ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಹಾರಿ ಬಂದ ಪತಂಗ, ಚಂದ ಇದರ ಸಂಗ

ಚಿಟ್ಟೆಗಳ ಮೈ ಬಣ್ಣ ಬಹಳ ರಂಗುರಂಗು, ಹೊಳಪು ಹೆಚ್ಚು. ಪತಂಗಗಳ ಮೈಬಣ್ಣ ಡಲ್, ಮಂಕು. ಕೂತಿರುವಾಗ ಚಿಟ್ಟೆಗಳ ರೆಕ್ಕೆಗಳು ಮಡಚಿಕೊಂಡಿರುತ್ತವೆ, ಪತಂಗಗಳದು ಬಿಡಿಸಿಕೊಂಡಿರುತ್ತವೆ. ಪತಂಗಗಳ ಮೈಯಲ್ಲಿ‌ ರೋಮಗಳು ಹೆಚ್ಚಿರುತ್ತವೆ. ಇದಲ್ಲದೇ ಬೆಳವಣಿಗೆಯ ಹಂತ, ವಾಸದ ನೆಲೆ, ಅಭ್ಯಾಸಗಳ ಹಲವು ಸೂಕ್ಷ್ಮ ವ್ಯತ್ಯಾಸಗಳಿವೆ.

ಕಾಡುದಾರಿ

ಇದು ಚಾರ್ಲ್ಸ್ ಡಾರ್ವಿನ್‌ನ ಕಾಲದ ಸಂಗತಿ. ಆತ ವಿಕಾಸವಾದವನ್ನೂ ಅದರಲ್ಲಿ ‘ನ್ಯಾಚು ರಲ್ ಸೆಲೆಕ್ಷನ್’ ಅಂದರೆ ಪ್ರಕೃತಿಯ ಆಯ್ಕೆ ಎಂಬ ಥಿಯರಿಯನ್ನೂ ಮಂಡಿಸಿದ್ದು‌ ನಿಮಗೆ ಗೊತ್ತಿರ ಬಹುದು. ಪ್ರಕೃತಿಯ ಆಯ್ಕೆಯನ್ನು ಸರಳವಾಗಿ ಹೇಳುವುದಾದರೆ- ಪ್ರಕೃತಿಯ ಬದಲಾವಣೆಗಳಿಗೆ ಹೊಂದಿಕೊಂಡ ಜೀವಪ್ರಭೇದಗಳು ಉಳಿಯುತ್ತವೆ.

ಪ್ರತಿದಿನವೂ ಜೀವವಿಜ್ಞಾನಿಗಳು ಕೆಲವು ಕೌತುಕಕಾರಿ ಸಂಗತಿಗಳನ್ನು ಹೊರಗೆಡಹುತ್ತಾ ಇರುತ್ತಾರೆ. ಇದು ಅಂಥ ಒಂದು ಇತ್ತೀಚಿನ ಸಂಗತಿ. ಆಸ್ಟ್ರೇಲಿಯದ ಒಂದು ಪತಂಗ ಜಾತಿ, ಸುಮಾರು 600 ಮೈಲು ಅಥವಾ 1000 ಕಿಲೋಮೀಟರ್‌ಗಳಷ್ಟು ದೂರ ವಲಸೆ ಹೋಗುತ್ತದೆ. ಆಗ್ನೇಯ ಆಸ್ಟ್ರೇಲಿ ಯದ ಶಾಖದ ವಾತಾವರಣ ತಪ್ಪಿಸಿಕೊಳ್ಳಲು ಆಲ್ಪ್ಸ್ ಪರ್ವತಗಳ ತಂಪು ವಾತಾವರಣದ ಕಡೆಗೆ ಹೊರಡುತ್ತವೆ.

ಬೇಸಿಗೆಯಲ್ಲಿ ಅಲ್ಲಿನ ತಂಪು ಗುಹೆಗಳಲ್ಲಿ ತಂಗುತ್ತವೆ. ನಂತರ ಮಳೆಗಾಲ- ಚಳಿಗಾಲದಲ್ಲಿ ವಾತಾ ವರಣ ತಂಪಾದಾಗ ಅದೇ ದಾರಿ ಹಿಡಿದು ಮರಳುತ್ತವೆ. ಪತಂಗಗಳ ಪ್ರತಿ ತಲೆಮಾರೂ ಇದೇ ರೀತಿ ಹೋಗಿ ಬಂದು ಮಾಡುತ್ತವೆ. ಇದೇ ದಾರಿ, ಇಲ್ಲೇ ಹೋಗಬೇಕು ಎಂಬುದು ಅವುಗಳಿಗೆ ಹೇಗೆ ಗೊತ್ತಾಗುತ್ತದೆ? ಅದೂ ಅಷ್ಟೊಂದು ದೂರ? ಇದು ವಿಜ್ಞಾನಿಗಳ ತಲೆ ಕೆಡಿಸಿದ್ದ ರಹಸ್ಯವಾಗಿತ್ತು. ಇದಕ್ಕೀಗ ಉತ್ತರ ಕಂಡುಕೊಂಡಿದ್ದಾರೆ.

ಇದುವರೆಗೂ ಮನುಷ್ಯರು ಮತ್ತು ಹಕ್ಕಿಗಳು ಮಾತ್ರ ಪಳಗಿಸಿಕೊಂಡಿzರೆ ಎಂದು ಭಾವಿಸಲಾಗಿದ್ದ ವಿದ್ಯೆಯೊಂದು ಈ ಪತಂಗ ಜಾತಿಯಲ್ಲಿ ಅಂತರ್ಗತವಾಗಿದೆ. ಅದು ಆಗಸದ ತಾರೆಗಳನ್ನು ಬಳಸಿ ಕೊಂಡು ಮಾಡುವ ನ್ಯಾವಿಗೇಶನ್. ನಕ್ಷತ್ರಗಳ ಇರುವಿಕೆಯ ಸ್ಥಾನವನ್ನು ಅವುಗಳು ಕಂಪಾಸ್‌ನಂತೆ ಬಳಸಿಕೊಳ್ಳುತ್ತವಂತೆ. ಹಕ್ಕಿಗಳು ಹೀಗೆ ಮಾಡುತ್ತವೆ ಎಂಬುದು ಈ ಹಿಂದೆಯೇ ಗೊತ್ತಾಗಿದೆ. ಆದರೆ ಅಕಶೇರುಕಗಳಲ್ಲಿ ಇಂಥ ಸಾಮರ್ಥ್ಯ ಇರುವುದು ಇದೇ ಪ್ರಥಮ ಬಾರಿಗೆ ಗೊತ್ತಾಗಿದೆ.

ಇದನ್ನೂ ಓದಿ: Harish Kera Column: ಜೆನ್‌ ಝೀ ಮಕ್ಕಳಿಂದ ಒಂದು ಪ್ರೇಮ ಪತ್ರ

ಅದರ ಜೊತೆಗೆ ಇವು ಭೂಮಿಯ ಕಾಂತ ಕ್ಷೇತ್ರವನ್ನು ಗುರುತಿಟ್ಟುಕೊಳ್ಳುತ್ತವೆ. ಈ ಎರಡೂ ಸಾಮರ್ಥ್ಯಗಳನ್ನು ಗುರುತಿಸಿ ಇವು ನಿಖರ ದಾರಿ ಹಿಡಿದು ಹೋಗಿ ಬರುತ್ತವೆ. ಅಂದಹಾಗೆ ಇದರ ಹೆಸರು ಬೊಗೋಂಗ್ ಪತಂಗ (Bogong moth). ವೈಜ್ಞಾನಿಕ ಹೆಸರು Agrotis infusa. ಸರಿಯಾಗಿ ನೋಡಿದರೆ ಇವುಗಳ ಮೆದುಳಿನ ಗಾತ್ರ ನಮ್ಮ ಉಗುರಿನ ಕಾಲು ಭಾಗದಷ್ಟೂ ಇಲ್ಲ.

ಆದರೆ ಈ ಪತಂಗಗಳು ಕೋಟ್ಯಂತರ ವರ್ಷಗಳಿಂದ ಈ ಹಾದಿಯನ್ನು ಹೀಗೆ ರೂಢಿಸಿಕೊಂಡಿವೆ. ಈ ತಾರೆಗಳ ಇರುವಿಕೆಯ ವಿನ್ಯಾಸ ಗಮನಿಸಬೇಕಾದರೆ ಇವುಗಳ ಕಣ್ಣಿನ ಶಕ್ತಿ ಎಷ್ಟಿರಬೇಕು? ಇದೂ ಒಂದು ಕುತೂಹಲಕಾರಿ ಪ್ರಶ್ನೆಯೇ. ಪತಂಗಗಳೇ ನಿಶಾಚರಿ ಜೀವಿಗಳು. ಆದರೆ ಅವುಗಳ ಕಣ್ಣ ಗೊಂಬೆಯ ವಿನ್ಯಾಸ ಹೇಗಿದೆ ಎಂದರೆ, ನಮಗಿಂತ 15 ಪಟ್ಟು ಹೆಚ್ಚು ಗಾಢವಾಗಿ ಅವು ರಾತ್ರಿ ಜಗತ್ತನ್ನು ನೋಡಬಲ್ಲವು. ಅಂದರೆ ನಕ್ಷತ್ರಗಳನ್ನೂ ಕ್ಷೀರಪಥವನ್ನೂ ನಮಗಿಂತ ಹೆಚ್ಚು ವಿವರ ವಾಗಿ ಅವು ನೋಡಬಲ್ಲವು.

ಅಂದ ಹಾಗೆ ಈ ಪತಂಗಗಳ ಆಯುರ್ಮಾನ ಒಂದು ವರ್ಷ ಮಾತ್ರ. ಈ ಒಂದೇ ವರ್ಷದಲ್ಲಿ ನಾವು ನೂರು ವರ್ಷದಲ್ಲಿ ಮಾಡುವುದನ್ನೆಲ್ಲ ಅವು ಮಾಡಿ ಮುಗಿಸಬೇಕು. ಅವು ಹುಟ್ಟುವುದು ಆಗ್ನೇಯ ಆಸ್ಟ್ರೇಲಿಯದ ಕಾಡುಗಳಲ್ಲಿ, ಚಳಿಗಾಲದ ಮೊದಲ ಭಾಗದಲ್ಲಿ. ಹುಟ್ಟಿ ಒಂದೆರಡು ತಿಂಗಳಾದ ಕೂಡಲೇ ಬಲಿತ ರೆಕ್ಕೆಗಳನ್ನು ಫಡಫಢಿಸುತ್ತ ಆಲ್ಪ್ಸ್ ಪರ್ವತಗಳ ಕಡೆಗೆ ಪಯಣ ಹೊರಡುತ್ತವೆ.

71 R

ಅವುಗಳಿಗೆ ಅಲ್ಲಿಗೆ ಹೋಗಬೇಕೆಂದು, ಇಂಥ ದಾರಿಯ ಹೋಗಬೇಕು ಎಂದು ಹೇಳುವವರು ಯಾರೂ ಇರುವುದಿಲ್ಲ. ಬೇಸಿಗೆ ಶುರುವಾಗುವ ಮುನ್ನ ಹಿಮಭರಿತ ಆಲ್ಪ್ಸ್ ಬೆಟ್ಟಗಳನ್ನು ತಲುಪಿ ಕೊಂಡು ಅಲ್ಲಿನ ಗುಹೆಗಳಲ್ಲಿ ಬಚ್ಚಿಟ್ಟುಕೊಳ್ಳುತ್ತವೆ. ಬೇಸಿಗೆ ಮುಕ್ತಾಯವಾಗುವಾಗ ಮರಳಿ ತಮ್ಮ ಪಯಣ ಶುರು ಮಾಡುತ್ತವೆ. ತವರೂರು ಸೇರಿಕೊಂಡು ಅಲ್ಲಿ ಮದುವೆಯಾಗಿ ಪ್ರಸ್ತ ಹೆರಿಗೆ ಬಾಣಂತನ ಮುಗಿಸಿ ಸಾವಿರಾರು ಮೊಟ್ಟೆಗಳನ್ನಿಟ್ಟು ಜೀವ ಬಿಡುತ್ತವೆ.

ಇವುಗಳ ಬದುಕು ಮನುಷ್ಯನಿಗೆ ಹೋಲಿಸಿದರೆ ಉಲ್ಟಾ-ಬಾಲ್ಯ, ನಂತರ ಆಲ್ಪ್ಸ್ ಪರ್ವತಗಳಲ್ಲಿ ವಾನಪ್ರಸ್ಥ, ಅಲ್ಲಿಂದ ಮರಳಿದ ಬಳಿಕ ಯೌವನ ವಿವಾಹ ಮದುವೆ ಗೃಹಸ್ಥ ನಂತರ ನೇರವಾಗಿ ಮೋಕ್ಷ. ಎಷ್ಟೇ ನಿಗೂಢಗಳನ್ನು ಮನುಷ್ಯ ಅನ್ವೇಷಿಸಿದರೂ ಮತ್ತಷ್ಟು ರಹಸ್ಯಗಳು ಉಳಿದು ಕೊಳ್ಳುತ್ತವೆ.

ಈ ಪ್ರಸಂಗದಲ್ಲೂ ಉಳಿದುಕೊಂಡ ಪ್ರಶ್ನೆಗಳು ಇವು- ಮಾರ್ಗದರ್ಶಿಯಾಗಿ ತಮ್ಮ ಹಿಂದಿನ ತಲೆಮಾರಿನ ಒಂದೇ ಒಂದು ಪತಂಗ ಉಳಿದಿಲ್ಲದಿರುವಾಗಲೂ, ಹೊಸ ತಲೆಮಾರು ಅದು ಹೇಗೆ ಅಷ್ಟೊಂದು ಕರಾರುವಕ್ಕಾಗಿ ನಿಗದಿತ ಪಥದಲ್ಲಿ ಅದೇ ಜಾಗಕ್ಕೆ ಹೋಗಿ ಬರುತ್ತದೆ? ತಾರೆಗಳನ್ನು ಹಾಗೂ ಕಾಂತಕ್ಷೇತ್ರವನ್ನು ಗುರುತಿಸುವ ವಿದ್ಯೆ ಅವುಗಳಲ್ಲಿ ವಿಕಾಸವಾದ್ದು ಹಾಗೂ ಮುಂದುವರಿ ದದ್ದು ಹೇಗೆ? ಇಂಥ ಪ್ರಶ್ನೆಗಳು ಉಳಿದುಕೊಂಡಾಗಲೇ ಮುಂದಿನ ಅನ್ವೇಷಣೆಯ ಹಾದಿಗಳು ತೆರೆದು ಕೊಳ್ಳುತ್ತವೆ.

ಜೀವವಿಜ್ಞಾನ ವಿಕಾಸವಾದದ್ದು ಇಂಥ ಪ್ರಶ್ನೆಗಳು ಹುಡುಕಾಟಗಳಿಂದ. ಅಂದ ಹಾಗೆ ಒಂದು ಸರಳ ಪ್ರಶ್ನೆ- ಚಿಟ್ಟೆಗಳು ಮತ್ತು ಪತಂಗಗಳ ನಡುವಿನ ವ್ಯತ್ಯಾಸವನ್ನು ನೀವು ಬಲ್ಲಿರಾ? ನಿಮ್ಮ ಸನಿಹದ ಚಿಟ್ಟೆ ಪಾರ್ಕ್‌ಗಳಿಗೆ ಹೋದರೆ ಇವುಗಳ ಚಿತ್ರಗಳನ್ನೂ ವ್ಯತ್ಯಾಸಗಳನ್ನೂ ಪಟ್ಟಿ ಮಾಡಿರುತ್ತಾರೆ. ಆದರೆ ಜನಸಾಮಾನ್ಯರೆಲ್ಲರೂ ಬಣ್ಣಬಣ್ಣದ ಈ ಹಾರುವ ಜೀವಿಗಳನ್ನು ಚಿಟ್ಟೆಗಳೆಂದೇ ತಿಳಿದಿರು ತ್ತಾರೆ.

ಇವುಗಳೆರಡಕ್ಕೂ ಹಲವು ಮೂಲಭೂತ ವ್ಯತ್ಯಾಸಗಳಿವೆ. ಚಿಟ್ಟೆಗಳು ಸಾಮಾನ್ಯವಾಗಿ ಹಗಲು ಹಾರಾಡುವವು, ಪತಂಗಗಳು ರಾತ್ರಿ ಜೀವಿಗಳು (ಇದರಲ್ಲಿ ಕೆಲವು ಅಪವಾದಗಳಿವೆ). ಸ್ಪಷ್ಟವಾಗಿ ಗೊತ್ತಾಗಬೇಕಿದ್ದರೆ ಆಂಟೆನಾಗಳನ್ನು ನೋಡಬೇಕು. ಚಿಟ್ಟೆಗಳ ಆಂಟೆನಾಗಳ ತುದಿಯಲ್ಲಿ ದುಂಡ ಗಿನ ಬಾಲ್ಗಳಿರುತ್ತವೆ, ಪತಂಗಗಳಲ್ಲಿ ಅವು ಇಲ್ಲ.

ಚಿಟ್ಟೆಗಳ ಮೈ ಬಣ್ಣ ಬಹಳ ರಂಗುರಂಗು, ಹೊಳಪು ಹೆಚ್ಚು. ಪತಂಗಗಳ ಮೈಬಣ್ಣ ಡಲ್, ಮಂಕು. ಕೂತಿರುವಾಗ ಚಿಟ್ಟೆಗಳ ರೆಕ್ಕೆಗಳು ಮಡಚಿಕೊಂಡಿರುತ್ತವೆ, ಪತಂಗಗಳದು ಬಿಡಿಸಿಕೊಂಡಿರುತ್ತವೆ. ಪತಂಗಗಳ ಮೈಯಲ್ಲಿ‌ ರೋಮಗಳು ಹೆಚ್ಚಿರುತ್ತವೆ. ಇದಲ್ಲದೇ ಬೆಳವಣಿಗೆಯ ಹಂತ, ವಾಸದ ನೆಲೆ, ಅಭ್ಯಾಸಗಳ ಹಲವು ಸೂಕ್ಷ್ಮ ವ್ಯತ್ಯಾಸಗಳಿವೆ.

ಮುಖ್ಯ ವಿಚಾರ ಎಂದರೆ ಪತಂಗಗಳು, ಚಿಟ್ಟೆಗಳಿಗಿಂತ ಮೊದಲೇ ವಿಕಾಸವಾದ ಜೀವಿಗಳು. ಪತಂಗ ಗಳು ಭೂಮಿಯಲ್ಲಿ 19 ಕೋಟಿ ವರ್ಷಗಳಿಂದ ಇದ್ದರೆ, ಚಿಟ್ಟೆಗಳ ವಿಕಾಸವಾದದ್ದು 10 ಕೋಟಿ ವರ್ಷಗಳಿಂದೀಚೆಗೆ. ಹೀಗಾಗಿ ಪತಂಗಗಳು ಚಿಟ್ಟೆಗಳ ಪೂರ್ವಜರೆನ್ನ ಬಹುದು. ಹೀಗಾಗಿ ಭೂಮಿ ಯಾದ್ಯಂತ ಚಿಟ್ಟೆಗಳ 17500 ಪ್ರಭೇದಗಳಿದ್ದರೆ, ಪತಂಗಗಳಲಿ 1.6 ಲಕ್ಷ ಪ್ರಭೇದಗಳಿವೆ.

ವಿಕಾಸವಾದದ ವಿಚಾರ ಬಂದುದರಿಂದ, ಇನ್ನೊಂದು ಇಂಟರೆಸ್ಟಿಂಗ್ ಸಂಗತಿಯನ್ನು ಇಲ್ಲಿ ನೋಡೋಣ. ಇದು ಚಾರ್ಲ್ಸ್‌ ಡಾರ್ವಿನ್‌ನ ಕಾಲದ ಸಂಗತಿ. ಆತ ವಿಕಾಸವಾದವನ್ನೂ ಅದರಲ್ಲಿ ‘ನ್ಯಾಚುರಲ್ ಸೆಲೆಕ್ಷನ್’ ಅಂದರೆ ಪ್ರಕೃತಿಯ ಆಯ್ಕೆ ಎಂಬ ಥಿಯರಿಯನ್ನೂ ಮಂಡಿಸಿದ್ದು ನಿಮಗೆ ಗೊತ್ತಿರಬಹುದು. ಪ್ರಕೃತಿಯ ಆಯ್ಕೆಯನ್ನು ಸರಳವಾಗಿ ಹೇಳುವುದಾದರೆ- ಪ್ರಕೃತಿಯ ಬದಲಾವಣೆ ಗಳಿಗೆ ಹೊಂದಿಕೊಂಡ ಜೀವಪ್ರಭೇದಗಳು ಉಳಿಯುತ್ತವೆ, ಸಂತಾನ ವೃದ್ಧಿಸುತ್ತವೆ ಹಾಗೂ ಬೆಳೆಯುತ್ತವೆ.

ಹೊಂದಿಕೊಳ್ಳಲು ಸಾಧ್ಯವಾಗದ್ದವು ನಶಿಸುತ್ತಾ ಹೋಗುತ್ತವೆ. ಹೀಗೆ ವಿಕಾಸದ ಹಾದಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಮುಂದಿನ ತಲೆಮಾರುಗಳಲ್ಲಿ ಉಳಿದು ಬೆಳೆದು ವೃದ್ಧಿಸುತ್ತಾ ಹೋಗುತ್ತದೆ- ಜಿರಾಫೆಗಳಲ್ಲಿ ಕತ್ತು ಉದ್ದವಾದ ಹಾಗೆ. ಡಾರ್ವಿನ್ ಮಂಡಿಸಿದ ಈ ಥಿಯರಿಯನ್ನು ಮೊದಲು ಜನ ನಂಬಿರಲಿಲ್ಲ. ಜನರೇಕೆ, ತಜ್ಞರೂ ಮೊದಮೊದಲು ನಂಬಲಿಲ್ಲ. ಆ ಸಂದರ್ಭದಲ್ಲಿ ಈ ವಾದವನ್ನು ಕಣ್ಣಿಗೆ ಕಟ್ಟಿದಂತೆ ಅರ್ಥ ಮಾಡಿಸಿದ್ದು ಒಂದು ಪತಂಗ- ಕಪ್ಪುಬಿಳುಪಿನ ಪತಂಗ ( peppered moth\).

ಬ್ರಿಟನ್‌ನಲ್ಲಿ ಆಗ ಎರಡು ಬಗೆಯ ಪೆಪ್ಪರ್ಡ್ ಪತಂಗಗಳಿದ್ದವು. ಕಪ್ಪು ಮೈಬಣ್ಣ ಅದರ ಮೇಲೆ ಬಳಿ ತೇಪೆಗಳಿದ್ದ ಪತಂಗ; ಇನ್ನೊಂದು ಬಿಳಿ ಮೈಬಣ್ಣ ಹಾಗೂ ಅದರ ಮೇಲೆ ಕಪ್ಪು ಪ್ಯಾಚ್ಗಳಿದ್ದ ಪತಂಗ. ಅದು 19ನೇ ಶತಮಾನದ ಮಧ್ಯಭಾಗ, ಕೈಗಾರಿಕಾ ಕ್ರಾಂತಿಯ ಕಾಲ. ಬಟ್ಟೆ, ಪೇಂಟ್ ಇತ್ಯಾದಿಗಳ ಫ್ಯಾಕ್ಟರಿಗಳು ಲಂಡನ್ ಹಾಗೂ ಮ್ಯಾಂಚೆಸ್ಟರ್ಗಳಲ್ಲಿ ತುಂಬಿ ತುಳುಕುತ್ತಿದ್ದವು.

ಅವುಗಳಿಂದ ಎದ್ದ ಕಲ್ಲಿದ್ದಲಿನ ಹೊಗೆ ಪಟ್ಟಣ ಹಳ್ಳಿಗಳ ಮರಗಳ ಕಾಂಡಗಳನ್ನು ಹಾಗೂ ಕಟ್ಟಡಗಳ ಗೋಡೆಗಳನ್ನೆಲ್ಲ ಕಪ್ಪಾಗಿಸುತ್ತಿದ್ದವು. ಸಹಜವಾಗಿ ಈ ಕಪ್ಪು ಹಿನ್ನೆಲೆಯಲ್ಲಿ ಕುಳಿತ ಕಪ್ಪು ಪತಂಗಗಳು ಅವುಗಳ ಬೇಟೆಗಾರ ಪ್ರಾಣಿಗಳಿಗೆ ಕಾಣಿಸುತ್ತಿರಲಿಲ್ಲ. ಆದರೆ ಬಿಳಿ ಪತಂಗಗಳು ಸುಲಭವಾಗಿ ಕಾಣಿಸುತ್ತಿದ್ದವು.

ವೈರಿಗಳು ಬಿಳಿ ಪತಂಗಗಳನ್ನು ಬೇಗ ಬೇಗ ಹಿಡಿದು ಭಕ್ಷಿಸಿ ನಾಶಪಡಿಸಿದವು. ಕಪ್ಪು ಪತಂಗಗಳು ಹೆಚ್ಚು ಸಂಖ್ಯೆಯಲ್ಲಿ ಉಳಿದುಕೊಂಡು ಹೆಚ್ಚಿದವು. ಬಿಳಿ ಪತಂಗಗಳು ಸಂಪೂರ್ಣ ನಾಶವಾದ ವೇನೋ ಎಂದು ತಜ್ಞರು ಅಂದಾಜಿಸಿದರು. ಆದರೆ ಹತ್ತೊಂಬತ್ತನೇ ಶತಮಾನದ ಕೊನೆ ಹಾಗೂ ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಫ್ಯಾಕ್ಟರಿಗಳ ಹೊಗೆ ಕಡಿಮೆ ಮಾಡಿ, ಗಾಳಿಯ ಗುಣಮಟ್ಟ ಹೆಚ್ಚಿಸುವ, ವಾಯುಮಾಲಿನ್ಯ ಕಡಿಮೆ ಮಾಡುವ ಪ್ರಯತ್ನಗಳು ನಡೆದವು.

ಇದೀಗ ಮರದ ಕಾಂಡಗಳು, ಗೋಡೆಗಳು ಮತ್ತೆ ತಿಳಿಬಣ್ಣಗಳಿಂದ ಶೋಭಿಸಿದವು. ಪರಿಣಾಮವಾಗಿ ಕಪ್ಪು ಪತಂಗಗಳು ಹೆಚ್ಚಾಗಿ ವೈರಿಗಳಿಗೆ ಕಾಣಿಸಿಕೊಂಡವು ಹಾಗೂ ಭಕ್ಷಣೆಗೊಳಗಾಗತೊಡಗಿದವು. ಬಿಳಿ ಪತಂಗಗಳು ಉಳಿದುಕೊಂಡು ತಮ್ಮ ಸಂಖ್ಯೆಯನ್ನು ಹೆಚ್ಚಿಸತೊಡಗಿದವು. ಈ ಬೆಳವಣಿಗೆ ಲಂಡನ್, ಮ್ಯಾಂಚೆಸ್ಟರ್ ಮಾತ್ರವಲ್ಲದೇ ಇಡೀ ಯುರೋಪಿನಾದ್ಯಂತ ಕಾಣಬಹುದಾಗಿತ್ತು.

ಇದರರ್ಥ ಸರಳ- ವಿಕಾಸವಾದದ ಥಿಯರಿಗಳು, ಪ್ರಾಕೃತಿಕ ಆಯ್ಕೆ ನಿಜ. ಡಾರ್ವಿನ್ ಹಾಗೂ ಪತಂಗಗಳಿಗೇ ಸಂಬಂಧಿಸಿದ ಇನ್ನೊಂದು ಸಂಗತಿಯೊಂದಿಗೆ ಇದನ್ನು ಮುಗಿಸೋಣ. ಚಿಟ್ಟೆಗಳು, ಪತಂಗಗಳು ಮತ್ತು ಕೆಲವು ಸಸ್ಯಗಳಿಗೆ ಇರುವ ನಿರ್ದಿಷ್ಟ ಸಂಬಂಧವನ್ನು ಡಾರ್ವಿನ್ 1862ರಷ್ಟು ಹಿಂದೆಯೇ ಹೇಳಿದ್ದ.

ಅದು ನಡೆದದ್ದು ಹೀಗೆ. ಡಾರ್ವಿನ್ ಆಗ ಲಂಡನ್ನಲ್ಲಿದ್ದ. ಮಡಗಾಸ್ಕರ್ ದ್ವೀಪ ದೇಶದಿಂದ ಒಬ್ಬಳು ಮಹಿಳೆ ಇವನಿದ್ದ ಲಂಡನ್ನಿನ ವಿಳಾಸಕ್ಕೆ ಒಂದು ಅಂಚೆ ಕಳಿಸಿದಳು. ಅದರಲ್ಲಿ ಕೆಲವು ಆರ್ಕಿಡ್‌ ಗಳಿದ್ದವು. ಅವುಗಳಲ್ಲಿ ಒಂದು ಆರ್ಕಿಡ್‌ನ ಮಕರಂದ ಗ್ರಂಥಿ ಅಥವಾ ಮಕರಂದ ನಾಳ (nectary) ಹನ್ನೆರಡು ಇಂಚಿನಷ್ಟು ಉದ್ದವಿತ್ತು. ಅದನ್ನು ನೋಡಿ ಡಾರ್ವಿನ್ ಒಂದು ತರ್ಕ ಮಂಡಿಸಿದ- ಇಷ್ಟು ಉದ್ದದ ಮಕರಂದ ನಾಳ ಇರುವ ಆರ್ಕಿಡ್ ಇದೆ ಅಂದರೆ, ಅಷ್ಟೇ ಉದ್ದದ ಹೀರುಕೊಂಡಿ ( proboscise) ಇರುವ ಪತಂಗ ಅಥವಾ ಚಿಟ್ಟೆ ಇರಲೇಬೇಕು.

ಯಾಕೆಂದರೆ ಈ ಆರ್ಕಿಡ್‌ಗೆ ಪರಾಗಸ್ಪರ್ಶ ಮಾಡಲು ಅದೇ ಪತಂಗದಿಂದ ಮಾತ್ರ ಸಾಧ್ಯ. ಮತ್ತು ಆ ಪತಂಗ ಇದ್ದರೆ ಮಾತ್ರ ಈ ಆರ್ಕಿಡ್ ಬದುಕುಳಿಯಲು ಸಾಧ್ಯ! ಇದೇ ಕೋ ಎವಲ್ಯೂಶನ್ ಅಥವಾ ಒಂದನ್ನು ಅವಲಂಬಿಸಿಕೊಂಡು ಇನ್ನೊಂದು ಬದುಕುವ, ವಿಕಾಸವಾಗುವ ರೀತಿ. ಆದರೆ, ಆ ಕಾಲದಲ್ಲಿ ಅಂಥ ಯಾವುದೇ ಪತಂಗ ಇನ್ನೂ ಕಂಡುಬಂದಿರಲಿಲ್ಲ.

ಅಷ್ಟೆಲ್ಲ ಉದ್ದದ ಹೀರುಕೊಂಡಿ ಇರುವ ಪತಂಗ ಇರಲಿಕ್ಕೇ ಸಾಧ್ಯವಿಲ್ಲ ಅಂತ ವಿಜ್ಞಾನಿಗಳು ಹೇಳಿ ಬಿಟ್ಟರು. ಆದರೆ ಅಲ್ಲಿಂದ 41 ವರ್ಷದ ಬಳಿಕ ಅಂಥದೊಂದು ಪತಂಗ ಪತ್ತೆಯಾಯ್ತು. ಅದು ಕೂಡ ಮಡಗಾಸ್ಕರ್ ನಲ್ಲಿ ಹಾಗೂ ಆ ಆರ್ಕಿಡ್ ದೊರೆತ ತಾಣದಲ್ಲಿಯೇ. ಇಂಥದೊಂದು ಪತಂಗ ಇರಬಹುದು ಅಂತ ಡಾರ್ವಿನ್ ನಾಲ್ಕು ದಶಕ ಮೊದಲೇ ತರ್ಕಿಸಿದ್ದ. ವಿಕಾಸವಾದ ಎಷ್ಟು ತರ್ಕ ಬದ್ಧ ಎಂಬುದಕ್ಕೆ ಇದು ಸಾಕ್ಷಿ.

ಹರೀಶ್‌ ಕೇರ

View all posts by this author