ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಚಿಂತನೆಯನ್ನು ಟ್ರಿಮ್‌ ಮಾಡುವ ರೇಜರ್‌ʼಗಳು

ನಾವು ಸನ್ನಿವೇಶವನ್ನು ನೋಡುವ ಬಗೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡರೆ- ಬದುಕು ಹೆಚ್ಚು ಹಿತಕರ ಆಗಿರುತ್ತೆ ಅಂತ ಹಿಂದಿನ ಕೆಲವು ಫಿಲಾಸಫರ್‌ಗಳು ಹೇಳಿದ್ದಾರೆ. ಮುಖ ದಲ್ಲಿರುವ ಗಡ್ಡವನ್ನು ರೇಜರ್ʼ ನಿಂದ ಹೆರೆದು ತೆಗೆದರೆ ಮುಖ ಹೊಳೆಯುತ್ತದೆ. ಅನಗತ್ಯ ಗಡ್ಡ ಮೀಸೆಗಳನ್ನು ತೆಗೆದು ಹಾಕುವುದೂ ಬದುಕಿನ ಅನಗತ್ಯ ಸಂಗತಿಗಳನ್ನು ಅಳಿಸಿ ಹಾಕುವುದೂ ಒಂದೇ ಎಂಬ ಫಿಲಾಸಫಿಯೊಂದಿಗೆ ಈ ಚಿಂತಕರು ನೀಡಿರುವ ಕೆಲವು ಸೂತ್ರಗಳನ್ನು ‘ಫಿಲಾಸಫಿಕಲ್ ರೇಜರ್ಸ್’ ಎಂದು ಕರೆದಿದ್ದಾರೆ.

ಕಾಡುದಾರಿ

ಮಾಗಿಯ ಹವೆಗೆ ಆಕಾಶ ಬಿಳುಚಿಕೊಂಡಿದೆ. ಗಿಡಮರಗಳಲ್ಲಿ ಹೇಮಂತಗಾನ. ಈ ವರ್ಷ ನಮ್ಮ ಹೊದಿಕೆಗಳನ್ನೆಲ್ಲ ಹೊರಗೆ ತರಿಸಿರುವ ಚಳಿಯ ಆವುಟ ನೋಡುತ್ತ ಎದುರು ಒಂದು ಹಬೆಯಾಡುವ ಕಾಫಿ ಕಪ್ ಇಟ್ಟುಕೊಂಡರೆ ಇನ್ನೇನೂ ಬೇಕಿಲ್ಲ ಅನ್ನಿಸುತ್ತದೆ. ಡಿಸೆಂಬರ್ ಮುಗಿಯುತ್ತ ಬರುತ್ತಿದೆ, ಇನ್ನೆರಡು ವಾರದಲ್ಲಿ ದಿನದರ್ಶಿಕೆಯ ಕೊನೆಯ ಎಲೆ ಕಳಚಿ ಬೀಳಲಿದೆ.

ಗೋಡೆಗೆ ಹೊಸ ಕ್ಯಾಲೆಂಡರ್ ನೇತು ಬೀಳುವ ಹೊತ್ತಿಗೆ ಸಂದದ್ದೆಷ್ಟು ಬಂದದ್ದೆಷ್ಟು ಎಂದು ಲೆಕ್ಕ ಹಾಕುವ ಚಪಲ. ಹೊಸ ವರ್ಷದ ನಿರ್ಣಯಗಳ ಬಗ್ಗೆ ಸಿನಿಕತೆ ಬೇಕಿಲ್ಲ. ನಿರ್ಣಯ ಗಳಿಗಿಂತ ಅವುಗಳನ್ನು ಪಾಲಿಸುವ ಪಾಲಿಸಿ ಮುಖ್ಯ ಅಂತ ನಮಗೆ ಎಷ್ಟು ಜನ ವ್ಯಕ್ತಿತ್ವ ವಿಕಸನ ಭಾಷಣಕಾರರು ಹೇಳಿಲ್ಲ.

ನಿರ್ಣಯಗಳು ಯಾಕೆ ಮುಖ್ಯ ಅಂತಲೂ, ಅವುಗಳನ್ನು ಉಳಿಸಿಕೊಳ್ಳೋದು ಹೇಗೆ ಅಂತಲೂ ಹೇಳಿಕೊಡೋ ಟ್ಯುಟೋರಿಯಲ್‌ಗಳು ನಿಮಗೆ ದಂಡಿಯಾಗಿ ಸಿಗಬಹುದು. ನಾನೀಗ ಹೇಳಹೊರಟದ್ದು ಅದಲ್ಲ. ನಮ್ಮ ಬದುಕು ಸರಳವಾಗಿರುತ್ತದೆ. ಕೆಲವೊಮ್ಮೆ ನಾವೇ ಅದನ್ನು ಜಟಿಲ ಮಾಡಿಕೊಳ್ಳುತ್ತೇವೆ.

ನಾವು ಸನ್ನಿವೇಶವನ್ನು ನೋಡುವ ಬಗೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡರೆ- ಬದುಕು ಹೆಚ್ಚು ಹಿತಕರ ಆಗಿರುತ್ತೆ ಅಂತ ಹಿಂದಿನ ಕೆಲವು ಫಿಲಾಸಫರ್‌ಗಳು ಹೇಳಿದ್ದಾರೆ. ಮುಖ ದಲ್ಲಿರುವ ಗಡ್ಡವನ್ನು ರೇಜರ್ʼ ನಿಂದ ಹೆರೆದು ತೆಗೆದರೆ ಮುಖ ಹೊಳೆಯುತ್ತದೆ. ಅನಗತ್ಯ ಗಡ್ಡ ಮೀಸೆಗಳನ್ನು ತೆಗೆದು ಹಾಕುವುದೂ ಬದುಕಿನ ಅನಗತ್ಯ ಸಂಗತಿಗಳನ್ನು ಅಳಿಸಿ ಹಾಕುವುದೂ ಒಂದೇ ಎಂಬ ಫಿಲಾಸಫಿಯೊಂದಿಗೆ ಈ ಚಿಂತಕರು ನೀಡಿರುವ ಕೆಲವು ಸೂತ್ರಗಳನ್ನು ‘ಫಿಲಾಸಫಿಕಲ್ ರೇಜರ್ಸ್’ ಎಂದು ಕರೆದಿದ್ದಾರೆ. ಹೊಸ ವರ್ಷದ ಹೊಸ್ತಿ ಲಲ್ಲಿ, ನಮ್ಮ ಜೀವನ ಸುರಳೀತಗೊಳಿಸುವ ಅಂಥ ಕೆಲವು ರೇಜರ್‌ಗಳನ್ನು ಗಮನಿಸೋಣ.

ಇದನ್ನೂ ಓದಿ: Harish Kera Column: ಸಮಸ್ಯೆ ಇದೆ ಎಂದರೂ ಪರಿಹಾರ ಬೇಕಿಲ್ಲ !

  1. ಒಕ್ಕಾಮ್‌ನ ರೇಜರ್ (Occam's Razor): ನಿಮ್ಮ ಕಚೇರಿಯಲ್ಲಿ ನೀವು ನೀಡಬೇಕಾ ಗಿರುವ ಪ್ರೆಸೆಂಟೇಶನ್‌ಗೆ ಕೊನೆಯ ಕ್ಷಣದಲ್ಲಿ ಯಾವುದೋ ಗ್ಲಿಚ್. ಆತಂಕ ಆವರಿಸು ತ್ತದೆ. ನನ್ನನ್ನು ದ್ವೇಷಿಸುವ ಯಾರೋ ಈ ಕಚೇರಿಯಲ್ಲಿದ್ದಾರೆ. ನನ್ನ ಪ್ರೆಸೆಂಟೇಶನ್‌ಗೂ ಕೆಲಸಕ್ಕೂ ಬಡ್ತಿಗೂ ಸಂಚಕಾರ ತರಲು ಯತ್ನಿಸುತ್ತಿದ್ದಾರೆ ಎಂದೆಲ್ಲ ಅಂದುಕೊಳ್ಳು ತ್ತೀರಿ. ಆದರೆ ಅದನ್ನು ಸಾಬೀತುಪಡಿಸುವ ಸಾಕ್ಷ್ಯಗಳು ಯಾವುದೂ ನಿಮ್ಮಲ್ಲಿ ಇಲ್ಲ.

ಸರಳವಾದ ಸಾಧ್ಯತೆ ಏನು? ಬಹುಶಃ ನೀವೇ ಪಿಪಿಟಿ ತಯಾರಿಸಿ ಕೊನೆಯ ಕ್ಷಣದಲ್ಲಿ ಸೂಕ್ತ ಫಾರ್ಮ್ಯಾಟ್‌ಗೆ ಕೂರಿಸಲು ಮರೆತಿರಬಹುದು, ಬೇರೆ ಯಾವುದೋ ತಾಂತ್ರಿಕ ಸಮಸ್ಯೆ ಆಗಿರಬಹುದು. ಈ ರೇಜರ್ ಹೇಳುವುದು ಇಷ್ಟೇ- ಒಂದು ಘಟನೆಗೆ ಸರಳವಾದ ವಿವರಣೆ ಗಳು ಸರಿಯಾಗಿರುವ ಸಾಧ್ಯತೆ ಹೆಚ್ಚು. ಅನಗತ್ಯ ಅಥವಾ ಅಸಂಭವ ಊಹೆಗಳನ್ನು ತಪ್ಪಿಸಿ. ಆ ವಿವರಣೆಗೆ ಹೊಂದಿಕೊಳ್ಳಬಲ್ಲ ಸೂಕ್ತ ರುಜುವಾತು ಇದ್ದರೆ ಸಾಕು. ಪರಿಸ್ಥಿತಿಯನ್ನು ಸಂಕೀರ್ಣ ಮಾಡಿ ಇನ್ನಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳುವ ನಮ್ಮ ಸ್ವಭಾ ವಕ್ಕೆ ತಡೆ ಹಾಕಲು ಈ ರೇಜರ್ ನೆರವಾಗುತ್ತದೆ. ವಿಲಿಯಂ ಒಕ್ಕಾಮ್ ಆಂಗ್ಲೋ-ಫ್ರೆಂಚ್ ಚಿಂತಕ.

  1. ಹ್ಯಾನ್ಲಾನ್‌ನ ರೇಜರ್ ( Hanlon's Razor ): ರಸ್ತೆಯಲ್ಲಿ ಯಾರೋ ದಿಢೀರ್ ನಿಮ್ಮ ವಾಹನಕ್ಕೆ ಅಡ್ಡ ಬಂದಿದ್ದಾರೆ. ಸಣ್ಣದೊಂದು ಡಿಕ್ಕಿ ಆಗಿ ಹೋಗಿದೆ. ಅವನ್ಯಾರೋ ದುರುದ್ದೇಶದಿಂದಲೇ ನಿಮಗೆ ಬಂದು ಕುಟ್ಟಿದ್ದಾನೆ ಎಂದುಕೊಳ್ಳುತ್ತೀರಿ. ಹಾಗಲ್ಲ, ನಿಮ್ಮ ಲೇನ್‌ಗೆ ದಿಢೀರ್ ನುಗ್ಗಿದ್ದು ಅವನ ಮೂರ್ಖತನದಿಂದಷ್ಟೇ ಇರಬಹುದು. ಇಷ್ಟೇ ಸಿಂಪಲ್ ಅದು- ‘ಮೂರ್ಖತನದಿಂದ ಅಥವಾ ಆಕಸ್ಮಿಕವಾಗಿ ಆದುದು ಎಂದು ವಿವರಿಸಬಹುದಾದುದಕ್ಕೆ, ದುರುದ್ದೇಶ ಕಾರಣವೆಂದು ಹೇಳಬೇಡಿ’.

ಕಚೇರಿಯಲ್ಲಿ ನೀವು ನಡೆಸುವ ಮೀಟಿಂಗಿಗೆ ನಿಮ್ಮ ಸಹೋದ್ಯೋಗಿ ತಡವಾಗಿ ಬರುತ್ತಾರೆ. ದುರುದ್ದೇಶದಿಂದಲೇ ಹಾಗೆ ಮಾಡಿದ್ದಾರೆ ಅಂದುಕೊಳ್ಳುವುದು ತಪ್ಪು. ಅದು ನಿಜವಾಗಿ ಯೂ ಟ್ರಾಫಿಕ್ ಜಾಮ್ ನಿಂದಲೇ ಆಗಿರಬಹುದು. ನಿಮ್ಮ ಬೇಸರದ ಎಫ್‌ʼಬಿ ಪೋಸ್ಟ್‌ಗೆ ಯಾರೋ ನಗುವ ಇಮೋಜಿ ಹಾಕಿದ್ದರೆ, ದುರುದ್ದೇಶದಿಂದಲ್ಲದೇ ಕೈತಪ್ಪಿ ಹಾಕಿರಬಹುದು. ಕಾನ್‌ಸ್ಪಿರಸಿ ಥಿಯರಿಗಳು ಹುಟ್ಟಿಕೊಳ್ಳುವುದು ಈ ನಿಯಮವನ್ನು ಮರೆತಾಗ.

  1. ಸಗಾನ್‌ನ ರೇಜರ್ ( Sagan's Razor ) : ‘ನನ್ನ ಗ್ಯಾರೇಜ್‌ನಲ್ಲಿ ಬೆಂಕಿಯನ್ನು ಉಗುಳುವ ಡ್ರ್ಯಾಗನ್ ಇದೆ. ನಾನು ಅದನ್ನು ನಿಮಗೆ ತೋರಿಸಬ, ಆದರೆ ಅದು ಕಷ್ಟ. ಯಾಕೆಂದರೆ ಅದು ಅದೃಶ್ಯ ಡ್ರ್ಯಾಗನ್. ಅದು ಶಬ್ದ ಮಾಡುವುದಿಲ್ಲ, ಅದು ಶಾಖರಹಿತ, ಅದಕ್ಕೆ ಹೃದಯವೂ ಇಲ್ಲ. ಆದರೂ ನನ್ನ ಮಾತನ್ನು ನಂಬಿ’ ಅಂತ ಯಾರಾದರೂ ಹೇಳಿದರೆ ಖಂಡಿತ ಅವರನ್ನು ನಂಬಬೇಡಿ. ಅಮೆರಿಕದ ಕಾಸ್ಮಾಲಜಿಸ್ಟ್ ಕಾರ್ಲ್ ಸಗಾನ್‌ನ ಥಿಯರಿ ಇದು. ಅವನಿಗಿಂತ ಮೊದಲು ಡೇವಿಡ್ ಹ್ಯೂಮ್ ಎಂಬ ತತ್ವಜ್ಞಾನಿ ಇದನ್ನೇ ಹೇಳಿದ್ದ. ಇದರರ್ಥ ಇಷ್ಟೇ- ಅಸಾಮಾನ್ಯವಾದ ಸಂಗತಿಗಳನ್ನು ಸಾಬೀತು ಪಡಿಸಲು ಹೆಚ್ಚಿನ, ಅಸಾಮಾನ್ಯವಾದ ಪುರಾವೆಗಳೇ ಬೇಕು. ಮತ್ತು ನಾವು ಆ ಬಗ್ಗೆ ಹೆಚ್ಚು ಅನು ಮಾನ ಹೊಂದಿರಬೇಕು. ಈ ರೇಜರ್ ಅನ್ವಯಿಸುವ ಮೂಲಕ ಎಷ್ಟೋ ಅರ್ಥಹೀನ ಚರ್ಚೆಗಳನ್ನು ಕಡಿಮೆ ಮಾಡಬಹುದು.

ಶಾಖರಹಿತ ಬೆಂಕಿಯನ್ನು ಉಗುಳುವ ಅದೃಶ್ಯ, ನಿರಾಕಾರ, ತೇಲುವ ಡ್ರ್ಯಾಗನ್‌ಗೂ ಮತ್ತು ಯಾವುದೇ ಡ್ರ್ಯಾಗನ್ ಇಲ್ಲದಿರುವಿಕೆಗೂ ವ್ಯತ್ಯಾಸವೇ ಇಲ್ಲ. ಯಾರಾದರೂ ತಾನು ದೇವರನ್ನು, ದೆವ್ವಗಳನ್ನು ನೋಡಿದ್ದೇನೆ, ಪವಾಡ ಮಾಡುತ್ತೇನೆ ಎಂದೆಲ್ಲ ಕೊಚ್ಚಿ ಕೊಂಡರೆ ಈ ರೂಲ್ ಅನ್ನು ಅಂಥವರ ಮೇಲೆ ಪ್ರಯೋಗಿಸಿ ಅವರ ಪೊಳ್ಳುತನ ಎಷ್ಟು ಎಂದು ಕಂಡುಕೊಳ್ಳಬಹುದು. ಹೆಚ್ಚಿನ ದೇವಮಾನವರು, ಆಸ್ತಿಕರ ವಾದಗಳು ಈ ರೂಲ್‌ನ ಮುಂದೆ ಕೊಚ್ಚಿಹೋಗುತ್ತವೆ.

Screenshot_11

ಫೆಯ್ನ್‌ಮನ್‌ನ ರೇಜರ್ (Feynman's Razor): ನೀವು ಒಂದು ಸಂಗತಿಯನ್ನು ಸರಳ ವಾಗಿ ವಿವರಿಸಲು ಸಾಧ್ಯವಾಗದಿದ್ದರೆ, ಅದು ನಿಮಗೆ ಅರ್ಥವಾಗಿಲ್ಲ ಎಂದೇ ಅರ್ಥ. ಸರಳ ಪದಗಳಲ್ಲಿ, ಕಡಿಮೆ ಸಂಕೀರ್ಣತೆಯಿಂದ, ಪಾರಿಭಾಷಿಕ ಗೋಜಲು ಇಲ್ಲದೆ ಏನನ್ನಾದರೂ ವಿವರಿಸಲು ಸಾಧ್ಯವಾದರೆ ಅದು ನಿಮ್ಮಲ್ಲಿ ಅಂತರ್ಗತವಾಗಿದೆ ಎಂದು ಕೊಳ್ಳಬಹುದು.

ಇದು ನಮ್ಮ ಅಥವಾ ಇತರರ ಗ್ರಹಿಕೆಗೆ ಇರುವ ಲಿಟ್ಮಸ್ ಪರೀಕ್ಷೆ. ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಗೆದ್ದ ರಿಚರ್ಡ್ ಫೆಯ್ನ್‌ಮನ್ ಅವರ ಹೆಸರು ಇದಕ್ಕಿದೆ. ಸಂಕೀರ್ಣವಾದ ವೈಜ್ಞಾನಿಕ ವಿಚಾರಗಳನ್ನು ಸ್ಪಷ್ಟವಾಗಿ ವಿವರಿಸುವ ಅಸಾಧಾರಣ ಸಾಮರ್ಥ್ಯ ಅವರದಾ ಗಿತ್ತು. ಇದನ್ನು ನಮ್ಮ ಕನ್ನಡದ ಹಲವು ಸಾಹಿತಿಗಳಿಗೆ, ವಿಮರ್ಶಕರಿಗೆ ಅನ್ವಯಿಸಿದರೆ ಅವರು ದಾರುಣವಾಗಿ ಸೋತುಹೋಗುತ್ತಾರೆ. ತಾವೇ ಅರ್ಥಮಾಡಿಕೊಳ್ಳದ ಥಿಯರಿ ಗಳನ್ನು ಓದುಗರಿಗೆ ಅರ್ಥವಾಗದ ಜಟಿಲ ಭಾಷೆಯಲ್ಲಿ ವಿವರಿಸುವುದಕ್ಕೆ ಈ ಅಕಾಡೆಮಿಶಿ ಯನ್‌ಗಳು ಸಿದ್ಧಹಸ್ತರು.

ಅದು ಅವರ ಖಾಲಿ ತಲೆಗೆ ಸಾಕ್ಷಿಯಲ್ಲದೆ ಇನ್ನೇನಲ್ಲ. ಪ್ರಪಂಚದ ಯಾವುದೇ eನವಿರಲಿ, ಅದನ್ನು ನಾವು ಇನ್ನೊಬ್ಬರಿಗೆ ಸರಳವಾಗಿ ಸಂವಹನ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಪಡೆದುಕೊಳ್ಳುವುದು ನಿಷ್ಪ್ರಯೋಜಕ. ಸ್ಪಷ್ಟ ಚಿಂತನೆಗೆ ಸ್ಪಷ್ಟ ಬರವಣಿಗೆಯೂ ಸಾಕ್ಷಿ. ಸರಳ ಬರಹದ ಪರವಾಗಿದ್ದ ಇನ್ನೊಬ್ಬ ಲೇಖಕ ಜಾರ್ಜ್ ಆರ್ವೆಲ್. ಆತ ಒಳ್ಳೆಯ ಬರವಣಿಗೆಯ ಆರು ನಿಯಮಗಳನ್ನು ತಿಳಿಸುತ್ತಾನೆ- ದೀರ್ಘ ವಾಕ್ಯಗಳ ಬದಲು ಸಣ್ಣ ಸರಳ ವಾಕ್ಯಗಳು, ಅಲಂಕಾರಗಳನ್ನು ಬಳಸದಿರುವುದು, ದೀರ್ಘ ಪದಗಳ ಬದಲು ಸಣ್ಣ ಪದಗಳು, ಅನಗತ್ಯ ಪದಗಳಿಗೆ ಗೇಟ್‌ಪಾಸ್, ಕರ್ಮಣಿ ಪ್ರಯೋಗಕ್ಕೆ ಕತ್ತರಿ, ಪಾರಿಭಾಷಿಕ ಪದಗಳಿಗೆ ನೋ ನೋ.

  1. ಹಿಚೆನ್ಸ್ ರೇಜರ್ (Hitchen's Razor): ಇದು ಸಗಾನ್‌ನ ರೇಜರ್‌ನ ಮುಂದುವರಿಕೆ ಯಂತೆ ಇದೆ. ಅಸಾಧಾರಣ ಸಂಗತಿಗಳಿಗೆ ಅಸಾಧಾರಣ ಸಾಕ್ಷ್ಯಗಳೇ ಬೇಕು ಎಂದು ಸಗಾನ್ ಹೇಳಿದರೆ, ರುಜುವಾತು ಇಲ್ಲದಿದ್ದರೆ ವಾದವೇ ಇರಕೂಡದು ಎಂದು ಕ್ರಿಸ್ಟೋ-ರ್ ಹಿಚೆನ್ಸ್ ಹೇಳುತ್ತಾನೆ. ಇವನು ನಮ್ಮ ಕಾಲದ ಅಸಾಧಾರಣ ಚಿಂತಕ, ಬರಹಗಾರ, ನಾಸ್ತಿಕ. ವಿತಂಡವಾದಗಳಿಂದ ಕೆಲವರು ನಮ್ಮನ್ನು ಗೆಲ್ಲಲು ಯತ್ನಿಸುವುದನ್ನು ನೀವು ನೋಡ ಬಹುದು.

ಅಂಥ ವಾದಗಳಿಗೆ ಮುಗುಳ್ನಗುವೇ ಉತ್ತರ ಅಷ್ಟೆ. ಹೇಳಿಕೆ ನೀಡುವವರಿಗೆ ತಮ್ಮ ಪರವಾಗಿ ರುಜುವಾತು ನೀಡಲು ಏನೂ ಇಲ್ಲದಿದ್ದರೆ, ಅಂಥ ಊಹಾಪೋಹ ನಿರಾಕರಿಸಲು ಶಕ್ತಿ‌ ಯನ್ನು ಏಕೆ ವ್ಯರ್ಥ ಮಾಡುತ್ತೀರಿ? ನೀವು ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ‘ಪುರಾವೆ ನೀಡುವ ಹೊಣೆಗಾರಿಕೆ, ಹೇಳಿಕೆ ಅಥವಾ ದೂರು ನೀಡುವವನದೇ’ (The burden of proof lies with the person who makes a claim) ಎಂಬ ನ್ಯಾಯಶಾಸ್ತ್ರದ ಮಾತಿಗೂ ಇದನ್ನು ಜೋಡಿಸಬಹುದು. ಯಾರಾದರೂ ನಿಮ್ಮ ವಿರುದ್ಧ ಏನಾದರೂ ಆಪಾದನೆ ಮಾಡಿದರೆ, ಅದನ್ನು ಸಾಬೀತುಪಡಿಸುವ ರುಜುವಾತನ್ನು ಅವರೇ ತೋರಿಸಬೇಕು; ಹೊರತು ನಾನು ನಿರಪರಾಧಿ ಎಂದು ತೋರಿಸಲು ನೀವು ಹೆಣಗಾಡ ಬೇಕಿಲ್ಲ.

  1. ಗ್ರೈಸ್‌ನ ರೇಜರ್ ( Grice's Razor ): ‘ಮಗು ಮಲಗಿದೆ. ಬಾಗಿಲು ಧಡಾರಂತ ಹಾಕ್ಬೇಡ’ ಎಂದು ಹೆಂಡತಿ ಗಂಡನಿಗೆ ಹೇಳುತ್ತಾಳೆ. ‘ನೀನು ಹೇಳೋಕೆ ಹೊರಟಿರೋ ದೇನು, ನಾನೇ ಯಾವಾಗ್ಲೂ ಮಗುವನ್ನು ಏಳಿಸ್ತೀನಿ ಅಂತಾನ?’ ಎಂದು ಗಂಡ ರೇಗುತ್ತಾನೆ. ಜಗಳ ಶುರುವಾಗುತ್ತದೆ. ಮಾತಿನ ತಪ್ಪು ಅರ್ಥ ಮಾಡಿಕೊಳ್ಳುವುದಕ್ಕೆ ಇದು ಪರ್ಫೆಕ್ಟ್ ಉದಾಹರಣೆ.

‘ಮಗು ಮಲಗಿದೆ, ಶಬ್ದ ಮಾಡಬೇಡ’ ಎಂದಷ್ಟೇ ಗಂಡ ಅರ್ಥಮಾಡಿಕೊಂಡರೆ ಸಾಕಿತ್ತು. ಬ್ರಿಟಿಷ್ ಫಿಲಾಸಫರ್ ಪೌಲ್ ಗ್ರೈಸ್ ಇದಕ್ಕೆ ನೀಡಿದ ವಿವರಣೆ ಕ್ಷಿಷ್ಟವಾಗಿದೆ. ಸರಳವಾಗಿ ಹೇಳಬಹುದಾದರೆ- ಸಂವಹನ ನಡೆಸುವಾಗ, ಮಾತನ್ನು ಸಂದರ್ಭಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕು. ಪದಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳ ಅಕ್ಷರಶಃ ಅರ್ಥ ವನ್ನು ಎತ್ತಿಕೊಳ್ಳಬಾರದು. ಸಂವಹನದಲ್ಲಿ ಸಹಕಾರ ಮತ್ತು ಸಂದರ್ಭವೇ ಮುಖ್ಯ. ಈ ಸೂತ್ರ ನಮಗೆ ತುಂಬ ಸಹಾಯಕ ಆಗಬಹುದಾದದ್ದು ಸಾಮಾಜಿಕ ಜಾಲತಾಣಗಳಲ್ಲಿ ನಾವು ನಡೆಸುವ ಚರ್ಚೆಗಳಲ್ಲಿ. ಎಷ್ಟು ಬೇಗ ನಮ್ಮ ಚರ್ಚೆಗಳು ಸಣ್ಣ ವಿಚಾರಗಳಿಂದ ಹೊರಟು ಜಗಳಗಳ ಕಡೆಗೆ ತಿರುಗುತ್ತವಲ್ಲ! ಅಂಥದನ್ನು ಅವಾಯ್ಡ್ ಮಾಡಲು ಈ ಸೂತ್ರ ಪಾಲಿಸಿ. ಹಾಗೇ ನಾವು ಆಡುವ ಮಾತು ಗಳನ್ನು ರೂಪಿಸಿಕೊಳ್ಳಲೂ ಈ ನಿಯಮ ಸಹಕಾರಿ.

7. ಆಲ್ಡರ್‌ನ ರೇಜರ್ ( Alder's Razor ) : ಆಸ್ಟ್ರೇಲಿಯದ ಗಣಿತಜ್ಞ ಮೈಕ್ ಆಲ್ಡರ್‌ನ ಈ ಸೂತ್ರ ಸ್ವಲ್ಪ ಕಠಿಣವಾದದ್ದೇ. ಸಗಾನ್, ಒಕ್ಕಾಮ್ ರೇಜರ್ ಗಳ ಇನ್ನೊಂದು ರೂಪ ವಾಗಿಯೂ ಇದನ್ನು ನೋಡ ಬಹುದು. ‘ಪ್ರಯೋಗದಿಂದ ರುಜುವಾತುಪಡಿಸಲಾಗದಿದ್ದರೆ ಅಂಥ ಸಂಗತಿಗಳೇ ಸುಳ್ಳು’ ಎಂಬುದೇ ಇವನ ನಿರ್ಣಯ.

ವಿಜ್ಞಾನ- ಗಣಿತ ಮುಂದುವರಿಯುವುದೇ ಈ ನಿಯಮದಿಂದ. ಆದರೆ ರಾಜಕೀಯ, ಧರ್ಮ ದಂಥ ಕ್ಷೇತ್ರಗಳಲ್ಲಿ ಈ ರೇಜರ್ ಅನ್ನು ಯಥಾವತ್ತು ಅನುಸರಿಸುವುದು ಕಷ್ಟವೇ.

ಹರೀಶ್‌ ಕೇರ

View all posts by this author