ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಸತ್ತವರಿಗೆ ಜೀವ ಮತ್ತು ಒರಿಸಿಸ್‌ ಎಂಬ ದೇವ

ಇತ್ತೀಚೆಗೆ ಒಂದು ಸುದ್ದಿ ಜೀವಶಾಸ್ತ್ರಜ್ಞರ ವಲಯದಲ್ಲಿ ತುಸು ಹಲ್ಚಲ್ ಮೂಡಿಸಿತು. ಜರ್ಮನಿಯ ಸಂಶೋಧಕರ ಒಂದು ತಂಡ ಇಲಿಗಳ ಮೆದುಳಿನ ಅಂಗಾಂಶಗಳನ್ನು ಅತ್ಯಂತ ಕಡಿಮೆ ತಾಪಮಾನ ದಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಸಂರಕ್ಷಿಸಿ ಇಟ್ಟಿತ್ತು. ಬಹಳ ಸಮಯದ ಬಳಿಕ ಅವುಗಳನ್ನು ಪುನಃ ಸಾಮಾನ್ಯ ಸ್ಥಿತಿಗೆ ತಂದಾಗ ಆ ಅಂಗಾಂಶಗಳಲ್ಲಿ ಅಲ್ಪ ಪ್ರಮಾಣದ ಚಟುವಟಿಕೆ ಕಾಣಿಸಿತು.

ಕಾಡುದಾರಿ

ಕ್ರಯೋಪ್ರಿಸರ್ವೇಶನ್ ಅಂದರೆ ಜೀವಂತ ಅಂಗಾಂಶಗಳಿಗೆ ಹಾನಿಯಾಗದಂತೆ ಅವುಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಇಡುವ ಪ್ರಯತ್ನ. ಆದರೆ ಸತ್ತ ಇಲಿಗೆ, ಮನುಷ್ಯನಿಗೆ ಮತ್ತೆ ಜೀವ ಊಡಿಸಲು ನಾವಿನ್ನೂ ಶತಮಾನಗಳ ಕಾಲ ಮುನ್ನಡೆಯಬೇಕಾಗಬಹುದು. ನಮ್ಮ ಶರೀರವನ್ನು ಹಾಗೆ ಸಂರಕ್ಷಿಸಿ ಇಡುವವರು ಯಾರು? ಯಾವ ಭರವಸೆಯಲ್ಲಿ, ಎಷ್ಟು ವರ್ಷ ಇಡಲಾದೀತು? ಅದಕ್ಕೆ ತಗುಲುವ ವೆಚ್ಚವೆಷ್ಟು? ಸದ್ಯಕ್ಕಂತೂ ಅಂಥ ಟೆಕ್ನಾಲಜಿ ಇಲ್ಲ.

ಇತ್ತೀಚೆಗೆ ಒಂದು ಸುದ್ದಿ ಜೀವಶಾಸ್ತ್ರಜ್ಞರ ವಲಯದಲ್ಲಿ ತುಸು ಹಲ್ಚಲ್ ಮೂಡಿಸಿತು. ಜರ್ಮನಿಯ ಸಂಶೋಧಕರ ಒಂದು ತಂಡ ಇಲಿಗಳ ಮೆದುಳಿನ ಅಂಗಾಂಶಗಳನ್ನು ಅತ್ಯಂತ ಕಡಿಮೆ ತಾಪಮಾನ ದಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಸಂರಕ್ಷಿಸಿ ಇಟ್ಟಿತ್ತು. ಬಹಳ ಸಮಯದ ಬಳಿಕ ಅವುಗಳನ್ನು ಪುನಃ ಸಾಮಾನ್ಯ ಸ್ಥಿತಿಗೆ ತಂದಾಗ ಆ ಅಂಗಾಂಶಗಳಲ್ಲಿ ಅಲ್ಪ ಪ್ರಮಾಣದ ಚಟುವಟಿಕೆ ಕಾಣಿಸಿತು.

ಅವು ಜೀವಶಾಸ್ತ್ರೀಯವಾಗಿ ಯಾವುದೇ ಚಟುವಟಕೆ ಇಲ್ಲದಿದ್ದ ಸ್ಥಿತಿಯ, ಅಂದರೆ ಸತ್ತ ಇಲಿಗಳ ಮೆದುಳಿನ ಜೀವಕೋಶ. ಅವುಗಳಲ್ಲಿ ಚಲನೆ ಕಾಣುವುದೆಂದರೆ! ರೋಮಾಂಚನದ ಸಂಗತಿಯೇ ಅಲ್ಲವೆ? ಇದೇ ತಂತ್ರಜ್ಞಾನವನ್ನೇ ಬಳಸಿ ಇನ್ನು ಸತ್ತ ಇಲಿಗೆ ಜೀವ ಕೊಡಬಹುದು. ಆಮೇಲೆ, ಹಿಂದೆಂದೂ ಸತ್ತಿದ್ದ ಮನುಷ್ಯನಿಗೂ ಜೀವ ತರಿಸಬಹುದು...

ಇರಿ ಇರಿ, ಕನಸು ಕಾಣುವುದಕ್ಕೂ ಮಿತಿ ಇದೆ. ಈ ಸಾಧನೆ ‘ಕ್ರಯೋಪ್ರಿಸರ್ವೇಶನ್’ (ಇqsಟmಛಿo ಛ್ಟಿqZಠಿಜಿಟ್ಞ) ಕ್ಷೇತ್ರದಲ್ಲಿ ಒಂದು ಪ್ರಮುಖ ತಾಂತ್ರಿಕ ಪ್ರಗತಿಯೇ ಹೌದು. ಕ್ರಯೋಪ್ರಿಸರ್ವೇಶನ್ ಅಂದರೆ ಜೀವಂತ ಅಂಗಾಂಶಗಳಿಗೆ ಹಾನಿಯಾಗದಂತೆ ಅವುಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಇಡುವ ಪ್ರಯತ್ನ. ಆದರೆ ಸತ್ತ ಇಲಿಗೆ, ಮನುಷ್ಯನಿಗೆ ಮತ್ತೆ ಜೀವ ಉಳಿಸಲು ನಾವಿನ್ನೂ ಶತಮಾನಗಳ ಕಾಲ ಮುನ್ನಡೆಯಬೇಕಾಗಬಹುದು. ಆದರೆ ಕನಸು ಕಾಣುವುದಕ್ಕೆ ಅಡ್ಡಿ ಇಲ್ಲವಲ್ಲ. ಸದ್ಯ ಹೀಗೆ ಅಂಗಾಂಶ ಘನೀಕರಿಸುವ ಪ್ರಕ್ರಿಯೆಯಲ್ಲಿ ಮೆದುಳಿನ ಅಂಗಾಂಶಗಳು ನಾಶವಾಗುತ್ತವೆ.

ಯಾಕೆಂದರೆ ಅತಿ ಶೀತದಲ್ಲಿ ಇಟ್ಟಾಗ ಜೀವಕೋಶಗಳ ನಡುವೆ ಮಂಜುಗಡ್ಡೆಯ ಹರಳುಗಳು ಸೃಷ್ಟಿಯಾಗಿ, ಜೀವಕೋಶಗಳನ್ನು ಹಾನಿ ಮಾಡುತ್ತವೆ. ನರಕೋಶಗಳು ಸಂಕೇತಗಳನ್ನು ಕಳುಹಿಸಲು ಅಗತ್ಯವಿರುವ ಸೂಕ್ಷ್ಮ ರಚನೆಯನ್ನು ವಿರೂಪಗೊಳಿಸುತ್ತವೆ. ಇದನ್ನು ತಡೆಯಲು ಸಂಶೋಧಕರು ‘ವಿಟ್ರಿಫಿಕೇಶನ್’ ವಿಧಾನವನ್ನು ಬಳಸಿದ್ದಾರೆ.

ಇದರಲ್ಲಿ, ಅಂಗಾಂಶದಲ್ಲಿನ ಹೆಚ್ಚಿನ ನೀರನ್ನು ಹೊರತೆಗೆದು, ಮಂಜುಗಡ್ಡೆಯ ಹರಳುಗಳು ರೂಪುಗೊಳ್ಳದಂತೆ ತಡೆಯಲಾಗುತ್ತೆ. ಈ ಮಾದರಿಗಳನ್ನು ಪುನಃ ಬೆಚ್ಚಗಾಗಿಸಿದಾಗ, ಇಲಿಗಳ ಮೆದುಳಿನ ಪದರಗಳು ಮತ್ತು ಹೈಪೋಕ್ಯಾಂಪಲ್ ಅಂಗಾಂಶ ಕೆಲವು ಮೂಲಭೂತ ಕಾರ್ಯ ಚಟುವಟಿಕೆಗಳನ್ನು ಮರಳಿ ಪಡೆದುಕೊಂಡವು ಅಂತ ವರದಿ.

ಆದರೆ ಒಂದು ವಲಯದಲ್ಲಿ ಮಾತ್ರ ಇದು ಭರವಸೆಯ ಪಲ್ಲವವನ್ನು ಚಿಗುರಿಸಿದೆ. ಅದೇ ಕ್ರಯೋ ನಿಕ್ಸ್ ವಲಯ. ಹಾಗೆಂದರೆ ಏನು ಅಂತ ತುಸು‌ ವಿವರವಾಗಿ ನೋಡೋಣ. ನಾವೆಲ್ಲರೂ ಸಾಯು ತ್ತೇವೆ. ಹಾಗೆಂದು ನಂಬಲು ನಿರಾಕರಿಸುತ್ತೇವೆ. ಸಾವಿನ ಬಗ್ಗೆ ನಮಗೆ ಭಯ. ಸಾಯದೇ ಇರಲು ಆಸೆ. ಸತ್ತರೂ ಮತ್ತೆ ಅದೇ ಶರೀರದಲ್ಲಿ ಜೀವ ಉಳಿಸಿಕೊಂಡು ಬರಬಹುದೇ ಎಂಬ ದೂರದ ಹಂಬಲು.

ಇದು ಆದಿಕಾಲದಿಂದಲೂ ಇದೆ. ಈಜಿಪ್ಟಿನ ಪಿರಮಿಡ್‌ಗಳನ್ನು ನೋಡಿದರೆ ಇದು ತಿಳಿಯುತ್ತದೆ. ಅಲ್ಲಿನ ದೊರೆಗಳನ್ನು, ಫರೋಗಳನ್ನು ಮಮ್ಮಿ- ಮಾಡಿ ಇಡುತ್ತಿದ್ದುದೇ ಮುಂದೊಂದು ದಿನ ಆತನ ಆತ್ಮ ತನ್ನ ದೇಹವನ್ನು ಹುಡುಕಿಕೊಂಡು ಬಂದರೆ ಇರಲಿ ಎಂದು. ಈ ಆಸೆ ನಮಗಿದ್ದರೂ ನಮ್ಮ ಶರೀರವನ್ನು ಹಾಗೆ ಸಂರಕ್ಷಿಸಿ ಇಡುವವರು ಯಾರು? ಯಾವ ಭರವಸೆಯಲ್ಲಿ, ಎಷ್ಟು ವರ್ಷ ಇಡಲಾದೀತು? ಅದಕ್ಕೆ ತಗುಲುವ ವೆಚ್ಚವೆಷ್ಟು? ಸದ್ಯಕ್ಕಂತೂ ಅಂಥ ಟೆಕ್ನಾಲಜಿ ಇಲ್ಲ.

ಆದರೆ ಬಿಲಿಯನರ್‌ಗಳು ನಮಗಿಂತ ಭಾಗ್ಯವಂತರು. ಅವರಲ್ಲಿ ಹಣ ಇದೆ. ಅದನ್ನು ಏನು ಮಾಡು ವುದೋ ಗೊತ್ತಿಲ್ಲ. ಇಂಥವರಿಗಾಗಿ ಹುಟ್ಟಿಕೊಂಡದ್ದೇ ಕ್ರಯೋನಿಕ್ಸ್. ನೀವು ಸತ್ತರೆ ನಿಮ್ಮ ದೇಹವನ್ನು ಅತಿ ಶೀತದಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಮುಂದೊಂದು‌ ದಿನ ಅಂಥ ದೇಹಗಳಿಗೆ ಮರಳಿ ಜೀವ ತರಿಸುವ ತಂತ್ರಜ್ಞಾನ ಬರಲಿದೆ. ಆಗ ನಿಮ್ಮ ದೇಹವನ್ನೂ ಚಿಗುರುವಂತೆ ಮಾಡಲಾಗುವುದು.

ಇದೊಂದು ಕಾಯಕಲ್ಪದ ಆಸೆ. ಅಶ್ವಿನಿ ದೇವತೆಗಳು ಚ್ಯವನ ಮಹರ್ಷಿಗೆ ಬೋಧಿಸಿದ ಕಾಯಕಲ್ಪ ವಿದ್ಯೆಯನ್ನೋ, ಶುಕ್ರಾಚಾರ್ಯರು ಬೃಹಸ್ಪತಿ ಪುತ್ರ ಕಚನಿಗೆ ಬೋಧಿಸಿದ ಮೃತ ಸಂಜೀವಿನಿ ವಿದ್ಯೆ ಯನ್ನೋ ನೆನಪಿಸಿಕೊಂಡಿರಾ? ಪಾಪ, ಆ ವಿದ್ಯೆಗಳನ್ನೆಲ್ಲ ನಮ್ಮ ಹಿರಿಯರು ಸಂರಕ್ಷಿಸಿ ಇಡದಿದ್ದುದೇ ತಪ್ಪಾಯಿತು. ಇಟ್ಟಿದ್ದರೆ ನಾವೆಲ್ಲಾ ಇಷ್ಟೊಂದು ಕಷ್ಟಪಡುವುದು ತಪ್ಪುತ್ತಿತ್ತು!

ಇರಲಿ, ಈಗ, ಇದು ಹೇಗೆ ನಡೆಯುತ್ತದೆ ಎಂದು ನೋಡೋಣ. ಸಾಮಾನ್ಯವಾಗಿ ಕ್ಯಾನ್ಸರ್‌ನಂಥ ಕಾಯಿಲೆಗಳಿಂದ ಅಕಾಲ ಮರಣಕ್ಕೆ ತುತ್ತಾದ ಶ್ರೀಮಂತರೇ ಹೀಗೆ ತಮ್ಮ ದೇಹ ಸಂರಕ್ಷಣೆಗೆ ಮುಂಚಿತವಾಗಿ ಒಪ್ಪಂದ ಮಾಡಿಕೊಂಡವರು. ಇದರ ಹಿಂದಿರುವ ಥಿಯರಿ ಸರಳ- ಕ್ಯಾನ್ಸರ್‌ನಲ್ಲಿ ಅನಗತ್ಯ ಜೀವಕೋಶಗಳು ಕೋಟಿ ಸಂಖ್ಯೆಯಲ್ಲಿ ಬೆಳೆಯುತ್ತವೆ, ಅಥವಾ ಅನಗತ್ಯ ರೀತಿಯಲ್ಲಿ ಮ್ಯುಟೇಶನ್ ಆಗುತ್ತವೆ.

ಈ ಮ್ಯುಟೇಶನ್ ಪ್ರಕ್ರಿಯೆಯನ್ನು ಸಂಪೂರ್ಣ ನಿಲ್ಲಿಸುವ ಅಥವಾ ರಿವರ್ಸ್ ಆಗಿಸುವ ತಂತ್ರಜ್ಞಾನ ಇನ್ನೂ ಬಂದಿಲ್ಲ. ಮುಂದೊಂದು ದಿನ ಬರುತ್ತದೆ-ಆಗ ಕ್ಯಾನ್ಸರ್ ಸೆಲ್‌ಗಳನ್ನು ಇಲ್ಲವಾಗಿಸಿ, ಆರೋಗ್ಯಕರ ಜೀವಕೋಶಗಳನ್ನು ಚಿಗುರಿಸುವ ತಂತ್ರಜ್ಞಾನ ಬರಲಿದೆ. ಅದನ್ನು ಈ ದೇಹಕ್ಕೆ ಅಳವಡಿಸಿದಾಗ, ಅದಕ್ಕೂ ಜೀವ ಬರುತ್ತದೆ. ಇದು ಈ ಪ್ರಯೋಗದ ಹಿಂದಿರುವ ತಾತ್ವಿಕ ಯೋಚನೆ.

ಇದು ಪ್ರಯೋಗದ ಹಂತದಲ್ಲಷ್ಟೇ ಇಲ್ಲ. ನಿಮಗೆ ಅಚ್ಚರಿ ಆಗಬಹುದು- ಈಗಾಗಲೇ ಸುಮಾರು 5500 ಮಂದಿ ತಮ್ಮ ದೇಹವನ್ನು ಇದಕ್ಕಾಗಿ ಮುಡಿಪಿಟ್ಟಿದ್ದಾರೆ. ಇದನ್ನು ಮಾಡುವ ಹಲವು ಕಂಪನಿಗಳಿವೆ. ಬಹುಶಃ ಎಲ್ಲ ಕಂಪನಿಗಳೂ ಸೇರಿ, 150ಕ್ಕೂ ಹೆಚ್ಚು ಮಂದಿ ಮೃತರ ದೇಹಗಳನ್ನು ಅತಿಶೀತದಲ್ಲಿ ಇಡಲಾಗಿದೆ.

ಎಷ್ಟು ಶೀತ ಎಂದರೆ ಮೈನಸ್ 196 ಡಿಗ್ರಿ ಸೆಂಟಿಗ್ರೇಡ್. ಅಮೆರಿಕದ ಅರಿಜೋನಾದಲ್ಲಿ ಇದಕ್ಕಾಗಿಯೇ ಮೀಸಲಾದ ದೊಡ್ಡ ಪ್ರದೇಶವೇ ಇದೆ. ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಮಂಜುಗಡ್ಡೆಯನ್ನು ಬಳಸಿ ದೇಹದ ತಾಪಮಾನವನ್ನು 6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲಾಗುತ್ತದೆ. ನಂತರ ಹೃದಯ- ಶ್ವಾಸಕೋಶ ಬೈಪಾಸ್ ಯಂತ್ರದ ಮೂಲಕ ದೇಹದಲ್ಲಿ ಸಂರಕ್ಷಕ ದ್ರಾವಣವನ್ನು ಹರಿಸುತ್ತಾ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಲಾಗುತ್ತದೆ.

ನಂತರ ದೇಹವನ್ನು ಒಂದು ವಿಶೇಷ ಸ್ಲೀಪಿಂಗ್ ಬ್ಯಾಗ್‌ನಲ್ಲಿ ಸುತ್ತಿ, ಒಣ ಮಂಜುಗಡ್ಡೆಯ ಸಹಾಯ ದಿಂದ ಮೈನಸ್ 80 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿಸಲಾಗುತ್ತದೆ. ಆ ಬಳಿಕ ಕೂಲಿಂಗ್ ಚೇಂಬರ್‌ನಲ್ಲಿ ತಾಪಮಾನವನ್ನು ಕ್ರಮೇಣವಾಗಿ ಮೈನಸ್ 200 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಿ, ದೇಹವನ್ನು ಒಂದು ಪಾಡ್‌ನಲ್ಲಿ ಇರಿಸಿ, ವಿಶೇಷ ಟ್ಯಾಂಕ್‌ನಲ್ಲಿ ತಲೆಕೆಳಗಾಗಿ ಸಂಗ್ರಹಿಸಲಾಗುತ್ತದೆ.

ಫ್ರೆಂಚ್ ಜೀವವಿಜ್ಞಾನಿ ಜೀನ್ ರೋಸ್ಟಾಂಡ್ ಈ ಪರಿಕಲ್ಪನೆ ಮೊದಲಿಗೆ ಪ್ರತಿಪಾದಿಸಿದವನು. ಅತ್ಯಂತ ಕಡಿಮೆ ತಾಪಮಾನ ಜೀವಿಗಳ ಗುಣಲಕ್ಷಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಅಧ್ಯಯನ ಮಾಡಿದ. ಅದನ್ನು ಇಂದು ಕ್ರಯೋಜೆನಿP ಎಂದು ಕರೆಯಲಾಗುತ್ತದೆ. ರೋಸ್ಟಾಂಡ್‌ನ ಕೃತಿಗಳು ಮತ್ತು ಇತರ ಕೆಲವು ವೈಜ್ಞಾನಿಕ ಕಾದಂಬರಿಗಳಿಂದ ಪ್ರೇರಿತರಾದ ಫಿಸಿP ಶಿಕ್ಷಕ, ಮಾಜಿ ಯೋಧ ರಾಬರ್ಟ್ ಎಟಿಂಗರ್ ಎಂಬಾತ, ‘ದಿ ಪ್ರಾಸ್ಪೆಕ್ಟ್ ಆಫ್ ಇಮ್ಮಾರ್ಟಾಲಿಟಿ’ ಎಂಬ‌ ಪುಸ್ತಕ ಪ್ರಕಟಿಸಿದ.

ಮನುಷ್ಯರನ್ನು ಘನೀಕೃತ ಸ್ಥಿತಿಯಲ್ಲಿ ಇರಿಸಿ, ಭವಿಷ್ಯದಲ್ಲಿ ಅವರನ್ನು ಮತ್ತೆ ಎಚ್ಚರಗೊಳಿಸ ಬಹುದು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟ. ಚಳಿಗಾಲದಲ್ಲಿ ಹಿಮನಿದ್ರೆ ಹೋಗುವ ಜೀವಿಗಳ ಉದಾಹರಣೆ ಅವರ ಮುಂದಿತ್ತು. ಕ್ರಯೋನಿಕ್ಸ್ ವಿಧಾನದಲ್ಲಿ ಮೆದುಳು ಮತ್ತಿತರ ಅಂಗಗಳ ಅಂಗಾಂಶಗಳನ್ನು ರಕ್ಷಿಸಿಡುವುದು ಮೊದಲಾಯಿತು.

ಆದರೆ ಇಡೀ ದೇಹ ಸಂರಕ್ಷಿಸಲ್ಪಟ್ಟ ಮೊದಲ ವ್ಯಕ್ತಿ ಜೇಮ್ಸ ಹಿರಮ್ ಬೆಡೋರ್ಡ್, ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕ. 1967ರಲ್ಲಿ ಮೂತ್ರಪಿಂಡದ ಕ್ಯಾನ್ಸರ್‌ನಿಂದ ನಿಧನರಾದರು. ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ತರಬೇತಿ ಹೊಂದಿರದ ಒಬ್ಬ ಟಿವಿ ಮೆಕ್ಯಾನಿಕ್ ನೇತೃತ್ವದಲ್ಲಿದ್ದ ‘ಕ್ರಯೋನಿಕ್ಸ ಸೊಸೈಟಿ ಆಫ್ ಕ್ಯಾಲಿಫೋರ್ನಿಯಾ’ದ ಸದಸ್ಯರು ಇವರ ದೇಹವನ್ನು ಸಂರಕ್ಷಿಸಿದರು. ಆದರೆ 1991ರಲ್ಲಿ ಪರೀಕ್ಷಿಸಿದಾಗ ದೇಹಕ್ಕೆ ತುಸು ಹಾನಿಯಾಗಿತ್ತು.

ಇಂದಿಗೂ ಅದು ಅರಿಜೋನಾದ ಸ್ಕಾಟ್ಸ್ಡೇಲ್‌ನಲ್ಲಿರುವ ಆಲ್ಕೋರ್ ಎಂಬ ಕ್ರಯೋನಿಕ್ಸ್ ಕೇಂದ್ರ ದಲ್ಲಿ ಸಂರಕ್ಷಿಸಲ್ಪಟ್ಟಿದೆ.‌ ಸದ್ಯ ಶ್ರೀಮಂತರಿಗೆ ಮಾತ್ರ ಇದು ಸಾಧ್ಯ. ಆಲ್ಕೋರ್ ಸಂಸ್ಥೆ ಒಬ್ಬ ವ್ಯಕ್ತಿಯ ಮೆದುಳನ್ನು ಸಂರಕ್ಷಿಸಲು ಸುಮಾರು 67 ಲಕ್ಷ ರುಪಾಯಿ ಮತ್ತು ಇಡೀ ದೇಹ ಸಂಗ್ರಹಿಸಲು ಅಂದಾಜು 1.84 ಕೋಟಿ ರುಪಾಯಿ ಶುಲ್ಕ ವಿಧಿಸುತ್ತದೆ.

ಬಿಟ್ಕಾಯಿನ್ಪ್ರ ವರ್ತಕರಲ್ಲಿ ಒಬ್ಬನಾದ ಹ್ಯಾಲ್ ಫಿನ್ನಿ 2014ರಲ್ಲಿ ಎಎಲ್‌ʼಎಸ್ ಕಾಯಿಲೆಯಿಂದ ಸತ್ತ. ಬೇಸ್ಬಾಲ್ ಆಟಗಾರ ಟೆಡ್ ವಿಲಿಯಮ್ಸ್ 2002ರಲ್ಲಿ ತೀರಿಕೊಂಡ. ಇವರ‌ ದೇಹಗಳು ಕ್ರಯೋ ಪ್ರಿಸರ್ವೇಶನ್‌ನಲ್ಲಿವೆ. ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್ಸ್, ನಟಿ ಪ್ಯಾರಿಸ್ ಹಿಲ್ಟನ್ ಮೊದಲಾದ ಗಣ್ಯರು ಒಪ್ಪಂದ ಮಾಡಿಕೊಂಡಿದ್ದಾರೆ.

ಲ್ಲರಿಗೂ ತೀರದ ಆಸೆ, ಅಮರರಾಗುವ ಬಯಕೆ. ಹೋಗಲಿ, ಸತ್ತ ದೇಹಕ್ಕೆ ಜೀವ ಬರಿಸುವ ಸಾಧ್ಯತೆ ಯೇನಾದರೂ ಸದ್ಯೋಭವಿಷ್ಯದಲ್ಲಿ ವಿಜ್ಞಾನಕ್ಕೆ ಸಾಧ್ಯವಿದೆಯೇ? ಯಾವ ವಿಜ್ಞಾನಿಗೂ ಆ ಭರವಸೆಯಿಲ್ಲ. ಒಂದು ವೇಳೆ ಹಾಗೊಂದು ತಂತ್ರಜ್ಞಾನ ಬಂದಿತೆಂದುಕೊಳ್ಳಿ. ಅದರಿಂದ ಉದ್ಭವಿಸುವ ಸಾಮಾಜಿಕ, ಜೀವಶಾಸ್ತ್ರೀಯ, ನೈತಿಕ, ಕಾನೂನಾತ್ಮಕ ಬಿಕ್ಕಟ್ಟುಗಳನ್ನು ಊಹಿಸಿ ದರೇ ಗಾಬರಿಯಾಗುತ್ತದೆ.

ಹೀಗೆ ಬದುಕಿ ಬಂದವರ ಆಸ್ತಿ ಪ್ರಶ್ನೆ ಏನು? ಪೌತಿ ಖಾತೆ ಫಲಾನುಭವಿಗಳನ್ನು ಏನು ಮಾಡುವುದು? ಅವರ ನಂತರದ ತಲೆಮಾರುಗಳ ಜತೆ ಅವರ ಸಂಬಂಧ ಹೇಗೆ? ಭವಿಷ್ಯದ ತಲೆಮಾರಿಗೆ ಇವರು ಯಾಕೆ, ಹೇಗೆ ಉಪಯುಕ್ತ? ಇವರ ಹಕ್ಕು, ಅಧಿಕಾರ, ಸ್ವಾತಂತ್ರ್ಯಗಳ ಪ್ರಶ್ನೆ ಏನು? ತಮ್ಮ ಪರಿಚಯ ದವರು, ಬಂಧುಗಳು, ಸ್ನೇಹಿತರು ಯಾರೂ ಇಲ್ಲದ, ಹೊಸ ಕಾಲದ ಆಗುಹೋಗುಗಳು ಒಂದೂ ಗೊತ್ತಿರದ ಸಮಾಜದಲ್ಲಿ ಇವರು ಏನು ಮಾಡುತ್ತಾರೆ? ಹೀಗೆ ನೂರೆಂಟು ಪ್ರಶ್ನೆ.

ಈಜಿಪ್ಟ್‌ನಲ್ಲಿ ಫರೋಗಳನ್ನು ಮಮ್ಮಿ ಮಾಡಿ ಸಂರಕ್ಷಿಸಿ ಇಡುತ್ತಿದ್ದರು, ಅದರ ಹಿಂದಿನ ಉದ್ದೇಶ ವೂ ಇವರ ಆತ್ಮಗಳು ಮರಳಿ ಬಂದಾಗ ನೆಲೆಸಲು ದೇಹ ಬೇಕು ಎಂಬುದಾಗಿತ್ತು ಎಂಬುದನ್ನು ಮೇಲೆ ನೋಡಿದ್ದೇವೆ. ಈ ಪರಿಕಲ್ಪನೆಯ ಮೂಲ, ಈಜಿಪ್ಟಿಯನ್ನರ ದೇವತೆ ಒಸಿರಿಸ್ ಎಂಬಾತ. ಇವನನ್ನು ಇವನ ಸೋದರ ಸೆತ್ ಎಂಬಾತ ಅಧಿಕಾರಕ್ಕಾಗಿ ಕೊಂದು, ಹತ್ತಾರು ತುಣುಕುಗಳಾಗಿ ಚೆಲ್ಲಿ ಬಿಡುತ್ತಾನೆ.

ಒಸಿರಿಸ್‌ನ ಪತ್ನಿ ಈಸಿಸ್, ಈ ತುಣುಕುಗಳನ್ನು ಸಂಗ್ರಹಿಸಿ ದೇವತೆಗಳ ಸಹಾಯದಿಂದ ಜೀವ ಕೊಡುತ್ತಾಳೆ. ಆದರೆ ಒಂದು ತುಣುಕು ಸಿಗುವುದಿಲ್ಲ. ಅದು ಅವನ ಮರ್ಮಾಂಗ. ಅದನ್ನು ಒಂದು ಮೀನು ತಿಂದು ಬಿಟ್ಟಿರುತ್ತದೆ. ಹೀಗಾಗಿ ಅವನು ಸಂಪೂರ್ಣನಲ್ಲ. ಅಂತೆಯೇ ಒಸಿರಿಸ್‌ಗೆ ಮೊದಲಿನ ದೇವತೆಯ ಸ್ಥಾನಮಾನ ದೊರೆಯುವುದಿಲ್ಲ. ಅವನು ಪಾತಾಳಕ್ಕೆ ಹೋಗಿ ನೆಲೆಸಬೇಕಾಗುತ್ತದೆ. ಈಗ ಈ ಕತೆಯನ್ನು ನೀವು ಮೇಲಿನ ವಿಷಯಕ್ಕೆ ಹೇಗೆ ಬೇಕಾದರೂ ಅನ್ವಯಿಸಿ ಓದಿಕೊಳ್ಳಬಹುದು.

ಹರೀಶ್‌ ಕೇರ

View all posts by this author