Ranjith H Ashwath Column: ದರ ಏರಿಕೆಯೆಂಬ ಎರಡು ಅಲಗಿನ ಕತ್ತಿ

ಸದ್ಯ ಕರ್ನಾಟಕದಲ್ಲಿ ದರ ಏರಿಕೆಯ ಬಿಸಿ ತಟ್ಟಿರುವುದು ಸ್ಪಷ್ಟ. ವರಮಾನ ಹೆಚ್ಚಿಸಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರ ವಿವಿಧ ತೆರಿಗೆ, ಮದ್ಯದ ಮೇಲಿನ ತೆರಿಗೆ ಸೇರಿದಂತೆ ಲಭ್ಯ ವಿರುವ ತೆರಿಗೆಗಳನ್ನು ಹೆಚ್ಚಿಸಿದೆ. ಇದರೊಂದಿಗೆ ಹಾಲಿನ ದರ ಏರಿಕೆ ಮಾಡಿದ್ದ ರಾಜ್ಯ

image-ba5e3aaa-a943-4362-b57c-4e82def6f3ba.jpg
Profile Vishwavani News January 7, 2025
ಅಶ್ವತ್ಥಕಟ್ಟೆ
ರಂಜಿತ್‌ ಎಚ್.ಅಶ್ವತ್ಥ
ranjith.hoskere@gmail.com
ಭಾರತದಂಥ ದೇಶದಲ್ಲಿ ಅನೇಕ ಸರಕಾರಗಳು ಜನರ ವಿರೋಧ ಕಟ್ಟಿಕೊಳ್ಳುವುದಕ್ಕೆ ಹತ್ತಾರು ಕಾರಣಗಳಿರುತ್ತವೆ. ಈ ಕಾರಣಗಳು ತಿಳಿಯುವ ಮೊದಲೇ ಸರಕಾರಗಳು ಬದಲಾಗಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ದೆಹಲಿಯಲ್ಲಿ ಆಲೂಗಡ್ಡೆ, ಈರುಳ್ಳಿ ಬೆಲೆ ಹೆಚ್ಚಳವಾಗಿದೆ ಎಂದು ಸರಕಾರಗಳೇ ಉರುಳಿಹೋಗಿರುವ ಉದಾಹರಣೆಯಿದ್ದರೆ, ಕೆಲವೊಂದಷ್ಟು ಕ್ಷೇತ್ರದಲ್ಲಿ ಶಾಸಕ ಗೌರವ ಕೊಡಲಿಲ್ಲವೆಂದು ಸೋತ ಉದಾಹರಣೆಯಿದೆ. ಆದರೆ ಈ ಎಲ್ಲವನ್ನು ಮೀರಿ, ಸರ್ವೇಸಾಮಾನ್ಯವಾಗಿ ಸರಕಾರಿ ವಿರೋಽ ಅಲೆ ಏಳುವುದು ‘ದರ ಏರಿಕೆ’ಯ ಕಾರಣಕ್ಕೆ.ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಕಚ್ಚಾವಸ್ತು ಗಳ ದರ, ಜೀವನಶೈಲಿ ಸೇರಿದಂತೆ ವಿವಿಧ ಕಾರಣಕ್ಕೆ ದರ ಏರಿಕೆ ಸಾಮಾನ್ಯವಾಗಿದೆ. ಖಾಸಗಿ ವಲಯದ ಕಂಪನಿಗಳು ಮಾಡುವ ದರ ಏರಿಕೆಗೆ ಪ್ರತಿಭಟಿಸಲಾಗುವುದಿಲ್ಲವೆಂದು ಮೌನವಾಗಿಯೇ ಒಪ್ಪಿಕೊಳ್ಳುವ ಅನೇಕರು, ಸರಕಾರದಿಂದಾಗುವ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ.
ದರ ಏರಿಕೆ ಎನ್ನುವುದು ಅನಿವಾರ್ಯ ಎನ್ನುವುದು ಗೊತ್ತಿದ್ದರೂ ಕೆಲ ವಸ್ತುಗಳ ಮೇಲಿನ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಅದರಲ್ಲಿಯೂ ಮೂಲಸೌಕರ್ಯದ ಮೇಲಿನ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ಮಾತ್ರ ವಲ್ಲದೇ, ರಾಜಕೀಯ ವಲಯದಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಜನರ ಹಾಗೂ ಪ್ರತಿಪಕ್ಷದ ಟೀಕೆಗೆ ಗುರಿ ಯಾಗಬಾರದು ಎನ್ನುವ ಕಾರಣಕ್ಕೆ ದರ ಏರಿಕೆ ಮಾಡದೇ, ಮುಂದು ವರಿದರೆ ಸರಕಾರಿ ಸಂಸ್ಥೆಗಳು ಬೀದಿಗೆ ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಹಾಗೆಂದು ಮಾಡಿದರೆ, ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಈ ಎರಡರ ನಡುವೆ ‘ಹಗ್ಗದ ಮೇಲಿನ ನಡಿಗೆ’ ಪ್ರತಿ ಸರಕಾರಗಳಿಗೂ ಅನಿವಾರ್ಯ ಎಂದರೆ ತಪ್ಪಾಗುವುದಿಲ್ಲ.
ದರ ಏರಿಕೆಯಿಂದಾಗಿ ಜನ ಜೀವನ ನಡೆಸುವುದು ಕಷ್ಟ ಎನ್ನುವುದು ಸ್ಪಷ್ಟ. ಆದರೆ ಸರಕಾರಕ್ಕೆ ಬರಬೇಕಿರುವ ವರಮಾನ ಹೆಚ್ಚಿಸಿಕೊಳ್ಳಬೇಕು ಎಂದರೆ ಬೆಲೆ ಏರಿಕೆಯಲ್ಲದೇ ಮತ್ತ್ಯಾವ ಮಾರ್ಗವೂ ಇಲ್ಲ. ಸಾರಿಗೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಅತ್ಯಗತ್ಯ ಕ್ಷೇತ್ರಗಳಲ್ಲಿ ಲಾಭದ ಉದ್ದೇಶವನ್ನು ಸರಕಾರಗಳು ಹೊಂದಿರಬಾರದು. ಸಾರ್ವಜನಿಕರಿಗೆ ಸೇವೆ ನೀಡುವ ಸಂಸ್ಥೆಗಳಿಂದ ಲಾಭವನ್ನು ನೋಡಬಾರದು ಎನ್ನುವುದು ಬಹುತೇಕರ ವಾದ. ಆದರೆ ಲಾಭಗಳಿಸದಿದ್ದರೂ, ನಷ್ಟವಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಸರಕಾರಗಳಿಗೆ ನಷ್ಟದಲ್ಲಿರುವ ಈ ಸಂಸ್ಥೆಗಳು ‘ಬಿಳಿಯಾನೆ’ ಆಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ಮತ್ತೊಂದು ವಾದ.
ಸದ್ಯ ಕರ್ನಾಟಕದಲ್ಲಿ ದರ ಏರಿಕೆಯ ಬಿಸಿ ತಟ್ಟಿರುವುದು ಸ್ಪಷ್ಟ. ವರಮಾನ ಹೆಚ್ಚಿಸಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರ ವಿವಿಧ ತೆರಿಗೆ, ಮದ್ಯದ ಮೇಲಿನ ತೆರಿಗೆ ಸೇರಿದಂತೆ ಲಭ್ಯ ವಿರುವ ತೆರಿಗೆಗಳನ್ನು ಹೆಚ್ಚಿಸಿದೆ. ಇದರೊಂದಿಗೆ ಹಾಲಿನ ದರ ಏರಿಕೆ ಮಾಡಿದ್ದ ರಾಜ್ಯ ಸರಕಾರ ಹೊಸ ವರ್ಷಕ್ಕೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಿಸಿ ಹೊಸ ಶಾಕ್ ನೀಡಿತ್ತು. ಇದೇ ರೀತಿ ಮುಂದಿನ ದಿನದಲ್ಲಿ ಜಲಮಂಡಳಿಯಿಂದ ಬೆಂಗಳೂರಿನಲ್ಲಿ ನೀರಿನ ದರ, ನಮ್ಮ ಮೆಟ್ರೋದಿಂದ ಟಿಕೆಟ್ ದರ, ಕೆಎಂಎಫ್‌ ನಿಂದ ಹಾಲಿನ ದರ, ಇಂಧನ ಇಲಾಖೆಯಿಂದ ವಿದ್ಯುತ್ ದರ ಹೀಗೆ ಸರಣಿ ದರ ಏರಿಕೆಯ ಪ್ರಸ್ತಾವಗಳು ಸರಕಾರದ ಮುಂದಿವೆ. ಸರಕಾರಿ ಬಸ್ ದರ ಏರಿಕೆ ಮಾಡಿರುವ ನಿರ್ಧಾರಕ್ಕೆ ಪರ-ವಿರೋಧ ಚರ್ಚೆಯ ನಡುವೆಯೇ, ದಿನಬಳಕೆಯ ಸೇವೆ ಹಾಗೂ ವಸ್ತುಗಳ ದರ ಏರಿಕೆ ಮಾಡಲು ಸರಕಾರ ಮುಂದಾದರೆ ಸಹಜವಾಗಿಯೇ ಸಾರ್ವಜನಿಕವಲಯದಲ್ಲಿ ವಿರೋಧ ವ್ಯಕ್ತವಾಗುತ್ತದೆ. ಹಾಗೆಂದು, ದರ ಪರಿಷ್ಕರಣೆ ಮಾಡದಿದ್ದರೆ ಸಂಸ್ಥೆಗಳೇ ಉಳಿಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ತಲುಪುತ್ತದೆ.
ಹೊಸವರ್ಷದ ಆರಂಭದಲ್ಲಿ ಕರ್ನಾಟಕದ 4 ಸಾರಿಗೆ ನಿಗಮಗಳ ಟಿಕೆಟ್ ದರವನ್ನು ಏರಿಸಿದ್ದು ಭಾರಿ ಚರ್ಚೆಗೆ ಗ್ರಾಸವಾಯಿತು. ಕಾಂಗ್ರೆಸ್ ನಾಯಕರು, ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಟಿಕೆಟ್ ದರ ಕಡಿಮೆಯಿದೆ ಎಂದು ಸಮರ್ಥಿಸಿಕೊಂಡರೆ, ‘ಗ್ಯಾರಂಟಿ’ಯೋಜನೆಯ ಕಾರಣಕ್ಕೆ ದರವನ್ನು ಏರಿಸಲಾಗುತ್ತಿದೆ ಎನ್ನುವ ಆರೋಪವನ್ನು ಬಿಜೆಪಿಗರು ಮಾಡಿದರು. ಪ್ರತಿಪಕ್ಷದಲ್ಲಿರುವ ಬಿಜೆಪಿ-ಜೆಡಿಎಸ್‌ನಿಂದ ಈ ರೀತಿಯ ಪ್ರತಿಕ್ರಿಯೆ ಸರ್ವೇ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಬೇಕಾಬಿಟ್ಟಿಯಾಗಿ ದರ ಏರಿಕೆ ಮಾಡುವುದನ್ನು ಒಪ್ಪುವುದಕ್ಕೂ ಸಾಧ್ಯವಿಲ್ಲ.
ಸಾರಿಗೆ ಇಲಾಖೆಯ ಅಥವಾ ಸರಕಾರದ ವಾದವನ್ನು ಗಮನಿಸಿದರೆ, ಬಸ್ ದರ ಏರಿಕೆ ‘ಅನಿವಾರ್ಯ’ವಾಗಿತ್ತು ಎನ್ನುವುದು ಸ್ಪಷ್ಟ. ಬಿಎಂಟಿಸಿ ಸಾರಿಗೆ ನಿಗಮದ ಬಸ್ ದರವನ್ನು ದಶಕದ ಹಿಂದೆ ಏರಿಸಿದ್ದರೆ, ಇತರೆ ನಿಗಮಗಳ ಪ್ರಯಾಣ ದರವನ್ನು ಐದು ವರ್ಷದ ಹಿಂದೆ ಏರಿಕೆಮಾಡಲಾಗಿತ್ತು. ಜನರ ಆಕ್ರೋಶಕ್ಕೆ ತುತ್ತಾಗುವ ಸಾಹಸಕ್ಕೆ ಕೈಹಾಕುವುದು ಬೇಡ ಎನ್ನುವ ಕಾರಣಕ್ಕೆ ಎಲ್ಲ ಸರಕಾರಗಳೂ, ಟಿಕೆಟ್ ದರ ಏರಿಕೆಯನ್ನು ಮುಂದಕ್ಕೆ ಹಾಕಿಕೊಂಡು ಬಂದ ಪರಿಣಾಮ, ಕರ್ನಾಟಕದ ಸಾರಿಗೆ ನಿಗಮಗಳ ಮೇಲಿನ ಒಟ್ಟು ಸಾಲ 5800 ಕೋಟಿ ರು.ಗಳನ್ನು ಮೀರಿಸುತ್ತಿದೆ.
ಹಾಗೆಂದ ಮಾತ್ರಕ್ಕೆ ದರ ಏರಿಕೆಯ ಬೆನ್ನಲ್ಲೇ, ಸಾರಿಗೆ ನಿಗಮಗಳ ಸಂಕಷ್ಟಗಳೆಲ್ಲ ನಿವಾರಣೆಯಾಗಿ, ಸಾಲ ಮುಕ್ತ ನಿಗಮಗಳೂ ಆಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವ ರೀತಿಯಲ್ಲಿದೆ. ಈ ದರ ಏರಿಕೆಯಿಂದ ನಿಗಮಗಳಿಗೆ ಸಹಾಯವಾಗುವುದಿಲ್ಲಎನ್ನುವುದು ಎಷ್ಟು ಸತ್ಯವೋ, ಸಾರ್ವಜನಿಕರಿಗೆ ಬಹುದೊಡ್ಡ ಹೊರೆ ಬೀಳಲಿದೆ ಎನ್ನುವುದು ಅಷ್ಟೇ ಸತ್ಯ. ಬಸ್ ದರ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸಿಗರದೊಂದು ವಾದವಿದೆ. ಅದೇನೆಂದರೆ, ಕೇಂದ್ರ ಸರಕಾರ ಡೀಸೆಲ್ ದರವನ್ನು ನಿರಂತರವಾಗಿ ಏರಿಸಿಕೊಂಡು ಬರುತ್ತಿರುವುದರಿಂದ ಇಂದು ನಾವು ದರ ಏರಿಸುವ ಅನಿವಾರ್ಯತೆಗೆ ಸಿಲುಕಿದ್ದೇವೆ. 2020ರಲ್ಲಿ 60 ರು. ಇದ್ದ ಡೀಸೆಲ್ ದರ ಈಗ 90 ರುಪಾಯಿ ಆಗಿದೆ. ಆದರೆ ಬಸ್‌ದರ ಆ ಪ್ರಮಾಣಕ್ಕೆ ಸರಿಯಾಗಿ ಆಗಿಲ್ಲ. ಆದ್ದರಿಂದ ಕಳೆದ ಐದು ವರ್ಷದ ಅವಧಿಯಲ್ಲಿ ಪ್ರತಿನಿತ್ಯ ನಾಲ್ಕು ನಿಗಮಗಳ ಮೇಲೆ ಡೀಸೆಲ್ ಗಾಗಿಯೇ ಸುಮಾರು ನಾಲ್ಕು ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ. ದರ ಏರಿಸಿರುವ ಕೇಂದ್ರ ಸರಕಾರ, ಕನಿಷ್ಠ ಸರಕಾರಿ ಸಾರಿಗೆ ಸಂಸ್ಥೆಗಳಿ ಗಾದರೂ ಕಡಿಮೆ ಬೆಲೆಗೆ ಡೀಸೆಲ್ ನೀಡಿದ್ದರೆ ನಾಲ್ಕು ಸಾರಿಗೆಗಳ ಮೇಲಿರುವ 5800 ಕೋಟಿ ರು.ಹೊರೆಯ ಸ್ಥಿತಿ ತಲುಪುತ್ತಿರಲಿಲ್ಲ ಎನ್ನುವುದಾಗಿದೆ.
ಕಾಂಗ್ರೆಸಿಗರ ಈ ವಾದವನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯಲ್ಲಿನ ಏರಿಳಿತದ ಆಧಾರದಲ್ಲಿ ಪೆಟ್ರೋಲ್-ಡೀಸೆಲ್ ದರ ನಿಗದಿಯಾಗಿರುತ್ತದೆ. ಒಂದು ವೇಳೆ ಸಾರಿಗೆ ಸಂಸ್ಥೆಗಳಿಗೆ ಕಡಿಮೆ ಮೊತ್ತಕ್ಕೆ ಡೀಸೆಲ್ ನೀಡಲು ಮುಂದಾದರೆ, ಅದುಮತ್ತೊಂದು ಅನುದಾನದ ಮೊತ್ತದಿಂದಲೇ ಭರಿಸಬೇಕು ಎನ್ನುವುದು ಸ್ಪಷ್ಟ.
ಇನ್ನು ದರ ಏರಿಕೆ ಎನ್ನುವುದು ಯಾವುದೇ ಒಂದು ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ನಡೆಯುವ ಪ್ರಕ್ರಿಯೆಯಲ್ಲ. ಆಯಾ ಸರಕಾರಗಳು, ಅಂದಿನ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೀರ್ಮಾನಗಳನ್ನು ಮಾಡುತ್ತವೆ. ಹಾಗೆ ನೋಡಿದರೆ, ಬಿಜೆಪಿಯ ಅವಧಿಯಲ್ಲಿ ಬಸ್ ಟಿಕೆಟ್ ಶುಲ್ಕ ವಿವಿಧ ಹಂತದಲ್ಲಿ ಶೇ.೪೮ರಷ್ಟು ಹೆಚ್ಚಾಗಿದೆ. ಒಂದು ವೇಳೆ ಈಗ ಮಾಡಿದ್ದು ತಪ್ಪು ಎನ್ನುವುದಾದರೆಆಗ ಬಿಜೆಪಿ ಸರಕಾರ ಕೈಗೊಂಡ ನಿರ್ಣಯವೂ ತಪ್ಪೇ ಅಲ್ಲವೇ? ಆದರೆ ಈ ತರ್ಕಬದ್ಧ ವಾದ ಮಾಡಲು ಯಾವ ಪಕ್ಷಗಳೂ ಸಿದ್ಧವಿರುವುದಿಲ್ಲ. ಈಗ ಬಸ್ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸಿಗರು, ಮುಂದೊಂದು ದಿನ ಪ್ರತಿಪಕ್ಷದಲ್ಲಿದ್ದಾಗ ದರ ಹೆಚ್ಚಿಸಿದರೆ ಅದನ್ನುಸ್ವಾಗತಿಸುವುದಿಲ್ಲ.
ಹಾಗೆ ನೋಡಿದರೆ, ಸರಕಾರದಿಂದ ನಡೆಯುತ್ತಿರುವ ಈ ಸಾರ್ವಜನಿಕ ಸಂಸ್ಥೆಗಳನ್ನು ಲಾಭಕ್ಕಾಗಿ ನಡೆಸಬಾರದು. ಆದರೆ ಸರಕಾರಕ್ಕೆ ಹೊರೆಯೂ ಆಗಬಾರದು. ದರ ಏರಿಕೆಯ ಬಿಸಿ ಯಾವುದೇ ಒಂದು ಸರಕಾರಕ್ಕೆ ಸೀಮಿತವಾಗಿಲ್ಲ. ಆದರೆ ದರ ಏರಿಕೆಗೊಂದು ಮಾರ್ಗಸೂಚಿ ಸಿದ್ಧವಾಗಬೇಕಿದೆ. ಇಲ್ಲದಿದ್ದರೆ ಪ್ರತಿಬಾರಿ ದರ ಏರಿಕೆಯ ಸಮಯದಲ್ಲಿ ಈ ರೀತಿಯ ಗೊಂದಲ, ಗದ್ದಲವಾಗುವುದು ನಿಶ್ಚಿತ. ಪ್ರತಿಬಾರಿ ದರ ಏರಿಕೆಯಾದಾಗಲೂ ಪ್ರತಿಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾ, ‘ಸರಕಾರ ಸಾರ್ವಜನಿಕರಿಗೆ ಬರೆ ಎಳೆಯುತ್ತಿದೆ’ ಎನ್ನುವ ಆರೋಪ ವನ್ನು ಮಾಡುವುದು ಸಹಜ. ಆದರೆ ಇಂಥ ಆರೋಪ ಮಾಡುವ ಬಹುತೇಕ ರಾಜಕಾರಣಿಗಳು, ದರ ಏರಿಕೆಯ ವಿಷಯವನ್ನು ಜನರ ಸಮಸ್ಯೆಯಾಗಿ ನೋಡದೇ, ರಾಜಕೀಯವಾಗಿ ಹೋರಾಡಲು ಸಿಗುವ ‘ಮತ್ತೊಂದು ಅಸ್ತ್ರ’ದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅನೇಕ ಸಮಯದಲ್ಲಿ ದರ ಏರಿಕೆ ಪ್ರಸ್ತಾವನೆಯನ್ನು ತಮ್ಮ ಸರಕಾರವಿದ್ದಾಗ ಮಾಡಿದ್ದನ್ನು ಸಮರ್ಥಿಸಿಕೊಳ್ಳುವ ನಾಯಕರು, ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತಿದ್ದಂತೆ ವಿರೋಧಿಸಲು ಶುರುಮಾಡುತ್ತಾರೆ.
ಸಾರ್ವಜನಿಕರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ವಿರೋಧಿಸಿದಕ್ಕಿಂತ ಹೆಚ್ಚಾಗಿ, ರಾಜಕೀಯವಾಗಿ ವಿರೋಧಿಸಬೇಕು ಎನ್ನುವ ಕಾರಣಕ್ಕೆ ವಿರೋಧಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ದರ ಏರಿಕೆ ಮಾಡುವುದಕ್ಕೆ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಂತಿಮವಾಗಿ ಮುಖ್ಯಮಂತ್ರಿಗಳೇ ದರ ಏರಿಕೆಯನ್ನು ತೀರ್ಮಾನಿಸಿದರೂ, ವಿವಿಧ ರೀತಿಯ ನಿರ್ಧಾರದಿಂದ ಹಲವು ಗೊಂದಲಗಳಾಗುತ್ತದೆ. ಇಂಧನ ಇಲಾಖೆಯಲ್ಲಿ ದರ ಏರಿಕೆ ಎನ್ನುವುದು ‘ಫಿಕ್ಸ್’ ಆಗಿದ್ದು ಪ್ರತಿವರ್ಷ ಇಂತಿಷ್ಟು ಹೆಚ್ಚಿಸಬೇಕು ಎನ್ನುವ ನಿಯಮಾ ವಳಿಯನ್ನೇ ರೂಪಿಸಲಾ ಗಿದೆ. ಆದ್ದರಿಂದ ವಿದ್ಯುತ್ ದರ ಏರಿಕೆ ಅಥವಾ ಇಳಿಕೆಯ ಸಮಯದಲ್ಲಿ ಹೆಚ್ಚು ಸದ್ದಾಗುವುದಿಲ್ಲ. ಇಂಧನಇಲಾಖೆ ಯಲ್ಲಿರುವ ಈ ನಿಯಮಾವಳಿಗಳನ್ನು ಇತರೆ ಇಲಾಖೆ, ನಿಗಮಗಳಿಗೆ ವಿಸ್ತರಣೆ ಮಾಡುವುದು ಸೂಕ್ತ. ಇದರಿಂದ ಒಂದೇ ಬಾರಿಗೆ ಶೇ.10ರಿಂದ 15ರಷ್ಟು ಏರಿಕೆಯಾಗುವ ಬದಲು ಹಂತ-ಹಂತವಾಗಿ ಏರಿಕೆಯಾಗುತ್ತದೆ. ಈ ರೀತಿ ಮಾಡುವುದರಿಂದ ಸಾರ್ವಜನಿಕರಿಗೂ ದರಏರಿಕೆಯ ಹೊರೆ ಒಟ್ಟಿಗೆ ಬೀಳುವುದಿಲ್ಲ. ಸರಕಾರಗಳು ದರ ಏರಿಸುವಾಗ ಎದುರಿಸುವ ‘ಟೀಕೆ-ಟಿಪ್ಪಣಿ’ಗಳಿಂದ ಪಾರಾಗಬಹುದು. ಈ ಹಂತದಲ್ಲಿ ಸರಕಾರಗಳು ದರ ಏರಿಕೆಗೆ ನಿರ್ದಿಷ್ಟ ಮಾನದಂಡ ರೂಪಿಸುವುದು ಇಂದಿನ ಅಗತ್ಯ.
ಇದನ್ನೂ ಓದಿ: Ranjith H Ashwath Column: ಪ್ರತಿಷ್ಠೆಯೇ ಈ ಉಪಸಮರದ ಮೂಲ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ