ವಿದೇಶವಾಸಿ
‘ಜಾನೀ....’ ಇಂದಿನ ಜೆನ್-ಝೀ, ಅಲ್ಫಾ ತಲೆಮಾರಿನ ಸಿನಿಮಾ ಪ್ರಿಯರಿಗೆ ಈ ಪದ ಅಷ್ಟೊಂದು ಜನಪ್ರಿಯ ಇಲ್ಲದಿರಬಹುದು. ಆದರೆ ಹಿಂದಿನ ಎರಡು ತಲೆಮಾರಿನ ಜೆನ್-ಎಕ್ಸ್ ಮತ್ತು ಮಿಲೇನಿ ಯಲ್ಸ್ ಕಾಲದ ಹಿಂದಿ ಚಿತ್ರಪ್ರಿಯರು ಮೆಚ್ಚಿಕೊಂಡಿದ್ದ ಪದ ಇದಾಗಿತ್ತು. ಇಂದು ಭಾರತದ ಯಾವುದೇ ಚಿತ್ರರಂಗದದರೂ ಈ ಕೊರತೆ ಇದೆ ಎಂದರೆ ತಪ್ಪಲ್ಲ.
ಇಂದು ಕೆಲವು ಚಿತ್ರದ ಒಂದೋ ಎರಡೋ ಡೈಲಾಗ್, ಪಂಚ್‌ಲೈನ್ ಜನಪ್ರಿಯವಾಗಬಹುದು. ಆದರೆ ಸಂಭಾಷಣೆಯಲ್ಲಿ ತನ್ನದೇ ಶೈಲಿಯಲ್ಲಿ ಛಾಪು ಒತ್ತಿದ, ಸಂಭಾಷಣೆಯ ಚತುರ, ಡೈಲಾಗ್ ಕಿಂಗ್ ಎಂದು ಕರೆಸಿಕೊಳ್ಳುವವರು ಯಾರು ಎಂದರೆ ಸಮರ್ಪಕ ಉತ್ತರ ಸಿಗುವುದಿಲ್ಲ.
ಇಂದು ಚಿತ್ರರಂಗದಲ್ಲಿ ಒಳ್ಳೆಯ ನಟ-ನಟಿಯರಿಲ್ಲ, ಅಥವಾ ಇಂದಿನ ಕಲಾವಿದರಿಗೆ ಅಭಿನಯವೇ ಗೊತ್ತಿಲ್ಲ, ಸಂಭಾಷಣೆ ಹೇಳಲು ಬರುವುದಿಲ್ಲ ಎಂದಲ್ಲ. ಒಳ್ಳೆಯ ಕಲಾವಿದರು ಎಲ್ಲ ಭಾಷೆಯ ಚಿತ್ರರಂಗದಲ್ಲೂ ಇದ್ದಾರೆ. ಆದರೆ, ಒಬ್ಬ ನಟ ತನ್ನ ಅಭಿನಯಕ್ಕಿಂತಲೂ ಹೆಚ್ಚು ಸಂಭಾಷಣೆ ಹೇಳುವ ರೀತಿಯಿಂದಲೇ ಜನಪ್ರಿಯನಾಗಿ, ಅದನ್ನೇ ಬಂಡವಾಳವನ್ನಾಗಿಸಿಕೊಂಡು ಒಂದಲ್ಲ, ಎರಡಲ್ಲ, ಮೂರು ದಶಕ ಪ್ರಮುಖ ಚಿತ್ರರಂಗದಲ್ಲಿ ಮೆರೆಯುವುದು ಸಾಮಾನ್ಯವಲ್ಲ. ಇವತ್ತಿಗೂ ಭಾರತದ ಸಿನಿಮಾ ಪ್ರಪಂಚದಲ್ಲಿ ಡೈಲಾಗ್ ಕಿಂಗ್, ಸಂಭಾಷಣೆಯ ಸರದಾರ ಯಾರು ಎಂದರೆ, ಹಿಂದಿ ಚಿತ್ರನಟ ರಾಜ್ ಕುಮಾರ್.
ಕನ್ನಡದ ಸಾಯಿ ಕುಮಾರ್‌ಗೆ ಅಭಿಮಾನಿಗಳು ‘ಡೈಲಾಗ್ ಕಿಂಗ್’ ಎಂಬ ಬಿರುದು ನೀಡಿದ್ದಾರೆ. ಸಾಯಿ ಕುಮಾರ್ ಅವರ ಅಭಿನಯ, ಧ್ವನಿ, ಸಂಭಾಷಣೆ ಹೇಳುವ ಪರಿ ಇದಕ್ಕೆ ಪೂರಕವಾಗಿದೆ. ಆದರೆ, ತೆರೆಯ ಮೇಲೆ ಆಡಿದ ಸಂಭಾಷಣೆಯ ಒಂದು ತುಣುಕು ಜನಪ್ರಿಯವಾದಾಗ ಅದನ್ನು ನಿತ್ಯದ ಮಾತಿನಲ್ಲಿ ಬಳಸಿಕೊಡದ್ದಾಗಲೀ ಅಥವಾ ತಮ್ಮ ಇತರ ಚಿತ್ರಗಳಿಗೂ ಅದನ್ನು ಸೇರಿಸಿ ಕೊಂಡದ್ದಾಗಲೀ ಉದಾಹರಣೆ ಕಡಿಮೆಯೇ. ಡೈಲಾಗ್ ಡೆಲಿವರಿ ಉಸ್ತಾದ್ ಎನ್ನಿಸಿಕೊಂಡ ಅಮಿತಾಭ್ ಬಚ್ಚನ್‌ಗೂ ಅದು ಸಾಧ್ಯವಾಗಲಿಲ್ಲ. ಒಂದು ಹಂತದವರೆಗೆ ಶತ್ರುಘ್ನ ಸಿನ್ಹಾ ಇದಕ್ಕೆ ಭಾಜನರಾಗಿದ್ದರು. ಇಂದಿಗೂ ಶತ್ರುಘ್ನ ಸಿನ್ಹಾ ಎಂದಾಕ್ಷಣ, ಅವರ ‘ಖಾಮೋಷ್’ ಪದ ನೆನಪಿಗೆ ಬರುತ್ತದೆ.
ಇದನ್ನೂ ಓದಿ: Kiran Upadhyay Column: ಒಬ್ಬ ಮತ್ತು ಇನ್ನೊಬ್ಬನಂತೆ ಮತ್ತೊಬ್ಬನಿಲ್ಲ
ಅದೇ ರೀತಿ, ‘ಅಯ್ಯಯ್ಯಪ್ಪೋ..’ ಎಂದರೆ ಕನ್ನಡದ ಎನ್.ಎಸ್.ರಾವ್ ನೆನಪಿಗೆ ಬರುತ್ತಾರೆ. ಅದೇ ರೀತಿ ಪ್ರಸಿದ್ಧಿ ಪಡೆದ ಇನ್ನೊಂದು ಪದ, ಶೋಲೆಯ ‘ಅರೆ ಹೋ ಸಾಂಬಾ...’ ಇವೆಲ್ಲ ಸಿಗ್ನೇಚರ್‌ಗಳೇ ಹೌದಾದರೂ ಒಂದು ಪರಿಧಿಯ ಉಳಿದುಹೋದವು. ಆದರೆ ರಾಜ್ ಕುಮಾರ್ ಅವರ ‘ಜಾನೀ...’ ಎಲ್ಲ ಪರಿಧಿಯನ್ನೂ ಮೀರಿತು. ಒಂದು ಕಾಲದಲ್ಲಿ ಈ ‘ಜಾನೀ...’ ಎಷ್ಟು ಜನಪ್ರಿಯವಾಯಿತು ಎಂದರೆ, ಅಪರಿಚಿತರನ್ನು ಕರೆಯುವಾಗ, ಸ್ನೇಹಿತರೊಂದಿಗೆ ಮಸ್ತಿ ಮಾಡುವಾಗ, ಮನೆ ಮಂದಿ ಯೊಂದಿಗೆ ತಮಾಷೆ ಮಾಡುವಾಗ, ಬೇಡ, ಯಾರಿಗೋ- ಯಾವುದೋ ತಿಳುವಳಿಕೆಯ ಮಾತು ಹೇಳುವಾಗಲೂ ಬಳಕೆ ಯಾಗುತ್ತಿತ್ತು. ಅದೂ ರಾಜ್ ಕುಮಾರ್ ಹೇಳುತ್ತಿದ್ದ ರೀತಿಯಲ್ಲಿ, ಸಾಧ್ಯ ವಾದರೆ ಅವರನ್ನೇ ಅನುಕರಿಸುವ ಸ್ವರದಲ್ಲಿ! ದಶಕಗಳ ಕಾಲ!
ಸ್ವತಃ ರಾಜ್ ಕುಮಾರ್ ಕೂಡ ತಮ್ಮ ನಿತ್ಯದ ಮಾತುಕತೆಯಲ್ಲಿ ಈ ಪದವನ್ನು ಸಾಕಷ್ಟು ಬಾರಿ ಬಳಸುತ್ತಿದ್ದದ್ದೂ ಅದಕ್ಕೆ ಕಾರಣ ಇರಬಹುದು. ‘ಜಾನೀ’ ಎನ್ನುವುದು ಅವರಿಗೆ ವರದಾನವಾಗಿ ಸಿಕ್ಕ ಪದ. ಮಾತಿನ ನಡುವೆ ಸಾಕಷ್ಟು ಕಡೆ ಸೇರಿಸಿಕೊಳ್ಳಬಹುದಾದ ಪದ. ‘ಬ್ರದರ್’, ‘ಅಣ್ಣಾ’, ‘ದೋಸ್ತಾ’ ದಂತೆ ಬಳಸಬಹುದಾದ ಪದ. ಅಂತಹ ನೂರಾರು ಪದಗಳು ನಿತ್ಯಜೀವನದಲ್ಲಿ ಬಳಸುತ್ತೇವೆ. ಆದರೆ ಒಂದು ಪದವನ್ನು ದಶಕಗಳ ಕಾಲ ನಿತ್ಯವೂ ಉಸಿರಾಡುವಂತೆ ಮಾಡಿದ್ದು ರಾಜ್ ಕುಮಾರ್.
ಅದಕ್ಕೆ ಕಾರಣ ಅವರ ಶಿಸ್ತು, ಮಾತಿನಲ್ಲಿರುವ ಖಚಿತತೆ, ಧ್ವನಿಯಲ್ಲಿರುವ ಕಠಿಣತೆ, ಹಾಸ್ಯಪ್ರe, ಎಲ್ಲವೂ ಇದ್ದೀತು. ಇಲ್ಲವಾದರೆ, ಐದೂ ಮುಕ್ಕಾಲು ಅಡಿ ಎತ್ತರದ, ತಲೆ ಕೂದಲು ಸರಿಯಾಗಿ ಬಾಚದ, ಸುರದ್ರೂಪಿಯಲ್ಲದ, ತೆರೆಯ ಮೇಲೆ ಅಷ್ಟೇನೂ ಸುಂದರವಾಗಿ ಕಾಣದ ವ್ಯಕ್ತಿಯೊಬ್ಬ ದೇಶದಾದ್ಯಂತ ಸ್ಟಾರ್ ನಟರಾಗಿ ಗುರುತಿಸಿಕೊಳ್ಳಲು ಹೇಗೆ ಸಾಧ್ಯ? ಸಂಭಾಷಣೆಕಾರರು ಬರೆದ ಸಂಭಾಷಣೆಯನ್ನು ತಿದ್ದುವ, ತನ್ನದೇ ಸಂಭಾಷಣೆ ಸೇರಿಸಿಕೊಳ್ಳುವ, ಚಿತ್ರ ಗೆಲ್ಲಲಿ, ಸೋಲಲಿ, ಸಿನಿಮಾದಿಂದ ಸಿನಿಮಾಕ್ಕೆ ತನ್ನ ಸಂಭಾವನೆ ಹೆಚ್ಚಿಸಿಕೊಳ್ಳುವವರು ಇಂದು ಯಾರಾದರೂ ಇzರೆಯೇ? ರಾಜ್ ಕುಮಾರ್ ಅಭಿನಯಿಸಿದ್ದು ಎಪ್ಪತ್ತು ಸಿನಿಮಾಗಳಲ್ಲಿ.
ಗೆದ್ದದ್ದು ಬೆರಳೆಣಿಕೆಯಷ್ಟು. ಸುಮಾರು ನಾಲ್ಕೂವರೆ ದಶಕದ ಸಿನಿಮಾ ಜೀವನದಲ್ಲಿ ಎರಡು ಬಾರಿ ಉತ್ತಮ ಪೋಷಕ ಪಾತ್ರಕ್ಕೆ ಫಿಲ್ಮ್-ರ್ ಬಿಟ್ಟರೆ ಬೇರೆ ಯಾವ ಪ್ರತಿಷ್ಠಿತ ಪ್ರಶಸ್ತಿ ಬರಲಿಲ್ಲ. ಆದರೂ ರಾಜ್ ಕುಮಾರ್ ಸಂಭಾವನೆ ಹೆಚ್ಚಿಸಿಕೊಂಡೇ ಬಂದರು. ಅಷ್ಟಾಗಿಯೂ ನಿರ್ಮಾಪಕರು ಅವರ ಹಿಂದೆ ಬೀಳುತ್ತಿದ್ದರು ಎಂದರೆ ರಾಜ್ ಕುಮಾರ್ ಖದರು ಹೇಗಿದ್ದಿರಬಹುದು? ಇಂದಿನ ಬಲೋಚಿ ಸ್ತಾನದಲ್ಲಿ ಹುಟ್ಟಿ, ಓದಿಗಾಗಿ ಮುಂಬೈಗೆ ಬಂದು, ಮುಂಬೈ ಪೊಲೀಸ್ ಇಲಾಖೆ ಯಲ್ಲಿ ಸಬ್-ಇನ್‌ಸ್ಪೆಕ್ಟರ್ ಆಗಿ ಸೇರಿಕೊಂಡ ಕುಲಭೂಷಣ್ ಪಂಡಿತ್, ರಾಜ್ ಕುಮಾರ್ ಆಗಿ ಬದಲಾದದ್ದು ಸೋಜಿಗವೇ. ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವಾಗ ಅವರು ಮಾತನಾಡುತ್ತಿದ್ದ ರೀತಿ ಕೇಳಿ, ಜತೆಯಲ್ಲಿ ಕೆಲಸ ಮಾಡುತ್ತಿದ್ದವರು ‘ನೀವು ಸಿನಿಮಾದಲ್ಲಿ ನಾಯಕನಾಗಬೇಕಿತ್ತು. ಈ ಕೆಲಸಕ್ಕೆ ಯಾಕೆ ಬಂದಿರಿ?’ ಎಂದು ಕೇಳುತ್ತಿದ್ದರು. ತನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದು ನಡೆಯುತ್ತಿದ್ದರು.
ಅವರಿದ್ದ ಠಾಣೆಗೆ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಬಂದು ಹೋಗುತ್ತಿದ್ದರು. ಹಾಗೆ ಬಂದ ನಿರ್ದೇಶಕರಲ್ಲಿ ಬಲದೇವ್ ದುಬೆ ಕೂಡ ಒಬ್ಬರಾಗಿದ್ದರು. ಅವರು ಕುಲಭೂಷಣ್ ಮಾತನಾಡುವ ಶೈಲಿಗೆ ಪ್ರಭಾವಿತರಾಗಿ, ತಮ್ಮ ಸಿನಿಮಾದಲ್ಲಿ ಕೆಲಸ ಮಾಡುವಂತೆ ಮನವೊಲಿಸಿ ದರು. ಅಂತೂ ಇಂತೂ ಒಪ್ಪಿದ ಕುಲಭೂಷಣ್ ಎಸ್‌ಐ ಹುದ್ದೆಗೆ ರಾಜೀನಾಮೆ ನೀಡಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿದರು. ತಮ್ಮ ಹೆಸರನ್ನು ರಾಜ್ʼಕುಮಾರ್ ಎಂದು ಬದಲಿಸಿಕೊಂಡರು.
ಎರಡು ಮೂರು ವರ್ಷದ ಅವಧಿಯಲ್ಲಿ, ನಾಯಕ ನಟನಾಗಿ ಅಭಿನಯಿಸಿದ ಸಿನಿಮಾಗಳೆಲ್ಲ ಸೋತವು. ಭಾರೀ ಇತಿಹಾಸ ನಿರ್ಮಿಸಿದ ‘ಮದರ್ ಇಂಡಿಯಾ’ ತೆರೆಗೆ ಬರುವವರೆಗೂ ರಾಜ್ ಸಿನಿಮಾಗಳೆಲ್ಲವೂ ಸೋಲುತ್ತಲೇ ಇದ್ದವು. ಮದರ್ ಇಂಡಿಯಾ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಚಿತ್ರವಾದದ್ದು, ಅದರಲ್ಲಿ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡದ್ದು, ಅವರ ಮೊದಲ ಯಶಸ್ವಿ ಸಿನಿಮಾ ಆದದ್ದು ಈಗ ಇತಿಹಾಸ.
ನಂತರದ ವರ್ಷಗಳಲ್ಲಿ ಪೈಗಾಮ್, ದಿಲ್ ಅಪನಾ ಔರ್ ಪ್ರೀತ್ ಪರಾಯಿ, ಘರಾನಾ, ದಿಲ್ ಎಕ್ ಮಂದಿರ್, ವಕ್ತ್, ಕಾಜಲ್, ಹಮ್ರಾಜ್, ಮೆರೆ ಹುಜೂರ್, ನೀಲ್ ಕಮಲ್, ಪಾಕೀಜಾ, ಸೌದಾಗರ್, ತಿರಂಗಾ, ದ್ವಿಪಾತ್ರದಲ್ಲಿ ಅಭಿನಯಿಸಿದ ಕರ್ಮಯೋಗಿ ಇತ್ಯಾದಿ ಚಿತ್ರಗಳು ಯಶಸ್ವಿಯಾದವು. ವಕ್ತ್ ನಂತರ ರಾಜ್ ಅವರ ಯಾವುದೇ ಸಿನಿಮಾ ಆದರೂ ಜನ ಅವರ ಡೈಲಾಗ್‌ಗಾಗಿಯೇ ಚಿತ್ರಮಂದಿರ ಕ್ಕೆ ಮುಗಿ ಬೀಳುತ್ತಿದ್ದರು. ಚಿತ್ರ ಗೆಲ್ಲಲಿ, ಸೋಲಲಿ, ಒಳ್ಳೆಯದಿರಲಿ, ಇಲ್ಲದಿರಲಿ, ರಾಜ್ ಕುಮಾರ್ ಅಭಿಮಾನಿ ಗಳನ್ನು ನಿರಾಸೆಗೊಳಿಸುತ್ತಿರಲಿಲ್ಲ. ಡೈಲಾಗ್‌ನಿಂದ ರಂಜಿಸುತ್ತಿದ್ದರು.
ಸಿನಿಮಾದಲ್ಲಿ ಅವಕಾಶಕ್ಕಾಗಿ ಕಾಡುವವರು, ಬೇಡುವವರು, ಮಸ್ಕಾ ಹೊಡೆಯುವ ಜನರ ಮಧ್ಯೆ, ತಮಗೆ ಇಷ್ಟವಿಲ್ಲದ್ದನ್ನು ರಾಜ್ ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು. ಕೆಲವೊಮ್ಮೆ ಎದುರಿದ್ದವರಿಗೆ ಅವಮಾನ ಆಗುತ್ತದೆ ಎಂದೂ ಯೋಚಿಸುತ್ತಿರಲಿಲ್ಲ. ಅದು ಕೇವಲ ಸಿನಿಮಾದಲ್ಲಿ ಅಭಿನಯಿಸುವು ದಕ್ಕೆ ಸಂಬಂಧಿಸಿ ಮಾತ್ರವಲ್ಲ. ಇತರ ಕಲಾವಿದರೊಂದಿಗೆ ಮಾತಾಡುವಾಗಲೂ ಅವರಿಗೆ ಫಿಲ್ಟರ್ ಇರಲಿಲ್ಲ.
‘ಪೈಗಾಮ್’ ಚಿತ್ರದಲ್ಲಿ ತಮ್ಮನ ಪಾತ್ರದಲ್ಲಿ ನಟಿಸಿದ ದಿಲೀಪ್ ಕುಮಾರ್ ಅವರ ಕೆನ್ನೆಗೆ ಹೊಡೆ ಯುವ ದೃಶ್ಯವಿತ್ತು. ಅಭಿನಯದಲ್ಲಿ ತಲ್ಲೀನರಾಗಿದ್ದ ರಾಜ್ ಕುಮಾರ್ ಕೊಟ್ಟ ಏಟು ಜೋರಾಗಿಯೇ ಬಿದ್ದಿತ್ತು. ಅದು ಬೇಕಂತಲೇ ತನಗೆ ಹೊಡೆದದ್ದು ಎಂದು ತಿಳಿದ ದಿಲೀಪ್ ಕುಮಾರ್, ರಾಜ್ ಜತೆ ಅಭಿನಯಿಸುವು ದನ್ನೇ ಬಿಟ್ಟರು. ರಾಜ್ ಕೂಡ ಯಾವುದೇ ಸಮಾಜಾಯಿಶಿ ಕೊಡಲು ಹೋಗಲಿಲ್ಲ.
ಮೂವತ್ತೈದು ವರ್ಷದ ನಂತರ ‘ಸೌದಾಗರ್’ ಚಿತ್ರದಲ್ಲಿ ಒಟ್ಟಿಗೆ ನಟಿಸುವವರೆಗೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿರಲಿಲ್ಲ. ಆ ಕಾಲದಲ್ಲಿ ಹಿಂದಿ ಸಿನಿಮಾದ ಶೋಮ್ಯಾನ್ ರಾಜ್ ಕಪೂರ್ ಸಿನಿಮಾ ದಲ್ಲಿ ಕಾಣಿಸಿಕೊಳ್ಳುವುದು ಪ್ರತಿಷ್ಠೆಯಾಗಿತ್ತು. ಅಂಥದ್ದರಲ್ಲಿ, ತಮ್ಮ ‘ಮೇರಾ ನಾಮ್ ಜೋಕರ್’ ಚಿತ್ರದಲ್ಲಿ ನಟಿಸುವಂತೆ ಸ್ವತಃ ರಾಜ್ ಕಪೂರ್ ಅವರೇ ಕೇಳಿಕೊಂಡರೂ ರಾಜ್ ಕುಮಾರ್ ನಿರಾಕರಿಸಿದ್ದರು. ದಕ್ಷಿಣದ ಸುಪರ್ ಸ್ಟಾರ್ ರಜನಿಕಾಂತ್ ಒಮ್ಮೆ ರಾಜ್ ಕುಮಾರ್ ಜತೆ ಅಭಿನಯಿಸುವ ಅವಕಾಶವನ್ನು ‘ರಾಜ್ ಅವರ ಮೂಡ್ ಯಾವಾಗ, ಹೇಗೆ ಬದಲಾಗುತ್ತದೆ ಎಂದು ತಿಳಿಯುವುದಿಲ್ಲ, ಅವರೊಂದಿಗೆ ಅಭಿನಯಿಸುವುದು ಕಷ್ಟ’ ಎಂದು ಹೇಳಿ ನಿರಾಕರಿಸಿದ್ದರು.
ಒಮ್ಮೆ ರಾಜ್ ಅವರ ಆಪ್ತ ಸ್ನೇಹಿತ ರಮಾನಂದ್ ಸಾಗರ್ (ಮಹಾಭಾರತ್ ಧಾರಾವಾಹಿ ಖ್ಯಾತಿ) ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಳ್ಳಲು ಅವರ ಮನೆಗೆ ಹೋಗಿದ್ದರು. ಅದಕ್ಕೂ ಮೊದಲು ರಮಾನಂದ್ ಸಾಗರ್ ಅವರ ಸಿನಿಮಾದಲ್ಲಿ ರಾಜ್ ಕುಮಾರ್ ಅಭಿನಯಿಸಿದ್ದರು. ಸಾಗರ್ ತಮ್ಮ ಮುಂದಿನ ಸಿನಿಮಾದ ಕತೆ ಹೇಳುವಾಗ ತಮ್ಮ ಮನೆಯ ನಾಯಿಯನ್ನು ಕರೆದ ರಾಜ್, ‘ಇಂಥ ಕತೆಯನ್ನು ಒಪ್ಪಿಕೊಳ್ಳಬೇಕೇ’ ಎಂದು ನಾಯಿಯನ್ನು ಕೇಳಿದರು. ಸ್ವಾಭಾವಿಕವಾಗಿ ತಲೆ ಆಡಿಸಿದ ನಾಯಿಯನ್ನು ತೋರಿಸಿ, ‘ನಮ್ಮ ಮನೆಯ ನಾಯಿಯೂ ಇಂತಹ ಸಿನಿಮಾದಲ್ಲಿ ಕೆಲಸ ಮಾಡುವು ದಿಲ್ಲ’ ಎಂದರು.
‘ಜಂಜೀರ್’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮಾಡಿದ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರವನ್ನು ರಾಜ್ ಮಾಡಬೇಕಿತ್ತು. ಲೇಖಕ ಸಲೀಮ್ ಚಿತ್ರಕತೆ ಹೇಳಿದಾಗ, ‘ನನಗಾಗಿಯೇ ಬರೆದ ಕತೆಯಂತಿದೆ’ ಎಂದಿದ್ದರು ರಾಜ್. ಅದೇ ಚಿತ್ರದ ನಿರ್ದೇಶಕ ಪ್ರಕಾಶ್ ಮೆಹ್ರಾ ರಾಜ್ ಕುಮಾರ್ ಬಳಿ ಹೋಗಿ, ತಮ್ಮ ಚಿತ್ರದಲ್ಲಿ ನೀವು ಪ್ರಧಾನ ಪಾತ್ರ ವಹಿಸಬೇಕು ಎಂದು ಕೇಳಿಕೊಂಡಾಗ, ಕಿಸೆಯಿಂದ ಕರವಸ ತೆಗೆದು ಮೂಗು ಮುಚ್ಚಿಕೊಂಡು, ‘ನೀನು ಹತ್ತಿರ ಬಂದರೆ ನಿನ್ನ ತಲೆಗೆ ಹಾಕಿರುವ ಎಣ್ಣೆಯ ಕಮಟು ವಾಸನೆ ಬರುತ್ತದೆ.
ನಿನ್ನ ಜತೆ ಸಿನಿಮಾ ಮಾಡುವುದಿರಲಿ, ಒಂದು ನಿಮಿಷ ನಿಂತು ಮಾತಾಡುವುದೂ ಸಾಧ್ಯವಿಲ್ಲ’ ಎಂದು ಕಳಿಸಿದ್ದರು. ಹೀಗೆ ಅವಮಾನಿತರಾದವರೆಲ್ಲ ಮುಂದೆ ಯಾವತ್ತೂ ರಾಜ್ ಜತೆ ಮಾತಾಡಲೇ ಇಲ್ಲ. ರಾಜ್ ಅದನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅದರ ಅರ್ಥ ಅವರಿಗೆ ಸ್ನೇಹಿತರೇ ಇಷ್ಟವಿಲ್ಲ ಎಂದಲ್ಲ. ರಾಜ್ ‘ಮದರ್ ಇಂಡಿಯಾ’ ಚಿತ್ರದ ಸಕ್ಸಸ್ ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದರು.
ಜತೆಗೆ ಅವರ ಸ್ನೇಹಿತ ಮತ್ತು ಸ್ನೇಹಿತನ ಪತ್ನಿ ಇದ್ದರು. ದಾರಿಯಲ್ಲಿ ಎಲೆ ಅಡಿಕೆ ತಿನ್ನಲೆಂದು ಪಾನ್‌ಶಾಪ್ ಎದುರು ಕಾರು ನಿಲ್ಲಿಸಿದರು. ಅಲ್ಲಿದ್ದ ಪುಂಡರ ತಂಡವೊಂದು ಸ್ನೇಹಿತನ ಹೆಂಡತಿಯ ಬಗ್ಗೆ ಅಶ್ಲೀಲ ಮಾತಾಡತೊಡಗಿದರು. ಒಂದೆರಡು ಬಾರಿ ಸುಮ್ಮನಿರುವಂತೆ ಹೇಳಿದರೂ ಸುಮ್ಮನಾಗದಿದ್ದಾಗ ಹೊಡೆದಾಟವೇ ನಡೆಯಿತು. ಅದರಲ್ಲಿ ಒಬ್ಬ ಸತ್ತೇ ಹೋದ. ಪೊಲೀಸರು ರಾಜ್ ಅವರನ್ನು ಬಂಧಿಸಿದರು. ಒಂದು ವರ್ಷದ ವಿಚಾರಣೆಯ ನಂತರ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು.
ಒಮ್ಮೆ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾದಾಗ, ‘ನಿಮ್ಮ ಸೂಟ್ ಎಲ್ಲಿ ಹೊಲಿಸಿದ್ದೀರಿ? ನನಗೆ ಸೂಟ್‌ನ ಬಟ್ಟೆ ಇಷ್ಟವಾಯಿತು. ಈ ಬಟ್ಟೆಯಿಂದ ನಮ್ಮ ಮನೆಯ ಕಿಟಕಿಗೆ ಪರದೆ ಮಾಡಿಸುತ್ತೇನೆ’ ಎಂದಿದ್ದರು. ಒಮ್ಮೆ ಗೋವಿಂದ ಭೇಟಿಯಾದಾಗ, ‘ನೀನು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತೀಯ. ಆದರೆ ಚಿತ್ರದ ಹೀರೋಯಿನ್‌ಗಳಿಗೂ ಡ್ಯಾನ್ಸ್ ಮಾಡುವ ಅವಕಾಶ ಕೊಡು’ ಎಂದಿದ್ದರು. ಒಂದು ಚಿತ್ರೀಕರಣದ ವೇಳೆ ನಟಿ ಸಾಧನಾ, ವಹೀದಾ ರೆಹಮಾನ್, ಲೇಖಕ ಸಲೀಂ ಎಲ್ಲ ಸೇರಿ ಊಟ ಮಾಡುವುದು ಎಂದಾಯಿತು.
ರಾಜ್ ಅವರನ್ನೂ ಕರೆದರು. ಜತೆಗೆ ಹೋದ ರಾಜ್, ಎಷ್ಟು ಒತ್ತಾಯಿಸಿದರೂ ಊಟ ಮಾಡದೇ ಸುಮ್ಮನೇ ಕುಳಿತಿದ್ದರು.‘ಯಾಕೆ ಊಟ ಮಾಡುತ್ತಿಲ್ಲ?’ ಎಂದು ಕೇಳಿದಾಗ, ‘ನೀವು ಕರೆದದ್ದಕ್ಕೆ ಬಂದಿದ್ದೇನೆ, ಹಾಗೆಂದ ಮಾತ್ರಕ್ಕೆ ಎಲ್ಲಿ ಬೇಕಾದರೂ, ಏನು ಬೇಕಾದರೂ ತಿನ್ನುತ್ತೇನೆ ಎಂಬ ಅರ್ಥವಲ್ಲ’ ಎಂದಿದ್ದರು. ರಾಜ್ ‘ಹರೇ ರಾಮ ಹರೇ ಕೃಷ್ಣ’ ಸಿನಿಮಾ ನೋಡಿ ಹೊರಗೆ ಬರುತ್ತಿರು ವಾಗ ನಟಿ ಜೀನತ್ ಅಮಾನ್ ಎದುರಾದರು. ಆ ಚಿತ್ರದ ‘ದಮ್ ಮಾರೋ ದಮ್’ ಆಗಲೇ ದೇಶದಾ ದ್ಯಂತ ಗೌಜು ಮಾಡಿತ್ತು. ಜೀನತ್ ಅಮಾನ್ ಕೂಡ ಹೊಸಬರೇನೂ ಆಗಿರಲಿಲ್ಲ. ರಾಜ್ ಅವರ ಕೈ ಕುಲುಕಲು ಬಂದ ಜೀನತ್ ಅಮಾನ್‌ಗೆ, ‘ನೀನು ನೋಡಲು ಚೆನ್ನಾಗಿದ್ದಿ. ಯಾವುದಾದರೂ ಸಿನಿಮಾ ದಲ್ಲಿ ನಟಿಯಾಗಲು ಪ್ರಯತ್ನಿಸು’ ಎಂದಿದ್ದರು.
ಇವೆಲ್ಲ ರಾಜ್ ಕುಮಾರ್ ಅವರ ಕಟು ನುಡಿಯೋ, ಕೀಟಲೆಯೋ, ಹಾಸ್ಯವೋ ಗೊತ್ತಿಲ್ಲ. ಆದರೆ ಒಮ್ಮೆ ಒಂದು ಚಿತ್ರೀಕರಣದ ಸಂದರ್ಭದಲ್ಲಿ ಅವರು ಹೆಣವಾಗಿ ಮಲಗಿದಾಗ ಹೆಣಕ್ಕೆ ಮಾಲಾ ರ್ಪಣೆಯ ಸನ್ನಿವೇಶ ನಡೆಯುತ್ತಿತ್ತು. ನಿರ್ದೇಶಕರನ್ನು ಕರೆದ ರಾಜ್, ‘ನೀನೂ ನನಗೆ ಇಂದೇ ಮಾಲೆ ಹಾಕಿಬಿಡು’ ಎಂದರು. ‘ಅದೇಕೆ ಹಾಗೆ ಹೇಳುತ್ತಿದ್ದೀರಿ?’ ಎಂದು ಕೇಳಿದಾಗ, ‘ನಾನು ಸತ್ತ ನಂತರ ನನ್ನನ್ನು ನೋಡಲು ಜನ ಬಿಳಿ ಬಟ್ಟೆ ತೊಟ್ಟು ಬರುವುದು, ಅಳುವುದು, ಮನೆಯಲ್ಲೂ, ಸ್ಮಶಾನ ದಲ್ಲೂ ನಾಟಕ ಮಾಡುವುದು, ಇದ್ಯಾವುದೂ ನನಗೆ ಇಷ್ಟವಿಲ್ಲ. ನನ್ನ ಸಾವು ನನ್ನ ಮನೆಯವರಿಗೆ ಮಾತ್ರ ತಿಳಿಯಬೇಕು. ನನ್ನ ಅಂತ್ಯ ಸಂಸ್ಕಾರಕ್ಕೂ ಅವರಷ್ಟೇ ಇದ್ದರೆ ಸಾಕು. ನನ್ನ ಸಾವು ಜಗತ್ತಿಗೆ ತಿಳಿಯಬೇಕಾಗಿಲ್ಲ’ ಎಂದಿದ್ದರು.
ರಾಜ್ ಅವರನ್ನು ನೇರ ಅನ್ನಬೇಕೋ, ವಿಲಕ್ಷಣಮತಿ ಅನ್ನಬೇಕೋ, ನಿಷ್ಠುರವಾದಿ ಅನ್ನಬೇಕೋ, ಹಾಸ್ಯಮಯ ವ್ಯಕ್ತಿ ಅನ್ನಬೇಕೋ ಗೊತ್ತಿಲ್ಲ. ಕೊನೆಯ ಘಳಿಗೆಯವರೆಗೂ ಅವರೊಂದು ಕಗ್ಗಂಟು. ಇಂದಿಗೂ ಕೂಡ. ಇಲ್ಲವಾದರೆ, ಮೂರು ದಶಕ ಹಿಂದಿ ಚಿತ್ರರಂಗದಲ್ಲಿ ಮೆರೆದು, ಅಂದಿನ ಸುಪರ್ ಸ್ಟಾರ್‌ಗಳನ್ನು ಎದುರು ಹಾಕಿಕೊಂಡು, ಸ್ನೇಹಿತರನ್ನೇ ದೂರಮಾಡಿಕೊಂಡು, ಯಾರ ಮುಲಾಜೂ ಇಲ್ಲದೇ ಡೈಲಾಗ್ ಹೊಡೆದುಕೊಂಡು, ಜತೆಜತೆಗೇ ಜೀವನದಲ್ಲಿ ಶಿಸ್ತು ಪಾಲಿಸಿಕೊಂಡು, ತತ್ತ್ವಶಾಸ್ತ್ರ ಮಾತಾಡಿಕೊಂಡು, ಈ ಭೂಮಿಯ ಮೇಲೆ ಎಲ್ಲರೂ ಗುರುತಿಸುವಂತೆ ಬದುಕಿ, ಯಾರಿಗೂ ತಿಳಿಯದಂತೆ ಬಿಟ್ಟು ಹೋಗುವುದಕ್ಕೆ ಯಾವ ಹೆಸರು? ಜುಲೈ ಎಂಟನೇ ತಾರೀಕು, ರಾಜ್ ಕುಮಾರ್ ಈ ಲೋಕ ತ್ಯಜಿಸಿ ಮೂವತ್ತು ವರ್ಷ. ಇಂದಿಗೂ ‘ಜಾನೀ...’ ಸ್ಥಾಯಿಯಾಗಿದೆ.