ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Harish Kera Column: ರಬ್ಬರ್: ಅಬ್ಬರ ಮತ್ತು ಅವನತಿ

ರಬ್ಬರ್ ಮರದ ನಡುಭಾಗದಲ್ಲಿ ಗೀರು ಮಾಡಿ, ಅದರಿಂದ ಹೊರಸೂಸುವ ಲ್ಯಾಟೆಕ್ಸ್ (ಹಾಲು) ಒಂದು ಕರಟದಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ಒಂದೆರಡು ಗಂಟೆಗಳಲ್ಲಿ ತೆಗೆಯದಿದ್ದರೆ ಗಟ್ಟಿಯಾಗಿ ಬಿಡುತ್ತದೆ. ಹಾಲನ್ನು ಸಂಗ್ರಹಿಸಿ ಡ್ರಮ್‌ಗಳಲ್ಲಿ ಹಾಕಿ ಅದಕ್ಕೆ ಅಮೋನಿಯಾ ಹಾಕಿಟ್ಟರೆ, ಒಂದು ತಿಂಗಳವರೆಗೂ ಕೆಡುವುದಿಲ್ಲ.

ಕಾಡುದಾರಿ

ರಬ್ಬರ್ ಮೊದಲು ಬಂದುದು ದಕ್ಷಿಣ ಕನ್ನಡದ ಸುಳ್ಯ ತಾಲೂಕಿಗೆ. ಇಲ್ಲಿನ ದೊಡ್ಡ ತೋಟ, ದುಗಲಡ್ಕ, ನೆಲ್ಯಾಡಿ ಭಾಗದಲ್ಲಿ ವ್ಯಾಪಕವಾಗಿ ಕಾಡು ಕಡಿದು ಸರಕಾರವೇ ನೆಡುತೋಪು ಗಳನ್ನು ಸೃಷ್ಟಿಸಿತು. ನಂತರ ಬೆಳ್ತಂಗಡಿಯ ಹಲವು ಭಾಗಗಳಲ್ಲಿ ರಬ್ಬರ್ ತೋಟಗಳು ಸೃಷ್ಟಿಯಾದವು. ಕಾರ್ಕಳ, ಪುತ್ತೂರು, ಹೀಗೆ ಎಲ್ಲ ತಾಲೂಕು ಗಳೂ ರಬ್ಬರ್‌ಮಯವಾದವು. ಈ ನೂರಾರು ಎಕರೆ ರಬ್ಬರು ಕೂಪುಗಳಿಗೆ ಎಲೆ ಉದುರು ರೋಗ, ಕಪ್ಪು ಚುಕ್ಕೆ ರೋಗ ಅಮರಿಕೊಳ್ಳುತ್ತಿದ್ದವು.

ಎಪ್ಪತ್ತರ ದಶಕದವರೆಗೂ ದಕ್ಷಿಣ ಕನ್ನಡ ಜಿಲ್ಲೆ ಭತ್ತದ ಗದ್ದೆಗಳಿಂದ ಕಂಗೊಳಿಸುತ್ತಿತ್ತು. ನಂತರ ಅಡಿಕೆ, ತೆಂಗಿನ ತೋಟಗಳು, ಅವುಗಳ ನಡುವೆ ಕಾಳುಮೆಣಸು ಬಳ್ಳಿ, ಕಾಫಿ, ಕೋಕೋ ಗಿಡಗಳು ಬಂದವು. ಅಲ್ಲಲ್ಲಿ ತರಕಾರಿ, ಹಣ್ಣು ಮತ್ತು ಮಲ್ಲಿಗೆ ಹೂವು. ಬೆರಳೆಣಿಕೆ ಯಷ್ಟು ಮಾವಿನ ತೋಪುಗಳು. ಎಂಬತ್ತರ ದಶಕದಲ್ಲಿ ಇಲ್ಲಿ ಗದ್ದೆ ಬೇಸಾಯ ಕಡಿಮೆ ಯಾಗತೊಡಗಿತು.

ಹೊಸ ಬೆಳೆಯೊಂದು ಇಲ್ಲಿಗೆ ಆಗಮಿಸಿತು- ರಬ್ಬರ್. ಅದು ದಕ್ಷಿಣದ ಕೇರಳದ ಕಡೆಯಿಂದ ಯಶಸ್ವಿ ಅನ್ನಿಸಿಕೊಂಡು ಬಂತು. ಕೇರಳದ ಹಾಗೂ ತಮಿಳುನಾಡಿನ ಕ್ರಿಶ್ಚಿಯನ್ನರು ಈ ಬೆಳೆಯ ಹೊಣೆ ಹೊತ್ತಿದ್ದರು. ಅವರನ್ನು ನಾವು ಕೊಚ್ಚಿ ಕ್ರಿಶ್ಚಿಯನ್ಸ್ ಎಂದು ಕರೆಯು ತ್ತಿದ್ದೆವು.

ವಿಚಿತ್ರವೆಂದರೆ ಕ್ರೈಸ್ತರಲ್ಲದವರೂ ಈ ಗುಂಪಿನಲ್ಲಿದ್ದರು. ವಿರುದ್ದಾಸಲಂ, ಉದಯಮುತ್ತು, ಯೇಸುಮಗನ್, ಅರುಳ್ದಾಸ್, ಇನಿಯನ್ ಎಂಬುದೆಲ್ಲ ಆಗ ನಮಗೆ ವಿಚಿತ್ರ ಹೆಸರುಗಳು. ರಬ್ಬರ್ ಮೊದಲು ಬಂದುದು ದಕ್ಷಿಣ ಕನ್ನಡದ ಸುಳ್ಯ ತಾಲೂಕಿಗೆ. ಇಲ್ಲಿನ ದೊಡ್ಡತೋಟ, ದುಗಲಡ್ಕ, ನೆಲ್ಯಾಡಿ ಭಾಗದಲ್ಲಿ ವ್ಯಾಪಕವಾಗಿ ಕಾಡು ಕಡಿದು ಸರಕಾರವೇ ನೆಡುತೋಪು ಗಳನ್ನು ಸೃಷ್ಟಿಸಿತು.

ನಂತರ ಬೆಳ್ತಂಗಡಿಯ ಹಲವು ಭಾಗಗಳಲ್ಲಿ ರಬ್ಬರ್ ತೋಟಗಳು ಸೃಷ್ಟಿಯಾದವು. ಕಾರ್ಕಳ, ಪುತ್ತೂರು, ಹೀಗೆ ಎಲ್ಲ ತಾಲೂಕುಗಳೂ ರಬ್ಬರ್‌ಮಯವಾದವು. ಈ ನೂರಾರು ಎಕರೆ ವಿಸ್ತೀರ್ಣದ ರಬ್ಬರು ಕೂಪುಗಳಿಗೆ ಎಲೆ ಉದುರು ರೋಗ, ಕಪ್ಪು ಚುಕ್ಕೆ ರೋಗಗಳೆಲ್ಲ ಅಮರಿಕೊಳ್ಳುತ್ತಿದ್ದವು. ಆಗ ಮಳೆಗಾಲದ ಮೊದಲು ಮರಗಳ ಮೇಲಿನಿಂದ ಕೀಟನಾಶಕ ದ್ರಾವಣ ಸಿಂಪಡಿಸಲಾಗುತ್ತಿತ್ತು.

ಇದನ್ನೂ ಓದಿ:Harish Kera Column: ಕೆ ಪಾಪ್‌ ಖಳನಾಯಕ ಎನ್ನುವ ಮುನ್ನ...

ಆಗಿನ ಚಿಕ್ಕ ಮಕ್ಕಳಿಗೆ ಅದೊಂದು ಅದ್ಭುತ ದೃಶ್ಯ. ಹೆಲಿಕಾಪ್ಟರ್‌ನಿಂದ ತಂದು ಸಿಂಪಡಿಸ ಲಾಗುತ್ತಿತ್ತು. ಆಗ ತಾಲೂಕು ಕೇಂದ್ರದಲ್ಲಿ ಮಾತ್ರ ಇದ್ದ ಹೆಲಿಪ್ಯಾಡ್‌ಗಳಲ್ಲಿ ಕೀಟನಾಶಕ ತುಂಬಿಕೊಂಡು ಹೆಲಿಕಾಪ್ಟರ್‌ಗಳು ಕೂಪುಗಳಿದ್ದ ಕಡೆಗೆ ಬೊರೋಂ ಎಂದು ಸದ್ದು ಮಾಡುತ್ತ ಬಂದು ಸುತ್ತು ಹಾಕುತ್ತ ತುಂತುರು ಮಳೆ ಸುರಿದಂತೆ ಬೋರ್ಡೋ ಮಿಕ್ಸ್ ಮತ್ತಿತರ ಮದ್ದು ಸಿಂಪಡಿಸಿ ಹೊರಟುಹೋಗುತ್ತಿದ್ದವು.

ಅಷ್ಟು ಹತ್ತಿರದಿಂದ ನಮಗೆಲ್ಲ ಹೆಲಿಕಾಪ್ಟರ್ ಕಾಣಲು ಸಿಕ್ಕಿದ್ದು ಅದೇ ಮೊದಲು. ಆಗ ಅಡಿಕೆ ತೆಂಗಿಗೆ ತೃಪ್ತಿಪಟ್ಟುಕೊಂಡಿದ್ದ ಕೃಷಿಕರನ್ನು ‘ನೀವೂ ರಬ್ಬರ್ ಪ್ರಯತ್ನಿಸಿ’ ಎಂದು ಪುಸಲಾಯಿಸಿದರು. ಮೊದಮೊದಲು ರಬ್ಬರ್ ಬೆಳೆಯಲು ಕೃಷಿಕರಲ್ಲಿ ಅಷ್ಟೊಂದು ಉತ್ಸಾಹ ಇರಲಿಲ್ಲ.

ಯಾಕೆಂದರೆ ರಬ್ಬರ್‌ಗೆ ಆಗಿನ್ನೂ ಸ್ಥಳೀಯ ಮಾರುಕಟ್ಟೆ ಸೃಷ್ಟಿಯಾಗಿರಲಿಲ್ಲ. ಅಡಿಕೆ ಮಧ್ಯೆ ಕೋಕೋ - ಕಾಳುಮೆಣಸು ಬೆಳೆದಂತೆ ಎಡೆಬೆಳೆಯನ್ನು ರಬ್ಬರ್ ಗಿಡಗಳ ನಡುವೆ ಬೆಳೆಯಲಾಗುವುದಿಲ್ಲ. ಆಮೇಲೆ, ಅದು ಮಣ್ಣಿನ ಜೀವಸತ್ವವನ್ನೆಲ್ಲ ಹೀರಿಕೊಳ್ಳುತ್ತದೆ ಎಂಬ ಭಯ. ನಿಧಾನವಾಗಿ ಈ ಆತಂಕಗಳೆಲ್ಲ ಮಾಯವಾಗಿ, ಆ ಜಾಗದಲ್ಲಿ ಅದು ತರುವ ಹಣದ ಚಿತ್ರಣ ಮೂಡತೊಡಗಿತು.

ಅಡಿಕೆ ತೋಟಗಳ ಸುತ್ತಮುತ್ತ ಖಾಲಿ ಜಾಗ ಇದ್ದ ಎಲ್ಲರೂ ರಬ್ಬರ್ ಗಿಡ ಹಾಕಿದರು. ಅದು ಬೆಳೆದು ಲ್ಯಾಟೆಕ್ಸ್ ನೀಡಲು ಐದಾರು ವರ್ಷ ತೆಗೆದುಕೊಳ್ಳುತ್ತದೆ. ನಂತರ ಇಪ್ಪತ್ತು ವರ್ಷ ಇಳುವರಿ ನೀಡುತ್ತದೆ. ಆರಂಭದ ಐದು ವರ್ಷ ನೀರು, ಮದ್ದು ಕೊಟ್ಟು ಸಾಕಿದರೆ ಸಾಕು. ನಂತರ ಮೇಂಟೇನೆನ್ಸ್ ಎಂಬುದೇನೂ ಇಲ್ಲ.

ಮಳೆಗಾಲದಲ್ಲಿ ಲ್ಯಾಟೆಕ್ಸ್ ಸಂಗ್ರಹಿಸುವ ಭಾಗಕ್ಕೆ ಪ್ಲಾಸ್ಟಿಕ್ ಆವರಣ ಕಟ್ಟುವುದೊಂದು ಹೊರತುಪಡಿಸಿದರೆ ಇನ್ನೇನೂ ಖರ್ಚಿಲ್ಲ ಎಂಬುದು ಇದರ ಆಕರ್ಷಕ ಭಾಗ. ಎಂಬತ್ತು ತೊಂಬತ್ತರ ದಶಕಗಳು ದಕ್ಷಿಣ ಕನ್ನಡದಲ್ಲಿ ರಬ್ಬರ್‌ನ ವಿಜೃಂಭಣೆಯ ದಿನಗಳು.

ರಬ್ಬರ್ ಮರದ ನಡುಭಾಗದಲ್ಲಿ ಗೀರು ಮಾಡಿ, ಅದರಿಂದ ಹೊರ ಸೂಸುವ ಲ್ಯಾಟೆಕ್ಸ್ (ಹಾಲು) ಒಂದು ಕರಟದಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ಒಂದೆರಡು ಗಂಟೆಗಳಲ್ಲಿ ತೆಗೆಯದಿದ್ದರೆ ಗಟ್ಟಿಯಾಗಿ ಬಿಡುತ್ತದೆ. ಹಾಲನ್ನು ಸಂಗ್ರಹಿಸಿ ಡ್ರಮ್‌ಗಳಲ್ಲಿ ಹಾಕಿ ಅದಕ್ಕೆ ಅಮೋನಿಯಾ ಹಾಕಿಟ್ಟರೆ, ಒಂದು ತಿಂಗಳವರೆಗೂ ಕೆಡುವುದಿಲ್ಲ.

rubber R

ಹಾಲನ್ನು ಟಂಬ್ಲರ್ʼಗಳಲ್ಲಿ ಸುರಿದು ಆಸಿಡ್ ಹಾಕಿದರೆ ಮರುದಿನಕ್ಕೆ ಮೆತ್ತನೆಯ ಹಾಳೆ ಯಾಗುತ್ತದೆ. ಆ ಹಾಳೆಯನ್ನು ಕಬ್ಬಿನ ಹಾಲು ತೆಗೆಯುವ ಮೆಶಿನ್‌ನಂಥ ಯಂತ್ರದಲ್ಲಿ ತುರುಕಿ ತೆಗೆದರೆ ಅಚ್ಚುಗಳುಳ್ಳ ರಬ್ಬರ್ ಶೀಟ್ ಸಿದ್ಧ. ಅದು ಹತ್ತು ದಿನ ಬಿಸಿಲಲ್ಲಿ ಅಥವಾ ಹೊಗೆಗೂಡಿನಲ್ಲಿ ಒಣಗಿ ಜೇನಿನ ಬಣ್ಣಕ್ಕೆ ಬಂದರೆ ಫಸ್ಟ್ ಕ್ಲಾಸ್ ಮೊದಲ ದರ್ಜೆ ರಬ್ಬರ್. ತೊಂಬತ್ತರ ದಶಕದಲ್ಲಿ ಇದರ ಕ್ರಯ ಕಿಲೋಗೆ ಮುನ್ನೂರರವರೆಗೂ ಹೋಯಿತು.

ಹಾಲನ್ನೂ ಕೊಡುವವರಿದ್ದಾರೆ- ಅದರ ದರ ಬೇರೆ. ಹಾಲು ಕರಟದಿಂದ ತೆಗೆಯದಿದ್ದರೆ, ಅಥವಾ ತೆಗೆದ ಮೇಲೂ ಉಳಿದು ಗಟ್ಟಿಯಾದರೆ ಆ ಸ್ಕ್ರೇಪ್‌ಗೆ ಬೇರೆಯೇ ದರ. ಈಗ ರಬ್ಬರು ಮಲೆನಾಡು- ಪಶ್ಚಿಮಘಟ್ಟದ ಬಹುತೇಕ ಜಿಲ್ಲೆಗಳನ್ನು ಆಕ್ರಮಿಸಿತು.

ಒಂದೆರಡು ಎಕರೆ ಜಮೀನು ಹೊಂದಿದ ಸಣ್ಣ ರೈತರು ಕೂಡ ಮನೆ ಪಕ್ಕದಲ್ಲಿ ಹತ್ತಾರು ರಬ್ಬರ್ ಗಿಡ ನೆಟ್ಟು ತಾವೇ ಹಾಲು ತೆಗೆದು ಸ್ವಾಭಿಮಾನಿ ಬದುಕು ಬಾಳತೊಡಗಿದರು. ಅಡಿಕೆಗೆ ದರ ಕುಸಿದಾಗ ರಬ್ಬರ್, ರಬ್ಬರ್‌ಗೆ ಬೆಲೆ ಇಳಿದಾಗ ಅಡಿಕೆ ರೈತರನ್ನು ಮೇಲೆತ್ತಿ ಹಿಡಿಯಿತು.

ಹೀಗಾಗಿ ದಕ್ಷಿಣ ಕನ್ನಡದ ಕೃಷಿಕರು ಎಂದಿಗೂ ಸಾಮೂಹಿಕವಾಗಿ ಬೆಳೆನಾಶ- ಬೆಲೆ ಕುಸಿತದ ದುರ್ಭರ ದಿನಗಳನ್ನು ಎದುರಿಸಲಿಲ್ಲ. ಸಣ್ಣ ಮನೆಗಳಲ್ಲಿ ಬೈಕುಗಳು, ಜೀಪುಗಳು, ದೊಡ್ಡವರ ಮನೆಗಳಲ್ಲಿ ಎಸ್‌ಯುವಿಗಳು ರಾರಾಜಿಸಿದವು. ಮದುವೆ ಮುಂಜಿ ಉಪನಯನ ಗಳೆಲ್ಲ ಬಹಳ ಗೌಜಿಯಾಗಿ ನಡೆಯತೊಡಗಿದವು.

ಊರೊಟ್ಟಿನ ಜಾತ್ರೆ, ಕಂಬಳ, ಗುಡಿ ಬ್ರಹ್ಮಕಲಶ, ಹೊಸ ಶಾಲೆಗಳ ನಿರ್ಮಾಣ, ಭಜನಾ ಮಂದಿರ ಕಟ್ಟೋಣಗಳೆಲ್ಲ ಹೊಸ ರಂಗು ಪಡೆದುಕೊಳ್ಳತೊಡಗಿದವು. ಕೈಯಲ್ಲಿ ಸ್ವಲ್ಪ ಕಾಸು ಆಡತೊಡಗಿತು. ಕೃಷಿ ದಿನಗೂಲಿ ಮೌಲ್ಯ ಹೆಚ್ಚಿತು.

ಇಂದು ರಾಜ್ಯದ ಅತಿ ಹೆಚ್ಚು ಕೃಷಿ ದಿನಗೂಲಿ ನೀಡುವ ಜಿ ದಕ, ಉಡುಪಿ. ವಿದ್ಯಾವಂತ ಮಕ್ಕಳು ರಾಜಧಾನಿ ಸೇರಿಕೊಂಡರೆ, ಅಷ್ಟೇನೂ ವಿದ್ಯೆ ಕಲಿಯದವರೆಲ್ಲ ತಮ್ಮೂರಿನ ಒಂದೊಂದು ಗುಂಪು ಕಟ್ಟಿಕೊಂಡರು. ಕೆಲವರು ಕೇಸರಿ, ಕೆಲವರು ಹಸಿರು. ಗುಂಪು ಚಕಮಕಿಗಳು ಹೆಚ್ಚಾಗತೊಡಗಿದವು.

ಎಪ್ಪತ್ತರ ದಶಕದ ದಕ್ಷಿಣ ಕನ್ನಡದ ಸುಳ್ಯ, ನೆಲ್ಯಾಡಿ, ಬೆಳ್ತಂಗಡಿಯ ಹಲವು ಕಡೆಗಳಲ್ಲಿ ಕೇರಳ- ತಮಿಳುನಾಡಿನ ಸಾವಿರಾರು ಜನರು ಬಂದು ಕಾಲನಿಗಳನ್ನು ಕಟ್ಟಿಕೊಂಡರು. ಇವರಲ್ಲಿ ಹೆಚ್ಚಿನವರು ಕ್ರೈಸ್ತರು ಹಾಗೂ ರಬ್ಬರ್ ಲ್ಯಾಟೆಕ್ಸ್ ತೆಗೆಯುವ ಕೆಲಸ ಮಾಡು ತ್ತಿದ್ದವರು. ಇದೀಗ ಇವರ ಮೂರನೇ ತಲೆಮಾರು ಕೆಲಸ ಮಾಡುತ್ತಿದೆ.

ಅಂದು ನೂರು ರೂಪಾಯಿ ದಿನಗೂಲಿ ಪಡೆದು ಹಾಲು ತೆಗೆಯುತ್ತಿದ್ದ ಇವರಿಗೆ ಈಗ ಸಿಕ್ಕಾಪಟ್ಟೆ ಬೇಡಿಕೆ. ಮುಂಜಾನೆ ಐದು ಗಂಟೆಯಿಂದ ಹತ್ತರವರೆಗೆ ಮಾತ್ರ ಕೆಲಸ. ಕಾರಣ ಬಿಸಿಲೇರುವ ಮೊದಲೇ ಹಾಲು ತೆಗೆಯಬೇಕು. ಹೀಗೆ ಬಂದವರು ಒಂದಾಗಿ ಬದುಕಿದರು. ಇಲ್ಲಿನ ಜನಜೀವನದೊಂದಿಗೂ ಹಾಲು ಜೇನಿನಂತೆ ಒಂದಾದರು.

ತಮ್ಮದೇ ಪುಟ್ಟ ಚರ್ಚು, ಮಾರಿಗುಡಿ ಇತ್ಯಾದಿ ಕಟ್ಟಿಕೊಂಡರು. ನಿಧಾನವಾಗಿ ಇತರ ಉದ್ಯಮಗಳನ್ನು ಕಟ್ಟಿಕೊಂಡು ಹಣ ಮಾಡಿದವರೂ ಇದ್ದಾರೆ. ಆದರೆ ಎಂದೂ ಮೂಲ ನಿವಾಸಿಗಳನ್ನು ತಡಕಿಕೊಂಡು ತಗಾದೆ ಸೃಷ್ಟಿಸಲಿಲ್ಲ. ಅಕ್ಕಪಕ್ಕದ ಜಿಲ್ಲೆಗಳ ಕಾಫಿ- ಟೀ ತೋಟಗಳಿಗೆ ಬಂದ ಬಿಹಾರಿ- ಉಪ್ರ- ಮಪ್ರದವರಿಗೆ ಹೋಲಿಸಿದರೆ ಇವರಲ್ಲಿ ಕ್ರೈಮ್ ರೇಟ್ ಬಹಳಷ್ಟು ಕಡಿಮೆ. ಇವರ ಬದುಕಿನ ರೀತಿ, ಹಬ್ಬ ಹರಿದಿನಗಳೆಲ್ಲ ನಮಗಿಂತ ಭಿನ್ನವಾಗಿ ದ್ದವು.

ಅದು ನಮಗೆ ಎದುರಾದ ಪುಟ್ಟದೊಂದು ಕಲ್ಚರ್ ಶಾಕ್. ಇಂದು ಅದೆಲ್ಲ ಸಾಮಾನ್ಯ ಸಂಗತಿ. ವರ್ಷದ ಹಲವು ಋತುಗಳಲ್ಲಿ ನಾನಾ ಬಗೆಯಲ್ಲಿ ಅವತಾರ ತಾಳುವ ರಬ್ಬರ್ ತೋಟಗಳಲ್ಲಿ ಓಡಾಡುವುದೇ ಒಂದು ಆನಂದದ ಸಂಗತಿ. ಕೃಷಿಕರಲ್ಲದವರಿಗೆ ಅದರ ಆನಂದ ಗೊತ್ತಾಗಲಾರದು. ಬೇಸಿಗೆಯಲ್ಲಿ ಮರಗಳೆಲ್ಲ ಎಲೆಗಳನ್ನು ಉದುರಿಸಿ ಭೂಮಿ ಯಿಂದ ಹೀರಿದ ನೀರನ್ನು ಕಾಂಡಗಳಿಗಾಗಿ ಇಟ್ಟುಕೊಂಡಿರುತ್ತವೆ.

ಆಗ ಹಾಲಿನ ಇಳುವರಿ ಕಡಿಮೆ. ಮಳೆಗಾಲದಲ್ಲಿ ಹಾಲು- ನೀರು ಮಿಕ್ಸ್ ಆಗಿ ಬಿಡುವ ಸಂಭವ ಹೆಚ್ಚು- ಹೀಗಾಗಿ ಕರಟಗಳಿಗೆ ಪ್ಲಾಸ್ಟಿಕ್ ಹೊದಿಕೆ. ಸೆಪ್ಟೆಂಬರ್ ಅಕ್ಟೋಬರ್‌ನಲ್ಲಿ ಮರಗಳೆಲ್ಲ ತಲೆತುಂಬ ಎಲೆಗಳನ್ನು ದಟ್ಟವಾಗಿ ಧರಿಸಿಕೊಂಡು, ದಟ್ಟ ಕಾಡಿನ ಒಳಗೆ ಹೊಕ್ಕ ಅನುಭವ ನೀಡುತ್ತವೆ.

ಲ್ಯಾಟೆಕ್ಸ್‌ನ ಪರಿಮಳ ವಿಶಿಷ್ಟವಾದದ್ದು. ಅದು ರಬ್ಬರ್ ತೋಟ ಇಲ್ಲಿದೆ ಎಂದು ಕಾಲು ಕಿಲೋಮೀಟರ್ ದೂರದಿಂದಲೇ ನಮ್ಮ ಮೂಗಿಗೆ ಅರಿವು ಮೂಡಿಸುತ್ತದೆ. ಮರದ ಕಾಂಡಕ್ಕೆ ಗೀರೆಳೆದು ಹಾಲು ಇಳಿಸುವುದೊಂದು ಬಲು ನಾಜೂಕಾದ ಕಾಯಕ.

ಅದು ಹೆಚ್ಚು ಆಳವೂ ಮೇಲುಮೇಲಿನದೂ ಆಗಬಾರದು. ಮರವನ್ನು ಗೀರಿ ತೆಗೆದ ಕಾಂಡದ ಸಿಪ್ಪೆಗಳು, ಶಾರ್ಪ್‌ನರ್‌ಲ್ಲಿ ಪೆನ್ಸಿಲ್ ಅನ್ನು ಹೆರೆದು ಮೊನಚು ಮಾಡುವಾಗ ಎದ್ದು ಬರುವ ಸಿಪ್ಪೆಯಂತೆಯೇ ಸೊಗಸು. ಅದನ್ನೇ ಸಂಗ್ರಹಿಸಿ ಒಲೆಗೆ ಒಟ್ಟುವವರೂ ಇzರೆ.ರಬ್ಬರ್ ಬೀಜಗಳು ಆರಂಭದಲ್ಲಿ ನಮಗೆ ಗಾಬರಿ ಹುಟ್ಟಿಸಿದ್ದವು.

ಒಂದೊಂದು ಮರದಲ್ಲೂ ನೂರಾರು ಕಾಯಿ ಬಿಡುತ್ತಿದ್ದವು. ಇವು ತ್ರಿದಳ ಧಾನ್ಯದಂತೆ ಮೂರು ವಿಭಾಗದ್ದು. ಒಂದೊಂದರಲ್ಲೂ ಒಂದೊಂದು ಬೀಜ. ಬೇಸಿಗೆಯಲ್ಲಿ ಇವು ಒಣಗಿ, ನಡುಹಗಲಲ್ಲಿ ಫಟ್ಟನೆ ಸಿಡಿದುಬಿಡುತ್ತಿದ್ದವು. ಹಾಗೆ ಒಂದು ಮರದಿಂದ ಸಿಡಿದಾಗ ಇನ್ನೊಂದು ಮರಕ್ಕೋ ಬೀಜಕ್ಕೋ ತಾಕಿ, ಅದೂ ಫಟ್ಟೆಂದು ಸಿಡಿದು, ಅದು ಇನ್ನೊಂದಕ್ಕೆ ಬಡಿದು ಇಡೀ ತೋಟ ಫಟ್‌ ಫಟ್‌ ಶಬ್ದಮಯವಾಗಿ ಬಿಡುತ್ತದೆ.

ಕೆಲವೊಮ್ಮೆ ರಾತ್ರಿಯಲ್ಲೂ ಹೀಗೆ ಸಿಡಿಯುವುದಿದೆ. ನಮಗಿದೆಲ್ಲ ಗೊತ್ತಿಲ್ಲದ ಆರಂಭ ಕಾಲದಲ್ಲಿ, ಮಲೆನಾಡಿನ ಕಾಡಿನ ನಡುವೆ, ನಡುರಾತ್ರಿ ಇದ್ದಕ್ಕಿದ್ದಂತೆ ಇಡೀ ತೋಟ ಫಟ್‌ ಫಟ್‌ ಎಂದು ಸದ್ದು ಮಾಡತೊಡಗಿದರೆ ಹೇಗಾಗಬೇಡ? ಇಲ್ಲದ ದೆವ್ವ ಪಿಶಾಚಿಗಳೆ ತಲೆಯಲ್ಲಿ ಪ್ರತ್ಯಕ್ಷವಾಗಿ ಬಿಡುತ್ತಿದ್ದವು.

ಏನನ್ನೋ ಬರೆಯಬೇಕಾಗಿತ್ತು. ನೆನಪುಗಳು ನುಗ್ಗಿ ಬಂದವು. ಹೇಳಬೇಕಾಗಿದ್ದುದು ಇದು- 2010-20ರ ನಡುವೆ ರಬ್ಬರ್ ಬೆಲೆ ಸಮೃದ್ಧಿ ಮುಟ್ಟಿತ್ತು. ಈಗ ಅದರ ಅರ್ಧ ದರಕ್ಕೆ ಇಳಿದಿದೆ. ಕಾರಣ, ಇಂಡೋನೇಷ್ಯಾ, ವಿಯೆಟ್ನಾಮ್, ಥಾಯ್ಲೆಂಡ್‌ಗಳಿಂದ ರಬ್ಬರ್ ಆಮದು ಮಾಡಿ ಕೊಳ್ಳಲಾಗುತ್ತಿದೆ.

ಕಿಲೋಗೆ ಕನಿಷ್ಠ 258 ರು. ಆದರೂ ಬೆಂಬಲ ಬೆಲೆ ನೀಡಬೇಕು ಎಂಬುದು ಬೆಳೆಗಾರರ ಬೇಡಿಕೆ. ಕುಶಲಿ ಕೆಲಸಗಾರರೂ ಈಗ ಕಡಿಮೆ. ಇರುವವರಿಗೆ ಬಹಳ ಬೇಡಿಕೆ ಮತ್ತು ದುಬಾರಿ ದರ. ಕೆಲವೆಡೆ 60:40 ದರ. ಅಂದರೆ ಹಾಲು ತೆಗೆದುಕೊಟ್ಟು ಹೋಗುವವನಿಗೆ ಅದರ 60 ಶೇಕಡ, ರಬ್ಬರ್ ಬೆಳೆದ ಮಾಲೀಕನಿಗೆ 40 ಶೇಕಡ ದುಡ್ಡು.

ಇಂಥ ಅವೈಜ್ಞಾನಿಕ ಪರಿಸ್ಥಿತಿ ಬೇರೆ ಎಲ್ಲೂ ಇರಲಿಕ್ಕಿಲ್ಲ. ದೇಶದಲ್ಲಿ ಕರ್ನಾಟಕವೇ ರಬ್ಬರ್ ಬೆಳೆಗೆ ತೃತೀಯ ಸ್ಥಾನಿ, ರಾಜ್ಯದಲ್ಲಿ ದಕ್ಷಿಣ ಕನ್ನಡವೇ ಮೊದಲ ಸ್ಥಾನಿ. ಎತ್ತರ ತಲುಪಿದ ಒಂದು ಬೆಳೆ, ಬೆಲೆ ಬೀಳುವುದು ಎಂದರೆ ಒಂದು ಸಮಾಜ, ಸಮುದಾಯ, ಜನಜೀವನ ಎಲ್ಲ ಹಳ್ಳ ಹಿಡಿಯುವುದೆಂದೇ ಅರ್ಥ. ಇನ್ನಷ್ಟು ಈ ಬಗ್ಗೆ ಹೇಳಲಿದೆ- ಅದೆಲ್ಲ ಇನ್ನೊಮ್ಮೆ.

ಹರೀಶ್‌ ಕೇರ

View all posts by this author