Dr Sudhakar Hosalli Column: ಹಿಂದೂಗಳ ರಾಷ್ಟ್ರ ಎಲ್ಲಾ ಕಾಲಕ್ಕೂ ಹಿಂದೂಸ್ತಾನವೇ ಆಗಬೇಕು !
ಹಿಂದುತ್ವದ ಪ್ರವರ್ತಕ ಸಾವರ್ಕರ್ ಅವರ ಚಿಂತನೆಯನ್ನು ಅಂಬೇಡ್ಕರ್‌ರವರು ಕಟುವಾಗಿ ಟೀಕಿಸಿ ದ್ದರು, ತಿರಸ್ಕರಿಸಿದ್ದರು ಎಂಬ ನಕಾರಾತ್ಮಕ ಅಭಿಪ್ರಾಯವನ್ನು ಸಮಾಜದಲ್ಲಿ ಒಂದು ವರ್ಗವು ಸೃಷ್ಟಿ ಸುತ್ತಲೇ ಬಂದಿದೆ. ಸಾವರ್ಕರರು ಹೇಳಿದ ‘ವಿಪರೀತ ಹಿಂದುತ್ವ’ವನ್ನು “ಇದು ಸಾಧು ಅಲ್ಲ" ಎಂಬು ದಾಗಿ ಅಂಬೇಡ್ಕರರು ಅಭಿಪ್ರಾಯಿಸಿದ್ದು ದಿಟ. ಆದರೆ, ಸಾವರ್ಕರ್ ಅವರ ಹಿಂದುತ್ವದ ಶ್ರೇಷ್ಠತೆಯನ್ನು ಅಂಬೇಡ್ಕರರು ಪೂರ್ಣ ಮನಸ್ಸಿನಿಂದ ಸ್ವೀಕಾರ ಮಾಡಿರುವುದನ್ನು ದಾಖಲೆಗಳು ದೃಢೀಕರಿಸುತ್ತವೆ


ತನ್ನಿಮಿತ್ತ
ಡಾ.ಸುಧಾಕರ ಹೊಸಳ್ಳಿ
ಇಂದು (ಮೇ 28), ಭಾರತದ ಸುಪುತ್ರ, ಹಿಂದೂ ಹೋರಾಟಗಾರ ವಿ.ಡಿ.ಸಾವರ್ಕರ್ ಅವರ 141ನೇ ವರ್ಷದ ಜನ್ಮದಿವಸ. ಸಾವರ್ಕರ್ ಅವರ ಹೆಸರು- ತ್ಯಾಗ-ಶೌರ್ಯಗಳನ್ನು ಭಾರತದ ಇತಿಹಾಸದ ಪುಟಗಳು ತಮ್ಮ ಮಡಿಲಲ್ಲಿ ದಾಖಲಿಸಿಕೊಂಡಿವೆ. ಭಾರತದ ಇತಿಹಾಸವು ಸಾವರ್ಕರ್‌ರ ವ್ಯಕ್ತಿತ್ವ ದಿಂದ ಸಿರಿವಂತವಾಗಿರುವುದು ತಿರಸ್ಕರಿಸಲಾಗದ ಸತ್ಯ. ಸಾವರ್ಕರ್‌ರ ದೇಶಪ್ರೇಮದ ಪರಂಪರೆ ನಿತ್ಯನೂತನವಾಗಿದ್ದು, ಈಗಲೂ ಕೋಟ್ಯಂತರ ಯುವಕರು ಸಾವರ್ಕರ್‌ರನ್ನು ತಮ್ಮ ಆದರ್ಶ ವಾಗಿಸಿಕೊಂಡಿದ್ದಾರೆ, ಅವರಿಗೆ ಸಮರ್ಪಿಸಿಕೊಂಡಿದ್ದಾರೆ.
ರಾಜಕೀಯ ಕಾರಣಕ್ಕಾಗಿ ಅಲ್ಲಲ್ಲಿ ಸಾವರ್ಕರ್ ಕುರಿತಾದ ವಿರೋಧಾಭಾಸಗಳು, ‘ಫಾಲ್ಸ್ ನರೇಟಿವ್’ ನ ಯೋಜನೆಗಳು ಕಾಣ ಸಿಗುತ್ತವೆ. ವಿರೋಧಿಸುವವರ ಎದೆಯಲ್ಲೂ ಸಾವರ್ಕರ್ ಅಜರಾಮರರೇ. ಕಾರಣ, ವಿರೋಧಿಗಳಿಗೂ ಅರಿವಿದ್ದಂತೆ ‘ಸಾವರ್ಕರ್’ ಎಂಬುದು ಕೇವಲ ಹೆಸರಲ್ಲ, ಅಳಿದುಹೋದ ದೇಹ ಮಾತ್ರವಲ್ಲ. ಅದೊಂದು ಶಕ್ತಿ, ಆತ್ಮಸ್ಥೈರ್ಯದ ಸಾಧನ. ಹಾಗಾಗಿ ಮೇ 28ರ ದಿನವನ್ನು ಒಂದಿಡೀ ಭಾರತವು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತದೆ.
ಕಾನೂನಿನ ಕಣ್ಣಿಂದಲೂ ಸ್ವೀಕೃತವಾಗಿದೆ ಹಿಂದುತ್ವ; ‘ಹಿಂದೂಧರ್ಮ’ ಎಂಬುದೊಂದು ಜೀವನ ಪದ್ಧತಿ ಎಂದು ದೃಢೀಕೃತವಾಗಿದೆ. ಇದು ದೃಢೀಕೃತವಾದ ಹಿಂದುತ್ವ ಎಂಬುದನ್ನು ಜಗತ್ತೇ ಒಪ್ಪುತ್ತದೆ. ಹಿಂದುತ್ವವೆಂದರೆ ಎಲ್ಲರನ್ನೂ ಒಳಗೊಳ್ಳುವುದು. ಹಿಂದುತ್ವವು ಜಗತ್ತಿನ ಶಾಂತಿಯನ್ನು ಕಾಪಾಡಲು ಸಶಕ್ತವಾಗಿದೆ.
ಹಿಂದುತ್ವವು ಮನುಕುಲಕ್ಕೆ ಪೂರಕವಾದದ್ದು ಎಂಬ ಸಾರವನ್ನು ತಮ್ಮ ಭಾಷೆ, ಬರವಣಿಗೆ, ಅಧ್ಯಯನ ಮತ್ತು ಬೋಧನೆ ಮೂಲಕ ಭಾರತಕ್ಕಷ್ಟೇ ಅಲ್ಲದೆ ಜಗತ್ತಿಗೇ ಒಪ್ಪಿಸಿದ ಧೀಮಂತರು ಸಾವರ್ಕರ್. ‘ಬೃಹಸ್ಪತಿ ಆಗಮ’ದಲ್ಲಿ ಉಲ್ಲೇಖವಾಗಿರುವ ‘ತಮ್ ದೇವ ನಿರ್ಮಿತಂ ದೇಶಂ ಹಿಂದೂ ಸ್ತಾನಂ ಪ್ರಚಕ್ಷಯತೆ’ ಎಂಬ ಮಾತಿನಂತೆ ಹಿಂದುತ್ವ, ಹಿಂದೂ ಧರ್ಮ, ಹಿಂದೂ ದೇಶ ಶ್ರೇಷ್ಠ ವಾದದ್ದು; ಅದನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ಹಿಂದೂ ವಿನದು ಎಂದು ಸಾವರ್ಕರ್ ಘೋಷಿಸಿದ್ದರು.
ಹಿಂದೂ ಧರ್ಮವು ಮಾನವ ಜೀವನವನ್ನು ಒಳಗೊಂಡಂತೆ ಅನೇಕ ರಾಷ್ಟ್ರಗಳು ಸೇರಿದಂತೆ ಸಕಲ ಸೃಷ್ಟಿಯ ಜೀವನವನ್ನು ಗೌರವಿಸುತ್ತದೆ, ಎಲ್ಲರೂ ಒಟ್ಟಾಗಿ ಪ್ರಗತಿ ಸಾಧಿಸಲು ಸಹಾಯ ಮಾಡು ತ್ತದೆ. ದೇಹ, ಮನಸ್ಸು, ಬುದ್ಧಿ ಈ ಮೂರರ ಜತೆಗೆ ಆತ್ಮದ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ ಎಂಬುದು ನಿರ್ವಿವಾದ ಧ್ಯೇಯ. ಹೀಗೆ ಹಿಂದುತ್ವವನ್ನು ಸಾರಿ, ಅಭಿವೃದ್ಧಿಪಡಿಸಲು, ಆತ್ಮಾರ್ಪಣೆ ಮಾಡಿಕೊಳ್ಳಲು ಕರೆಕೊಟ್ಟಿದ್ದ ಸಾವರ್ಕರ್ ಅವರನ್ನು, ಅವರ ಚಿಂತನೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಅತ್ಯಂತ ಕಠೋರವಾಗಿ ಟೀಕಿಸಿದ್ದರು ಮತ್ತು ತಿರಸ್ಕರಿಸಿದ್ದರು ಎಂಬ ನಕಾ ರಾತ್ಮಕ ಅಭಿಪ್ರಾಯಮಾಲೆಯನ್ನು ಸಮಾಜದಲ್ಲಿ ಒಂದು ವರ್ಗವು ಸೃಷ್ಟಿಸುತ್ತಲೇ ಬಂದಿದೆ.
ಸಾವರ್ಕರರು ಹೇಳಿದ ‘ವಿಪರೀತ ಹಿಂದುತ್ವ’ವನ್ನು “ಇದು ಸಾಧು ಅಲ್ಲ" ಎಂಬುದಾಗಿ ಅಂಬೇ ಡ್ಕರರು ಅಭಿಪ್ರಾಯಿಸಿದ್ದು ದಿಟ. ಆದರೆ, ಸಾವರ್ಕರ್ ಅವರ ಹಿಂದುತ್ವದ ಶ್ರೇಷ್ಠತೆಯನ್ನು ಅಂಬೇಡ್ಕರರು ಪೂರ್ಣ ಮನಸ್ಸಿನಿಂದ ಸ್ವೀಕಾರ ಮಾಡಿರುವುದನ್ನು ದಾಖಲೆಗಳು ದೃಢೀಕರಿಸು ತ್ತವೆ.
ಸಮಾಜದಲ್ಲಿ ಸತ್-ಚಿಂತನೆಗಳು, ಮೂಲಬೋಧನೆಗಳನ್ನು ಪಸರಿಸುವ ಉದ್ದೇಶದಿಂದ ಸಾವರ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಈ ಕುರಿತಾದ ಅವಲೋಕನವು ಅಗತ್ಯವಾಗಿದೆ. “ನೀವು ಬಂದರೆ ನಿಮ್ಮೊಡನೆ, ನೀವು ಬಾರದಿದ್ದರೆ ನಿಮ್ಮನ್ನು ಬಿಟ್ಟು, ನೀವು ವಿರೋಧಿಸಿದರೆ ನಿಮ್ಮನ್ನು ಮೀರಿ ತಮ್ಮ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಶಕ್ತಿ ಮೀರಿ ಹೋರಾಡಲು ಹಿಂದೂಗಳು ಸದಾ ಸಿದ್ಧರಿದ್ದಾರೆಂದೂ ಸಾವರ್ಕರರು ಮುಸ್ಲಿಮರಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸ್ಪಷ್ಟ ನಿಲುವು ರವಾನಿಸಿದ್ದಾರೆ" ಎಂದು ಅಂಬೇಡ್ಕರರು ದಾಖಲಿಸಿದ್ದಾರೆ.
ಮುಂದುವರಿದು ಅವರು ದಾಖಲಿಸುವುದು ಹೀಗೆ: ಸಾವರ್ಕರರು ತಮ್ಮ ಯೋಜನೆಗೆ (ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ) ಮುಸ್ಲಿಮರ ಪ್ರತಿಕ್ರಿಯೆಯ ಬಗೆಗೆ ಏನೂ ಚಿಂತೆ ಮಾಡಿವರಲ್ಲ, ಅವರು ತಮ್ಮ ಯೋಜನೆಯನ್ನು ರೂಪಿಸಿ, ‘ಸ್ವೀಕರಿಸಿ, ಇಲ್ಲವೇ ತ್ಯಜಿಸಿ’ ಎಂಬ ಸೂಚನೆಯೊಂದಿಗೆ ಮುಸ್ಲಿಮರ ಮುಖಕ್ಕೆ ಎಸೆದುಬಿಡುತ್ತಾರೆ. ಮುಸ್ಲಿಮರು ಸ್ವರಾಜ್ಯದ ಹೋರಾಟಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸಬಹುದು ಎಂಬುದರ ಬಗೆಗೆ ಅವರು ಗಲಿಬಿಲಿಗೊಳ್ಳಲಿಲ್ಲ.
ಹಿಂದೂಗಳ ಮತ್ತು ಹಿಂದೂ ಮಹಾಸಭೆಯ ತಾಕತ್ತನ್ನು ಅವರು ಚೆನ್ನಾಗಿ ಬಲ್ಲರು. ಹಿಂದೂಗಳು ಯಾರ ಸಹಾಯವೂ ಇಲ್ಲದೆ ಸ್ವತಃ ಬ್ರಿಟಿಷರಿಂದ ಸ್ವರಾಜ್ಯವನ್ನು ಕಿತ್ತುಕೊಳ್ಳಬಲ್ಲರು ಎಂಬ ಭರವಸೆಯಿಂದ ಹೋರಾಟವನ್ನು ಮುಂದುವರಿಸುವಂತೆ ಸಲಹೆ ಕೊಡುತ್ತಾರೆ (ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು; ಪುಟ ಸಂಖ್ಯೆ 503, ಸಂಪುಟ 6).
ಅಂಬೇಡ್ಕರರು ಹೇಳುವಂತೆ, ಸಾವರ್ಕರರು ಸ್ವರಾಜ್ಯದ ಭಾಗವಾಗಿ ಎರಡು ವಿಷಯಗಳನ್ನು ಪ್ರಮುಖವಾಗಿ ಪ್ರತಿಪಾದಿಸುತ್ತಾರೆ. ಮೊದಲನೆಯದು, ‘ಇಂಡಿಯಾಕ್ಕೆ ಹಿಂದೂಸ್ತಾನ ಎಂಬ ಅಂಕಿತ ನಾಮವನ್ನೇ ಉಳಿಸಿಕೊಳ್ಳಬೇಕು. ನಮ್ಮ ದೇಶಕ್ಕೆ ಹಿಂದೂಸ್ತಾನ ಎಂಬ ಹೆಸರು ಮುಂದುವರಿಯ ಬೇಕು. ಹಿಂದೂ ಜನಾಂಗದ ನೆಲೆಯಾಗಿರುವ ರಾಷ್ಟ್ರಕ್ಕೆ, ಹಿಂದೂಗಳ ದೇಶ ಎಂಬ ಅರ್ಥಸೂಚಿತ ವಾಗುವಂತೆ, ಸಿಂಧು ಎಂಬ ಮೂಲಪದದಿಂದ ಸಾಧಿತಗೊಂಡ ‘ಇಂಡಿಯಾ’, ‘ಹಿಂದ್’ ಮುಂತಾದ ನಾಮಾಂಕಿತಗಳನ್ನೂ ಬಳಸಬಹುದು.
ಭರತ ಭೂಮಿ ಮುಂತಾದವುಗಳು ನಿಜವಾಗಿಯೂ ನಮ್ಮ ದೇಶದ ಪ್ರಾಚೀನ ಹಾಗೂ ಬಹು ಮೆಚ್ಚಿನ ಉಪಾಧಿಗಳು. ಅವು ನಮ್ಮ ಸಂಸ್ಕೃತ ಗಣ್ಯವ್ಯಕ್ತಿಗಳಿಗೆ ಇನ್ನೂ ಹಿತವಾಗಿ ಉಳಿಯುತ್ತವೆ. ಆದೇನೇ ಇದ್ದರೂ, ನಮ್ಮ ತಾಯಿನಾಡನ್ನು ‘ಹಿಂದೂಸ್ತಾನ’ ಎಂದೇ ಕರೆಯಬೇಕು ಎಂಬ ಹಿಂದೂ ಗಳ ಹಠವು ಇಂದು ನಮ್ಮ ಹಿಂದೂಯೇತರ ಬಾಂಧವರ ಮೇಲೆ ಯಾವುದೇ ಅಕ್ರಮಣದಂತಾಗಲೀ ಅಪಮಾನದಂತಾಗಲೀ ಧ್ವನಿತವಾಗಲಾರದು.
ಆಂಗ್ಲೋ-ಇಂಡಿಯನ್ನರು ಇಷ್ಟೊಂದು ನ್ಯಾಯಸಮ್ಮತವಾದ ಈ ವಿಷಯದಲ್ಲಿ ಹಿಂದೂಗಳಾದ ನಮ್ಮ ಅಭಿಪ್ರಾಯ ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ನಮ್ಮ ಮುಸ್ಲಿಂ ಬಾಂಧವರ ಬಗ್ಗೆ ಹೇಳುವು ದಾದರೆ, ಹಿಂದೂ-ಮುಸ್ಲಿಂ ಐಕಮತ್ಯದಲ್ಲಿ ಈ ಸಣ್ಣ ವಿಷಯವನ್ನೇ ಒಂದು ದೊಡ್ಡ ಬೆಟ್ಟವನ್ನಾಗಿ ಮಾಡುವ ಅವರ ಪ್ರವೃತ್ತಿಯನ್ನು ನಾವು ಮುಚ್ಚಿಡಬೇಕಾಗಿಲ್ಲ. ಆದರೆ ಮುಸ್ಲಿಮರು ಇಂಡಿಯಾ ದಲ್ಲಿ ಮಾತ್ರ ನೆಲೆಸಿರುವುದಿಲ್ಲ, ಇಂಡಿಯಾದ ಮುಸ್ಲಿಮರು ಮಾತ್ರ ಇಸ್ಲಾಮಿನ ಅಳಿದುಳಿದ ಕಡು ಶ್ರದ್ಧಾಳುಗಳು ಅಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.
ಚೀನಾದೊಳಗೆ ಕೋಟಿಗಟ್ಟಲೆ ಮುಸಲ್ಮಾನರಿದ್ದಾರೆ. ಗ್ರೀಸ್, ಪ್ಯಾಲೆಸ್ತೀನ್, ಹಂಗರಿ ಮತ್ತು ಪೋಲೆಂಡ್ ಗಳಲ್ಲಿ ಕೂಡ ಅಲ್ಲಲ್ಲಿನ ಜನಸಮುದಾಯದ ಮಧ್ಯದಲ್ಲಿ ಸಾವಿರಾರು ಮುಸ್ಲಿಮರಿ ದ್ದಾರೆ. ಆದರೆ, ಅಲ್ಲಿ ಅಲ್ಪಸಂಖ್ಯಾತರು ಆಗಿರುವುದರಿಂದ, ಕೇವಲ ಒಂದು ಜನಸಮುದಾಯ ವಾದ್ದರಿಂದ ಆ ದೇಶಗಳ ಬಹುಸಂಖ್ಯಾತರ ನೆಲೆಗಳನ್ನು ಸೂಚಿಸುವ ಪ್ರಾಚೀನ ಹೆಸರುಗಳನ್ನು ಬದಲಾಯಿಸಲು ತಮ್ಮ ಅಸ್ತಿತ್ವವನ್ನು ಒಂದು ಕಾರಣವನ್ನಾಗಿ ಅವರು ಮುಂದಿಟ್ಟಿಲ್ಲ.
‘ಪೋಲಿಷ್’ ಜನರ ನಾಡು ಪೋಲೆಂಡ್ ಆಗಿಯೂ, ಗ್ರೀಕರ ನಾಡು ಗ್ರೀಸ್ ಆಗಿಯೂ ಮುಂದು ವರಿದಿವೆ. ಮುಸ್ಲಿಮರು ಅವುಗಳನ್ನು ವಿರೂಪಗೊಳಿಸಲೂ ಇಲ್ಲ ಅಥವಾ ಹುಚ್ಚು ಸಾಹಸಕ್ಕೆ ಇಳಿಯಲಿಲ್ಲ. ಅವರು ತಮ್ಮನ್ನು ‘ಪೋಲೆಂಡ್ ಮುಸ್ಲಿಮರು’ ಅಥವಾ ‘ಗ್ರೀಕ್ ಮುಸ್ಲಿಮರು’ ಅಥವಾ ‘ಚೀನಿ ಮುಸ್ಲಿಮರು’ ಎಂದು ಗುರುತಿಸಿಕೊಳ್ಳುವುದರಲ್ಲಿ ತೃಪ್ತಿ ಹೊಂದಿದ್ದಾರೆ.
ಅಂತೆಯೇ ನಮ್ಮ ಮುಸ್ಲಿಂ ಬಾಂಧವರು ತಮ್ಮನ್ನು ರಾಜಕೀಯವಾಗಿ ಅಥವಾ ಪ್ರಾದೇಶಿಕವಾಗಿ ‘ಹಿಂದೂಸ್ತಾನಿ ಮುಸಲ್ಮಾನರು’ ಎಂದು ಗುರುತಿಸಿಕೊಂಡು, ತಮ್ಮ ಧಾರ್ಮಿಕ-ಸಾಂಸ್ಕೃತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳ ಬಹುದು. ಅಷ್ಟೇ ಅಲ್ಲ, ಇಂಡಿಯಾಕ್ಕೆ ಅವರ ಆಗಮನವಾದ ಕಾಲ ದಿಂದ ಮುಸ್ಲಿಮರು ತಮ್ಮನ್ನು ಹಿಂದೂಸ್ತಾನಿಗಳೆಂದು ತಾವಾಗಿಯೇ ಕರೆದುಕೊಳ್ಳುತ್ತಿದ್ದರು.
ವಸ್ತುಸ್ಥಿತಿ ಹೀಗಿದ್ದರೂ, ನಮ್ಮ ದೇಶಬಾಂಧವರಲ್ಲಿ ಸಿಡುಕು ಸ್ವಭಾವದ ಕೆಲವೊಂದು ಮುಸ್ಲಿಂ ಗುಂಪುಗಳವರು, ನಮ್ಮ ದೇಶದ ಹೆಸರನ್ನು ಆಕ್ಷೇಪಿಸುತ್ತಾರೆ. ಇದರಿಂದಾಗಿ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಹೇಡಿಗಳಾಗಿ ನಾವು ಇರಬೇಕಾಗಿಲ್ಲ. ನಮ್ಮ ತಾಯಿನಾಡಿನ ಸಮ್ಮತವಾದ ಹೆಸರು ಹಿಂದೂಸ್ತಾನ; ಋಗ್ವೇದದ ಕಾಲದಿಂದಲೂ, ನಮ್ಮ ಕಾಲದ ಹಿಂದೂಗಳಲ್ಲಿಯೂ ಸಮ್ಮತವಾದ ‘ಸಿಂಧುಗಳು’ ಎಂಬುದರಿಂದ ಬಂದಂಥದ್ದು ಅದು. ನಮ್ಮ ತಾಯಿನಾಡಿನ ‘ಹಿಂದೂಸ್ತಾನ’ ಎಂಬ ಹೆಸರಿನಲ್ಲಿ ಸೂಚಿತವಾಗುವ ನಮ್ಮ ರಾಷ್ಟ್ರದ ಪರಂಪರೆಗೆ ನಾವು ಹಿಂದೂಗಳು ದ್ರೋಹ ಮಾಡಬಾರದು ಅಥವಾ ಭಂಗ ತರಬಾರದು.
ಜರ್ಮನ್ನರ ದೇಶ ‘ಜರ್ಮನಿ’ ಆಗುವಂತೆ, ಇಂಗ್ಲಿಷರ ನಾಡು ‘ಇಂಗ್ಲೆಂಡ್’ ಆಗುವಂತೆ, ತುರುಕರ ರಾಷ್ಟ್ರ ‘ತುಕಿಸ್ತಾನ’, ಆಫ್ಘನ್ನರದ್ದು ‘ಅಫ್ಘಾನಿಸ್ತಾನ’ ಆಗುವಂತೆ, ಹಿಂದೂಗಳ ರಾಷ್ಟ್ರವು ಎಲ್ಲಾ ಕಾಲಕ್ಕೂ ‘ಹಿಂದೂಸ್ತಾನ’ ಆಗುವಂತೆ ಭೂನಕ್ಷೆಗಳ ಮೇಲೆ ಅಳಿದುಹೋಗದ ಹಾಗೆ ನಾವು ನಮೂ ದಿಸಬೇಕು.
ಇನ್ನು, ಅಂಬೇಡ್ಕರರು ಪ್ರತಿಪಾದಿಸುವ ಎರಡನೆಯ ಅಂಶಕ್ಕೆ ಬರೋಣ: ಸಂಸ್ಕೃತವನ್ನು ಧಾರ್ಮಿಕ ಭಾಷೆಯನ್ನಾಗಿ, ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮತ್ತು ‘ದೇವ ನಾಗರಿ’ ಯನ್ನು ಹಿಂದೂ ಸಮುದಾಯದ ಲಿಪಿಯನ್ನಾಗಿಸಿಕೊಳ್ಳಬೇಕು. ಸಂಸ್ಕೃತ ನಮ್ಮ ದೇವಭಾಷೆ. ಸಂಸ್ಕೃತ ಮೂಲದ, ಸಂಸ್ಕೃತದಿಂದ ಪುಷ್ಟಿ ಪಡೆಯುವ ಹಿಂದಿ ನಮ್ಮ ಪ್ರಚಲಿತ ರಾಷ್ಟ್ರಭಾಷೆ. ಹಿಂದೂಗಳಾದ ನಮಗೆ ಸಂಸ್ಕೃತವು ಅತ್ಯಂತ ಸಂಪದ್ಭರಿತ, ಜಗತ್ತಿನ ಅತಿ ಪ್ರಾಚೀನ ಭಾಷೆಗಳಲ್ಲಿ ಅತ್ಯಂತ ಸಂಸ್ಕಾರಗೊಂಡ ಭಾಷೆ ಮಾತ್ರವಲ್ಲದೆ, ಎಲ್ಲ ಭಾಷೆಗಳಿಗಿಂತಲೂ ಹೆಚ್ಚು ಪವಿತ್ರವಾದ ಭಾಷೆಯಾಗಿದೆ. ನಮ್ಮ ಧಾರ್ಮಿಕ ಗ್ರಂಥಗಳು ಇತಿಹಾಸ, ತತ್ವಶಾಸ್ತ್ರ ಹಾಗೂ ಸಂಸ್ಕೃತಿ, ಅವುಗಳ ಬೇರುಗಳೆಲ್ಲವೂ ಸಂಸ್ಕೃತ ಸಾಹಿತ್ಯದಲ್ಲಿ ಆಳವಾಗಿ ಭದ್ರವಾಗಿ ತಳವೂರಿವೆ.
ಈ ಕಾರಣದಿಂದಾಗಿ ವಾಸ್ತವವಾಗಿ ಅದು ನಮ್ಮ ಜನಾಂಗದ ಜ್ಞಾನಕೇಂದ್ರ. ಸಂಸ್ಕೃತವು ನಮ್ಮ ಹಲವಾರು ಮಾತೃಭಾಷೆಗಳ ಜನನಿಯಾಗಿದ್ದು, ಉಳಿದವುಗಳಿಗೆ ತನ್ನ ಹಾಲುಣಿಸಿ ಪೋಷಿಸಿದ್ದಾಳೆ (ಪುಟ ಸಂಖ್ಯೆ: 492, 493, 494; ಸಂಪುಟ 6). ಅಂಬೇಡ್ಕರರು ಮುಂದುವರಿದು ಗುರುತಿಸುವುದು ಹೀಗೆ: ಶ್ರೀ ಸಾವರ್ಕರರು ಪಾಕಿಸ್ತಾನದ ಬದಲು ಸೂಚಿಸಿದ ಪರ್ಯಾಯ ವ್ಯವಸ್ಥೆಯಲ್ಲಿ ಸ್ಪಷ್ಟತೆ, ಛಾತಿ ಮತ್ತು ಖಚಿತತೆ ಇದೆ.
ಅವುಗಳಲ್ಲಿರುವ ಕಾಂಗ್ರೆಸ್ ಪ್ರಕಟಣೆ, ಅಲ್ಪಸಂಖ್ಯಾತರ ಹಕ್ಕುಗಳ ಬಗೆಗಿನ ಅನಿಶ್ಚಯತೆ, ಅಸ್ಪಷ್ಟತೆ ಮತ್ತು ಅನಿರ್ದಿಷ್ಟತೆಗಳನ್ನು ಗುರುತಿಸುತ್ತವೆ. ಮುಸ್ಲಿಮರು ಇಲ್ಲಿಯತನಕ ಹೋಗಬಹುದು, ಆದರೆ ಇದಕ್ಕಿಂತ ಮುಂದೆ ಅಲ್ಲ ಎಂದು ಅವರಿಗೆ ತಿಳಿಸುವ ಯೋಗ್ಯತೆ ಶ್ರೀ ಸಾವರ್ಕರ್ ಅವರ ಯೋಜನೆ ಗಿದೆ.
ಹಿಂದೂ ಮಹಾಸಭೆಯೊಂದಿಗೆ ತಮ್ಮ ಸ್ಥಾನಮಾನವೇನು ಎಂಬುದನ್ನು ಮುಸ್ಲಿಮರು ಅರಿತು ಕೊಂಡಿದ್ದಾರೆ. ತದ್ವಿರುದ್ಧವಾಗಿ, ಕಾಂಗ್ರೆಸ್ ಮುಸ್ಲಿಮರೊಡನೆ ನಡೆದುಕೊಳ್ಳುವ ರೀತಿ ಹಾಗೂ ಅಲ್ಪಸಂಖ್ಯಾತ ಪ್ರಶ್ನೆಯನ್ನು ಮೋಸಗಾರಿಕೆಯ ರೀತಿಯಲ್ಲಿ ಅಲ್ಲದಿದ್ದರೂ ತನ್ನ ವ್ಯವಹಾರ ಚಾತುರ್ಯದ ಒಂದು ಆಟವನ್ನಾಗಿ ಮಾಡಿದುದರಿಂದ, ಕಾಂಗ್ರೆಸ್‌ನೊಂದಿಗಿನ ತಮ್ಮ ಸಂಬಂಧ ಏನೆಂಬುದು ಮುಸಲ್ಮಾನರಿಗೇ ಸ್ಪಷ್ಟವಾಗಿ ತಿಳಿಯದು (ಪುಟ ಸಂಖ್ಯೆ 501; ಸಂಪುಟ 6).
ಒಟ್ಟಾರೆ, ಸಾವರ್ಕರರ ಸ್ವಾತಂತ್ರ್ಯ ಹೋರಾಟದ ಯೋಜನೆಯಲ್ಲಿ ಸ್ಪಷ್ಟತೆ ಮತ್ತು ದಕ್ಷತೆ ಇರುವು ದನ್ನು, ಹಾಗೂ ಇದೇ ವಿಷಯದಲ್ಲಿ ಕಾಂಗ್ರೆಸ್‌ನ ಕುತಂತ್ರ ಅಡಗಿರುವುದನ್ನು ಅಂಬೇಡ್ಕರರು ಸ್ಪಷ್ಟವಾಗಿ ಗ್ರಹಿಸಿದ್ದಾರೆ. ಜತೆಗೆ ನಿರ್ಭೀತಿಯಿಂದ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಇಂಥ ನಿಷ್ಠುರ ಜ್ಞಾನಿಗಳು ಮತ್ತು ಕಾನೂನು ಪಂಡಿತರಾದ ಅಂಬೇಡ್ಕರರ ಗ್ರಹಿಕೆಯನ್ನು ಹಿಂದೂ ಸಮಾಜ, ಅದರಲ್ಲೂ ಯುವಪೀಳಿಗೆ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ, ಮಂಥನಕ್ಕೆ ಒಳಪಡಿಸಿಕೊಂಡು, ಸೀಮಿತವಾಗದಂತೆ ರಾಷ್ಟ್ರಪರ ಚಿಂತನೆಗೆ ಮುಂದಾಗಬೇಕಿದೆ.
ಧರ್ಮ ಕೇಳಿ, ‘ಕಲ್ಮಾ’ ಪಠಿಸುವಂತೆ ಆಗ್ರಹಿಸಿ, ಹಿಂದೂ ಎಂದು ಖಚಿತಪಡಿಸಿಕೊಂಡು ಹತ್ಯೆ ಮಾಡಿದ ಪಹಲ್ಗಾಮ್‌ನ ಘಟನೆ, ಕಾಶ್ಮೀರದಲ್ಲಿನ ಪಂಡಿತರ ಸಾಮೂಹಿಕ ಹತ್ಯೆಗಳು ಮತ್ತು ಹೊರ ದಬ್ಬಿದ ಘಟನಾವಳಿಗಳು, ಹಿಂದುತ್ವದ ಮತ್ತು ಹಿಂದೂ ದೇಶದ ಕುರಿತಾದ ಸಾವರ್ಕರ್ ಅವರ ಚಿಂತನೆಯನ್ನು ಮರುಹುಟ್ಟು ಹಾಕುತ್ತಿರುವುದು ಚರ್ಚಾತೀತವಾದದ್ದೇ.
(ಲೇಖಕರು ಸಂವಿಧಾನ ತಜ್ಞರು)