ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Bhindaganavile Bhagwan Column: ಭಾಷೆಯ ಕಲಿಕೆ ‘ಓಕೆ’ ವ್ಯಾಕರಣದ ಬಂಧ ‘ಯಾಕೆ?’

ಭಾಷೆಗಳನ್ನು ಕಲಿಯುವ ನಿಟ್ಟಿನಲ್ಲಿ, ಜಗತ್ತಿನಾದ್ಯಂತದ ಶಿಕ್ಷಣಕ್ರಮಗಳಲ್ಲಿ ವ್ಯಾಕರಣಕ್ಕೇ ಅನಗತ್ಯ ಒತ್ತು ನೀಡಲಾಗುತ್ತದೆ. ‘ವ್ಯಾಕರಣವೇ ಭಾಷೆಗೆ ವಾಗ್ಬಲ, ಅಡಿಪಾಯ’ ಎಂಬ ನಿಲುವು ಮಕ್ಕಳ ಸಹಜ ಕಲಿಕೆಗೆ ತಡೆಯೊಡ್ಡುತ್ತದೆ. ವ್ಯಾಕರಣ ಕಲಿತೂ ಹಲವು ಸಂದರ್ಭಗಳಲ್ಲಿ ಮಕ್ಕಳು ಆಯಾ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಲು ವಿಫಲವಾಗುವುದಿದೆ.

ಭಾಷೆಯ ಕಲಿಕೆ ‘ಓಕೆ’ ವ್ಯಾಕರಣದ ಬಂಧ ‘ಯಾಕೆ?’

Ashok Nayak Ashok Nayak Jul 30, 2025 11:48 AM

ಅಭಿಮತ

ಬಿಂಡಿಗನವಿಲೆ ಭಗವಾನ್

ಮಗುವು ವ್ಯಾಕರಣದ ಹಂಗಿಲ್ಲದೆ ತಾಯ್ನುಡಿಯನ್ನು ಕಲಿಯುತ್ತದೆ. ಇದು ಮಗುವಿನ ಬೆಳವಣಿಗೆ ಯ ಅದ್ಭುತಗಳಂದು. ಮಗುವು ಮಾತು ಕಲಿಯುವ ಹಂತದಲ್ಲಿ “ನೋಡು ಮರೀ, ಇದು ಕರ್ತೃಪದ, ಇದೇ ಕ್ರಿಯಾಪದ, ಇದು ಕರ್ಮಪದ..." ಎಂದು ಹಿರಿಯರೇನೂ ವಿವರಿಸುವುದಿಲ್ಲ!

ಉಣಿಸುವ ಮೊದಲೇ ತಟ್ಟೆ, ಬಟ್ಟಲನ್ನು ಪರಿಚಯಿಸಿದರೆ ಎಂಥ ವಿಪರ್ಯಾಸ? ಮುಂದೆ ಮಗುವಿಗೆ ಆ ಪರಿಕರಗಳ ತಿಳಿವಳಿಕೆ ಆಗಿಯೇ ತೀರುವುದು. ಮಗುವು ತಾನು ಆಲಿಸಿದ ಒಂದು ಪದವನ್ನು ಪುನರುಚ್ಚರಿಸುತ್ತದೆ. ನಂತರ ಎರಡು ಅಥವಾ ಮೂರು ಪದಗಳ ಸಣ್ಣ ಪುಟ್ಟ ವಾಕ್ಯಗಳನ್ನು ಸೃಷ್ಟಿಸಿಕೊಳ್ಳುತ್ತದೆ. ತದನಂತರ ಸಂಕೀರ್ಣವಾದ ವಾಕ್ಯಗಳನ್ನು ರಚಿಸುತ್ತದೆ. ಗಮನಿಸಿ, ಇವು ವ್ಯಾಕರಣರಹಿತ ವಾಕ್ಯಗಳು. ಮಗುವು ಕಾಲಕ್ರಮೇಣ ಸರಿಯಾದ ವಾಕ್ಯಗಳೊಂದಿಗೆ ಮಾತಾಡುವ ಸಾಮರ್ಥ್ಯವನ್ನು ಗಳಿಸುತ್ತದೆ. ‘ವ್ಯಾಕರಣವನ್ನು ಕಲಿಯದೆ, ಭಾಷೆಯನ್ನು ಕಲಿಯಲಾಗದು’ ಎನ್ನುವ ಅನಿವಾರ್ಯತೆಯನ್ನು ಮಕ್ಕಳಲ್ಲಿ ಬಿತ್ತುವುದು ಸರಿಯಲ್ಲ.

ಭಾಷೆಗಳನ್ನು ಕಲಿಯುವ ನಿಟ್ಟಿನಲ್ಲಿ, ಜಗತ್ತಿನಾದ್ಯಂತದ ಶಿಕ್ಷಣಕ್ರಮಗಳಲ್ಲಿ ವ್ಯಾಕರಣಕ್ಕೇ ಅನಗತ್ಯ ಒತ್ತು ನೀಡಲಾಗುತ್ತದೆ. ‘ವ್ಯಾಕರಣವೇ ಭಾಷೆಗೆ ವಾಗ್ಬಲ, ಅಡಿಪಾಯ’ ಎಂಬ ನಿಲುವು ಮಕ್ಕಳ ಸಹಜ ಕಲಿಕೆಗೆ ತಡೆಯೊಡ್ಡುತ್ತದೆ. ವ್ಯಾಕರಣ ಕಲಿತೂ ಹಲವು ಸಂದರ್ಭಗಳಲ್ಲಿ ಮಕ್ಕಳು ಆಯಾ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಲು ವಿಫಲವಾಗುವುದಿದೆ.

‘ವ್ಯಾಕರಣ ಗೊತ್ತಾದರೆ ಮಾತ್ರವೇ ಭಾಷೆ’ ಎಂಬ ಭಯ, ಕೀಳರಿಮೆಯೆ ಇದಕ್ಕೆ ಕಾರಣ. ಉದಾ ಹರಣೆಗೆ ಕನ್ನಡದ ಸಂದರ್ಭವನ್ನೇ ತೆಗೆದುಕೊಳ್ಳೋಣ. 2-3 ವರ್ಷ ವಯಸ್ಸಿನ ಮಗುವು, ಹೆತ್ತವರು ಹೆಮ್ಮೆಪಡುವಂತೆ ಅಚ್ಚುಕಟ್ಟಾಗಿ ಮಾತಾಡುತ್ತದೆ; ಅದೇನೂ ವ್ಯಾಕರಣ, ನಿಘಂಟು ಹಿಡಿದಿರುವು ದಿಲ್ಲ!

ವ್ಯಾಕರಣದ ಗೊಡವೆಯಿರದ ಮಾತದು. ಮಾತು ಕಲಿತ ಮೇಲೆಯೆ ಮಗು ಶಾಲೆಗೆ. ತರಗತಿಯಲ್ಲಿ ಕೂತ ನಂತರವಷ್ಟೇ ಮಗುವಿಗೆ ‘ವ್ಯಾಕರಣ ಎನ್ನುವುದಿದೆ’ ಅಂತ ಗೊತ್ತಾಗುವುದು. ಹಾಗೆ ನೋಡಿ ದರೆ, ಮನುಷ್ಯರ ಪರಸ್ಪರ ಸಂವಹನ ಪ್ರಾರಂಭವಾದ್ದು ಮಾತಿನಿಂದಲೇ. ಸರಿಸುಮಾರು ಕ್ರಿ.ಪೂ. 3500ರ ನಂತರವಷ್ಟೇ ಅದು ಲಿಖಿತ ರೂಪಗಳನ್ನು ಕಾಣಲಾರಂಭಿಸಿದ್ದು.

ಇದನ್ನೂ ಓದಿ: Roopa Gururaj Column: ದಾನ ಮಾಡಿದ ಅಕ್ಕಿಯ ಕಾಳು ಬಂಗಾರವಾದಾಗ

ಒಂದು ಭಾಷೆಯನ್ನು ಆಸಕ್ತಿಯಿಂದ ಆಲಿಸುವುದೇ ಅದನ್ನು ಕಲಿಯುವುದಕ್ಕೆ ಇರುವ ರಾಜ ಮಾರ್ಗ. ಹೆಚ್ಚೆಚ್ಚು ಕೇಳಿದಂತೆ, ಆಡಲು ಯತ್ನಿಸಿದಂತೆ ಆ ಭಾಷೆಯಲ್ಲಿ ನಿರರ್ಗಳತೆ ಪ್ರಾಪ್ತವಾಗು ವುದು. ನಾವು ಯಾವುದನ್ನು ವ್ಯಾಕರಣದ ನಿಯಮಗಳೆನ್ನುತ್ತೇವೋ, ಅವು ಆಂತರ್ಯದಲ್ಲಿ ಸ್ವೀಕೃತವಾಗಿರುತ್ತವೆ. ಕಲಿಯುವ ಅಪೇಕ್ಷೆಯಿದ್ದರೂ ನಮ್ಮ ಪಾಲಿಗೆ ಅಸಾಧ್ಯವೆನ್ನಿಸುವ ಕೆಲ ವಿದೇಶಿ ಭಾಷೆಗಳೆಷ್ಟೋ? ಅದಕ್ಕೆ ಕಾರಣ ನಮಗೆ ನಾವೇ ವಿಧಿಸಿಕೊಳ್ಳುವ ‘ವ್ಯಾಕರಣ ಬಂಧನ’.

‘ಸಂಭಾಷಣೆಗಾಗಿ ಸಂಸ್ಕೃತ’ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ‘ಸಂಸ್ಕೃತ ಭಾರತಿ’ ಎಂಬ ಭಾರತ ಮೂಲದ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಗುರುಗಳು ನೇರವಾಗಿ ಸಂಸ್ಕೃತದ ಮೂಲಕವೇ ಸಂಸ್ಕೃತ ಮಾತಾಡುವುದನ್ನು ಹೇಳಿಕೊಡುತ್ತಾರೆ. ವಾಕ್ಯದ ವಿಭಜನೆಯಾಗಲೀ, ವಚನ, ಲಿಂಗ, ಸಮಾಸ, ಪ್ರತ್ಯಯ ಇತ್ಯಾದಿ ಶಬ್ದಗಳೇ ಆಗಲಿ ತರಬೇತಿ ತರಗತಿಯಲ್ಲಿ ಕೇಳವು. ಅಮೆರಿಕದಲ್ಲಿ ಏರ್ಪಡಿಸಿದ್ದ ಸಂಭಾಷಣಾ ಶಿಬಿರವೊಂದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಾಧ್ಯಾ ಪಕರು ನೀಡಿದ ಆಭಯ ಹೀಗಿತ್ತು- “ಭಾಷೆಗೆ ಬೇಕಾದ್ದು ಭಕ್ತಿಯೇ ಹೊರತು, ವಿಭಕ್ತಿ ಅಲ್ಲ!" ಭಾಷೆ ಎಂಬುದು ಒಂದು ಸಾಮಾಜಿಕ ಪರಿಕರ.

ಮಕ್ಕಳು ಸಾಮಾಜಿಕ ಒಡನಾಟ ಮತ್ತು ಸಂವಹನೆಯಿಂದ ಭಾಷೆಯನ್ನು ಕಲಿಯುತ್ತಾರೆ. ಸಂಭಾ ಷಣೆ, ಪ್ರಶ್ನೋತ್ತರ, ಆಟೋಟ ಮುಂತಾದವು ಅವರ ಅಭಿವ್ಯಕ್ತಿ ಕೌಶಲವನ್ನು ವರ್ಧಿಸುತ್ತವೆ. ಈಗಾಗಲೇ ಗೊತ್ತಿರುವ ಭಾಷೆಯನ್ನೇ ತಳಹದಿಯಾಗಿಸಿಕೊಂಡು ಮಕ್ಕಳು ಇನ್ನೊಂದು ಮತ್ತೊಂದು ಭಾಷೆಯನ್ನು ಕಲಿಯಲು ಯತ್ನಿಸುತ್ತಾರೆ. ವ್ಯಾಕರಣವನ್ನು ಶಾಲೆಗಳಲ್ಲಿ ಬೋಧಿಸಬೇಕಿಲ್ಲ, ಅದು ಸ್ವಯಂ ಅರಿವಿಗೆ ಬಂದಿರುತ್ತದೆ.

‘ನಾಳೆ ಬಂದೆ’ ಎಂದೋ, ‘ನಿನ್ನೆ ಪತ್ರ ಬರಲಿದೆ’ ಅಥವಾ ‘ಅವನು ಬಂದಳು’ ಎಂದೋ ವಾಕ್ಯದಲ್ಲಿ ಬಂದರೆ ಯಾವುದೇ ವಿದ್ಯಾರ್ಥಿಯು ಆ ‘ಎಡವಟ್ಟನ್ನು’ ಗುರುತಿಸಬಲ್ಲ. ಭಾಷಾ ಕೌಶಲಗಳಿಗೆ ವ್ಯಾಕರಣವು ಪೂರಕವೆನ್ನುವುದರಲ್ಲಿ ಎರಡು ಮಾತಿಲ್ಲ. ನಿಷ್ಠುರ ಮಾತೆಂದರೆ, ವಿದ್ಯಾಲಯದಲ್ಲಿ ವ್ಯಾಕರಣದ ಅಧ್ಯಯನಕ್ಕೆ ಅವಕಾಶವಿಲ್ಲದಿದ್ದರೆ ಅದು ದೊಡ್ಡ ಕೊರತೆಯೇನಲ್ಲ.

(ಲೇಖಕರು ಹಿರಿಯ ಸಾಹಿತಿ)