ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಎಐ ಕಂಪನಿಗಳ ಪುಸ್ತಕ ದ್ರೋಹ !

ಎಐ ಕಂಪನಿಗಳು ಮೊದಲು ಎಐಯನ್ನು ತಯಾರು ಮಾಡಬೇಕು. ಅದಕ್ಕೆ ಅಗಾಧ ಪ್ರಮಾಣದ ಡೇಟಾ ಫೀಡ್ ಮಾಡಬೇಕು. ಬರಹ, ಆಡಿಯೋ, ವಿಡಿಯೋಗಳ ಮೂಲಕ ಇದು ಆಗುತ್ತದೆ. ಮೇಲೆ ಹೇಳಿದಂತೆ ಆದರೆ, ಒಳ್ಳೆಯ ಕಂಟೆಂಟ್ ಎಲ್ಲಿಂದ ಬರುತ್ತದೆ? ಕಳಪೆ ಕಂಟೆಂಟನ್ನು ನಂಬಿದರೆ ಬ್ರಾಂಡ್ ನಾಶ ಖಚಿತ. ಹಾಗಾದರೆ ಒರಿಜಿನಲ್ ಕಂಟೆಂಟ್ ತರುವುದು, ಗ್ರಾಹಕರನ್ನು ತೃಪ್ತಿಪಡಿಸು ವುದು ಹೇಗೆ? ಎಐ ಮಾದರಿ ಗಳಿಗೆ ತರಬೇತಿ ನೀಡಲು ಅಪಾರ ಪ್ರಮಾಣದ ಒರಿಜಿನಲ್, ಹಳೆಯ, ಉತ್ತಮ ಗುಣಮಟ್ಟದ ಪುಸ್ತಕಗಳ ಅಗತ್ಯ ಹೆಚ್ಚಿದೆ

ಕಾಡುದಾರಿ

ಎಐ ಬಗ್ಗೆ ನಮಗೆ ಹಲವು ಹಸಿಹಸೀ ಸುಳ್ಳುಗಳನ್ನು ಹೇಳಲಾಗುತ್ತಿದೆ. ಎಐ ಕಂಪನಿಗಳು ನಮಗೆ ತೋರಿಸುವ ಚಿತ್ರವೇ ಒಂದು, ಒಳಗಿರುವುದೇ ಬೇರೆ. ಗಮನಿಸಿದ್ದೀರಾ? ಒಂದು ವರ್ಷದ ಕೆಳಗೆ, ಎಐಯಿಂದ ಸಿಕ್ಕಾಪಟ್ಟೆ ಜಾಬ್ ಲಾಸ್ ಆಗುತ್ತದೆ ಎಂಬ ಸುದ್ದಿಗಳು ಬರುತ್ತಿದ್ದವು. ಈಗ ಅಂಥ ಸುದ್ದಿ ಒಂದೂ ಬರುತ್ತಿಲ್ಲ. ಕಾರಣ ಇಷ್ಟೆ- ಎಐ ಅಳವಡಿಕೆ ಮಾಡಲು ಹೋದ ಕೆಲವು ದೊಡ್ಡ ಕಂಪನಿಗಳು ಸಾವಿರಾರು ಸಿಬ್ಬಂದಿಯನ್ನು ಕೆಲಸದಿಂದ ತೆಗೆದವು. ಆದರೆ ಎಐ ಮೂಲಸೌಕರ್ಯ, ನಿರ್ವಹಣೆ, ಅದರ ತರಬೇತಿಗೆ ಆಗುವ ಖರ್ಚು ಈ ಕಂಪನಿಗಳ ಬುಡವನ್ನೇ ಚರ್ಮಸಮೇತ ಕೆತ್ತಿ ಹಾಕಿತು.

ಹೌಹಾರಿದ ಕಂಪನಿಗಳು ತಾವು ತೆಗೆದ ಸಿಬ್ಬಂದಿಯನ್ನೇ ಮತ್ತೆ ಕರೆಸಿಕೊಂಡವು. ಆದರೆ ಇಂಥ ಚಿತ್ರಣಗಳನ್ನು ಈ ಕಂಪನಿಗಳು ಮೆತ್ತಗೆ ಮರೆಮಾಚುತ್ತವೆ. ಎಐ ಕಂಪನಿಗಳ ದಗಲ್‌ಬಾಜಿತನಕ್ಕೆ ಇನ್ನೊಂದು ದೊಡ್ಡ ಉದಾಹರಣೆ ಇದೆ. ಅದರ ಕುರಿತು ಈಗ ಮಾತಾಡೋಣ.

ಇದು ಲೇಖಕರಿಗೆ, ಸಾಹಿತಿಗಳಿಗೆ, ಡಿಜಿಟಲ್ ಕ್ರಿಯೇಟರ್‌ಗಳಿಗೆ ಹೆಚ್ಚು ಲಗತ್ತಾಗುವಂಥದ್ದು. ನಾವು ಎಐ ಬಳಸಿ ಯಾವುದೋ ಲೇಖನ ಬರೆಯುತ್ತೇವೆ ಎಂದುಕೊಳ್ಳೋಣ. ಅದನ್ನು ಮತ್ತೆ ಇಂಟರ್‌ ನೆಟ್‌ಗೆ ಫೀಡ್ ಮಾಡಲಾಗುತ್ತದೆ. ಆ ವಿಷಯದಲ್ಲಿ ಇನ್ಯಾರೋ ಸರ್ಚ್ ಮಾಡುತ್ತಾರೆ ಅಥವಾ ಎಐ ಸಹಾಯ ಕೇಳುತ್ತಾರೆ. ಆಗ ಎಐ ಅಥವಾ ಸರ್ಚ್ ಇಂಜಿನ್ ನಿಮ್ಮ ಲೇಖನದ ಆಧಾರವನ್ನೇ ಪಡೆದು ಇನ್ನೊಂದನ್ನು ಸೃಷ್ಟಿಸಿ ಕೊಡುತ್ತೆ. ಹೀಗೇ ಮುಂದುವರಿಯುತ್ತಾ ಒಂದು ಫೀಡ್‌ಬ್ಯಾಕ್ ಲೂಪ್ ಸೃಷ್ಟಿಯಾಗುತ್ತದೆ. ಇಂಟರ್‌ನೆಟ್ ಪೂರ್ತಿ ಇಂಥ ಕಳಪೆ, ಸೆಕೆಂಡ್‌ಹ್ಯಾಂಡ್ ಮಾಹಿತಿಯೇ ತುಂಬಿಕೊಂಡು, ಮಾಡೆಲ್ ಕೊಲ್ಯಾಪ್ಸ್ ಆಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Harish Kera Column: ಒಂದಕ್ಕೊಂದು ಸಂಬಂಧ ಇಲ್ಲದ 7 ಟಿಪ್ಪಣಿಗಳು

ಎಐ ಕಂಪನಿಗಳು ಮೊದಲು ಎಐಯನ್ನು ತಯಾರು ಮಾಡಬೇಕು. ಅದಕ್ಕೆ ಅಗಾಧ ಪ್ರಮಾಣದ ಡೇಟಾ ಫೀಡ್ ಮಾಡಬೇಕು. ಬರಹ, ಆಡಿಯೋ, ವಿಡಿಯೋಗಳ ಮೂಲಕ ಇದು ಆಗುತ್ತದೆ. ಮೇಲೆ ಹೇಳಿದಂತೆ ಆದರೆ, ಒಳ್ಳೆಯ ಕಂಟೆಂಟ್ ಎಲ್ಲಿಂದ ಬರುತ್ತದೆ? ಕಳಪೆ ಕಂಟೆಂಟನ್ನು ನಂಬಿದರೆ ಬ್ರಾಂಡ್ ನಾಶ ಖಚಿತ. ಹಾಗಾದರೆ ಒರಿಜಿನಲ್ ಕಂಟೆಂಟ್ ತರುವುದು, ಗ್ರಾಹಕರನ್ನು ತೃಪ್ತಿಪಡಿಸು ವುದು ಹೇಗೆ? ಎಐ ಮಾದರಿಗಳಿಗೆ ತರಬೇತಿ ನೀಡಲು ಅಪಾರ ಪ್ರಮಾಣದ ಒರಿಜಿನಲ್, ಹಳೆಯ, ಉತ್ತಮ ಗುಣಮಟ್ಟದ ಪುಸ್ತಕಗಳ ಅಗತ್ಯ ಹೆಚ್ಚಿದೆ. ಅವೂ ಕೂಡ 2023ರ ಮೊದಲಿನವೇ ಆಗಬೇಕು. ಯಾಕೆಂದರೆ ಆ ನಂತರ ಬಂದ ಪುಸ್ತಕಗಳಲ್ಲಿ ಎಐ ಕೈವಾಡ ಇರುವ ಸಾಧ್ಯತೆ ಇದೆ.

ಒಳ್ಳೆಯ ಪುಸ್ತಕಗಳಾದರೆ ಕಾಪಿರೈಟ್, ಗೌರವಧನ ಸಮಸ್ಯೆ. ಕ್ಲಾಡ್ ಎಐಯನ್ನು ನಡೆಸುವ ಆಂಥ್ರೋ ಪಿಕ್ ಕಂಪನಿ ಇದಕ್ಕೊಂದು ಸುಲಭ ಪರಿಹಾರ ಕಂಡುಕೊಳ್ಳಲು ಹೋಗಿ ಈಗ ಸಿಕ್ಕಿಬಿದ್ದಿದೆ. ಅದು ಅಪರೂಪದ ಹಾಗೂ ಹಳೆಯ ಪುಸ್ತಕಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದೆ. ನಂತರ ಆ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡೇಟಾ ಫೀಡ್ ಮಾಡಿಕೊಂಡಿದೆ. ಸ್ಕ್ಯಾನ್ ಮಾಡಲು ಸುಲಭವಾಗ ಲೆಂದು ಪುಸ್ತಕಗಳ ರಟ್ಟು ಕತ್ತರಿಸಿ, ಕೆಲಸ ಮುಗಿದ ಬಳಿಕ ಆ ಪುಸ್ತಕಗಳನ್ನೆಲ್ಲ ನಾಶ ಮಾಡಿದೆ, ಮಾಡುತ್ತಿದೆ. '

ಇದಕ್ಕಾಗಿ ಆ ಕಂಪನಿ ಮಾಡಿಕೊಂಡು ದೊಡ್ಡ ಗೋದಾಮುಗಳೇ ಪತ್ತೆಯಾಗಿವೆ. ಈ ಯೋಜನೆಗೆ ಅದು ’ಪ್ರಾಜೆಕ್ಟ್ ಪನಾಮಾ’ ಎಂದು ಹೆಸರಿಟ್ಟಿದೆ. ಇದು ನ್ಯಾಯಾಲಯದಲ್ಲಿ ಬಹಿರಂಗವಾಗಿದೆ. ಸರಿ, ಇದರಿಂದ ಸಮಸ್ಯೆ ಏನು ಎಂಬ ಪ್ರಶ್ನೆಯಲ್ಲವೇ? ಮೊದಲ ಪ್ರಶ್ನೆ, ಪುಸ್ತಕಗಳನ್ನು ಎಐ ತರಬೇತಿಗೆ ಬಳಸಬಹುದಾ? ಈ ಬಗ್ಗೆ ಲೇಖಕರು ಮತ್ತು ಪ್ರಕಾಶಕರು ಹಲವು ಕಂಪನಿಗಳ ವಿರುದ್ಧ ಇನ್ನೂ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಹಾಗೆ ಬಳಸುವುದಾದರೆ ಹಕ್ಕುಸ್ವಾಮ್ಯ ಉಳ್ಳವರಿಂದ ಖರೀದಿ ಮಾಡಿ, ಗೌರವಧನ ಕೊಡಬೇಕು. ಕಂಪನಿಗಳು ಅದನ್ನು ಮಾಡಿಲ್ಲ. ಉದಾಹರಣೆಗೆ ಜೆಮಿನಿ ಎಐ ತರಬೇತಿಗೆ ಗೂಗಲ್ ಸಂಸ್ಥೆ ತಮ್ಮ ಪುಸ್ತಕ ಬಳಸಿದೆ ಅಂತ ಹ್ಯಾಚೆಟ್ ಮೊದಲಾದ ಪ್ರಕಾಶನಗಳು ಕೋರ್ಟ್‌ಗೆ ಹೋಗಿವೆ.

71_R

ಮೆಟಾ ವಿರುದ್ಧವೂ ಹ್ಯಾಚೆಟ್ ಸಮರ ಸಾರಿದೆ. ಈಗ ಆಂಥ್ರೋಪಿಕ್ ತಗಾದೆಯಲ್ಲಿ, ಎಐ ತರಬೇತಿಗೆ ಪುಸ್ತಕಗಳನ್ನು ಬಳಸುವುದು ಓಕೆ, ಆದರೆ ಪೈರಸಿ ಕೂಡದು ಎಂದು ಕೋರ್ಟ್ ಹೇಳಿದೆ. ನಿಲ್ಲಿ, ಇಲ್ಲಿಗೆ ಸಮಸ್ಯೆ ಮುಗಿಯಲಿಲ್ಲ. ಒಂದು ಪುಸ್ತಕದ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ಉಳಿಸುವುದು ಓಕೆ. ಆದರೆ ಅದರ ಏಕೈಕ ಭೌತಿಕ ಪ್ರತಿಯನ್ನೇ ನಾಶ ಮಾಡುವುದು ಸರಿಯೇ? ಇದು ಮುಖ್ಯ ಪ್ರಶ್ನೆ. ಎಲ್ಲ ಕಡೆ ಸಿಗುವ, ಬೆಸ್ಟ್ ಸೆಲ್ಲರ್ ಅನಿಸಿದ, ಇತ್ತೀಚಿನ ಪುಸ್ತಕಗಳಿಗೆ ಸಮಸ್ಯೆಯಿಲ್ಲ. ಆದರೆ ಅಪರೂಪದ, ಹಲವು ವರ್ಷ ಹಿಂದಿನ, ಶತಮಾನ ಹಿಂದಿನ, ಈಗ ಎಲ್ಲೂ ಸಿಗದ, ಕೆಲವೇ ಕಡೆ ಉಳಿದುಕೊಂಡ ಪುಸ್ತಕಗಳಾದರೆ? ಆಗ ಆ ಪುಸ್ತಕದ ಅಮೂಲ್ಯ ಜ್ಞಾನ ಆ ಕಂಪನಿ ವಶವಾಗುತ್ತದೆ.

ಅದನ್ನು ಬಳಸಲು ನೀವು ಮತ್ತೆ ಆ ಕಂಪನಿಗೆ ಹಣ ತೆತ್ತಬೇಕಾಗುತ್ತದೆ. ಒಂದು ಪುಸ್ತಕವನ್ನು ಸ್ಕ್ಯಾನ್ ಮಾಡಿ ಅದರ ಜ್ಞಾನವನ್ನು ಡಿಜಿಟಲ್ ರೂಪಕ್ಕೆ ತರುವುದು ಓಕೆ. ಅದು ಈಗ ಕನ್ನಡ ದಲ್ಲೂ ನಡೆಯುತ್ತಿದೆ. ಕುಮಾರವ್ಯಾಸ ಭಾರತ, ವಚನಗಳನ್ನೆಲ್ಲ ಡಿಜಿಟಲೀಕರಣ ಮಾಡಿ ಎಲ್ಲರಿಗೂ ಸಿಗುವಂತೆ ಮಾಡಲಾಗಿದೆ. ಆದರೆ ವಚನಗಳ ಪುಸ್ತಕಗಳೇ ಸಿಗದೆ, ಡಿಜಿಟಲ್ ಆರ್ಕೈವ್ ಕೂಡ ಇಂಟರ್‌ನೆಟ್‌ನಲ್ಲಿ ಉಳಿಯದೆ, ಅದು ಎಐ ಪಾಲಾಗಿದ್ದರೆ ಏನು ಪರಿಸ್ಥಿತಿ ಎಂದು ಊಹಿಸಿ ಕೊಳ್ಳಿ. ಮೂಲ ಪುಸ್ತಕವನ್ನು ನಾಶ ಮಾಡುವುದು ಸಾಂಸ್ಕೃತಿಕ ನಷ್ಟ. ಮುಂದೆ ಅದೇ ಜ್ಞಾನವನ್ನು ಪಡೆಯಲು ನಾವು ಎಐ ಸೇವೆಯ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಇನ್ನೊಂದು ಮಜಾ ಸಂಗತಿ ಇದೆ. ಈಗ ಕೃತಕ ಬುದ್ಧಿಮತ್ತೆಯೇ ನಾಯಿ ಮರಿಯಿಟ್ಟಂತೆ ಸಾವಿರಾರು ಹೊಸ ಪುಸ್ತಕ ಗಳನ್ನು ಸೃಜಿಸುತ್ತಿದೆ.

2026ರ ಒಂದು ಅಧ್ಯಯನ ನೀಡಿದ ಮಾಹಿತಿ ಇದು. ಅಮೆಜಾನ್ ಆನ್‌ಲೈನ್ ಸೈಟ್‌ನಲ್ಲಿ 2023ರಿಂದ 2026ರವರೆಗೆ ಪ್ರಕಟವಾದ 14419 ಸ್ವಂತ ಪ್ರಕಾಶಿತ ಫಿಕ್ಷನ್ ಮತ್ತಿತರ ಕೆಲವು ಪ್ರಕಾರಗಳ ಪುಸ್ತಕ ಗಳನ್ನು ಪರಿಶೀಲಿಸಿದಾಗ ಎಐ ರಚಿಸಿದ ಬರಹ ಹೊಂದಿರುವ ಪುಸ್ತಕಗಳ ಸಂಖ್ಯೆ ಸಿಕ್ಕಾಪಟ್ಟೆ ಸಂಖ್ಯೆಯಲ್ಲಿರುವುದು ಗೊತ್ತಾಗಿದೆ. ಅಂಥ ಪುಸ್ತಕಗಳ ಮಾರಾಟವೂ ಹೆಚ್ಚಿದೆ.

ಹೊಸ ಓದುಗರಿಗೆ ಇದರ ಕಳಪೆತನ ಗೊತ್ತಾಗುವುದಿಲ್ಲ. ಅವರು ಅದನ್ನೇ ಅಧಿಕೃತ, ಅತ್ಯುತ್ತಮ ಎಂದು ನಂಬುವ ಸಾಧ್ಯತೆ ಇದೆ. ಕನ್ನಡದಲ್ಲೂ ಇವು ಬರತೊಡಗಿವೆ. ಅನುವಾದವನ್ನಂತೂ ಎಐ ಬಹುತೇಕ ಸಮರ್ಪಕವಾಗಿ ಮಾಡುತ್ತದೆ. ಅದರಲ್ಲಿ ರಸವಿಲ್ಲ, ಸ್ವಾರಸ್ಯವಿಲ್ಲ ಎಂಬುದನ್ನು ಬಿಟ್ಟರೆ, ಓದಲು ಓಕೆ ಓಕೆ ಎಂಬಂತಿದೆ. ಖರ್ಚೂ ಕಡಿಮೆ. ಅನುವಾದಕರಿಗೆ ಕೊಡುವ ದುಡ್ಡು ಉಳಿಯಿತಲ್ಲ!

ಈ ಅಪಾಯ ತಪ್ಪಿಸುವುದು ಹೇಗೆ? ಪುಸ್ತಕದ ಡಿಜಿಟಲ್ ಪ್ರತಿಯ ಜೊತೆಗೆ ಮೂಲ ಪ್ರತಿಯನ್ನೂ ಉಳಿಸಬೇಕು. ಅಪರೂಪದ ಪುಸ್ತಕವನ್ನು ಸ್ಕ್ಯಾನ್ ಮಾಡಿದ ನಂತರ ಮೂಲ ಪ್ರತಿಯನ್ನು ನಾಶಪಡಿಸುವ ಪದ್ಧತಿ ಅಪಾಯಕಾರಿ. ಏಕೈಕ ಅಥವಾ ಅಪರೂಪದ ಪ್ರತಿಗಳಿದ್ದರೆ ಅವುಗಳನ್ನು ಗ್ರಂಥಾಲಯ, ವಿಶ್ವವಿದ್ಯಾಲಯ, ಆರ್ಕೈವ್‌ಗಳಲ್ಲಿ ಭೌತಿಕವಾಗಿ ಸಂರಕ್ಷಿಸುವ ನಿಯಮ ಬರಬೇಕು. ಆದರೆ ಇದನ್ನು ಯಾರು, ಎಲ್ಲಿಂದ ಶುರು ಮಾಡಬೇಕೋ ಗೊತ್ತಿಲ್ಲ.

ಅಧಿಕಾರ, ಯುದ್ಧಗಳ ನಡುವೆ ಬೇಕಾರ್ ಆಗಿರುವ ರಾಜಕಾರಣಿಗಳಿಂದ ಇದನ್ನು ನಿರೀಕ್ಷಿಸು ವಂತಿಲ್ಲ. ಭಾರತದಲ್ಲಿ ಏನಾಗುತ್ತಿದೆ? ಎಐಗೆ ಹಕ್ಕುಸ್ವಾಮ್ಯದ ಕೃತಿಗಳನ್ನು ತರಬೇತಿಗೆ ಬಳಸಬಹುದೇ ಎಂಬ ಪ್ರಶ್ನೆ ಇನ್ನೂ ಕಾನೂನು ಮತ್ತು ನೀತಿ ಮಟ್ಟದಲ್ಲಿ ಚರ್ಚೆಯಲ್ಲಿದೆ. 2026ರ ಜುಲೈ 24ರಂದು ದೆಹಲಿ ಹೈಕೋರ್ಟ್, ಎಎನ್‌ಐ ಮತ್ತು ಓಪನ್‌ಎಐ ಪ್ರಕರಣದಲ್ಲಿ, ಓಪನ್‌ಎಐ, ಎಎನ್‌ಐಯ ಕಾಪಿರೈಟ್ ಉಲ್ಲಂಸಿದೆ ಎಂದು ಸಾಬೀತಾಗಿಲ್ಲ ಎಂದು ತೀರ್ಪು ನೀಡಿತು.

ಎಐ ತರಬೇತಿ ಬಳಕೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ಆದರೆ ಇದು ಎಲ್ಲ ರೀತಿಯ ಪುಸ್ತಕಗಳೂ ಎಐ ಬಳಕೆಗೆ ಸೈ ಎಂಬ ಅಂತಿಮ ಅನುಮತಿ ಅಲ್ಲ. ಭಾರತ ಸರಕಾರದ ಎಐ ಗವರ್ನೆನ್ಸ್ ಗೈಡ್‌ಲೈನ್ಸ್ ಕೂಡ, ಎಐ ತರಬೇತಿಯಲ್ಲಿ ಕಾಪಿರೈಟ್ ವಿಷಯ ಇನ್ನೂ ಬಗೆಹರಿಯದ ಪ್ರಮುಖ ಪ್ರಶ್ನೆ ಎಂದಿದೆ. ಕನ್ನಡದಂಥ ಸ್ಥಳೀಯ, ಹಳೆಯ ಭಾಷೆಗಳ ವಿಷಯದಲ್ಲಿ ಇದಕ್ಕೆ ಇನ್ನೂ ಸೂಕ್ಷ್ಮವಾದ ಆಯಾಮಗಳಿವೆ.

ಇಲ್ಲಿ ಸಾವಿರಾರು ಹಳೆಯ ಕಾದಂಬರಿಗಳು, ಕವನ ಸಂಕಲನಗಳು, ಕಥೆಗಳು, ನಾಟಕಗಳು, ಜಾನಪದ ಕೃತಿಗಳು, ಸಂಶೋಧನಾ ಗ್ರಂಥಗಳು ಮತ್ತು ಪತ್ರಿಕೆಗಳ ಹಳೆಯ ಸಂಚಿಕೆಗಳಿವೆ. ಇವುಗಳಲ್ಲಿ ಬಹಳಷ್ಟು ಡಿಜಿಟಲ್ ರೂಪದಲ್ಲಿಲ್ಲ. ಕೆಲವೇ ಕೆಲವು ಮುದ್ರಿತ ಪ್ರತಿಗಳು ಉಳಿದಿರ ಬಹುದು. ಕೆಲವು ಪುಸ್ತಕಗಳು ಮರುಮುದ್ರಣವಾಗುತ್ತಿಲ್ಲ. ಕೆಲವು ಲೇಖಕರ ಹಕ್ಕುಸ್ವಾಮ್ಯ ಯಾರ ಬಳಿ ಇದೆ ಎಂಬುದೂ ಸ್ಪಷ್ಟವಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ಡಿಜಿಟಲ್ ಲೈಬ್ರರಿಯಲ್ಲಿ ಕನ್ನಡ ಕೃತಿಗಳ ಡಿಜಿಟಲ್ ಗ್ರಂಥಾಲಯಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಅದು ಸಾರ್ವಜನಿಕರಿಗೆ ಸುಲಭ ಲಭ್ಯ.

ಒಂದು ಅಪರೂಪದ ಕನ್ನಡ ಪುಸ್ತಕವನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಉಳಿಸುವುದು ಒಳ್ಳೆಯದು. ಆದರೆ ಅದೇ ಡಿಜಿಟಲ್ ಡೇಟಾವನ್ನು ಖಾಸಗಿ ಎಐ ಮಾದರಿಗಳು ತರಬೇತಿಗೆ ಬಳಸಿಕೊಂಡು, ಮುಂದೆ ಆ eನವನ್ನು ಪಡೆಯಲು ಜನರು ಆ ಎಐ ಸೇವೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಬಂದರೆ ಅದು ಮತ್ತೊಂದು ರೀತಿಯ ಜ್ಞಾನ ಏಕಸ್ವಾಮ್ಯ.

ಹಾಗೆಯೇ ನಾಳೆ ಇಂಟರ್‌ನೆಟ್‌ನಲ್ಲಿ ನಿಜವಾದ ಕನ್ನಡ ಲೇಖಕರ ಬರಹಕ್ಕಿಂತ ಎಐ ಸೃಷ್ಟಿಸಿದ ಕನ್ನಡ ಬರಹವೇ ಹೆಚ್ಚಾದರೆ, ಮುಂದಿನ ಎಐ ಮಾದರಿಗಳು ಆ ಎಐ ಜನರೇಟೆಡ್ ಕನ್ನಡವನ್ನೇ ಮತ್ತೆ ಕಲಿಯುವ ಸಾಧ್ಯತೆ ಇದೆ. ಇದೇ ಲೂಪ್. ಇದರಿಂದ ಕನ್ನಡ ಭಾಷೆಯ ಸಹಜ ಶೈಲಿ, ಪ್ರಾದೇಶಿಕ ಪದಗಳು, ಹಳೆಯ ಪದಪ್ರಯೋಗಗಳು, ಜನಪದ ಜ್ಞಾನ, ಸಾಹಿತ್ಯದ ವೈವಿಧ್ಯ ನಿಧಾನ ವಾಗಿ ಮಸುಕಾಗುವ ಅಪಾಯವಿದೆ.

ಹಾಗಾಗಿ, ಆಗಬೇಕಾದ ಕೆಲಸ ಅಂದರೆ, ಕನ್ನಡದ ಅಪರೂಪದ ಪುಸ್ತಕಗಳ ದೊಡ್ಡ ಸಾರ್ವಜನಿಕ ಡಿಜಿಟಲ್ ಆರ್ಕೈವ್ ನಿರ್ಮಿಸಬೇಕು. ಪ್ರತಿ ಕೃತಿಯ ಲೇಖಕ, ಪ್ರಕಾಶಕ, ಕಾಪಿರೈಟ್ ವಿಚಾರ, ಡಿಜಿಟಲ್ ಹಕ್ಕುಗಳೆಲ್ಲ ಸ್ಪಷ್ಟವಾಗಿ ನಮೂದಾಗಬೇಕು. ಎಐ ತರಬೇತಿಗೆ ಬಳಸುವ ಮೊದಲು ಲೇಖಕರ/ ಹಕ್ಕುದಾರರ ಅನುಮತಿಯ ವ್ಯವಸ್ಥೆ ಇರಬೇಕು. ಅವರಿಗೆ ಸೂಕ್ತ ಗೌರವಧನದ ವ್ಯವಸ್ಥೆ ಇರಬೇಕು. ಹಳೆಯ ಪುಸ್ತಕ ಗಳನ್ನು ಕೇವಲ ಎಐಗೆ ಡೇಟಾ ಎಂದು ನೋಡಬಾರದು.

ಅದು ಯಾವ ಭಾಷೆಗಾದರೂ ಸೈ. ಯಾಕೆಂದರೆ ಶ್ರೇಷ್ಠ ಪುಸ್ತಕಗಳು ನಮ್ಮ ಸಾಂಸ್ಕೃತಿಕ ಸ್ಮೃತಿ. ಲಾರೆನ್ಸ್ ಲಿಯಾಂಗ್ ಎಂಬ ಲೇಖಕ ಈ ಬಗ್ಗೆ ಒಂದು ಲೇಖನ ಬರೆಯುತ್ತ ಅದರಲ್ಲಿ ಒಂದು ಕತೆ ಉಲ್ಲೇಖಿಸಿದ್ದಾರೆ. ಒಂದು ಹಳೆಯ ಲೈಬ್ರರಿಯೊಂದಕ್ಕೆ, ಒಬ್ಬ ಸಂಶೋಧಕ ಹೋಗುತ್ತಾನೆ. ಅವನಿಗೆ ಅತೀ ಅಪರೂಪದ ಪುಸ್ತಕವೊಂದರ ಅಗತ್ಯವಿದೆ. ನೋಡಿದರೆ ಅಚ್ಚರಿ. ಆ ಪುಸ್ತಕ ಲೈಬ್ರರಿಯ ಲ್ಲೇನೋ ಇದೆ. ಆದರೆ ಕಳೆದ 50 ವರ್ಷಗಳಿಂದ ಯಾರೂ ಅದನ್ನು ಓದಲು ಕೊಂಡುಹೋಗಿಲ್ಲ.

‘ಆಷ್ಟು ವರ್ಷಗಳಿಂದ ಯಾರೂ ಒಯ್ದಿಲ್ಲ ಅಂದ್ರೆ ಆ ಪುಸ್ತಕ ಇಲ್ಲಿ ಯಾರಿಗಾಗಿ ಇದೆ?’ ಎಂದು ಸಂಶೋಧಕ ಪ್ರಶ್ನಿಸಿದ. ಲೈಬ್ರೇರಿಯನ್ ಉತ್ತರಿಸಿದ, ’ಯಾಕೆ, ನೀವು ಬಂದಿಲ್ಲವೇ?’. ಎಲ್ಲ ಪುಸ್ತಕಗಳಿಗೂ ಒಬ್ಬ ಓದುಗ ಇರುತ್ತಾನೆ. ಅವನು ಎಂದೋ ಬರಬಹುದು. ಆದರೆ ಅದನ್ನು ನಾಶಪಡಿಸಿದರೆ, ಅದನ್ನು ಶಾಶ್ವತವಾಗಿ ಅವನಿಂದ ಕಸಿದುಕೊಂಡ ಹಾಗೆ. ಹಿಂದೆ ಪ್ರಭುತ್ವಗಳು ತಮಗಾಗದವರ ಪುಸ್ತಕಗಳನ್ನು ಸುಡುತ್ತಿದ್ದವು. ಆದರೆ ಇದೆಲ್ಲವನ್ನೂ ಮೀರಿ ಒಂದಾದರೂ ಪುಸ್ತಕ ಎಲ್ಲೋ ಉಳಿದಿರುತ್ತದೆ ಎಂಬುದು ಮಾನವತೆಯ ಆಶೆ, ಭರವಸೆ.

ಹರೀಶ್‌ ಕೇರ

View all posts by this author