ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?

ಎರಡು ಮೂರು ದಶಕಗಳ ಹಿಂದೆ ಇದೇ ವಿವಿಗಳಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಪಡೆಯಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದರು. ಇಲ್ಲಿ ಸೀಟು ಸಿಕ್ಕಿದೆ ಎಂದರೆ ಅದು ಹೆಮ್ಮೆ, ಪ್ರತಿಷ್ಠೆಯ ವಿಷಯ ವಾಗಿರುತ್ತಿತ್ತು. ಈಗ ಇದೇ ವಿವಿಗಳಲ್ಲಿ ಎಂ.ಎ ಓದುವವರಿಗಿಂತ ಎಮ್ಮೆಗಳ ಸಂಖ್ಯೆಯೇ ಹೆಚ್ಚು ಕಾಣಿಸುತ್ತಿದೆ. ಅಧಿಕ ಮಾಸದಲ್ಲಿ ದುರ್ಭಿಕ್ಷ ಎಂಬಂತೆ ಕೆಲವು ವಿವಿಗಳು ದೈನಂದಿನ ಆಡಳಿತ ನಡೆಸಲೂ ದುಡ್ಡಿಲ್ಲದೆ ಪರದಾಡುತ್ತಿವೆ. ಕೆಲವು ವಿವಿಗಳು ಬೇಡಿಕೆ ಕಡಿಮೆ ಇರುವ ಕೋರ್ಸ್‌ಗಳನ್ನು ಮುಚ್ಚಲು ಮುಂದಾಗಿವೆ.

ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?

ಲೋಕಮತ

kaayarga@gmail.com

ಉದ್ಯೋಗ ಮಾರುಕಟ್ಟೆಯಲ್ಲಿ ಶಿಕ್ಷಣ ಎಂದರೆ ಜ್ಞಾನಕ್ಕಿಂತಲೂ ಗಳಿಕೆಯ ಮಾರ್ಗವಾಗಿದೆ. ಮಾನವಿಕ ವಿಷಯಗಳೆಂದರೆ ಶೈಕ್ಷಣಿಕವಾಗಿ ದುರ್ಬಲ ವಿದ್ಯಾರ್ಥಿಗಳು ಅಥವಾ ಯಾವುದಕ್ಕೂ ಬೇಡವಾದವರು ಆಯ್ಕೆ ಮಾಡಿಕೊಳ್ಳುವ ವಿಭಾಗವೆಂಬ ತಪ್ಪು ಕಲ್ಪನೆ ಇದೆ. ಸಮಾಜಕ್ಕೆ ದಾರಿದೀಪ ತೋರಿದ ಗಾಂಧೀಜಿ, ಅಂಬೇಡ್ಕರ್, ಕುವೆಂಪು ಮೊದಲಾದ ನಮ್ಮ ಹಿರಿಯರು ಇದೇ ವಿಭಾಗದಲ್ಲಿ ಅರಳಿದವರು. ಜ್ಞಾನ ಶಾಖೆಗಳೆಲ್ಲವೂ ವಿಜ್ಞಾನದ ಕುಂಡಗಳಲ್ಲಿಯೇ ಅರಳಲು ಸಾಧ್ಯವಿಲ್ಲ.

ಅಮೆರಿಕದ ಹೊಸ ವೀಸಾ ನೀತಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಡಬಿಡಂಗಿ ನೀತಿಗಳಿಂದ ಅಮೆರಿಕದಲ್ಲಿ ಉನ್ನತ ಶಿಕ್ಷಣಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ ಗಣನೀಯವಾಗಿ ಇಳಿದಿದೆ. ವಾರ್ಷಿಕ ಸುಮಾರು 3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ವ್ಯಾಸಂಗ ನಡೆಸಲು ಮುಂದಾಗುತ್ತಿದ್ದರು.

ಈ ಬಾರಿ ಶೇ.80ರಷ್ಟು ವಿದ್ಯಾರ್ಥಿಗಳು ಅಮೆರಿಕ ಬಿಟ್ಟು ಬೇರೆ ದೇಶಗಳಲ್ಲಿ ಉನ್ನತ ಅಧ್ಯಯನ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ವರದಿಗಳಿವೆ. ವಿಷಯ ಇದಲ್ಲ. ಅಮೆರಿಕದಲ್ಲಿ ಓದುವ ನಮ್ಮ ವಿದ್ಯಾರ್ಥಿಗಳ ಹೆಬ್ಬಯಕೆಯ ನಡುವೆ ನಮ್ಮ ವಿವಿ ಕ್ಯಾಂಪಸ್‌ಗಳು ಬಿಕೋ ಎನ್ನುತ್ತಿವೆ. ರಜತ ಮಹೋತ್ಸವ, ಸುವರ್ಣ ಮಹೋತ್ಸವ, ಶತಮಾನೋತ್ಸವ ಕಂಡ ರಾಜ್ಯದ ವಿವಿಗಳ ಕ್ಯಾಂಪಸ್‌ಗೆ ನೀವು ಒಮ್ಮೆ ಹೋಗಿ ಬಂದರೆ ಸಾಕು. ಇಲ್ಲಿ ಜೀವಂತಿಕೆ, ಲವಲವಿಕೆಯ ಯಾವ ಕುರುಹುಗಳೂ ಕಾಣುತ್ತಿಲ್ಲ.

ಇದನ್ನೂ ಓದಿ: Lokesh Kaayarga Column: ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ವಿವಿಗಳಲ್ಲಿ ಸೀಟು ಪಡೆಯುವುದಕ್ಕಿಂತ ಕುಲಪತಿ ಹುದ್ದೆಗೆ, ಸಿಂಡಿಕೇಟ್, ಸೆನೆಟ್ ಸ್ಥಾನಕ್ಕೆ ಹೆಚ್ಚು ಪೈಪೋಟಿ ಇದೆ. ಎರಡು ಮೂರು ದಶಕಗಳ ಹಿಂದೆ ಇದೇ ವಿವಿಗಳಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಪಡೆಯಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದರು. ಇಲ್ಲಿ ಸೀಟು ಸಿಕ್ಕಿದೆ ಎಂದರೆ ಅದು ಹೆಮ್ಮೆ, ಪ್ರತಿಷ್ಠೆಯ ವಿಷಯವಾಗಿರುತ್ತಿತ್ತು. ಈಗ ಇದೇ ವಿವಿಗಳಲ್ಲಿ ಎಂ.ಎ ಓದುವವರಿಗಿಂತ ಎಮ್ಮೆಗಳ ಸಂಖ್ಯೆಯೇ ಹೆಚ್ಚು ಕಾಣಿಸುತ್ತಿದೆ. ಅಧಿಕ ಮಾಸದಲ್ಲಿ ದುರ್ಭಿಕ್ಷ ಎಂಬಂತೆ ಕೆಲವು ವಿವಿಗಳು ದೈನಂದಿನ ಆಡಳಿತ ನಡೆಸಲೂ ದುಡ್ಡಿಲ್ಲದೆ ಪರದಾಡುತ್ತಿವೆ. ಕೆಲವು ವಿವಿಗಳು ಬೇಡಿಕೆ ಕಡಿಮೆ ಇರುವ ಕೋರ್ಸ್‌ಗಳನ್ನು ಮುಚ್ಚಲು ಮುಂದಾಗಿವೆ.

ಇನ್ನೊಂದೆಡೆ ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಹೆಚ್ಚಳದ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಹೆಣಗಾಡುತ್ತಿವೆ. ಹಾಗೆಂದು ಉನ್ನತ ಅಧ್ಯಯನಕ್ಕೆ ಮುಂದಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮೊದಲು ಮೈಸೂರು, ಮಂಗಳೂರು, ಧಾರವಾಡ, ಕಲಬುರ್ಗಿ ಮುಂತಾದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿವಿಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸುತ್ತಿದ್ದವರು ಈಗ ‘ಪ್ರತಿಷ್ಠಿತ’ ಎನಿಸಿಕೊಂಡ ಖಾಸಗಿ ವಿವಿಗಳನ್ನು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಇದಕ್ಕಾಗಿ ಲಕ್ಷಗಟ್ಟಲೆ ಫೀಸು ತೆರಲು ಸಿದ್ಧರಾಗಿದ್ದಾರೆ. ಕಡಿಮೆ ಫೀಸಿನ ಸರಕಾರಿ ಅಧೀನದ ವಿವಿಗಳತ್ತ ಇವರ ಆಕರ್ಷಣೆ ಕಡಿಮೆಯಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ನಮ್ಮ ಕೆಲವು ವಿವಿಗಳನ್ನು ಮುಚ್ಚಬೇಕಾದ ಅನಿವಾರ‍್ಯತೆ ಬರಬಹುದು. ಈ ವಿವಿಗಳ ನೂರಾರು ಎಕರೆ ಕ್ಯಾಂಪಸ್ ಮೇಲೆ ರಿಯಲ್ ಎಸ್ಟೇಟ್ ಕಣ್ಣು ಬಿದ್ದರೂ ಅಚ್ಚರಿ ಇಲ್ಲ.

7 R

ಇದೇಕೇ ಹೀಗೆ ಎಂದು ಯೋಚಿಸಿದರೆ ಕಾರಣಗಳು ನೂರೆಂಟು. ನಮ್ಮ ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಪರಿಸ್ಥಿತಿ ಹದಗೆಟ್ಟಂತೆಯೇ ಉನ್ನತ ಶಿಕ್ಷಣವೂ ದಾರಿ ತಪ್ಪಿದೆ. ಶಿಕ್ಷಕರಿಗೆ, ಉಪನ್ಯಾಸಕರಿಗೆ ಸರಕಾರದ ಬೊಕ್ಕಸದಿಂದ ಸಂಬಳ ಕೊಡಲು ಸಿದ್ಧವಿಲ್ಲದ ಸರಕಾರ ನೂರಾರು ಖಾಸಗಿ ಶಾಲೆಗಳಿಗೆ, ವಿವಿಗಳಿಗೆ ಅನುಮತಿ ನೀಡಿದೆ.

ಈಗ ಇದೇ ಶಾಲೆಗಳು, ವಿವಿಗಳು ಸರಕಾರ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆದು ನಿಂತಿವೆ. ಸರಕಾರಿ ಶಾಲೆಗಳು ಮುಚ್ಚುವ ಸುದ್ದಿಗಳ ಜತೆ ಸರಕಾರಿ ಕಾಲೇಜು, ವಿವಿಗಳನ್ನು ಮುಚ್ಚುವ ಸುದ್ದಿಗಳು ಬರುವ ದಿನಗಳು ದೂರವಿದ್ದಂತಿಲ್ಲ.

ಖಾಸಗಿಯವರಿಗೆ ಶಿಕ್ಷಣವೂ ಒಂದು ಲಾಭ ಗಳಿಕೆಯ ದಂಧೆ. ವಿದ್ಯಾರ್ಥಿಗಳನ್ನು ಸೆಳೆಯಲು ಏನೆಲ್ಲಾ ಕಸರತ್ತುಗಳನ್ನು ಮಾಡಬೇಕೋ ಅವೆಲ್ಲವನ್ನೂ ಇವರು ಮಾಡುತ್ತಾರೆ. ಆಕರ್ಷಕ ಜಾಹೀರಾತುಗಳು, ಉದ್ಯೋಗಾಧಾರಿತ ಕೋರ್ಸ್‌ಗಳು, ಕ್ಯಾಂಪಸ್ ಉದ್ಯೋಗದ ಆಮಿಷಗಳು, ಯುಜಿಸಿ, ಎಐಸಿಟಿಇಯ ಶ್ರೇಣಿಗಳನ್ನು ಮುಂದಿಟ್ಟು ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತವೆ.

ಖಾಸಗಿ ವಿವಿಗಳ ಸೀಮಿತ ಜಾಗದ ಕ್ಯಾಂಪಸ್ ನೋಡಿದರೆ ಸರಕಾರಿ ವಿವಿಗಳ ಕ್ಯಾಂಪಸ್ ದೊಡ್ಡದಿದೆ. ಅದ್ದೂರಿ ಅಲ್ಲದಿದ್ದರೂ ಹೊರಗಿನ ವಾತಾವರಣವೂ ಚೆನ್ನಾಗಿರುತ್ತದೆ. ಆದರೆ ಗತಕಾಲದ ಪಠ್ಯಕ್ರಮ, ಡಿಪಾರ್ಟ್‌ಮೆಂಟ್ ರಾಜಕೀಯ, ಜಾತಿ ರಾಜಕೀಯದ ನಡುವೆ ಕಲಿಕೆ ಗಿಂತಲೂ ಕಲಿಕೆಯೇತರ ವಿಷಯಗಳ ಮೇಲೆ ಆಸಕ್ತ ಬೋಧಕ ವರ್ಗ ಈ ವಿದ್ಯಾರ್ಥಿಗಳನ್ನು ಇಲ್ಲಿಗೆ ಬರದಂತೆ ತಡೆಯುತ್ತಿವೆ.

ಸರಕಾರಿ ವಿವಿಗಳನ್ನು ಅನುಸರಿಸಿ ಖಾಸಗಿ ವಿವಿಗಳು ಆರಂಭವಾದರೆ, ಈಗ ಪರಿಸ್ಥಿತಿ ಉಲ್ಟಾ. ಸರಕಾರಿ ವಿವಿಗಳನ್ನು ಉಳಿಸಲು ಖಾಸಗಿಯವರಂತೆ ಉದ್ಯೋಗಾಧಾರಿತ ಕೋರ್ಸ್‌ಗಳನ್ನು ಆರಂಭಿ ಸುವಂತೆ, ನಷ್ಟಕ್ಕೆ ಕಾರಣವಾಗುವ ಕೋರ್ಸ್‌ಗಳನ್ನು ಮುಚ್ಚುವಂತೆ ಸರಕಾರವೇ ವಿವಿಗಳ ಮೇಲೆ ಒತ್ತಡ ಹೇರುತ್ತಿದೆ. ಇನ್ನು ಮುಂದೆ ವಿವಿಗಳೆಂದರೆ ನಿಮಗೆ ಬೇಕಾದ ವಿಷಯಗಳಲ್ಲಿ ಜ್ಞಾನಾರ್ಜನೆಗೆ ಅವಕಾಶ ನೀಡುವ ಕೇಂದ್ರಗಳಾಗಿ ಉಳಿಯುವುದಿಲ್ಲ.

ವೃತ್ತಿಪರ ಕೋರ್ಸ್‌ಗಳನ್ನು ನಡೆಸುವ ಕಾಲೇಜು, ವಿವಿಗಳಂತೆ ಸಾಂಪ್ರದಾಯಿಕ ವಿವಿಗಳು ಬದಲಾಗುತ್ತಿವೆ. ಕಲೆ, ಭಾಷೆ, ಸಾಹಿತ್ಯ, ಇತಿಹಾಸದ ಸಂಶೋಧನೆಗಳಿಗೆ ಆದ್ಯತೆ ನೀಡುವ ಮಾನವಿಕ ಕೋರ್ಸ್‌ಗಳು ನಿಧಾನವಾಗಿ ಮರೆಗೆ ಸರಿಯುತ್ತಿವೆ. ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಮೈಸೂರು ವಿವಿಯಲ್ಲಿ ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದವರು.

ಈಗ ತತ್ವಶಾಸ್ತ್ರ ರಾಜ್ಯದ ಕೆಲವೇ ವಿವಿಗಳಲ್ಲಿ ಲಭ್ಯವಿರುವ, ಕೆಲವೇ ವಿದ್ಯಾರ್ಥಿಗಳಿರುವ ಕೋರ್ಸ್. ಬೇಡಿಕೆ ಇಲ್ಲ ಎನ್ನುವುದಕ್ಕಿಂತಲೂ ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಸರಕಾರಿ ವಿವಿಗಳು ಹಲವು ಕೋರ್ಸ್‌ಗಳನ್ನು ನಿಲ್ಲಿಸಿವೆ. ದಶಕಗಳ ಹಿಂದೆ ಮಂಗಳೂರು ವಿವಿ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ರಾಜ್ಯದ ಇತರ ವಿವಿಗಳಿಗಿಂತ ಒಂದು ಹೆಜ್ಜೆ ಇತ್ತು.

ಮೂರು ದಶಕಗಳ ಹಿಂದೆಯೇ ಈ ವಿವಿಯಲ್ಲಿ ಟಿಸಿಎಸ್ ಸಹಭಾಗಿತ್ವದಲ್ಲಿ ರಾಜ್ಯದ ಮೊಟ್ಟ ಮೊದಲ ಕಂಪ್ಯೂಟರ್ ಸೈನ್ಸ್ ಕೋರ್ಸ್ ಆರಂಭವಾಗಿತ್ತು. ಆದರೆ ಈಗ ನಿಗದಿತ ಪ್ರಮಾಣದ ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಒಂದೊಂದೇ ವಿಭಾಗಗಳಿಗೆ ಬೀಗ ಜಡಿಯಲಾಗುತ್ತಿದೆ.

ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಪರಿಸರ ವಿಜ್ಞಾನ, ಮೆಟಿರಿಯಲ್ ಸೈನ್ಸ್, ಜಿಯೋ ಇನ್ಪಾರ್ಮೆ ಟಿಕ್ಸ್ , ಎಲೆಕ್ಟ್ರಾನಿಕ್ಸ್ , ಸಂಖ್ಯಾಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಪ್ರವಾಸೋ ದ್ಯಮ ಮೊದಲಾದ ವಿಭಾಗಗಳು ಈಗ ಇತಿಹಾಸದ ಪುಟ ಸೇರಲು ಸಿದ್ಧವಾಗಿವೆ.

ಮಂಗಳೂರು ವಿವಿ ಕಾಲೇಜಿನಲ್ಲಿದ್ದ ತುಳು, ಕೊಂಕಣಿ ಕೋರ್ಸ್‌ಗಳು, ಹಿಂದಿ, ಇಂಗ್ಲಿಷ್ ಮೇಜರ್ ಭಾಷಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು ಉತ್ತರ ವಿವಿ ಯಲ್ಲೂ ಇದೇ ಪರಿಸ್ಥಿತಿ. ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ಹೆಸರು ಮಾಡಿದ ನಿರಂಜನ ವಾನಳ್ಳಿ ಅವರು ಕುಲಪತಿಯಾಗಿ ರುವ ಈ ವಿವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಇಂಗ್ಲಿಷ್ ಭಾಷಾ ವಿಭಾಗ ಸೇರಿದಂತೆ ಹಲವು ವಿಭಾಗಗಳನ್ನು ಮುಚ್ಚಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲವು ಕೋರ್ಸ್‌ಗಳು ತಾಂತ್ರಿಕ ವಿವಿಯಲ್ಲಿ ಲಭ್ಯವಿದೆ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಆ ಕಡೆ ಆಸಕ್ತರಾಗಿದ್ದಾರೆ. ಆದರೆ ಮಾನವಿಕ ಕೋರ್ಸ್ ಗಳ ಅಧ್ಯಯನಕ್ಕೆ ಸಾಂಪ್ರದಾಯಿಕ ವಿವಿಗಳಿಗಿಂತ ಪ್ರಶಸ್ತ ಸ್ಥಳ ಮತ್ತೊಂದಿಲ್ಲ. ಇಲ್ಲಿ ವಿದ್ಯಾರ್ಥಿಗಳು ಬಂದಿಲ್ಲ ಎಂದರೆ ಅವರನ್ನು ಆಕರ್ಷಿಸಲು ಈ ವಿವಿಗಳು ವಿಫಲವಾಗಿವೆ ಎಂದರ್ಥ.

ಸಾಂಪ್ರದಾಯಿಕ ವಿವಿಗಳು ಕಲಿಕೆ, ಅಧ್ಯಯನಕ್ಕಿಂತಲೂ ಒಳ ರಾಜಕೀಯ, ಜಾತಿ ರಾಜಕೀಯ, ಸ್ವಜನಪಕ್ಷ ಪಾತದ ಕೇಂದ್ರಗಳಾದ ಕಾರಣಕ್ಕೆ ವಿದ್ಯಾರ್ಥಿಗಳು ದೂರ ಸರಿದಿದ್ದಾರೆ. ಸರಕಾರಿ ವಿವಿಗಳ ಈ ದೌರ್ಬಲ್ಯವೇ ಖಾಸಗಿ ವಿವಿಗಳ ಪಾಲಿಗೆ ವರದಾನವಾಗಿದೆ. ಇಲ್ಲಿ ಜನಸಾಮಾನ್ಯರಿಗೂ ಸಿಗುವಂತಿದ್ದ ಉನ್ನತ ಶಿಕ್ಷಣ ವೃತ್ತಿಪರ ಶಿಕ್ಷಣದಂತೆ ದುಬಾರಿಯಾಗಿದೆ. ರಾಜ್ಯದಲ್ಲಿ ಪದವಿ ಪೂರ್ವ ಹಂತದಲ್ಲೇ ಕಲಾವಿಭಾಗವನ್ನು ನಿರ್ಲಕ್ಷಿಸಲಾಗುತ್ತದೆ.

ಬೇರೆಲ್ಲೂ ಸೀಟು ಸಿಗದವರು ಆರ್ಟ್ಸ್ ಸೇರುತ್ತಾರೆ ಎಂಬ ವಾತಾವರಣ ಸೃಷ್ಟಿ ಮಾಡಲಾಗಿದೆ. ಪದವಿ ಹಂತದಲ್ಲೂ ಕಲಾ ವಿಭಾಗ ನಿರ್ಲಕ್ಷಿತ ಕೋರ್ಸ್. ಆದರೆ ಉತ್ತರದ ರಾಜ್ಯಗಳಲ್ಲಿ ಈ ಕೋರ್ಸ್‌ಗೆ ಈಗಲೂ ಬಲು ಬೇಡಿಕೆ ಇದೆ. ದಿಲ್ಲಿ ಸ್ಕೂಲ್ ಇಕಾನಾಮಿಕ್ಸ್ ಸೇರಿದಂತೆ ದಿಲ್ಲಿಯ ಹಲವು ಕಾಲೇಜುಗಳಿಗೆ ಸೇರಲು ದೇಶವ್ಯಾಪಿ ಸ್ಪರ್ಧೆ ಇದೆ. ನಮ್ಮ ರಾಜ್ಯದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಇಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆ ಬರೆದು ಅಲ್ಲಿ ಸೇರುತ್ತಿದ್ದಾರೆ.

ಎಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣವೊಂದನ್ನೇ ಗುರಿಯಾಗಿಸಿಕೊಂಡಿರುವ ನಮ್ಮ ಸರಕಾರ ಮತ್ತು ಪಾಲಕರು ಬೇರೆಡೆಗೆ ಗಮನ ಹರಿಸಲು ಸಿದ್ಧರಿಲ್ಲ. ಅದರಲ್ಲೂ ಇತ್ತೀಚೆಗೆ ಎಂಜಿನಿಯರಿಂಗ್ ಶಿಕ್ಷಣ ಎಂದರೆ ಕಂಪ್ಯೂಟರ್ ಶಿಕ್ಷಣ ಮಾತ್ರ ಎಂದಾಗಿದೆ. ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಲವು ಕೋರ್ಸ್‌ಗಳು ಈಗಾಗಲೇ ತೆರೆಮರೆಗೆ ಸರಿದಿವೆ.

ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್, ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರಿಂಗ್, ಇಂಡಸ್ಟ್ರಿಯಲ್ ಇಂಜಿನಿಯರಿಂಗ್, ಟೆಕ್ಸ್‌ಟೈಲ್ ಇಂಜಿನಿಯರಿಂಗ್, ಪಾಲಿಮರ್ ಇಂಜಿನಿಯರಿಂಗ್, ಟೆಲಿ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಮೊದಲಾದ ಹಲವ ಕೋರ್ಸ್‌ಗಳಿಗೆ ಬಹುತೇಕ ಕಾಲೇಜುಗಳಲ್ಲಿ ಬೀಗ ಜಡಿಯಲಾಗಿದೆ.

ಕೆಲವು ವರ್ಷಗಳ ಹಿಂದೆ ಬಲು ಬೇಡಿಕೆಯ ಕೋರ್ಸ್‌ಗಳಾಗಿದ್ದ ಸಿವಿಲ್, ಮೆಕ್ಯಾನಿಕಲ್, ಏರೋ ನಾಟಿಕಲ್ ಮೊದಲಾದ ಇಂಜನಿಯರಿಂಗ್ ಕೋರ್ಸ್‌ಗಳಲ್ಲೂ ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇವುಗಳ ಜಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿಯೇ ಹಲವು ಶಾಖೆಗಳಾಗಿ ಕವಲೊಡೆದ ಎಐಎಂಎಲ್, ಡಾಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಮುಂತಾದ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಸಾವಿರಾರು ವಿದ್ಯಾರ್ಥಿಗಳಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಇದೊಂದೇ ಶಾಖೆಯಲ್ಲಿದ್ದಾರೆ.

ಎಐ ತಂತ್ರಜ್ಞಾನದ ಪ್ರಭಾವ ಈಗಾಗಲೇ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಟೆಕ್ ದೈತ್ಯ ಕಂಪನಿ ಟಿಸಿಎಸ್ ಸುಮಾರು 12 ಸಾವಿರ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ. ಶಿಕ್ಷಣದ ಈ ಏಕಮುಖ ಪ್ರವಾಹ ನಮ್ಮ ದೇಶದ ಬೆಳವಣಿಗೆಗೆ ಅಡ್ಡಿಯಾದರೆ ಅಚ್ಚರಿ ಯೇನೂ ಇಲ್ಲ. ಶಿಕ್ಷಣ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಪೂರಕವಾಗಿರಬೇಕು. ಹಾಗೆಯೇ ಶಿಕ್ಷಣ ವ್ಯವಸ್ಥೆ ದೇಶದ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ವಿವಿ ಕ್ಯಾಂಪಸ್‌ಗಳಿಗೆ ಮತ್ತೆ ಜೀವ ತುಂಬಬೇಕಾಗಿದೆ.