Ravi Hunj Column: ನಿರ್ಜನ ಸಿಂಧೂ ತೀರದಲ್ಲಿ ಮತ್ತೊಮ್ಮೆ ನಾಗರಿಕತೆಯ ಕಲರವ
‘ನೀಲಿ’ ಬಣ್ಣವು ಮೊಹೆಂಜೋದಾರೋದ ಪ್ರಮುಖ ವಾಣಿಜ್ಯ ಕೃಷಿ ಉತ್ಪನ್ನವಾಗಿದ್ದಿತು. ಇನ್ನು ‘ಕೆಂಪು’ ಕಲಾಯಿಯ ತಾಮ್ರದ ವಸ್ತುಗಳು ಕೂಡಾ ಹರಪ್ಪ ಮೊಹೆಂಜೋದಾರೋಗಳ ಮತ್ತೊಂದು ಪ್ರಮುಖ ವಾಣಿಜ್ಯ
Ashok Nayak
January 9, 2025
ಬಸವ ಮಂಟಪ
ರವಿ ಹಂಜ್
(ಭಾಗ-2)
ವಿಶಾಲ ಆಕಾಶದ ನೀಲಿ ಬಣ್ಣವು ಸೀಮಾತೀತ ಅನಂತತೆಯ, ಅನಿಕೇತನದ ಪ್ರತೀಕ. ಭೂಮಿಯ ಕೆಂಪು ಬಣ್ಣವು ವೈಭವ, ಸಂಪತ್ತಿನ ಪ್ರತೀಕ. ಅದೇ ರೀತಿ ಶ್ವೇತವರ್ಣವು ಶುಭ್ರತೆಯ ಪ್ರತೀಕ. ನೀಲಿಯು ಉದಾರತೆಯ ಉನ್ನತಿ ಯನ್ನು ಪ್ರತಿನಿಧಿಸಿದರೆ, ಕೆಂಪು ಬಣ್ಣವು ಠೀವಿ, ಘನತೆಯ ಶ್ರೀಮಂತಿಕೆಯನ್ನು ಪ್ರತಿನಿಧಿಸಿ, ಬಿಳಿಯ ಬಣ್ಣವು ಶಾಂತಿ ಮತ್ತು eನದ ಸಂಕೇತವೆನಿಸುತ್ತದೆ.
ಈ ಮೂರೂ ಬಣ್ಣಗಳು ಭಾರತದ ಇತಿಹಾಸವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ‘ಬಿಳಿಯ’ ಹತ್ತಿ ಯನ್ನು ಬೆಳೆದು ಅದರಿಂದ ವಸಗಳನ್ನು ತಯಾರಿಸುವ ಕಲೆಯನ್ನು ಸಿಂಧೂ ನಾಗರಿಕತೆಗೂ ಅದೆಷ್ಟೋ ವರ್ಷಗಳ ಮೊದಲೇ ಭಾರತೀಯರು ಕರಗತ ಮಾಡಿಕೊಂಡಿದ್ದರು. ‘ನೀಲಿ’ ಬಣ್ಣವು ಮೊಹೆಂಜೋದಾರೋದ ಪ್ರಮುಖ ವಾಣಿಜ್ಯ ಕೃಷಿ ಉತ್ಪನ್ನವಾಗಿದ್ದಿತು. ಇನ್ನು ‘ಕೆಂಪು’ ಕಲಾಯಿಯ ತಾಮ್ರದ ವಸ್ತುಗಳು ಕೂಡಾ ಹರಪ್ಪ ಮೊಹೆಂಜೋದಾರೋಗಳ ಮತ್ತೊಂದು ಪ್ರಮುಖ ವಾಣಿಜ್ಯ ಉತ್ಪನ್ನವಾಗಿ ಇತರೆ ನಾಗರಿಕತೆಗಳ ಸಂಪತ್ತು ಇತ್ತ ಹರಿದುಬರುವಂತೆ ಮಾಡಿದ್ದಿತು. ಈ ರೀತಿಯಾಗಿ ನೀಲಿ ಕೃಷಿಯನ್ನು, ಶ್ವೇತವರ್ಣ ವಾಣಿಜ್ಯವನ್ನು, ಮತ್ತು ಕೆಂಪು ವರ್ಣ ಕುಶಲಕರ್ಮಿತನವನ್ನು ಪ್ರತಿನಿಧಿಸುತ್ತಾ, ಈ ಮೂರು ಉತ್ಪಾದನಾ ಆಯಾಮಗಳು ಒಂದು ನಾಗರಿಕತೆಯ ಬೆಳವಣಿಗೆಗೆ ಎಷ್ಟೊಂದು ಅನಿವಾರ್ಯವೆಂದು ತೋರಿಸಿಕೊಡುತ್ತವೆ.
ಕ್ರಿ.ಪೂ. 26ನೇ ಶತಮಾನದ ಸಿಂಧೂ ನದಿ ನಾಗರಿಕತೆಯು, ವ್ಯಾಪಾರಿ-ಗ್ರಾಹಕ, ಉತ್ಪಾದಕ-ಬಳಕೆದಾರ, ಕಲಾವಿದ-ಕಲೋಪಾಸಕರ ಸಂತೆಗಳ ಮತ್ತು ಆ ಸಂತೆಗಳಿಗೆ ಬೇಕಾದ ಪೂರಕ ತಂತ್ರಜ್ಞಾನದ ‘ಬಂಡವಾಳಶಾಹಿ’ ತತ್ವಗಳ ಬುನಾದಿಯ ಮೇಲೆ ಸೃಷ್ಟಿಯಾದ ನಾಗರಿಕತೆ!
ಕ್ರಿ.ಶ. ೨೦ನೇ ಶತಮಾನದ ಇಂದಿನ ಭಾರತದ ಬಜಾರು, ಮಾರುಕಟ್ಟೆಯ ಚಿಕ್ಕ ಚಿಕ್ಕ ಮಳಿಗೆಗಳ ವಿನ್ಯಾಸಕ್ಕೆ ನಮ್ಮ ನಾಗರಿಕತೆ ಅಂದೇ ಬುನಾದಿಯನ್ನು ಹಾಕಿದ್ದಿತು ಎಂದು ಅಲ್ಲಿನ ಪಳೆಯುಳಿಕೆಗಳ ಸಂಶೋಧನೆಯಿಂದ ತಿಳಿದು ಬರುತ್ತದೆ. ಇದು ತನ್ನ ಸೋದರ ನಾಗರಿಕತೆಗಳಾದ ಮೆಸಪಟೋಮಿಯಾ, ಪರ್ಷಿಯಾ ಮತ್ತು ಈಜಿಗಳಿಗಿಂತ ಉನ್ನತವಾಗಿದ್ದಿತು. ಅದಲ್ಲದೇ ಈ ಮೂರೂ ನಾಗರಿಕತೆಗಳೊಡನೆ ವ್ಯವಹಾರ ಸಂಬಂಧವನ್ನಿರಿಸಿಕೊಂಡಿತ್ತು. ಪ್ರಮುಖವಾಗಿ ಹತ್ತಿ ಬಟ್ಟೆಗಳು, ನೀಲಿ ವರ್ಣ, ಕಲಾಯಿಯ ತಾಮ್ರದ ವಸ್ತುಗಳಲ್ಲದೆ ಮೀನು ಮುಂತಾದ ಆಹಾರ ಪದಾರ್ಥಗಳನ್ನು ಕೂಡಾ ಸಿಂಧೂ ನಾಗರಿಕತೆ ಈ ಸೋದರ ನಾಗರಿಕತೆಗಳಿಗೆ ಪೂರೈಸುತ್ತಿತ್ತೆಂದು ತಿಳಿದುಬರುತ್ತದೆ.
ಪ್ರಮುಖವಾಗಿ ಆ ಇತರೆ ನಾಗರಿಕತೆಗಳಲ್ಲಿ ಕಲ್ಲಿನ/ ಇಟ್ಟಿಗೆಯ ರಾಜ ಪರಿವಾರದ ಸಮಾಧಿಗಳು, ಪೂಜಾಮಂದಿರಗಳು, ವೈಭೋಗದ ಸ್ನಾನಗೃಹಗಳು ವಿಶೇಷವಾಗಿ ಉಳ್ಳವರಿಗಿದ್ದರೆ, ಮಣ್ಣಿನ ಕಟ್ಟಡ ಸಾಮಾನ್ಯರದಾಗಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಹರಪ್ಪ ಮೊಹೆಂಜೋದಾರೋದ ಪಳೆಯುಳಿಕೆಗಳು, ಜನಸಾಮಾನ್ಯರ ಕಟ್ಟಡಗಳು ಕೂಡಾ ಬೇಯಿಸಿದ ಇಟ್ಟಿಗೆ/ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದವೆಂದು ತಿಳಿಸುತ್ತವೆ. ಅಂದರೆ ಯಾವುದೇ ತಾರತಮ್ಯಗಳಿಲ್ಲದ ಸಮಾನತೆಯ ಸಧೃಢ ಸಮಾಜ ನಿರ್ಮಾಣವಾಗಿತ್ತೆಂದು ತಿಳಿದುಬರುತ್ತದೆ.
ನಾಗರಿಕತೆ ಎಂದೊಡನೆ ಧರ್ಮ, ಧರ್ಮಾಚರಣೆಯ ಪ್ರಶ್ನೆಗಳು ಅತ್ಯವಶ್ಯವೆನ್ನಿಸುವಷ್ಟು ಪ್ರಾಥಮಿಕವಾಗಿ ಮತ್ತು ಪ್ರಮುಖವಾಗಿ ಮೂಡಿಬಿಡುತ್ತವೆ. ಹಾಗಾಗಿ ನಾಗರಿಕತೆಯ ಇತರೆ ವಿಷಯಗಳ ಕುರಿತು ಗಮನ ಹರಿಸದೆ ಈ ವಿಷಯ ವಾಗಿ ಗಮನ ಹರಿಸೋಣ. ಏಕೆಂದರೆ ಧರ್ಮದ ಹೊರತಾಗಿ ಇತರೆ ಆಯಾಮಗಳ ಬಗ್ಗೆ ಆಗಲೇ ಸಾಕಷ್ಟು ತಿಳಿದಿದೆ. ಇನ್ನು ಸಿಂಧೂ ನಾಗರಿಕತೆ ವ್ಯಕ್ತಿರೂಪದ ಕಲಾಕೃತಿಗಳನ್ನು ಹೊಂದಿದ್ದರೆ, ಇತರೆ ನಾಗರಿಕತೆಗಳು ನಾಯಿ, ಹೋರಿ ಮುಂತಾದ ಪ್ರಾಣಿಗಳ ಕಲಾಕೃತಿಗಳನ್ನು ಹೊಂದಿದ್ದವು. ಇಲ್ಲಿ ದೊರೆತ ಕಲಾಕೃತಿಗಳ ಪಳೆಯುಳಿಕೆಗಳು, ಅಂದಿನ ಧಾರ್ಮಿಕತೆಯ ಕುರಿತಾದ ಕಲಾಕೃತಿಗಳೆಂಬ (ಮೊಹೆಂಜೋದಾರೋದಲ್ಲಿ ಸಿಕ್ಕಿರುವ ನರ್ತಿಸುತ್ತಿರುವ ಬಾಲಕಿ, ಯಾ ಪುರೋಹಿತ ರಾಜನೆನ್ನುವ ಮೋದಿಯಂತಿರುವ ಮಾನವಮೂರ್ತಿ ಮತ್ತಿತರೆ) ವಾದವಿದೆ.
ಧಾರ್ಮಿಕ ಎಂದೊಡನೆಯೇ ಅದು ಹಿಂದೂ ಧರ್ಮವೇ ಎಂಬ ಪ್ರಶ್ನೆ ಧುತ್ತನೆದ್ದು ಆ ಪಳೆಯುಳಿಕೆಗಳನ್ನು ಇಂದಿನ ಹಿಂದೂ ದೇವತೆಗಳಿಗೆ ಹೋಲಿಸುವ ಪ್ರಯತ್ನಗಳನ್ನೂ ಕೂಡಾ ಮಾಡಿಬಿಡುತ್ತೇವೆ. ಆದರೆ ಈ ಪಳೆಯುಳಿಕೆಗಳು ಯಾವುದೇ ಹಿಂದೂ ದೇವಾನುದೇವತೆಗಳಿಗೆ ಹೋಲಿಕೆಯಾಗುವುದಿಲ್ಲ. ಆದಿಮಾನವ ಹೇಗೆ ಗುಹೆಗಳ ಗೋಡೆಗಳ ಮೇಲೆ ತನ್ನ ದಿನನಿತ್ಯದ ವ್ಯವಹಾರಗಳನ್ನು ರೇಖಾಚಿತ್ರಗಳಾಗಿ ಬರೆದಿದ್ದನೋ ಅದೇ ರೀತಿ ಸಿಂಧೂ ನಾಗರಿಕ ಕೂಡಾ ಅಂದಿನ ಸಾಮಾನ್ಯ ಜನಜೀವನದ ಚಿತ್ರಣಗಳನ್ನು ಈ ರೀತಿಯ ಪ್ರತಿಕೃತಿಗಳಾಗಿಸಿದ್ದನು.
ಹಾಗಿದ್ದರೆ ಅಂದು ಧರ್ಮವಿರಲಿಲ್ಲವೇ? ಇದ್ದರೆ ಅದು ಹಿಂದೂ ಧರ್ಮವೇ? : ಧರ್ಮವಿದ್ದ ಬಗ್ಗೆ ಯಾವುದೇ ಖಚಿತ ಮಾಹಿತಿ ಈವರೆಗೂ ಸಿಕ್ಕಿಲ್ಲ ಮತ್ತು ಸಂಶೋಧನೆಗಳು ಖಚಿತ ಪಡಿಸಿಲ್ಲ. ಹಾಗಾಗಿ ಅದು ಹಿಂದೂಧರ್ಮವೇ ಎಂಬ ಪ್ರಶ್ನೆ ಕೂಡಾ ಅನುಚಿತವಾಗಿಬಿಡುತ್ತದೆ. ಆದರೆ ಮಳೆಗಾಲಗಳಲ್ಲಿ ಸರ್ಪಗಳು ಮನೆಗಳಿಗೆ ನುಗ್ಗುತ್ತಿದ್ದುದರಿಂದ ಈ ಜನಗಳು ಎತ್ತರದ ಮಂಚಗಳ ಮೇಲೆ ಮಲಗುತ್ತ ಅಥವಾ ನೆಲದಿಂದ ಒಂದಷ್ಟು ಎತ್ತರಕ್ಕೆ ನಿರ್ಮಿಸಿದ ತಾತ್ಕಾಲಿಕ ಮಹಡಿಯ ವಸತಿಗಳಿಗೆ ಹೋಗುತ್ತಿದ್ದರೆಂದು ಇತಿಹಾಸಕಾರರು ತಿಳಿಸಿದ್ದಾರೆ.
ಶ್ರಾವಣದ ಕೊನೆಯ ಹುಣ್ಣಿಮೆಯೆಂದು ಬಲಿ ಕೊಟ್ಟು ಪುನಃ ನೆಲದ ಮೇಲೆ ಮಲಗುತ್ತಿದ್ದರೆಂದು ತಿಳಿದು ಬರುತ್ತದೆ. ಇದು ಕೇವಲ ಮಳೆಗಾಲದ ಒಂದು ವಾಡಿಕೆಯ ಕ್ರಮವಾಗಿತ್ತೇ ಹೊರತು ಯಾವುದೇ ಧಾರ್ಮಿಕ ಕಾರ್ಯವಾಗಿರ ಲಿಲ್ಲ. ಸೋಜಿಗದ ವಿಷಯವೆಂದರೆ ಈ ರೀತಿಯ ವಾಡಿಕೆ ಕ್ರಮ ಇಂದಿಗೂ ಶ್ರಾವಣಮಾಸದಲ್ಲಿ ಹಾವಿಗೆ ಹಾಲೆರೆ ಯುವ ಕ್ರಿಯೆಯಾಗಿ ಮುಂದುವರಿ ದುಕೊಂಡು ಬಂದಿರುವುದು!
ಆದರೆ ಇಂದಿನ ಶ್ರಾವಣ ಮಾಸದ ಆಚರಣೆಗೆ ಸಾಕಷ್ಟು ಕಥೆಗಳು, ಉಪಕಥೆಗಳು, ವೈಚಾರಿಕತೆಯ ಪ್ರತಿರೋಧಗಳು ಹುಟ್ಟಿಕೊಂಡಿವೆ. ಹಾವಿಗೆ ಹಾಲೆರೆಯುವ ಸನಾತನವೆನ್ನುವ ಧಾರ್ಮಿಕತೆಗೆ ವಿನೂತನ ಪ್ರತಿರೋಧವಾಗಿ ಮಕ್ಕಳಿಗೆ ಹಾಲು ಕುಡಿಸುವ ಇಂದಿನ ಪರಿಯನ್ನು ನೋಡಿ ಸಿಂಧೂ ನಾಗರಿಕ ಏನು ಹೇಳುತ್ತಿದ್ದನೋ! ಪಂಡಿತ್ ಜವಾಹರ ಲಾಲ್ ನೆಹರು ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಯಲ್ಲಿ ಹರಪ್ಪ ಮೊಹೆಂಜೋದಾರೋದ ನಾಗರಿಕತೆಗಳಲ್ಲಿ ಭಾರತಾಂಬೆ ಬಾಲೆಯಂತೆ ಕಾಣದೆ ಯುವಕನ್ಯೆಯಂತೆ ಪ್ರಬುದ್ಧಳಾಗಿ ಕಾಣುತ್ತಾಳೆ ಎಂದಿದ್ದಾರೆ.
ಸಿಂಧೂ ನಾಗರಿಕತೆಯ ಬಜಾರ್ ರೀತಿಯ ಮಾರುಕಟ್ಟೆಗಳು, ಅಂದಿನ ವಸವಿನ್ಯಾಸ, ಕರಕುಶಲತೆ, ಜೀವನಪದ್ಧತಿ ಗಳನ್ನು ಸಾವಿರಾರು ವರ್ಷಗಳ ನಂತರ ಕೂಡಾ ಇಂದಿನ ಭಾರತದಲ್ಲಿ ಜ್ವಲಂತವಾಗಿ ಕಾಣಬಹುದಾಗಿದೆ ಎನ್ನು ತ್ತಾರೆ. ಇಂಥ ಬುದ್ಧಿಮತ್ತೆ, ಕೌಶಲವನ್ನು ಹೊಂದಿದ್ದ ನಾಗರಿಕತೆ ಯಾವುದೇ ಧರ್ಮವನ್ನು ಹೊಂದಿರಲಿಲ್ಲ. ಅಂದು ಸಿಂಧೂ ಯಾ ಹಿಂದೂ ಎಂದರೆ ಧರ್ಮವಿಲ್ಲದವರು ಎಂದರ್ಥ! ಹಾಗಾಗಿಯೇ ಹಿಂದೂ ಎಂಬುದು ಒಂದು ಸಂಸ್ಕೃತಿಯೆನಿಸುವುದು. ಅಂದು ಪ್ರಕೃತಿಯಾಧಾರಿತ ಕೆಲ ಸಾಂಸ್ಕೃತಿಕ ಆಚರಣೆಗಳಿದ್ದವೇ ಹೊರತು ಯಾವುದೇ ಧರ್ಮವಾಗಲಿ ಅಥವಾ ಧರ್ಮಾಚರಣೆಗಳಾಗಲಿ ಇರಲಿಲ್ಲ ಎನ್ನಲಾಗುತ್ತದೆ. ಆದರೆ ಇಲ್ಲಿನ ಉತ್ಖನನದಲ್ಲಿ ಸಿಕ್ಕ ಶಿವಲಿಂಗಗಳು ಇಲ್ಲಿನ ಮೂಲ ಸಂಸ್ಕೃತಿಯನ್ನು ಶೈವ ಸಂಸ್ಕೃತಿ ಎಂದು ಸಾಬೀತುಪಡಿಸಿವೆ. ಶಿವಲಿಂಗದ ಪಳೆಯುಳಿಕೆಗಳ ವಿನಾ ಮತ್ತೇನೂ ಸಿಗದ ಕಾರಣ ಧರ್ಮವಿರಲಿಲ್ಲ ಎನ್ನಲಾಗಿದೆ ಎಂದು ಊಹಿಸಬಹುದು.
ಮುಖ್ಯವಾಗಿ ಸಿಂಧೂ ನಾಗರಿಕತೆಯನ್ನೂ ಒಳಗೊಂಡಂತೆ ಅಂದಿನ ಎಲ್ಲಾ ನಾಗರಿಕತೆಗಳ ಭದ್ರ ಬುನಾದಿ ಕೃಷಿ,ವಾಣಿಜ್ಯೋದ್ಯಮ, ಮತ್ತು ಕುಶಲಕಲೆಗಾರಿಕೆ. ಸರಳವಾಗಿ ಹೇಳುವುದಾದರೆ ಬಂಡವಾಳಶಾಹಿತ್ವದ ವಾಣಿಜ್ಯೋ ದ್ಯಮ! ಯಾವುದೇ ನಾಗರಿಕತೆ ಬೆಳೆಯುವುದು ವ್ಯಾಪಾರೀಕರಣದಿಂದ ಎಂಬ ಪ್ರಾಥಮಿಕ ಅಂಶವನ್ನು ಈ ಎಲ್ಲಾ ನಾಗರಿಕತೆಗಳು ನಿರೂಪಿಸಿವೆ.
ಕ್ರಿ.ಪೂ. ಇತಿಹಾಸದಿಂದ 21ನೇ ಶತಮಾನದವರೆಗೆ ಸಾಕಷ್ಟು ವ್ಯವಸ್ಥೆಗಳು ಆಗಿ ಹೋದರೂ ಬಂಡವಾಳಶಾಹಿತ್ವ ಮಾತ್ರ ಉಜ್ವಲವಾಗಿದೆ. ಏಕೆಂದರೆ ಮಾನವ ಸಂಘಜೀವಿ. ಪರಸ್ಪರ ಕೊಡು-ಕೊಳ್ಳುವಿಕೆಯೇ ಮಾನವ ಜೀವ ವಿಕಾಸಕ್ಕೆ ಪೂರಕ. ಆ ಕೊಡು-ಕೊಳ್ಳುವಿಕೆಯ ಕಾರಣದಿಂದಲೇ ವಸ್ತುವಿನಿಮಯ ಪದ್ಧತಿ ಜಾರಿಗೆ ಬಂದು ಮುಂದೆ ಹಣವಿನಿಮಯ ಪದ್ಧತಿಯಾಗಿ ವಿಕಾಸ ಹೊಂದಿತು. ಹೀಗೆ ವಿಕಾಸವಾಗಿದ್ದ ಸಿಂಧೂ ನಾಗರಿಕತೆ ದುರದೃಷ್ಟವಶಾತ್ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿ ನಾಶವಾಯಿತು. ಸಿಂಧೂ ನದಿಯ ಪ್ರವಾಹಗಳಲ್ಲಿ ಪದೇಪದೆ ಸಿಲುಕಿ ಕೊಚ್ಚಿ ಹೋಯಿತು.
ಕ್ರಿ.ಪೂ.19ನೇ ಶತಮಾನದ ಹೊತ್ತಿಗೆ ಈ ನಳನಳಿಸುತ್ತಿದ್ದ ನಾಗರಿಕತೆ ನಿರ್ಜನ ಮರುಭೂಮಿಯಾಗಿ ಕಾಲಗರ್ಭದಲ್ಲಿ ಹೂತುಹೋಯಿತು. ಶತಶತಮಾನಗಳವರೆಗೆ ಹೂತುಹೋಗಿದ್ದ ಈ ನಾಗರಿಕತೆ ಮತ್ತೆ ಬೆಳಕನ್ನು ಕಂಡಿದ್ದುದು ಕ್ರಿ.ಶ.1920ರ ಬ್ರಿಟಿಷ್ ಭಾರತದಲ್ಲಿ! ಮಾನವನ ಯಾವುದೇ ವ್ಯವಸ್ಥೆಗಳೂ ಪ್ರಕೃತಿಯ ಮುಂದೆ ಗೌಣವೆಂಬುದಕ್ಕೆ ಸಾಕ್ಷಿ ಕೂಡಾ ಸಿಂಧೂ ನದಿ ನಾಗರಿಕತೆ! ಸಿಂಧೂ ನಾಗರಿಕತೆ ಕೊಚ್ಚಿ ಹೋದ ನಂತರ ಅಲ್ಲಿನ ಜನಾಂಗ ಮುಂದೆ ಒಳನಾಡಿನತ್ತ ಸಾಗುತ್ತ ಗಂಗಾತೀರದಲ್ಲಿ ಮತ್ತೊಮ್ಮೆ ನಾಗರಿಕತೆಯ ತೊಟ್ಟಿಲನ್ನು ಕಟ್ಟಿತೆಂಬ ವಾದಗಳಿವೆ. ಇದು ಸತ್ಯವಿದ್ದರೂ ಇರಬಹುದು. ಏಕೆಂದರೆ ಅಂದಿದ್ದ ಸರ್ಪಾರಾಧನೆ ಇಂದಿಗೂ ಇದೆಯೆಂದರೆ ಆ ನಾಗರಿಕತೆ ಸಂಪೂರ್ಣವಾಗಿ ಹೂತುಹೋಗದೇ ಗಂಗಾ ತೀರದ ಮತ್ತೆ ಬೀಡುಬಿಟ್ಟಿರಬಹುದು. ಅದನ್ನೇ ಇತ್ತೀಚಿನ ರಾಖಿಗಡಿ ಉತ್ಖನನ ಪುರಸ್ಕರಿಸುತ್ತದೆ. ಆದರೆ ಸಿಂಧೂ ನಾಗರಿಕತೆಯ ನಂತರ ಆರ್ಯರ ಆಗಮನದವರೆಗೆ ಅಂಥ ಗಹನವಾದ ಚಾರಿತ್ರಿಕ ಇತಿಹಾಸದ ಸುಳಿವು ಸಿಕ್ಕಿಲ್ಲ.
ಸಿಂಧೂ ನಾಗರಿಕತೆಯ ನಂತರದ ಸಾವಿರ ವರ್ಷಗಳವರೆಗೆ ಭಾರತ ತನ್ನಲ್ಲಿ ಮುಂದಾಗಬಹುದಾದ ಮಹತ್ತರ ಮಾನವ ವಿಕಾಸ, ಜನಾಂಗೀಯ ಸಂಶ್ಲೇಷಣೆ, ಧರ್ಮೋದಯ, ಸಂಸ್ಕೃತಿಗಳ ಸಮ್ಮಿಲನಗಳ ಸಂಕ್ರಮಣಕ್ಕೂ, ಆ ನಂತರದ ಸಂಸ್ಕೃತಿಗಳ ಕಲಹ, ಜನಾಂಗೀಯ ದಾಯಾದಿ ಕಲಹಗಳಿಗೂ ಮತ್ತು ಶಾಂತಿಮಂತ್ರ ಪಠಿಸುವ ಧರ್ಮಭೀರುಗಳು ಪರಸ್ಪರ ಈರ್ಷ್ಯೆಗೆ ತುತ್ತಾಗುವ ಕ್ರಾಂತಿಗಳಿಗೂ ಧ್ಯಾನಿಸುತ್ತ ಆರ್ಯರ ಆಗಮನಕ್ಕಾಗಿ ಕುಳಿತಂತೆ ಕಾಣುತ್ತದೆ. ಕ್ರಿ.ಪೂ. ೧೭ನೇ ಶತಮಾನದಿಂದ ನಿಧಾನವಾಗಿ ಆರಂಭಗೊಂಡ ಆರ್ಯರ ವಲಸೆ ಮುಂದೆ ತೀವ್ರ ಗೊಂಡು ಇತಿಹಾಸದಲ್ಲಿಯೇ ಆ ಕಾಲದ ಅತ್ಯಂತ ಬಹುದೊಡ್ಡ ಮಾನವ ವಲಸೆ ಎಂದು ಖ್ಯಾತವಾಯಿತು.
ಆರ್ಯರು ಕ್ರಮವಾಗಿ ಸ್ವಾತ ಕಣಿವೆ, ಗಾಂಧಾರ, ಪಂಜಾಬ್ ಪ್ರಾಂತ್ಯಗಳಲ್ಲಿ ನೆಲೆಸುತ್ತಾ ಸ್ಥಳೀಯರೊಂದಿಗೆ ಬೆರೆಯುತ್ತ ಕ್ರಮೇಣ ಒಳಪ್ರಾಂತ್ಯಗಳಲ್ಲಿ ಬೀಡುಬಿಟ್ಟರು. ನಿರ್ಜನವಾಗಿದ್ದ ಸಿಂಧೂ ತೀರದಲ್ಲಿ ಮತ್ತೊಮ್ಮೆ ನಾಗರಿಕತೆಯ ಕಲರವವೆದ್ದಿತು. ಅಮೆರಿಕ ನವ್ಯಕಾಲದ ವಲಸಿಗರ ರಾಷ್ಟ್ರವಾದರೆ, ಭಾರತದ ನಾಗರಿಕತೆಯ ಆರಂಭವೇ ವಲಸೆಗಾರರಿಂದಾಗಿದೆ.
(ಲೇಖಕರು ಶಿಕಾಗೋ ನಿವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunz Column: ವಚನ ಚಳವಳಿಯ ಕೆಂಪೀಕರಣ