M J Akbar Column: ಔರಂಗಜೇಬನ ಬಗ್ಗೆ ಆರ್‌ಎಸ್ʼಎಸ್ ನಿಲುವು ಸಂಪೂರ್ಣ ಸರಿ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದ್ದು ನೂರಕ್ಕೆ ನೂರು ಸರಿ. ಈಗಿನ ಭಾರತಕ್ಕೆ ಔರಂಗಜೇಬನೆಂಬ ವ್ಯಕ್ತಿಯೇ ಅಪ್ರಸ್ತುತ. ಹಾಗೆ ನೋಡಿದರೆ ಔರಂಗಜೇಬ ಪಾಕಿಸ್ತಾನದ ಪಿತಾಮಹ. ಅವನು ಪಾಕ್‌ಗೆ ಸೈದ್ಧಾಂತಿಕ ಮೂಲಪುರುಷ. ಪಾಕಿಸ್ತಾನ ಹುಟ್ಟಿಕೊಂಡಿದ್ದು ಮುಸ್ಲಿಮರ ಮೇಲಿನ ಪ್ರೀತಿಯಿಂದಲ್ಲ, ಬದಲಿಗೆ ಹಿಂದೂಗಳ ಮೇಲಿನ ದ್ವೇಷದಿಂದ.

ಲೇಖಕರು, ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್

ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದ್ದು ನೂರಕ್ಕೆ ನೂರು ಸರಿ. ಈಗಿನ ಭಾರತಕ್ಕೆ ಔರಂಗಜೇಬನೆಂಬ ವ್ಯಕ್ತಿಯೇ ಅಪ್ರಸ್ತುತ. ಹಾಗೆ ನೋಡಿದರೆ ಔರಂಗಜೇಬ ಪಾಕಿಸ್ತಾನದ ಪಿತಾಮಹ. ಅವನು ಪಾಕ್‌ಗೆ ಸೈದ್ಧಾಂತಿಕ ಮೂಲಪುರುಷ. ಪಾಕಿಸ್ತಾನ ಹುಟ್ಟಿಕೊಂಡಿದ್ದು ಮುಸ್ಲಿಮರ ಮೇಲಿನ ಪ್ರೀತಿಯಿಂದಲ್ಲ, ಬದಲಿಗೆ ಹಿಂದೂಗಳ ಮೇಲಿನ ದ್ವೇಷದಿಂದ.
ಬ್ರಿಟಿಷರ ಜತೆಗೆ ಚೆನ್ನಾಗಿ ಹೊಂದಾಣಿಕೆ ಮಾಡಿಕೊಂಡಿದ್ದ ‘ತ್ರೀ ಪೀಸ್ ಸೂಟ್’ನ ಮೊಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನದ ಸೂಲಗಿತ್ತಿಯಾಗಿದ್ದರಷ್ಟೆ. ತನ್ನ ಆಳ್ವಿಕೆಯ ಕಾಲದಲ್ಲಿ ಔರಂಜೇಬ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಇದ್ದ ಮತಭೇದವನ್ನು ಅಧಿಕೃತ ಮೌಲ್ಯವೆಂಬಂತೆ ಬೇರ್ಪಡಿಸಿ ಎರಡೂ ಧರ್ಮಗಳ ನಡುವಿನ ಅಂತರವನ್ನು ಸಾಂಸ್ಥಿಕಗೊಳಿಸಿದ್ದ.
ಅವನ ಕಾಲದಲ್ಲೂ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೈನಂದಿನ ಜೀವನದಲ್ಲಿ ಭಾಷೆ ಮತ್ತು ಸಂಸ್ಕೃತಿಯಲ್ಲಿ ಸಮನ್ವಯವಿತ್ತು. ಆದರೆ ಅದನ್ನು ಅವನು ತಲೆಕೆಳಗು ಮಾಡಿದ. ಉದಾ ಹರಣೆಗೆ, ಆವರೆಗೆ ಹೋಳಿ ಹಬ್ಬವನ್ನು ಆಚರಣೆ ಮಾಡುವುದು ಅಥವಾ ತಿಲಕವಿಡುವ ಪದ್ಧತಿ ಯನ್ನು ಎರಡೂ ಧರ್ಮದವರೂ ಅನುಸರಿಸುತ್ತಿದ್ದರು. ಅದೊಂದು ಸಹಜ ಸಾಮಾಜಿಕ ಪದ್ಧತಿ ಯಂತೆ ಇತ್ತು. ಅದು ಔರಂಗಜೇಬನ ಕಾಲದಲ್ಲಿ ನಿಂತಿತು.
ಇದನ್ನೂ ಓದಿ: M J Akbar Column: ಡೊನಾಲ್ಡ್ ಟ್ರಂಪ್ ಈ ಕಾಲದ ರಿಚರ್ಡ್ ನಿಕ್ಸನ್...!
ಬ್ರಿಟಿಷರು ಈ ಅಂತರವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು, ಎರಡೂ ಧರ್ಮೀಯರ ನಡುವೆ ಇದ್ದ ಭಿನ್ನಮತವನ್ನು ಇನ್ನಷ್ಟು ಪೋಷಿಸಿ, ಕಾನೂನುಬದ್ಧವಾಗಿಯೇ ಉಭಯತ್ರರನ್ನು ಬೇರ್ಪಡಿಸಿದರು. ಉದಾಹರಣೆಗೆ, ರೈಲ್ವೆ ನಿಲ್ದಾಣಗಳಲ್ಲಿ ‘ಹಿಂದೂ ನೀರು’ ಮತ್ತು ‘ಮುಸ್ಲಿಂ ನೀರು’ ಎಂದು ಪ್ರತ್ಯೇಕ ವಾಗಿ ಇರಿಸಲು ಆರಂಭಿಸಿದ್ದು ಬ್ರಿಟಿಷರು. ಪ್ರತ್ಯೇಕ ಮತದಾರರ ಪಟ್ಟಿಯಂಥ ವ್ಯವಸ್ಥೆಗಳ್ನು ತಂದು ಶಾಸನಬದ್ಧವಾಗಿಯೇ ಅವರು ಮತಭೇದವನ್ನು ಸಾಂಸ್ಥಿಕಗೊಳಿಸಿದರು.
ಮುಸ್ಲಿಮರಿಗೆ ಪ್ರತ್ಯೇಕ ಮತದಾರರ ಪಟ್ಟಿ ತಯಾರಿಸುವಂಥ ವ್ಯವಸ್ಥೆಯೇ ಮುಂದೆ ಬೇರೆ ಬೇರೆ ತಿರುವು ಪಡೆದು ದೇಶ ವಿಭಜನೆಯವರೆಗೂ ಹೋಯಿತು. ಆದರೆ ಉಭಯ ಧರ್ಮೀಯರ ನಡುವೆ ಒಂದು ಸಂಪರ್ಕದ ತಂತುವಂತೂ ಹಾಗೇ ಉಳಿದಿತ್ತು.
ಆಧುನಿಕ ಭಾರತದ ಭವಿಷ್ಯವನ್ನು ಇಂಥ ಐತಿಹಾಸಿಕ ಮತ್ತು ತ್ವೇಷಮಯ ಮತಾಂಧತೆಯಿಂದ ಕಟ್ಟಲು ಸಾಧ್ಯವಿಲ್ಲ. ನಮ್ಮ ದೇಶವೀಗ ಬೆಳೆದು ನಿಂತಿರುವ ರೀತಿಯೇ ಅದಕ್ಕೆ ನಿದರ್ಶನ. ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳುವ ಭಾರತದ ತಾಕತ್ತಿಗೆ ನಾವೀಗ ಬದುಕುತ್ತಿರುವ ಕಾಲಘಟ್ಟವೇ ಸಾಕ್ಷಿ. ನಾವು ಹಿಂದೆ ನೋಡುತ್ತಾ, ಹಳೆಯ ದ್ವೇಷವನ್ನೇ ಮೆಲುಕು ಹಾಕುತ್ತಾ ಕುಳಿತುಕೊಳ್ಳುವ ಜನರಲ್ಲ. ಭಾರತ ಇಂದು 21ನೇ ಶತಮಾನದ ಹೊಳೆಯುವ ನಕ್ಷತ್ರವಾಗಿದ್ದರೆ, ಪಾಕಿಸ್ತಾನ ತನ್ನದೇ ಎಡವಟ್ಟು ಗಳಿಂದ 19ನೇ ಶತಮಾನಕ್ಕೆ ಕುಸಿದಿದೆ. ಅದಕ್ಕೆ ಕಾರಣ ಎರಡೂ ದೇಶಗಳ ಜನರು ಬೇರೆ ಬೇರೆ ಎಂಬುದಲ್ಲ.
ನಿಜವಾದ ಕಾರಣ ಎರಡೂ ದೇಶಗಳು ಹೇಗೆ ತಮ್ಮನ್ನು ತಾವು ನಿರ್ಮಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿದ ರೀತಿಯಲ್ಲಿರುವ ವ್ಯತ್ಯಾಸ. ಆರ್‌ಎಸ್‌ಎಸ್‌ನ ಉನ್ನತ ನಾಯಕರು ಯಾರಾದರೂ ಮಾತನಾಡಿದರೆ ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳುತ್ತಿರುವುದಿಲ್ಲ. ಅಂಥ ಸ್ವಾತಂ ತ್ರ್ಯವನ್ನು ಅವರು ತೆಗೆದುಕೊಳ್ಳುವುದಿಲ್ಲ. ದೇಶದ ರಾಜಕೀಯ ಸಂಸ್ಕೃತಿಯಲ್ಲಿ ಕೈಯಾಡಿಸುವುದು ಆರ್‌ಎಸ್‌ಎಸ್‌ಗೆ ಬೇಕಿಲ್ಲ.
ಆರ್‌ಎಸ್‌ಎಸ್‌ನಲ್ಲಿ ಅಪ್ಪಟ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಹಿಂದೆ ಒಂದು ಶಿಸ್ತುಬದ್ಧ ಪ್ರಕ್ರಿಯೆಯಿರುತ್ತದೆ. ಆರ್‌ಎಸ್‌ಎಸ್‌ನ ವಕ್ತಾರರು ಹೊರಗೆ ಮಾತನಾಡುವಾಗ ಆ ಕ್ಷಣಕ್ಕೆ ತೋಚಿದ್ದನ್ನು ಯಾವತ್ತೂ ಹೇಳುವುದಿಲ್ಲ. ಅವರು ತಾವೇ ಏನನ್ನೂ ಹುಟ್ಟಿಸಿಕೊಂಡು ಮಾತನಾಡುವುದಿಲ್ಲ ಅಥವಾ ನಿರ್ದಿಷ್ಟ ಘಟನೆಗಳ ಜತೆಗೆ ತಮಗಿರುವ ಸಂಬಂಧವನ್ನೂ ಮಧ್ಯೆ ತರುವುದಿಲ್ಲ. ರಾಜಕೀಯ ಪಕ್ಷಗಳ ವಕ್ತಾರರು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಆರ್‌ಎಸ್‌ಎಸ್ ವಕ್ತಾರರು ತೆಗೆದುಕೊಳ್ಳುವುದಿಲ್ಲ.
ಯಾವುದೇ ವಿಷಯದ ಬಗ್ಗೆ ಸಂಘ ಒಂದು ನಿಲುವು ಪ್ರಕಟಿಸುತ್ತದೆ ಅಂದರೆ ಅದರ ಹಿಂದೆ ಸಾಕಷ್ಟು ಚಿಂತನ ಮಂಥನಗಳು, ಸಮಾಲೋಚನೆಗಳು ಹಾಗೂ ಚರ್ಚೆಗಳು ನಡೆದಿರುತ್ತವೆ. ಇದನ್ನು ಒಪ್ಪಿ ಕೊಳ್ಳಲು ನೀವು ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ಒಲವು ಹೊಂದಿರುವ ವ್ಯಕ್ತಿಯೂ ಆಗಿರ ಬೇಕಿಲ್ಲ ಅಥವಾ ಭಿನ್ನಮತ ಹೊಂದಿರುವವರೂ ಆಗಿರಬೇಕಿಲ್ಲ.
ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಆರನೇ ಶತಮಾನದ ಮೊಘಲ್ ರಾಜ ಔರಂಗಜೇಬನ ಸಮಾಧಿಯ ಕುರಿತು ವಿವಾದ ಭುಗಿಲೆದ್ದಾಗ ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಮಾತನಾಡಿ, “21ನೇ ಶತಮಾನದ ಭಾರತಕ್ಕೆ ಔರಂಗಜೇಬ ಪ್ರಸ್ತುತ ಅಲ್ಲ" ಎಂದು ಹೇಳಿದರು. ಬಳಿಕ ಸಂಘದ ಪ್ರಭಾವಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತ ನಾಡಿ, “ನಮಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಗೌರವಿಸುವ ಹಾಗೂ ಸಹಬಾಳ್ವೆಯ ತತ್ವದ ಮೇಲೆ ಎದ್ದುನಿಂತ ಸಶಕ್ತ ದೇಶ ಬೇಕಿದೆ" ಎಂದು ಹೇಳಿದರು.
ಇವರಿಬ್ಬರೂ ಈ ಮಾತುಗಳನ್ನು ಹೇಳುವುದಕ್ಕಿಂತ ಮುಂಚೆ ಆರ್‌ಎಸ್‌ಎಸ್ ಒಳಗೆ ಸಾಕಷ್ಟು ಚರ್ಚೆ ಗಳು ನಡೆದಿದ್ದವು. ದೇಶ ಇಂಥ ವಿಷಯಗಳಲ್ಲಿ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಒಂದು ಸಂಸ್ಥೆಯಾಗಿ ಬಯಸುತ್ತದೆಯೋ ಅದನ್ನೇ ಅವರು ಸ್ಪಷ್ಟವಾಗಿ ತಿಳಿಸಿದ್ದರು. ಸಂಸ್ಕೃತಿ ಅಂದರೆ ನಂಬಿಕೆ ಅಲ್ಲ. ಇವೆರಡನ್ನೂ ಒಂದೇ ಎಂದು ಬಿಂಬಿಸಲು ಸಾಕಷ್ಟು ಪ್ರಯತ್ನಿ ಸಿದ ಮೂಢರು ಇದ್ದಾರಾದರೂ ಇವು ಯಾವತ್ತಿದ್ದರೂ ಪ್ರತ್ಯೇಕ ಸಂತಿಗಳೇ. ಬೇಕಿದ್ದರೆ ಗಮನಿಸಿ ನೋಡಿ. ಇಂಡೋನೇಷ್ಯಾದ ಬಹುತೇಕ ಜನರು ಮತ್ತು ಅರಬ್ ರಾಷ್ಟ್ರಗಳ ಜನರು ಹೆಚ್ಚುಕಮ್ಮಿ ಒಂದೇ ನಂಬಿಕೆಯನ್ನು ಹೊಂದಿದ್ದಾರೆ.
ಆದರೆ ಅವರಿಬ್ಬರ ಸಂಸ್ಕೃತಿಗಳೂ ಬೇರೆ ಬೇರೆ. ಹಿಂದೂ ಮತ್ತು ಮುಸ್ಲಿಂ ಇಂಡೋನೇಷ್ಯನ್ನರು ‘ಬಹಸಾ’ ಎಂಬ ಒಂದೇ ಭಾಷೆ ಮಾತನಾಡುತ್ತಾರೆ, ಆದರೆ ಅರಬ್ ಕ್ರಿಶ್ಚಿಯನ್ನರು ಅರೇಬಿಕ್ ಮಾತ ನಾಡುತ್ತಾರೆ. ಪ್ರತಿ ಭಾಷೆಗೂ ಒಬ್ಬೊಬ್ಬ ಪ್ರವಾದಿಯನ್ನು ಅಲ್ಲಾ ಕಳುಹಿಸಿದ್ದ ಎಂದು ಕುರಾನ್ ಹೇಳುತ್ತದೆ. ಏಕೆಂದರೆ ಭಾಷೆ ಕೂಡ ದೇವರ ಸೃಷ್ಟಿ. ಅವನು ತಾನೇ ಸೃಷ್ಟಿಸಿದ ಭಾಷೆಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಧರ್ಮವನ್ನು ನಂಬುವವರಿಗೆ ನಾವೆಲ್ಲರೂ ದೇವರ ಸೃಷ್ಟಿಗಳು. ಕುರಾನ್ ಗ್ರಂಥವನ್ನು ಬಾಯಿಪಾಠ ಮಾಡಿಕೊಂಡವರು ಹೇಳುವಂತೆ ಔರಂಗಜೇಬ ನಿಗೂ ‘ಲಾ ಕುಮ್ ದೀನ್ ಓ ಕುಮ್ ವಾ ಇಲ್ ಯಾ ದೀನ್’ ಎಂಬ ಸಾಲು ಬಾಯಿಪಾಠವಿತ್ತು.
‘ನಿನ್ನ ನಂಬಿಕೆ ನಿನ್ನದು, ನನ್ನ ನಂಬಿಕೆ ನನ್ನದು’ ಎಂಬುದು ಇದರ ಅರ್ಥ. ಇದನ್ನು ಕಂಠಪಾಠ ಮಾಡಿಕೊಂಡು ಹೇಳುತ್ತಿದ್ದ ಔರಂಗಜೇಬ ಈ ವಾಕ್ಯದ ಅರ್ಥವನ್ನು ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ. ಏಕೆಂದರೆ ಇದರ ಅರ್ಥವು ಔರಂಗಜೇಬನ ಪೂರ್ವಗ್ರಹಗಳಿಗೆ ವಿರುದ್ಧವಾಗಿದ್ದವು. ನಮ್ಮ ನಂಬಿಕೆ ಮತ್ತು ದೃಷ್ಟಿಕೋನಗಳಿಗೆ ಎಷ್ಟೊಂದು ಕತ್ತಲು ಬಳಿಯಲಾಗಿದೆ ಅಂದರೆ, ದೇಶದ ಹಿತಕ್ಕಾಗಿ ನಾವು ಸಮಗ್ರವಾಗಿ ಮತ್ತು ಸಮತೋಲಿತವಾಗಿ ಯೋಚಿಸಲು ಆಗಾಗ ನಮ್ಮ ಚಿಂತನೆ ಗಳನ್ನು ನಾವೇ ಮರುಜೋಡಣೆ ಮಾಡಿಕೊಳ್ಳುವ ಅಗತ್ಯ ಉದ್ಭವಿಸಿದೆ.
ಉದಾಹರಣೆಗೆ, ಔರಂಗಜೇಬನ ಕಾಲದಲ್ಲಿ ಜಾರಿಗೆ ತಂದಿದ್ದ ತೆರಿಗೆ ಪದ್ಧತಿಯನ್ನೇ ತೆಗೆದುಕೊಳ್ಳಿ. ಬಹುಶಃ ಅದನ್ನು ವಿಭಿನ್ನ ಧರ್ಮೀಯರ ನಡುವೆ ದ್ವೇಷ ಬೆಳೆಸುವುದಕ್ಕೆಂದೇ ಜಾರಿಗೆ ತರಲಾಗಿತ್ತು. 1679ರಲ್ಲಿ ಜಜಿಯಾ ಎಂಬ ತೆರಿಗೆಯನ್ನು ಔರಂಗಜೇಬ ವಿಧಿಸಲು ಆರಂಭಿಸಿದ್ದ. ಅದರ ವಿರುದ್ಧ ಜನರು ದಂಗೆಯೆದ್ದರು. ಎಲ್ಲೆಡೆ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದವು.
ಕೊನೆಗೆ ಆ ತೆರಿಗೆಯು ಮೊಘಲರು ಮತ್ತು ರಜಪೂತರ ನಡುವಿನ ಮೈತ್ರಿಗೇ ಭಂಗ ತಂದಿತ್ತು. ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಔರಂಗಜೇಬನಿಗೂ ಮುನ್ನ ನೂರಾರು ವರ್ಷಗಳ ಕಾಲ ದೇಶವನ್ನಾಳಿದ್ದ ಮೊಘಲರು ಈ ಮತೀಯ ತೆರಿಗೆಯನ್ನು ರದ್ದುಪಡಿಸಿದ್ದರು. ಅಕ್ಬರ್ ಕಟ್ಟಿದ ಮೊಘಲ್ ಸಾಮ್ರಾಜ್ಯದ ಸಹಬಾಳ್ವೆಯ ಸಂಸ್ಕೃತಿಗೆ ಇಂಥ ಮತೀಯ ತಾರತಮ್ಯವು ಮಾರಕ ಎಂದು ಆ ರಾಜರು ನಂಬಿದ್ದರು. ಸ್ವತಃ ಅಕ್ಬರನ ತಮ್ಮ ಮೊಹಮ್ಮದ್ ಹಕೀಮನೇ ಸಂಪ್ರದಾಯಸ್ಥ ಮುಸ್ಲಿಮರ ತಲೆ ಕೆಡಿಸಿ ‘ಅಕ್ಬರ್ ಒಬ್ಬ ಧರ್ಮಭ್ರಷ್ಟ ರಾಜ’ ಎಂದು ಬಿಂಬಿಸಲು ಹೊರಟಿದ್ದ. ಅವನ ನೇತೃತ್ವದಲ್ಲಿ ದಂಗೆ ಕೂಡ ನಡೆದಿತ್ತು. ಆದರೆ ಕಾಬೂಲ್‌ನಲ್ಲಿ ರಾಜಾ ಮಾನ್‌ಸಿಂಗ್ ಈ ಬಂಡು ಕೋರರನ್ನು ನಾಮಾವಶೇಷ ಮಾಡಿದ.
ಚೋದ್ಯವೆಂಬಂತೆ ಔರಂಗಜೇಬನ ಜಜಿಯಾ ತೆರಿಗೆ ಕೂಡ ಮೊಘಲರ ಬೊಕ್ಕಸಕ್ಕೆ ಸಾಕಷ್ಟು ಹಣ ಹರಿದು ಬರುವಂತೆ ಮಾಡಲಿಲ್ಲ. ಏಕೆಂದರೆ ಅಧಿಕಾರಿಗಳಲ್ಲಿ ಅಷ್ಟೊಂದು ಭ್ರಷ್ಟಾಚಾರವಿತ್ತು. ತನ್ಮೂಲಕ, ಪೂರ್ವಗ್ರಹಗಳಿಗಿಂತ ಭ್ರಷ್ಟಾಚಾರವೇ ಹೆಚ್ಚು ಶಕ್ತಿಶಾಲಿ ಎಂಬುದು ಸಾಬೀತಾಯಿತು. “ಜಜಿಯಾ ತೆರಿಗೆ ಪದ್ಧತಿಯು ಔರಂಗಜೇಬನಿಗೆ ಪ್ರಭಾವಿ ಉಲೇಮಾಗಳ ಮೇಲೆ ಯಾವುದೇ ಹಿಡಿತ ವನ್ನು ತಂದುಕೊಡಲಿಲ್ಲ.
ಜಜಿಯಾ ತೆರಿಗೆ ಸಂಗ್ರಹಿಸುವವರ ವಿರುದ್ಧ ಹೋರಾಟಗಳು ನಡೆದವು. ಇಡೀ ವ್ಯವಸ್ಥೆ ಅಸ್ತವ್ಯಸ್ತ ವಾಯಿತು. ಪರಿಣಾಮ, ಜನರಿಂದ ಸಂಗ್ರಹಿಸಿದ ದೊಡ್ಡ ಮೊತ್ತದ ಹಣ ತೆರಿಗೆ ಸಂಗ್ರಾಹಕರ ಕಿಸೆ ಯನ್ನು ದಾಟಿ ಬೊಕ್ಕಸಕ್ಕೆ ಹೋಗಲೇ ಇಲ್ಲ. ಅಂಥ ಹಗಲು ದರೋಡೆಯನ್ನು ತಡೆಯಲು ಔರಂಗ ಜೇಬನಲ್ಲಿ ತಾಕತ್ತಿರಲಿಲ್ಲ" ಎಂದು ‘ಔರಂಗಜೇಬ್: ದಿ ಮ್ಯಾನ್ ಆಂಡ್ ದಿ ಮಿತ್’ ಕೃತಿಯಲ್ಲಿ ಬರೆಯುತ್ತಾರೆ ಇತಿಹಾಸಕಾರ್ತಿ ಔಡ್ರೆ ಟ್ರುಶ್ಕೆ. 1679ರಲ್ಲಿ ಔರಂಗಜೇಬ ‘ಝರೋಕಾ ದರ್ಶನ್’ ಬಂದ್ ಮಾಡಿದ. ಅದು ಅಕ್ಬರನ ಕಾಲದಲ್ಲಿ ಆರಂಭವಾಗಿದ್ದ ಆಚರಣೆಯಾಗಿತ್ತು.
ಅರಮನೆಯ ಬಾಲ್ಕನಿಯಲ್ಲಿ ಪ್ರತಿದಿನ ರಾಜ ಎರಡು ಅಥವಾ ಮೂರು ಬಾರಿ ಬಂದು ನಿಂತು ಪ್ರಜೆ ಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ. ಆದರೆ ಈ ಆಚರಣೆಯ ಮೂಲ ಹಿಂದೂ ಧರ್ಮದಲ್ಲಿದೆ ಎಂಬ ಕಾರಣಕ್ಕೆ ಔರಂಗಜೇಬ ಇದನ್ನು ನಿಲ್ಲಿಸಿದ. ಅದೇ ರೀತಿ, ಮೊಘಲರು ಹಿಂದೂ ಗಳನ್ನು ಭೇಟಿಯಾದಾಗ ಹಣೆಗೆ ತಿಲಕ ಇಟ್ಟು ಶುಭ ಕೋರುವ ಸಂಪ್ರದಾಯವಿತ್ತು.
ಅದನ್ನೂ ನಿಲ್ಲಿಸಿದ. ಅವನ ಮೌಢ್ಯಾಚರಣೆಯಲ್ಲಿ ಲಿಂಗ ತಾರತಮ್ಯವೂ ಸಾಕಷ್ಟಿತ್ತು. ಮಹಿಳೆ ಯರು ಮುಸ್ಲಿಂ ಪ್ರಾರ್ಥನಾ ಮಂದಿರಗಳಿಗೆ ತೆರಳುವುದನ್ನು ನಿಷೇಧಿಸಿದ್ದ. ಔರಂಗಜೇಬ ಇದನ್ನೆಲ್ಲ ನಿಲ್ಲಿಸಬೇಕು ಅಂದರೆ ಈ ಆಚರಣೆಗಳು ಅಲ್ಲಿಯವರೆಗೆ ಭಾರತದಲ್ಲಿ ಶತಮಾನಗಳಿಂದ ಜನಸಾಮಾ ನ್ಯರ ನಡುವೆ ರೂಢಿಯಲ್ಲಿದ್ದ ಸಹಜವಾದ್ದ ಆಚರಣೆಗಳಾಗಿದ್ದವು. ಔರಂಗಜೇಬನ ಪರ ವಹಿಸಿ ಕೊಂಡು ಬರುವವರು ಅವನನ್ನು 21ನೇ ಶತಮಾನದ ದೃಷ್ಟಿಕೋನದಿಂದ ಅಳೆಯಬಾರದು ಎಂದು ಹೇಳುತ್ತಾರೆ.
ಅದು ಸರಿಯೇ. ಆದರೆ, ಅವನು ಆ ಕಾಲದಲ್ಲೇ ಅವನದೇ ಕುಟುಂಬ, ಅವನದೇ ತಂದೆ, ಅವನದೇ ತಾತ ಹಾಗೂ ಮುತ್ತಾತನ ದೃಷ್ಟಿಯಿಂದಲೂ ತಪ್ಪಿತಸ್ಥನಾಗಿದ್ದ. ಅವನ ಆಳ್ವಿಕೆಯಲ್ಲಿ ಅಖ್ಲಾಕ್ ಮತ್ತು ಆದಾಬ್‌ಗಳಿರಲಿಲ್ಲ. ಅಂದರೆ ಅವನದು ಮೌಲ್ಯಗಳಿಲ್ಲದ ಮತ್ತು ಸಹಬಾಳ್ವೆಯ ತತ್ವ ಗಳಿಲ್ಲದಆಡಳಿತವಾಗಿತ್ತು. ಅವನ ತಂದೆ ಶಹಜಹಾನ್ ಹೋಳಿ ಹಬ್ಬವನ್ನು ‘ಈದ್-ಇ-ಗುಲಾಬಿ’ ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದ.
ಅದನ್ನು ಗುಲಾಬಿ ಈದ್ ಎಂದೂ, ಆಬ್-ಎ-ಪಾಶಿ ಅಥವಾ ಹೂವುಗಳ ಹಬ್ಬವೆಂದೂ ಕರೆಯು ತ್ತಿದ್ದರು. ಹೋಳಿ ದಿನ, ಅಂದರೆ ಗುಲಾಬಿ ಈದ್ ದಿನ ಶಹಜಹಾನನ ಆಸ್ಥಾನದ ಉನ್ನತ ಅಧಿಕಾರಿ ಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ಲೋಹದ ಹೂಜಿಗಳಿಂದ ಪರಸ್ಪರರ ಮೇಲೆ ಗುಲಾಬಿಯ ನೀರು ಸಿಂಪಡಿಸುತ್ತಿದ್ದರು. ಹಿನ್ನೆಲೆಯಲ್ಲಿ ನಗಾರಿಗಳ ಸದ್ದು ಇರುತ್ತಿತ್ತು.
ತೆಹ್ಜೀಬ್ -ಇ-ಅಖ್ಲಾಕ್ ಅಥವಾ ಸಹಬಾಳ್ವೆಯ ಸಂಕೇತ ಎಂಬ ಹೆಸರಿನಲ್ಲಿ ರಾಜನ ಹಣೆಗೆ ಎಲ್ಲರೂ ಸೇರಿ ಬಣ್ಣ ಹಚ್ಚುತ್ತಿದ್ದರು. ತನ್ನ ಸಂಕುಚಿತ ದೃಷ್ಟಿಕೋನಕ್ಕೆ ಸರಿಹೊಂದದ ಎಲ್ಲವನ್ನೂ ಬದಲಿ ಸುವ ಖಯಾಲಿಯನ್ನು ಔರಂಗಜೇಬ ಹೊಂದಿದ್ದ. ಅಲ್ಲಿಯವರೆಗೆ ಇದ್ದ 12 ತಿಂಗಳ ಪರ್ಷಿಯನ್ ಕ್ಯಾಲೆಂಡರನ್ನು ಅವನು ಅರೇಬಿಕ್ ಕ್ಯಾಲೆಂಡರ್‌ಗೆ ಬದಲಿಸಿದ.
ಪರ್ಷಿಯನ್ ಕ್ಯಾಲೆಂಡರ್ ಮಾರ್ಚ್‌ನ ನವರೋಜ್‌ನಿಂದ ಆರಂಭವಾಗುತ್ತಿತ್ತು. ಅದನ್ನು ಬದಲಿ ಸಿದರೆ ತೆರಿಗೆ ಸಂಗ್ರಹಕ್ಕೆ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಔರಂಗಜೇಬ ಕೇಳಲಿಲ್ಲ. ಅವನ ಆಡಳಿತದಲ್ಲಿ ವಾಸ್ತವ ಮತ್ತು ಪ್ರಚಾರದ ನಡುವೆ ಬಹಳ ಅಂತರ ವಿತ್ತು. ಅವನನ್ನು ಹೊಗಳುವವರು ಔರಂಗಜೇಬ ಬಹಳ ಸರಳವಾದ ಜೀವನ ನಡೆಸುತ್ತಿದ್ದ, ಪವಿತ್ರ ಗ್ರಂಥಗಳ ನಕಲು ಪ್ರತಿಗಳನ್ನು ಬರೆದು ಅದರಿಂದ ಬಂದ ಹಣದಲ್ಲಿ ಹಾಗೂ ನಮಾಜಿನ ಟೋಪಿ ಗಳನ್ನು ಹೊಲಿದು ಜೀವಿಸುತ್ತಿದ್ದ ಎಂದು ಹೇಳುತ್ತಾರೆ.
ಆದರೆ ಅದೆಲ್ಲ ಶುದ್ಧ ನಾನ್ ಸೆನ್ಸ್. ಔರಂಗಜೇಬ ಅಪ್ಪಟ ಚಕ್ರವರ್ತಿಯಂತೆ ವೇಷಭೂಷಣ ಧರಿಸುತ್ತಿದ್ದ ಮತ್ತು ಥೇಟ್ ಚಕ್ರವರ್ತಿಯ ರೀತಿಯಲ್ಲೇ ಐಷಾರಾಮಿ ಬದುಕು ನಡೆಸುತ್ತಿದ್ದ. ಅವನ ಕಾಲದಲ್ಲಿ ಕಾಶ್ಮೀರಕ್ಕೆ ಪ್ರವಾಸ ಮಾಡಿದ್ದ ಬರ್ನಿಯರ್ ಹೀಗೆ ಬರೆಯುತ್ತಾನೆ: “ಔರಂಗಜೇಬ ಬಹಳ ದುಬಾರಿಯಾದ ಅದ್ಭುತ ಬಟ್ಟೆ ಧರಿಸಿದ್ದ. ನಯವಾದ ಬಿಳಿಯ ಅಂಗಿಗೆ ರೇಷ್ಮೆ ಮತ್ತು ಚಿನ್ನದ ಎಂಬ್ರಾಯ್ಡರಿ ಇರುತ್ತಿತ್ತು. ಅವನ ಮುಂಡಾಸಿನಲ್ಲಿ ಚಿನ್ನದಿಂದ ತಯಾರಿಸಿದ ಬಟ್ಟೆಯ ಹೊದಿಕೆ ಯಿತ್ತು.
ಅದರ ಮೇಲೆ ವಜ್ರಗಳನ್ನು ಪೋಣಿಲಾಗಿತ್ತು. ಅವು ಭರ್ಜರಿ ಗಾತ್ರದ ವಜ್ರಗಳೇ ಆಗಿದ್ದವು. ಅವನು ಧರಿಸಿದ ಕಂಠೀಹಾರದಲ್ಲಿ ಜಗತ್ತಿನ ನಾನಾ ಕಡೆಗಳಿಂದ ತರಿಸಿದ ಮುತ್ತು ರತ್ನಗಳಿದ್ದವು. ಆ ಹಾರವು ಕುತ್ತಿಗೆಯಿಂದ ಹೊಟ್ಟೆಯ ಕೆಳಗಿನವರೆಗೂ ಬರುತ್ತಿತ್ತು". ಬರ್ನಿಯರ್‌ನ ಬರಹಗಳಲ್ಲೇ ಔರಂಗ ಜೇಬನ ಬಗ್ಗೆ ಇನ್ನೂ ಸಾಕಷ್ಟು ವಿವರಣೆಗಳಿವೆ. ಅವನನ್ನು ನೋಡಲು ಬರುವ ಕೆಲ ಉನ್ನತ ಅಧಿಕಾರಿಗಳು ಮತ್ತು ಪ್ರಭಾವಿಗಳು ಬಹಳ ದುಬಾರಿ ಉಡುಗೊರೆಗಳನ್ನು ತರುತ್ತಿದ್ದರು.
ತಾವು ಎಸಗಿದ ಅಕ್ರಮಗಳ ಬಗ್ಗೆ ರಾಜ ತನಿಖೆಗೆ ಆದೇಶ ನೀಡದೆ ಇರಲಿ ಎಂಬ ಕಾರಣಕ್ಕೆ ಅಥವಾ ತಮಗೆ ಇನ್ನೂ ಉನ್ನತ ಹುದ್ದೆ ನೀಡಲಿ ಎಂಬ ಕಾರಣಕ್ಕೆ ಅವರು ಔರಂಗಜೇಬನಿಗೆ ಅತಿಯಾದ ವಿಧೇಯತೆ ತೋರುತ್ತಿದ್ದರು. ಇದೆಲ್ಲ ರಾಜರ ಆಳ್ವಿಕೆಯಲ್ಲಿ ಸಾಮಾನ್ಯವೇ ಬಿಡಿ. ಆದರೆ ವಿಷಯ
ಏನೆಂದರೆ, ಔರಂಗಜೇಬ ಎಂಬ ವ್ಯಕ್ತಿ ಸಿಂಹಾಸನದ ಮೇಲೆ ಕುಳಿತ ಸಂತ ಖಂಡಿತ ಆಗಿರಲಿಲ್ಲ.
ಪಾಕಿಸ್ತಾನದಲ್ಲಿರುವ ಔರಂಗಜೇಬನ ಭಕ್ತರು ತಮ್ಮ 20ನೇ ಶತಮಾನದ ಹೀರೋ ಮೊಹಮ್ಮದ್ ಅಲಿ ಜಿನ್ನಾ ಒಬ್ಬ ಶಿಯಾ ಆಗಿದ್ದರು ಎಂಬ ವಿರೋಧಾಭಾಸದ ವಾದ ಮಂಡಿಸುತ್ತಾರೆ. ಶಿಯಾಗಳಿಗೆ ಔರಂಗಜೇಬನನ್ನು ಕಂಡರೆ ಆಗುತ್ತಿರಲಿಲ್ಲ. ಔರಂಗಜೇಬ ಕೂಡ ಶಿಯಾಗಳನ್ನು ತುಂಬಾ ವಿರೋಧಿಸುತ್ತಿದ್ದ. ಅವರನ್ನು ಘುಲ್-ಇ-ಬಯಾಬಾನಿ (ಹೆಣ ತಿನ್ನುವ ರಾಕ್ಷಸರು) ಅಥವಾ ಬತಿಲ್ ಮಜಬಾನ್ (ಧರ್ಮಭ್ರಷ್ಟರು) ಎಂದು ಅವನು ಕರೆಯುತ್ತಿದ್ದ. ಶಿಯಾ ಸುಲ್ತಾನರ ಆಳ್ವಿಕೆಯಲ್ಲಿದ್ದ ಬಿಜಾಪುರ ಮತ್ತು ಗೋಲ್ಕೊಂಡಾ ಮೇಲೆ ದಾಳಿ ನಡೆಸುವಾಗ ಔರಂಗಜೇಬ ಅದನ್ನು ಧರ್ಮ ಯುದ್ಧ ಎಂದು ಕರೆದಿದ್ದ. ಆ ವಾದವನ್ನು ಅವನದೇ ಶೇಖ್-ಉಲ್-ಇಸ್ಲಾಂ ಅಥವಾ ಮುಖ್ಯ ಧಾರ್ಮಿಕ ಸಲಹೆಗಾರ ಸಹಿಸಿಕೊಳ್ಳಲು ಆಗದೆ ರಾಜೀನಾಮೆ ನೀಡಿದ್ದ. ಆದರೆ ತನ್ನ ಸೇನೆಯಲ್ಲಿ ಅನಿವಾರ್ಯವಾಗಿ ಅವನು ಒಂದಷ್ಟು ಶಿಯಾ ಪರ್ಷಿಯನ್‌ಗಳನ್ನು ಇರಿಸಿಕೊಂಡಿದ್ದ.
ಏಕೆಂದರೆ ಅವರು ಶಕ್ತಿಶಾಲಿ ಯೋಧರಾಗಿದ್ದರು. ಅವರಿಗೂ ಸುನ್ನಿ ಮಾದರಿಯ ನಮಾಜ್ ಮಾಡು ವಂತೆ ಅವನು ಆದೇಶ ನೀಡಿದ್ದ. ಮೊಘಲ್ ಆಳ್ವಿಕೆಯಲ್ಲಿ ಜನರು ಉದಾರವಾದಿಯಾದ ಮತ್ತು ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದ ದಾರಾ ಶಿಕೋನ ಜತೆಗೆ ಇದ್ದರೇ ಹೊರತು ತೀವ್ರ ವಾದಿ ಧಾರ್ಮಿಕ ಚಿಂತನೆಗಳನ್ನು ಅನುಸರಿಸುತ್ತಿದ್ದ ಹಾಗೂ ಸಾಂಸ್ಕೃತಿಕ ಪರಂಪರೆಯ ಅರಿವಿ ಲ್ಲದೆ ಆಡಳಿತ ನಡೆಸುತ್ತಿದ್ದ ಔರಂಗಜೇಬನ ಜತೆಗೆ ಇರಲಿಲ್ಲ.
ಔರಂಗಜೇಬ ಸಿಂಹಾಸನವನ್ನು ಗೆದ್ದಿದ್ದನೇ ಹೊರತು ಜನರ ಹೃದಯವನ್ನು ಗೆದ್ದಿರಲಿಲ್ಲ. ದಾರಾ ಶಿಕೋ ಸೋತ ನಂತರ ಅವನ ತಲೆ ಕಡಿದಾಗ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಬರ್ನಿಯರ್ ದಾಖಲಿಸಿದ್ದಾನೆ. ಜನರು ಅಕ್ಷರಶಃ ಕಣ್ಣೀರು ಹಾಕಿದ್ದರು. ದಾರಾ ಶಿಕೋನ ಸಾವಿಗೆ ಮುಮ್ಮಲ ಮರುಗಿದ್ದರು. ಮುಂಡದಿಂದ ಬೇರ್ಪಟ್ಟಿದ್ದ ದಾರಾ ಶಿಕೋನ ರುಂಡವನ್ನು ನೋಡಿ ಸ್ವತಃ ಔರಂ ಗಜೇಬ ಕೂಡ ‘ಅಯ್ಯೋ ನನ್ನ ದುರ್ವಿಧಿಯೇ’ ಎಂದು ಅತ್ತಿದ್ದ.
ಶಹಜಹಾನ್ ತನ್ನ ಉತ್ತರಾಧಿಕಾರಿ ದಾರಾ ಶಿಕೋ ಆಗಲಿ ಎಂದು ಬಯಸಿದ್ದ. ಯುದ್ಧಗಳಲ್ಲಿ ಬಂದ ಸಂಪತ್ತನ್ನು ದಾರಾ ಶಿಕೋನ ಕುಟುಂಬಕ್ಕೇ ಅವನು ನೀಡುತ್ತಾ ಬಂದಿದ್ದ. ದಾರಾ ಶಿಕೋ ‘ವಹದ್-ಅಲ್ ವುಜೂದ್’ ಅಥವಾ ಎಲ್ಲಾ ಜನಾಂಗಗಳ ಏಕತೆಯಲ್ಲಿ ನಂಬಿಕೆ ಇರಿಸಿದ್ದ. ಅವನು ಹಿಂದೂ ಸಂತರು ಹಾಗೂ ಸಾಮಂತರ ಜತೆಗೆ ಬೌದ್ಧಿಕ ಮತ್ತು ಭಾವನಾತ್ಮಕ ಸಂಪರ್ಕ ಸೇತುವನ್ನು ಕಟ್ಟಿಕೊಂಡಿದ್ದ. ಅವನು ಗೋಕುಲದ ಗೋಸಾಯಿ ವಿಠ್ಠಲರಾಯಿಗೆ 1643ರಲ್ಲಿ ಬಳುವಳಿಯಾಗಿ ಒಂದಷ್ಟು ಭೂಮಿಯನ್ನು ಪಡೆಯಲು ಸಹಾಯ ಮಾಡಿದ್ದ.
ಪಂಜಾಬಿನ ಧಾರ್ಮಿಕನಾಯಕ ಬಾಬಾ ಲಾಲ್ ಜತೆಗೆ ಅವನು ನಡೆಸಿದ ಸುದೀರ್ಘ ಮಾತುಕತೆ ಗಳನ್ನು ಅಕ್ಷರ ಮತ್ತು ಚಿತ್ರಗಳ ರೂಪದಲ್ಲಿ ದಾಖಲಿಸಲಾಗಿದೆ. ತನ್ನಂಥ -ಕೀರನಿಗೆ ರಾಜನ ಸಿಂಹಾ ಸನ ಪಡೆದು ಏನಾಗಬೇಕಿದೆ ಎಂದು ಅವನು ಬಾಬಾ ಲಾಲ್ ಬಳಿ ಕೇಳಿದ್ದ. ಅದಕ್ಕೆ ಆ ಹಿಂದೂ ಸನ್ಯಾಸಿಯು, ‘ತನ್ನನ್ನು ತಾನು ಅರಿತುಕೊಂಡು, ತನಗಾಗಿ ಬದುಕದೆ ಜನರ ಸೇವೆ ಮಾಡಲು ರಾಜತ್ವ ಬೇಕು’ ಎಂದು ಹೇಳಿದ್ದ.
ದಾರಾ ಶಿಕೋ ಸಂಸ್ಕೃತವನ್ನು ಜ್ಞಾನದ ನಿಧಿ ಎಂದು ಗೌರವಿಸುತ್ತಿದ್ದ. ‘ಪ್ರಬೋಧ ಚಂದ್ರೋದಯ’ ಎಂಬ 11ನೇ ಶತಮಾನದ ಸಂಸ್ಕೃತ ನಾಟಕವನ್ನು ಸೂಫಿ ನಾಟಕವಾಗಿ ಪರಿವರ್ತಿಸಿ ಪರ್ಷಿಯನ್‌ಗೆ ಅನುವಾದ ಮಾಡಿದ ಬನ್ವಾಲಿ ದಾಸ್‌ಗೆ ಅವನು ಆಶ್ರಯ ನೀಡಿದ್ದ. ಅದ್ವೈತ ವೇದಾಂತದ ಗ್ರಂಥ ಗಳಾದ ‘ಅಷ್ಟಾವಕ್ರಗೀತಾ’, ‘ಆತ್ಮವಿಲಾಸ’ ಹಾಗೂ ‘ಭಗವದ್ಗೀತೆ’ಯನ್ನು ಪರ್ಷಿಯನ್ ಭಾಷೆಗೆ ಅನುವಾದಿಸಲು ಅವನು ಹಣ ನೀಡಿದ್ದ.
1656ರ ಚಳಿಗಾಲದಲ್ಲಿ ಅವನು ಕಾಶಿಯಲ್ಲಿ ಸಂಸ್ಕೃತ ಪಂಡಿತರ ಬೃಹತ್ ಕೂಟವೊಂದನ್ನು ಆಯೋಜಿಸಿ, ಅವರಿಂದ ಉಪನಿಷತ್ ಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿದ್ದ. ಅದು ಮರುವರ್ಷದ ಜುಲೈ ತಿಂಗಳಲ್ಲಿ ಪೂರ್ಣಗೊಂಡಿತ್ತು. ಅದಕ್ಕೆ ದಾರಾ ‘ಸಿರ್-ಇ-ಅಕ್ಬರ್’ (ದೊಡ್ಡ
ರಹಸ್ಯ) ಎಂದು ಶೀರ್ಷಿಕೆ ನೀಡಿ, ತಾನೇ ಸ್ವತಃ ಮುನ್ನುಡಿ ಬರೆದಿದ್ದ. ಅದರಲ್ಲಿ “ಇಸ್ಲಾಮಿನ ತೌಹೀದ್ (ದೇವರಲ್ಲಿ ಐಕ್ಯವಾಗುವ) ಸಿದ್ಧಾಂತವೇ ಉಪನಿಷತ್ ನಲ್ಲೂ ಕಂಡುಬರುತ್ತದೆ. ಇದು ಪವಿತ್ರ ಕುರಾನ್‌ಗೆ ಮೌಲ್ಯಯುತ ವ್ಯಾಖ್ಯಾನವಿದ್ದಂತೆ" ಎಂದು ಹೇಳಿದ್ದ.
ಮೂಢನಂಬಿಕೆಯ ವಿರೋಧಿಯಾಗಿದ್ದ ದಾರಾ, ಪರ್ಷಿಯನ್ ಮಾತನಾಡುವ ಅರ್ಮೇನಿಯಾದ ಪವಾಡ ಪುರುಷ ಶಾ ಸರ್ಮದ್‌ನ ಜತೆಗೂಡಿ ಧಾರ್ಮಿಕ ಸಾಮರಸ್ಯಕ್ಕಾಗಿ ಕೆಲಸ ಮಾಡಿದ್ದ. ಶಾ ಸರ್ಮದ್ ಭಾರತವನ್ನೇ ತನ್ನ ಮನೆಯಾಗಿಸಿಕೊಂಡು, ಎಲ್ಲಾ ಧರ್ಮಗಳೂ ದೇವರನ್ನು ಸೇರುವ ಬೇರೆ ಬೇರೆ ಮಾರ್ಗಗಳು ಎಂದು ಬೋಧಿಸುತ್ತಿದ್ದ. ಅವನು ಕುರಾನ್ ಗ್ರಂಥವನ್ನು ಗೌರವಿಸು ವಂತೆಯೇ, ಹಿಂದೂ ನಂಬಿಕೆಗಳನ್ನೂ ಪಾಲಿಸುತ್ತಿದ್ದ.
ಹಾಗೆಯೇ ಕ್ರಿಶ್ಚಿಯನ್ ಸನ್ಯಾಸಿಯಾಗಿ, ಯಹೂದಿಗಳ ರಬೈ ಆಗಿ, ಅದೇ ವೇಳೆ ಮುಸ್ಲಿಂ ಮೌಲ್ವಿಯಾ ಗಿಯೂ ಕಾಣಿಸಿಕೊಳ್ಳುತ್ತಿದ್ದ. ಸರ್ಮದ್‌ನನ್ನು ದಾರಾ ತನ್ನ ಮಾರ್ಗದರ್ಶಿ ಹಾಗೂ ತತ್ವಜ್ಞಾನದ ಗುರು ಎಂದು ಪರಿಗಣಿಸಿದ್ದ. 1661ರಲ್ಲಿ, ಅಥವಾ ಔರಂಗಜೇಬನ ಆಳ್ವಿಕೆಯ ಮೂರನೇ ವರ್ಷದಲ್ಲಿ, ಸರ್ಮದ್‌ನನ್ನು ಧರ್ಮದ್ರೋಹದ ಆರೋಪದ ಮೇಲೆ ತಲೆ ಕಡಿದು ಹತ್ಯೆ ಮಾಡಲಾಯಿತು. ಅವನನ್ನು ದೆಹಲಿಯಲ್ಲಿ ದಫನ್ ಮಾಡಿದರು.
ಚಕ್ರವರ್ತಿ ಶಹಜಹಾನ್‌ನ ಪರವಾಗಿ ಪುತ್ರ ದಾರಾ ಶಿಕೋ ಮೊಘಲ್ ಆಡಳಿತದಲ್ಲಿ ಹಿಂದೂಗಳ
ಸ್ಥಾನಮಾನ ಏನಿರಬೇಕು ಎಂಬ ಬಗ್ಗೆ ಚರ್ಚಿಸಲು ಅಲಹಾಬಾದ್‌ನ ಧಾರ್ಮಿಕ ಪಂಡಿತ ಶೇಖ್ ಮುಹಿಬುಲ್ಲಾ (1587-1648) ಬಳಿಗೆ ಹೋಗಿದ್ದ. ಅವನು ನೀಡಿದ ಉತ್ತರವೇ 17ನೇ ಶತಮಾನದಲ್ಲಿ ಜಾತ್ಯತೀತ ತೆಯ ವ್ಯಾಖ್ಯೆಯಾಗಿತ್ತು. “ಆಡಳಿತ ನಡೆಸುವವರಿಗೆ ಜನರ ಕಲ್ಯಾಣವೇ ಪ್ರಮುಖ ಉದ್ದೇಶವಾಗಿರಬೇಕು. ಆಗ ಆಡಳಿತದಲ್ಲಿ ನ್ಯಾಯ ಇರುತ್ತದೆ. ಜನರು ಆಸ್ತಿಕರಾಗಿರಲಿ ಅಥವಾ ನಾಸ್ತಿಕರಾಗಿರಲಿ, ಅವರು ದೇವರಿಂದ ಸೃಷ್ಟಿಯಾದವರೇ ಆಗಿರುತ್ತಾರೆ.
ಸರಕಾರ ಎಲ್ಲಾ ಪ್ರಜೆಗಳನ್ನೂ ಸಮಾನವಾಗಿ ಕಾಣಬೇಕು. ದೇವರು ಕಳಿಸಿದ ಪ್ರವಾದಿಯು ಎಲ್ಲ ಸತ್ಯವಂತರು ಹಾಗೂ ದುಷ್ಟರ ಬಗ್ಗೆಯೂ ಕರುಣಾಮಯಿಯೇ ಆಗಿರುತ್ತಾನೆ" ಎಂದು ಶೇಖ್ ಮುಹಿಬುಲ್ಲಾ ಹೇಳಿದ್ದ (ದಿ ಇಂಡಿಯನ್ ಮುಸ್ಲಿಮ್ಸ್, ಮಕ್ತುಬತ್-ಇ-ಶಾ ಮುಹಿಬುಲ್ಲಾ ಇಲಹಾ ಬಾದಿ, ಆಜಾದ್ ಲೈಬ್ರರಿ, ಅಲೀಘಡ ಮುಸ್ಲಿಂ ವಿವಿ). ಪ್ರಶ್ನೆಯೇನು ಅಂದರೆ, 17ನೇ ಶತಮಾನದ ಫ್ಯೂಡಲಿಸಂ ನಿರ್ಧಾರಗಳನ್ನು 21ನೇ ಶತಮಾನದ ಪ್ರಜಾಪ್ರಭುತ್ವದಲ್ಲಿ ವಾಸಿಸುವ ಜನರ ಮೇಲೆ ಏಕೆ ಹೇರಬೇಕು? ಮುಂಬರುವ ನನ್ನ ‘ಆಸ್ಟ್ರಾಲಜಿ ಇನ್ ದಿ ಮುಘಲ್ ಎಂಪೈರ್’ ಕೃತಿ ಯಲ್ಲಿ ಔರಂಗಜೇಬನ ಬದುಕಿನ ಕೊನೆಯ ದಿನಗಳ ಬಗ್ಗೆ ವಿಸ್ತಾರವಾಗಿ ಬರೆದಿದ್ದೇನೆ.
ಅವನೊಬ್ಬ ಒಳ್ಳೆಯ ವ್ಯಕ್ತಿಯಾಗಿ ಕೊನೆಯುಸಿರೆಳೆದು ಸ್ವರ್ಗಕ್ಕೆ ಹೋಗಲಿಲ್ಲ. ಅದರ ಬದಲು, ಅದ್ಭುತ ಸಾಮ್ರಾಜ್ಯವೊಂದರ ಅವನತಿಗೆ ಕಾರಣನಾದ ಅತೃಪ್ತ ಹಾಗೂ ತಿರಸ್ಕೃತ ನಾಯಕನಾಗಿ ಅಂತ್ಯ ಕಂಡ. ಅಂಥ ವ್ಯಕ್ತಿಯ ಬಗ್ಗೆ ಜನರಿಂದು ಕಿತ್ತಾಡುತ್ತಿದ್ದಾರೆ.
(ಲೇಖಕರು ಹಿರಿಯ ಪತ್ರಕರ್ತರು)