Shashidhara Halady Column: ಹರನಗುಡ್ಡೆಯಲ್ಲಿ ಕಾಡುಹಣ್ಣುಗಳ ಹುಡುಕಾಟ !
ಹರನಗುಡ್ಡೆಗೆ ಸಾಗುವಾಗ ಸಿಗುವ ಹಾಡಿಯನ್ನು ದಾಟಿದರೆ ವಿಶಾಲ ಮೈದಾನ ಸಿಗುತ್ತದೆ. ಮುರಕ ಲ್ಲಿನ ಹಾಸು ಇದ್ದ ಆ ಎತ್ತರ ಪ್ರದೇಶದಲ್ಲಿ ದೊಡ್ಡ ಮರಗಳು ಕಡಿಮೆ. ಅಲ್ಲಲ್ಲಿ ಕುರುಚಲುಗಿಡಗಳು, ಮಿಕ್ಕಂತೆ ಆ ಪ್ರದೇಶದ ತುಂಬಾ ‘ಕರಡ’ ಬೆಳೆಯುತ್ತಿತ್ತು. ಅಪರೂಪ ಕ್ಕೆಂಬಂತೆ ಅಲ್ಲಿ ಮಾವಿನ ಮರವೂ ಬೆಳೆದಿ ದ್ದವು.

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ
ಎಲ್ಲಾ ಕಡೆ ರಣರಣ ಬಿಸಿಲು ಆರಂಭವಾಗಿದೆ. ಕಲಬುರ್ಗಿ, ರಾಯಚೂರು 42 ಡಿಗ್ರಿ ಎನ್ನುತ್ತಿದ್ದಾರೆ. ಹವಾನಿಯಂತ್ರಿತ ನಗರ ಎಂದೇ ಮೊನ್ನೆ ಮೊನ್ನೆ ತನಕ ಪ್ರಸಿದ್ಧವಾಗಿದ್ದ ಬೆಂಗಳೂರಿನಲ್ಲಿ 35 ಡಿಗ್ರಿ ಅಂತೆ! ಕರಾವಳಿಯ ಭಾಗದಲ್ಲಿ ಥರ್ಮಾಮೀಟರ್ 34 ತೋರಿಸಿದರೂ, ‘ಫೀಲಿಂಗ್ 38’ ಎಂದಿದ್ದಾರೆ. ಬೇಸಗೆಯ ಬಿಸಿಲು, ಬೆವರು, ತಾಪ, ಧಗೆ ಎಲ್ಲವೂ ನಮ್ಮ ರಾಜ್ಯದವರಿಗೆ ಸಾಮಾನ್ಯ ಎನಿಸಿದ್ದರೂ, ಯುಗಾದಿ ಹಬ್ಬಕ್ಕಿಂತ ಮುಂಚಿನ ದಿನಗಳಲ್ಲಿ ಈ ರೀತಿಯ ತಾಪಮಾನ, ಧಗೆ ತುಸು ಹೆಚ್ಚೇ ಎನ್ನ ಬಹುದು. ಬಹುಶಃ ಇನ್ನು ಮುಂದಿನ ವರ್ಷಗಳಲ್ಲಿ ಇದೇ ರೀತಿ ತಾಪಮಾನ ಏರುತ್ತಾ ಹೋಗು ತ್ತದೋ ಏನೋ! ಹವಾಮಾನ ತಜ್ಞರು ಹಾಗಾಗುತ್ತದೆ ಎಂದಿದ್ದಾರೆ; ಭೂ ತಾಪಮಾನ ಏರಿಕೆಯಿಂದ ಗ್ಲೋಬಲ್ ವಾರ್ಮಿಂಗ್ ಅದಾಗಲೇ ಆರಂಭವಾಗಿದ್ದು, ಮುಂದಿನ ದಶಕಗಳಲ್ಲಿ ಇನ್ನಷ್ಟು ಪ್ರಾಕೃತಿಕ ವೈಪರೀತ್ಯ ಗಳನ್ನು ನಾವೆಲ್ಲಾ ನೋಡಬೇಕೆಂದಿದ್ದಾರೆ.
ನಮ್ಮ ಹಳ್ಳಿಯಲ್ಲಿನ ಬಾಲ್ಯದ ಬೇಸಗೆಯ ದಿನಗಳು ನೆನಪಾಗುತ್ತವೆ. ಆಗೆಲ್ಲಾ ಫ್ಯಾನು, ಫ್ರಿಜ್, ಐಸ್ ಇರಲಿಲ್ಲ; ಮುಖ್ಯ ರಸ್ತೆಯಿಂದ ತುಸು ದೂರವಿದ್ದ ನಮ್ಮ ಮನೆಯಲ್ಲಂತೂ, ಕಲ್ಲಂಗಡಿ ಮೊದಲಾದ ಹಣ್ಣುಗಳ ಪರಿಚಯವೂ ಕಡಿಮೆ. ಮನೆ ಸುತ್ತಲೂ ಹರಡಿದ್ದ ಕಾಡು, ಹಕ್ಕಲು ಮತ್ತು ಗದ್ದೆಯಂಚಿನ ಮರ ಗಿಡಗಳಲ್ಲಿ ಬೇಸಗೆಗೆ ಸರಿಯಾಗಿ ಕಾಣಿಸುತ್ತಿದ್ದ ಹಣ್ಣುಗಳೇ ನಮಗೆ ಸೆಕೆ ತಡೆಯುವ ಸಾಧನ, ಧಗೆ ತಡೆಯುವ ಅಸ್ತ್ರ! ಕಾಟು ಮಾವಿನ ಹಣ್ಣುಗಳಂತೂ ದಂಡಿಯಾಗಿ ಸಿಗು ತ್ತಿದ್ದವು; ಗೋವೆ ಹಣ್ಣು, ಜುಳಕನ ಹಣ್ಣು, ಕಾಡು ಸಂಪಿಗೆ (ಚೇಂಪೆ), ಬೆಳಮಾರು, ಬುಕ್ಕಿ, ಸೂರಿ ಮೊದಲಾದ ಹಣ್ಣುಗಳು ಬೇಸಗೆಯ ಸಮಯದಲ್ಲಿ ದೊರಕುತ್ತಿದ್ದವು.
ಇದನ್ನೂ ಓದಿ: Shashidhara Halady Column: ಮಗಾ ನೀನು ಆಡು, ನಿನ್ನ ಆಪ್ಪ ಹೋತ !
ಬೇಸಗೆಯ ಬಿಸಿಲನ್ನು ಲೆಕ್ಕಿಸದೇ, ಮಾವಿನ ಮಿಡಿ, ಮಾವಿನ ಹಣ್ಣುಗಳನ್ನು ಹುಡುಕಿಕೊಂಡು ನಾವು ಗುಡ್ಡ ಬೆಟ್ಟ ಹರಗಳಲ್ಲಿ ಅಲೆಯುವುದು ಸಾಮಾನ್ಯ ಸಂಗತಿ ಎಂದು ಆಗ ಅನಿಸಿತ್ತು. ನಮ್ಮ ಹಳ್ಳಿ ಮನೆಯ ಪೂರ್ವ ದಿಕ್ಕಿನಲ್ಲಿ ನಡೆಯತೊಡಗಿದರೆ, ಸುಮಾರು ಒಂದು ಕಿ. ಮೀ.ನಷ್ಟು ದೂರದ ತನಕ ಚೇರ್ಕಿ ಬೈಲು. ದಾರಿಯುದ್ದಕ್ಕೂ ಗzಗಳ ನಡುವೆ ಸಾಗುವ ಆ ದಾರಿಯಲ್ಲಿ ನಡೆಯುತ್ತಾ ಹೋಗುವುದೇ ಒಂದು ವಿಶಿಷ್ಟ ಅನುಭವ. ಆ ಬೈಲಿನ ತುದಿಯಲ್ಲಿ ಬೆಟ್ಟವನ್ನೇರಿದರೆ ಹರನಗುಡ್ಡ; ಅದೊಂದು ಬೋಳುಗುಡ್ಡ ಎನಿಸಿದರೂ, ವಿಶಾಲ ಮೈದಾನದಂಥ ಆ ಗುಡ್ಡದ ಅಂಚಿನಲ್ಲಿನ ಕಾಡಿನಲ್ಲಿ ಕಾಟು ಮಾವಿನ ಹಣ್ಣು ಹೇರಳವಾಗಿದ್ದವು; ಜತೆಗೆ ಬುಕ್ಕಿ ಹಣ್ಣು, ಬೆಳಮಾರ ಹಣ್ಣು ಬಿಡುವ ಪೊದೆಗಳು ಆ ಗುಡ್ಡದಲ್ಲಿ ಅಲ್ಲಲ್ಲಿ ಇದ್ದವು.
ಆದ್ದರಿಂದ, ಬಿರುಬೇಸಗೆಯಲ್ಲಿ ಆ ಗುಡ್ಡದ ಮೇಲೆ ನಡೆಯುವಾಗ, ಬಾಯಿ ಸಿಹಿ ಮಾಡುವ ಹಲವು ಹಣ್ಣುಗಳು ದೊರಕುತ್ತಿದ್ದುದರಿಂದ, ಮಕ್ಕಳಿಗೆ ಆ ದಾರಿಯಲ್ಲಿ ನಡೆಯಲು ಬೇಸರವಿರಲಿಲ್ಲ. ಅಸಲು, ಅಲ್ಲಿಗೆ ಹೋಗುವ ದಾರಿಯೂ ವಿಶಿಷ್ಟ; ಪಕ್ಕಾ ಗ್ರಾಮ್ಯ ಸಂಸ್ಕೃತಿಯನ್ನು ಮೈಗೂಡಿಸಿ ಕೊಂಡ ಅನುಭವ ನೀಡುವ ಹಾದಿ ಅದು.
ಹರನಗುಡ್ಡಕ್ಕೆ ಹೋಗುವ ದಾರಿಯಲ್ಲಿ ಮೊದಲಿಗೆ, ಚೇರ್ಕಿ ಬಯಲಿನ ಆ ದಾರಿ ಉದ್ದಕ್ಕೂ ಮನೆ ಗಳು. ಅವುಗಳನ್ನು ನೋಡುತ್ತಾ ಒಂದು ಕಿ. ಮೀ. ನಡೆದರೆ, ಬಯಲು ಮುಗಿದು ಹರನಗುಡ್ಡೆ ಆರಂಭ. ಆ ಗುಡ್ಡೆಗೂ ಬಯಲಿಗೂ ನಡುವೆ ನೀರು ಹರಿಯುವ ಪುಟ್ಟ ತೋಡು. ಅದನ್ನು ದಾಟಲು ಹಳೆಯ ಮರದ ಸಂಕ. ಬೇಸಗೆಯಲ್ಲಿ ಆ ತೋಡು ಬತ್ತುತ್ತದೆ. ಆ ಸಂಕ ದಾಟಿದ ನಂತರ ದೊಡ್ಡ ದೊಡ್ಡ ಮರಗಳಿದ್ದ ಹಾಡಿ. ಏರುದಾರಿ; ಆ ಏರನ್ನುಏರಲು, ದಟ್ಟ ಕಾಡಿನ ನಡುವೆ ಸುಮಾರು 120 ಮೆಟ್ಟಿಲುಗಳು.
ಸುಮಾರು 400 ವರ್ಷಗಳ ಹಿಂದೆ, ಮುರಕಲ್ಲಿನಿಂದ ನಿರ್ಮಿಸಲಾದ ಆ ಮೆಟ್ಟಿಲುಗಳ ಎರಡೂ ಕಡೆ ಎತ್ತರವಾದ ಮರಗಳು. ಅಲ್ಲಿದ್ದ ದಟ್ಟ ಹಾಡಿಯಿಂದ ಸೊಪ್ಪು ಸೌದೆಯನ್ನು ನಮ್ಮ ಅಮ್ಮಮ್ಮ ತರುತ್ತಿದ್ದರಂತೆ. ಅಲ್ಲಿದ್ದ ಹಾಡಿಯಿಂದ ಸೊಪ್ಪು ಕಡಿದು ತರುವುದು ನಮ್ಮ ಹಳ್ಳಿಯ ಹೆಚ್ಚಿನ ಮನೆಗಳವರ ಪರಿಪಾಠ. ಗಂಟಿ ಕಟ್ಟುವ ಹಟ್ಟಿಗೆ ಹರಡಲು ಬೇಕಾದ ಸೊಪ್ಪನ್ನು ಅಲ್ಲಿಂದ ತರಲು ಯಾರ ಅನುಮತಿಯೂ ಬೇಕಿರಲಿಲ್ಲ. ಆ ಹಾಡಿಯಲ್ಲಿ, ಸಾಕಷ್ಟು ಮರಗಳಿದ್ದುದರಿಂದ, ಸೊಪ್ಪು, ಸುಡುಮಣ್ಣಿಗೆ ಬೇಕಾದ ಅಡರು ಎಲ್ಲವನ್ನೂ ತರುತ್ತಿದ್ದರು. ಆದರೆ ಯಾರೂ ಅಲ್ಲಿ ಮರ ಕಡಿಯು ವಂತಿರಲಿಲ್ಲ.
ಹರನಗುಡ್ಡೆಗೆ ಸಾಗುವಾಗ ಸಿಗುವ ಆ ಹಾಡಿಯನ್ನು ದಾಟಿದರೆ, ವಿಶಾಲವಾದ ಮೈದಾನ ಸಿಗುತ್ತದೆ. ಮುರಕಲ್ಲಿನ ಹಾಸು ಇದ್ದ ಆ ಎತ್ತರ ಪ್ರದೇಶದಲ್ಲಿ ದೊಡ್ಡ ಮರಗಳು ಕಡಿಮೆ. ಅಲ್ಲಲ್ಲಿ ಕುರುಚಲು ಗಿಡಗಳು; ಮಿಕ್ಕಂತೆ, ಆ ಪ್ರದೇಶದ ತುಂಬಾ ‘ಕರಡ’ ಬೆಳೆಯುತ್ತಿತ್ತು.
ಅಲ್ಲಲ್ಲಿ ಇದ್ದ ಗಿಡಗಳಲ್ಲಿ ಬೆಳಮಾರು ಹಣ್ಣು, ಬುಕ್ಕಿ ಹಣ್ಣು, ಸೂರಿ ಹಣ್ಣು ಸಿಗುತ್ತಿದ್ದವು; ಅಪರೂಪಕ್ಕೆಂಬಂತೆ ಅಲ್ಲಿ ಮಾವಿನ ಮರವೂ ಬೆಳೆದಿದ್ದವು. ಆ ಗುಡ್ಡ ದಾಟಿ, ಇಳಿಜಾರಿನ ತಪ್ಪಲಿನ ಹಾಡಿಯಲ್ಲಿ ಬೃಹದಾಕಾರದ ನಾಲ್ಕೆಂಟು ಕಾಟು ಮಾವಿನ ಮರಗಳು ಬೆಳೆದಿದ್ದವು; ಬೇಸಗೆಯಲ್ಲಿ ಆ ಮರದ ಅಡಿ ನಡೆದರೆ, ಸಿಹಿ ಸಿಹಿಯಾದ, ಮುಷ್ಟಿ ಗಾತ್ರದ ಮಾವಿನ ಹಣ್ಣು ಸಿಗುವುದಂತೂ ‘ಗ್ಯಾರಂಟಿ’. ಉಚಿತವಾಗಿ ಸಿಗುವ ಆ ಹಣ್ಣುಗಳು, ನಮ್ಮ ಬಾಯಾರಿಕೆಯನ್ನು ತಣಿಸುತ್ತಿದ್ದುದು ಸಹ ಗ್ಯಾರಂಟಿ.
ಈ ವಿಶಾಲ ಹರನಗುಡ್ಡೆಯ ಮೈದಾನದಲ್ಲಿ ನಡೆಯುವುದೆಂದರೆ ನನಗೆ ಬಹಳ ಖುಷಿ. ಒತ್ತೊತ್ತಾಗಿ ಬೆಳೆದ ಎರಡಡಿ ಎತ್ತರದ ಕರಡದ ನಡುವೆ ಸಾಗುವ ಕಾಲ್ದಾರಿಯಲ್ಲಿ ಕಾಲು ಹಾಕುತ್ತಾ ನಡೆಯು ವಾಗ, ಆ ಕರಡ ಎರಡೂ ಕಾಲುಗಳನ್ನು ಮುತ್ತಿಕ್ಕಿದಾಗ ಆಗುವ ಅನುಭವ ಅನನ್ಯ. ಹೀಗೇ ನಡೆಯು ತ್ತಾ ಸಾಗುವಾಗ, ಆ ಕರಡದಲ್ಲಿರುವ ಒಣಗುಗಳು (ಉಣ್ಣಿ) ನಮ್ಮ ಮೈಗೆ ಹತ್ತಿದ್ದೂ ಉಂಟು! ಒಂದೆ ರಡು ದಿನಗಳ ನಂತರ ಆ ಜಾಗದಲ್ಲಿ ತುರಿಕೆಯಾದಾಗಲೇ, ಆ ಒಣಗುಗಳ ಕಾಟ ಗೊತ್ತಾಗುವುದು!
ಹರನಗುಡ್ಡದ ವಿಶಾಲವಾದ ಮೈದಾನದಂಥ ಗುಡ್ಡವು ಸುಮಾರು ಒಂದು ಕಿ.ಮೀ. ಉದ್ದಕ್ಕೆ ಹರಡಿ ಕೊಂಡಿದೆ. ಬೇಸಗೆಯಲ್ಲಿ ಅಲ್ಲೆಲ್ಲಾ ಕಲ್ಲುಗಳ ನೋಟವೇ ಸಾಮಾನ್ಯ. ನಾವು ಕಾಲಿಡುವ ದಾರಿ ಸಹ ಮುರಕಲ್ಲಿನ ಮೇಲೆಯೇ ಸಾಗುತ್ತದೆ. ಆ ಒಂದು ಕಿ.ಮೀ. ನಡೆದ ನಂತರ, ಇಳಿಜಾರು ಸಿಗುತ್ತದೆ; ಇಲ್ಲಿ ದಟ್ಟ ಕಾಡು. ಬೇಸಗೆಯಲ್ಲಿ ಕಾಟು ಮಾವಿನ ಮರಗಳು ಸಿಗುವುದು ಇಲ್ಲೇ. ಆ ಮರಗಳ ಅಡಿ ಹುಡುಕಿ, ನಾಲ್ಕಾರು ಮಾವಿನ ಹಣ್ಣುಗಳನ್ನು ಆರಿಸಿ ತಿಂದು, ಅಲ್ಲೇ ಸಿಗುವ ಮಾವಿನ ಎಲೆಗಳಿಂದ ಕೈ ಒರೆಸಿಕೊಂಡು, ಹಣ್ಣಿನ ರುಚಿ ಚಪ್ಪರಿಸುತ್ತಿದ್ದೆವು.
ಬಿರು ಬೇಸಗೆ ಜಾಸ್ತಿ ಇದ್ದಷ್ಟೂ, ಆ ಹಣ್ಣುಗಳ ರುಚಿ ಅಧಿಕ. ಪಕ್ಕಾ ಜವಾರಿ ತಳಿ ಆದ್ದರಿಂದ, ಘಮ ಘಮ ಎನ್ನುವ ಸುವಾಸನೆ, ರುಚಿಕರ ರಸ; ಆದರೆ ಕಾಡು ಜಾತಿಯಾಗಿದ್ದರಿಂದ, ಆ ಹಣ್ಣಿನ ಗಾತ್ರ ಮಾತ್ರ ಚಿಕ್ಕದು. ನಾಲ್ಕಾರು ಹಣ್ಣು ತಿಂದರೂ ಹೊಟ್ಟೆ ತುಂಬುವಂತಿಲ್ಲ! ಆ ದಾರಿಯ ಮುಖಾಂ ತರ ಸುಮಾರು 5 ಕಿ.ಮೀ. ನಡೆದು, ನಾವು ತಾರಿಕಟ್ಟೆ ಎಂಬ ಇನ್ನೊಂದು ಹಳ್ಳಿಗೆ, ನಮ್ಮ ಬಂಧುಗಳ ಮನೆಗೆ ಹೋಗುತ್ತಿದ್ದೆವು.
ಈ ದಾರಿ ಉದ್ದಕ್ಕೂ ನಡೆದು ಹೋಗುವಾಗ ಸಿಗುವ ಹಳ್ಳಿಗಳ ಹೆಸರು ಕುತೂಹಲಕಾರಿ. ಹರನಗುಡ್ಡೆ ಪಕ್ಕದಲ್ಲಿ ಬಾವಣಿ ಎಂಬ ಹಳ್ಳಿ ಇದೆ; ಆ ಹೆಸರು ಅದೇಕೆ ಬಂತೋ ಕಾಣೆ. ಆದರೆ ಬಾವಣಿಯ ಪಕ್ಕದಲ್ಲಿರುವ ‘ನಾಗೆರ್ತಿ ಕಾನು’ ಹೆಚ್ಚು ಪ್ರಸಿದ್ಧ. ನಾಗರತಿ ಎಂಬ ಸರ್ಪಕನ್ಯೆ ನೆಲೆಸಿರುವ ಕಾನು ಅದು ಎಂಬ ಕಥೆಯುಂಟು.
ನಾಗರಿ ಕಾನು ಇಂದಿಗೂ ದಟ್ಟವಾದ ಕಾಡು; ಅಲ್ಲಿ ನಾನಾ ರೀತಿಯ ಮರಗಳು, ಕಾಟು ಮಾವಿನ ಮರಗಳು ದಟ್ಟವಾಗಿ ಬೆಳೆದಿವೆ. ನಾಗರತಿಯು, ಮಂದರತಿ (ಮಂದಾರ್ತಿ) ಎಂಬ ಇನ್ನೊಬ್ಬ ಖ್ಯಾತ ಸರ್ಪಕನ್ಯೆಯ ಸಹೋದರಿ. ನಾಗರತಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಮಂದಾರ್ತಿ ಯು ಇಂದು ಪ್ರಸಿದ್ಧ ದೇಗುಲವಿರುವ ಕ್ಷೇತ್ರವಾಗಿ ಬೆಳೆದಿದೆ. ಅದೇ ರೀತಿ ಚಾರುರತಿ, ದೇವರತಿ, ನೀಲರತಿ ಎಂಬ ಮೂವರು ಸರ್ಪಕನ್ಯೆಯರ ಐತಿಹ್ಯವು ನಮ್ಮ ಊರಲ್ಲಿ ಸಾಕಷ್ಟು ಪ್ರಸಿದ್ಧ.
ಈ ಐವರು ಸರ್ಪಕನ್ಯೆಯರು, ಸುಮಾರು 30 ಚದರ ಕಿ.ಮೀ. ವಿಸ್ತೀರ್ಣದ ಜಾಗಗಳಲ್ಲಿ ನೆಲೆ ಯಾದರು. ಆ ನಾಗಕನ್ಯೆಯರು ನೆಲೆಸಿದ ಜಾಗಗಳಲ್ಲಿ ಇಂದು ಅಮ್ಮನವರ ಅಥವಾ ದುಗಾ ಪರಮೇ ಶ್ವರಿ ದೇಗುಲಗಳಿವೆ; ನಾಗಕನ್ಯೆ ಯರನ್ನು ಪೂಜಿಸಿದ ನಮ್ಮ ಜನಪದರು, ನಂತರದ ಶತಮಾನ ಗಳಲ್ಲಿ ಅಲ್ಲೇ ದುರ್ಗಾಪರಮೇಶ್ವರಿಯನ್ನೂ ಕಂಡದ್ದು ಒಂದು ಕುತೂಹಲಕಾರಿ ಮತ್ತು ಅಧ್ಯಯ ನಕ್ಕೆ ಯೋಗ್ಯವಾದ ವಿಷಯ.
ನಮ್ಮ ಮನೆಯಿಂದ ಹರನಗುಡ್ಡೆ ಮೂಲಕ ಸಾಗುವ ದಾರಿಯಲ್ಲಿ ನಾವೆಲ್ಲ ಅದೆಷ್ಟು ಬಾರಿ ನಡೆದು ಹೋಗಿದ್ದೆವೋ ಲೆಕ್ಕವೇ ಇಲ್ಲ. ದಾರಿ ಉದ್ದಕ್ಕೂ ಸಿಗುವ ಕಿಸ್ಕಾರ ಹಣ್ಣು, ಬೆಳಮಾರ ಹಣ್ಣು, ಬುಕ್ಕಿ ಹಣ್ಣು, ಕಾಟು ಮಾವಿನ ಹಣ್ಣು, ಮುರಿನ ಹಣ್ಣುಗಳನ್ನು ತಿನ್ನುತ್ತಾ ಸಾಗುವುದೇ ಒಂದು ಮಜಾ. ಅಲ್ಲಿನ ಗಿಡಮರಗಳ ನಡುವೆ, ಚೇಂಪಿ ಮರ ಎಂಬ ಮರವಿದೆ; ಕಾಂಡದ ತುಂಬಾ ಮುಳ್ಳು, ಮಧ್ಯಮ ಗಾತ್ರ. ಅದರ ಹಣ್ಣುಗಳು ಮಾತ್ರ ಹೆಚ್ಚು ಕಮ್ಮಿ ದ್ರಾಕ್ಷಿ ಹಣ್ಣಿನ ರುಚಿ, ಬಣ್ಣ ಹಳದಿ ಮಿಶ್ರಿತ ಕೆಂಪು. ಅವುಗಳನ್ನು ತಿನ್ನುವುದೆಂದರೆ ಬಲು ಖುಷಿ! ಚೇಂಪಿ ಹಣ್ಣನ್ನು ಕಾಡು ಸಂಪಿಗೆ ಎಂದೂ ಕರೆಯುವರು.
ಹಾಗೆ ನೋಡುತ್ತಾ ಹೋದರೆ, ಹರನಗುಡ್ಡೆಯ ಮಡಿಲಲ್ಲಿ ಇನ್ನೂ ಹಲವು ವಿಸ್ಮಯಗಳಿವೆ, ಅದನ್ನು ಬಗೆಯುತ್ತಾ ಹೋದಂತೆ ಒಂದೊಂದಾಗಿ ಹೊರಬರುತ್ತವೆ. ವಿಶಾಲವಾದ ಕಲ್ಲಿನ ಮೈದಾನ ದಂತಿರುವ ಹರನಗುಡ್ಡದ ಮೇಲ್ಭಾಗದಲ್ಲಿ ದೊಡ್ಡ ಮರಗಳಿಲ್ಲ, ಸಣ್ಣ ಗಾತ್ರದ ಮರಗಳು, ಪೊದೆ ಗಳು ಬೆಳೆದಿವೆ; ಮುರಕಲ್ಲಿನ ನೆಲವೇ ಅಲ್ಲಲ್ಲಿ ಕಾಣಿಸುತ್ತದೆ. ಆದರೆ, ಆ ವಿಶಾಲ ಬಯಲಿನಂಥ ಜಾಗ ದಾಟಿದರೆ, ಇಳಿಜಾರಿನ ಭಾಗಗಳಲ್ಲಿ ನಾಲ್ಕೂ ದಿಕ್ಕಿನಲ್ಲಿ ನಾನಾ ರೀತಿಯ ಮರಗಳಿವೆ; ಅವುಗಳಲ್ಲಿ ಮಾವು, ಹಲಸು, ಮುರಿಯ, ಜುಳಕ ಮೊದಲಾದ ಹಣ್ಣು ನೀಡುವ ಮರಗಳ ಜತೆಯಲ್ಲೇ, ಮೋಪು ಮತ್ತು ನಾಟಾಕ್ಕೆ ಉಪಯೋಗವಾಗುವ ಬೋಗಿ ಮೊದಲಾದ ಮರಗಳೂ ಇವೆ.
ಹರನಗುಡ್ಡದ ಮೇಲೆ ನಡೆಯುವಾಗ, ಒಂದು ಸಣ್ಣ ವಿಸ್ಮಯವನ್ನು ಗುರುತಿಸಬಹುದು. ಅದೇ ನೆಂದರೆ ಅದರ ಉದ್ದಕ್ಕೂ ನಡೆದಾಡುವಾಗ ‘ಧನ್ ಧನ್’ ಎಂಬ ಶಬ್ದ! ಇಡೀ ಗುಡ್ಡವೇ ಟೊಳ್ಳು ಟೊಳ್ಳಾಗಿದೆಯೇನೋ ಎಂಬಂಥ ಸದ್ದು. ನಾವೆಲ್ಲಾ ಮಕ್ಕಳು ಆ ಗುಡ್ಡೆಯ ಮೇಲೆ ನಡೆಯುತ್ತ ಅರ್ಧ ಕಿ.ಮೀ.ಗೂ ಹೆಚ್ಚಿನ ದಾರಿಯನ್ನು ಕ್ರಮಿಸುತ್ತಿದ್ದಾಗ, ಬೇಕೆಂದೇ ಜೋರಾಗಿ ಹೆಜ್ಜೆ ಹಾಕಿ ‘ಧನ್ ಧನ್’ ಎಂಬ ಶಬ್ದವನ್ನು ಕೇಳಿ ಆನಂದಿಸುತ್ತಿದ್ದೆವು.
ಆ ರೀತಿ ನಡೆಯುವಾಗ, ಅಲ್ಲಿ ಶಬ್ದ ಮಾಡುತ್ತಾ ಸಾಗುವುದೆಂದರೆ ಮಕ್ಕಳಿಗೆ ಒಂದು ರೀತಿಯ ಆಟವೂ ಹೌದು. ಮೇಲೆಲ್ಲಾ ಮುರಕಲ್ಲಿನ ಹಾಸು, ಮುರಕಲ್ಲಿನ ಬಂಡೆಗಳು ಹರಡಿರುವುದನ್ನು ಕಂಡರೆ, ಹರನಗುಡ್ಡದ ಗರ್ಭವು ಟೊಳ್ಳು ಟೊಳ್ಳಾಗಿರಬಹುದೇ ಎಂಬ ಅನುಮಾನವೂ ಮೂಡು ತ್ತದೆ!
ಇಂಥ ಮುರಕಲ್ಲಿನ ಗುಡ್ಡಗಳ ಅಡಿಯಲ್ಲಿ ಬೇರೆ ಕಡೆಗಳಲ್ಲಿ ಗುಹೆಗಳು, ಸುರಂಗಗಳು ಸೃಷ್ಟಿಯಾಗಿ ರುವ ಉದಾಹರಣೆಗಳು ಕರಾವಳಿಯಲ್ಲಿವೆ; ನೆಲ್ಲಿತೀರ್ಥ, ಬಗ್ವಾಡಿ, ಕಮಲಶಿಲೆ ಮೊದಲಾದ ಕಡೆ ಇರುವ ಗುಹೆಗಳು ರೂಪುಗೊಂಡಿರುವುದು, ಇಂಥದ್ದೇ ಮುರಕಲ್ಲಿನ ಹಾಸಿನ ನಡುವೆ. ಅವುಗಳ ಹೋಲಿಕೆಯಲ್ಲಿ, ನಮ್ಮೂರಿನ ಹತ್ತಿರವಿರುವ ಹರನಗುಡ್ಡೆಯ ವಿಶಾಲ ಮುರಕಲ್ಲಿನ ಹಾಸನ್ನು ಕಂಡಾಗ, ಅದರ ಅಡಿ ಕೆಲವು ಭಾಗಗಳಲ್ಲಿ ಟೊಳ್ಳು ಇರುವ ಸಾಧ್ಯತೆ ಇದೆ. ಅದಕ್ಕೇ ಇರಬಹುದು, ಅದರ ಮೇಲೆ ನಡೆಯುವಾಗ ‘ಧನ್ ಧನ್’ ಎಂಬ ಸದ್ದು ಕೇಳಿಬರುವುದು!
ಆ ಗುಡ್ಡದ ಗರ್ಭದಲ್ಲಿ ಚಿನ್ನದ ಕೊಪ್ಪರಿಗೆ ಇದೆ, ಅದನ್ನು ಸರ್ಪ ಕಾಯುತ್ತಿದೆ ಎಂಬ ಬಲವಾದ ನಂಬಿಕೆಯೂ ನಮ್ಮೂರಿನಲ್ಲಿದೆ! ಆ ನಿರ್ಜನ ಪ್ರದೇಶದಲ್ಲಿ, ಕಲ್ಲು ಹಾಸಿನ ಅಡಿಯಲ್ಲಿ ಯಾವ ಮಹಾರಾಯನು ಕೊಪ್ಪರಿಗೆ ತುಂಬಾ ಚಿನ್ನ ತುಂಬಿ, ಅಡಗಿಸಿ ಇಟ್ಟಿದ್ದಾನೆ ಎಂದು ಮಾತ್ರ ನನ್ನನ್ನು ಕೇಳಬೇಡಿ! (ಮುರಕಲ್ಲು = ಜಂಬಿಟ್ಟಿಗೆ, ಮನೆಯ ಗೋಡೆಗೆ ಉಪಯೋಗಿಸಬಹುದಾದ ಕೆಂಪು ಬಣ್ಣದ ಕಲ್ಲು).