ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಶಬ್ದಮಾಲಿನ್ಯದಿಂದ ಬಂದ್

ನ್ಯಾಯಾಲಯದ ಆದೇಶದ ಮೇರೆಗೆ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ಯಾವುದೇ ವಿಮಾನಗಳು ಹಾರಾಟ ನಡೆಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಯಿತು. ಈ ನಿಯಮವು ವಿಮಾನ ನಿಲ್ದಾಣದ ಹೊಸ ರನ್ ವೇಯನ್ನು ತೆರೆಯುವ ಸಂದರ್ಭದಲ್ಲಿ ಜಾರಿಗೆ ಬಂದಿತು. ಮ್ಯೂನಿಚ್ ವಿಮಾನ ನಿಲ್ದಾಣ ದಲ್ಲಿ ಕೂಡ ರಾತ್ರಿ ಹತ್ತರಿಂದ ಬೆಳಗ್ಗೆ ಆರರವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧಗಳಿವೆ.

Vishweshwar Bhat Column: ಶಬ್ದಮಾಲಿನ್ಯದಿಂದ ಬಂದ್

-

ಸಂಪಾದಕರ ಸದ್ಯಶೋಧನೆ

ನಾನು ಕೆಲ ವರ್ಷಗಳ ಹಿಂದೆ, ಜರ್ಮನಿಯ ಫ್ರಾಂಕ್ ಫರ್ಟ್ ನಿಂದ ಬರ್ಲಿನ್‌ಗೆ ಬರುವಾಗ ರಾತ್ರಿ ಹತ್ತೂ ಮುಕ್ಕಾಲು. ಅಲ್ಲಿನ ವಿಮಾನ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಮ್ಮ ವಿಮಾನದಲ್ಲಿದ್ದ ಪ್ರಯಾಣಿಕರ ಹೊರತಾಗಿ ಬೇರೆ ಪ್ರಯಾಣಿಕರು ಇರಲಿಲ್ಲ. ನಂತರ ಗೊತ್ತಾಗಿದ್ದೇನೆಂದರೆ, ರಾತ್ರಿ ಹನ್ನೊಂದು ಗಂಟೆಗೆ ಅಲ್ಲಿನ ವಿಮಾನ ನಿಲ್ದಾಣ ಬಂದ್ ಎಂದು. ಅದು ತೆರೆಯುವುದು ಮರುದಿನ ಬೆಳಗ್ಗೆ ಐದು ಗಂಟೆಗೆ. ಅಲ್ಲಿ ತನಕ ಇಡೀ ವಿಮಾನ ನಿಲ್ದಾಣದಲ್ಲಿ ಯಾವ ವಿಮಾನವೂ ಬರುವುದೂ ಇಲ್ಲ, ಹೋಗುವುದೂ ಇಲ್ಲ.

ಹೌದು, ಜರ್ಮನಿಯ ಕೆಲವು ವಿಮಾನ ನಿಲ್ದಾಣಗಳನ್ನು ರಾತ್ರಿ ಸಮಯದಲ್ಲಿ ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಲಾಗುತ್ತವೆ. ವಿಮಾನಗಳ ಶಬ್ದದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಯಾಗುವುದನ್ನು ತಪ್ಪಿಸುವುದಕ್ಕಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಜರ್ಮನಿಯ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ಹಾರಾಟದ ನಿಷೇಧವು ಹಲವು ವರ್ಷಗಳಿಂದ ಜಾರಿ ಯಲ್ಲಿದೆ.

ಇದು ಕೇವಲ ಒಂದು ನಿರ್ದಿಷ್ಟ ವರ್ಷದಲ್ಲಿ ಜಾರಿಗೆ ಬಂದ ನಿಯಮವಲ್ಲ, ಬದಲಾಗಿ, ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯ ಸಮುದಾಯಗಳ ಪ್ರತಿಭಟನೆಗಳು ಮತ್ತು ನ್ಯಾಯಾಲಯದ ತೀರ್ಪುಗಳ ಪರಿಣಾಮವಾಗಿ ಈ ನಿರ್ಬಂಧಗಳು ಹಂತಹಂತವಾಗಿ ಜಾರಿಯಾದವು. ಜರ್ಮನಿಯ ಅತಿ ದೊಡ್ಡ ಮತ್ತು ಯುರೋಪಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾದ ಫ್ರಾಂಕ್ ಫರ್ಟ್ನಲ್ಲಿ ರಾತ್ರಿ ವಿಮಾನ ನಿಷೇಧವು ಅಕ್ಟೋಬರ್ 2011 ರಿಂದ ಜಾರಿಗೆ ಬಂದಿತು.

ಇದನ್ನೂ ಓದಿ: Vishweshwar Bhat Column: ಟೇಕಾಫ್‌ ಟ್ಯಾಂಗೋ ಎಂದರೇನು ?

ನ್ಯಾಯಾಲಯದ ಆದೇಶದ ಮೇರೆಗೆ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ಯಾವುದೇ ವಿಮಾನಗಳು ಹಾರಾಟ ನಡೆಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಯಿತು. ಈ ನಿಯಮವು ವಿಮಾನ ನಿಲ್ದಾಣ ದ ಹೊಸ ರನ್ ವೇಯನ್ನು ತೆರೆಯುವ ಸಂದರ್ಭದಲ್ಲಿ ಜಾರಿಗೆ ಬಂದಿತು. ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಕೂಡ ರಾತ್ರಿ ಹತ್ತರಿಂದ ಬೆಳಗ್ಗೆ ಆರರವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧಗಳಿವೆ.

ಕೆಲವು ನಿರ್ದಿಷ್ಟ ರೀತಿಯ ವಿಮಾನಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಡಸೆಲ್ಡಾ-, ಬ್ರೆಮೆನ್ ಮತ್ತು ಹ್ಯಾಂಬರ್ಗ್ ಸೇರಿದಂತೆ ಜರ್ಮನಿಯ ಅನೇಕ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ಹಾರಾಟಕ್ಕೆ ನಿರ್ಬಂಧಗಳಿವೆ. ಈ ನಿರ್ಬಂಧಗಳ ಅವಧಿಯು ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಭಿನ್ನವಾಗಿರುತ್ತದೆ. ಈ ನಿಯಮಗಳ ಹಿಂದಿನ ಪ್ರಮುಖ ಕಾರಣವೆಂದರೆ, ವಿಮಾನದ ಶಬ್ದದಿಂದಾಗಿ ರಾತ್ರಿ ಹೊತ್ತು ನಿದ್ರೆಗೆ ಭಂಗ ಉಂಟಾಗುವುದು ಮತ್ತು ಇದರಿಂದ ಜನರ ಆರೋಗ್ಯದ ಮೇಲೆ ಉಂಟಾ ಗುವ ಪರಿಣಾಮಗಳು.

ರಾತ್ರಿ ಹಾರಾಟದ ನಿಷೇಧಗಳು ವಿಮಾನಯಾನ ಸಂಸ್ಥೆಗಳಿಗೆ, ವಿಶೇಷವಾಗಿ ಸರಕು ವಿಮಾನಯಾನ ಸಂಸ್ಥೆಗಳಿಗೆ (cargo airlines), ಗಣನೀಯವಾಗಿ ನಷ್ಟವನ್ನುಂಟು ಮಾಡುತ್ತವೆ. ಅನೇಕ ಸರಕು ಸಾಗಣೆಯ ವಿಮಾನಗಳು ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ. ರಾತ್ರಿ ನಿಷೇಧದಿಂದಾಗಿ, ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯ ವೇಳಾಪಟ್ಟಿಯನ್ನು ಬದಲಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ನಷ್ಟವಾಗುತ್ತದೆ.

ಲುಫಾನ್ಸಾ ಕಾರ್ಗೋ (Lufthansa Cargo) ಕಂಪನಿ ಫ್ರಾಂಕ್ ಫರ್ಟ್ನಲ್ಲಿ ವಿಧಿಸಲಾದ ರಾತ್ರಿ ನಿಷೇಧ ದಿಂದ ಕೋಟ್ಯಂತರ ಯುರೋಗಳಷ್ಟು ನಷ್ಟ ಅನುಭವಿಸಬಹುದು. ವಿಮಾನಗಳ ಹಾರಾಟದ ಸಮಯವನ್ನು ಬದಲಿಸಬೇಕಾಗಿರುವುದರಿಂದ, ವಿಮಾನಯಾನ ಸಂಸ್ಥೆಗಳು ತಮ್ಮ ಸಂಪೂರ್ಣ ಜಾಲವನ್ನು ಪುನರ್ ವಿನ್ಯಾಸಗೊಳಿಸಬೇಕಾಗುತ್ತದೆ.

ಇದರಿಂದ ವಿಮಾನಗಳ ದಟ್ಟಣೆ (congestion) ಹೆಚ್ಚಾಗುತ್ತದೆ ಮತ್ತು ವಿಮಾನಗಳ ವಿಳಂಬ ವಾಗಬಹುದು. ಇತರ ದೇಶಗಳಲ್ಲಿ ರಾತ್ರಿ ಹಾರಾಟದ ನಿಷೇಧಗಳು ಇಲ್ಲದಿರುವುದರಿಂದ, ಜರ್ಮನಿ ಯ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಉದಾಹರಣೆಗೆ, ಫ್ರಾಂಕ್ ಫರ್ಟ್ ನಲ್ಲಿ ರಾತ್ರಿ ವಿಮಾನಗಳಿಗೆ ಅವಕಾಶವಿಲ್ಲದಿರುವುದರಿಂದ, ಯುರೋಪ್‌ನ ಇತರ ವಿಮಾನ ನಿಲ್ದಾಣಗಳಾದ ಆಮ್‌ಸ್ಟರ್‌ಡ್ಯಾಮ್ ಅಥವಾ ಪ್ಯಾರಿಸ್‌ಗೆ ಸರಕು ವಿಮಾನಗಳು ಬದಲಾಗಿದೆ.

ಒಟ್ಟಾರೆಯಾಗಿ, ಜರ್ಮನಿಯ ರಾತ್ರಿ ವಿಮಾನ ನಿಷೇಧಗಳು ಸ್ಥಳೀಯ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಒಂದು ಪ್ರಯತ್ನ ಎಂಬುದರಲ್ಲಿ ಎರಡು ಮಾತಿಲ್ಲ. ಇದು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಮತ್ತು ಕಾರ್ಯಾಚರಣೆಯ ಸವಾಲುಗಳನ್ನು ತಂದರೂ, ಜನರ ಜೀವನದ ಗುಣಮಟ್ಟ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಒಂದು ನಿದರ್ಶನವಾಗಿದೆ.

ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸಮುದಾಯದ ಜನರು ಮತ್ತು ವಿಮಾನಯಾನ ಸಂಸ್ಥೆಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.