ವಿದೇಶವಾಸಿ
ಕೆಲವೊಮ್ಮೆ ನಾವು ನೆಟ್ಟ ಗಿಡದ ಫಲ ನಮಗೆ ಸಿಗುವುದಿಲ್ಲ. ಅದು ಮುಂದಿನ ಪೀಳಿಗೆಯ ಸ್ವತ್ತಾಗಿ ಅವರು ಅನುಭವಿಸುತ್ತಾರೆ. ಮೊದಲ ಬಾರಿ ಮಾವು, ಹಲಸಿನ ಗಿಡವನ್ನು ಕಸಿ ಮಾಡಿದ ಕೃಷಿಕ ಯಾರು, ಆತ ಅದರ ಫಲವನ್ನು ತಿಂದಿದ್ದಾನೋ ಇಲ್ಲವೋ ಗೊತ್ತಿಲ್ಲ, ಈಗ ನಾವು ಆಸ್ವಾದಿಸುತ್ತಿದ್ದೇವಲ್ಲ, ಹಾಗೆ. ಹಾಗೆಯೇ, ಯಾರೋ ಮಾಡಿದ ಕಾರಿನ ಅನ್ವೇಷಣೆ, ಇನ್ಯಾರೋ ಮಾಡಿದ ಸಾಹಸವನ್ನು ನಾವು ಆನಂದಿಸುತ್ತಿದ್ದೇವೆ.
ಕಾರ್... ಕಾರ್... ಕಾರ್... ಕಾರ್... ಎಲ್ನೋಡಿ ಕಾರ್...ದಶಕಗಳ ಹಿಂದೆ ಮೊದಲ ಬಾರಿ ಇಂಥದ್ದೊಂದು ವಾಹನವನ್ನು ಕಂಡುಹಿಡಿದಾಗ, ಯಾರೂ ಇದನ್ನು ಊಹಿಸಿರಲಿಕ್ಕಿಲ್ಲ. ಮುಂದೊಂದು ದಿನ ‘ಕಾರು’ ಎನ್ನುವ ಈ ವಾಹನ ಅನಿವಾರ್ಯಗಳ ಪಟ್ಟಿಗೆ ಸೇರಿ ಕೊಳ್ಳುತ್ತದೆ ಅಥವಾ ಕೊನೆ ಪಕ್ಷ ಗೌರವದ ಸಂಕೇತವಾಗುತ್ತದೆ ಎಂದು ಭಾವಿಸಿರಲಿಕ್ಕಿಲ್ಲ.
ಮೊದಲು ಮೂರು ಚಕ್ರದಿಂದ ಆರಂಭವಾದ ಈ ವಾಹನ ಇಂದು ಗಂಟೆಗೆ 333 ಮೈಲು ವೇಗದಲ್ಲಿ ಚಲಿಸುತ್ತದೆ ಎಂದರೆ ನಂಬಲೇಬೇಕು. ಎರಡೂವರೆ ವರ್ಷದ ಹಿಂದೆ ಜರ್ಮನಿ ಯ ಬಿಯರ್ ಫೆಸ್ಟಿವಲ್ ಮುಗಿಸಿದಾಗ, ನಮ್ಮ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆಯದು, ಸ್ಟುಟ್‌ಗಾರ್ಟ್ ನಗರದಲ್ಲಿರುವ ಮರ್ಸಿಡೀಸ್-ಬೆಂಜ್ ಮ್ಯೂಜಿಯಂಗೆ ಹೋಗುವುದು; ಎರಡನೆಯದು, ಮ್ಯೂನಿಕ್ ನಗರದಲ್ಲಿರುವ ಬಿಎಮ್ʼಡಬ್ಲ್ಯೂ ಮ್ಯೂಸಿಯಂಗೆ ಹೋಗುವುದು.
ನಮ್ಮ ಆಯ್ಕೆ ಎರಡನೆಯದಾಗಿತ್ತು. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು, ಬವೇರಿಯನ್ ಪ್ರಾಂತ್ಯದಲ್ಲಿರುವ ಮ್ಯೂನಿಕ್ ನಗರ ಅಕ್ಟೋಬರ್ ಫೆಸ್ಟ್ ನಡೆಯುವ ಸ್ಥಳಕ್ಕೆ ಸಮೀಪದಲ್ಲಿದ್ದರೆ, ಎರಡನೆಯದು, ಬಿಎಮ್‌ಡಬ್ಲ್ಯೂ ಕಾರುಗಳು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದವು. ಏಕೋ-ಏನೋ, ಮೊದಲಿನಿಂದಲೂ ನನಗೆ ಬಿಎಮ್‌ಡಬ್ಲ್ಯೂ ಎಂದರೆ ಏನೋ ಮೋಹ... ಏಕೋ ದಾಹ...
ಅದರ ಅರ್ಥ ಮೊತ್ತ ಮೊದಲು ಕಾರು ತಯಾರಿಸಿ, ಪೇಟೆಂಟ್ ಪಡೆದ ಮರ್ಸಿಡೀಸ್-ಬೆಂಜ್ ಕಾರು ನಿಷ್ಪ್ರಯೋಜಕ ಎಂದಲ್ಲ. ಮರ್ಸಿಡೀಸ್ ಕಾರಿನ ಉಗಮ, ಬೆಳವಣಿಗೆ ಸಾಮಾನ್ಯ ವಾದದ್ದಲ್ಲ. ಮಾವಿನ ಹಣ್ಣೂ ಸಿಹಿ, ಹಲಸಿನ ಹಣ್ಣೂ ಸಿಹಿ. ಕೆಲವರಿಗೆ ಮಾವು ಇಷ್ಟವಾ ದರೆ ಇನ್ನು ಕೆಲವರಿಗೆ ಹಲಸು ಇಷ್ಟವಾಗುತ್ತದೆ.
ಇದನ್ನೂ ಓದಿ: Kiran Upadhyay Column: ಸುಳ್ಳೇ ಸುಳ್ಳು...ಈ ಯುದ್ಧದಲ್ಲಿ ಸುಳ್ಳೇ ಸುಳ್ಳು...
ಮಲ್ಲಿಗೆಯೂ ಕಂಪು ಬೀರುತ್ತದೆ, ಸಂಪಿಗೆಯೂ ಪರಿಮಳ ಪಸರಿಸುತ್ತದೆ. ಆದರೂ ಒಬ್ಬೊಬ್ಬರಿಗೆ ಒಂದೊಂದು ಇಷ್ಟವಾಗುತ್ತದಲ್ಲ, ಹಾಗೆ. ಹಾಗಿಲ್ಲದಿದ್ದರೆ ಇಂದು ವಿಶ್ವದಾ ದ್ಯಂತ ಅರವತ್ತಕ್ಕೂ ಹೆಚ್ಚು ಕಂಪನಿಯ ಕಾರುಗಳು ರಸ್ತೆಯ ಮೇಲೆ ಓಡಾಡುತ್ತಿರಲಿಲ್ಲ.
ಬಿಎಮ್‌ಡಬ್ಲ್ಯೂ 250 ಬಿಲಿಯನ್ ಯುರೋ ಆದಾಯ ಮತ್ತು ಆಸ್ತಿ ಹೊಂದಿದ ಸಂಸ್ಥೆ ಯಾಗಿ ಬೆಳೆಯುತ್ತಿರಲಿಲ್ಲ. ಮ್ಯೂನಿಕ್ ನಗರದ ಓಲಂಪಿಯಾ ಪಾರ್ಕ್ ಮೆಟ್ರೊ ನಿಲ್ದಾಣ ದಿಂದ ಹೊರಬರುತ್ತಿದ್ದಂತೆ ನಿಮಗೆ ಆಕಾಶವನ್ನು ಅಪ್ಪಿ ನಿಂತ ಕಟ್ಟಡವೊಂದು ಕಾಣುತ್ತದೆ.
ಮೆಟ್ರೋ ನಿಲ್ದಾಣದಿಂದ 400 ಹೆಜ್ಜೆ ನಡೆದರೆ, ವಿಶ್ವದ ಅಗ್ರಮಾನ್ಯ ಕಾರು ಕಂಪನಿ ಗಳಲ್ಲೊಂದಾದ ಬಿಎಮ್‌ಡಬ್ಲ್ಯೂ ಸಂಸ್ಥೆಯ ಪ್ರಧಾನ ಕಚೇರಿ, ಬಿಎಮ್‌ಡಬ್ಲ್ಯೂ ಹಾಗೂ ಮಿನಿ ಕೂಪರ್ ಮ್ಯೂಸಿಯಂ ಸಿಗುತ್ತದೆ. ಒಳಗೆ ಹೊಕ್ಕರೆ ಎರಡು ಅಂತಸ್ತಿನ ವಿಶಾಲವಾದ ಕಾರು ಮತ್ತು ಬೈಕ್ ಲೋಕ.
ನಿಜ, ಬಿಎಮ್‌ಡಬ್ಲ್ಯೂ ಸಂಸ್ಥೆ ಪ್ರತಿ ವರ್ಷ 24 ಲಕ್ಷ ಕಾರು ಉತ್ಪಾದಿಸುವುದರ ಜತೆಗೆ 2 ಲಕ್ಷಕ್ಕೂ ಹೆಚ್ಚು ಮೋಟರ್‌ಬೈಕ್‌ಗಳನ್ನು ತಯಾರಿಸುತ್ತದೆ. ಸಂಸ್ಥೆಯ ಇತಿಹಾಸದಿಂದ ಹಿಡಿದು, ಆವಿಷ್ಕಾರಗಳ, ಹೊಸ ವಾಹನದ ಕುರಿತಾದ ಸಾಕ್ಷ್ಯಚಿತ್ರಗಳನ್ನು ಇಲ್ಲಿ ಪ್ರದರ್ಶಿಸ ಲಾಗುತ್ತದೆ.
ಬಿಎಮ್‌ಡಬ್ಲ್ಯೂ ಮತ್ತು ಮಿನಿ ಕೂಪರ್ ಸಂಸ್ಥೆಯ ವಿಶೇಷಾತಿ ವಿಶೇಷ ಕಾರು-ಬೈಕುಗಳು ಇಲ್ಲಿ ರಾಜಮರ್ಯಾದೆಯಲ್ಲಿ ಕುಳಿತಿವೆ. ಅಲ್ಲಿಯ ವೈಭವ ವರ್ಣಿಸುವುದು ಕಷ್ಟ, ಅದನ್ನು ನೋಡಿಯೇ ಅನುಭವಿಸಬೇಕು. ಅಷ್ಟಕ್ಕೂ ಬಿಎಮ್‌ಡಬ್ಲ್ಯೂ ಎಂಬುದು ಕಾರು ತಯಾರಿಸ ಲೆಂದೇ ಹುಟ್ಟಿಕೊಂಡ ಸಂಸ್ಥೆಯಲ್ಲ. ಆರಂಭದ ದಿನಗಳಲ್ಲಿ ಸಂಸ್ಥೆಯು ವಿಮಾನದಲ್ಲಿ ಬಳಸುವ ಯಂತ್ರಗಳು ಮತ್ತು ಉಪಕರಣಗಳನ್ನು ತಯಾರಿಸುತ್ತಿತ್ತು.
ಆಗ ಸಂಸ್ಥೆಯ ಹೆಸರು ರಾಪ್ ಮೊತೋಹೆನ್‌ವಾಕ್ ಎಂದಾಗಿತ್ತು. ಜರ್ಮನ್ ಭಾಷೆಯಲ್ಲಿ Rapp Moterenwerke ಎಂದರೆ ಇಂಗ್ಲಿಷ್‌ನಲ್ಲಿ Rapp Moter works ಎಂಬ ಅರ್ಥ. ಅದರ ಜನ್ಮದಾತ ಕಾರ್ಲ್ ರಾಪ್. ಮೂಲತಃ ಜರ್ಮನ್ ಪ್ರಜೆಯಾದ ಕಾರ್ಲ್ ಫ್ರೆಡ್ರಿಕ್ ರಾಪ್ ವೃತ್ತಿಯಲ್ಲಿ ಎಂಜಿನಿಯರ್.
ಶಿಕ್ಷಣ ಮುಗಿಸಿದ ನಂತರ ‘ಝಪ್’ ಎಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಜತೆಗೆ ಡೈಮ್ಲರ್ ಮೋಟರ್ಸ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ತಾಂತ್ರಿಕ ವಿನ್ಯಾಸಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಡೈಮ್ಲರ್ ಮೋಟರ್ಸ್ ಅಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗಲಿಕ್ಕಿಲ್ಲ, ಮರ್ಸಿಡೀಸ್ ಎಂದರೆ ಅರ್ಥವಾದೀತು.
ಮರ್ಸಿಡೀಸ್ ವಾಹನಗಳನ್ನು ತಯಾರಿಸುವ ಸಂಸ್ಥೆಯ ಹೆಸರು ಡೈಮ್ಲರ್. ಆ ಸಂಸ್ಥೆಯಲ್ಲಿ ಕಾರ್ಲ್ ಸುಮಾರು 3 ವರ್ಷ ಕೆಲಸ ಮಾಡಿದ್ದರು. ನಂತರ, ವಿಮಾನದ ಎಂಜಿನ್ ತಯಾ ರಿಸುವ ‘ಫ್ಲಗ್‌ವರ್ಕ್ ಡಚ್‌ಲ್ಯಾಂಡ್’ ಸೇರಿಕೊಂಡು, ಒಂದು ಶಾಖೆಯ ಮುಖ್ಯಸ್ಥ ರಾದರು. ಆ ಸಂದರ್ಭದಲ್ಲಿ ಅವರು ಸ್ವತಃ ಆಪರೇಷನ್ ಮ್ಯಾನೇಜರ್ ಆಗಿಯೂ ಕೆಲಸ ಮಾಡು ತ್ತಿದ್ದರು.
ಅವರು ವಿನ್ಯಾಸಗೊಳಿಸಿ ನಿರ್ಮಿಸಿದ ಏರೋ ಎಂಜಿನ್ ಹೊತ್ತ ವಿಮಾನಗಳು ಬರ್ಲಿನ್ ನಲ್ಲಿ ನಡೆಯುತ್ತಿದ್ದ ಏರ್ ಶೋನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದವು. ಆದರೂ 4 ವರ್ಷದ ನಂತರ ಕಂಪನಿ ದಿವಾಳಿ ಆಯಿತೆಂದು ಘೋಷಿಸಿ, ಷೇರುದಾರರ ನಿರ್ಣಯ ದಂತೆ ಕಂಪನಿಯ ಕದವನ್ನು ಮುಚ್ಚಲಾಯಿತು.
ಕೆಲವೊಮ್ಮೆ ಹಾಗೆ ಆಗುವುದಿದೆ, ಸಂಸ್ಥೆಯಲ್ಲಿ ಒಳ್ಳೆಯ ಕೆಲಸಗಾರರಿದ್ದರೂ, ಮಾರುಕಟ್ಟೆ ಯಲ್ಲಿ ಸಂಸ್ಥೆ ಹೆಸರು ಮಾಡಿದರೂ, ನಷ್ಟ ಅನುಭವಿಸಿದ ಉದಾಹರಣೆಗಳಿವೆ. ಹೆಸರಾಂತ ಕ್ರೀಡಾಪಟುಗಳನ್ನು ಹೊಂದಿದ ತಂಡವೂ ಒಮ್ಮೊಮ್ಮೆ ಸೋಲುತ್ತದಲ್ಲ, ಹಾಗೆ. ಕೈಯಲ್ಲಿ ಕೆಲಸವಿಲ್ಲದ ಕಾರ್ಲ್ ಬೇರೆ ಕಡೆ ಉದ್ಯೋಗಕ್ಕಾಗಿ ಹುಡುಕಾಡಲಿಲ್ಲ.
ಜೂಲಿಯಸ್ ಆಸ್ಪಿಟ್ಜರ್‌ನನ್ನು ಜತೆಗೆ ಸೇರಿಸಿಕೊಂಡು, 2 ಲಕ್ಷ ಬಂಡವಾಳ ಹೂಡಿ ತನ್ನದೇ ಸಂಸ್ಥೆಯನ್ನು ನಿರ್ಮಿಸಿದರು. ಅದಕ್ಕೆ ‘ರಾಪ್ ಮೋಟೋರೇನ್ ವರ್ಕ್’ ಎಂದು ಹೆಸರಿ ಟ್ಟರು. ತಮ್ಮ ಅನುಭವವನ್ನು ಬಳಸಿ ವಿಮಾನದ ಯಂತ್ರ, ಬಿಡಿಭಾಗ, ಉಪಕರಣಗಳನ್ನು ತಯಾರಿಸಲು ಆರಂಭಿಸಿದರು. ಅದರ ಜತೆಗೆ ಇತರೆ ವಾಹನಗಳಿಗೂ ಎಂಜಿನ್ ತಯಾರಿಸು ತ್ತಿದ್ದರು.
ಸಂಸ್ಥೆ ತಯಾರಿಸುತ್ತಿದ್ದ ಯಂತ್ರಗಳಿಗೆ ಬೇಡಿಕೆ ಹೇಗಿತ್ತು ಎಂದರೆ, ಆರಂಭಗೊಂಡ 3 ವರ್ಷದಲ್ಲಿಯೇ ಸಂಸ್ಥೆ 350ಕ್ಕೂ ಅಧಿಕ ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿತ್ತು. ಆ ದಿನಗಳಲ್ಲಿ ಹಲವಾರು ವಿಮಾನದ ಮೂಲ ಮಾದರಿಯನ್ನು ಸಂಸ್ಥೆಯಲ್ಲಿ ವಿನ್ಯಾಸ ಗೊಳಿಸಲಾಗಿತ್ತು. ಅದರಲ್ಲಿ ಕೆಲವು ಯಶಸ್ವಿಯಾದರೆ ಕೆಲವು ವಿಫಲವೂ ಆದವು. ಆದರೆ ಸಂಸ್ಥೆಗೆ ಆಗಲೇ ಒಂದು ಹೆಸರಿತ್ತು.
ಬೆಳೆಯುತ್ತಿರುವ ಸಂಸ್ಥೆಗೆ ಹಣ ಒದಗಿಸಲು ಕಷ್ಟವಾಗುತ್ತಿದ್ದುದರಿಂದ, ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಷೇರು ಮಾರುಕಟ್ಟೆಯ ಮೊರೆ ಹೋಯಿತು. ಅಲ್ಲಿಂದ ಸಂಸ್ಥೆಯಲ್ಲಿ ಕಾರ್ಲ್ ಹಿಡಿತ ಸಡಿಲವಾಗತೊಡಗಿತು. ಮೊದಲನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಸಂಸ್ಥೆ ಉಳಿದ ಎಲ್ಲ ಯಂತ್ರೋಪಕರಣಗಳ ನಿರ್ಮಾಣ ನಿಲ್ಲಿಸಿ ಯುದ್ಧಕ್ಕೆ ಬಳಸುವ ವಿಮಾನಗಳ ಯಂತ್ರಗಳನ್ನು ಮಾತ್ರ ತಯಾರಿಸುತ್ತಿತ್ತು. ಆ ಸಂದರ್ಭದಲ್ಲಿ ಕೆಲವು ಯಂತ್ರ ಗಳ ಗುಣಮಟ್ಟ ಸರಿಯಾಗಿಲ್ಲ ಎಂಬ ಕಾರಣದಿಂದ ಕೆಲವು ದೇಶದ ಸೇನೆಗಳು ತಿರಸ್ಕರಿಸಿ ದರೆ, ಹಂಗೇರಿ, ಆಸ್ಟ್ರಿಯಾದಂಥ ದೇಶಗಳು ಸಂಸ್ಥೆ ತಯಾರಿಸಿದ ಯಂತ್ರಗಳನ್ನು ಖರೀದಿಸು ತ್ತಿದ್ದವು.
ಸಂಸ್ಥೆ ತಯಾರಿಸುತ್ತಿದ್ದ ನಾಲ್ಕು ಸಿಲಿಂಡರ್ ಯಂತ್ರಗಳು ಮತ್ತು ವಿ-12 ಯಂತ್ರಗಳನ್ನು ವಿಯೆನ್ನಾದ ಆಸ್ಟ್ರೋ ಡೈಮ್ಲರ್ ಕಂಪನಿ ಖರೀದಿಸುತ್ತಿತ್ತು. ಆಸ್ಟ್ರೋ ಡೈಮ್ಲರ್ ಸಂಸ್ಥೆ ಫ್ರಾನ್ಜ್ ಜೋಸೆಫ್ ಪಾಪ್‌ರನ್ನು ನಿರೀಕ್ಷಕರನ್ನಾಗಿ ಆಯೋಜಿಸಿತ್ತು. ಆಗ ಮ್ಯಾಕ್ಸ್ ಫ್ರಿಜ್ ಎಂಬ ಯಂತ್ರ ವಿನ್ಯಾಸಕಾರ ರಾಪ್ ಸಂಸ್ಥೆಯಲ್ಲಿ ಹೆಸರು ಮಾಡುತ್ತಿದ್ದ.
ಮ್ಯಾಕ್ಸ್ ವಿನ್ಯಾಸಗೊಳಿಸಿದ ಯಂತ್ರ ಎಷ್ಟು ಜನಪ್ರಿಯವಾಗತೊಡಗಿತ್ತೆಂದರೆ, ಪ್ರಶ್ಯನ್ ಸೇನೆ ಆತ ವಿನ್ಯಾಸಗೊಳಿಸಿದ ಆರು ನೂರು ಯಂತ್ರಗಳನ್ನು ಖರೀದಿಸಲು ಮುಂದಾಯಿತು. ಅದೇ ಸಂದರ್ಭದಲ್ಲಿ ಕಾರ್ಲ್ ರಾಪ್ ಆರೋಗ್ಯವೂ ಕೈ ಕೊಡುತ್ತಿತ್ತು, ಅವರಿಗೆ ಮೊದಲಿನಷ್ಟು ಬೇಡಿಕೆಯೂ ಇರಲಿಲ್ಲ.
ಸಂಸ್ಥೆಯ ನಿರ್ದೇಶಕರು ಸಂಸ್ಥೆಯ ಹೆಸರನ್ನು ‘ಬಾಯೆಹಿಶ್ ಮೊತೋರೇನ್ ವಾಕ್’ ( Bayerische Motoren Werke) ಎಂದು ಬದಲಾಯಿಸಿದರು. ಅದೇ ಮುಂದೆ BMW ಎಂದು ಹೆಸರಾಯಿತು. ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನೂ ತರಲಾಯಿತು. ಫ್ರಾನ್ಜ್ ಜೋಸೆಫ್ ಪಾಪ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು.
ಕಾರ್ಲ್ ರಾಪ್ ತಾವೇ ಹುಟ್ಟು ಹಾಕಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನ ಹುದ್ದೆಗೆ ರಾಜೀನಾಮೆ ನೀಡಿ ಹೊರ ನಡೆದರು. ಮೊದಲನೆಯ ವಿಶ್ವಮಹಾಯುದ್ಧ ಮುಗಿಯು ವವರೆಗೂ ಸಂಸ್ಥೆಯು ವಿಮಾನದ ಯಂತ್ರಗಳನ್ನಷ್ಟೇ ತಯಾರಿಸುತ್ತಿತ್ತೇ ಹೊರತು ಉಳಿದ ಯಂತ್ರಗಳ ನಿರ್ಮಾಣವನ್ನು ಸ್ಥಗಿತಗೊಳಿಸಿತ್ತು.
ಯುದ್ಧದ ನಂತರ ಸಂಸ್ಥೆ ಮೋಟರ್ ಬೈಕ್ ಯಂತ್ರಗಳು, ಕೃಷಿ ಯಂತ್ರೋಪಕರಣಗಳು, ಉಗಿಬಂಡಿಯಲ್ಲಿ ಬಳಸುವ ಬ್ರೇಕ್ ಇತ್ಯಾದಿಗಳನ್ನು ತಯಾರಿಸಲು ಆರಂಭಿಸಿತು. ಆದರೆ ಸಂಸ್ಥೆ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ. ಸಂಸ್ಥೆ ದಿವಾಳಿಯ ಅಂಚಿಗೆ ಬಂದು ನಿಲ್ಲು ವಂತಾಗಿತ್ತು. ಆದ್ದರಿಂದ ಸಂಸ್ಥೆಯ ಕೆಲವು ವಿಭಾಗಗಳನ್ನು ಬೇರೆ ಕಂಪನಿಗೆ ಮಾರಾಟ ಮಾಡಲಾಯಿತು. ಆಡಳಿತ ಮಂಡಳಿಗೆ ಕೆಲವು ಹೊಸಬರ ಸೇರ್ಪಡೆಯಾಯಿತು.
ಸಂಸ್ಥೆ ಒಂದು ಮಟ್ಟಕ್ಕೆ ಬಂದು ನಿಲ್ಲುತ್ತಿದೆ ಎನ್ನುವಾಗ ಎರಡನೆಯ ವಿಶ್ವಮಹಾಯುದ್ಧ ಆರಂಭವಾಯಿತು. ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಸಂಸ್ಥೆ ಪುನಃ ವಿಮಾನದ ಯಂತ್ರೋತ್ಪನ್ನದ ಕಡೆ ಗಮನ ಹರಿಸಿತು. ಆಗ ಬೇಡಿಕೆ ಹೇಗಿತ್ತು ಎಂದರೆ, ಸಂಸ್ಥೆ ಮೂವತ್ತು ಸಾವಿರ ಏರೋ ಎಂಜಿನ್ ಮತ್ತು ಐದು ನೂರು ಜೆಟ್ ಎಂಜಿನ್ ತಯಾರಿಸಿತ್ತು. ಆದರೆ ಕೆಲಸಗಾರರ ಕೊರತೆಯಿತ್ತು.
ಸುಮಾರು ಐವತ್ತು ಸಾವಿರ ಜನ ಜೀತದ ಆಳುಗಳಾಗಿ ದುಡಿದರು. ಅವರಲ್ಲಿ ಅರ್ಧದಷ್ಟು ಜನ ಸೆರೆಯಾಳುಗಳಾದರು. ಆಗ ಪೂರ್ವ ಜರ್ಮನಿಯಲ್ಲಿದ್ದ ಎರಡು ತಯಾರಿಕಾ ಘಟಕ ಗಳನ್ನು ರಷ್ಯಾ ವಶಪಡಿಸಿಕೊಂಡಿತ್ತು. ಪಶ್ಚಿಮ ಜರ್ಮನಿಯಲ್ಲಿದ್ದ ಕಾರ್ಖಾನೆಗಳ ಮೇಲೂ ಸಾಕಷ್ಟು ಬಾಂಬ್ ಬಿದ್ದವು.
ಇದರಿಂದ ಸುಧಾರಿಸಿಕೊಳ್ಳಲು ಹೆಚ್ಚು-ಕಮ್ಮಿ ಎಂಟು ವರ್ಷಗಳೇ ಬೇಕಾದವು. ಆದರೆ ಎರಡನೆಯ ಯುದ್ಧದ ಸಂದರ್ಭದಲ್ಲಿ ಸಂಸ್ಥೆ ತಯಾರಿಸುತ್ತಿದ್ದ ಯಂತ್ರಗಳು ಸಾಕಷ್ಟು ಹೆಸರು ಮಾಡಿದ್ದವು. ಆ ಯಂತ್ರಗಳು ಅತಿ ಎತ್ತರದಲ್ಲಿ ಹಾರಾಡುವಾಗಲೂ ಉತ್ತಮ ಕ್ಷಮತೆ ಉಳ್ಳವುಗಳಾಗಿದ್ದು, ಕಡಿಮೆ ಇಂಧನವನ್ನು ಬಳಸುತ್ತಿದ್ದವು. ಇದನ್ನೇ ಅಸ್ತ್ರವನ್ನಾಗಿಸಿ ಕೊಂಡು ಮುಂದುವರಿಯಲು ಸಂಸ್ಥೆ ನಿರ್ಧರಿಸಿತ್ತು.
ಆದರೆ ಬಿಎಮ್‌ಡಬ್ಲ್ಯೂ ಪುನಃ ವೇಗವಾಗಿ ಓಡಲು ಒಂದು ದಶಕವೇ ಹಿಡಿಯಿತು. ಸಂಸ್ಥೆ ಏನೇ ಮಾಡಿದರೂ, ಯಂತ್ರಗಳು, ವಾಹನಗಳು ಮೊದಲಿನಷ್ಟು ಮಾರಾಟವಾಗುತ್ತಿರಲಿಲ್ಲ. ಕಾರು ಮತ್ತು ಮೋಟರ್‌ಬೈಕ್ ಮಾರಾಟ ತೀರಾ ಕಮ್ಮಿಯಾಗಿತ್ತು. ಅರವತ್ತರ ದಶಕದಲ್ಲಿ ಸಂಸ್ಥೆ ಪುನಃ ದಿವಾಳಿಯ ಅಂಚಿಗೆ ಬಂದು ನಿಂತಿತ್ತು. ಐಷಾರಾಮಿ ಕಾರುಗಳು ಮಾರಾಟ ವಾಗುತ್ತಿರಲಿಲ್ಲ,
ಸಣ್ಣ ಕಾರುಗಳು ಮಾರಾಟವಾದರೂ ಅದರಲ್ಲಿ ಲಾಭಾಂಶ ತೀರಾ ಕಮ್ಮಿಯಾಗಿತ್ತು. ಮತ್ತೆ ಆಡಳಿತ ಮಂಡಳಿಯ ಸದಸ್ಯರು, ನಿರ್ದೇಶಕರು ಬದಲಾದರು. ಆಗ ಸಂಸ್ಥೆಯ ಕೈ ಹಿಡಿದದ್ದು ’BMW700’ ಮತ್ತು ‘ನ್ಯೂ ಕ್ಲಾಸ್’ ಮಾದರಿಯ ಕಾರುಗಳು. ಇವು ಹೇಗೆ ಮಾರಾಟ ವಾದವು ಎಂದರೆ, ಎರಡೇ ವರ್ಷದಲ್ಲಿ ಸಂಸ್ಥೆ ಹೂಡಿಕೆದಾರರಿಗೆ ಲಾಭಾಂಶ ನೀಡುವ ಹಂತಕ್ಕೆ ಬಂದು ನಿಂತಿತ್ತು.
ಇತ್ತೀಚೆಗೆ ತಯಾರಾಗುತ್ತಿರುವ ನ್ಯೂ ಕ್ಲಾಸ್ ಕಾರಿನ ಕುರಿತು ಒಂದು ಸಾಲು ಹೇಳಲೇಬೇಕು. ಈಗ ತಯಾರಿಸುತ್ತಿರುವ ಕಾರಿನಲ್ಲಿ ಸಂಸ್ಥೆ ಶೇಕಡಾ ಮೂವತ್ತರಷ್ಟು ತ್ಯಾಜ್ಯ ಮತ್ತು ಮರು ಬಳಕೆಯ ವಸ್ತುಗಳನ್ನು ಬಳಸುತ್ತಿದೆ. ಇದು ಸಂಸ್ಥೆ ಪರಿಸರಕ್ಕೆ ನೀಡುತ್ತಿರುವ ಅತ್ಯುತ್ತಮ ಕೊಡುಗೆ ಎಂದರೆ ತಪ್ಪಲ್ಲ.
ನನಗೆ ಇಲ್ಲಿ ವಿಶೇಷ ಎನಿಸುವುದು, ಸಂಸ್ಥೆಯನ್ನು ಆರಂಭಿಸಿದ ಮನುಷ್ಯ ಬಹಳ ದಿನ ಸಂಸ್ಥೆಯಲ್ಲಿ ನಿಲ್ಲಲಿಲ್ಲ. ಏನೇ ಅನಾರೋಗ್ಯವಿದ್ದರೂ ಅವರು ಸಂಸ್ಥೆಯಿಂದ ಹೊರಗೆ ಹೋಗಬೇಕಾಗಿರಲಿಲ್ಲ. ನಿವೃತ್ತನಾಗುವ ವಯಸ್ಸೂ ಕಾರ್ಲ್‌ಗೆ ಆಗಿರಲಿಲ್ಲ. ಅವರು ರಾಜೀನಾಮೆ ನೀಡಿ ಹೊರನಡೆದರೂ ಸುಮಾರು ನಾಲ್ಕು ದಶಕ ಬದುಕಿ ಉಳಿದಿದ್ದರು.
ಸಂಸ್ಥೆಯ ಏಳು-ಬೀಳುಗಳನ್ನು ನೋಡುತ್ತಿದ್ದರು. ಸಂಸ್ಥೆಯೂ ಅಷ್ಟೇ, ಕೆಲವು ಬಾರಿ ದಿವಾಳಿಯ ಅಂಚಿನಲ್ಲಿ ಬಂದು ಪುನಃ ಚಿಗುರೊಡೆದು ನಿಂತಿದೆ. ಇನ್ನು ಕಥೆ ಮುಗಿದೇ ಹೋಯಿತು ಎನ್ನುವ ಹಂತದಲ್ಲಿದ್ದಾಗಲೂ ಪುನಃ ಸಶಕ್ತವಾಗಿ ನಿಂತ ಉದಾಹರಣೆಗಳಿವೆ. ಉಳಿದ ವಾಹನಗಳಿಗಿಂತಲೂ ಬಿಎಮ್‌ಡಬ್ಲ್ಯೂ ವಾಹನಗಳು ಒಂದು ಹಿಡಿ ಹೆಚ್ಚು ಗಟ್ಟಿ ಯಾಗಿರಲು ಬಹುಶಃ ಇದೂ ಒಂದು ಕಾರಣವಿದ್ದೀತು! ಜತೆಗೆ, ಮತ್ತೆ ಮತ್ತೆ ಸೋತರೂ ಪುನಃ ಗೆಲ್ಲುವುದು ಹೇಗೆ ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯೂ ಆದೀತು!
ಆದರೆ, ಕಾರ್ಲ್ ರಾಪ್‌ನನ್ನು ನೆನೆಸಿಕೊಂಡರೆ ಮಾತ್ರ ಅಯ್ಯೋ ಅನಿಸುತ್ತದೆ. ತನ್ನ ಹೆಸರಿ ನಲ್ಲೇ ‘ಕಾರ್’ ಇದ್ದರೂ ತಾನೇ ಕಟ್ಟಿದ, ವಿಶ್ವದಾದ್ಯಂತ ಹೆಸರು ಮಾಡಿದ ಸಾಮ್ರಾಜ್ಯ ವನ್ನು ಅನುಭವಿಸಲಾಗದೆ ಹೊರ ನಡೆದ. ಕೆಲವೊಮ್ಮೆ ನಾವು ನೆಟ್ಟ ಗಿಡದ ಫಲ ನಮಗೆ ಸಿಗುವು ದಿಲ್ಲ. ಅದು ಮುಂದಿನ ತಲೆಮಾರಿನ ಸ್ವತ್ತಾಗುತ್ತದೆ, ಅವರು ಅನುಭವಿಸುತ್ತಾರೆ.
ಮೊದಲ ಬಾರಿ ಮಾವು, ಹಲಸಿನ ಗಿಡವನ್ನು ಕಸಿಮಾಡಿದ ಕೃಷಿಕ ಯಾರು, ಆತ ಅದರ -ಲವನ್ನು ತಿಂದಿದ್ದಾನೋ ಇಲ್ಲವೋ ಗೊತ್ತಿಲ್ಲ, ಈಗ ನಾವು ಆಸ್ವಾದಿಸುತ್ತಿದ್ದೇವಲ್ಲ, ಹಾಗೆ. ಹಾಗೆಯೇ, ಯಾರೋ ಮಾಡಿದ ಕಾರಿನ ಅನ್ವೇಷಣೆ, ಇನ್ಯಾರೋ ಮಾಡಿದ ಸಾಹಸವನ್ನು ನಾವು ಆನಂದಿಸುತ್ತಿದ್ದೇವೆ.