Shishir Hegde Column: ಸುಂದರ ಯಶಸ್ವಿ ಬದುಕೆಂದರೆ ಏನೆಂಬ ಕಥೆಗಳು
ನಮಗೆಲ್ಲ ಅಂಥ ಕೆಲವು ಕಥೆಗಳನ್ನು ಪದೇ ಪದೆ ಹೇಳಲಾಗಿದೆ. ನಾವೂ ಆ ಕಥೆಯನ್ನು ಬೇರೆ ಯವರಿಗೆ ಹೇಳಿರುತ್ತೇವೆ. ಏನದು ಕಥೆ? ಅದೇ ಇಂದಿನ ವಿಷಯ. ‘ಯಶಸ್ವಿ ಬದುಕೆಂದರೆ ಏನು?’ ಎಂಬ ಕಥೆ. ‘ಚೆನ್ನಾಗಿ ಓದಬೇಕು, ಉತ್ತಮ ನೌಕರಿ ಪಡೆಯಬೇಕು, ಬೇಕಾದಷ್ಟು ಸಂಪಾದಿಸ ಬೇಕು, ಸಂಪಾದಿಸಿದ ಮೇಲೆ ಬೇಕಾದ ವಸ್ತುವನ್ನು ಖರೀದಿಸುವ ಸ್ವಾತಂತ್ರ್ಯ.

ಅಂಕಣಕಾರ ಶಿಶಿರ್ ಹೆಗಡೆ

ಶಿಶಿರಕಾಲ
ಶಿಶಿರ್ ಹೆಗಡೆ
ಇಡೀ ಮನುಷ್ಯ ಕುಲಕ್ಕೇ ಕಥೆಗಳೆಂದರೆ ವಿಶೇಷ ಆಸಕ್ತಿ, ಪರಮ ಪ್ರೀತಿ. ಇದು ದೇಶಕಾಲಾ ತೀತ. ಯಾವುದೇ ವಿಷಯವನ್ನು ಕಥೆಯಿಂದ ಮೊದಲಿಸಿ ಹೇಳಿದರೆ ಅಥವಾ ಕಥೆಯಾಗಿಸಿ ಹೇಳಿದರೆ ಅದು ಕೇಸರಿಬಾತಿನಷ್ಟೇ ರುಚಿಸುತ್ತದೆ. ಕಥೆಯಿಲ್ಲದೆ ಹೇಳುವ ವಿಷಯ ಉಪ್ಪಿ ಲ್ಲದ ಉಪ್ಪಿಟ್ಟು. ಊಹೆ, ಕಲ್ಪನೆ, ಕನಸು, ನಿರೀಕ್ಷೆ, ಆಸೆ ಇವೆಲ್ಲ ಬದುಕಿನ ಅವಶ್ಯಕತೆಗಳು. ಅವನ್ನು ಕಥೆಗಳು ಸುಲಭದಲ್ಲಿ ಕಲ್ಪಿಸಿಕೊಡಬಲ್ಲವು. ಗುಂಪಿನಲ್ಲಿ ಮಾತನಾಡುವಾಗ “ನಿಮಗೊಂದು ಕಥೆ ಹೇಳುತ್ತೇನೆ" ಎಂದು ಮೊದಲಿಸಿದರೆ ಸುತ್ತಲಿನೆಲ್ಲರ ಗಮನ ಅವರತ್ತ ಕೇಂದ್ರಿತವಾಗಿಬಿಡುತ್ತದೆ. ಕಥೆಯೆಂದರೆ ಕಿವಿ ಇಷ್ಟಗಲವಾಗುತ್ತದೆ. ಬೇಸರ ತರಿಸಿದ ಭಾಷಣ ಕಾರ “ನಿಮಗೆ ಈಗ ಒಂದು ಕಥೆ ಹೇಳುತ್ತೇನೆ" ಎಂದರೆ ಕಚ-ಪಚ ಮಾತಾಡುತ್ತಿರುವ ಸಭೆಗೆ ಸಭೆಯೇ ಶಾಂತವಾಗಿ ಅವರತ್ತ ನೋಡುತ್ತದೆ.
ಒಬ್ಬ ಯಶಸ್ವಿ ಶಿಕ್ಷಕ, ಪ್ರೊಫೆಸರ್, ಸೇಲ್ಸ್ ಮನ್, ವ್ಯಾಪಾರಿ, ಮ್ಯಾನೇಜರ್, ಸಿಇಒ ಆದವನಿಗೆ ಯಾವುದೇ ವಿಷಯವನ್ನು ಕಥೆಯಾಗಿಸಿ ಹೇಳುವ ಕಲೆ ಸಿದ್ಧಿಸಿರುತ್ತದೆ. ಒಳ್ಳೆಯ ಬರಹಗಾರ ಏನನ್ನೇ ಬರೆದರೂ ಕಥೆಯಂತೆಯೇ ಬರೆದಿರುತ್ತಾನೆ. ಆಕರ್ಷಕ ರೀತಿಯಲ್ಲಿ ಕಥೆಯನ್ನು ಹೇಳಬಲ್ಲವನು ಅದ್ಭುತ ವಾಗ್ಮಿ ಅನಿಸಿಕೊಳ್ಳುತ್ತಾನೆ. ಹೇಳುವ ವಿಷಯ ಎಷ್ಟೇ ಸವಕ ಲಾಗಿರಲಿ, ಚಿಕ್ಕದಿರಲಿ, ಹೇಳಿದ್ದೇ ಹೇಳಲಿ, ಅದಕ್ಕೊಂದು ಕಥೆ ಜತೆಯಾದರೆ ವಿಶೇಷ. ಹೊಸ ತೊಂದು ಕಲ್ಪನಾ ಸಾಧ್ಯತೆ. ಆದರೆ ನಾವು ಕೇಳುವ ಎಲ್ಲ ಕಥೆಗಳೂ ಅಸಲಿಗೆ ‘ಕಾಕಣ್ಣ-ಗುಬ್ಬಣ್ಣ’ ಅಥವಾ ‘ಒಂದೂರಲ್ಲಿ ಒಬ್ಬ ರಾಜನಿದ್ದ’ ಎಂಬ ರೀತಿಯ ಕಥೆಗಳಾಗಿರುವುದಿಲ್ಲ.
ಇದನ್ನೂ ಓದಿ: Shishir Hegde Column: ನಮ್ಮ ತಲೆ ಹಿಂದಿಗಿಂತ ದೊಡ್ಡದಾಗುತ್ತಿದೆಯೇ ?
ಅದೆಷ್ಟೋ ನಿರೂಪಣೆಗಳೇ ಕಥೆಗಳಾಗಿ ನಮ್ಮ ಜತೆಯಾಗಿ ಬದುಕುತ್ತಿರುತ್ತವೆ. ನಮಗೆಲ್ಲ ಅಂಥ ಕೆಲವು ಕಥೆಗಳನ್ನು ಪದೇ ಪದೆ ಹೇಳಲಾಗಿದೆ. ನಾವೂ ಆ ಕಥೆಯನ್ನು ಬೇರೆಯವರಿಗೆ ಹೇಳಿರುತ್ತೇವೆ. ಏನದು ಕಥೆ? ಅದೇ ಇಂದಿನ ವಿಷಯ. ‘ಯಶಸ್ವಿ ಬದುಕೆಂದರೆ ಏನು?’ ಎಂಬ ಕಥೆ. ‘ಚೆನ್ನಾಗಿ ಓದಬೇಕು, ಉತ್ತಮ ನೌಕರಿ ಪಡೆಯಬೇಕು, ಬೇಕಾದಷ್ಟು ಸಂಪಾದಿಸ ಬೇಕು, ಸಂಪಾದಿಸಿದ ಮೇಲೆ ಬೇಕಾದ ವಸ್ತುವನ್ನು ಖರೀದಿಸುವ ಸ್ವಾತಂತ್ರ್ಯ.
ಅದುವೇ ಸಂತೋಷದ ಬದುಕು’- ಈ ಕಥೆ. ಇದೇ ಕಥೆಯನ್ನು ಅಪ್ಪನಿಗೆ ಅಜ್ಜ ಹೇಳಿದ್ದರು, ಅಮ್ಮ ಮಗಳಿಗೆ ಹೇಳಿದ್ದಳು, ಈಗ ಅವರು ಅವರ ಮಕ್ಕಳಿಗೆ ಹೇಳುತ್ತಿದ್ದಾರೆ. ‘ಯಶಸ್ವಿ ಬದುಕೆಂದರೆ ಏನು ಎಂಬುದರ’ ಸಾಮಾಜಿಕ ನಿರೂಪಣೆಯ ಕಥೆ.
ಸುಮಾರು 15 ವರ್ಷದ ಹಿಂದೆ ನನ್ನ ಸ್ನೇಹಿತನೊಬ್ಬ ಬೆಂಗಳೂರಿನ ಹೊರವಲಯ ದಲ್ಲಿರುವ ಹೊಸ ಬಡಾವಣೆಯೊಂದರಲ್ಲಿ ಮನೆ ಕಟ್ಟಿದ. ಇವನದೇ ಆ ಬಡಾವಣೆಯ ಮೊದಲ ಮನೆ. ಅವನೂ ಹಳ್ಳಿಯಿಂದ ಬೆಂಗಳೂರು ಸೇರಿದ ಮೊದಲ ತಲೆಮಾರಿನವನು. ನೀವು ಬೆಂಗಳೂರಿಗರಾದರೆ ‘ಎಕ್ಸ್‌ಟೆನ್ಷನ್ ಏರಿಯಾ’ ಎಂದು ಕರೆಯಲ್ಪಡುವ ನಗರದ ಹೊರವಲಯ ಹೇಗಿರುತ್ತದೆಂಬ ಅಂದಾಜಿರುತ್ತದೆ.
ಎಲ್ಲ ದಿಕ್ಕಿನಲ್ಲಿ ನೂರಾರು ಖಾಲಿ ಸೈಟುಗಳು, ಖಾಲಿ ರಸ್ತೆಗಳು, ಬೀದಿ ದೀಪಗಳು. ಅಲ್ಲಲ್ಲಿ ಕೆಲವು ಸೈಟುಗಳಿಗೆ ಕಾಂಪೌಂಡ್, ಇಂಥವರ ಸ್ವತ್ತು, ಈ ಜಾಗ ಕೋರ್ಟಿನಲ್ಲಿದೆ, ಇದು ಮಾರಾಟಕ್ಕಿಲ್ಲ ಎಂಬಿತ್ಯಾದಿ ಬೋರ್ಡುಗಳು. ಸ್ನೇಹಿತನದು ಆಗ ಒಂಟಿ ಮನೆ. ಒಂದು ಮೊಸರಿನ ಪ್ಯಾಕೆಟ್ ಬೇಕೆಂದರೂ ಬೈಕ್ ಹತ್ತಿ 5 ಕಿ.ಮೀ. ಹೋಗಬೇಕಿದ್ದ ಸ್ಥಿತಿ. ನಾನು ಮೊದಲ ಬಾರಿ ಅವರ ಮನೆಗೆ ಹೋದಾಗ ಮನೆಯ ಸುತ್ತಲಿನ ಖಾಲಿ ಜಾಗಗಳನ್ನು ತೋರಿಸಿ “ಇಲ್ಲಿ ಬೆಂಗಳೂರು ಒನ್ ಬರುತ್ತದೆ, ಇಲ್ಲಿ ಅಂಗಡಿಗಳು ಬರುತ್ತವೆ, ಇಲ್ಲಿ ಇನ್ನು ನಾಲ್ಕು ವರ್ಷದಲ್ಲಿ 500 ಮನೆ ಬರುತ್ತವೆ, ಅಲ್ಲಿ ಪೆಟ್ರೋಲ್ ಬಂಕ್ ಬರುತ್ತದೆ, ಇಲ್ಲಿ ಮಾಲ್ ಬರುತ್ತದೆ" ಹೀಗೆ ನೂರು ‘ಬರುತ್ತದೆ’ಯ ಲಿಸ್ಟ್ ನನ್ನ ಮುಂದೆ ಇಟ್ಟಿದ್ದ.
ಅದನ್ನು ಕೇಳಿದಾಗ ಸ್ನೇಹಿತನಿಗೆ ಇಲ್ಲಿ ಇಷ್ಟು ದೂರ ಮನೆ ಕಟ್ಟಿಕೊಂಡದ್ದಕ್ಕೆ, ಸಮಾಜಕ್ಕೆ ಒಂದಿಷ್ಟು ಸಮಜಾಯಿಷಿ ಕೊಡಬೇಕಾದ ಅನಿವಾರ್ಯತೆ ಎದ್ದು ಕಾಣಿಸುತ್ತಿತ್ತು. ಕ್ರಮೇಣ ಕೆಲವು ವರ್ಷಗಳು ಉರುಳಿದವು. ಮತ್ತೊಮ್ಮೆ ಹೋದಾಗ ಒಂದಿಷ್ಟು ಮನೆಗಳು, ಬೇಕರಿ ಗಳು, ದರ್ಶಿನಿ, ಅಂಗಡಿಗಳು ಇತ್ಯಾದಿ ತಲೆ ಎತ್ತಿದ್ದವು. ಆಗಲೂ ನನ್ನ ಸ್ನೇಹಿತ “ಇಲ್ಲಿ ಆ ಅಂಗಡಿ ಬರುತ್ತದೆ, ಅಲ್ಲಿ ಈ ಬ್ರಾಂಡಿನ ಅಂಗಡಿ"- ಹೀಗೆ ಅಂಗಡಿ-ಹೋಟೆಲ್ಲಿನ ಸುದ್ದಿ ಯನ್ನೇ ಹೇಳುತ್ತಿದ್ದ. ಈಗ 15 ವರ್ಷ ಕಳೆದಿದೆ.
ಇಡೀ ಬಡಾವಣೆ, ಏರಿಯಾ ಎಲ್ಲವೂ ಬದಲಾಗಿವೆ. ಮುಖ್ಯರಸ್ತೆಯಿಂದ ಅವರ ಮನೆಗೆ ಹೋಗಲಿಕ್ಕೆ ಅರ್ಧಗಂಟೆಯ ಟ್ರಾಫಿಕ್ ಜಾಮ್ ದಾಟಬೇಕು. ಅದೊಂದು ಕಾಲದಲ್ಲಿ ಒಂಟಿ ಯಾಗಿ ನಿಂತಿದ್ದ ಅವರ ಮನೆ ಅದಕ್ಕಿಂತ ದೊಡ್ಡ ಬಿಲ್ಡಿಂಗುಗಳ ಮಧ್ಯೆ ಈಗ ಕಳೆದು ಹೋಗಿದೆ. ಎಲ್ಲವೂ ಸ್ನೇಹಿತ ಬಯಸಿದಂತೆ. ಈಗ ಸ್ನೇಹಿತ ಸಮಾಧಾನವಾಗಿದ್ದಾನೆ ಎಂದು ಕೊಂಡಿದ್ದೆ.
ಏಕೆಂದರೆ ಅವನು 15 ವರ್ಷದ ಹಿಂದೆ ಹೇಳಿದ ಅಂಗಡಿ ಸೌಲಭ್ಯಗಳೆಲ್ಲ ಈಗ ರೂಪ ತಾಳಿದ್ದವು. ಆದರೆ ವಿಷಯ ಹಾಗಿಲ್ಲ. ಈಗ ಅವನಿಗೆ ಇದೆಲ್ಲ ಕಿರಿಕಿರಿ. ಅಂಗಡಿಗಳು, ಮಾಲ್, ಪಬ್ಬು, ಬಾರ್, ಟ್ರಾಫಿಕ್, ಧೂಳು, ಕೊಳಚೆ. ಆದರೆ ಅವನಿಗೆ ಖುಷಿಯೂ ಇದೆ. ಈಗ ಹಾಲು-ಮೊಸರು ಮನೆಯ ಪಕ್ಕದಲ್ಲಿಯೇ ಸಿಗುತ್ತವೆ. ಔಷಧಿ ಅಂಗಡಿ-ಡಾಕ್ಟರ್ ಎಲ್ಲ ವ್ಯವಸ್ಥೆ ಅ ಇದೆ. ಬೆಳಗ್ಗೆ ತಿಂಡಿ ಮಾಡಿಲ್ಲವೆಂದರೆ ಒಳ್ಳೆಯ ಇಡ್ಲಿ ಸಿಗುವ ಹೋಟೆಲ್ ಕಾಲ್ನಡಿಗೆ ದೂರದಲ್ಲಿದೆ. ಒಟ್ಟಾರೆ ಬೇಕಾಗುವ ವಸ್ತುಗಳನ್ನು ಸುಲಭದಲ್ಲಿ ಖರೀದಿಸಲು ಹತ್ತಿರದಲ್ಲಿ ವ್ಯವಸ್ಥೆಯಿದೆ.
ಆಧುನಿಕ ಬದುಕಿನಲ್ಲಿ ಯಶಸ್ವಿ ಜೀವನ ಎಂದರೆ ಏನು? ಅದಕ್ಕೂ ಆಧುನಿಕವಲ್ಲದ್ದು ಎನಿಸಿಕೊಳ್ಳುವ ಬದುಕಿಗೂ ಏನು ವ್ಯತ್ಯಾಸ? ಆಧುನಿಕವಲ್ಲದ ಬದುಕು ಯಶಸ್ವಿಯಾಗು ವುದೇ ಇಲ್ಲವೇ? ಆಧುನಿಕವೆನಿಸಿಕೊಳ್ಳುವ ಪೇಟೆಯ ಬದುಕಿನ ಸುತ್ತಲಿನ ವ್ಯಾಪಾರ, ವಹಿವಾಟು ಇತ್ಯಾದಿಯನ್ನು ಒಮ್ಮೆ ಸೂಕ್ಷ್ಮವಾಗಿ ಗ್ರಹಿಸಿ ನೋಡಿ. ಈಗ- To be modern is to consume. ಆಧುನಿಕ ಬದುಕಿನ ಯಶಸ್ಸು ಎಂದರೆ ಒಳ್ಳೆಯ ಕಾರು ಖರೀದಿಸುವುದು, ಸೈಟು ಖರೀದಿ, ಉತ್ತಮ ಬಟ್ಟೆ, ಆಪಲ್ ಫೋನ್, ನೈಕಿ ಶೂ, ಗುಚ್ಚಿ ಬ್ಯಾಗ್, ವಜ್ರದ ಒಡವೆ.. ಹೀಗೆ ಒಂದಿಷ್ಟು ಬೆಲೆಬಾಳುವ ವಸ್ತುಗಳನ್ನು ಹೊಂದುವುದು.
ಮೊದಲೆಲ್ಲ ಅಂಗಡಿಗೆ ಹೋಗುವಾಗ ಚೀಟಿ ಮಾಡಿಕೊಂಡು ಹೋಗುವುದಿತ್ತು. ಈಗ ಸೂಪರ್ ಮಾರ್ಕೆಟ್ ಗಳಲ್ಲಿ ಹಾಗಲ್ಲ. ಅದೆಷ್ಟೋ ಬಾರಿ ಅಲ್ಲಿಗೆ ಹೋಗಿ ವಸ್ತುವನ್ನು ನೋಡಿ ಅವಶ್ಯಕತೆ ನೆನಪಾಗುತ್ತದೆ. ಈಗ ಬದುಕಿರುವ ನಮ್ಮೆಲ್ಲರಲ್ಲಿ ಇದೊಂದು ವಿಚಿತ್ರ ಸೈಕಿ (ಮನಸ್ಥಿತಿ) ಸುಪ್ತವಾಗಿ ಇದೆ. ನಮಗೆ ಯಾವುದೇ ಸಮಸ್ಯೆ ಎದುರಾಯಿತೆನ್ನಿ, ಪರಿಹಾ ರಾರ್ಥ ಯೋಚಿಸುವಾಗ ನಾವು ಮೊದಲು ಏನನ್ನು ಖರೀದಿಸಿದರೆ ಇದು ಪರಿಹಾರ ವಾಗುತ್ತದೆ ಎಂದೇ ಯೋಚಿಸುತ್ತೇವೆ.
ಈಗೀಗ ಖರೀದಿಗೂ ಅವಶ್ಯಕತೆಗೂ ಸಂಬಂಧವೇ ಇಲ್ಲವೆಂಬಂತಾಗಿದೆ. ರಜಾದಿನಗಳಲ್ಲಿ ಬೇಸರವೆಂದು ಶಾಪಿಂಗ್ ಹೊರಡುವುದು ಆಧುನಿಕ ಛದ್ಮವೇಷ. ಒತ್ತಡದ ಬದುಕಿನಲ್ಲಿ ಶಾಪಿಂಗ್ ಆರಾಮ ಕೊಡುವ ಒಂದು ಕೆಲಸವಂತೆ! ಬದುಕಿನ ಏಕಾಂಗಿತನಕ್ಕೂ ಶಾಪಿಂಗ್ ಮಾಡಿ ಪಡುವ ಖುಷಿ ಪರಿಹಾರವಂತೆ!
ಬೇಸರವಾದರೆ, ಖಿನ್ನರಾದರೆ, ಏನೋ ಒಂದು ಸಾಧಿಸಿದರೆ, ಸಾಧಿಸದಿದ್ದರೆ, ಸಮಾಧಾನಕ್ಕೆ, ಅಸಮಾಧಾನಕ್ಕೆ, ಖುಷಿಗೆ, ದುಃಖಕ್ಕೆ, ಬೋರ್ ಆದರೆ ಹೀಗೆ ಎಲ್ಲದಕ್ಕೂ ಶಾಪಿಂಗ್, ಏನೋ ಒಂದು ಖರೀದಿಸುವುದು ಪರಿಹಾರ. ಇದು ಸರಿಯೋ, ತಪ್ಪೋ, ಮೂರ್ಖತನವೋ ಅಥವಾ ಇದುವೇ ಯಶಸ್ವಿ ಬದುಕಿನ ಲಕ್ಷಣವೋ- ಅದೆಲ್ಲವನ್ನು ಒಮ್ಮೆ ಪಕ್ಕಕ್ಕಿಡೋಣ. ಇಲ್ಲಿ ಖರೀದಿ ಏನೋ ಒಂದು ಸಮಾಧಾನ, ಖುಷಿ ಕೊಡುತ್ತದೆ ಎಂಬುದಂತೂ ಸತ್ಯ.
ಆದರೆ ಖರೀದಿಸಿದಾಗ ಸಿಗುವ ಈ ಪರಿಹಾರ, ಸಂತೋಷ ಎಂದಿಗೂ ಕ್ಷಣಿಕ. ಇದು ಎಲ್ಲರಿಗೂ ಗೊತ್ತು. ಆದರೂ ನಾವು ಇನ್ನಷ್ಟು ಖರೀದಿಸುವ ಅದೇ ವರ್ತುಲದಲ್ಲಿ ಸುತ್ತುಹೊಡೆ ಯುತ್ತಿರುತ್ತೇವೆ ಏಕೆ? ಇದು ಇಲ್ಲಿನ ಪ್ರಶ್ನೆ. ಅಷ್ಟಕ್ಕೂ ಇನ್ನಷ್ಟು, ಮತ್ತಷ್ಟು ವಸ್ತುಗಳನ್ನು ಹೊಂದುವುದೇ ಯಶಸ್ವಿ ಬದುಕು ಎಂದು ನಾವು ಅಷ್ಟು ಪ್ರಬಲವಾಗಿ ನಂಬಿಕೊಂಡಿ ರುವುದು ಏಕೆ? ಆ ಕಥೆಯನ್ನು ನಮಗೆಲ್ಲ ಹೇಳಿದವರು, ಹೇಳುತ್ತಿರುವವರು ಯಾರು? ಎಲ್ಲಿ? ಹೇಗೆ? ಅಂಥ ಕಥೆಗಳನ್ನು ನಿರಂತರ ಹೇಳುವುದು ದೊಡ್ಡ ದೊಡ್ಡ ಕಂಪನಿಗಳು- ಜಾಹೀರಾತುಗಳ ಮೂಲಕ. ‘ಬೆನ್ನುನೋವೇ? ನಮ್ಮ ಕಂಪನಿಯ ಬೆಡ್, ಕುರ್ಚಿ ಖರೀದಿಸಿ’, ‘ತಲೆನೋವೇ? ನಮ್ಮ ಕಂಪನಿಯ ಗುಳಿಗೆ, ಮುಲಾಮು ಖರೀದಿಸಿ’, ‘ಸುಂದರ ತ್ವಚೆಗೆ ಈ ಕ್ರೀಮ’, ‘ಶ್ರೀಮಂತರಾಗಬೇಕೇ ಈ ಜೂಜು, ಮ್ಯೂಚುವಲ್ ಫಂಡ್’, ‘ನೆಮ್ಮದಿಯ ಬದುಕು ಬೇಕೇ, ನಮ್ಮ ಇನ್ಸೂರೆ, ಅನಾರೋಗ್ಯ ವಿಮೆ’- ಹೀಗೆ ಸಾವಿರದೆಂಟು ಉತ್ಪನ್ನಗಳು.
ನಮಗೆ ಜೀವನದಲ್ಲಿ ಅದೆಷ್ಟು ಸಮಸ್ಯೆಯ ಸಾಧ್ಯತೆಯಿದೆಯೋ ಆದಷ್ಟಕ್ಕೂ ಏನೋ ಒಂದು ಖರೀದಿಸಿದರೆ ಪರಿಹಾರ ಎಂಬ ಪ್ರತಿಯೊಬ್ಬರ ಕಥೆ. ಪ್ರೇಮ ನಿವೇದನೆ, ಹುಡುಗಿ ಒಪ್ಪಲು ಟೂತ್‌ಪೇ ಪರಿಹಾರ! ಈ ಎ ಜಾಹೀರಾತುಗಳನ್ನು ಒಮ್ಮೆ ಸುಮ್ಮನೆ ಗಮನಿಸಿ ನೋಡಿ. ಉದಾಹರಣೆಗೆ ಯಾವುದೇ ಸೋಪಿನ ಜಾಹೀರಾತು.
ಸೋಪಿನ ಕೆಲಸ ಮೈಯನ್ನು ಸ್ವಚ್ಛವಾಗಿಸುವುದು, ಜಿಡ್ಡನ್ನು ಕರಗಿಸಿ ತೆಗೆಯುವುದು, ಅದು ಬಿಟ್ಟರೆ ಮೈ ಪರಿಮಳ ಹೊಂದುವಂತೆ ಮಾಡುವುದು. ಆದರೆ ಒಂದಾದರೂ ಜಾಹೀರಾತು ಇದಷ್ಟನ್ನೇ ನೇರ ಹೇಳುತ್ತದೆಯೇ? ‘ಈ ಸೋಪ್ ಬಳಸುವುದರಿಂದ ಸುಂದರ ತ್ವಚೆ, ಸುಂದರ ಕುಟುಂಬ, ಬದುಕಿನ ಯಶಸ್ಸು, ಮಳೆನೀರಿನಲ್ಲಿ ಸ್ನಾನದ ಅನುಭವ, ವಶೀಕರಣ’ ಹೀಗೆ ಅಂತ್ ಪಾರ್ ಹತ್ತದ ಏನೇ ನೋ ಸಾಧ್ಯತೆಗಳ ಬೊಗಳೆ ಕಥೆ. ಇನ್ನು ಕೆಲವು ವಸ್ತುಗಳನ್ನು ಹೊಂದುವುದೇ ಯಶಸ್ಸು ಎನ್ನುವ ಜಾಹೀರಾತುಗಳು.
ಜಾಹೀರಾತುಗಳೆಂದರೆ, ಸುಂದರ ಬದುಕು ಎಂದರೆ ಏನೆಂದು ಹೇಳುವ ಕಥೆಗಳು ಎಂದೆ ನಲ್ಲ, ಅವು ಕಥೆಗಳಾದದ್ದರಿಂದ ಏನು ಬೇಕಾದರೂ ಕಲ್ಪಿಸಿಕೊಳ್ಳಬಹುದು. ಉದಾಹರಣೆಗೆ ಯಾವುದೋ ಒಂದು ಕಾರಿನ ಅಥವಾ ಹೊಸ ಬೈಕ್‌ನ ಜಾಹೀರಾತನ್ನು ಗಮನಿಸಿ. ಆ ಕಾರು, ಅದು ಹೋಗುತ್ತಿರುವುದು ಟ್ರಾಫಿಕ್ಕೇ ಇಲ್ಲದ ರಸ್ತೆಯಲ್ಲಿ, ಕುಟುಂಬ ದವರೆಲ್ಲ ಒಟ್ಟಾಗಿ, ಒಳ್ಳೆಯ ಬಟ್ಟೆ ಧರಿಸಿ, ಖುಷಿಖುಷಿಯಾಗಿ ಎಲ್ಲಿಗೋ ಪ್ರಯಾಣಿಸುವ ಆಧುನಿಕ ಯಶಸ್ವಿ ಬದುಕಿನ ಕಥೆಯನ್ನೇ ಕಂಪನಿ ತನ್ನ ಜಾಹೀರಾತಿನಲ್ಲಿ ಕಟ್ಟಿಕೊಡುವುದು.
ಅವೆಲ್ಲವೂ ಕಲ್ಪನೆ ಎಂಬುದು ನಮಗೆ ಗೊತ್ತು. ನಾಳೆ ಅದೇ ಕಾರನ್ನು ಖರೀದಿಸಿ ಬೆಂಗಳೂ ರಿನ ರಸ್ತೆಗಿಳಿದರೆ ಜೀರೋ ಟ್ರಾಫಿಕ್ ಇಲ್ಲ, ಕಾರು ಹೊಸತೆಂದು ಮನೆಯವರೆಲ್ಲ ಅತ್ಯು ತ್ತಮ ನಡೆಯನ್ನೂ ಹೊಂದುವುದಿಲ್ಲ. ನಾನಿಲ್ಲಿ ಕೊಳ್ಳುಬಾಕತನದ ಬಗ್ಗೆ ಹೇಳುತ್ತಿಲ್ಲ. ನಮ್ಮ ಸುತ್ತಲೂ ನಿರ್ಮಾಣಗೊಂಡ, ನಾವು ನಂಬಿಕೊಂಡ ಸುಂದರ ಬದುಕೆಂಬ ನಿರೂಪಣೆಯ ಬಗ್ಗೆ, ಅದನ್ನು ನಿರ್ದೇಶಿಸುವ ಕಂಪನಿಗಳ ಬಗ್ಗೆ ಹೇಳುತ್ತಿದ್ದೇನೆ.
ಅವು ನಮ್ಮನ್ನು ನಂಬಿಸುವ ಕಥೆಗಳ ಬಗ್ಗೆ ಹೇಳುತ್ತಿದ್ದೇನೆ. ಇಲ್ಲಿ ಕಥೆ ಮಾತ್ರವಲ್ಲ, ಕಥೆಯ ಪಾತ್ರದಾರಿಗಳು, ಹೇಳುತ್ತಿರುವುದು ಯಾರು ಎಂಬುದೂ ಮುಖ್ಯವಾಗುತ್ತದೆ. ಅಲ್ಲದಿದ್ದರೆ ಗುಟ್ಕಾಕ್ಕೂ ಶಾರುಖ್ ಖಾನನ ಸಂತೋಷಕ್ಕೂ ಏನು ಸಂಬಂಧ? ದೀಪಿಕಾ ಪಡುಕೋಣೆಗೂ ಯಾವುದೋ ಕಾರ್ ಟೈರ್‌ಗೂ ಏನು ಸಂಬಂಧ? ಸಚಿನ್ ತೆಂಡೂಲ್ಕರ್‌ನ ಕ್ರಿಕೆಟ್ ಯಶಸ್ಸಿ ಗೂ ಮ್ಯೂಚುವಲ್ ಫಂಡ್‌ಗೂ ಎಲ್ಲಿಯ ಸಂಬಂಧ? ಗುಟ್ಕಾ ಜಾಹೀರಾತಿಗೆ ಕಾನ್ಸೂರಿನ ಎಲೆ ಅಡಕೆ ತಿನ್ನುವ ಹೆಗಡೆಯವರು ಬಂದರೆ, ಟೈರ್ ಜಾಹೀರಾತಿಗೆ ಸುಲ್ತಾನ್ ಪಾಳ್ಯದ ಪಂಚರ್ ಅಂಗಡಿಯಾತ ಬಂದರೆ, ಮ್ಯೂಚುವಲ್ ಫಂಡ್‌ಗೆ ಉಗಾಂಡಾದ ಆರ್ಥಿಕ ತಜ್ಞ ಬಂದು ಹೇಳಿದರೆ ಅದು ನಮ್ಮ ಗಮನ ಸೆಳೆಯುವುದಿಲ್ಲ.
ನಮಗೆ ಅಮಿತಾಭ್ ಬಂದು ‘ಇಂಥ ಚಪ್ಪಲಿ ಖರೀದಿಸಿ, ಕಾಲಿನ ಎಲ್ಲಾ ಸಮಸ್ಯೆ ಮಾಯ’ ಎಂದರೆ ಮಾತ್ರ ನಂಬಿಕೆ ಬರುತ್ತದೆ. ಬಚ್ಚನ್ ಇಂಥ ಅಗ್ಗದ ಚಪ್ಪಲಿ ಹಾಕುವುದಿಲ್ಲ ಎಂಬ ತರ್ಕವೇ ಅವಾಸ್ತವಿಕವೆನಿಸುತ್ತದೆ. ಸೂಕ್ಷ್ಮದಲ್ಲಿ, ಈ ಪ್ರಭಾವಿ ವ್ಯಕ್ತಿಗಳು ತಮ್ಮ ಮೇಲಿನ ಸಾಮಾಜಿಕ ವಿಶ್ವಾಸವನ್ನು ಈ ರೀತಿ ಆರ್ಥಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನೂ ಗಮನಿಸಬೇಕು.
ಅದೇನೇ ಇರಲಿ, ಕಥೆಯನ್ನು ಮುಖ ಪರಿಚಯದವರು, ಪ್ರಭಾವಿಗಳು ಹೇಳಿದರೆ ನೆನಪುಳಿ ಯುತ್ತದೆ, ಪರಿಣಾಮಕಾರಿ ಎಂಬುದು ಗಮನಾರ್ಹ. ಅವನ್ಯಾರೋ ಹೀರೋ ಏನೋ ಒಂದು ಜಾಹೀರಾತು ಮಾಡಿದರೆ ಅದರಿಂದೇನು ನಷ್ಟ? ಯಾವುದೋ ಒಂದು ಜಾಹೀರಾತು ನೋಡಿ ಏನೋ ಒಂದನ್ನು ಖರೀದಿಸಿದರೆ ದೇಶ ಮುಳುಗಿ ಹೋಗುವುದಿಲ್ಲ. ಹೌದು. ಆದರೆ ಜಾಹೀರಾತುಗಳು, ಅವು ಹೇಳುವ ಕಥೆಗಳು ಅಷ್ಟಕ್ಕೇ ನಿಲ್ಲುವುದಿಲ್ಲ.
ಜಾಹೀರಾತುಗಳು, ಕಂಪನಿಗಳು ಕಾಲ ಕಳೆದಂತೆ ನಮ್ಮ ಖುಷಿಯ ವ್ಯಾಖ್ಯಾನವನ್ನು ಬದಲಿಸುತ್ತಿವೆ. ಈಗ ಬೇಸಿಗೆಯಲ್ಲವೇ- ಅದೆಷ್ಟೋ ತಂಪು ಪಾನೀಯ, ಕೋಲಾ ಮೊದ ಲಾದವುಗಳ ಜಾಹೀರಾತು ಹೆಚ್ಚು. ಅವೆಲ್ಲವೂ ಏನು? ಅಸಲಿಗೆ ಸಕ್ಕರೆ, ನೀರು, ಒಂದಿಷ್ಟು ರಾಸಾಯನಿಕಗಳು ಮತ್ತು ಇಂಗಾಲದ ಡೈ ಆಕ್ಸೈಡ್. ಅವನ್ನು ಕುಡಿದರೆ ಬಾಯಾರಿಕೆ ಆರುವುದು ಖಂಡಿತ. ಅವು ಯಾವುದೇ ಎಳನೀರು, ಮಜ್ಜಿಗೆಗಿಂತ ರುಚಿಯೆನಿಸುವುದಂತೂ ಹೌದು.
ಆದರೆ ಆರೋಗ್ಯಕ್ಕೆ? ‘ಡರ್ ಕೆ ಆಗೇ ಜೀತ್ ಹೈ, ಥಂಡಾ ಮತ್ಲಬ..’ ಹೀಗೆ ಬುದ್ಧಿವಂತಿಕೆ, ಧೈರ್ಯ, ವಿಶ್ವಾಸ ಇವೆಲ್ಲ ಸಕ್ಕರೆ ನೀರಿನಿಂದ ಬರುವುದಾದರೂ ಹೇಗೆ? ಬರುವುದಿದ್ದರೆ ಡಯಾಬಿಟಿಸ್, ಬೊಜ್ಜು, ಬಿಪಿ ಬರಬಹುದು. ಇಲ್ಲಿ ಜಾಹೀರಾತಿನ ಕಥೆ ಶುದ್ಧ ಸುಳ್ಳು. ಮಜವೇನೆಂದರೆ ಅದು ಸುಳ್ಳು ಎಂಬುದು ನಮಗೆಲ್ಲರಿಗೂ, ಪ್ರತಿ ಗ್ರಾಹಕನಿಗೂ ಗೊತ್ತು. ಆದರೆ ಅಂಥ ಕಥೆಗಳ ಪರಿಣಾಮ ಆ ಅರಿವನ್ನು ಮೀರಿ ನಡೆಯುವಂತೆ ಮಾಡುತ್ತದೆ. ಕಥೆಗಳೇ ಹಾಗಲ್ಲವೇ- ಕಥೆ ಹೇಗೇ ಇರಲಿ, ಅದು ಸುಳ್ಳೇ ಇರಲಿ, ಸುಳ್ಳೆಂದು ನಮಗೂ ಗೊತ್ತಿರಲಿ, ಆದರೂ ಅವು ನೆನಪಿನ ಮೂಲೆಯ ಬಹುಕಾಲ ಕೂರಬಲ್ಲವು.
ಅಷ್ಟೇ ಅಲ್ಲ, ನಮ್ಮ ನಿತ್ಯ ವ್ಯವಹಾರವನ್ನು ನಿರ್ದೇಶಿಸಬಲ್ಲವು. ಬಾಯಾರಿಕೆಯಾದಾಗ ತಿಳಿದೂ ಕೋಲಾ ಖರೀದಿಸಿ ತೇಗುವುದೇ ಸುಖ ಎಂದೆನಿಸಿ ಕ್ರಮೇಣ ಒಂದು ಅಭ್ಯಾಸವನ್ನು ಹುಟ್ಟುಹಾಕಬಲ್ಲವು. ಇಲ್ಲಿ ಕೋಲಾ, ಸೋಪು ಇತ್ಯಾದಿ ಕೇವಲ ಉದಾಹರಣೆ.
ಸಂತೋಷಕ್ಕೂ, ಸುಂದರ ಬದುಕಿಗೂ, ಸಾಫಲ್ಯಭಾವಕ್ಕೂ- ಖರೀದಿಗೂ, ಹೆಚ್ಚೆಚ್ಚು ವಸ್ತು ಗಳನ್ನು ಹೊಂದುವುದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಬುದ್ಧನಿಂದ ಸಿದ್ಧನವರೆಗೆ ಎಲ್ಲರೂ ಹೇಳಿದ್ದಾರೆ. ಅದು ನಮ್ಮೆಲ್ಲರದೂ ಅನುಭವ. ಸಾಧ್ಯ ವಿಲ್ಲದ್ದನ್ನು, ನೀಕಿದರೆ ಕೈಗೆ ಸಿಗುವುದನ್ನು ಬಯಸುವುದು, ಪಡೆಯುವುದು ಮನುಷ್ಯ ಸಹಜ ಗುಣ.
ಅದು ಸಾಧು. ನಮಗೇನು ಬೇಕು, ನಮ್ಮ ಅವಶ್ಯಕ ವಸ್ತುಗಳು ಏನು ಇವೆಲ್ಲವೂ ವೈಯಕ್ತಿಕ ಮತ್ತು ಮಹತ್ವದ ವಿಷಯ. ಸುಲಭದ ಬದುಕಿಗೆ ಅವನ್ನು ಪೂರೈಸಿಕೊಳ್ಳಬೇಕು. ಆಸೆ ದುಃ ಖಕ್ಕೆ ಮೂಲವಿರಬಹುದು, ಆದರೆ ಆಸೆಯಿಲ್ಲದೆ ಏಳ್ಗೆಯಿಲ್ಲ. ಯಾವುದಕ್ಕೂ ಆಸೆ ಬೇಕೇ ಬೇಕು. ಒಳ್ಳೆಯ ವಾಹನ, ಮನೆ ಇವೆಲ್ಲದರ ಮೇಲೆ ಆಸೆ ಇರಲೇಬೇಕು. ಎಲ್ಲರೂ ಸನ್ಯಾಸಿ ಯಾದರೆ ಜಗತ್ತು ಬಾಳುವುದಿಲ್ಲ. ಆದರೆ ನಮ್ಮ ಆಸೆ ನಮ್ಮದೇ ಆಗಿರಬೇಕು.
ಸಂತೋಷವೆಂದರೆ ಏನೆಂಬ ನಿರೂಪಣೆ ಸೋಷಿಯಲ್ ಮೀಡಿಯಾ, ಯುಟ್ಯೂಬ್, ಜಾಹೀರಾತುಗಳು ಕಲ್ಪಿಸಿದ ನಿರೂಪಣೆಗಳಾಗಬಾರದು. ಆದರೇನಾಗುತ್ತದೆ? ಬದುಕಿನಂದು ಕೊರತೆಯ ಭಾವ ನಿರಂತರ ಜಾಗೃತವಾಗಿರುತ್ತದೆ. ಅದರಿಂದ ಬದುಕು ನಿರಂತರ ಅಪೂರ್ಣವೆನಿಸುತ್ತಿರುತ್ತದೆ. ಬದುಕು ನಮ್ಮದು, ನಿರೂಪಣೆ ಅದ್ಯಾವುದೋ ಕಂಪನಿಯ ಜಾಹೀರಾತಿನ ಮುಖ್ಯಸ್ಥನದು. ಅದು ಹೇಗೆ ಹೊಂದಾಣಿಕೆಯಾದೀತು?