮೀಡಿಯಾದಲ್ಲಿ ಕಾಣಸಿಗುತ್ತಾರೆ. ಗೂಗಲ್ ಮೂಲಕ ಹೆಕ್ಕಿ ಕನ್ನಡಕ್ಕೆ ಅನುವಾದಿಸಿ ಕೊಡುವವರೂ ಸಿಗುತ್ತಾರೆ. ಆದರೆ ರಾಜುಪತ್ರಿಕೆಯ ಆ ಸ್ವಾದ ಸಿಗುವುದಿಲ್ಲ. ಅನಂತ್ ಚಿನಿವಾರ್ ‘ಥರ್ಡ್ ಅಂಪೈರ್’ ಅಂಕಣದಲ್ಲಿ ಆಗಾಗ ಕ್ರಿಕೆಟ್ ಕುರಿತಾಗಿ ಚೆಂದವಾಗಿ ಬರೆದಾಗ, ಮತ್ತೆ ನೆನಪಾಗುತ್ತಿದ್ದುದು ರಾಜು ಪತ್ರಿಕೆಯೇ.
ಟಿವಿ-5ನ ಸುದ್ದಿನಿರೂಪಕ ರಮಾಕಾಂತ್ ಆಗಾಗ ಬರೆಯುವ ಕ್ರಿಕೆಟ್ ಬರಹಗಳು ರಾಜು ಪತ್ರಿಕೆಯನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಇಂಥ ಬರಹಗಾರರೆಲ್ಲ ಸೇರಿ ಒಂದು ರಾಜು ಪತ್ರಿಕೆಯನ್ನು ತರಬಾರದೇ ಅಂತಲೂ ಅನಿಸುತ್ತದೆ. ಇಂಗ್ಲಿಷಲ್ಲಿ ಅದ್ಭುತ ಕ್ರಿಕೆಟ್ ಬರಹ ಗಳನ್ನು ಓದುವಾಗೆಲ್ಲ ಮನಸಿನಲ್ಲೊಮ್ಮೆ ಕನ್ನಡದ ರಾಜುಪತ್ರಿಕೆ ಹಾದು ಹೋಗುತ್ತದೆ.
ಇಂದು ದಿಢೀರ್ ರಾಜುಪತ್ರಿಕೆ ನೆನಪಾಗಲು ಕಾರಣ, ರಮಣ್ ಲಾಂಬಾ ಎಂಬ ಕ್ರಿಕೆಟಿಗ. ದೆಹಲಿಯ ಆರಂಭಿಕ ದಾಂಡಿಗ ರಮಣ್ ಲಾಂಬಾ ಆ ದಿನಗಳಲ್ಲಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮತ್ತು ಸುರದ್ರೂಪಕ್ಕೆ ಖ್ಯಾತನಾಗಿದ್ದ. ಕನ್ನಡದ ಪತ್ರಿಕೆಗಳು ‘ರಮಣ್ ಲಂಬ’ ಅಂತ ಬರೆಯುತ್ತಿದ್ದವು.
ರಾಜುಪತ್ರಿಕೆ ಇದ್ದ ಕಾಲದಲ್ಲಿ ರಮಣ್ ಲಾಂಬಾ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದ. ಭಾರತ ತಂಡಕ್ಕೆ ಬಂದು ಮೊದಲ ಸರಣಿಯ ಸೆಂಚುರಿ ಮತ್ತು ಎರಡು ಅರ್ಧಶತಕ ಗಳಿಸಿ ಸರಣಿಯ ಸರ್ವೋತ್ತಮನಾಗಿದ್ದ. ಕಪಿಲ್ ಹೊರತಾಗಿ ಇನ್ನೊಂದಷ್ಟು ಜನರನ್ನು ಇಷ್ಟ ಪಡಬೇಕು ಅಂತಾದಾಗ ಆತ ಮೊದಲಿಗನಾಗಿದ್ದ.
ಅಂದಿನ ದಿನಗಳಲ್ಲಿ ಆಕ್ರಮಣಕಾರಿ ಮನೋಭಾವಕ್ಕಿಂತ ರಕ್ಷಣಾತ್ಮಕ ಆಟಕ್ಕೇ ಹೆಚ್ಚು ಬೆಲೆ ಇತ್ತು. ಹೀಗಾಗಿ ರಮಣ್ ಲಾಂಬಾನ ವೈಫಲ್ಯವು ಆತನ ಸ್ಥಾನವನ್ನು ಕಿತ್ತುಕೊಂಡಿತು. ಆದರೆ ಆತ ಸುಮ್ಮನೆ ಕೂರಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸಿದ. ದೇಶ ಬಿಟ್ಟು ಹೋಗಿ ಬಾಂಗ್ಲಾ ಲೀಗ್‌ಗಳಲ್ಲಿ, ಐರ್ಲೆಂಡ್‌ನಲ್ಲಿ ಎಂದರಲ್ಲಿ ಕ್ರಿಕೆಟ್ ಆಡಿದ.
ಅಗ್ರೆಶನ್ ಮಾತ್ರ ಬಿಡಲಿಲ್ಲ. ಆದರೆ ಅದೊಂದು ದಿನ ಬಾಂಗ್ಲಾದಲ್ಲಿ ಲೀಗ್ ಪಂದ್ಯ ಆಡು ವಾಗ ಫಾರ್ವರ್ಡ್ ಶಾಟ್ಲೆಗ್‌ನಲ್ಲಿ ಫೀಲ್ಡಿಂಗ್ ಮಾಡಲು ನಿಲ್ಲುತ್ತಾನೆ. ಫಾರ್ವರ್ಡ್ ಶಾರ್ಟ್ ಲೆಗ್ ಅಂದ್ರೆ ಬ್ಯಾಟರ್‌ನಿಂದ ಕೆಲವೇ ಅಡಿಗಳಷ್ಟು ದೂರ. ಬ್ಯಾಟರ್ ರಕ್ಷಣಾತ್ಮಕವಾಗಿ ಟಚ್ ಮಾಡುವ ಚೆಂಡೂ ಕ್ಯಾಚ್ ಆಗಿ ಸಿಗುವಷ್ಟು ಹತ್ತಿರ. ಹಾಗೆ ನಿಲ್ಲುವಾಗ ಇಡೀ ಮೈಗೆ ಕವಚ ಹಾಕಿಕೊಳ್ಳಬೇಕಾಗುತ್ತದೆ.
ಅಷ್ಟೊಂದು ಅಪಾಯಕಾರಿ ಜಾಗ ಅದು. ಲಾಂಬಾ ಕನಿಷ್ಠ ಪಕ್ಷ ಹೆಲ್ಮೆಟ್ ಕೂಡ ಧರಿಸದೇ ನಿಂತುಬಿಡುತ್ತಾನೆ. ಹಾಗೆ ಆತ ನಿಂತಿದ್ದು ಅದೇ ಮೊದಲೇನಲ್ಲ. ಅದೇ ಜಾಗದಲ್ಲಿ ನಿಂತು ಕ್ಯಾಚ್ ಹಿಡಿದಿದ್ದೂ ಇದೆ. ಅಂಥದ್ದೇ ಒಂದು ಭಂಡಧೈರ್ಯದಲ್ಲಿ ಲಾಂಬಾ ಫೀಲ್ಡಿಂಗ್‌ಗೆ ನಿಲ್ಲುತ್ತಾನೆ.
ಎಡಗೈ ಸ್ಪಿನ್ನರ್ ಸೈಫುಲ್ ಖಾನ್ ಎಸೆದ ಎಸೆತವನ್ನು ಬಿರುಸಾಗಿ ಬಾರಿಸಿ ಬಿಡುತ್ತಾನೆ, ಮೆಹ್ರಬ್ ಹುಸೇನ್ ಎಂಬ ಬ್ಯಾಟರ್, ಚೆಂಡು ಐನೂರು ಕಿಲೋಮೀಟರ್‌ಗೂ ಹೆಚ್ಚು ವೇಗದಲ್ಲಿ ರಮಣ್ ಲಾಂಬಾನ ಕಪಾಳಕ್ಕೆ ಬಂದು ಬಡಿಯತ್ತದೆ.
ಕಿವಿಯ ಮೇಲ್ಭಾಗ ತಲೆಯ ಚಿಪ್ಪು ಇರುವ ಜಾಗಕ್ಕೆ ಚೆಂಡು ಯಾವ ವೇಗದಲ್ಲಿ ಅಪ್ಪಳಿಸು ತ್ತದೆ ಅಂದ್ರೆ, ಆ ಚೆಂಡು ವಾಪಸ್ ಕ್ಯಾಚ್ ಆಗಿ ತಲುಪಿದ್ದು ಕೀಪರ್ ಕೈಗೆ. ಲಾಂಬಾಗೆ ಒಂದು ಕ್ಷಣ ಏನಾಯ್ತು ಎಂದು ಗೊತ್ತಾಗದೆ ಕುಸಿದು ಬೀಳುತ್ತಾನೆ. ಹೊರಗಣ್ಣಿಗೆ ಏನೂ ಗಾಯ ಕಾಣಿಸೋದಿಲ್ಲ. ಆಗಷ್ಟೇ ಅಂಗಳಕ್ಕೆ ಬಂದಿದ್ದ ಅಮಿನುಲ್ ಇಸ್ಲಾಂ ‘ಆರ್ ಯೂ ಓಕೆ?’ ಅಂತ ಕೇಳಿದ್ದಕ್ಕೆ, ಆ ನೋವಿನ ‘ಬುಲ್ಲಿ.. ಮೈ ತೋ ಮರ್ ಗಯಾ’ ಅಂತ ಹೇಳಿದ್ದೇ ಕೊನೆ. ಲಾಂಬಾ ಕೋಮಾಗೆ ಜಾರುತ್ತಾನೆ. ಮೂರು ದಿನ ಕೋಮಾದಲ್ಲಿದ್ದು ಫೆಬ್ರವರಿ 23ಕ್ಕೆ ಕೊನೆಯುಸಿರೆಳೆಯುತ್ತಾನೆ.
ಇಂದಿಗೆ ಸರಿಯಾಗಿ ಇಪ್ಪತ್ತೆಂಟು ವರ್ಷ. ಬದುಕಿದ್ದಿದ್ದರೆ ರಮಣ್ ಲಾಂಬಾಗೆ ಕಳೆದ ತಿಂಗಳಿಗೆ ಅರವತ್ತಾರು ತುಂಬಿರುತ್ತಿತ್ತು. ರಮಣ್ ಲಾಂಬಾ ಸಾವಿನ ಘಟನೆಯನ್ನು ಇತ್ತೀ ಚೆಗೆ ಸೋಷಿಯಲ್ ಮೀಡಿಯಾ ಪೇಜೊಂದರಲ್ಲಿ ಓದಿದಾಗ ಒಂದು ಕ್ಷಣ ‘ರಾಜು ಪತ್ರಿಕೆ ಯನ್ನು ಮಿಸ್ ಮಾಡಿಕೊಂಡೆ; ರಾಜುಪತ್ರಿಕೆ ಇದ್ದಿದ್ದರೆ ಭಾವುಕ ದುರ್ಘಟನೆಯನ್ನು ಹೇಗೆ ಬರೆದಿರುತ್ತಿತ್ತು’ ಅಂತೆಲ್ಲ ಯೋಚನೆಗಳು ಬಂದವು.
ಯಾಕಂದ್ರೆ, ಇದೇ ರಾಜುಪತ್ರಿಕೆಯಲ್ಲಿ ನಾನು ಬಾಡಿಲೈನ್ ಸರಣಿಯ ಬರಹ ಓದಿದ್ದು. ನಾನು ಡಾನ್ ಬ್ರಾಡ್‌ಮನ್ ಆಟವನ್ನು ನೋಡಿರಲಿಲ್ಲ. ಹೆರಾಲ್ಡ್ ಲಾರ್‌ವುಡ್ ಬಗ್ಗೆ ಏನಂದ್ರೆ ಏನೂ ಗೊತ್ತಿರಲಿಲ್ಲ. ಡಗ್ಲಾಸ್ ಜಾರ್ಡಿನ್ ಹೆಸರೂ ಕೇಳಿರಲಿಲ್ಲ. ಆದರೆ ರಾಜು ಪತ್ರಿಕೆ ಬಾಡಿಲೈನ್ ಸರಣಿಯ ಬಗ್ಗೆ ಅದೆಷ್ಟು ಸೊಗಸಾಗಿ ಬರೆದಿತ್ತು ಅಂದರೆ, ನನಗದು ಆಟ ಅನಿಸಿರಲಿಲ್ಲ.
ಅದ್ಯಾವುದೋ ಎಮೋಷನಲ್ ಸಿನಿಮಾ ಎಂಬ ಭಾವ ಉಕ್ಕಿಸಿತ್ತು. ಜಾರ್ಡಿನ್ ಯಾವ ಅನಿವಾರ್ಯತೆಯಲ್ಲಿ ಬಾಡಿಲೈನ್ ಎಂಬ ತಂತ್ರ ಹೊಸೆದ, ಲಾರ್‌ವುಡ್ ಒಂದೊಂದು ಚೆಂಡು ಎಸೆದು ಬ್ಯಾಟರ್‌ನನ್ನು ಗಾಯಗೊಳಿಸಿ ನೆಲಕ್ಕೆ ಉರುಳಿಸಿದಾಗ ಹೇಗೆ ದುಃಖಿಸು ತ್ತಿದ್ದ, ‘ದೇವರೇ ಆ ಬ್ಯಾಟರ್ʼನ ನೋವನ್ನು ನನಗೆ ಕೊಡು’ ಎಂದು ಮನಸ ಗೋಗರೆಯು ತ್ತಿದ್ದ, ಜಾರ್ಡಿನ್ ಅಂದೆಂಥ ಕಟುಕ ಕಪ್ತಾನನಾಗಿದ್ದ, ಇಂಥ ಡೆಡ್ಲೀ ಬೌಲಿಂಗನ್ನೂ ಹೆಲ್ಮೆಟ್ಟೇ ಇಲ್ಲದ ಡಾನ್ ಬ್ರಾಡ್‌ಮನ್ ಹೇಗೆ ಎದುರಿಸಿ ರನ್ ಗಳಿಸಿದ,
ಎಲ್ಲವನ್ನೂ ನಾನು ಎದುರು ಕೂತು ನೋಡುತ್ತಿದ್ದೇನೇನೋ ಎಂಬಂತೆ ಪತ್ರಿಕೆ ಬರೆಯು ತ್ತಿತ್ತು. ಮನಸು ಮಹಾಭಾರತದ ಘಟನೆ ಮತ್ತು ಪಾತ್ರಗಳನ್ನೆಲ್ಲ ನೆನಪಿಸುತ್ತಿತ್ತು. ಇದಾದ ನಂತರ ದೂರದರ್ಶನದಲ್ಲಿ ಬಾಡಿಲೈನ್ ಸರಣಿಯ ಸೀರಿಯಲ್ ಪ್ರಸಾರವಾಯಿತು. ಆ ಸರಣಿಯ ಮರುಸೃಷ್ಟಿ ಅದು. ಆದರೆ ರಾಜುಪತ್ರಿಕೆಯ ಬರಹ ಕೊಟ್ಟ ರೋಚಕತೆ, ಭಾವುಕತೆ ಯಾವುದನ್ನೂ ಆ ದೃಶ್ಯಗಳು ಕೊಡಲು ಸಾಧ್ಯವಾಗಲೇ ಇಲ್ಲ. ಅದೆಲ್ಲಿಂದ ಮಾಹಿತಿ ಹೆಕ್ಕಿ ತರುತ್ತಿದ್ದರೋ!
ಅಂದಿನ ಪತ್ರಕರ್ತರ ಓದು, ಅಧ್ಯಯನ, ಬರವಣಿಗೆಯ ಶೈಲಿ ಮತ್ತು ತಾಕತ್ತುಗಳೇ ಬೇರೆ. ಭಾರತಕ್ಕೆ ಕ್ರಿಕೆಟ್ ಎಂಬುದು ಎಮೋಷನ್ ಅಂತ ಈಗ ಹೇಳುತ್ತಾರೆ. ಆದರೆ ಅದನ್ನು ಎಮೋಷನ್ ಆಗಿಸುವಲ್ಲಿ ಅಂದಿನ ಪತ್ರಿಕೆಗಳ, ಬರಹಗಳ ಪಾತ್ರ ದೊಡ್ಡದಿದೆ. ಮತ್ತೆ ಹೇಳುತ್ತೇನೆ: ಐ ಞಜಿoo ರಾಜುಪತ್ರಿಕೆ. ತುಂಬ ಅಂದ್ರೆ ತುಂಬ....