ಪದಸಾಗರ
ಈ ಬಾರಿ ವಿಶ್ವವಾಣಿ ಗ್ಲೋಬಲ್ ಅಚೀವರ್ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಾಷ್ಕೆಂಟ್ ನಲ್ಲಿ ನಡೆಯಲಿದೆ. ಖುದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುತ್ರ ಸುನಿಲ್ ಶಾಸ್ತ್ರಿ ಅವರ ಕೈಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಹಾಗೂ ಶಾಸ್ತ್ರಿಯವರ ಪ್ರತಿಮೆಯ ಎದುರ ಪ್ರಶಸ್ತಿ ನೀಡಲಾಗುತ್ತದೆ ಎಂಬ ವಿಷಯ ಚರ್ಚೆಯಾಗುತ್ತಿದ್ದಾಗ, ವಿಶ್ವೇಶ್ವರ ಭಟ್ಟರು ಸುನಿಲ್ ಶಾಸ್ತ್ರಿ ಯವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಾ ಇದ್ದಾಗ ಎದುರ ಕೂತಿದ್ದ ನನ್ನೊಳಗೆ ಒಂದು ಥ್ರಿಲ್, ಜತೆಜತೆಗೆ ಸಣ್ಣ ಭಾವೋದ್ವೇಗ.
ಶಾಸ್ತ್ರಿ ಅಂದರೆ ನಮ್ಮ ದೇಶದ ದ್ವಿತೀಯ ಪ್ರಧಾನಿ, ಜೈ ಜವಾನ್ ಜೈ ಕಿಸಾನ್ ಘೋಷದ ಸೃಷ್ಟಿಕರ್ತ, ಭಾರತ ಪಾಕ್ ಯುದ್ಧ ವಿರಾಮದ ಒಪ್ಪಂದಕ್ಕೆ ಸಹಿ ಹಾಕಲು ತಾಷ್ಕೆಂಟ್‌ಗೆ ಹೋಗಿದ್ದರು. ಅಲ್ಲಿಯೇ ನಿದ್ರೆಯಲ್ಲಿ ಕೊನೆಯುಸಿರೆಳೆದರು. ಅಂದಿನ ಪಠ್ಯ ಪುಸ್ತಕಗಳು ಕೊಟ್ಟದ್ದು ಇಷ್ಟೇ. ಇದನ್ನು ಬಿಟ್ಟರೆ ಶಾಸ್ತ್ರಿಯವರ ಬಾಲ್ಯದ ಒಂದು ಕಥೆ. ಅವರು ಶಾಲೆಗೆ ಗಂಗಾನದಿ ದಾಟಿ ಹೋಗಬೇಕಿತ್ತು.
ಪ್ರತಿದಿನ ದೋಣಿಯವನಿಗೆ ಶುಲ್ಕ ಕೊಡಲು ಶಾಸ್ತ್ರಿಯವರ ಬಳಿ ಹಣವಿರಲಿಲ್ಲ. ಹೀಗಾಗಿ ಅವರು ಪುಸ್ತಕವನ್ನು ಬೆನ್ನಿಗೆ ಕಟ್ಟಿಕೊಂಡು ಪ್ರತಿದಿನ ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ನದಿಯಲ್ಲಿ ಈಜಿ ಸಾಗುತ್ತಿದ್ದರು. ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶ ಕಂಡ ಮೊದಲ ದಿಟ್ಟ ಪ್ರಧಾನಿಯೊಬ್ಬರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯದ ಹಾಗೆ ತಡೆಯುವಂತಿತ್ತು ಅಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆ.
ಇದನ್ನೂ ಓದಿ: Naveen Sagar Column: ಯಶ್-ದ ಫೇರಿ ಟೇಲ್ ಆಫ್ ಎ ಗ್ರೋನ್ ಅಪ್
ಸತ್ಯಕ್ಕೆ ಸಾವಿಲ್ಲ. ಶಾಶ್ವತವಾಗಿ ಮುಚ್ಚಿಡೋಕೂ ಸಾಧ್ಯವಿಲ್ಲ. ಹೀಗಾಗಿ ತಡವಾಗಿಯಾದರೂ ಶಾಸ್ತ್ರಿಯವರ ಬದುಕಿನ ವಿಸ್ತೃತ ಪರಿಚಯ ಭಾರತದ ಹೊಸ ಪೀಳಿಗೆಗೆ ಆಗಿದೆ. ತಾಷ್ಕೆಂಟ್ ಫೈಲ್ ಗಳ ಹಿಂದಿನ ಕಥೆ, ಅವರ ಅನುಮಾನಾಸ್ಪದ ಸಾವಿನ ಕುರಿತ ವಿಚಾರಗಳು ಒಂದೊಂದಾಗಿ ಹೊರಬಂದಿವೆ. ದಶಕಗಳ ಕಾಲ ಬದಿಗೊತ್ತಲ್ಪಟ್ಟಿದ್ದ ಅವರ ಜನ್ಮದಿನಕ್ಕೆ ಮಾನ್ಯತೆ ಬಂದಿದೆ. ಅದೇ ದಿನಾಂಕದಂದು ಹುಟ್ಟಿದ ಮಹಾತ್ಮನ ಅಬ್ಬರದ ನಡುವೆಯೂ ಶಾಸ್ತ್ರೀಜಿ ಜನ್ಮದಿನಕ್ಕೆ ಎಂದಿಗಿಂತ ದೊಡ್ಡ ಜನಪ್ರಿಯತೆ ದಕ್ಕಿದೆ.
ಈಗ ಪ್ರತಿಯೊಬ್ಬ ಭಾರತೀಯನಿಗೂ ಶಾಸ್ತ್ರೀಜಿಯ ಬದುಕು ಗೊತ್ತು. ಶಾಸ್ತ್ರೀಜಿಯವರ ಸಾವಿನ ಹಿಂದೆ ನಡೆದ ಷಡ್ಯಂತ್ರಗಳೂ ಗೊತ್ತು. ಅದೇ ಕಾರಣಕ್ಕೆ ಭಾರತೀಯರು ಶಾಸ್ತ್ರೀಜಿಯವರನ್ನು ರಾಷ್ಟ್ರಪಿತನಿಗಿಂತ ಎತ್ತರದ ಸ್ಥಾನದಲ್ಲಿಟ್ಟು ನೋಡ್ತಿದ್ದಾರೆ. ಶಾಸ್ತ್ರೀಜಿಯ ಪ್ರಾಮಾಣಿಕ ಮತ್ತು ದಿಟ್ಟ ವ್ಯಕ್ತಿತ್ವದ ಬಗ್ಗೆ ಒಂದೊಂದು ಘಟನೆ ಓದ್ತಾ ಇದ್ರೂ ನಮಗೇ ಗೊತ್ತಿಲ್ದೆ ಕಣ್ಣಲ್ಲಿ ನೀರು ಹನಿಗಟ್ಟು ತ್ತದೆ. ಬಹಳಷ್ಟು ಜನಕ್ಕೆ ಗೊತ್ತಿಲ್ಲ.. ಈ ‘ಶಾಸ್ತ್ರಿ’ ಅನ್ನೋದು ಅವರ ಕುಟುಂಬದ ಹೆಸರೂ ಅಲ್ಲ, ಜಾತಿಸೂಚಕ ಸರ್‌ನೇಮೂ ಅಲ್ಲ. ಶಾಸ್ತ್ರೀ ಅನ್ನೋದು ಅವ್ರಿಗೆ ಕಾಶೀ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರಾಧ್ಯಯನ ಮಾಡಿದ್ದಕ್ಕೆ ಸಿಕ್ಕ ಪದವಿ!
ಹೌದು. ಶಾಸ್ತ್ರಿಯವರ ಅಸಲೀ ಸರ್‌ನೇಮು ಶ್ರೀವಾಸ್ತವ್. ಹೌದು, ಅವರ ತಂದೆಯ ಹೆಸರು ಶಾರದಾ ಪ್ರಸಾದ್ ಶ್ರೀವಾಸ್ತವ್. ಆ ಪ್ರಕಾರವಾಗಿ ಶಾಸ್ತ್ರೀಜಿಯ ಮೂಲನಾಮ ಲಾಲ್ ಬಹದ್ದೂರ್ ಶ್ರೀವಾಸ್ತವ್. ಆದರೆ ತನ್ನ ಆ ಉಪನಾಮದಿಂದ ತನ್ನ ಸಹಪಾಠಿಗಳಿಗೆ ಕೀಳರಿಮೆ ಆಗುತ್ತದೆ ಅಂತ ಅನಿಸಿ, ಬೇರೆ ಮಕ್ಕಳ ಜೊತೆ ಬೆರೆಯೋದಕ್ಕೆ ಕಷ್ಟ ಆಗತ್ತೆ ಎಂದು ಭಾವಿಸಿ, ಶ್ರೀವಾಸ್ತವ್ ಅನ್ನೋ ತಮ್ಮ ಕೊನೆಯ ನಾಮವನ್ನೇ ತೆಗೆಸಿಬಿಡ್ತಾರೆ ಶಾಸ್ತ್ರೀಜಿ.
ಅದೂ ಯಾವ ವಯಸ್ಸಲ್ಲಿ? ಕೇವಲ ಹನ್ನೆರಡನೆಯ ವಯಸ್ಸಲ್ಲಿ! ಅಬ್ಬಾ ಆ ವಯಸ್ಸ ಅಂಥ ಪ್ರಬುದ್ಧತೆ! ಅಲ್ಲಿಂದ ಮುಂದೆ ಅವರು ಶಾಸ್ತ್ರಿ ಎಂಬ ಪದವಿನಾಮ ಸಿಗುವತನಕ ಬರೀ ಲಾಲ್ ಬಹದ್ದೂರ್ ಅಂತಾನೇ ಗುರುತಿಸಿಕೊಳ್ಳುತ್ತಿದ್ದರು. ತಮ್ಮ ಹದಿನಾರನೆಯ ವಯಸ್ಸ, ಅಂದ್ರೆ 1921 ರಲ್ಲಿ ಅಸಹಕಾರ ಚಳುವಳಿ ಶುರು ಆದಾಗ ಬೇರೆ ಎಲ್ಲ ಯೋಚನೆ ಸೈಡಿಗಿಟ್ಟು ನೇರವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿಬಿಟ್ಟಿದ್ದರು ಶಾಸ್ತ್ರಿಗಳು.
ಪ್ರಥಮ ಬಾರಿಗೆ ಅವರು ಬಂಧನಕ್ಕೊಳಗಾಗಿದ್ದು ಕೂಡ ಹದಿನಾರರ ಹರೆಯದಲ್ಲಿಯೇ. ಆದರೆ ಇನ್ನೂ ಹದಿನೇಳು ತುಂಬಿಲ್ಲ ಅನ್ನೋ ಕಾರಣಕ್ಕೆ ಜೈಲಲ್ಲಿ ಇಟ್ಟುಕೊಳ್ಳಲು ಆಗದೇ ಬಿಡುಗಡೆ ಮಾಡಲಾಗಿತ್ತು. ಆದರೆ ಶಾಸ್ತ್ರಿ ಅದರಿಂದ ಕೊಂಚವೂ ಎದೆಗುಂದದೇ, ಇನ್ನಷ್ಟು ಅಗ್ರೆಸಿವ್ ಆಗಿ ಚಳವಳಿಗೆ ನುಗ್ಗಿದರು.
ಬರೋಬ್ಬರಿ ಒಂಬತ್ತು ವರ್ಷ ಜೈಲುವಾಸ ಕೂಡ ಅನುಭವಿಸಿದರು. ಶಾಸ್ತ್ರಿಯವರ ಪ್ರಾಮಾಣಿಕತೆ ಯಾವ ಮಟ್ಟದಲ್ಲಿತ್ತು ನೋಡಿ. ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ ಕುಟುಂಬಗಳಿಗೆ ಆಗ ಪೆನ್ಷನ್ ಅಂತ ಕೊಡ್ತಾ ಇತ್ತು ಬ್ರಿಟಿಷ್ ಸರಕಾರ. ಶಾಸ್ತ್ರಿಗಳ ಪತ್ನಿ ಲಲಿತಾ ಅವರಿಗೂ ತಿಂಗಳಿಗೆ ಐವತ್ತು ರುಪಾಯಿ ತಲುಪುತ್ತಿತ್ತು. ಶಾಸ್ತ್ರಿಯವರ ಪತ್ನಿ ಕೂಡ ಅಷ್ಟೇ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ಹೆಣ್ಮಗಳು. ಗಂಡನಿಗೆ ಬರ್ತಾ ಇದ್ದ ಆ ಪೆನ್ಷನ್ ಹಣದಲ್ಲಿ ತೀರಾ ಕಷ್ಟಪಟ್ಟು ಪ್ರತಿ ತಿಂಗಳು ಹತ್ತು ರುಪಾಯಿ ಉಳಿಸಿ ಇಡುತ್ತಿದ್ದರು.
ಹೀಗೇ ಒಮ್ಮೆ ಪತ್ರ ಬರೆದಾಗ, ಈ ವಿಚಾರವನ್ನು ಗಂಡನ ಜೊತೆ ಪತ್ನಿ ಲಲಿತಾ ಹಂಚಿಕೊಳ್ಳುತ್ತಾರೆ. ‘ರೀ.. ನಿಮಗೆ ಬರ್ತಾ ಇರೋ ಪೆನ್ಶನ್ ಹಣದಲ್ಲಿ ನಾನು ಪ್ರತಿ ತಿಂಗಳು ಹತ್ತತ್ತು ರುಪಾಯಿ ಉಳಿಸ್ತಾ ಇದೀನಿ’ ಅಂತ. ಗಂಡನಿಗೆ ಈ ವಿಚಾರ ಕೇಳಿ ಖುಷಿ ಆಗಬಹುದು ಅನ್ನೋದು ಅವರ ಎಣಿಕೆ ಆಗಿತ್ತು. ಆದರೆ ಶಾಸ್ತ್ರಿಯವರ ಪ್ರತಿಕ್ರಿಯೆ ಹೇಗಿತ್ತು ನೋಡಿ. ಅವರು ಈ ವಿಚಾರ ಗೊತ್ತಾದ ತಕ್ಷಣ, ಲೋಕಸೇವಾ ಸಮಿತಿಗೆ ಪತ್ರ ಬರೀತಾರೆ.
‘ನೀವು ಕೊಡ್ತಾ ಇರೋ ಪೆನ್ಶನ್ ನಮ್ಮ ಕುಟುಂಬಕ್ಕೆ ಜಾಸ್ತಿ ಆಗ್ತಾ ಇದೆ. ಇನ್ನು ಮುಂದೆ ನಲವತ್ತು ರುಪಾಯಿ ಕೊಡಿ ಸಾಕು. ಮಿಕ್ಕಿರುವ ಹತ್ತು ರುಪಾಯಿ ಬೇರೆ ಯಾರಿಗಾದ್ರೂ ಅಗತ್ಯ ಇದ್ರೆ ಅವರಿಗೆ ಕೊಡಿ’ ಅಂತ! ಬ್ರೂಟಲಿ ಹಾನೆಸ್ಟ್ ಅಂತಾರಲ್ಲ ಆ ಮಾತಿಗೆ ಶಾಸ್ತ್ರೀಜಿಗಿಂತ ಪರ್ಫೆಕ್ಟ್ ಉದಾಹರಣೆ ಇನ್ನೊಂದು ಸಿಗಲು ಸಾಧ್ಯವೇ ಇಲ್ಲ.
ಶಾಸ್ತ್ರೀಜಿ ಎಷ್ಟು ಪ್ರಿನ್ಸಿಪಲ್ಡ್ ಮನುಷ್ಯ ಎಂಬುದಕ್ಕೆ ಒಂದು ಘಟನೆ ಸಾಕ್ಷಿ. ವರದಕ್ಷಿಣೆ ಪದ್ಧತಿ ಯನ್ನು ಕಟುವಾಗಿ ವಿರೋಧಿಸಿಕೊಂಡು ಬಂದಿದ್ದವರು ಅವರು. ಆದರೆ ಅವರ ಮದುವೆ ಒಂದು ಸಂಪ್ರದಾಯವಾದಿ ಕುಟುಂಬದ ಹೆಣ್ಣುಮಗಳ ಜೊತೆ ಫಿಕ್ಸ್ ಆಗಿ ಬಿಡುತ್ತದೆ. ಆ ಫ್ಯಾಮಿಲಿಯವರು ವರದಕ್ಷಿಣೆ ನೀಡದೇ ಕನ್ಯಾದಾನ ಮಾಡಬಾರದು ಅಂತ ನಂಬಿರುವವರು. ಶಾಸ್ತ್ರಿ ಮನಸಿನಲ್ಲಿ ತಾಕಲಾಟ. ವರದಕ್ಷಿಣೆ ಪಡೆಯದೇ ಇರುವ ಹಾಗೂ ಇಲ್ಲ ತಮ್ಮ ಸಿದ್ಧಾಂತ ಮುರಿಯುವಂತೆಯೂ ಇಲ್ಲ. ಆಗ ಅವರು ವರದಕ್ಷಿಣೆ ರೂಪದಲ್ಲಿ ಕೇಳಿ ಪಡೆದದ್ದು ಖಾದಿ ಬಟ್ಟೆ ಹಾಗೂ ಚರಕ. ಸ್ವಾತಂತ್ರ್ಯ ಬಂದನಂತರ ಉತ್ತರಪ್ರದೇಶಕ್ಕೆ ಗೋವಿಂದ್ ವಲ್ಲಭ್ ಪಂತ್ ಮುಖ್ಯಮಂತ್ರಿ ಆಗುತ್ತಾರೆ.
ಶಾಸ್ತ್ರಿಯವರಿಗೆ ಪೊಲೀಸ್ ಇಲಾಖೆಯ ಮಂತ್ರಿ ಹುದ್ದೆ ಸಿಗುತ್ತದೆ. ಶಾಸ್ತ್ರೀಜಿ ಮಂತ್ರಿ ಆದ ತಕ್ಷಣ ನೀಡಿದ ‘ಇನ್ಮುಂದೆ ಯಾವ ಪೊಲೀಸರೂ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡೋ ಹಾಗಿಲ್ಲ. ಅವರು ಮನುಷ್ಯರು.. ಕಾಡುಪ್ರಾಣಿಗಳಲ್ಲ. ಹಾಗೊಂದು ವೇಳೆ ಗುಂಪು ಚದುರಿಸಬೇಕಾದ ಪರಿಸ್ಥಿತಿ ಬಂದಾಗ ವಾಟರ್ ಜೆಟ್ ಸ್ಪ್ರೇ ಮಾಡಿ’ ಅಂತ ಆದೇಶ ಹೊರಡಿಸುತ್ತಾರೆ. ಸ್ವತಂತ್ರ ಭಾರತ ದಲ್ಲಿ ಅದೇ ಮೊತ್ತ ಮೊದಲ ಬಾರಿಗೆ ಈ ರೀತಿಯ ಆದೇಶ ಹೊರಬಿದ್ದದ್ದು. ಮುಂದೆ ಸಾರಿಗೆ ಮಂತ್ರಿ ಆದ ಸಮಯದಲ್ಲಿ, ಮಹಿಳೆಯರಿಗೂ ಸಮಾನತೆ ಬೇಕು ಎಂದು ಬಸ್‌ಗಳಲ್ಲಿ ಲೇಡಿ ಕಂಡಕ್ಟರ್ ಹುದ್ದೆಗಳನ್ನು ಸೃಷ್ಟಿ ಮಾಡಿದ್ದರು ಶಾಸ್ತ್ರೀಜಿ.
ಮಹಿಳಾ ಸಮಾನತೆಗೆ ಮುನ್ನುಡಿ ಇಟ್ಟದ್ದೇ ಶಾಸ್ತ್ರಿಗಳು. ನೆನಪಿಡಿ. ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ಮೊದಲ ಬಾರಿಗೆ ರಚನೆ ಮಾಡಿದ್ದು ಲಾಲ್ ಬಹದ್ದೂರ್ ಶಾಸ್ತ್ರಿಗಳು. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಕೂಡಾ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕನಸಿನ ಕೂಸು. ಇನ್ನು ಸೋಮವಾರದ ಉಪವಾಸ ಎಂಬ ಪದ್ಧತಿ ಶುರು ಆಗಿದ್ದರ ಬಗ್ಗೆ ಹೇಳುವ ಅಗತ್ಯವೇ ಇಲ್ಲ . ದೇಶಕ್ಕೆ ಭೀಕರವಾದ ಬರಗಾಲ ಬಂದಿರುತ್ತದೆ. ಕುತಂತ್ರಿಗಳ ನೀತಿಯಿಂದಾಗಿ ವಿದೇಶದಿಂದ ಬರಬೇಕಾಗಿರುವ ಗೋಧಿ ಸರಬರಾಜು ನಿಂತು ಹೋಗಿರುತ್ತದೆ. ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟು ಹೋಗಿರುತ್ತದೆ.
ಕೆಲವರ್ಷಗಳ ಹಿಂದೆ ಪ್ರಧಾನಿ ಮೋದಿ ‘ಗಿವ್ ಅಪ್ ಸಬ್ಸಿಡಿ’ ಅಂತ ಸಿಲಿಂಡರ್ ಸಬ್ಸಿಡಿ ಬಿಡಲು ಮನವಿ ಮಾಡಿದ ಹಾಗೆ, ಆಗ ಶಾಸ್ತ್ರೀಜಿ.. ದೇಶದ ಪ್ರತಿಯೊಬ್ಬರೂ ವಾರದಂದು ದಿನ ಊಟ ಬಿಟ್ಟರೆ ದೇಶ ಆಪತ್ತಿ ನಿಂದ ಹೊರಗೆ ಬರಬಹುದಾ ಎಂದು ಯೋಚಿಸುತ್ತಾರೆ. ಹಾಗಂತ ದೇಶದ ಜನತೆಗೆ ಏಕಾಏಕಿ ವಾರಕ್ಕೊಂದು ದಿನ ಊಟ ಬಿಡಿ ಎಂಬ ಆದೇಶ ಹೊರಡಿಸುವುದಿಲ್ಲ. ಅದರ ಬದಲಿಗೆ ತಾವು ಇಂದಿನಿಂದ ಪ್ರತಿ ಸೋಮವಾರ ಉಪವಾಸ ಕೈಗೊಳ್ಳುತ್ತೇನೆ ಎಂದು ಘೋಷಣೆ ಮಾಡಿ ವಾರಕ್ಕೆ ಒಂದು ಉಪವಾಸ ಶುರು ಮಾಡುತ್ತಾರೆ.
ಇಡೀ ದೇಶವೇ ಶಾಸ್ತ್ರೀಜಿಯ ಈ ನಿರ್ಧಾರದಿಂದ ಪ್ರಭಾವಿತಗೊಳ್ಳುತ್ತದೆ. ದೇಶಾದ್ಯಂತ ಅತಿ ದೊಡ್ಡ ಸಂಖ್ಯೆಯಲ್ಲಿ ವಾರದ ಉಪವಾಸ ಕೈಗೊಳ್ಳುತ್ತಾರೆ. ಅದು ಮುಂದೆ ಶಾಸ್ತ್ರಿ ಸೋಮವಾರ ಅಂತಲೇ ಪ್ರಖ್ಯಾತವಾಗುತ್ತದೆ. ಇವತ್ತಿಗೂ ಈ ಸೋಮವಾರದ ಉಪವಾಸ ಪಾಲನೆ ಮಾಡುತ್ತಿರುವ ಲಕ್ಷಾಂತರ ಕುಟುಂಬಗಳಿವೆ. 1962ರಲ್ಲಿ ನೆಹರೂ ಪ್ರಧಾನಿ ಆಗಿದ್ದ ಅವಧಿಯಲ್ಲಿ, ದೇಶ ಚೀನಾ ವಿರುದ್ಧದ ಯುದ್ಧದಲ್ಲಿ ಹೀನಾಯವಾಗಿ ಸೋತಿತ್ತು. ನಮ್ಮ ಸೈನಿಕರ ಮನೋಬಲವೇ ಉಡುಗಿ ಹೋಗಿತ್ತು. ಎರಡು ಮೂರು ವರ್ಷದ ನಂತರವೂ ಭಾರತೀಯ ಸೇನೆ ಈ ಸೋಲಿನಿಂದ ಚೇತರಿಸಿಕೊಂಡಿರಲಿಲ್ಲ. ಇಂಥ ಸಮಯದಲ್ಲಿ ನೆಹರೂ ನಿಧನರಾಗಿರುತ್ತಾರೆ. ಶಾಸ್ತ್ರೀಜಿ ಪ್ರಧಾನಿಗಳಾಗುತ್ತಾರೆ. ಅದೇ ಸಮಯ ನೋಡಿ ಪಾಪಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುತ್ತದೆ.
ಶಾಸ್ತ್ರೀಜಿಯವರನ್ನು ಬಹಳ ಹಗುರವಾಗಿ ಪರಿಗಣಿಸಿರುತ್ತದೆ ಪಾಕಿಸ್ತಾನ. ಈ ದುರಹಂಕಾರದಿಂದ ಗಡಿ ಒಳಗೆ ನುಗ್ಗಿದ್ದ ಪಾಕಿಸ್ತಾನೀ ಸೇನೆಯನ್ನು ಹುಚ್ಚು ನಾಯಿಯನ್ನು ಓಡಿಸೋ ಹಾಗೆ ಲಾಹೋರ್ ತನಕ ಅಟ್ಟಾಡಿಸಿ ಬಡಿದಿತ್ತು ಶಾಸ್ತ್ರೀಜಿ ನೇತೃತ್ವದ ಇಂಡಿಯನ್ ಆರ್ಮಿ. ನಂಗೆ ಈ ಒಂದು ಘಟನೆ ಶಾಸ್ತ್ರೀಜಿ ಅವ್ರು ಶಿವಾಜಿ ಮಹಾರಾಜರ ಅವತಾರವಾ ಎಂಬ ಅನುಮಾನ ಹುಟ್ಟಲು ಕಾರಣ.
ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ಆರೂಕಾಲು ಅಡಿ. ಶಾಸ್ತ್ರಿ ಮೂರೂಕಾಲು ಅಡಿ. ಇವನೇನು ಮಾಡೋಕೆ ಸಾಧ್ಯ ಎಂದು ಗೇಲಿ ಮಾಡಿದ್ದ ಪಾಕಿಸ್ತಾನಕ್ಕೆ ಆಗ ಶಾಸ್ತ್ರಿ ಹೇಳಿದ ಒಂದು ಮಾತು ‘ಮೂರೂಕಾಲು ಅಡಿಯ ನಾನು ಅಯೂಬ್ ಖಾನ್ ಎದ್ರು ತಲೆ ಎತ್ತಿಕೊಂಡು ಮಾತನಾಡ್ತೇನೆ. ಆದರೆ ಅಯೂಬ್ ಖಾನ್ ನನ್ನ ಮುಂದೆ ತಲೆ ತಗ್ಗಿಸಿಯೇ ಮಾತನಾಡಬೇಕಾಗು ತ್ತದೆ’! ಶಿವಾಜಿ ಕೂಡ ಹೀಗೇ ಅಲ್ಲವೇ.. ಏಳೂವರೆ ಅಡಿಯ ಅಫ್ಜಲ್ ಖಾನ್‌ನನ್ನು ವ್ಯಾಘ್ರನಖದಿಂದ ಸೀಳಿ ಹಾಕಿದ್ದು! ಮಾಜಿ ಮಂತ್ರಿ ನಾಗೇಂದ್ರ, ಕೇಂದ್ರದ ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಥರದ ಘಟನೆಗಳನ್ನು ನೋಡಿದಾಗೆಲ್ಲ ನನಗೆ ನೆನಪಾಗುವುದು ಶಾಸ್ತ್ರೀಜಿ ಒಬ್ಬರೇ.
1956ರಲ್ಲಿ ರೈಲ್ವೇ ಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮಿಳ್ನಾಡಿನಲ್ಲಿ ಭೀಕರವಾದ ರೈಲ್ವೇ ಅಪಘಾತ ಆಗಿತ್ತು. ನೂರೈವತ್ತು ಜನ ಪ್ರಾಣ ಕಳೆದುಕೊಂಡರು. ಈ ಸುದ್ದಿ ಬರುತ್ತಿದ್ದ ಹಾಗೇ ಶಾಸ್ತ್ರೀಜಿ ನೈತಿಕ ಜವಾಬ್ದಾರಿ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಯೇಬಿಟ್ಟರು. ಕುಟುಂಬ ರಾಜಕಾರಣ ಎಂಬುದು ನಾರ್ಮ್ ಎಂಬಂತಾಗಿರುವ ಈ ಸಂದರ್ಭದಲ್ಲಿ ಶಾಸ್ತ್ರಿ ಮತ್ತೊಮ್ಮೆ ಭಿನ್ನರಾಗಿ ನೆನಪಾಗುತ್ತಾರೆ. ಶಾಸ್ತ್ರೀಜಿ ತಮ್ಮ ಮಕ್ಕಳಿಗೆ ತುಂಬ ಸ್ಟ್ರಿಕ್ಟ್ ಆಗಿ ಹೇಳಿದ್ದರು; ಯಾವುದೇ ಕಾರಣಕ್ಕೂ ಎಲ್ಲಿಯೂ ತಮ್ಮ ಹೆಸರನ್ನು ಬಳಸಿಕೊಳ್ಳಬಾರದೆಂದು. ಅಪ್ಪನ ಮಾತಿನಂತೆ ಶಾಸ್ತ್ರೀಜಿ ಮಕ್ಕಳು ಕೆಲಸಕ್ಕೆ ಅರ್ಜಿ ಹಾಕುವಾಗ ತಂದೆಯ ಹೆಸರು ಮತ್ತು ಉದ್ಯೋಗ ಕಾಲಂಗಳನ್ನು ಖಾಲಿ ಬಿಡುತ್ತಿದ್ದರು. ಹಾಗೂ ಒಮ್ಮೆ ಪ್ರಧಾನಿಯ ಮಗ ಎಂದು ಅವರ ಮಗನಿಗೆ ಉದ್ಯೋಗದಲ್ಲಿ ಪ್ರಮೋಷನ್ ಕೊಟ್ಟಿದ್ದಕ್ಕೆ ಆ ಪ್ರಮೋಷನ್ ಆರ್ಡರನ್ನೇ ರದ್ದು ಮಾಡಿದ್ದರು ಶಾಸ್ತ್ರೀಜಿ. ಇದಕ್ಕಿಂತ ಪ್ರಾಮಾಣಿಕ ವ್ಯಕ್ತಿತ್ವ ನೋಡಲು ಸಾಧ್ಯವೇ ಆಗಲಿಕ್ಕಿಲ್ಲ. ಎರಡೇ ಎರಡು ವರ್ಷ ಅವರು ಪ್ರಧಾನಿ ಪಟ್ಟದಲ್ಲಿ ಕೂತಿದ್ದು. ಆದರೆ ಶತಮಾನಕ್ಕಾಗುವಷ್ಟು ಯೋಜನೆಗಳನ್ನು ತಲೆಯಲ್ಲಿ ಟ್ಕೊಂಡಿದ್ದರು.
ಬರೀ ಎರಡು ವರ್ಷಗಳಲ್ಲಿ ಚೀನಾ, ಪಾಕಿಸ್ತಾನ, ಅಮೆರಿಕ ಎಲ್ಲ ದೇಶಗಳಿಗೂ ಭಾರತದ ಬಗ್ಗೆ ನಡುಕ ಹುಟ್ಟಿಸಿದ್ದರು. ಅಣುಬಾಂಬ್ ಪರೀಕ್ಷೆಗೂ ಯೋಜನೆ ಸಿದ್ಧಪಡಿಸಿದ್ದರು. ಪೂರ್ತಿ ಐದು ವರ್ಷ ಇದ್ದಿದ್ದಲ್ಲಿ ಅಥವಾ ಇನ್ನೊಂದೆರಡು ಟರ್ಮ್ ಪ್ರಧಾನಿ ಆಗಿ ಮುಂದುವರಿದಿದ್ದಲ್ಲಿ ಈ ದೇಶದ ಭವಿಷ್ಯವೇ ಬೇರೆ ಥರ ಇರ್ತಿತ್ತು. ಇದರಲ್ಲಿ ಅನುಮಾನವೇ ಇಲ್ಲ. ಆದರೆ ತಾಷ್ಕೆಂಟ್‌ನಲ್ಲಿ ಅದೇನು ನಡೆಯಿತು ಎಂಬುದು ಇಂದಿಗೂ ರಹಸ್ಯ. ಸಹಜ ಅಲ್ಲದಿರುವ ಸಾವನ್ನು, ಪೋಸ್ಟ್ ಮಾರ್ಟಮ್ ಕೂಡ ಇಲ್ಲದೇ ಮುಗಿಸಿಬಿಡುವ ಭಾರತ ಸರಕಾರ.
ಶಾಸ್ತ್ರೀಜಿಯವರ ಸಾವು ನಿಗೂಢವಾಗಿಯೇ ಉಳಿಸಿಬಿಟ್ಟಿತು. ಇಷ್ಟು ಪ್ರಾಮಾಣಿಕವಾಗಿ, ದೇಶ ದೇಶ ಎಂದು ಬಡಿದಾಡಿದ ಶಾಸ್ತ್ರೀಜಿಗೆ ಸಿಕ್ಕಿದ್ದಾದರೂ ಏನು? ನಿಧನಾನಂತರವೂ ಅವರಿಗೆ ಸಿಕ್ಕಿದ್ದು ನೋವೇ. 1965ರಲ್ಲಿ ಶಾಸ್ತ್ರೀಜಿ ಕೇವಲ ಐದುಸಾವಿರ ರುಪಾಯಿ ಸಾಲ ಮಾಡಿರುತ್ತಾರೆ. ಹೌದು. ಅವರು ಐದು ಸಾವಿರ ರುಪಾಯಿ ಸಾಲ ಮಾಡಿದ್ದು ಪ್ರಧಾನಿ ಆಗಿದ್ದ ಸಮಯದಲ್ಲಿ. ಅದು ಒಂದು ಫಿಯಟ್ ಕಾರ್ ಖರೀದಿ ಮಾಡುವ ಸಲುವಾಗಿ.
ದುರದೃಷ್ಟವಶಾತ್ ಅವರು ಆ ಸಾಲ ತೀರುವ ಮುನ್ನವೇ ಪ್ರಾಣತ್ಯಾಗ ಮಾಡಿಬಿಡುತ್ತಾರೆ. ಬ್ಯಾಂಕಿನಿಂದ ಅವರ ಪತ್ನಿಗೆ ಸಾಲ ತೀರಿಸಿ ಅಂತ ವಿಪರೀತ ಒತ್ತಡ ಶುರುವಾಗುತ್ತದೆ. ಲಲಿತಾ ಶಾಸ್ತ್ರಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಬ್ಯಾಂಕಿನವರ ಬಳಿ ಹೇಳಿಕೊಂಡರೂ ಬ್ಯಾಂಕ್ ಒಪ್ಪುವುದಿಲ್ಲ. ಆಗ ಲಲಿತಾ ಶಾಸ್ತ್ರಿ ಸರಕಾರಕ್ಕೆ ಪತ್ರ ಬರೆಯುತ್ತಾರೆ. ಸಹಾಯಕ್ಕಾಗಿ ಮನವಿ ಸಲ್ಲಿಸಿದರೂ ಸರಕಾರ ಒಂದು ಚೂರೂ ಸ್ಪಂದಿಸುವುದಿಲ್ಲ.
ಇಂದಿರಾ ಗಾಂಧಿ ಸರಕಾರ ಶಾಸ್ತ್ರೀಜಿಯನ್ನು ಯಾವತ್ತೋ ಮರೆತುಬಿಟ್ಟಿತ್ತು. ಕೊನೆಗೆ ತಮಗೆ ಬರುತ್ತಿದ್ದ ಪೆನ್ಶನ್ ಹಣದಲ್ಲಿ ಕಂತುಗಳ ಮೂಲಕ ಸಾಲ ತೀರಿಸಿ ಮುಗಿಸುತ್ತಾರೆ ಶಾಸ್ತ್ರೀಜಿ ಪತ್ನಿ. ಶಾಸ್ತ್ರೀಜಿ ಕೊನೆಯುಸಿರೆಳೆದ ನಾಡಿನಲ್ಲಿ, ಅವರ ಪ್ರತಿಮೆಯೆದುರು ಪ್ರಶಸ್ತಿ ಸ್ವೀಕರಿಸುವ ಅವರೆಲ್ಲರ ಭಾಗ್ಯಕ್ಕೆ ಎಣೆ ಇಲ್ಲ. ಈ ಪ್ರಶಸ್ತಿ ನೆಪದಲ್ಲಿ ಶಾಸ್ತ್ರಿಯವರ ಜೀವನದ ಕೆಲವು ಅಂಶಗಳು ಮತ್ತೆ ನೆನಪಾದವು. ಶಾಸ್ತ್ರಿಯವರ ಪ್ರಾಮಾಣಿಕತೆ ಮತ್ತು ದೇಶಪ್ರೇಮದ ಒಂದಂಶ ನಮ್ಮೊಳಗೆ ಜಾಗೃತಗೊಂಡರೂ ಅದು ದೇಶಕ್ಕೆ ಮತ್ತು ನಮ್ಮ ವ್ಯಕ್ತಿತ್ವಕ್ಕೆ ದೊಡ್ಡ ಘನತೆ ತಂದುಕೊಡಬಲ್ಲದು.