ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ನಂಬಿಕೆಯ ಗರ್ಭಗುಡಿಗೇ ಕೆಸರು ಚೆಲ್ಲಿದ ವಂಚಕರು!

ಅಯೋಧ್ಯೆಗೆ ಲಖ್ನೋದಿಂದ ಪ್ರಯಾಣಿಸುವಾಗ ನನ್ನ ಮನಸ್ಸು ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತಿತ್ತು. ರಾಮ ಜನ್ಮಭೂಮಿ ಚಳವಳಿ ಹಾಗೂ ರಾಮ ಮಂದಿರಕ್ಕಾಗಿ ನಡೆದ ಹೋರಾಟವನ್ನು ನಾವೆಲ್ಲರೂ ನೋಡಿದ್ದೇವೆ. ಅಲ್ಲಿ ಪುರಾತತ್ವ ಇಲಾಖೆ ಉತ್ಖನನ ನಡೆಸಿದಾಗ ಅದು ರಾಮನ ಜನ್ಮಭೂಮಿ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ್ದವು

ಸಂಗತ

ಹಿಂದೊಮ್ಮೆ ಬಾಬ್ರಿ ಮಸೀದಿಯಿದ್ದಾಗ ಅಯೋಧ್ಯೆಗೆ ಭೇಟಿ ನೀಡಿದ್ದೆ. ನಂತರ ಇದೇ ಮೊದಲ ಬಾರಿ ಇತ್ತೀಚೆಗೊಮ್ಮೆ ಹೋಗಿ ಬಂದೆ. ಭವ್ಯ ರಾಮಮಂದಿರದೊಳಗೆ ರಾಮ ಲಲ್ಲಾನ ದರ್ಶನ ಮಾಡುವಾಗ ಅನೇಕ ಸಂಗತಿಗಳು ಮನಸ್ಸಿನಲ್ಲಿ ಹಾದು ಹೋದವು.

ಬಹಳ ವರ್ಷಗಳಿಂದ ನಾನೊಮ್ಮೆ ಅಯೋಧ್ಯೆಗೆ ಭೇಟಿ ನೀಡಿ ಪ್ರಭು ಶ್ರೀರಾಮನ ಆಶೀರ್ವಾದ ಪಡೆದುಕೊಂಡು ಬರಬೇಕು ಅಂದುಕೊಳ್ಳುತ್ತಿದ್ದೆ. ಕಾಲ ಕೂಡಿ ಬಂದಿರಲಿಲ್ಲ. ಹಿಂದೊಮ್ಮೆ ಇನ್ನೂ ಅಲ್ಲಿ ಬಾಬ್ರಿ ಮಸೀದಿ ಇರುವಾಗ ಹೋಗಿ ಬಂದಿದ್ದೆ. ನಂತರ ಆ ಕಡೆ ಹೋಗುವ ಅವಕಾಶ ಲಭಿಸಿರ ಲಿಲ್ಲ. ಕೊನೆಗೆ ಭವ್ಯವಾದ ರಾಮ ಮಂದಿರ ನಿರ್ಮಾಣವಾದ ಮೇಲೆಯೇ ಅಲ್ಲಿಗೆ ತೆರಳುವ ಸುದೈವ ನನ್ನದಾಯಿತು. ಆದರೆ, ರಾಮ ಮಂದಿರದ ಟ್ರಸ್ಟ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಸುದ್ದಿ ಕೇಳಿ ತುಂಬಾ ಕಸಿವಿಸಿ ಅನುಭವಿಸುತ್ತಲೇ ಅಲ್ಲಿಗೆ ಹೋಗಿ ಬಂದೆ! ಛೆ ಛೆ.. ಎಂಥ ದುರಂತವಿದು! ಸಮಸ್ತ ಹಿಂದೂಗಳು ಇದರಿಂದ ಘಾಸಿಗೊಂಡಿದ್ದಾರೆ. ಎಲ್ಲರೂ ಕೇಳುತ್ತಿರುವುದು ಒಂದೇ ಪ್ರಶ್ನೆ: ‘ಜನರ ನಂಬಿಕೆಗೇ ಚೂರಿ ಇರಿದ ಆ ವಂಚಕರು ಯಾರು?’

ಅಯೋಧ್ಯೆಗೆ ಲಖ್ನೋದಿಂದ ಪ್ರಯಾಣಿಸುವಾಗ ನನ್ನ ಮನಸ್ಸು ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತಿತ್ತು. ರಾಮ ಜನ್ಮಭೂಮಿ ಚಳವಳಿ ಹಾಗೂ ರಾಮ ಮಂದಿರಕ್ಕಾಗಿ ನಡೆದ ಹೋರಾಟವನ್ನು ನಾವೆಲ್ಲರೂ ನೋಡಿದ್ದೇವೆ. ಅಲ್ಲಿ ಪುರಾತತ್ವ ಇಲಾಖೆ ಉತ್ಖನನ ನಡೆಸಿದಾಗ ಅದು ರಾಮನ ಜನ್ಮಭೂಮಿ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ್ದವು. ದೇಶಾದ್ಯಂತ ಮನೆಮನೆಗೆ ರಾಮಭಕ್ತರು ತೆರಳಿ ಇಟ್ಟಿಗೆ ಸಂಗ್ರಹಿಸಿದ್ದನ್ನು ಮರೆಯಲು ಸಾಧ್ಯವೇ? ರಾಮ ಮಂದಿರಕ್ಕಾಗಿ ನಮ್ಮ ದೇಶದಲ್ಲಿ ಮಾತ್ರವಲ್ಲ, ಜಗತ್ತಿನ ನಾನಾ ಕಡೆ ಆಂದೋಲನ ನಡೆದಿತ್ತು. ಕೇವಲ ನಂಬಿಕೆಯ ಆಧಾರದ ಮೇಲೆ ನಡೆದ ಇಷ್ಟು ದೊಡ್ಡ ಹೋರಾಟವನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಅಯೋಧ್ಯೆಯು ಭಗವಾನ್ ಶ್ರೀರಾಮನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವುದರಿಂದ ಅಲ್ಲಿನ ರಾಮ ಮಂದಿರದಲ್ಲಿ ಬಾಲಕ ರಾಮನ ಮೂರ್ತಿಯನ್ನು ಇರಿಸಿ ಪೂಜಿಸಲಾಗುತ್ತದೆ. ಸಮಸ್ತ ರಾಮಭಕ್ತರ ಆರಾಧನೆಯ ಕೇಂದ್ರವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಸಾಕಾರಗೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಡಾ.ಮೋಹನ್ ಭಾಗ್ವತ್ ಅವರ ಪಾತ್ರ ಬಹಳ ದೊಡ್ಡದಿದೆ ಎಂಬು ದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತೀಯ ಜನತಾ ಪಾರ್ಟಿ ಮತ್ತು ಆರ್‌ಎಸ್‌ಎಸ್ ಬಹಳ ವರ್ಷಗಳಿಂದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡುವುದನ್ನು ತಮ್ಮ ಬಹುದೊಡ್ಡ ಗುರಿಯನ್ನಾಗಿ ಮಾಡಿಕೊಂಡಿದ್ದವು.

ಇದನ್ನೂ ಓದಿ: Dr Vijay Darda Column: ಹವಾಯಿ ಚಪ್ಪಲಿಯಲ್ಲಿ ವಿಮಾನ ಪ್ರಯಾಣದ ಅದ್ಭುತ!

ಇಷ್ಟಕ್ಕೂ ರಾಮ ಮಂದಿರ ನಿರ್ಮಾಣದ ಉದ್ದೇಶವೇನು? ನಾವೆಲ್ಲರೂ ರಾಮರಾಜ್ಯ ಎಂಬ ಪದಪುಂಜವನ್ನು ಕೇಳಿದ್ದೇವೆ. ಅದರಂತೆ ನಮ್ಮ ದೇಶದ ಆಡಳಿತದಲ್ಲೂ ಪ್ರಭು ಶ್ರೀರಾಮನ ಆಡಳಿತದಲ್ಲಿದ್ದ ಆದರ್ಶಗಳನ್ನು ಅಳವಡಿಸಿಕೊಳ್ಳುವುದೇ ರಾಮ ಮಂದಿರ ನಿರ್ಮಾಣದ ಪ್ರಮುಖ ಉದ್ದೇಶ. ರಾಮರಾಜ್ಯದಲ್ಲಿ ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು ಇರುತ್ತಿತ್ತು. ಜಾತಿ ಮತ್ತು ಸಾಮಾಜಿಕ ತಾರತಮ್ಯ ಇರಲಿಲ್ಲ. ನಿರ್ಲಕ್ಷಿತರು ಮತ್ತು ಬಡವರ ಕಲ್ಯಾಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಶಬರಿ ನೀಡಿದ ಎಂಜಲು ಹಣ್ಣನ್ನು ಸೇವಿಸಿದ್ದು, ಅಹಲ್ಯೆಯ ಶಾಪ ವಿಮೋಚನೆ ಮಾಡಿದ್ದು ಇವು ಕರುಣೆ, ಎಲ್ಲರನ್ನೂ ಒಳಗೊಳ್ಳುವಿಕೆ ಹಾಗೂ ಮಾನವೀಯ ಘನತೆಯನ್ನು ಕಾಪಾಡುವ ರಾಮನ ಆಡಳಿತಾತ್ಮಕ ಮೌಲ್ಯಗಳಿಗೆ ಸಾಕ್ಷಿ. ಭಾರತದ ಆಸ್ತಿಕರಿಗೆ ಈ ಮೌಲ್ಯಗಳು ನವ ಭಾರತದ ಆಡಳಿತದಲ್ಲೂ ಇರಬೇಕೆಂಬ ಆಸೆಯಿರುವುದು ಸಹಜವೇ ಆಗಿದೆ.

ಇಂತಹ ಯೋಚನೆಗಳಲ್ಲಿ ಮುಳುಗೇಳುತ್ತ ನಾನು ರಾಮಲಲ್ಲಾನ ಮಂದಿರದೊಳಗೆ ಕಾಲಿಟ್ಟಿದ್ದೆ. ಅದೊಂದು ಭವ್ಯವಾದ ಮಂದಿರ. ಸುತ್ತಮುತ್ತಲ ವಾತಾವರಣ ಭಕ್ತಿಭಾವದಿಂದ ತುಳುಕುತ್ತಿತ್ತು. ಎಲ್ಲೆಡೆ ಪ್ರಶಾಂತತೆ. ಮನಸ್ಸಿಗೂ ಅದೇನೋ ಶಾಂತಿ. ಭಕ್ತರ ಆಧ್ಯಾತ್ಮಿಕ ದಾಹ ಅಲ್ಲಿ ನೀಗುತ್ತಿತ್ತು. ನಿರ್ಮಾಣ ಕಾರ್ಯ ಹೆಚ್ಚುಕಮ್ಮಿ ಪೂರ್ತಿಯಾಗಿತ್ತು. ಬಾಕಿಯುಳಿದ ಕೆಲವೇ ಭಾಗಗಳ ಕೆಲಸವೂ ಕೊನೆಯ ಹಂತದಲ್ಲಿತ್ತು. ದೇಶದ ಮೂಲೆ ಮೂಲೆಗಳಿಂದ ಎಲ್ಲಾ ಸಾಮಾಜಿಕ ಹಿನ್ನೆಲೆಯ ಜನರೂ ಅಲ್ಲಿಗೆ ಆಗಮಿಸುತ್ತಿದ್ದರು. ನನ್ನ ತವರು ರಾಜ್ಯವಾದ ಮಹಾರಾಷ್ಟ್ರದಿಂದಲೂ ಸಾಕಷ್ಟು ಆಸ್ತಿಕರು ಬಂದಿದ್ದರು.

Ram mandir ok

ರಾಮ ಮಂದಿರಕ್ಕೂ ಇನ್ನಿತರ ದೇವಾಲಯಗಳಿಗೂ ಇರುವ ವ್ಯತ್ಯಾಸವೇನು ಗೊತ್ತಾ? ರಾಮ ಮಂದಿರವನ್ನು ಸರಕಾರದ ಹಣದಲ್ಲಿ ಕಟ್ಟಿಸಿಲ್ಲ. ಲಕ್ಷಾಂತರ ಭಕ್ತರು ಹತ್ತು ರೂಪಾಯಿಯಿಂದ ಹಿಡಿದು ಕೋಟ್ಯಂತರ ರೂ.ಗಳವರೆಗೆ ದೇಣಿಗೆ ಕೊಟ್ಟು ನಿರ್ಮಿಸಿದ ಮಂದಿರವಿದು. ಕಡುಬಡವರು ಕೂಡ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಹೀಗಾಗಿ ಅದು ನಂಬಿಕೆ ಹಾಗೂ ಭಕ್ತಿಯೇ ಮೈವೆತ್ತಂತೆ ತಲೆಯೆತ್ತಿ ನಿಂತಿರುವ ಭವ್ಯ ಮಂದಿರ. ರಾಮನೆಂದರೆ ಭಾರತೀಯರಿಗೆ ಎಷ್ಟು ದೊಡ್ಡ ಆದರ್ಶ ಎಂಬುದಕ್ಕೆ ಆ ಮಂದಿರ ನಿರ್ಮಾಣವಾದ ರೀತಿಯೇ ಸಾಕ್ಷಿ. ಹೀಗಾಗಿ ಅಂತಹ ಮಂದಿರ ದಲ್ಲಿ ಹಣಕಾಸಿನ ಅವ್ಯವಹಾರದ ಆರೋಪ ಕೇಳಿ ಬಂದಾಗ ಪ್ರತಿಯೊಬ್ಬರಿಗೂ ಆಘಾತವಾಗುತ್ತದೆ. ಅವರಲ್ಲಿನ ನಂಬಿಕೆ ಘಾಸಿಗೊಳ್ಳುತ್ತದೆ.

ಅಯೋಧ್ಯೆಯಲ್ಲಿ ನಾನು ಈ ವಿವಾದದ ಬಗ್ಗೆ ಅನೇಕರ ಜೊತೆಗೆ ಮಾತನಾಡಿದೆ. ಎಲ್ಲರ ಮಾತಿನ ಹಿಂದೆಯೂ ಒಂದೇ ರೀತಿಯ ಭಾವನೆ ಸುರಿಸುತ್ತಿತ್ತು. ಉತ್ತರ ಪ್ರದೇಶದ ಹೊರಗಿನಿಂದ ಬಂದ ಕೆಲವರು ಕ್ರಮೇಣ ಇಲ್ಲಿ ಪ್ರಭಾವ ಬೆಳೆಸಿಕೊಂಡು ದೇಗುಲದ ಆಡಳಿತದಲ್ಲಿ ಅವ್ಯವಹಾರ ಎಸಗಿ ದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅಯೋಧ್ಯೆಯಲ್ಲಿ ಕೆಲವರ ಪ್ರಭಾವ ಅನಗತ್ಯವಾಗಿ ಹೆಚ್ಚಾಗಿದ್ದರಿಂದಲೇ ಜನರು ಇಲ್ಲಿನ ಆಡಳಿತದಲ್ಲಿ ನಂಬಿಕೆ ಕಳೆದುಕೊಳ್ಳು ವಂತಾಯಿತು ಎಂದು ಅವರು ಹೇಳಿದರು.

ತಿರುಪತಿಯಲ್ಲಿರುವ ರೀತಿಯ ಆಡಳಿತ ವ್ಯವಸ್ಥೆ ಇಲ್ಲೇಕಿಲ್ಲ ಎಂದು ಕೆಲವರನ್ನು ಕೇಳಿದೆ. ತಿರುಪತಿ ಯಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಅಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳು ತ್ತಾರೆ. ಹಣಕಾಸು ವ್ಯವಹಾರದ ಮೇಲ್ವಿಚಾರಣೆ ಮತ್ತು ಉತ್ತರದಾಯಿತ್ವಕ್ಕಾಗಿ ಪ್ರತ್ಯೇಕ ಸಮಿತಿ ಯನ್ನು ನೇಮಿಸಲಾಗುತ್ತದೆ. ಅಯೋಧ್ಯೆಯಿಂದಲೂ ಒಂದು ನಿಯೋಗ ತಿರುಪತಿಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿಕೊಂಡು ಬಂದಿದೆಯಂತೆ. ಆದರೆ ಅಲ್ಲಿನ ಮಾದರಿಯನ್ನು ಇಲ್ಲಿ ಅಳವಡಿಸಿಕೊಂಡಿಲ್ಲ. ಸದ್ಯಕ್ಕೆ ಅಯೋಧ್ಯೆಯ ಅವ್ಯವಹಾರದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಅನೇಕರನ್ನು ಬಂಧಿಸಲಾಗಿದೆ. ಚಂಪತ್ ರಾಯ್ ಮತ್ತು ಡಾ.ಅನಿಲ್ ಮಿಶ್ರಾ ಅವರು ಟ್ರಸ್ಟ್‌ಗೆ ರಾಜೀನಾಮೆ ನೀಡಿದ್ದಾರೆ. ಆದರೂ ಅಯೋಧ್ಯೆಯಿಂದ ಲಖ್ನೋಗೆ ಮರಳುವಾಗ ಇನ್ನೊಂದು ಪ್ರಶ್ನೆ ನನ್ನ ಮನಸ್ಸನ್ನು ಕೊರೆಯುತ್ತಲೇ ಇತ್ತು. ‘ಭಕ್ತರ ನಂಬಿಕೆಯನ್ನು ಘಾಸಿಗೊಳಿಸಿದ ನಿಜವಾದ ಅಪರಾಧಿಗಳು ಯಾರು?’

ಸಂಸ್ಕೃತಿ, ಕಲೆಯ ತವರು

ಅಯೋಧ್ಯೆಗೆ ಹೋಗಿಬರುವುದರ ನಡುವೆ ಎರಡು ದಿನಗಳ ಕಾಲ ಲಖ್ನೋದಲ್ಲಿ ಉಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ಸಂಸ್ಕೃತಿ, ಕಲೆಗಾರಿಕೆ ಹಾಗೂ ಆಹಾರ ವೈವಿಧ್ಯಗಳಿಂದ ತುಂಬಿದ ವಿಶಿಷ್ಟವಾದ ನಗರ ಲಖ್ನೋ. ಸುಂದರ ವಾಸ್ತುಶಿಲ್ಪಕ್ಕೂ ಹೆಸರುವಾಸಿ. ಬಾರಾ ಇಮಾಂಬರಾದಂತಹ ಪುರಾತನ ಕಟ್ಟಡಗಳ ವಿನ್ಯಾಸ ನಮ್ಮ ಮನಸೂರೆಗೊಳ್ಳುತ್ತದೆ. ಲಖ್ನೋದ ಭಾಷೆಯಲ್ಲೇ ಸೌಜನ್ಯ ಹಾಗೂ ನಾಜೂಕುತನವಿದೆ. ಅಲ್ಲಿನ ಖಾದ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಪ್ರದಾಯಗಳು ಕುತೂಹಲಕಾರಿಯಾಗಿವೆ. ನಗರದ ವಾತಾವರಣದಲ್ಲೇ ಒಂದು ರೀತಿಯ ವಿಶೇಷವಾದ ಕಂಪಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಅನುಭವಿಸಿಯೇ ತಿಳಿದುಕೊಳ್ಳಬೇಕು.

ಲಖ್ನೋದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬಾರಾ ಇಮಾಂಬರಾದಲ್ಲಿ ಕೆಲ ಸಮಯ ಕಳೆದೆ. 1784ರ ಭೀಕರ ಬರಗಾಲದಲ್ಲಿ ಅವಧ್‌ನ ನವಾಬ್ ಅಸಫ್ ಉದ್ ದೌಲಾ ಕಟ್ಟಿಸಿದ ಕಟ್ಟಡ ವಿದು. ಅದ್ಭುತ ವಾಸ್ತುಶಿಲ್ಪಕ್ಕಷ್ಟೇ ಇದು ಖ್ಯಾತಿ ಪಡೆದಿಲ್ಲ. ಬದಲಿಗೆ, ಬರಗಾಲದಲ್ಲಿ ಕೆಲಸ ಹಾಗೂ ಊಟಕ್ಕಿಲ್ಲದೆ ಪರಿತಪಿಸುತ್ತಿದ್ದ ಜನರಿಗೆ ಕೆಲಸ ಕೊಟ್ಟು, ಜೀವ ಉಳಿಸಿದ ಯೋಜನೆಯಾಗಿಯೂ ಇದು ಖ್ಯಾತಿ ಪಡೆದಿದೆ.

ಇತಿಹಾಸದಲ್ಲಿ ದಾಖಲಾಗಿರುವಂತೆ ಈ ಕಟ್ಟಡವನ್ನು ನಿರ್ಮಿಸಲು ಬಡವರು ಹಗಲು ಹೊತ್ತಿನಲ್ಲಿ ಯೂ, ಅನಿವಾರ್ಯವಾಗಿ ಬಡತನಕ್ಕೆ ಸಿಲುಕಿದ ಶ್ರೀಮಂತರು ರಾತ್ರಿ ವೇಳೆಯಲ್ಲಿಯೂ ಕೆಲಸ ಮಾಡಿದ್ದರಂತೆ. ಜನರ ಮುಂದೆ ಅವಮಾನವಾಗದೆ ಇರಲಿ ಎಂದು ರಾತ್ರಿಯ ವೇಳೆ ಅವರಿಂದ ಕೆಲಸ ಮಾಡಿಸುತ್ತಿದ್ದರಂತೆ! ಸಾರ್ವಜನಿಕ ಉದ್ಯೋಗ ಖಾತ್ರಿ ಯೋಜನೆಗೆ 18ನೇ ಶತಮಾನದಲ್ಲೇ ಶ್ರೀಕಾರ ಹಾಕಿದ್ದರ ಪ್ರತೀಕವಾಗಿ ನನಗೆ ಆ ಕಟ್ಟಡ ಕಾಣಿಸಿತು.

ಮುಜಾಫರ್ ಅಲಿಯ ಹವೇಲಿಯಲ್ಲಿ

ಲಖ್ನೋ ಮತ್ತು ಅಯೋಧ್ಯೆ ಪ್ರವಾಸದ ವೇಳೆ ನನಗೆ ಪದ್ಮಶ್ರೀ ಮುಜಾಫರ್ ಅಲಿಯವರ ಹವೇಲಿಗೆ ಭೇಟಿ ನೀಡುವ ಅವಕಾಶವೂ ಸಿಕ್ಕಿತ್ತು. ಅವಧ್‌ನ ರಾಜವಂಶಸ್ಥರಾದ ಕೊಟ್ವಾರಾ ಮನೆತನದ ಉತ್ತರಾಧಿಕಾರಿ ಮುಜಾಫರ್ ಅಲಿ. ಅವರ ಭೇಟಿಗೆ ಹೋಗುತ್ತೇನೆ ಎಂಬ ಯೋಚನೆಯೇ ನನ್ನಲ್ಲಿ ರೋಮಾಂಚನ ಉಂಟುಮಾಡಿತ್ತು. ಏಕೆಂದರೆ, ಮುಜಾಫರ್ ಅಲಿಯೆಂದರೆ ಬಹಳ ಜನರಿಗೆ ಅವರೊಬ್ಬ ಪ್ರಸಿದ್ಧ ಚಿತ್ರ ನಿರ್ದೇಶಕ ಎಂದಷ್ಟೇ ಗೊತ್ತು. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ ‘ಉಮ್ರಾವ್ ಜಾನ್’ ಇವರದೇ ನಿರ್ದೇಶನದ ಸಿನಿಮಾ. ಆದರೆ ಅವರ ಕಲಾತ್ಮಕ ಕೌಶಲ್ಯ ಸಿನಿಮಾ ನಿರ್ಮಾಣದ ಆಚೆಗೂ ಹರಡಿಕೊಂಡಿದೆ. ಅವರೊಬ್ಬ ಖ್ಯಾತ -ಷನ್ ಡಿಸೈನರ್, ಒಳ್ಳೆಯ ಕವಿ ಮತ್ತು ಅದ್ಭುತ ಚಿತ್ರಕಲಾವಿದ. ಜಾಹೀರಾತು ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಅವಧ್‌ನ ಚಿಕನಕಾರಿ ಎಂಬ್ರಾಯ್ಡರಿ ಕಲೆಯನ್ನು ಪುನರುತ್ಥಾನ ಗೊಳಿಸಲು ಅವರು ಮಾಡಿದ ಪ್ರಯತ್ನಗಳು ಸಣ್ಣದಲ್ಲ. ಅವರ ಪತ್ನಿ ಮೀರಾ ಅಲಿ ಕೂಡ ಪ್ರಸಿದ್ಧ -ಷನ್ ಡಿಸೈನರ್. ಇಬ್ಬರೂ ಸೇರಿಕೊಂಡು ಭಾರತೀಯ ಸಾಂಸ್ಕೃತಿಕ ಲೋಕಕ್ಕೆ ಸಾಕಷ್ಟು ಕೊಡುಗೆ ಸಲ್ಲಿಸಿದ್ದಾರೆ.

ನಾನು ತೆರಳಿದಾಗ ಗಂಡ-ಹೆಂಡತಿ ಇಬ್ಬರೂ ತುಂಬಾ ಆಪ್ತವಾಗಿ ಸ್ವಾಗತಿಸಿದರು. ಅವರ ಆತಿಥ್ಯ ವನ್ನು ನೋಡಿ ಅವಧಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಅರ್ಥ ಮಾಡಿಕೊಂಡೆ. ಅವರ ಮನೆಯ ತುಂಬಾ ಪುರಾತನ ಕಲಾಕೃತಿಗಳನ್ನು ಬಹಳ ನಾಜೂಕಾಗಿ ಜೋಡಿಸಿಟ್ಟಿದ್ದಾರೆ. ಪ್ರತಿಯೊಂದು ಕೋಣೆಯಲ್ಲೂ ಇತಿಹಾಸ, ಕಲೆ ಮತ್ತು ನೆನಪಿನ ತುಣುಕುಗಳು ಕಾಣಿಸುತ್ತವೆ. ಅವರ ಮನೆ ಒಂದು ರೀತಿಯಲ್ಲಿ ಮ್ಯೂಸಿಯಂ ಇದ್ದಂತೆ. ಅನೇಕ ಅಪರೂಪದ ವಸ್ತುಗಳು ಹಾಗೂ ಸಾಂಸ್ಕೃತಿಕ ಸಂಪತ್ತುಗಳು ಅಲ್ಲಿವೆ. ಅಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ಅನುಪಮವಾಗಿತ್ತು. ನಾಜೂಕುತನ ಹಾಗೂ ಕಲಾತ್ಮಕ ಔನ್ನತ್ಯದ ಶ್ರೇಷ್ಠ ಕ್ಷಣಗಳನ್ನು ನಾನಲ್ಲಿ ಅನುಭವಿಸಿದೆ. ಬಹುಶಃ ಅವರ ಹವೇಲಿಗೆ ನೀಡಿದ ಭೇಟಿಯು ಬಹಳ ದೀರ್ಘಕಾಲದವರೆಗೆ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿಯ ಲಿದೆ.

ಡಾ.ವಿಜಯ್‌ ದರಡಾ

View all posts by this author