ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಬಿಳಿಚರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಕಳೆದ ಅಧ್ಯಯನ

ಮುರ್ರೆ ದ್ವೀಪದಲ್ಲಿದ್ದ ಪಾಲಿನೇಷಿಯನ್ನರ ಬಣ್ಣವನ್ನು ತಿಳಿಯುವ ಸಾಮರ್ಥ್ಯದ ಪ್ರಯೋಗವನ್ನು ಮಾಡಿದರು. ವಿಲಿಯಮ್ ಹಾಲ್ಸ್ ರಿವರ್ಸ್, ಸೂಕ್ಷ್ಮ ವರ್ಣವೈವಿಧ್ಯಗಳಿದ್ದ ನೀಲಿ ಮತ್ತು ಹಸಿರು ಬಣ್ಣಗಳ ಉಣ್ಣೆಯ ದಾರವನ್ನು ದ್ವೀಪವಾಸಿಗಳಿಗೆ ನೀಡಿದ. ಅವರು ಯುರೋಪಿಯನ್ನರಿಗಿಂತಲೂ ಹೆಚ್ಚು ನಿಖರವಾಗಿ ವಿವಿಧ ಬಣ್ಣಗಳ ಸೂಕ್ಷ್ಮ ಛಾಯಾ ವ್ಯತ್ಯಾಸಗಳನ್ನು ಗುರುತಿಸಿದರು.

ಬಿಳಿಚರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಕಳೆದ ಅಧ್ಯಯನ

ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನಿಯಾಗಿದ್ದ ಆಲ್-ಡ್ ಕಾರ್ಟ್ ಹೇಡನ್, ಮಾನವ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದ್ದ. ಇವನು ಟಾರೆಸ್ ಜಲಸಂಧಿಯ ದ್ವೀಪಗಳಿಗೆ ಭೇಟಿ ನೀಡಿ, ಅವರ ಸಂಸ್ಕೃತಿಯ ಬಗ್ಗೆ ಕುತೂಹಲ ತಳೆದು, ಅವರ ಕ್ರಮಬದ್ಧ ಅಧ್ಯಯನಕ್ಕೆ ಮಹಾ ಮೇಧಾವಿಗಳ ತಂಡವನ್ನು ಸಿದ್ಧಪಡಿಸಿದ್ದ.

ಮಾನವ ಜನಾಂಗವನ್ನು ಅವರ ಚರ್ಮದ ಬಣ್ಣವನ್ನಾಧರಿಸಿ ವರ್ಗೀಕರಿಸುವ ಮೊದಲ ಪ್ರಯತ್ನವನ್ನು 15-17 ನೆಯ ಶತಮಾನದ ಯುರೋಪಿಯನ್ ಜನಾಂಗದವರು ಮಾಡಿದರು. ಪ್ರಾಚೀನ ಮೆಸೊಪೊಟೋಮಿಯನ್, ಈಜಿಪ್ಷಿಯನ್, ಇಂಡಿಯನ್, ಗ್ರೀಸ್ ಅಥವಾ ರೋಮ್ ಸಾಮ್ರಾಜ್ಯಗಳಲ್ಲಿ ಚರ್ಮದ ಬಣ್ಣವನ್ನು ಪರಿಗಣಿಸಿ ಉಚ್ಚ-ನೀಚ ಎನ್ನುವ ಪರಿಪಾಠವಿರಲಿಲ್ಲ. ಮಧ್ಯಯುಗದಲ್ಲೂ ಇರಲಿಲ್ಲ.

ಯುರೋಪಿಯನ್ ಸಾಹಸಿಗಳು ವ್ಯಾಪಾರಕ್ಕೆಂದು ಹಡಗುಗಳಲ್ಲಿ ಜಗತ್ತಿನ ಎಲ್ಲ ದೇಶಗಳಿಗೆ ಭೇಟಿ ನೀಡಿದಾಗ, ತಮ್ಮ ಬಿಳಿಯ ಚರ್ಮದ ಬಗ್ಗೆ ಅವರಿಗೆ ಹೆಮ್ಮೆಯೆನಿಸಿತು. ಜೊಹಾನ್ ಫ್ರೆಡ್ರಿಕ್ ಬ್ಲೂಮೆನ್ ಬ್ಯಾಕ್ ಎಂಬ ಜರ್ಮನ್ ವಿದ್ವಾಂಸನು 1779ರಲ್ಲಿ ಮಾನವ ಜನಾಂಗವನ್ನು ಕಕೇಶಿಯನ್ಸ್ (ಬಿಳಿ ಚರ್ಮ) ಮಂಗೋಲಿಯನ್ಸ್ (ಹಳದಿ ಚರ್ಮ) ಮಲಯನ್ಸ್ (ಕಂದು ಚರ್ಮ) ಇಥಿಯೋಪಿಯನ್ಸ್ (ಕಪ್ಪು ಚರ್ಮ) ಹಾಗೂ ಅಮೆರಿಕನ್ಸ್/ರೆಡಿ ಇಂಡಿಯನ್ಸ್ (ಕೆಂಪು ಚರ್ಮ) ಎಂದು ವರ್ಗೀಕರಿಸಿದ.

ವಿಶ್ವದ ಎರಡನೆಯ ಮಹಾಯುದ್ಧವು ನಡೆದ ಮೇಲೆ ತಳಿವಿಜ್ಞಾನ ಹಾಗೂ ಮಾನವ ವಿಜ್ಞಾನ ಕ್ಷೇತ್ರಗಳಲ್ಲಿ ಗಣನೀಯ ಸಂಶೋಧನೆಗಳು ನಡೆದು, ಈ ಭೂಮಿಯ ಮೇಲೆ ಎಲ್ಲ ಮನುಷ್ಯರ ಡಿಎನ್‌ಎ ಶೇ.99.9ರಷ್ಟು ಏಕರೂಪವಾಗಿರುತ್ತದೆ ಎಂಬ ಸತ್ಯವನ್ನು ಹೊರಗೆಡವಿತು. 19ನೆಯ ಶತಮಾನದಲ್ಲಿ, ಬಿಳಿ ಚರ್ಮದವರೇ ಸರ್ವಶ್ರೇಷ್ಠ ಎಂಬ ನಂಬಿಕೆಯು ಜೀವಂತವಾಗಿದ್ದ ದಿನಗಳಲ್ಲಿ ನಡೆದ ಒಂದು ಮಾನವ ವಿಜ್ಞಾನದ ಕ್ಷೇತ್ರ ಅಧ್ಯಯನವು ‘ಮಾನವ ಜಾತಿ ತಾನೊಂದೇ ವಲಂ’ ಎಂಬ ಪಂಪನ ಮಾತಿಗೆ ಪುರಾವೆಯನ್ನು ಒದಗಿಸಿತು.

ಇದನ್ನೂ ಓದಿ: Dr N Someswara Column: ಭೂಲೋಕದ ದೇವತೆಗಳೋ, ಯಮನ ಸೋದರರೋ ?

ಟಾರೆಸ್ ಜಲಸಂಧಿಯು ಆಸ್ಟ್ರೇಲಿಯಾದ ಕೇಪ್ ಯಾರ್ಕ್ ಪರ್ಯಾಯ ದ್ವೀಪ ಹಾಗೂ ಪಪುವ ನ್ಯೂಗಿನಿ ಪ್ರದೇಶಗಳ ನಡುವೆ ಇರುವ ಕಿರಿದಾದ ಆದರೆ ನೀಳವಾದ ಸಮುದ್ರ. ಈ ಸಮುದ್ರದಲ್ಲಿ 274 ಸಣ್ಣ ಪುಟ್ಟ ದ್ವೀಪಗಳಿವೆ. ಇವುಗಳಲ್ಲಿ ದೊಡ್ಡದಾದ 17-18 ದ್ವೀಪಗಳಲ್ಲಿ ಮಾತ್ರ ಜನವಸತಿ ಯಿದ್ದು, ಸುಮಾರು 150 ಕಿ.ಮೀ. ವ್ಯಾಪ್ತಿಯ ಸಮುದ್ರದಲ್ಲಿ ಹರಡಿವೆ.

ಇಂದು ಆಡಳಿತಾತ್ಮಕವಾಗಿ ನೈಋತ್ಯ ಶಾಂತ ಮಹಾಸಾಗರದ ದ್ವೀಪಗಳಲ್ಲಿ ವಾಸಿಸುತ್ತಿರುವ ಜನರನ್ನು ವಿಶಾಲವಾಗಿ ‘ಓಷಿಯನ್ಸ್’ ಎಂದು ಕರೆಯುವುದುಂಟು. ಇವರಲ್ಲಿ ಮೆಲನೇಷಿಯನ್ಸ್, ಮೈಕ್ರೋನೇಷಿಯನ್ಸ್ ಹಾಗೂ ಪಾಲಿನೇಷಿಯನ್ಸ್ ಮುಖ್ಯರಾದವರು. ಮೆಲನೇಷಿಯ ಎನ್ನುವುದು ಗ್ರೀಕ್ ಶಬ್ದ. ‘ಮೆಲಾಸ್’ ಎಂದರೆ ಕಪ್ಪು. ‘ನೆಸೋಯಿ’ ಎಂದರೆ ದ್ವೀಪಗಳು.

‘ಕಪ್ಪು ದ್ವೀಪಗಳು’ ಎಂಬ ಅರ್ಥವನ್ನು ಹೊಮ್ಮಿಸುತ್ತವೆ. ಆದರೆ ನಾವು ಅದನ್ನು ‘ಕಪ್ಪು ಜನರು ವಾಸಿಸುವ ದ್ವೀಪಗಳು’ ಎಂದು ಅರ್ಥೈಸಬೇಕಾಗುತ್ತದೆ. ಇಂದಿಗೆ ಸುಮಾರು 70000-60000 ವರ್ಷ ಗಳ ಹಿಂದೆ, ಪೂರ್ವ ಆಫ್ರಿಕದಿಂದ ಹೊರಟ ‘ಮಾನವ ಜನಾಂಗದ ಮೊದಲ ಮಹಾವಲಸೆ’ಯ ಜನರು ಅರೇಬಿಯ, ಭಾರತ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಗ್ನೇಯ ಏಷ್ಯಾದ ಮೂಲಕ ಮೆಲನೇಷಿಯವನ್ನು ತಲುಪಿ, ಕೊನೆಗೆ ಆಸ್ಟ್ರೇಲಿಯಾದಲ್ಲಿ ಬೀಡುಬಿಟ್ಟರು.

Screenshot_1 R

ಹಾಗಾಗಿ ಟಾರಸ್ ಜಲಸಂಧಿಯ ದ್ವೀಪಗಳಲ್ಲಿ ವಾಸಿಸುವ ಮೆಲನೇಷಿಯನ್ನರು ಜಗತ್ತಿನ ಅತ್ಯಂತ ಪುರಾತನ ಬುಡಕಟ್ಟುಗಳಲ್ಲಿ ಒಬ್ಬರು ಆಗಿದ್ದಾರೆ. 19ನೆಯ ಶತಮಾನದ ಆದಿಭಾಗ. ಯುರೋಪಿ ಯನ್ನರಿಗೆ ಯೂರೋಪನ್ನು ಬಿಟ್ಟು, ಜಗತ್ತಿನ ಇತರ ಪ್ರದೇಶಗಳಲ್ಲಿ ವಾಸ ಮಾಡುವ ಜನರ ಬಗ್ಗೆ ಅಂಥ ತಿಳಿವಳಿಕೆ ಏನೂ ಇರಲಿಲ್ಲ.

ವಸಾಹತುಶಾಹಿ ಆಡಳಿತಗಾರರು ಹಾಗೂ ಕ್ರೈಸ್ತ ಮತಪ್ರಚಾರಕರು ಹೇಳುವ ವಿಚಾರಗಳನ್ನೇ ‘ಪರಮಸತ್ಯ’ ಎಂದು ಭಾವಿಸಿದ್ದರು. ಆದರೆ ವಿಜ್ಞಾನಿಗಳಿಗೆ ಇವರು ನೀಡಿದ ಉತ್ಪ್ರೇಕ್ಷಿತ ವರದಿಗಳ ಬಗ್ಗೆ ನಂಬಿಕೆ ಇರಲಿಲ್ಲ. ಹಾಗಾಗಿ ಸ್ವತಃ ತಾವೇ ಕ್ಷೇತ್ರಾಧ್ಯಯನವನ್ನು ಮಾಡಿ ವಾಸ್ತವವನ್ನು ಅರಿ ಯಬೇಕು ಎಂದರು. ಕೇಂಬ್ರಿಜ್ ವಿಶ್ವವಿದ್ಯಾಲಯವು ‘ಟಾರೆಸ್ ಜಲಸಂಧಿಯ ಕೇಂಬ್ರಿಜ್ ಮಾನವ ಶಾಸ್ತ್ರೀಯ ಕ್ಷೇತ್ರಯಾನ’ವನ್ನು ನಡೆಸಲು ಸಿದ್ಧತೆಗಳನ್ನು ನಡೆಸಿತು.

ಇದೊಂದು ಬಹುಮುಖಿ-ಅಧ್ಯಯನದ ಯಾನವಾಗಿತ್ತು. ಈ ಕ್ಷೇತ್ರಯಾನದಲ್ಲಿ ಟಾರೆಸ್ ಜಲಸಂಧಿ ಯ ದ್ವೀಪಗಳಲ್ಲಿ ವಾಸವಾಗಿರುವ ಮೆಲನೇಷಿಯನ್ನರ ಮಾನವ ವಿಜ್ಞಾನ ಅಥವಾ ಆಂಥ್ರೋ ಪಾಲಜಿ, ಮನೋವಿಜ್ಞಾನ ಅಥವಾ ಸೈಕಾಲಜಿ, ಜನಾಂಗೀಯ ವಿಜ್ಞಾನ ಅಥವಾ ಎಥ್ನೋಗ್ರಫಿ ಹಾಗೂ ಸಂಶೋಧನೆಯಲ್ಲಿ ನೈತಿಕ ಇತಿಮಿತಿಗಳನ್ನು ಕುರಿತು ಅಧ್ಯಯನ ಮಾಡುವ ಯೋಜನೆ ಯನ್ನು ಹಾಕಿಕೊಂಡಿತ್ತು.

ಆದರೆ ಈ ಯೋಜನೆಗೆ ಅನುಮತಿಯನ್ನು ನೀಡಿದ ಆಳರಸರಲ್ಲಿ ‘ಈ ಯುರೋಪಿಯನ್ನೇತರ ಕಾಡುಜನರನ್ನು ಅಧ್ಯಯನ ಮಾಡಿ, ಇವರು ಎಲ್ಲ ವಿಚಾರಗಳಲ್ಲಿ ತಮಗಿಂತಲೂ ಕೀಳು’ ಎನ್ನುವು ದನ್ನು ನಿರೂಪಿಸುವ ಒಳಹುನ್ನಾರವಿತ್ತು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನಿ ಯಾಗಿದ್ದ ಆಲ್ ಫ್ರೆಡ್ ಕಾರ್ಟ್ ಹೇಡನ್ (1855-1940) ಮಾನವ ವಿಜ್ಞಾನದಲ್ಲಿ ಆಸಕ್ತಿಯನ್ನು ತಳೆದು, ವಿಶೇಷ ಅಧ್ಯಯನವನ್ನು ನಡೆಸಿ ತಜ್ಞನೆನಿಸಿಕೊಂಡಿದ್ದ. ಇವನು 1888ರಲ್ಲಿ ಟಾರೆಸ್ ಜಲಸಂಧಿಯ ದ್ವೀಪಗಳಿಗೆ ಭೇಟಿಯನ್ನು ನೀಡಿದ್ದ.

ಅವರ ಸಂಸ್ಕೃತಿಯ ಬಗ್ಗೆ ಅಪಾರ ಕುತೂಹಲವನ್ನು ತಳೆದು, ಅವರನ್ನು ಕ್ರಮಬದ್ಧವಾಗಿ ಅಧ್ಯಯನವನ್ನು ಮಾಡಬೇಕೆನ್ನುವ ಮಹದಾಸೆಯಿಂದ ಮಹಾ ಮೇಧಾವಿಗಳ ತಂಡವನ್ನು ಸಿದ್ಧಪಡಿಸಿದ್ದ.

೧. ವಿಲಿಯಮ್ ಹಾಲ್ಸ್ ರಿವರ್ಸ್ (1868-1922) ಒಬ್ಬ ವೈದ್ಯ ಹಾಗೂ ಪ್ರಾಯೋಗಿಕ ಮನೋ ವಿಜ್ಞಾನಿಯಾಗಿದ್ದ.

೨. ಚಾರ್ಲ್ಸ್ ಗೇಬ್ರಿಯಲ್ ಸೆಲಿಗ್ಮನ್ (1873-1940) ಒಬ್ಬ ರೋಗವಿಜ್ಞಾನಿ ಹಾಗೂ ಜನಾಂಗ ವಿಜ್ಞಾನಿಯಾಗಿದ್ದ. ಇವನು ಭವಿಷ್ಯದಲ್ಲಿ ಬಹು ಚರ್ಚೆಗೆ ಎಡೆಮಾಡಿಕೊಟ್ಟ ಜನಾಂಗೀಯ ಸಿದ್ಧಾಂತಗಳನ್ನು ಮಂಡಿಸಿದವನು.

೩. ಚಾರ್ಲ್ಸ್ ಸ್ಯಾಮ್ಯುಯಲ್ ಮೇಯರ್ಸ್ (1873-1946) ಓರ್ವ ವೈದ್ಯನಾಗಿದ್ದ. ಜತೆಗೆ ಮನೋ ವಿಜ್ಞಾನ ಹಾಗೂ ಸಂಗೀತದಲ್ಲಿ ಅಪಾರ ಪರಿಣತಿಯನ್ನು ಪಡೆದಿದ್ದ.

೪. ಸಿಡ್ನಿ ಹರ್ಬರ್ಟ್ ರೇ (1858-1939) ಅಧ್ಯಾಪಕನಾಗಿದ್ದ ಹಾಗೂ ಮೆಲನೇಷಿಯನ್ ಭಾಷೆಗಳನ್ನು ಬಲ್ಲ ಭಾಷಾತಜ್ಞನಾಗಿದ್ದ.

೫. ವಿಲಿಯಂ ಮ್ಯಾಕ್ ಡೌಗಾಲ್ (1871-1938) ವೈದ್ಯನೂ, ಮನೋವಿಜ್ಞಾನಿಯೂ ಆಗಿದ್ದ.

೬. ಆಂಥೋನಿ ವಿಲ್ಕಿನ್ಸ್ (1877-1901) ತಂಡದಲ್ಲಿ ಅತ್ಯಂತ ಚಿಕ್ಕವಯಸ್ಸಿನವನಾಗಿದದು, ಪದವೀಧರನಾಗಿದ್ದ ಹಾಗೂ ಛಾಯಾಗ್ರಹಣದಲ್ಲಿ ಪರಿಣತಿಯನ್ನು ಪಡೆದಿದ್ದ. ಯುರೋಪಿಯನ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗೆ ಹಲವು ತಜ್ಞರಿಂದ ಕೂಡಿದ್ದ ತಂಡವು ಟಾರೆಸ್ ಜಲಸಂಧಿ ಯ ದ್ವೀಪಗಳಲ್ಲಿದ್ದ ಮೆಲನೇಷಿಯನ್ನರ ಸಮಗ್ರ ಅಧ್ಯಯನಕ್ಕೆ ಹೊರಟಿತ್ತು. ಈ ತಂಡದ ಪ್ರಾಥಮಿಕ ಆಸಕ್ತಿಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.

ಸ್ಥಳೀಯ ಸಂಸ್ಕೃತಿಯ ದಾಖಲೀಕರಣ: ಅವರ ಪುರಾಣಗಳನ್ನು, ಧರ್ಮಾಚರಣೆಗಳನ್ನು, ಸಾಮಾಜಿಕ ರಚನೆಯನ್ನು ಹಾಗೂ ದೈನಂದಿನ ಜೀವನಶೈಲಿಯನ್ನು ಕ್ರಮಬದ್ಧವಾಗಿ ದಾಖಲಿಸು ವುದು.

ಮನೋವ್ಯಾಪಾರಗಳಲ್ಲಿ ವಿಭಿನ್ನತೆ: ಯುರೋಪಿಯನ್ನರ ಹಾಗೂ ಮೆಲನೇಷಿಯನ್ನರ ಅರಿವಿನ ಪ್ರಕ್ರಿಯೆಗಳಲ್ಲಿ (ಕಾಗ್ನಿಟಿವ್ ಪ್ರೋಸೆಸಸ್) ಇರಬಹುದಾದ ವ್ಯತ್ಯಾಸಗಳನ್ನು ಗುರುತಿಸುವುದು. ಭಾಷಾ ವೈಶಿಷ್ಟ್ಯಗಳ ಸಂಗ್ರಹ: ಸ್ಥಳೀಯ ಭಾಷೆಗಳ ವಿನ್ಯಾಸ ಹಾಗೂ ಪದಸಂಪತ್ತನ್ನು ಕ್ರಮ ಬದ್ಧವಾಗಿ ಸಂಗ್ರಹಿಸುವುದು.

ಮಾನವಶಾಸ್ತ್ರೀಯ ಅಳತೆಗಳನ್ನು ಗುರುತಿಸುವುದು: ಮೆಲನೇಷಿಯನ್ನರ ದೇಹದ ವಿವಿಧ ಅಂಶಗಳನ್ನು ಅಳೆಯುವುದು. ಉದಾಹರಣೆಗೆ ಅವರು ಎಷ್ಟು ಎತ್ತರವಿದ್ದಾರೆ, ಅವರ ತಲೆಯು ಎಷ್ಟು ಉದ್ದವಿದೆ, ಎಷ್ಟು ಅಗಲವಿದೆ, ದೇಹ ರಚನೆ ಹೇಗಿದೆ ಇತ್ಯಾದಿ. ಆರೋಗ್ಯ ಮತ್ತು ರೋಗರು ಜಿನಗಳು: ಮೆಲನೇಷಿಯನ್ನರ ಒಟ್ಟಾರೆ ಆರೋಗ್ಯ ಹಾಗೂ ಅವರಿಗೆ ಇರಬಹುದಾದ ರೋಗರುಜಿನ ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು.

ಈ ಅಧ್ಯಯನವು ಮಾನವನ ಇತಿಹಾಸದಲ್ಲಿ ಮೊದಲ ಬಾರಿಗೆ ಅನೇಕ ದಾಖಲೆಗಳನ್ನು ಮಾಡಿತು. ಅದುವರೆಗೂ ಜನಾಂಗೀಯ ಅಧ್ಯಯನವೆಂದರೆ ಅವರು ಇವರು ಹೇಳಿದ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದಾಗಿತ್ತು. ಈಗ ಮೊದಲ ಬಾರಿಗೆ ತಜ್ಞರು ಜನಾಂಗೀಯ ಕ್ಷೇತ್ರಾಧ್ಯಯನವನ್ನು (ಫೀಲ್ಡ್ ವರ್ಕ್ ಎಥ್ನೋಗ್ರಫಿ) ಕೈಗೊಂಡಿದ್ದರು. ವಿಜ್ಞಾನಿಗಳು ತಾವೇ ಕಣ್ಣಿಂದ ನೋಡಿದ್ದನ್ನ ಹಾಗೂ ನೇರವಾದ ಮಾತುಕತೆಯಿಂದ ವಿಚಾರಗಳನ್ನು ಸಂಗ್ರಹಿಸಿದ್ದರು. ಮಾನವ ಪ್ರಾಯೋಗಿಕ ಕ್ಷೇತ್ರ ಮನೋವಿಜ್ಞಾನದ ಅಧ್ಯಯನಗಳು (ಎಕ್ಸ್‌ಪೆರಿಮೆಂಟಲ್ ಸೈಕಾಲಜಿ ಇನ್ ದಿ ಫೀಲ್ಡ್) ಯುರೋಪಿಯನ್ನರ ಮೇಲರಿಮೆಗೆ ಬಲವಾದ ಪೆಟ್ಟನ್ನು ನೀಡಿದವು. ಅವರು ಮೆಲನೇಷಿಯನ್ನರ ವೀಕ್ಷಣಾ ಸಾಮರ್ಥ್ಯ, ಬಣ್ಣಗಳನ್ನು ತಿಳಿಯುವ ಸಾಮರ್ಥ್ಯ, ಕ್ರಿಯೆಗೆ ಪ್ರತಿಕ್ರಿಯೆಯನ್ನು ನೀಡುವ ಸಾಮರ್ಥ್ಯ, ನೆನಪಿನ ಶಕ್ತಿ ಇತ್ಯಾದಿಗಳನ್ನು ಅಧ್ಯಯನದ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡಿ ದ್ದರು.

ಮುರ್ರೆ ದ್ವೀಪದಲ್ಲಿದ್ದ ಪಾಲಿನೇಷಿಯನ್ನರ ಬಣ್ಣವನ್ನು ತಿಳಿಯುವ ಸಾಮರ್ಥ್ಯದ ಪ್ರಯೋಗವನ್ನು ಮಾಡಿದರು. ವಿಲಿಯಮ್ ಹಾಲ್ಸ್ ರಿವರ್ಸ್, ಸೂಕ್ಷ್ಮ ವರ್ಣವೈವಿಧ್ಯಗಳಿದ್ದ ನೀಲಿ ಮತ್ತು ಹಸಿರು ಬಣ್ಣಗಳ ಉಣ್ಣೆಯ ದಾರವನ್ನು ದ್ವೀಪವಾಸಿಗಳಿಗೆ ನೀಡಿದ. ಅವರು ಯುರೋಪಿಯನ್ನರಿಗಿಂತಲೂ ಹೆಚ್ಚು ನಿಖರವಾಗಿ ವಿವಿಧ ಬಣ್ಣಗಳ ಸೂಕ್ಷ್ಮ ಛಾಯಾ ವ್ಯತ್ಯಾಸಗಳನ್ನು ಗುರುತಿಸಿದರು.

ಅವರು ಹುಟ್ಟಿನಿಂದ ಸಮುದ್ರದ ನೀಲಿ ಹಾಗೂ ಕಾಡಿನ ಹಸಿರಿನ ಸೂಕ್ಷ್ಮಗಳನ್ನು ನೋಡುತ್ತಾ ಬೆಳೆದವರು. ಹಾಗಾಗಿ ಅವರ ಬಣ್ಣ ತಿಳಿಯುವ ಸಾಮರ್ಥ್ಯವು ಸಹಜವಾಗಿಯೇ ಉತ್ತಮವಾಗಿತ್ತು. ಆಂಥೋನಿ ವಿಲ್ಕಿನ್ಸ್, ಮೊದಲ ಬಾರಿಗೆ ಪಾಲಿನೇಷಿಯನ್ನರ ಚಿತ್ರಗಳನ್ನು ಸೆರೆ ಹಿಡಿದಿದ್ದನು. ಪಾಲಿನೇಷಿಯನ್ನರು ತಮ್ಮದೇ ಧಾರ್ಮಿಕ ನೃತ್ಯಗಳನ್ನು ಹಾಗೂ ಆಚರಣೆಗಳನ್ನು ನಡೆಸುತ್ತಿದ್ದರು. ಆತ ಹೆಂಗಸರನ್ನು ದೂರವಿಟ್ಟು, ಗಂಡಸರು ಮಾತ್ರ ಭಾಗವಹಿಸಿದ ನೃತ್ಯವನ್ನು ಚಿತ್ರೀಕರಿಸಿದ.

ನಂತರ ಅದನ್ನು ಬೃಹತ್ ಪರದೆಯ ಮೇಲೆ ತೋರಿಸಿದ. ಅವರು ಭಯಾಶ್ಚರ್ಯದಿಂದ ತಮ್ಮನ್ನು ತಾವೇ ಬೃಹತ್ ಪರದೆಯ ಮೇಲೆ ನೋಡಿದರು. ಆಗ ಹಿರಿಯನೊಬ್ಬ ‘ಇವರು ತಮ್ಮ ಆತ್ಮಗಳನ್ನು ಸೆರೆಹಿಡಿದು ತೋರಿಸುತ್ತಿದ್ದಾರೆ’ ಎಂದು ಕ್ಯಾತೆ ತೆಗೆದ. ಆಗ ವಿಲ್ಕಿನ್ಸ್ ಆತ್ಮಗಳನ್ನು ಸೆರೆಹಿಡಿಯಲು ಸಾಧ್ಯವಿಲ್ಲವೆಂದು ಬಹಳ ಕಷ್ಟಪಟ್ಟು ಅವರಿಗೆ ಮನದಟ್ಟು ಮಾಡಿಕೊಟ್ಟ.

ವಿಜ್ಞಾನಿಗಳಿಗೆ ಮೆಲನೇಷಿಯನ್ನರ ವಿವಿಧ ಬುಡಕಟ್ಟುಗಳಲ್ಲಿ ಇದ್ದ ವಿಧಿ ನಿಷೇಧಗಳನ್ನು ಹಾಗೂ ಕುಲಲಾಂಛನಗಳ (ಟೋಟೆಮ್) ಬಗ್ಗೆ ತಿಳಿಯುವ ಕುತೂಹಲವಿತ್ತು. ಮೆಲನೇಷಿಯನ್ನರು ಇಡೀ ಪ್ರಕೃತಿಯನ್ನು ಒಂದು ಕುಟುಂಬದಂತೆ ಕಾಣುತ್ತಿದ್ದರು. ಆ ಪ್ರಕೃತಿಯಲ್ಲಿರುವ ಪ್ರತಿಯೊಂದು ಪಶು, ಪಕ್ಷಿ, ಗಿಡ ಮತ್ತು ಮರಗಳೊಡನೆ ಅವರು ಸಂಬಂಧವನ್ನು ಕಾಣುತ್ತಿದ್ದರು. ಅವುಗಳನ್ನು ಬಂಧು ಗಳೆಂದು ಪರಿಗಣಿಸುತ್ತಿದ್ದರು. ಒಬ್ಬ ಹಿರಿಯ ‘ನಾನು ಆ ಹಕ್ಕಿಯ ಮಾಂಸವನ್ನು ತಿನ್ನುವುದಿಲ್ಲ’ ಎಂದ. ‘ಏಕೆ?’ ಎಂದು ಕೇಳಿದಾಗ, ‘ಆ ಹಕ್ಕಿಯು ನನ್ನ ತಾಯಿಯ ಸೋದರ. ಹಾಗಾಗಿ ನಾನು ಅದನ್ನು ತಿನ್ನಲಾರೆ’ ಎಂಬ ವಿವರಣೆಯನ್ನು ನೀಡಿದ.

ತಮ್ಮ ಹಿರಿಯರೆಲ್ಲ ಪಶುಪಕ್ಷಿಗಳ ರೂಪದಲ್ಲಿ ತಮ್ಮ ನಡುವೆಯೇ ವಾಸಿಸುತ್ತಾರೆ ಎನ್ನುವುದು ಅವರ ನಂಬಿಕೆಯಾಗಿತ್ತು. ಇಂಥ ಕಥೆಗಳನ್ನು ಆಧರಿಸಿ ಫ್ರಾಯ್ಡ್, ‘ಟೋಟೆಮ್ ಆಂಡ್ ಟಾಬು’ ಎಂಬ ಪುಸ್ತಕವನ್ನು 1913ರಲ್ಲಿ ಪ್ರಕಟಿಸಿದ. ಭಾಷಾ ಶಾಸ್ತ್ರಜ್ಞನಾಗಿದ್ದ ಸಿಡ್ನಿ ರೇ, ಪಾಲಿನೇಷಿಯನ್ನರ ‘ಮೆರಿಯಮ್ ಮಿರ್’ ಹಾಗೂ ‘ಕಲ ಲಗಾವ್ ಯ’ ಭಾಷೆಗಳನ್ನು ತಿಳಿದಿದ್ದ. ಹಾಗಾಗಿ ಆ ಭಾಷೆಗ ಳಲ್ಲಿದ್ದ ಪುರಾಣಗಳನ್ನು, ಕಥೆಗಳನ್ನು, ನುಡಿಗಟ್ಟುಗಳನ್ನು ಹಾಗೂ ಭಾಷಾ ಸಂಪತ್ತನ್ನು ಸಂಗ್ರಹಿಸಿದ.

ಒಬ್ಬ ಹಿರಿಯ ‘ನಿಮ್ಮ ಇಂಗ್ಲಿಷಿನಲ್ಲಿ ದೊಡ್ಡ ದೊಡ್ಡ ಪುಸ್ತಕಗಳಿದ್ದರೆ, ನಮ್ಮಲ್ಲಿ ದೊಡ್ಡ ದೊಡ್ಡ ನೆನಪುಗಳಿವೆ’ ಎಂದು ಹೇಳಿದ. ಸಿಡ್ನಿ ರೇ, ಪಾಲಿನೇಷಿಯನ್ನರ ಮೌಖಿಕ ಪರಂಪರೆಗೆ ಮನಸೋತ. ಹಾಗಾಗಿ ತನ್ನಿಂದ ಸಾಧ್ಯವಾದಷ್ಟು ಅವರ ಸಾಹಿತ್ಯವನ್ನು ಬರೆದುಕೊಂಡ. ಅವನು ಅಂದು ಬರೆದಿಟ್ಟ ಮೌಖಿಕ ಸಾಹಿತ್ಯವು ಇಂದಿಗೂ ಜೀವಂತವಾಗಿ ಉಳಿದಿದ್ದು, ಪಾಲಿನೇಶಿಯನ್ನರ ಬದುಕನ್ನು ಸಂತೃಪ್ತಗೊಳಿಸುತ್ತಿದೆ.

ಮಾನವ ವಿಜ್ಞಾನದ ಭಾಗವಾಗಿ ಮೆಲನೇಷಿಯನ್ನರ ತಲೆಯ ಉದ್ದ, ಅಗಲ, ಗಾತ್ರ ಮುಂತಾದ ವನ್ನು ಅಳೆದಾಗ, ಒಬ್ಬ- ‘ನನ್ನ ತಲೆಯನ್ನ ಯಾಕೆ ಅಳೀತಾ ಇದ್ದೀರಿ. ನಾನು ಸತ್ತ ಮೇಲೆ ನನ್ನ ತಲೆಯನ್ನೇನಾದರೂ ನಿಮ್ಮ ರಾಣಿಗೆ ಉಡುಗೊರೆಯನ್ನಾಗಿ ನೀಡುತ್ತೀರ’ ಎಂದು ಪ್ರಶ್ನಿಸಿದ. ಆತನ ಮಾತನ್ನು ಕೇಳಿ ಹೇಡನ್ ಚಿಂತಿಸಲಾರಂಬಿಸಿದ.

ಬುಡಕಟ್ಟಿನ ಜನರನ್ನು ‘ನಮಗಿಂತ ಕೀಳು’ ಎಂದು ಭಾವಿಸುವ ಮನೋಭಾವವನ್ನು ಹಾಗೂ ಅವರ ದೇಹವನ್ನು ಪ್ರಯೋಗಾಲಯದ ಮಾದರಿಯೆಂಬಂತೆ ಪರಿಗಣಿಸುವುದನ್ನು ನೋಡಿ ನಾಚಿದ. ಕೊನೆಗೆ ಮಾನವ ವಿಜ್ಞಾನ ಹಾಗೂ ಜನಾಂಗೀಯ ಅಧ್ಯಯನಗಳು ಮಾನವೀಯತೆಯ ನೆಲೆಯಲ್ಲಿಯೇ ನಡೆಯಬೇಕೆಂದು ನೈತಿಕ ವಿಧಿ ವಿಧಾನಗಳನ್ನು ಹಾಗೂ ಮಾನದಂಡವನ್ನು ರೂಪಿಸಿದ.

ಮನೋವಿಜ್ಞಾನಿ ರಿವರ್ಸ್‌ನಿಗೆ ಪಾಲಿನೇಷಿಯನ್ನರು ಹೇಳುವ ಕಥಾವಿಧಾನಗಳು ಮೆಚ್ಚುಗೆ ಯಾದವು. ‘ತನ್ನಂತೆ ಪರರ ಬಗೆಯುವ’ ದ್ವೀಪವಾಸಿಗಳ ನಿಲುವು ಅವನ ಬದುಕನ್ನೇ ಬದಲಾಯಿಸಿತು. ಮೊದಲನೆಯ ಮಹಾಯುದ್ಧದ ವೇಳೆಯಲ್ಲಿ ಮನೋಸಮಸ್ಯೆಗಳಿಂದ ದಾಖಲಾಗಿದ್ದ ಸೈನಿಕರಿಗೆ ಈತನು ‘ಮಾತಿನ ಮೂಲಕವೇ ಚಿಕಿತ್ಸೆ’ಯನ್ನು ನೀಡಿದ.

2004. ಟಾರೆಸ್ ಜಲಸಂಧಿಯ ದ್ವೀಪವಾಸಿಗಳು ಕೇಂಬ್ರಿಜ್‌ಗೆ ಬಂದರು. ಅವರಲ್ಲಿ ಒಬ್ಬ ತನ್ನ ಮುತ್ತಜ್ಜನ ಫೋಟೋವನ್ನು ನೋಡಿ ಅಳಲಾರಂಬಿಸಿದ. ಇದನ್ನು ಕಂಡ ವಿಶ್ವವಿದ್ಯಾಲಯದವರು ಮೆಲನೇಷಿಯನ್ನರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲೀಕರಿಸಿ ಅವರಿಗೆ ನೀಡಿದರು. ಅಂದು ಅವರ ದ್ವೀಪದಿಂದ ತಂದಿದ್ದ ಎಲ್ಲ ಮುಖವಾಡಗಳನ್ನು (ಮಾಸ್ಕ್) ಹಿಂದಿರುಗಿಸಿದರು. ಅದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು.

ವಸಾಹತುಶಾಹಿ ಆಡಳಿತಗಾರರು ತಮ್ಮ ಮೇಲ್ಮೈ ಸಾಧನೆಗೆಂದು ಕಳುಹಿಸಿದ ಕ್ಷೇತ್ರಾಧ್ಯಯನವು ಅಭೂತಪೂರ್ವ ಯಶಸ್ಸನ್ನು ಗಳಿಸಿತು. ಜತೆಗೆ ಅವರ ಮೇಲ್ಮೈ ಮೌಢ್ಯವನ್ನು ಕಳೆಯಿತು. ಬುಡಕಟ್ಟಿನ ಜನರು ಅಮೆರಿಕನ್ ಅಥವಾ ಯುರೋಪಿಯನ್ ನಾಗರಿಕರಿಗಿಂತ ಯಾವುದೇ ವಿಷಯದಲ್ಲಿ ಕಡಿಮೆಯಿಲ್ಲ; ಕೆಲವು ವಿಷಯಗಳಲ್ಲಿ ಅವರನ್ನೂ ಮೀರಿಸಬಲ್ಲರು ಎಂಬ ಸತ್ಯವು ಬೆಳಕಿಗೆ ಬಂದಿತು. ಜತೆಗೆ ಇಂಥ ಕ್ಷೇತ್ರಾಧ್ಯಯನಗಳು ನಡೆಯಲು ಒಂದು ‘ಗೋಲ್ಡ್ ಸ್ಟಾಂಡರ್ಡ್’ ಮಾನಕವನ್ನು ರೂಪಿಸಿತು. ಇದು ಇಂದಿಗೂ ಮರೆಯಲಾಗದ ಕ್ಷೇತ್ರಾಧ್ಯಯನ ಎಂದು ಹೆಸರಾಗಿದೆ.