ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ಕಪಿಲ್‌ ದೇವ್‌ ಬಗ್ಗೆ ಬಂದ ಆ ಹಾರ್ಟ್‌ ಬ್ರೇಕಿಂಗ್‌ ನ್ಯೂಸ್‌ !

ತೀರಾ ಇತ್ತೀಚೆಗೆ ಫೇಸ್ ಬುಕ್‌ನಲ್ಲಿ ಹೊಸತೊಂದು ರೋಗ ಶುರುವಾಗಿದೆ. ವರ್ಷಗಳ ಹಿಂದೆ ನಿಧನರಾಗಿ ರುವ ಖ್ಯಾತನಾಮರ ಫೋಟೋ ಪೋಸ್ಟ್ ಮಾಡಿ, ಈಗಷ್ಟೇ ನಿಧರರಾಗಿದ್ದಾರೇನೋ ಎಂಬಂತೆ ಎರಡು ಸಾಲು ಬರೆದು ಶ್ರದ್ಧಾಂಜಲಿ ಹಾಕಿಬಿಡುವುದು. ಆ ಪೋಸ್ಟಿಗೆ ಕುರಿಮಂದೆಯಂತೆ ನೂರಾರು ಮಂದಿ ಆರ್‌ಐಪಿ ಎಂದು ಕಮೆಂಟ್ ಹಾಕುವುದು ಸಹಜ ರಿಯಾಕ್ಷನ್ ಬಿಡಿ. ಸೋಷಿಯಲ್ ಮೀಡಿಯಾ ಇರುವುದೇ ಹಾಗೆ. ಕಮೆಂಟ್ ಮಾಡುವ ಒಂದು ವರ್ಗ, ಸತ್ಯಾಸತ್ಯವನ್ನು ಪರೀಕ್ಷಿಸುವುದಿಲ್ಲ. ಆ ವ್ಯಕ್ತಿ ಸತ್ತು ಬಹಳ ವರ್ಷವಾಗಿದೆಯಲ್ಲ ಎಂಬ ಮೆಮೊರಿಯೂ ಅವರಿಗಿರುವುದಿಲ್ಲ.

ಪದಸಾಗರ

ಫೇಕ್ ನ್ಯೂಸ್ ಎಂಬುದು ಸಾಮಾಜಿಕ ಜಾಲತಾಣ ಶುರುವಾದ ಮೇಲೆ ಶುರುವಾದದ್ದೇನಲ್ಲ. ಪುರಾಣ ಕಾಲದಿಂದ ಇರುವಂಥದ್ದೇ. ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಸ್ವಾತಂತ್ರ್ಯಪೂರ್ವ ದಲ್ಲೂ, ಸ್ವಾತಂತ್ರ್ಯದ ನಂತರವೂ ಸುಳ್ಳುಸುದ್ದಿಗಳು ಮಾಡಿರುವ ಅವಾಂತರ ಗಳು ಒಂದೆರಡಲ್ಲ.

ಇನ್ನು ಸಿನಿಮಾ ಹಾಗೂ ರಾಜಕೀಯ ಜಗತ್ತುಗಳಂತೂ ಫೇಕ್ ನ್ಯೂಸ್ ಅಥವಾ ಗಾಸಿಪ್‌ಗಳಿಲ್ಲದೇ ಅಪೂರ್ಣ. ರಾಜಕುಮಾರ್ ಅವರನ್ನು ಬದುಕಿರುವಾಗಲೇ ಹಲವು ಬಾರಿ ಸಾಯಿಸಲಾಗಿತ್ತು. ನಾನು ಬದುಕಿದ್ದೇನೆ ಎಂದು ಅವರು ಪತ್ರಿಕೆಗಳ ಮೂಲಕ, ರೇಡಿಯೋ, ಟಿವಿಗಳ ಮೂಲಕ ಸಾಕ್ಷೀಕರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಾಗ ಈ ಜಗತ್ತು ಖ್ಯಾತನಾಮರನ್ನು ಸಾಯಿಸುತ್ತಾ ಇರುತ್ತದೆ.

ಅದೇನೋ ಒಂದು ವಿಕೃತ ಖುಷಿ. ವಯಸ್ಸಾಗಿರುವ, ಅನಾರೋಗ್ಯದಿಂದಿರುವ ಅಥವಾ ಟಿಆರ್‌ಪಿ ಸೆಲೆಬ್ರಿಟಿಗಳು ಇವರ ಟಾರ್ಗೆಟ. ಇದೇ ಕಾರಣದಿಂದ ಎಷ್ಟೋ ಬಾರಿ ನಿಜಕ್ಕೂ ಯಾರಾದರೂ ತೀರಿಕೊಂಡಾಗಲೂ ನಂಬದಂತಾಗುತ್ತೇವೆ. ಇದರ ಜತೆಗೆ, ಯಾರಾದರೂ ಆಸ್ಪತ್ರೆಗೆ ಸೇರು ತ್ತಿದ್ದಂತೆಯೇ, ಸತ್ತೇ ಹೋದರು ಎಂದು, ನ್ಯೂಸ್ ಚಾನೆಲ್‌ಗಳಿಗಿಂತ ಮೊದಲು ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಚಟ ಇಂದಿನ ಸೋಷಿಯಲ್ ಮೀಡಿಯಾ ಮಂದಿಯದ್ದು.

ತೀರಾ ಇತ್ತೀಚೆಗೆ ಫೇಸ್ ಬುಕ್‌ನಲ್ಲಿ ಹೊಸತೊಂದು ರೋಗ ಶುರುವಾಗಿದೆ. ವರ್ಷಗಳ ಹಿಂದೆ ನಿಧನರಾಗಿರುವ ಖ್ಯಾತನಾಮರ ಫೋಟೋ ಪೋಸ್ಟ್ ಮಾಡಿ, ಈಗಷ್ಟೇ ನಿಧರರಾಗಿದ್ದಾರೇನೋ ಎಂಬಂತೆ ಎರಡು ಸಾಲು ಬರೆದು ಶ್ರದ್ಧಾಂಜಲಿ ಹಾಕಿ ಬಿಡುವುದು. ಆ ಪೋಸ್ಟಿಗೆ ಕುರಿಮಂದೆಯಂತೆ ನೂರಾರು ಮಂದಿ ಆರ್‌ಐಪಿ ಎಂದು ಕಮೆಂಟ್ ಹಾಕುವುದು ಸಹಜ ರಿಯಾಕ್ಷನ್ ಬಿಡಿ. ಸೋಷಿ ಯಲ್ ಮೀಡಿಯಾ ಇರುವುದೇ ಹಾಗೆ. ಕಮೆಂಟ್ ಮಾಡುವ ಒಂದು ವರ್ಗ, ಸತ್ಯಾಸತ್ಯವನ್ನು ಪರೀಕ್ಷಿಸುವುದಿಲ್ಲ. ಆ ವ್ಯಕ್ತಿ ಸತ್ತು ಬಹಳ ವರ್ಷವಾಗಿದೆಯಲ್ಲ ಎಂಬ ಮೆಮೊರಿಯೂ ಅವರಿಗಿರು ವುದಿಲ್ಲ.

ಇದನ್ನೂ ಓದಿ: Naveen Sagar Column: ನವರಾತ್ರಿಯ ಸಂಜೆಯಲ್ಲಿ ಮೊದಲ ರಾತ್ರಿಯ ಹಾಡು

ಎಷ್ಟೋ ಬಾರಿ ಅವರಿಗೆ ಆ ವ್ಯಕ್ತಿ ಗೊತ್ತಿರುವುದೇ ಇಲ್ಲ. ಈಗಾಗಲೇ ಕಾಲವಾಗಿ ನಾಲ್ಕೈದು ವರ್ಷ ಗಳಾಗಿರುವ ನಮ್ಮ ಕನ್ನಡ ಚಿತ್ರರಂಗದ ಪೋಷಕ ನಟನಟಿಯರು, ಇಂಥ ಪೋಸ್ಟುಗಳ ಟಾರ್ಗೆಟ್. ಕಾಶಿ, ಮನ್ ದೀಪ್ ರಾಯ್, ಕಾಶೀನಾಥ್, ಶಂಕರ್ ರಾವ್, ಮಹಾಭಾರತದ ಕರ್ಣ ಪಂಕಜ್ ಧೀರ್ ಇಂಥವರಿಗೆಲ್ಲ ಫೇಸ್ಬುಕ್ಕಿನಲ್ಲಿ ಪುನರಪಿ ಮರಣಂ ಖಾಯಂ. ಇನ್ನೂ ಅಸಹ್ಯ ವೊಂದಿದೆ.

ಎಐ ಬಳಸಿ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿಬಿಡುವುದು. ಆತನನ್ನು ಸೇನೆಯ ದಿರಿಸಿನಲ್ಲಿ ರೆಡಿ ಮಾಡಿ, ಈತ ದೇಶಕ್ಕಾಗಿ ನಿನ್ನೆಯಷ್ಟೇ ಹುತಾತ್ಮನಾಗಿದ್ದಾನೆ. ನಿಮ್ಮ ಲೈಕ್ ಮೂಲಕ ಒಂದು ಶ್ರದ್ಧಾಂಜಲಿ ಅರ್ಪಿಸಿ ಎಂದು ಪೋಸ್ಟ್ ಮಾಡಿಬಿಡುವುದು. ಇವೆಲ್ಲವೂ ಕೇವಲ ವಿಕೃತ ಖುಷಿಗೋ, ತಮಾಷೆಗೋ ಮಾಡುವುದೆಂದು ಭಾವಿಸಿದರೆ ನಮಗಿಂತ ಮೂರ್ಖರಿಲ್ಲ. ಅವರು ಇದನ್ನು ಬಯ್ಯಿಸಿಕೊಳ್ಳಲೆಂದೇ ಮಾಡಿರುತ್ತಾರೆ. ‌

ಇವರ ಸುಳ್ಳು/ತಪ್ಪು ಕಂಡುಹಿಡಿದು ಬಯ್ಯುವವರೇ ಇವರ ಅನ್ನದಾತರು. ಬಯ್ಗುಳದ ಕಮೆಂಟು, ರಿಯಾಕ್ಷನ್‌ಗಳಿಂದಲೇ ಅವರಿಗೆ ಆದಾಯ ಹುಟ್ಟುತ್ತದೆ. ಮಾರ್ಗ ಯಾವುದಾದರೇನು, ಯಾರು ಉಗಿದರೇನು, ಫಾಲೋವರ್ಸ್, ಮತ್ತು ವೀಕ್ಷಣೆ ಹೆಚ್ಚಿ ಆದಾಯ ಬರುತ್ತದಲ್ಲ ಎಂಬುದು ಇವರ ಲೆಕ್ಕಾಚಾರ. ನಾನು ಬರೆಯಲು ಹೊರಟ ಮುಖ್ಯ ವಿಚಾರ ಇದಲ್ಲ.

ನನ್ನ ನೆಚ್ಚಿನ ಕ್ರಿಕೆಟರ್ ಕಪಿಲ್ ದೇವ್ ಆಸ್ಪತ್ರೆಯಲ್ಲಿ ಮಲಗಿರುವ ಫೋಟೋವೊಂದನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಯಾರೋ ಪೋ ಮಾಡಿ ಬೇಗ ಗುಣವಾಗಲಿ ಅಂತ ಹಾರೈಸಿದ್ದರು. ಆತಂಕದಲ್ಲಿ ಟ್ವಿಟರ್, ಫೇಸ್‌ಬುಕ್, ಗೂಗಲ್ ಎಲ್ಲವನ್ನೂ ಜಾಲಾಡಿ, ಕೊನೆಗೆ ಫ್ಯಾಕ್ಟ್ ಚೆಕ್ ಕೂಡ ಮಾಡಿ ಸುಳ್ಳುಸುದ್ದಿ ಎಂದು ಖಾತರಿಪಡಿಸಿಕೊಳ್ಳುವ ತನಕ ಸಮಾಧಾನವಿರಲಿಲ್ಲ. ‌

Kapil Dev ok

ಅಷ್ಟೂ ಹೊತ್ತು ಕಪಿಲ್ ದೇವ್ ಎಂಬ ಅಸಾಮಾನ್ಯ ಕ್ರಿಕೆಟರ್ ನನ್ನ ಬದುಕಿನಲ್ಲಿ ಅಚ್ಚೊತ್ತಿರುವ ಎಲ್ಲ ನೆನಪುಗಳೂ ಒಂದೊಂದಾಗಿ ಸಿನಿಮಾದಂತೆ ಕಣ್ಮುಂದೆ ಬರತೊಡಗಿದ್ದವು. ಕಪಿಲ್ ನಂತರ ಭಾರತದಲ್ಲಿ ಅದೆಷ್ಟೋ ಕ್ರಿಕೆಟರ್‌ಗಳು ಬಂದು ಹೋಗಿದ್ದಾರೆ. ಆದರೆ ಮತ್ತೊಬ್ಬ ಕಪಿಲ್ ಇಂದಿಗೂ ಬರಲೇ ಇಲ್ಲ. ಬರಲು ಸಾಧ್ಯವೂ ಇಲ್ಲ.

ನಾನು ಇವತ್ತಿಗೂ ಅತ್ಯಂತ ಇಷ್ಟ ಪಡೋ ಬೌಲಿಂಗ್ ಸ್ಟೈಲ್ ಅಂದ್ರೆ ಅದು ಕಪಿಲ್ ದೇವ್‌ನದ್ದು. ಆ ರನ್ ಅಪ್‌ನ ರಿಧಮ.. ಅದರಲ್ಲಿರೊ ಮ್ಯಾನ್ಲಿ ವಯ್ಯಾರ.. ಕ್ರೀಸ್ ಬಳಿ ತೆಗೆದುಕೊಳ್ಳೋ ಆ ಜಂಪ್.. ಅದೇ ಹೊತ್ತಿಗೆ ಕೈಲಿರೋ ಚೆಂಡನ್ನು ಡೆಲಿವರ್ ಮಾಡೋಕೆ ರೆಡಿ ಮಾಡ್ಕೊಳೋ ರೀತಿ... ಆಹಾ..! ಆತನ ಅಪೀಲಿಂಗ್ ಶೈಲಿಯೂ ಅಷ್ಟೆ.. ಅದರಲ್ಲಿ ಕಾಣುವ ಡಿಗ್ನಿಟಿ ಮತ್ತು ಆತ್ಮವಿಶ್ವಾಸ ಜಸ್ಟ್ ವಾಹ್. ‌

ಇನ್ನು ಬೌಲ್ಡ್ ಮಾಡೋ ಹಲವು ಎಸೆತಗಳಲ್ಲಿ ಕೂಡ ವಿಶೇಷತೆ ಇರ್ತಿತ್ತು. ಅಷ್ಟು ವೇಗವಾಗಿ ಓಡಿಬಂದು ಬೌಲ್ ಮಾಡಿದ ನಂತರ ಆ ಓಟವನ್ನು ನಿಯಂತ್ರಿಸಿಕೊಳ್ಳೋದು ಕಷ್ಟ. ಬಹಳಷ್ಟು ವೇಗದ ಬೌಲರ್‌ಗಳು ಬಾಲ್ ಡೆಲಿವರ್ ಮಾಡಿದ ನಂತರ ಉದುರಿ ಬಿದ್ದೇ ಹೋಗ್ತಾರೆ ಎಂಬಂತೆ ಮುಗ್ಗರಿಸುತ್ತಿದ್ದರೆ, ಕಪಿಲ್ ಮಾತ್ರ ಕ್ರೀಸಿಂದ ಒಂದೇ ಅಡಿ ದೂರಕ್ಕೆ ತನ್ನ ಬ್ರೇಕ್ ಅಪ್ಲೈ ಮಾಡಿ ಕೊಳ್ಳಬಲ್ಲವನಾಗಿದ್ದ.

ಕಪಿಲ್ ಬೌಲಿಂಗ್ ಮಾತ್ರವಲ್ಲ.. ಆತ ಬೌಲಿಂಗ್‌ಗೆ ಬಂದಾಗ ಒಂದು ಎಸೆತ ಎಸೆದು ಇನ್ನೊಂದು ಎಸೆತಕ್ಕೆ ರನ್ ಅಪ್‌ನತ್ತ ತೆರಳುವಾಗ ಮೈಗಂಟಿಕೊಂಡ ಜರ್ಸಿಯನ್ನು ಬಿಡಿಸಿಕೊಳ್ತಾ ಎದೆ ಮೇಲಿಂದ ಶೌಲ್ಡರ್ ಮೇಲಿಂದ ಅಂಗಿ ಜಗ್ಗಿಕೊಳ್ಳುತ್ತಾ, ಭುಜ ಕುಣಿಸಿಕೊಳ್ಳುತ್ತಾ ಹೋಗ್ತಾ ಇದ್ದದ್ದು ನೋಡೋದೇ ಒಂಥರ ಖುಷಿ. ಇಷ್ಟದ ಪ್ಲೇಯರ್‌ನ ಎಲ್ಲ ಮ್ಯಾನರಿಸಂಗಳೂ ಇಷ್ಟ ಆಗೋದು ಸಹಜವೇ ಬಿಡಿ. ಕಪಿಲ್ ದೇವ್ ಮೇಲಿನ ಅಭಿಮಾನದ ಜತೆ ಅನುಕರಣೆಗೂ ಮುಂದಾಗಿ ಅವನ ಬೌಲಿಂಗ್ ಶೈಲಿ ಅನುಕರಿಸುವ ಪ್ರಯತ್ನ ಮಾಡಿದ್ದಿತ್ತು. ಶೈಲಿ ಕರಗತ ಆಗದಿದ್ರೂ ಹಾಗೇ ಮಾಡ್ತಿದ್ದೇನೆ ಅಂತ ಭ್ರಮಿಸುತ್ತಿದ್ದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಛೇ ನಂಗೆ ಕಪಿಲ್ ಥರ ಉಬ್ಬಲ್ಲು ಇಲ್ಲವಲ್ಲ ಅಂತ ಬೇಜಾರು ಮಾಡಿಕೊಂಡದ್ದೂ ಇದೆ. ಎಲ್ಲರೂ ಕಪಿಲ್ ದೇವ್ ಅಂದಾಕ್ಷಣ ಪ್ರಮುಖವಾಗಿ ನೆನಪಿಸಿ ಕೊಳ್ಳುವುದು ಜಿಂಬಾಬ್ವೆ ವಿರುದ್ಧದ 175 ರನ್‌ಗಳ ಆ ಇನ್ನಿಂಗ್ಸ್. ಆದರೆ ಕಪಿಲ್ ದೇವ್‌ನ ಹಲವು ಟೆಸ್ಟ್ ಇನ್ನಿಂಗ್ಸ್‌ಗಳು ಮತ್ತೆ ಮತ್ತೆ ಮೆಲುಕು ಹಾಕುವಂಥವು. ಭಾರತದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲೂ ಕಪಿಲ್ ದೇವ್ ಬೌಲಿಂಗ್‌ಗೆ ಹೆದರಿ ಆಡುತ್ತಿದ್ದರು ಎದುರಾಳಿಗಳು. ಇತರ ವೇಗಿಗಳನ್ನು ಲಘುವಾಗಿ ಪರಿಗಣಿಸಿ ವಿಕೆಟ್ ಒಪ್ಪಿಸಿ‌ ಬಿಡುತ್ತಿದ್ದ ಬ್ಯಾಟರ್‌ಗಳು ಕಪಿಲ್ ದೇವ್ ವಿರುದ್ಧ ಅತಿ ಜಾಗರೂಕತೆ ಯಿಂದ ಆಡುತ್ತಿದ್ದರು.

ಹೀಗಾಗಿ ಸಿಗಬೇಕಾದ ವಿಕೆಟ್‌ಗಳೂ ಸಿಗುತ್ತಿರಲಿಲ್ಲ. ಕಪಿಲ್‌ನ ಬ್ಯಾಟಿಂಗ್ ಎಂದಾಕ್ಷಣ ನನ್ನ ನೆನಪಿಗೆ ಬರೋದು ಇಂಗ್ಲೆಂಡ್ ವಿರುದ್ಧ ನಾಲ್ಕು ಬಾಲಿಗೆ ನಾಲ್ಕು ಸಿಕ್ಸ್ ಹೊಡೆದು ಫಾಲೋ ಆನ್ ತಪ್ಪಿಸಿದ ಆ ಆಟ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಆ ರೀಲ್ಸ್ ಹರಿದಾಡುತ್ತಲೇ ಇರುತ್ತದೆ. ಅದು ಮೂವತ್ತಾರು ವರ್ಷಗಳ ಹಿಂದೆ ನಡೆದ ಟೆಸ್ಟ್. ‌

ಭಾರತ-ಇಂಗ್ಲೆಂಡ್ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯ ಅದು. ಎಡ್ಡಿ ಹೆಮ್ಮಿಂಗ್ಸ್ ಅನ್ನೋ ಅನುಭವಿ ಸ್ಪಿನ್ನರ್ ಬೌಲಿಂಗ್. ಅವನ ಬಗ್ಗೆ ಆಗೊಂದು ಮಾತು ಹರಿದಾಡುತ್ತಿತ್ತು. ಆತ ಮಹಾನ್ ಚಾಣಾಕ್ಷ ಸ್ಪಿನ್ನರ್. ಫೀಲ್ಡರ್ ಇದ್ದಲ್ಲಿಯೇ ಕ್ಯಾಚ್ ಕೊಡುವ ಹಾಗೆ ಬ್ಯಾಟರ್‌ನಿಂದ ತಪ್ಪು ಮಾಡಿಸುತ್ತಾನೆ ಅಂತ.

87ರ ವಿಶ್ವಕಪ್ ಸೆಮಿಫೈನಲ್ ಪಂದ್ಯ ನೋಡಿದ್ದ ನನಗೆ ಆ ನಂಬಿಕೆ ಬಹಳ ಗಟ್ಟಿ ಆಗಿಬಿಟ್ಟಿತ್ತು. ಆ ಸೆಮಿಫೈನಲ್‌ನಲ್ಲಿ ಭಾರತದ ಪರ ಕೊನೆಯ ಆಶಾಕಿರಣ ಅಂದ್ರೆ ಅದು ಕಪಿಲ್ ದೇವ್. ಕಪಿಲ್ ಆಡಿ ಗೆಲ್ಲಿಸಿಬಿಡ್ತಾನೆ ಎಂಬ ನಂಬಿಕೆಯಲ್ಲಿ ನಾನು ಮಾತ್ರವಲ್ಲ ಇಡೀ ಭಾರತ ಪಂದ್ಯ ವೀಕ್ಷಿಸುತ್ತಿತ್ತು. ಅದು 83ರ ವಿಶ್ವಕಪ್ ಪಂದ್ಯದಲ್ಲಿ ಆತನಿಂದಲೇ ಹುಟ್ಟಿದ್ದ ನಂಬಿಕೆ. 17/5 ಅನ್ನೋ ಹಂತದಿಂದ ಆಡಿದ ರೀತಿಯಿಂದಾಗಿ ಕಪಿಲ್ ದೇವ್ ಇಡೀ ದೇಶದ ಅಭಿಮಾನಿಗಳ ಪಾಲಿಗೆ ಆಪದ್ಬಾಂಧವ ಅನಿಸಿಬಿಟ್ಟಿದ್ದ. ಅಂದು ಕಪಿಲ್ ಆಡೋಕೆ ಬಂದಾಗ ಗೆಲ್ಲಲು ಇನ್ನೂ 130 ರನ್ ಬೇಕು.

ಬರುತ್ತಿದ್ದಂತೆಯೇ ಹರಿಯಾಣದ ಬಿರುಗಾಳಿ ಶುರುವಾಗಿತ್ತು. ಇಪ್ಪತ್ತೆರಡು ಬಾಲ್ ಗಳಲ್ಲಿ ಮೂವತ್ತು ರನ್ ಚಚ್ಚಿದಾಗ ಭಾರತಕ್ಕೆ ಗೆಲ್ಲೋ ಭರವಸೆ. ಇಂಥ ಸಂದರ್ಭದಲ್ಲಿ ಕ್ಯಾಪ್ಟನ್ ಮೈಕ್ ಗ್ಯಾಟಿಂಗ್ ಚೆಂಡನ್ನು ಎಡ್ಡೀ ಹೆಮ್ಮಿಂಗ್ಸ್ ಕೈಗೆ ಕೊಟ್ಟ. ಎಡ್ಡೀ ಹೆಮ್ಮಿಂಗ್ಸ್ ಅದೇ ಕ್ಯಾಪ್ಟನ್ ಮೈಕ್ ಗ್ಯಾಟಿಂಗ್‌ಗೆ ಮಿಡ್ ವಿಕೆಟ್ ಬೌಂಡರಿಯಲ್ಲಿ ನಿಂತ್ಕೋ ಅಂತ ಕಳಿಸಿದ. ಹೆಮ್ಮಿಂಗ್ಸ್ ಎಸೆದ ಚೆಂಡನ್ನು ಕಪಿಲ್ ದೇವ್ ಮಿಡ್ ವಿಕೆಟ್ ಬೌಂಡರಿಯತ್ತ ಗಾಳಿಯಲ್ಲಿ ಹೊಡೆದ. ಮೈಕ್ ಗ್ಯಾಟಿಂಗ್ ಇದ್ದಲ್ಲಿಯೇ ಕ್ಯಾಚ್. ಆ ಕ್ಷಣ 87ರ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ‌

ಅಂದಿನಿಂದ ನನಗೆ ಆ ಎಡ್ಡೀ ಹೆಮ್ಮಿಂಗ್ಸ್ ಮೇಲೊಂದು ಸಿಟ್ಟು ಹಾಗೂ ಭಯ. ಕಪಿಲ್ ದೇವ್ ಒಮ್ಮೆಯಾದರೂ ಇವನಿಗೆ ಚಚ್ಚಿ ಬುದ್ಧಿ ಕಲಿಸಲೇಬೇಕು. ಸೇಡು ತೀರಿಸ್ಕೋಬೇಕು ಅಂತ ತುಂಬ ಅನಿಸುತ್ತಲೇ ಇತ್ತು. ಮೂರು ವರ್ಷದ ನಂತರ ಅಂಥದ್ದೊಂದು ಸಂದರ್ಭ ಬಂತು. 1990ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸಕ್ಕೆ ಹೋಯ್ತು.

ಇಂಗ್ಲೆಂಡ್ ಮೊದಲ ಇನ್ನಿಂಗ್ಸಿನಲ್ಲಿ 653ರನ್ ಹೊಡೆದಿದೆ. ಪ್ರತಿಯಾಗಿ ಅಜರ್ ಒಬ್ಬನೇ ಒಳ್ಳೆಯ ಆಟ ಆಡಿ ಶತಕ ಹೊಡೆದು ಔಟಾಗಿದ್ದಾನೆ. ಐದೋ ಆರೋ ವಿಕೆಟ್ ಹೋದ ಮೇಲೆ ಬಂದ ಕಪಿಲ್ ಒನ್ ಡೇ ಮಾದರಿಯಲ್ಲಿ ಬ್ಯಾಟ್ ಬೀಸಲು ಶುರು ಮಾಡೇಬಿಟ್ಟ. ಒಂದು ಕಡೆ ವಿಕೆಟ್ ಬೀಳ್ತಾ ಇದ್ದರೂ ಕಪಿಲ್ ಅಬ್ಬರ ನಿಲ್ಲುತ್ತಲೇ ಇಲ್ಲ. ಆದರೂ ಫಾಲೋ ಆನ್ ಗುರಿ ಕೂಡ ದೂರ ದೂರ! 454 ಹೊಡೆದರೆ ಫಾಲೋ ಆನ್‌ನಿಂದ ಪಾರು. ಭಾರತದ ಸ್ಕೋರ್ 393/6. ಕಪಿಲ್ ಇನ್ನೂ ಇದ್ದಾನೆ.

ಫಾಲೋಆನ್‌ನಿಂದ ಪಾರಾಗಬಹುದು ಅನ್ನುವ ಹೊತ್ತಿಗೆ ಏಳನೇ ವಿಕೆಟ್ ಬಿತ್ತು. 393/7. ಕಿರಣ್ ಮೋರೆ ಜತೆ ಸೇರಿ ಕೊಂಚ ಆಸೆ ಹುಟ್ಟಿಸುತ್ತಿದ್ದ ವೇಳೆಗೆ ಮತ್ತೆ ವಿಕೆಟ್ ಬಿತ್ತು. 430/8. ಒಂಬತ್ತನೆಯ ವಿಕೆಟ್ಟೂ ಅದೇ ಸ್ಕೋರಿಗೆ ಬಿತ್ತು. ಈಗ ಇರೋದು ಕೊನೆಯ ವಿಕೆಟ್. ಕಪಿಲ್ ಒಂದು ಬದೀಲಿ. ಬ್ಯಾಟ್ ಹಿಡಿಯೋಕೂ ಬಾರದ ನರೇಂದ್ರ ಹಿರ್ವಾನಿ ಇನ್ನೊಂದು ಬದೀಲಿ. ಫಾಲೋ ಆನ್ ತಪ್ಪಿಸೋಕೆ 24 ರನ್. ಎಡ್ಡೀ ಹೆಮ್ಮಿಂಗ್ಸ್ ಬೌಲಿಂಗ್. ನನ್ನೆದೆಯಲ್ಲಿ ಡವಡವ. 87ರ ಫೋಬಿಯಾ!

ಎಲ್ಲಿ ಕಪಿಲ್ ದೇವ್ ಕ್ಯಾಚ್ ಕೊಟ್ಟು ಬಿಡ್ತಾನೋ ಏನೋ ಅಂತ. ಮೊದಲ ಎರಡು ಎಸೆತ ರನ್ ಇಲ್ಲ. ಹೆಮ್ಮಿಂಗ್ಸ್‌ʼದು ಇನ್ನು ನಾಲ್ಕು ಎಸೆತ ಇದೆ. ಮೂರನೇ ಬಾಲ್.. ಸಿ‌ಕ್ಸ್.. ಲಾಂಗ್ ಆನ್ ಮೇಲೆ! ನಾಲ್ಕನೇ ಬಾಲ್... ಮತ್ತೊಂದು ಸಿಕ್ಸ್. ಅದೇ ಲಾಂಗ್ ಆನ್ ಮೇಲೆ. ಐದನೇ ಬಾಲ್..? ಅದೇ ಥರದ ಬಾಲ್.. ಅದೇ ಥರದ ರಿಸಲ್ಟ್... ಲಾಂಗ್ ಆನ್ ಸಿಕ್ಸ್..! ಆರನೇ ಎಸೆತ.. ಆಫ್ ಸ್ಪಿನ್ ಬಾಲಿಗೆ ಲಾಂಗ್ ಆನ್ ಮೇಲೆ ಇನ್ನೊಂದು ಭರ್ಜರಿ ಸಿಕ್ಸರ್! ನನಗೇ ಅಷ್ಟು ಕೋಪ ಇತ್ತು, 87ರಲ್ಲಿ ತಂಡದ ನಾಯಕನಾಗಿದ್ದ ಕಪಿಲ್‌ಗೆ ಇನ್ನೆಷ್ಟು ಕೋಪ ಇದ್ದಿರಬೇಡ, ತಾನು ಅಂದು ಔಟ್ ಆದ ರೀತಿಯ ಬಗ್ಗೆ. ‌

ಕಪಿಲ್ ಅಕ್ಷರಶಃ ಎಂಬತ್ತೇಳರ ಸೇಡು ತೀರಿಸಿಕೊಂಡಿದ್ದ. ಕೇವಲ ನಾಲ್ಕೇ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮೂಲಕ ಫಾಲೋ ಆನ್ ತಪ್ಪಿಸಿದ್ದ. If u need 24 to save follow on.. why wudn't u get it in four deliveries..! Only Kapil Dev can do it... only Kapil Dev..! ಹೀಗಂತ ಕಾಮೆಂಟೇಟರ್ ಹೇಳುತ್ತಿದ್ದರೆ, ಲಾರ್ಡ್ಸ್ ಪೆವಿಲಿಯನ್ ಬಾಲ್ಕನಿಯಲ್ಲಿ ನಿಂತಿದ್ದ ಅಸಹಾಯಕ ಭಾರತ ತಂಡ ಕಪಿಲ್ ವೀರಾವೇಶ ಕಂಡು ಚಪ್ಪಾಳೆ ತಟ್ಟುತ್ತಾ ಇತ್ತು. ‌

ನೆನಪಿಸಿಕೊಳ್ಳುತ್ತಾ ಹೋದರೆ, ಕಪಿಲ್ ದೇವ್‌ನ ಇನ್ನಿಂಗ್ಸ್‌ಗಳು, ಆಕ್ರಮಣಕಾರಿ ಪ್ರವೃತ್ತಿ, ಕ್ರಿಕೆಟ್ ಮೈದಾನ ದಾಚೆಗಿನ ಆತನ ಪ್ರಾಮಾಣಿಕ ಮಾತಿನ ಸಂದರ್ಶನಗಳು, ಆತನೊಳಗಿನ ಭಾವುಕ ವ್ಯಕ್ತಿತ್ವ ಎಲ್ಲವೂ ರಾಶಿರಾಶಿ ಅಕ್ಷರವಾದಾವು. ಸುಖಾಸುಮ್ಮನೆ ಕಪಿಲ್ ದೇವ್‌ನನ್ನು ಆಸ್ಪತ್ರೆಗೆ ಸೇರಿಸಿದ ಆ ಫೇಸ್ಬುಕ್ ಜೀವಿಯನ್ನು ಶಪಿಸಬೇಕೋ ಅಥವಾ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳಲು ಕಾರಣನಾಗಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕೋ ಗೊತ್ತಿಲ್ಲ. ‌ಕಪಿಲ್ ದೇವ್‌ಗಂತೂ ಇನ್ನೆರಡು ದಶಕದಷ್ಟು ಆಯಸ್ಸು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ನವೀನ್‌ ಸಾಗರ್‌

View all posts by this author