ಕಾಡುದಾರಿ
ಕೊಡಗಿನ ತಡಿಯಂಡಮೋಳ್ ಬೆಟ್ಟದ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಯಾವ ಅಪಾಯವೂ ಆಗದೆ ಮರಳಿ ಬಂದದ್ದೇ ಸುಮಾರು ಮಂದಿಗೆ ಸಂಕಟ ತಂದಂತಿದೆ. ಕಾನ್ ಸ್ಪಿರಸಿ ಥಿಯರಿಗಳು ಹಾರಾಡಿವೆ. ಕೊಡಗು- ಕೇರಳದ ಗಡಿಭಾಗ ಅತ್ತ ಕೇರಳಿಗರ ಮತ್ತು ಇತ್ತ ಕೊಡ ವರ ತಿಕ್ಕಾಟದ ಜಾಗವೂ ಆಗಿರುವುದರಿಂದ ಇಂಥ ಸಂಚು ಥಿಯರಿಗಳಿಗೆ ಬಹಳಷ್ಟು ಆಸ್ಪದವಿದೆ.
ಯುವತಿಯೊಬ್ಬಳು ಒಂಟಿಯಾಗಿ ಟ್ರೆಕ್ಕಿಂಗ್ ಹೋಗಬಹುದು, ತಪ್ಪಿಸಿಕೊಂಡರೂ ಛಲ- ಉತ್ಸಾಹ ಉಳಿಸಿಕೊಂಡು ಮರಳಿ ಬರಬಹುದು ಎಂಬುದನ್ನು ಕೂಡ ಒಪ್ಪಲು ಸಾಧ್ಯವಿಲ್ಲದ ‘ಪುರುಷ ಅಹಂಕಾರ’ ಕೂಡ ಈ ಟೀಕೆಗಳ ಹಿಂದೆ ಇರುವಂತಿದೆ. ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಈಕೆ ಕಾಡು ಸುತ್ತಿ ಅಭ್ಯಾಸ ಹೊಂದಿದ್ದವರು.
ಪ್ಯಾನಿಕ್ ಆಗದೆ ಸಮಯಪ್ರಜ್ಞೆ ಉಳಿಸಿಕೊಂಡರೆ ಇಂಥ ಸಂದರ್ಭಗಳಲ್ಲಿ ಒಂಟಿಯಾಗಿ ಬದುಕಿ ಬರುವುದು ಸಾಧ್ಯ ಎಂದು ಈ ಹಿಂದಿನ ಸರ್ವೈವಲ್ ಸ್ಟೋರಿಗಳು ನಿರೂಪಿಸಿವೆ. ವಿಮಾನ ಅಪಘಾತ ದಲ್ಲಿ ಬದುಕುಳಿದು ಅಮೆಜಾನ್‌ನ ದಟ್ಟ ಕಾಡಿನಲ್ಲಿ 11 ದಿನಗಳ ಕಾಲ ಜೀವ ಉಳಿಸಿಕೊಂಡು ಬಂದ ಜೂಲಿಯನ್ ಕೋಪೆಕೆ (Juliane Koepcke) ಕತೆ ಕುತೂಹಲಕಾರಿ ಯಾಗಿದೆ.
ಈಕೆ ಜರ್ಮನ್ ಪ್ರಾಣಿಶಾಸ್ತ್ರಜ್ಞ ದಂಪತಿ ಮಾರಿಯಾ ಕೋಪೆಕೆ ಮತ್ತು ಹಾನ್ಸ್-ವಿಲ್ಹೆಲ್ಮ್ ಕೋಪೆಕೆ ಮಗಳು. ಬಾಲ್ಯದಿಂದಲೂ ಈಕೆ ಹೆತ್ತವರ ಜೊತೆ ಕಾಡಿನ ಒಡನಾಟ ಹೊಂದಿದ್ದವಳೇ. ಈ ಘಟನೆ ಸಂಭವಿಸಿದಾಗ ಅವಳಿಗೆ 17 ವರ್ಷ. ತಾಯಿಯ ಜೊತೆಗೆ ಪೆರು ದೇಶದ ಲಿಮಾದಲ್ಲಿ ಲಾನ್ಸಾ 508 ವಿಮಾನ ಹತ್ತಿದ್ದಳು. ಅವರು ಪೆರು ದೇಶದ ಪಂಗ್ವಾನಾ ಸಂಶೋಧನಾ ಕೇಂದ್ರದಲ್ಲಿದ್ದ ತಂದೆ ಯನ್ನು ಭೇಟಿ ಮಾಡುವುದಿತ್ತು.
ಮಾರಿಯಾ ಮತ್ತು ಹಾನ್ಸ್-ವಿಲ್ಹೆಲ್ಮ್ ಈ ಸಂಶೋಧನಾ ಕೇಂದ್ರವನ್ನು ಕೆಲವು ವರ್ಷಗಳ ಹಿಂದೆ ಸ್ಥಾಪಿಸಿದ್ದರು. ಆದರೆ ಅವರ ಪ್ರಯಾಣಕ್ಕೆ ದುರಂತ ಎರಗಿತು. ಅದು ಮಳೆಗಾಲ. ವಿಮಾನಕ್ಕೆ ಸಿಡಿಲು ಬಡಿಯಿತು. ಪರಿಣಾಮ ವಿಮಾನ ಗಗನಮಧ್ಯದ ಎಂಜಿನ್ ವಿಫಲವಾಗಿ ಒಡೆದು ಚೂರು ಚೂರಾ ಗುತ್ತಾ ದಟ್ಟ ಅಮೆಜಾನ್ ಕಾಡಿನೊಳಕ್ಕೆ ಪತನಗೊಂಡಿತು.
ಇದನ್ನೂ ಓದಿ: Harish Kera Column: ಎಐ ಅಕ್ಷಹೃದಯ, ಕಾದಂಬರಿ ಅಶ್ವಹೃದಯ !
ಕೋಪೆಕೆ ವಿಮಾನದಲ್ಲಿ ತನ್ನ ಆಸನಕ್ಕೆ ಕಟ್ಟಿಕೊಂಡಿದ್ದ ಸ್ಥಿತಿಯ ಸುಮಾರು 10,000 ಅಡಿ ಎತ್ತರ ದಿಂದ ಆ ದಟ್ಟ ಅರಣ್ಯದೊಳಗೆ ಬಿದ್ದುಹೋದಳು. ವಿಪರೀತ ಮಳೆಗಾಳಿ. ಈಕೆಯ ಅದೃಷ್ಟ ನೋಡಿ. ಈಕೆಯ ಅಮ್ಮನನ್ನೂ ಸೇರಿಸಿ ವಿಮಾನದಲ್ಲಿದ್ದ ಎಲ್ಲ 92 ಮಂದಿಯೂ ಸತ್ತು ಹೋಗಿದ್ದರು. ಆದರೆ ಇದೆಲ್ಲ ಆಕೆಗೆ ಗೊತ್ತಾದದ್ದು ಹೊರ ಜಗತ್ತಿಗೆ ಬಂದ ನಂತರವೇ. ಯಾಕೆಂದರೆ ಆಕೆ ಕುಳಿತಿದ್ದ ಸೀಟು ಆಕೆಯನ್ನೂ ಕಟ್ಟಿಕೊಂಡು ಅಪಘಾತದ ಜಾಗದಿಂದ ಬಲುದೂರ ಎಲ್ಲಾ ಸಿಡಿದು ಬಿದ್ದಿತ್ತು. ಈಕೆಯ ಪ್ರಜ್ಞೆ ಹೋಗುತ್ತಿತ್ತು, ಬರುತ್ತಿತ್ತು.
ಏನಾಯಿತೆಂದು ಸರಿಯಾಗಿ ತಿಳಿಯಲು ಒಂದು ದಿನವೇ ಬೇಕಾಯಿತು. ಆಕೆಯ ಕಾಲರ್ ಮೂಳೆ ಮುರಿದಿತ್ತು. ಭುಜದ ಮೇಲೆ ಆಳವಾದ ಗಾಯಗಳಾಗಿದ್ದವು. ಅವಳ ಸಂಕಷ್ಟ ಆಗಷ್ಟೇ ಆರಂಭ ವಾಗಿತ್ತು. ಎರಡನೇ ದಿನಕ್ಕೆ ಆಕೆಗೆ ದಟ್ಟ ಕಾಡಿನ ನಡುವೆ ಇದ್ದೇನೆಂದೂ, ಇಲ್ಲಿ ರಕ್ಷಿಸಲು ಬರುವವ ರು ಯಾರೂ ಇಲ್ಲವೆಂದೂ (ಇದು 1971ರ ಕತೆ) ಅಂದಾಜಾಯಿತು.
ಆಕಾಶದಲ್ಲಿ, ಮರಗಳ ದಟ್ಟ ಛಾವಣಿಯ ಮೇಲೆ ಎಲ್ಲಾ ವಿಮಾನಗಳ ಸದ್ದು. ಬಹುಶಃ ರಕ್ಷಣಾ ಕಾರ್ಯಾಚರಣೆಗೆ ಬಂದುದಿರಬಹುದು- ಆ ಸದ್ದು ಕೂಡ ನಿಧಾನವಾಗಿ ಕ್ಷೀಣಿಸಿತು. ಬದುಕುವ ಹಠ ಜಾಗೃತವಾಯಿತು. ಹಸಿವು, ನೀರಡಿಕೆ ಜಾಗೃತವಾಯಿತು. ಮಳೆಯ ಕಾರಣದಿಂದ, ನೀರೇನೋ ಇತ್ತು. ಎಲೆಯಲ್ಲಿ ಸಂಗ್ರಹಿಸಿಕೊಂಡು ಕುಡಿಯುತ್ತಿದ್ದಳು.
ಹುಡುಕಿದಾಗ, ಆಕೆಯ ಪಕ್ಕದ ಒಂದು ಕ್ಯಾಂಡಿ ಬಾಕ್ಸ್ ಆಕೆಗೆ ಸಿಕ್ಕಿತು. ಬಹುಶಃ ಯಾರೋ ಪ್ರಯಾಣಿ ಕರದು. ಅದನ್ನೇ ಇಟ್ಟುಕೊಂಡು ಅಲ್ಲಿಂದ ಹೊರಟು ಕಷ್ಟಪಟ್ಟು ಅಮೆಜಾನ್ ಮಳೆಕಾಡಿನಲ್ಲಿ ದಾರಿ ಹುಡುಕಲು ಪ್ರಾರಂಭಿಸಿದಳು. ದಾರಿ ಎಲ್ಲಿತ್ತು? ಅದೃಷ್ಟವಶಾತ್, ಇಂತಹ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಆಕೆಗೆ ಸಾಮಾನ್ಯರಿಗಿಂತ ಹೆಚ್ಚಿನ ಜ್ಞಾನ ಇತ್ತು.
ಅದು ಬಂದದ್ದು ಅವಳ ಪೋಷಕರಿಂದ. ಅವಳೂ ಸ್ಥಳೀಯ ಮಳೆಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಿದ್ದಳು. ಅಲ್ಲಿನ ಸಸ್ಯಗಳು ಮತ್ತು ಪ್ರಾಣಿಗಳ ಬಗ್ಗೆ ಪರಿಚಯವಿತ್ತು. ತಂದೆ ಹೇಳಿದ್ದನ್ನು ನೆನಪಿಸಿಕೊಂಡಳು- ‘ಹರಿಯುವ ನೀರಿನ ಜಾಡನ್ನು ಹಿಂಬಾಲಿಸು. ಅದರ ಪಕ್ಕದಲ್ಲಿ ಎದರೂ ಜನವಸತಿ ಸಿಕ್ಕೇ ಸಿಗುತ್ತದೆ’. ಇದು ಮುಂದೆ ಆಕೆಗೆ ನೆರವಾಯಿತು.
ಹೀಗೇ ಎಂಟು ದಿನಗಳು ಸಂದವು. ಮನುಷ್ಯರ ಸದ್ದು- ಸುದ್ದಿಯಿಲ್ಲ. ದಾರಿಗಡ್ಡವಾಗಿ ಉದ್ದುದ್ದದ ಸರ್ಪಗಳು ಸಿಗುತ್ತಿದ್ದವು. ಚಿರತೆಗಳು ಈಕೆಯನ್ನು ಗಮನಿಸಿದ್ದಿರಬೇಕು- ಆದರೆ ತೊಂದರೆ ಕೊಡ ಲಿಲ್ಲ. ಆದರೆ ಕೀಟಗಳ ಹಾವಳಿ ಬಹಳ. ದೊಡ್ಡ ಸೊಳ್ಳೆಗಳು, ವಿಷಕಾರಿ ಜೇಡಗಳ ತಾಣ.
ಎಂಟು ದಿನದಲ್ಲಿ ಈಕೆಯ ಭುಜದ ಗಾಯಗಳು ಕೊಳೆತು, ಅದರಲ್ಲಿ ಹುಳಗಳು ಮಿಲಮಿಲ ಎನ್ನ ತೊಡಗಿದವು. ಆಪರೇಷನ್ ಮಾಡದಿದ್ದರೆ ಕೈ ಕತ್ತರಿಸುವ ಅಗತ್ಯ ಬೀಳಲಿತ್ತು. ಆ ಹತ್ತು ದಿನಗಳಲ್ಲಿ ಆಕೆ ತನ್ನ ಹಸಿವನ್ನು ನೀಗಿಸಿದ್ದು ತನ್ನ ಬಳಿ ಇದ್ದ ಕ್ಯಾಂಡಿಗಳಿಂದ.
ಮಳೆಗಾಲವಾದ್ದರಿಂದ ಹಣ್ಣುಗಳೂ ಇರಲಿಲ್ಲ. ಕಂಡ ಹಣ್ಣುಗಳನ್ನು ತಿನ್ನದಂತೆ ವಿವೇಕ ಹೇಳಿತು. ಕಾರಣ, ಅವು ವಿಷಕಾರಿ ಆಗಿರುವ ಸಾಧ್ಯತೆ. ತಾಳೆಹಣ್ಣು ಬಿಡಿಸಿ ತಿನ್ನಬಹುದಿತ್ತು, ಆದರೆ ಅವಳ ಬಳಿ ಅದನ್ನು ಬಿಡಿಸಲು ಚಾಕುವಿನಂಥ ಆಯುಧ ಕೂಡ ಇರಲಿಲ್ಲ.
ಒದ್ದಾಡುತ್ತಾ ತೊರೆಯ ಜಾಡನ್ನು ಹಿಂಬಾಲಿಸುತ್ತಾ ಸಾಗಿದಳು ಕೊಪೆಕೆ. ನಿಧಾನವಾಗಿ ತೊರೆಯು ನದಿಯಾಗಿ ಪರಿವರ್ತ ನೆಯಾಯಿತು. ಹಗಲು ನದಿಯ ಬದಿಯಲ್ಲಿ ನಡೆಯುತ್ತಿದ್ದಳು. ಕೆಲವೊಮ್ಮೆ ನದಿಯಂಚಿನ ನೀರಿನಲ್ಲಿ ನಿಂತ ವಿಷಕಾರಿ ಸ್ಟಿಂಗ್‌ರೇಗಳಿಂದ ಪಾರಾಗಲು ನೀರಿನಲ್ಲಿ ಈಜುತ್ತಿದ್ದಳು. ಕಾಡಿನ ನಡುವೆ ಬಲುಬೇಗ ಕತ್ತಲಾಗುತ್ತಿತ್ತು. ರಾತ್ರಿ ಸಾಧ್ಯವಾದಷ್ಟು ಸುರಕ್ಷಿತ ಜಾಗ ನೋಡಿ ಕೊಂಡು ವಿಶ್ರಾಂತಿ ಪಡೆಯುತ್ತಿದ್ದಳು. ಕೀಟಗಳು ಹೈರಾಣು ಮಾಡುತ್ತಿದ್ದವು.
ತುಸು ನಿದ್ರೆ ಬಿದ್ದರೆ ರುಚಿರುಚಿಯಾದ ತಿಂಡಿ ತಿನಿಸಿನ ಕನಸು ಬೀಳುತ್ತಿತ್ತು. ಹತ್ತನೇ ದಿನದ ಕೊನೆಗೆ, ಸ್ಥಳೀಯ ಅರಣ್ಯ ಕಾರ್ಮಿಕರು ನಿರ್ಮಿಸಿದ್ದ ತಾಳೆ ಎಲೆಗಳ ಛಾವಣಿಯ ಗುಡಿಸಿಲೊಂದು ಸಿಕ್ಕಿತು. ಅಲ್ಲಿ ಅವರು ತಂದಿಟ್ಟ ಒಂದು ಕ್ಯಾನ್ ಪೆಟ್ರೋಲ್ ಕಂಡಿತು. ಅದನ್ನೇ ಭುಜದ ಗಾಯಗಳ ಮೇಲೆ ಸುರಿದುಕೊಂಡು, ಗಾಯದಲ್ಲಿ ಹೊರಳುತ್ತಿದ್ದ ಹುಳಗಳನ್ನು ಒಂದೊಂದಾಗಿ ತೆಗೆದು ಬಿಸಾಕಿದಳು.
ಈ ಹಿಂದೆ ಅವಳ ತಂದೆ ನಾಯಿಯೊಂದರ ಗಾಯದಿಂದ ಹೀಗೆ ಮಾಡಿದ್ದು ಆಕೆಯ ನೆನಪಿನಲ್ಲಿತ್ತು. ನಂತರ ಕೊಪೆಕೆ ಅಲ್ಲಿಯೇ ನಿದ್ರೆಗೆ ಜಾರಿದಳು. ಮರುದಿನ ಬೆಳಿಗ್ಗೆ ಪೆರುವಿನ ಅರಣ್ಯ ಕಾರ್ಮಿಕರು ಅಲ್ಲಿಗೆ ಮರಳಿದಾಗ ಕೊಪೆಕೆಯನ್ನು ನೋಡಿ ಆಶ್ಚರ್ಯಚಕಿತರಾದರು. ಅದೃಷ್ಟ ಆಕೆಯ ಕಡೆಗಿತ್ತು.
ಆಕೆಗೆ ತಂದೆ ಕಲಿಸಿದ ಅಲ್ಪಸ್ವಲ್ಪ ಸ್ಪ್ಯಾನಿಷ್ ಭಾಷೆಯೂ ಗೊತ್ತಿದ್ದರಿಂದ, ತಮ್ಮ ಕತೆಯನ್ನೆಲ್ಲ ಕಾರ್ಮಿಕರಿಗೆ ಹೇಳಲು ಸಾಧ್ಯವಾಯಿತು. ಕೊನೆಗೂ ಅವರ ಸಹಾಯದಿಂದ ಜೋಲಿಯಲ್ಲಿ, ನಂತರ ದೋಣಿಯಲ್ಲಿ ಆ ದುರ್ಗಮ ಕಾಡಿನಿಂದ ಹೊರಬಂದು, ಒಂದು ಹಳ್ಳಿಗೆ ತಲುಪಿದಳು. ನಂತರ ರಕ್ಷಣಾ ಸಿಬ್ಬಂದಿ ಅವಳನ್ನು ವಿಮಾನ ಮೂಲಕ ಕರೆತಂದು ಆಸ್ಪತ್ರೆಗೆ ದಾಖಲಿಸಿದರು. ಈಕೆ ಸತ್ತೇ ಹೋಗಿದ್ದಳೆಂದು ಭಾವಿಸಿದ್ದ ತಂದೆಯೂ ಅಚ್ಚರಿಯಾಗುವಂತೆ ಆಕೆ ಬದುಕಿ ಬಂದಿದ್ದಳು.
ಚೇತರಿಸಿಕೊಂಡ ನಂತರ, ವಿಮಾನ ಪತನವಾದ ಸ್ಥಳವನ್ನು ಪತ್ತೆ ಹಚ್ಚಲು, ತಾಯಿಯ ದೇಹ ಸೇರಿದಂತೆ ಇತರ ಬಲಿಪಶುಗಳ ಶವಗಳನ್ನು ಹೊರ ತೆಗೆಯಲು ರಕ್ಷಣಾ ತಂಡಗಳಿಗೆ ಆಕೆ ಸಹಾಯ ಮಾಡಿದಳು. ಈಗಲೂ ಅವರು ಟೆಡ್ ಟಾಕ್ ಮುಂತಾದ ಕಡೆ ತಮ್ಮ ಕತೆಯನ್ನು ನಿರೂಪಿಸುತ್ತಿರು ತ್ತಾರೆ.
ಇದು 55 ವರ್ಷಗಳ ಹಿಂದಿನ ಕತೆಯಾದರೆ, 2023ರಲ್ಲಿ ನಡೆದ ಇನ್ನೊಂದು ಘಟನೆ ನಮ್ಮನ್ನು ಮತ್ತಷ್ಟು ಚಕಿತಗೊಳಿಸುವಂತಿದೆ. ಇದು ಕೊಲಂಬಿಯಾದ ದಟ್ಟ ಕಾಡಿನಲ್ಲಿ ಪತನಗೊಂಡ ವಿಮಾನದಿಂದಲೂ ಉಳಿದು, 40 ದಿನಗಳ ಕಾಲ ಕಾಡಿನಲ್ಲಿ ಜೀವ ಉಳಿಸಿಕೊಂಡ ನಾಲ್ಕು ಮಕ್ಕಳ ಕತೆ. ಅದರಲ್ಲಿ ಒಂದು ಮಗುವಿಗೆ ಆಗಷ್ಟೇ 11 ತಿಂಗಳು.
ಉಳಿದ ಮೂವರು 13, 9 ಮತ್ತು 4 ವರ್ಷದವರು. ಇವರೆಲ್ಲ ಸ್ಥಳೀಯ ಆದಿವಾಸಿಗಳಾದ ಹುಟುಟೊ ಸಮುದಾಯದವರು. ಕಾಡಿನ ಜೀವನವನ್ನು ಆಳವಾಗಿ ಬಲ್ಲವರಾಗಿದ್ದರು. ಅದೇ ಅವರನ್ನು ಬದುಕಿಸಿದ್ದು. ಸಿಂಗಲ್ ಇಂಜಿನ್ ಸಣ್ಣ ಸೆಸ್ನಾ ವಿಮಾನದಲ್ಲಿ ತಮ್ಮ ತಾಯಿಯ ಜೊತೆಗೆ ಪಕ್ಕದ ಪಟ್ಟಣಕ್ಕೆ ಹೊರಟಿದ್ದರು.
ವಿಮಾನ ಛಿದ್ರಗೊಂಡು ಕಾಡಿನೊಳಗೆ ಬಿತ್ತು. ಈ ಮಕ್ಕಳಲ್ಲದೇ ಇನ್ನೂ ಮೂವರು ವಿಮಾನ ದಲ್ಲಿದ್ದರು. ಇಬ್ಬರು ಸತ್ತು ಹೋದರು. ತಾಯಿ ನಾಲ್ಕು ದಿನಗಳ ಕಾಲ ಜೀವ ಹಿಡಿದುಕೊಂಡಿದ್ದಳು. ನಾಲ್ಕನೇ ದಿನ ಆಕೆಯ ಉಸಿರೂ ನಿಂತಿತು. ಸಾಯುವ ಮೊದಲು, ‘ನನ್ನನ್ನು ಬಿಡಿ, ನೋವು ಹೊರಡಿ’ ಎಂದು ಆಕೆ ಮಕ್ಕಳಿಗೆ ಹೇಳಿದಳು.
ಮಕ್ಕಳು, ದೊಡ್ಡ ಮಗು ಲೆಸ್ಲಿಯ ನೇತೃತ್ವದಲ್ಲಿ ಕಾಡಿನಲ್ಲಿ ಹೊರಟವು. 16ನೇ ದಿನ ರಕ್ಷಣಾ ಕಾರ್ಯಾಚರಣೆ ತಂಡ ಅಪಘಾತದ ತಾಣ ತಲುಪಿದಾಗ ಮೂವರು ದೊಡ್ಡವರ ಶವಗಳಿದ್ದವು, ಮಕ್ಕಳು ಕಾಣಿಸಲಿಲ್ಲ. ಇಡೀ ಕೊಲಂಬಿಯಾದ ರಕ್ಷಣಾ ಪಡೆಗಳು ಗೊಂಡಾರಣ್ಯದಲ್ಲಿ ಓಡಾಡುತ್ತಾ ಮಕ್ಕಳನ್ನು 40 ದಿನಗಳ ಕಾಲ ಹುಡುಕಾಡಿದವು.
40ನೇ ದಿನದ ಕೊನೆಯಲ್ಲಿ ಪತ್ತೆಯಾದರು. ಅಲ್ಲಿಯವರೆಗೂ ಮಕ್ಕಳು ಕಾಡಿನ ಹಣ್ಣುಗಳು, ಕಸಾವಾ ಎಂಬ ಆಹಾರ, ಬೀಜಗಳನ್ನು ತಿಂದು ಜೀವ ಹಿಡಿದುಕೊಂಡಿದ್ದರು. ಮುಖ್ಯವಾಗಿ ಅವರಿಗೆ ಕಾಡಿನ ಜ್ಞಾನವಿತ್ತು. ಅಪಾಯಗಳಿಂದ ಹೇಗೆ ದೂರವಿರಬೇಕು, ನೀರು ಎಲ್ಲಿ ಸಿಗುತ್ತದೆ, ಯಾವ ಹಣ್ಣು ತಿನ್ನಬಹುದು- ಇಂಥ ಅರಿವು ಹೇರಳವಾಗಿತ್ತು.
ಹಿರಿಯ ಮಗಳು ಲೆಸ್ಲಿ ತನ್ನ ತಮ್ಮ-ತಂಗಿಯರನ್ನು ಅಪಾಯ ಬರದಂತೆ ನೋಡಿಕೊಂಡು ಅಷ್ಟು ದಿನ ಅವರನ್ನು ನಡೆಸಿದ್ದಳು. ಯಾವುದೇ ಸರ್ವೈವಲ್ ಶೋಗಳನ್ನು ಈ ನಿಜ ಕತೆಯ ಮುಂದೆ ನಿವಾಳಿಸಿ ಎಸೆಯಬಹುದು.
ಹೀಗೆ ಹಲವು ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಮನದಟ್ಟು ಮಾಡಿಕೊಳ್ಳಬೇಕಾದ್ದು ಏನೆಂದರೆ, ಕಾಡಿನೊಳಗೆ ಹೋಗುವ ಮುನ್ನ ಕಾಡಿನ ಬಗ್ಗೆ ಸ್ವಲ್ಪವಾದರೂ ಅರಿವು ಇರಬೇಕು. ಅರಿವು ಇಲ್ಲವಾದರೆ ತಿಳಿದುಕೊಳ್ಳುವ ಪ್ರೀತಿಯಾದರೂ ಇರಬೇಕು. ಸ್ಥಳೀಯರ ಜ್ಞಾನದ ಮುಂದೆ ಕೆಲವೊಮ್ಮೆ ಆಧುನಿಕ ತಂತ್ರಜ್ಞಾನಗಳು ಸೋಲುತ್ತವೆ.
ಡ್ರೋನ್‌ಗಳು ಕಂಡುಹಿಡಿಯಲಾರದ ಶರಣ್ಯಳನ್ನು ಮಲೆಕುಡಿಯರು ಕಂಡುಹುಡುಕಿದ್ದು ಇದಕ್ಕೆ ಉದಾಹರಣೆ. ನಮ್ಮ ಊಹೆ ತರ್ಕಗಳನ್ನೂ ಮೀರಿ ಹಲವೊಮ್ಮೆ ಪವಾಡಸದೃಶ ಘಟನೆಗಳು ನಡೆದು ಬಿಡುತ್ತವೆ. ಅದೃಷ್ಟ ಕೈಕೊಟ್ಟರೆ ಕೆಲವೊಮ್ಮೆ ಚಾರಣವೂ ಮೃತ್ಯುಸದೃಶವಾಗುತ್ತದೆ.
2009ರಲ್ಲಿ ಹೀಗೇ ಆಗಿತ್ತು. ಹಾಸನ ಜಿಲ್ಲೆಯ ಅರಮನೆ ಗುಡ್ಡಕ್ಕೆ ಚಾರಣ ಹೋಗಿದ್ದ ಮೂವರು ವಿದ್ಯಾರ್ಥಿಗಳು ದಾರಿ ತಪ್ಪಿ ನಾಪತ್ತೆಯಾಗಿದ್ದರು. ಮೂರು ತಿಂಗಳ ಬಳಿಕ ಅವರ ಶವಗಳು ದೊರೆತಿ ದ್ದವು.