Dr D C Nanjunda Column: ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಪೈಪೋಟಿ ನಿಂತಿಲ್ಲ !
ವಿಶ್ವವಿದ್ಯಾಲಯಗಳಲ್ಲಿ ಲೆಕ್ಕಪತ್ರದ ಪಾರದರ್ಶಕತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಮೌಲ್ಯಾಧಾರಿತ ನೇಮ ಕಾತಿ ಪ್ರಕ್ರಿಯೆ ಮೂಲೆಗುಂಪಾಗಿವೆ. ಕುಲಪತಿಗಳ/ ಕುಲಸಚಿವರ ಆಯ್ಕೆ ಪಾರದರ್ಶಕವಾಗಿಲ್ಲ, ಅರ್ಹತೆಯ ಆಧಾರಿತವಾಗಿಲ್ಲ. ಇಲ್ಲಿ ಜಾತಿಯದೇ ಮೇಲಾಟ. ಪಾರದರ್ಶಕ ಸಮಿತಿಗಳು, ಸಾರ್ವಜನಿಕ ಚರ್ಚೆಗಳು ಮತ್ತು ಶೈಕ್ಷಣಿಕ ಸಾಧನೆ ಆಧಾರಿತ ಶಿಫಾರಸು ಪ್ರಕ್ರಿಯೆಗಳನ್ನು ವ್ಯವಸ್ಥೆ ರೂಪಿಸಿಲ್ಲ.


ಒಡಲಾಳ
ಡಾ.ಡಿ.ಸಿ.ನಂಜುಂಡ
ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ಸರಕಾರದಿಂದ ಅಥವಾ ಕೆಲವು ಸ್ವಾಯತ್ತ ಸಂಸ್ಥೆ ಗಳಿಂದ ನಿರ್ದಿಷ್ಟ ಅನುದಾನ ಪಡೆಯುತ್ತವೆ. ಆದರೆ ಈ ಅನುದಾನದಿಂದ ಬಹುತೇಕ ವಿ.ವಿ. ಗಳ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಪೂರೈಸಲು ಅಸಾಧ್ಯವಾಗುತ್ತದೆ. ಹೆಚ್ಚಿನ ವಿ.ವಿ. ಗಳಲ್ಲಿ ಅನುದಾನ ಕಡಿಮೆ ಯಾಗಿ, ಸಂಶೋಧನೆ, ಅಂತಾರಾಷ್ಟ್ರೀಯ ಸಹಕಾರ, ಡಿಜಿಟಲ್ ಶಿಕ್ಷಣ ಮಾದರಿಗಳ ಅನುಷ್ಠಾನ ನಿಂತು ಹೋಗಿದೆ. ಹಾಸ್ಟೆಲ್‌ಗಳಲ್ಲಿ ಉತ್ತಮ ಆಹಾರವಿಲ್ಲ, ಶೌಚಾಲಯಗಳಿಲ್ಲದ ಕಾಲೇಜುಗಳು ಮತ್ತು ಬೋಧಕರ ಸಂಶೋಧನೆಗೆ ಹಣವಿಲ್ಲದಿರು ವುದು ಸಾಮಾನ್ಯ ದೃಶ್ಯವಾಗಿವೆ.
ಇತ್ತೀಚಿನ ದಿನಗಳಲ್ಲಿ ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಚಿತ್ರ ಪರಿಸ್ಥಿತಿ ಕಂಡು ಬರುತ್ತಿದೆ. ಭಾರತದಲ್ಲಿ 1500ಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳು, 55000ಕ್ಕೂ ಹೆಚ್ಚು ಪದವಿ ಹಾಗೂ ಇತರೆ ಕಾಲೇಜುಗಳು ಇದ್ದರೂ, ಅವುಗಳಲ್ಲಿ ಬಹುಪಾಲು ಬಡವಾಗಿವೆ. ಬಹುತೇಕ ವಿಶ್ವವಿದ್ಯಾಲಯಗಳು ಆರ್ಥಿಕ ಕೊರತೆಯಿಂದ ತೀವ್ರವಾಗಿ ಬಳಲುತ್ತಿವೆ.
ನೂತನ ಪಠ್ಯಕ್ರಮ ರೂಪಿಸುವುದು, ಸಂಶೋಧನಾ ಕಾರ್ಯಗಳಿಗೆ ಅನುದಾನ ಒದಗಿಸುವುದು, ಪ್ರಯೋಗಾಲಯದ ಅಭಿವೃದ್ಧಿ, ಗ್ರಂಥಾಲಯಗಳು, ಹಾಸ್ಟೆಲ್ ಮತ್ತು ಶೌಚಾಲಯ ಸೌಲಭ್ಯಗಳು ಮುಂತಾದ ಮೂಲಭೂತ ಕಾರ್ಯಗಳು ಎಲ್ಲವೂ ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಆದರೆ ಇದೇ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ಕುಲಪತಿಗಳ ಹುದ್ದೆಗೆ ಮಾತ್ರ ತೀವ್ರ ಸ್ಪರ್ಧೆ ನಡೆಯು ತ್ತಿರುವುದು ಅತ್ಯಂತ ಕುತೂಹಲ ಕೆರಳಿಸುವ ಮತ್ತು ಪ್ರಶ್ನೆ ಎಬ್ಬಿಸುವ ಸಂಗತಿಯಾಗಿದೆ.
ಕೆಲವು ವಿ.ವಿ.ಗಳಲ್ಲಿ ಹಾಲಿ ಕುಲಪತಿಯ ಅಧಿಕಾರಾವಧಿ ಎರಡು ವರ್ಷ ಇದ್ದರೂ ಈಗಿನಿಂದಲೇ ಇಂತಿಷ್ಟು ಹಣ ನೀಡಿ ಕಾದಿರಿಸುವ ಪದ್ಧತಿಯು ಶಿಕ್ಷಣ ವಲಯದಲ್ಲಿ ಕಂಡುಬರುತ್ತಿದೆ. ಕುಲಪತಿ ಗಳು ಶುದ್ಧಹಸ್ತರಾಗಿರದಿದ್ದರೆ ವಿ.ವಿ.ಗಳನ್ನು ಕಾಪಾಡುವುದು ಯಾರು? ಸಾಮಾನ್ಯವಾಗಿ ವಿಶ್ವ ವಿದ್ಯಾಲಯಗಳು ಸರಕಾರದಿಂದ ಅಥವಾ ಕೆಲವು ಸ್ವಾಯತ್ತ ಸಂಸ್ಥೆಗಳಿಂದ ನಿರ್ದಿಷ್ಟ ಅನುದಾನ ಪಡೆಯುತ್ತವೆ.
ಆದರೆ ಈ ಅನುದಾನದಿಂದ ಬಹುತೇಕ ವಿ.ವಿ.ಗಳ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಪೂರೈಸಲು ಅಸಾಧ್ಯವಾಗುತ್ತದೆ. ಹೆಚ್ಚಿನ ವಿ.ವಿ.ಗಳಲ್ಲಿ ಅನುದಾನ ಕಡಿಮೆಯಾಗಿ, ಸಂಶೋಧನೆ, ಅಂತಾ ರಾಷ್ಟ್ರೀಯ ಸಹಕಾರ, ಡಿಜಿಟಲ್ ಶಿಕ್ಷಣ ಮಾದರಿಗಳ ಅನುಷ್ಠಾನ ನಿಂತುಹೋಗಿದೆ. ಹಾಸ್ಟೆಲ್ ಗಳಲ್ಲಿ ಉತ್ತಮ ಆಹಾರವಿಲ್ಲ, ಶೌಚಾಲಯಗಳಿಲ್ಲದ ಕಾಲೇಜುಗಳು ಮತ್ತು ಬೋಧಕರ ಸಂಶೋ ಧನೆಗೆ ಹಣವಿಲ್ಲದಿರುವುದು ಸಾಮಾನ್ಯ ದೃಶ್ಯವಾಗಿವೆ.
ಇದನ್ನೂ ಓದಿ: Yagati Raghu Naadig Column: ಪೈಲಟ್-ಗೆಹ್ಲೋಟ್ ಕಾಳಗ
ಹೀಗೆ ಆರ್ಥಿಕವಾಗಿ ಹಿನ್ನಡೆಯಾದ ಶೈಕ್ಷಣಿಕ ಸಂಸ್ಥೆಗಳ ಆಡಳಿತದ ಹೊಣೆ ಹೊತ್ತುಕೊಳ್ಳುವ ಕುಲಪತಿಗಳ ಸ್ಥಾನಕ್ಕೆ ಮಾತ್ರ ಭಾರಿ ಆಸಕ್ತಿ ಯಾಕೆ? ಎಂಬ ಪ್ರಶ್ನೆ ಉದಯಿಸುತ್ತದೆ. ಕಾರಣ ಸ್ಪಷ್ಟ ವಾಗಿದೆ- ಈ ಹುದ್ದೆಯು ಕೇವಲ ‘ಶೈಕ್ಷಣಿಕ ನಾಯಕರ’ ಸ್ಥಾನವಲ್ಲ, ಇದು ರಾಜಕೀಯ ಪ್ರಭಾವ, ನಿರ್ವಹಣಾತ್ಮಕ ಅಧಿಕಾರ, ಸಾಮಾಜಿಕ ಗಂಭೀರತೆ ಮತ್ತು ಗುಪ್ತ ಹಿತಾಸಕ್ತಿಗಳ ಜಾಲದಿಂದ ಕೂಡಿದೆ. ಅಲ್ಲದೇ ಕುಲಸಚಿವರ ಹುದ್ದೆಗೂ ಈಗ ಪೈಪೋಟಿ ನಡೆಯುತ್ತಿದೆ.
ಕೆಲವು ವಿ.ವಿ.ಗಳಿಗೆ ಕೆಎಎಸ್ ದರ್ಜೆಯ ಅಧಿಕಾರಿಗಳ ನೇಮಕ ಉತ್ತಮ ಕ್ರಮವಾಗಿದೆ. ಇಂದಿನ ಸ್ಥಿತಿಯಲ್ಲಿ ಕೆಲವು ರಾಜ್ಯಗಳಲ್ಲಿ ಕುಲಪತಿಗಳ ಆಯ್ಕೆಗೆ ರಾಜಕೀಯ ಮತ್ತು ಹಣದ ವಹಿವಾಟು ಹೆಚ್ಚಾಗಿ ಕಂಡುಬರುತ್ತಿದೆ. ಕೆಲವೊಮ್ಮೆ ವಿ.ವಿ.ಗಳನ್ನು ಆಧರಿಸಿ ಕುಲಪತಿ ಹುದ್ದೆಗೆ ದಕ್ಷಿಣೆ ನಿಗದಿ ಯಾಗುತ್ತದೆ ಎನ್ನುವ ಆರೋಪವಿದೆ. ಇಲ್ಲಿ ಶೈಕ್ಷಣಿಕ ಅರ್ಹತೆಗಿಂತ ರಾಜಕೀಯ ನಿಕಟತೆ, ಮತಾಂಗ ರಾಜಕಾರಣ, ನಂಬಿಕೆ ಜಾಲಗಳು ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ಇದರಿಂದಾಗಿ ಶುದ್ಧ ಶೈಕ್ಷಣಿಕ ಮನೋಭಾವ ಹೊಂದಿದ ನಿಷ್ಠಾವಂತರಿಗಿಂತ ಅಧಿಕಾರ ಪಿಪಾಸು ವ್ಯಕ್ತಿಗಳಿಗೆ ಆದ್ಯತೆ ದೊರೆಯುತ್ತಿರುವುದು ಒಂದು ದುಃಖದ ಸಂಗತಿ. ಉತ್ತಮ ಮನೆ, ವಾಹನ, ಅಧಿಕೃತ ಸಿಬ್ಬಂದಿ, ರಾಷ್ಟ್ರೀಯ ಸಮಿತಿಗಳ ಸದಸ್ಯತ್ವ ಮತ್ತು ನಿರ್ಣಯ ತೆಗೆದುಕೊಳ್ಳುವ ಶಕ್ತಿ ಹುದ್ದೆಯೊಂದಿಗೆ ಬರುತ್ತವೆ. ಕುಲಪತಿಗಳು ನೇಮಕಾತಿ, ಅನುದಾನ ಹಂಚಿಕೆ, ಯೋಜನೆಗಳ ಅನುಮೋದನೆ, ಟೆಂಡರ್ ಕರೆಯುವಿಕೆ ಮುಂತಾದ ನಿರ್ಧಾರಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ. ಇವುಗಳ ಪರಿಣಾಮವಾಗಿ ಪ್ರಭಾವ, ಸಂಪತ್ತು ಮತ್ತು ಜವಾಬ್ದಾರಿಯೇ ಇಲ್ಲದ ಅಧಿಕಾರವನ್ನೇ ಮುಂದಿಟ್ಟುಕೊಂಡು ಕೆಲವರು ಈ ಸ್ಥಾನಕ್ಕೆ ಪೈಪೋಟಿ ನಡೆಸುತ್ತಾರೆ.

ಇದೊಂದು ಆಂತರಿಕ ವಿರೋಧಾಭಾಸ ಆಗಿದ್ದು, ಭಾರತೀಯ ಉನ್ನತ ಶಿಕ್ಷಣದ ನಿಜವಾದ ಚಿಂತನ ಶೀಲತೆಯ ಎದುರಿನ ಸವಾಲು ಎನ್ನಬಹುದು. ಹಣವಿಲ್ಲದ ಶಿಕ್ಷಣ ಸಂಸ್ಥೆಗಳ ಆಡಳಿತ ಹುದ್ದೆ ಮೇಲೆ ಹಿಡಿತ ಸಾಧಿಸಲು ಕೆಲವರು ವೈಜ್ಞಾನಿಕ ಗುರಿಗಳಿಗಾಗಿ ಅಲ್ಲ, ತಮ್ಮ ಪ್ರಭಾವವನ್ನೇ ವಿಸ್ತರಿಸಲು ಹೊರಟಿರುವುದು ಸ್ಪಷ್ಟವಾಗುತ್ತದೆ. ಈ ಸ್ಥಿತಿಗೆ ಶುದ್ಧ ಶೈಕ್ಷಣಿಕ ನೀತಿ ಮತ್ತು ಪಾರದರ್ಶಕ ನಿರ್ವಹಣಾ ಕ್ರಮಗಳು ಇಲ್ಲದಿರುವುದೇ ಕಾರಣ.
ವಿಶ್ವವಿದ್ಯಾಲಯಗಳಲ್ಲಿ ಲೆಕ್ಕಪತ್ರದ ಪಾರದರ್ಶಕತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಮೌಲ್ಯಾಧಾರಿತ ನೇಮಕಾತಿ ಪ್ರಕ್ರಿಯೆ ಮೂಲೆಗುಂಪಾಗಿವೆ. ಕುಲಪತಿಗಳ/ ಕುಲಸಚಿವರ ಆಯ್ಕೆ ಪಾರದರ್ಶಕ ವಾಗಿಲ್ಲ, ಅರ್ಹತೆಯ ಆಧಾರಿತವಾಗಿಲ್ಲ. ಇಲ್ಲಿ ಜಾತಿಯದೇ ಮೇಲಾಟ. ಪಾರದರ್ಶಕ ಸಮಿತಿಗಳು, ಸಾರ್ವಜನಿಕ ಚರ್ಚೆಗಳು ಮತ್ತು ಶೈಕ್ಷಣಿಕ ಸಾಧನೆ ಆಧಾರಿತ ಶಿಫಾರಸು ಪ್ರಕ್ರಿಯೆಗಳನ್ನು ವ್ಯವಸ್ಥೆ ರೂಪಿಸಿಲ್ಲ.
ಇದಲ್ಲದೆ, ಉನ್ನತ ಶಿಕ್ಷಣಕ್ಕೆ ಸರಕಾರಗಳು ಸಾಕಷ್ಟು ಅನುದಾನವನ್ನು ಒದಗಿಸುತ್ತಿಲ್ಲ. ಗ್ರಾಮೀಣ ಹಾಗೂ ಹೊಸ ವಿಶ್ವವಿದ್ಯಾಲಯಗಳು ಆಧುನಿಕ ಪಠ್ಯಕ್ರಮ, ಡಿಜಿಟಲ್ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬೆಂಬಲ ಪಡೆಯುತ್ತಿಲ್ಲ. ವಿದ್ಯಾರ್ಥಿಗಳ ಕಲಿಕೆಗೆ ವಾತಾವರಣ ಒದಗಿಸಲು ಮೂಲಭೂತ ಸೌಲಭ್ಯಗಳು ಇಲ್ಲ.
ಭಾರತದ ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಹಿಂದುಳಿದಿರುವುದಕ್ಕೆ ಹಲವಾರು ಐತಿಹಾಸಿಕ, ರಾಜಕೀಯ, ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ. ಭಾರತ ತನ್ನ ಒಟ್ಟು ಜಿಡಿಪಿಯಲ್ಲಿ ಉನ್ನತ ಶಿಕ್ಷಣಕ್ಕೆ ಶೇ.1ಕ್ಕಿಂತ ಕಡಿಮೆ ಹಣವನ್ನು ಮೀಸಲಿಡುತ್ತದೆ. ಜಾಗತಿಕ ಸರಾಸರಿ ಇದಕ್ಕಿಂತ ಹೆಚ್ಚು. ಭಾರತದ ಒಟ್ಟು ಶಿಕ್ಷಣ ಬಜೆಟ್ ಸುಮಾರು ಶೇ.2.9-3ರಷ್ಟು ಇದ್ದರೂ, ಅದರಲ್ಲಿ ಬಹುಪಾಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಹೋಗುತ್ತದೆ.
ವಿಶ್ವವಿದ್ಯಾಲಯಗಳಿಗೆ ಬರುವ ಹಣ ಅತ್ಯಂತ ಕಡಿಮೆ. ಭಾರತದ ಬಹುಪಾಲು ಸರಕಾರಿ ವಿಶ್ವ ವಿದ್ಯಾಲಯಗಳು ಸಂಪೂರ್ಣವಾಗಿ ಸರಕಾರದ ಅನುದಾನವನ್ನೇ ನೆಚ್ಚಿವೆ. ಸ್ವಂತ ಆದಾಯ ಗಳಿಸಲು ಅವಕ್ಕೆ ಅವಕಾಶವಿಲ್ಲ ಅಥವಾ ವ್ಯವಸ್ಥೆಯೇ ಇಲ್ಲ. ಪಶ್ಚಿಮದ ವಿಶ್ವವಿದ್ಯಾಲಯಗಳು ದಾನ, ಸಂಶೋಧನಾ ಪೇಟೆಂಟ್‌ಗಳು, ವಿದ್ಯಾವಂತರಿಂದ ದೇಣಿಗೆ, ಕೈಗಾರಿಕಾ ತಾಂತ್ರಿಕ ಸಲಹೆಗಳು ಮುಂತಾದ ಮಾರ್ಗಗಳಿಂದ ಹಣ ಹೊಂದುವ ಸಂಸ್ಕೃತಿ ಇದೆ. ಆದರೆ ಭಾರತದಲ್ಲಿ ಇಂಥ ಪರಿಸ್ಥಿತಿ ಇಲ್ಲ.
ದೇಶದಲ್ಲಿ ವಿಶ್ವವಿದ್ಯಾಲಯಗಳಿಗೆ ಅರ್ಹತೆಯ ಆಧಾರದ ಮೇಲೆ ಅನುದಾನ ನೀಡುವ ವ್ಯವಸ್ಥೆ ಇಲ್ಲ. ಕೆಲವೊಮ್ಮೆ, ರಾಜಕೀಯವಾಗಿ ನಿಕಟವಾಗಿರುವ ವಿಶ್ವವಿದ್ಯಾಲಯಗಳು ಹೆಚ್ಚು ಅನುದಾನ ಪಡೆಯುತ್ತವೆ. ವಿದೇಶಿ ವಿಶ್ವವಿದ್ಯಾಲಯಗಳು ಅನೇಕ ಕೋಟಿ ರುಪಾಯಿಗಳನ್ನು ದೇಣಿಗೆಗಳಿಂದಲೇ ಪಡೆಯುತ್ತವೆ.
ಆದರೆ ಭಾರತದಲ್ಲಿ ದೇಣಿಗೆ ನೀಡುವ ಸಂಸ್ಕೃತಿ ಬಹಳಷ್ಟು ನಿರ್ಲಕ್ಷಿತವಾಗಿದೆ. ಅತಿಯಾದ ವಿ.ವಿ. ಗಳ ಸ್ಥಾಪನೆಯಿಂದಾಗಿ ಇರುವ ಅನುದಾನ ತುಂಬಾ ವಿಭಜನೆಗೊಳಗಾಗುತ್ತದೆ. ಶಿಕ್ಷಣ ಇಲಾಖೆ ಗಳಿಂದ ಬರುವ ಅನುದಾನವು ವಿಳಂಬವಾಗಿ ಬಿಡುಗಡೆಯಾಗುತ್ತದೆ. ಇದರ ಪರಿಣಾಮವಾಗಿ ಯೋಜನೆಗಳು, ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ ಎಲ್ಲವೂ ಸೊನ್ನೆ. ಆದರೂ ಕುಲಪತಿ ಹುದ್ದೆಗೆ ಪೈಪೋಟಿ ನಿಂತಿಲ್ಲ!
ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೇವಲ ಶೇ.0.7ರಷ್ಟನ್ನು ಖರ್ಚು ಮಾಡಲಾಗುತ್ತಿದೆ. ಇದರ ಬಹುಪಾಲು ಮೊತ್ತವು ಇಸ್ರೋ, ಡಿಆರ್‌ಡಿಒ ಮುಂತಾದ ಕೇಂದ್ರ ಸಂಸ್ಥೆಗಳಿಗೆ ಹೋಗುತ್ತದೆ. ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗಾಗಿ ಬಹಳ ಕಡಿಮೆ ಹಣ ದೊರೆಯುತ್ತದೆ. ಬಹುತೇಕ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಆಡಳಿತ ದುರ್ಬಲವಾಗಿದೆ. ಲೆಕ್ಕಪತ್ರ ನಿರ್ವಹಣೆ, ಯೋಜನೆಯ ಅನುಷ್ಠಾನ, ನೌಕರರ ನೇಮಕಾತಿಯಲ್ಲಿನ ಅವ್ಯವಹಾರ ಸಾಮಾನ್ಯವಾಗಿವೆ.
ಪಶ್ಚಿಮದ ವಿಶ್ವವಿದ್ಯಾಲಯಗಳಿಗೆ ಕೈಗಾರಿಕೆಗಳೊಂದಿಗೆ ನಿಕಟ ಸಂಪರ್ಕವಿದ್ದು, ಅವು ಸಂಶೋಧನಾ ಸಹಕಾರ, ಅವಿಷ್ಕಾರಗಳಿಗೆ ಹೆಸರುವಾಸಿಯಾಗಿವೆ. ಆದರೆ ಭಾರತದ ವಿದ್ಯಾಸಂಸ್ಥೆ ಗಳು ಕೈಗಾರಿಕಾ ಜಗತ್ತಿನಿಂದ ಬಹಳ ದೂರವಾಗಿವೆ. ಗುಣಮಟ್ಟ, ಸಂಶೋಧನಾ ಲೇಖನಗಳು, ವಿದ್ಯಾರ್ಥಿಗಳ ನಿರ್ವಹಣೆ ಇವುಗಳಿಂದ ವಿ.ವಿ.ಗಳಿಗೆ ಹಣ ಬರುತ್ತಿಲ್ಲ.
ವಿಶ್ವವಿದ್ಯಾಲಯಗಳು ತಮ್ಮ ಗುಣಮಟ್ಟದಿಂದ ಬಹುಪಾಲು ಅನುದಾನವನ್ನು ಪಡೆಯುತ್ತಿಲ್ಲ. ಇದರಿಂದ ಹೊಸತನ, ಶ್ರೇಷ್ಠತೆ ಇಲ್ಲದ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಭಾರತದ ಬಹುತೇಕ ವಿಶ್ವವಿದ್ಯಾಲಯಗಳು ಆರ್ಥಿಕ ಕೊರತೆಯಿಂದ ಬಳಲುತ್ತಿವೆ. ಪಠ್ಯಕ್ರಮದ ನವೀಕರಣ, ಸಂಶೋಧನಾ ಕಾರ್ಯಗಳ ಪ್ರೋತ್ಸಾಹ, ಮೂಲ ಸೌಕರ್ಯದ ಅಭಿವೃದ್ದಿ, ಡಿಜಿಟಲ್ ಯುಗದಲ್ಲಿ ಪಾಠವಿಧಾನಗಳ ಆಧುನೀಕರಣ ಅಗತ್ಯ.
ಈ ಹಿನ್ನೆಲೆಯಲ್ಲಿ, ಶೈಕ್ಷಣಿಕ ವ್ಯವಸ್ಥೆಗೆ ನವಚೇತನ ನೀಡಲು ಕೆಲವು ಶ್ರೇಷ್ಠ ಕ್ರಮಗಳನ್ನು ಪರಿಪಾಲಿಸಬೇಕು. ಪ್ರತಿ ವಿಶ್ವವಿದ್ಯಾಲಯದ ಕಾರ್ಯಕ್ಷಮತೆ, ಸಂಶೋಧನಾ ಉತ್ಪಾದಕತೆ, ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶ ಮತ್ತು ಪಠ್ಯಕ್ರಮದ ಆಧುನಿಕತೆಯನ್ನು ಆಧರಿಸಿ ಅನುದಾನ ಹಂಚಿಕೆ ನಡೆಯಬೇಕು.
ಇದು ಗುಣಮಟ್ಟದ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುತ್ತದೆ ಹಾಗೂ ಪ್ರಗತಿಯ ದಿಕ್ಕಿನಲ್ಲಿ ಸಾಗುವ ಮಾದರಿಯನ್ನು ರೂಪಿಸುತ್ತದೆ. ಅನುದಾನಕ್ಕಾಗಿ ಸರಕಾರದ ಮೇಲೆ ಮಾತ್ರ ಅವಲಂಬಿಸದೆ, ಉದ್ಯಮ ಜಗತ್ತು, ಹಳೆಯ ವಿದ್ಯಾರ್ಥಿಗಳ ದೇಣಿಗೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ, ದೇಶಿ-ವಿದೇಶಿ ಸಂಶೋಧನಾ ಸಹಕಾರ ಇತ್ಯಾದಿ ಮಾರ್ಗಗಳಲ್ಲಿ ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸಬೇಕಾಗಿದೆ.
ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ, ಯೋಜನೆ ಅನುಷ್ಠಾನ ಹಾಗೂ ಅನುದಾನ ಹಂಚಿಕೆ ಎಲ್ಲವೂ ‘ರಾಜಕೀಯರಹಿತ’ ಆಗಬೇಕು. ಶುದ್ಧ ಶೈಕ್ಷಣಿಕ ಹಿನ್ನೆಲೆ ಹೊಂದಿದ, ನಿಷ್ಠಾವಂತ ವ್ಯಕ್ತಿ ಗಳಿಂದ ರಚನೆಯಾಗಿರುವ ಆಯೋಗಗಳು ಆಯ್ಕೆ ಪ್ರಕ್ರಿಯೆಗಳನ್ನು ನಿರ್ವಹಿಸಬೇಕು.
ಅಧ್ಯಾಪಕರು ಸಂಶೋಧನೆ ಮಾಡುವುದಕ್ಕೆ ವಿಶ್ವವಿದ್ಯಾಲಯಗಳು ಹೆಚ್ಚಿನ ಸಹಕಾರ ನೀಡಬೇಕು. ಪೇಟೆಂಟ್, ಪಬ್ಲಿಕೇಷನ್‌ಗಳು ಮತ್ತು ಪ್ರಾಯೋಜಿತ ಸಂಶೋಧನಾ ಯೋಜನೆಗಳ ಮೂಲಕ ಶೈಕ್ಷಣಿಕ ಸಂಸ್ಥೆಯ ಆದಾಯವನ್ನು ಹೆಚ್ಚಿಸಬಹುದಾಗಿದೆ. ಉದ್ಯಮಗಳು ಶೈಕ್ಷಣಿಕ ಸಂಸ್ಥೆ ಗಳೊಂದಿಗೆ ತರಬೇತಿ, ಸಂಶೋಧನೆ, ಇಂಟರ್ನ್‌ಶಿಪ್‌ಗಳು, ಉಪಕರಣಗಳ ಹಂಚಿಕೆ ಮುಂತಾದ ಕಾರ್ಯಗಳಲ್ಲಿ ಕೈಜೋಡಿಸಬೇಕಾಗಿದೆ.
ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ತಯಾರಾಗುತ್ತಾರೆ. ಅನುದಾನದ ಬಳಕೆ ಕುರಿತು ಪ್ರತಿ ವಿಶ್ವವಿದ್ಯಾಲಯವೂ ಸಾರ್ವಜನಿಕ ಲೆಕ್ಕಪತ್ರ ತಯಾರಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ದುರ್ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಕುಲಪತಿಗಳು ತಮ್ಮ ಆಸ್ತಿ ಮತ್ತು ಆದಾಯದ ವಿವರವನ್ನು ಪ್ರಕಟಿಸಬೇಕು.
ವಿಶ್ವವಿದ್ಯಾಲಯಗಳನ್ನು ಮುನ್ನಡೆಸುವವರು ಶುದ್ಧ ಶೈಕ್ಷಣಿಕ ಹಿನ್ನೆಲೆ, ಅನುಭವ ಮತ್ತು ನೈತಿಕತೆ ಯುಳ್ಳವರಾಗಿರಬೇಕು. ವಿ.ವಿ.ಗೆ ಹಣ ತರುವ ಕುಶಲತೆಯನ್ನು ಅವರು ಹೊಂದಿರಬೇಕು. ನೇಮಕಾತಿ ಯಲ್ಲಿ ರಾಜಕೀಯ ಅಥವಾ ವ್ಯಕ್ತಿಗತ ಲಾಭದ ಬದಲಿಗೆ ಶೈಕ್ಷಣಿಕ ದೃಷ್ಟಿಕೋನ ಇರಬೇಕು.
ಡಿಜಿಟಲ್ ಸಾಧನಗಳು, ಆನ್‌ಲೈನ್ ಕೋರ್ಸ್‌ಗಳು ಮತ್ತು ಮೌಖಿಕ ವಿದ್ಯಾ ವಿಧಾನಗಳ ಮೂಲಕ ವಿ.ವಿ.ಗಳ ಶಿಕ್ಷಣವನ್ನು ಪರಿವರ್ತಿಸಬೇಕು. ಮೂಲಸೌಕರ್ಯವಿಲ್ಲದ ಪ್ರದೇಶಗಳಲ್ಲಿಯೂ ಈ ವಿಧಾನಗಳು ಪರಿಣಾಮಕಾರಿಯಾಗಿವೆ. ಖಾಸಗಿ ಕ್ಷೇತ್ರವು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಣ, ಜ್ಞಾನ, ಸಲಹೆಗಳ ಮೂಲಕ ಸಹಕರಿಸಬಹುದು. ವಿ.ವಿ.ಗಳ ಹಣಕಾಸು ಸ್ಥಿತಿಯನ್ನು ಸಶಕ್ತ ಗೊಳಿಸಲು ಸಂಘಟಿತ ಪ್ರಯತ್ನ ಅಗತ್ಯ.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜದ ಇತರ ವರ್ಗದವರು ಜವಾಬ್ದಾರಿ ಹೊತ್ತು, ಸರಕಾರದ ಗಮನ ಸೆಳೆಯುವ ರೀತಿಯಲ್ಲಿ ವೇದಿಕೆಗಳು/ ಮಾಧ್ಯಮಗಳಲ್ಲಿನ ಚರ್ಚೆಗಳು, ಲೇಖನಗಳ ಮೂಲಕ ನಿರಂತರ ಅಭಿಯಾನ ನಡೆಸಬೇಕು. ಇದು ವಿ.ವಿ.ಗಳ ಸುಧಾರಣೆಗೆ ಸೂಕ್ತ ಸಮಯ. ಆರ್ಥಿಕ ಸಂಕಷ್ಟಗಳ ನಡುವೆಯೂ ಶುದ್ಧತೆಯೊಂದಿಗಿನ ಆಡಳಿತ, ಶ್ರೇಷ್ಠತೆಯೊಡನೆ ನವೀಕರಣ ಮತ್ತು ಜವಾಬ್ದಾರಿತ್ವದ ಸಹಿತ ಸಂಶೋಧನೆಗಳನ್ನು ಉತ್ತೇಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ನೀಡಬೇಕು. ಈ ಬದಲಾವಣೆ ಇಡೀ ಸಮಾಜದ ಭಾಗವಹಿಸುವಿಕೆಯಿಂದಲೇ ಸಾಧ್ಯವಾಗು ತ್ತದೆ. ಭಾರತದಲ್ಲಿ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳನ್ನು ರೂಪಿಸುವ ಕನಸನ್ನು ನನಸು ಮಾಡುವ ಸಮಯ ಇದೀಗ ಬಂದಿದೆ.
(ಲೇಖಕರು ಸಹ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ)