ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sudhakar Hosalli Column: ಆರೆಸ್ಸೆಸ್‌ಗೆ ಟಕ್ಕರ್ ಕೊಡುವ ಯೋಜನೆಯೇ ಅಪರಾಧ

‘ಆರೆಸ್ಸೆಸ್’ ಎಂಬುದು ಪ್ರಾರಂಭದಿಂದಲೂ ಯಾವುದೇ ವಿಘಟನೆಯಿಲ್ಲದೆ, ಅಧಿಕಾರದ ಲಾಲಸೆ ಯಿಲ್ಲದೆ, ಗುರಿ ಸಾಧನೆಯೆಡೆಗೆ ನಿರಂತರ ಸಾಗುತ್ತಿರುವ, ಪರ್ಯಾಯವಿಲ್ಲದ ಸಂಘಟನೆ. ಆದರೆ, ಇದನ್ನು ಆಗಾಗ ಮುರಿದು ಹಾಕುವ ಯತ್ನಗಳೂ ಘಟಿಸಿವೆ. ಜಗತ್ತಿಗೇ ವಿಸ್ತರಿಸಿರುವ ಈ ಸಂಘಟನೆಯ ಕುರಿತು ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಸೆಲೆಕ್ಟಿವ್ ಯೋಜನೆಗಳು ಕಾಲ ಕಾಲಕ್ಕೂ ಕ್ರಿಯಾಶೀಲವಾಗಿವೆ.

ಆರೆಸ್ಸೆಸ್‌ಗೆ ಟಕ್ಕರ್ ಕೊಡುವ ಯೋಜನೆಯೇ ಅಪರಾಧ

-

Ashok Nayak Ashok Nayak Oct 8, 2025 10:49 AM

ಸಂಘದಕ್ಷ

ಡಾ.ಸುಧಾಕರ ಹೊಸಳ್ಳಿ

ಆರೆಸ್ಸೆಸ್ ಕೇವಲ ಶಿಸ್ತುಪಾಲನೆ, ಹಿಂದೂ ಧರ್ಮದ ಅಭಿವೃದ್ಧಿಯ ಗುರಿಯನ್ನಷ್ಟೆ ಹೊಂದಿಲ್ಲ. ರಾಷ್ಟ್ರೀಯತೆಯ ವೃದ್ಧಿ, ಪರಮಾಧಿಕಾರದ ರಕ್ಷಣೆ, ನಾಗರಿಕ ಕರ್ತವ್ಯಗಳ ಜಾರಿ ಹಾಗೂ ಸಂವಿಧಾನ ರಕ್ಷಣೆಗೆ ಜಾಗೃತಿ ಮುಂತಾದ ಸಂಕಲ್ಪಗಳನ್ನೂ ತೊಟ್ಟ ಸಂಘಟನೆ ಯಿದು. ಅಂಬೇಡ್ಕರ್ ಮತ್ತು ಆರೆಸ್ಸೆಸ್ ನಡುವಿನ ಬಲವಂತದ ಅಂತರ ವಿಸ್ತಾರಗೊಳ್ಳದೆ ಕುಗ್ಗುತ್ತಿದೆ.

ಈ ವರ್ಷದ ವಿಜಯದಶಮಿಯು ಹಿಂದೆಂದಿಗಿಂತ ಹೆಚ್ಚು ವಿಶೇಷವಾಗಿತ್ತು. ವಿಜಯ ದಶಮಿಯು ಸಹಜವಾಗಿ ಈ ನೆಲದ ಶೌರ್ಯ, ಪರಂಪರೆ, ಸಂಸ್ಕೃತಿಯ ಪ್ರತೀಕವಾಗಿ ನಿರಂತರವಾಗಿ ಆಚರಿಸ ಲ್ಪಡುತ್ತಿರುವುದು ಗೊತ್ತಿರುವ ಸಂಗತಿಯೇ. ಈ ವರ್ಷ ಅದರ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು- ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) 100 ವಸಂತಗಳನ್ನು ಮುಟ್ಟಿದ್ದರ ಸಂಭ್ರಮಾಚರಣೆ.

‘ಆರೆಸ್ಸೆಸ್’ ಎಂಬುದು ಪ್ರಾರಂಭದಿಂದಲೂ ಯಾವುದೇ ವಿಘಟನೆಯಿಲ್ಲದೆ, ಅಧಿಕಾರದ ಲಾಲಸೆ ಯಿಲ್ಲದೆ, ಗುರಿ ಸಾಧನೆಯೆಡೆಗೆ ನಿರಂತರ ಸಾಗುತ್ತಿರುವ, ಪರ್ಯಾಯವಿಲ್ಲದ ಸಂಘಟನೆ. ಆದರೆ, ಇದನ್ನು ಆಗಾಗ ಮುರಿದು ಹಾಕುವ ಯತ್ನಗಳೂ ಘಟಿಸಿವೆ. ಜಗತ್ತಿಗೇ ವಿಸ್ತರಿಸಿರುವ ಈ ಸಂಘಟನೆಯ ಕುರಿತು ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಸೆಲೆಕ್ಟಿವ್ ಯೋಜನೆಗಳು ಕಾಲ ಕಾಲಕ್ಕೂ ಕ್ರಿಯಾಶೀಲವಾಗಿವೆ.

ಆರೆಸ್ಸೆಸ್‌ನ ಮಹತ್ವ ಕುಗ್ಗುವಂತೆ ಮಾಡುವ ಇಂಥ ಯೋಜನೆಗಳಿಗೆ ಮಹಾತ್ಮರುಗಳ, ಚಿಂತಕರ ಹೆಸರುಗಳನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳಿವೆ. ಹೀಗೆ ಅತಿ ಹೆಚ್ಚು ದುರುಪಯೋಗವಾದ ಹೆಸರು ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರರದ್ದು. ಸಮಸಮಾಜದ ನಿರ್ಮಾಣದ ಕನಸಿಗೆ ಒತ್ತು ನೀಡಿ, ಅದರ ಸಾಕಾರಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಅಂಬೇಡ್ಕರರು ಆರೆಸ್ಸೆಸ್‌ನ ವಿರುದ್ಧ ಇದ್ದರು ಎಂದು ನಿರೂಪಿಸಲು ಇನ್ನಿಲ್ಲದ ಶ್ರಮ ವಹಿಸಲಾಗಿತ್ತು.

ಇದನ್ನೂ ಓದಿ: Dr Sudhakar Hosalli Column: ಹಿಂದೂಗಳ ರಾಷ್ಟ್ರ ಎಲ್ಲಾ ಕಾಲಕ್ಕೂ ಹಿಂದೂಸ್ತಾನವೇ ಆಗಬೇಕು !

ಇದು ಕೇವಲ ಆರೆಸ್ಸೆಸ್ ಮತ್ತು ಅಂಬೇಡ್ಕರರ ನಡುವೆ ಅಂತರ ಸೃಷ್ಟಿಸುವ ಯೋಜನೆಯಾಗಿರದೆ, ಆರೆಸ್ಸೆಸ್ ಮತ್ತು ಸಮಾಜದ ನಡುವೆ ಅಂತರ ಕಾಪಾಡುವ ವಾಮಮಾರ್ಗವೂ ಆಗಿತ್ತು. ಎಡಪಂಥೀ ಯರ ಬಹುದೊಡ್ಡ ಕಾಯಿಲೆಯೆಂದರೆ, ತಮ್ಮ ಸಿದ್ಧಾಂತದ ಹೇರಿಕೆಗೆ ಅಡ್ಡಿ ಯಾದಾಗಲೆಲ್ಲಾ ಅಂಬೇಡ್ಕರರನ್ನೇ ತೆರೆಮರೆಗೆ ಸರಿಸಲು ಹಿಂಜರಿಯದಿರುವುದು. ಇಂಥ ಮಾನಸಿಕ ಕಾಯಿಲೆಯ ವಾರಸುದಾರರು ಕೃತಕವಾಗಿ ಸೃಷ್ಟಿಸಿದ್ದ ಆರೆಸ್ಸೆಸ್ ಮತ್ತು ಅಂಬೇಡ್ಕರರ ನಡುವಿನ ಅಂತರವನ್ನು ಸಮಾಜದ ಹಿತದೃಷ್ಟಿಯಿಂದ, ಸಂಶೋಧನೆಯಿಂದ, ಅವಲೋಕನದಿಂದ ಶೋಧಿಸಲ್ಪಟ್ಟ ಸತ್ಯಸಾಧನಗಳ ಮೂಲಕ ತಗ್ಗಿಸುವುದು ಅಥವಾ ಇಲ್ಲವಾಗಿಸುವುದು ಆರೆಸ್ಸೆಸ್‌ಗೆ ನೂರು ವಸಂತ ತುಂಬಿರುವ ಈ ಕಾಲಘಟ್ಟದ ಜರೂರಾಗಿದೆ.

ಈ ನೆಲೆಯಲ್ಲಿ ಆರೆಸ್ಸೆಸ್ ಮತ್ತು ಅಂಬೇಡ್ಕರರ ನಡುವಿನ ಸಂಬಂಧವನ್ನು ಸಂಶೋಧನಾ ಆಯಾಮಗಳಲ್ಲಿ ಪರಿಶೀಲಿಸಿಕೊಳ್ಳಬೇಕಿದೆ. ರಾಷ್ಟ್ರದ ಹಿತದ ಬಗ್ಗೆಯೇ ಸದಾ ಆಲೋಚಿಸುತ್ತಿದ್ದ, ರಾಷ್ಟ್ರೀಯತೆಯ ವೃದ್ಧಿಗೆ ಕೊಡಬಹುದಾದ ಗರಿಷ್ಠ ಮಟ್ಟದ ಮಾನ್ಯತೆ ನೀಡುತ್ತಿದ್ದ ಅಂಬೇಡ್ಕರರು, ತಮ್ಮಂತೆಯೇ ಸಾಮರಸ್ಯದ ಸಮಾಜಕ್ಕಾಗಿ, ದೇಶದ ಉನ್ನತೀಕರಣಕ್ಕಾಗಿ, ದೇಶಾಭಿಮಾನದ ಸೆಲೆಗಳನ್ನು ವಿಸ್ತರಿಸಲು ಪಣತೊಟ್ಟ ಆರೆಸ್ಸೆಸ್ ಅನ್ನು ಅತ್ಯಂತ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದರು ಮತ್ತು ಅಷ್ಟೇ ಸಮಭಾವದಿಂದ ಗೌರವಿಸುತ್ತಿದ್ದರು ಎಂಬುದನ್ನು ಪುರಾವೆಗಳು ಸಾಬೀತುಪಡಿಸುತ್ತವೆ.

ಟಕ್ಕರ್ ನೀಡುವ ಗುರಿಯಿರಲಿಲ್ಲ: ಅಂಬೇಡ್ಕರರು ಬೌದ್ಧಮತಕ್ಕೆ ಸೇರ್ಪಡೆಯಾಗುವ ಕಾರ್ಯ ಕ್ರಮಕ್ಕೆ ಆರೆಸ್ಸೆಸ್‌ನ ಮೂಲನೆಲೆಯಾದ ನಾಗಪುರವನ್ನೇ ಆಯ್ಕೆಮಾಡಿಕೊಂಡಿದ್ದರು. ಆರೆಸ್ಸೆಸ್‌ಗೆ ಕಟು ಸಂದೇಶವನ್ನು ನೀಡುವುದೇ ಇದರ ಹಿಂದಿನ ಉದ್ದೇಶ ಎಂಬ ಎಲುಬಿಲ್ಲದ ವಾದವನ್ನು ಸೃಜಿಸಲಾಗಿತ್ತು. ಆದರೆ, ಸ್ವತಃ ಅಂಬೇಡ್ಕರರೇ ದಾಖಲು ಮಾಡಿರುವ ಬರಹವನ್ನು ಅವರ ‘ಸಮಗ್ರ ಬರಹಗಳು ಮತ್ತು ಭಾಷಣಗಳ ಸಂಪುಟ 18’ರ 724ನೇ ಪುಟದಲ್ಲಿ ಹೀಗೆ ಕಾಣಬಹುದು: “ನಾನು ಹಿಂದೂ ಧರ್ಮದಿಂದ ಹೊರ ಬಂದು, ನನ್ನ ಸಂಗಡಿಗರೊಡನೆ ಬೌದ್ಧ ಮತಕ್ಕೆ ಸೇರ್ಪಡೆಗೊಳ್ಳುವ ಸಲುವಾಗಿನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಆರೆಸ್ಸೆಸ್‌ಗೆ ಟಕ್ಕರ್ ಕೊಡುವ ಸಲುವಾಗಿ ಎಂದು ಕೆಲವರು ಸುದ್ದಿ ಹರಡಿಸುತ್ತಾರೆ.

ಅದೊಂದು ದೊಡ್ಡ ಸುಳ್ಳು ಮತ್ತು ಅನರ್ಥಕಾರಿ. ನಾಗಪುರದಲ್ಲಿನ ಬೌದ್ಧ ದೀಕ್ಷೆ ಕಾರ್ಯ ಕ್ರಮಕ್ಕೂ, ಇಂಥ ವಿವೇಕರಹಿತ ಪ್ರಚಾರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಆರೆಸ್ಸೆಸ್‌ಗೆ ಟಕ್ಕರ್ ಕೊಡುವ ಯೋಜನೆಯನ್ನು ಎಂದೂ ಹೊಂದಿಲ್ಲ".

ನಿರ್ಬಂಧ ಅಸಾಂವಿಧಾನಿಕವಾದದ್ದೇ: ಆರೆಸ್ಸೆಸ್‌ನ ಕಾರ್ಯವಿಸ್ತರಣೆಯನ್ನು ಕುಂಠಿತಗೊಳಿಸಲು ಮಾಡಬಹುದಾದ ಯಾವ ಪ್ರಯತ್ನಗಳನ್ನೂ ವಿರೋಧಿ ವಲಯವು ತಪ್ಪಿಸಿಕೊಂಡಿರಲಿಲ್ಲ. ಅಂದು 1966ರ ನವೆಂಬರ್ 30. ಅಂದಿನ ಕೇಂದ್ರ ಸರಕಾರವು ತಾನು ನೀಡಿದ ಅಧಿಕೃತ ಜ್ಞಾಪನ ಆದೇಶ ದಲ್ಲಿ, ಸರಕಾರಿ ನೌಕರರು/ಅಧಿಕಾರಿಗಳು ಆರೆಸ್ಸೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿತ್ತು.

2024ರ ಜುಲೈ 9ರ ಅಧಿಕೃತ ಜ್ಞಾಪನ ಆದೇಶದಲ್ಲಿ ಇಂದಿನ ಕೇಂದ್ರ ಸರಕಾರವು ಸದರಿ ಆದೇಶ ವನ್ನು ರದ್ದುಪಡಿಸಿ, ‘ಸರಕಾರಿ ನೌಕರರು ಆರೆಸ್ಸೆಸ್‌ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಾಂವಿಧಾನಿಕವಾಗಿ/ಕಾನೂನಿನ ಅನ್ವಯ ಅಪರಾಧವಲ್ಲ’ ಎಂದು ತಿಳಿಸಿದೆ.

ಹಾಗಾದರೆ, 1966ರಿಂದ ಸರಕಾರಿ ನೌಕರರು ಆರೆಸ್ಸೆಸ್‌ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರ ಲಿಲ್ಲವೇ? ಎಂಬ ಪ್ರಶ್ನೆ ಎದುರಾಗುತ್ತದೆ. ಜಗತ್ತಿನ ಅತಿದೊಡ್ಡ ಸಾಮಾಜಿಕ ಸಂಘಟನೆಯಾದ ಆರೆಸ್ಸೆಸ್‌ನಲ್ಲಿ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದವರೂ ಸರಕಾರಿ ವ್ಯವಸ್ಥೆಯಲ್ಲಿ ಉನ್ನತ ಶ್ರೇಣಿಯನ್ನು ಹೊಂದಿದ್ದರು. ಇಂಥವರು ನಿರ್ಬಂಧದ ಸಮಯದಲ್ಲೂ, ನಿರ್ಬಂಧ ರದ್ದಾಗುವವರೆಗೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಂಘಟನೆಯು ನಿರ್ಬಂಧಕ್ಕೆ ಒಳಪಟ್ಟಿದ್ದು ದೌರ್ಭಾಗ್ಯದ ಬೆಳವಣಿಗೆ.

ಸಂವಿಧಾನದ ರಕ್ಷಣೆಯಲ್ಲಿ ಆರೆಸ್ಸೆಸ್‌ನ ಹೆಜ್ಜೆಗಳು: ಸಂವಿಧಾನದ ಆರಂಭದಿಂದಲೂ, ಸಂವಿಧಾನಕ್ಕೆ ಬಹುದೊಡ್ಡ ವಿರೋಧಿಯಾಗಿ ಕಾಣುವುದು ಷರಿಯತ್ ಕಾನೂನು. ‘ನಮಗೆ ಸಂವಿಧಾನಕ್ಕಿಂತಲೂ ಷರಿಯತ್ ಮುಖ್ಯ’ ಎಂದು ಮುಸ್ಲಿಮರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ, 1949ರ ನವೆಂಬರ್ 28ರಂದು ಆರೆಸ್ಸೆಸ್ ತನ್ನ ‘ಆರ್ಗನೈಸರ್’ ಪತ್ರಿಕೆಯಲ್ಲಿ, ‘ಈ ಸಂವಿಧಾನ ದಲ್ಲಿ ಭಾರತೀಯತೆಯ ಗುಣಗಳು ಪೂರ್ಣಪ್ರಮಾಣದಲ್ಲಿ ಸ್ಥಾನ ಪಡೆದಿಲ್ಲ ಮತ್ತು ಪರಕೀಯತೆ ಯನ್ನೇ ಹೆಚ್ಚಾಗಿ ಎರವಲು ಪಡೆಯಲಾಗಿದೆ’ ಎಂಬುದಾಗಿ ಉಲ್ಲೇಖಿಸಿ, ಸಂವಿಧಾನದ ತತ್ವಗಳ ಕುರಿತಾದ ಪರಾಮರ್ಶನವನ್ನು ಮಾಡಿದ್ದುಂಟು.

ಅದಾಗಿಯೂ, ಆರಂಭದ ಕಾಲದಿಂದ ಇಲ್ಲಿಯವರೆಗೂ ಸಂವಿಧಾನದ ಆಶಯಗಳನ್ನು ಗೌರವಿಸು ವಲ್ಲಿ ಆರೆಸ್ಸೆಸ್ ಎಂದೂ ಹಿಂದೆ ಬೀಳಲಿಲ್ಲ ಎಂಬುದನ್ನು ಅಂಕಿ-ಸಂಖ್ಯೆಗಳು ದೃಢಪಡಿಸುತ್ತವೆ. ಉದಾಹರಣೆಗೆ, ಸಂವಿಧಾನಕ್ಕೆ ಆಗಿರುವ ಒಟ್ಟು 106 ತಿದ್ದುಪಡಿಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ 76 ತಿದ್ದುಪಡಿಗಳನ್ನು ಮಾಡಿದೆ; ಈ ಪೈಕಿ ಕೇವಲ 11 ತಿದ್ದುಪಡಿಗಳನ್ನು ಶೋಷಿತರು ಮತ್ತು ದಲಿತರ ಪರವಾಗಿ ಮಾಡಲಾಗಿದೆ.

ಜತೆಗೆ, ಸಂವಿಧಾನ ಮತ್ತು ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿ, ಅಸಾಂವಿಧಾನಿಕ ಮಾರ್ಗದಲ್ಲಿ 42ನೇ ತಿದ್ದುಪಡಿಯನ್ನು ಮಾಡಲಾಗಿದೆ, ಬಾಬಾ ಸಾಹೇಬರು ಕೊಟ್ಟ 395 ವಿಧಿಗಳಲ್ಲಿ 56 ವಿಧಿಗಳನ್ನು ಒಂದೇ ತಿದ್ದುಪಡಿಯಲ್ಲಿ ವಿರೂಪಗೊಳಿಸಲಾಗಿದೆ.

ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ 370ನೇ ವಿಧಿಯನ್ನು ಸಂವಿಧಾನದ ಭಾಗವನ್ನಾಗಿ ಮಾಡಿತ್ತು. ಇಂಥ ಅಸಾಂವಿಧಾನಿಕ ಕ್ರಮಗಳ ವಿರುದ್ಧ ಆರೆಸ್ಸೆಸ್ ಹೋರಾಡುತ್ತಲೇ ಬಂದಿದೆ. ಆರೆಸ್ಸೆಸ್‌ನ ಸಹಕಾರದಿಂದ ರೂಪುಗೊಂಡ ಜನಸಂಘ ನೇತೃತ್ವದ ಸರಕಾರವು 44ನೇ ತಿದ್ದುಪಡಿಯಲ್ಲಿ, 42ನೇ ತಿದ್ದುಪಡಿಯ ಅನೇಕ ಕ್ರಮಗಳನ್ನು ಸಂವಿಧಾನದಿಂದ ಹೊರದಬ್ಬಿದೆ.

ಮುಂದುವರಿದು ಹೇಳುವುದಾದರೆ, ಆರೆಸ್ಸೆಸ್‌ನ ರಾಜಕೀಯ ವಿಭಾಗವಾದ ಬಿಜೆಪಿ ನೇತೃತ್ವದ ಸರಕಾರವು ಒಟ್ಟು 22 ತಿದ್ದುಪಡಿಗಳನ್ನು ಮಾಡಿದ್ದು, ಇದರಲ್ಲಿ 9 ತಿದ್ದುಪಡಿಗಳನ್ನು ದಲಿತರ ಕಲ್ಯಾಣಕ್ಕಾಗಿ ಮಾಡಲಾಗಿದೆ. ಸಂವಿಧಾನವು ಅಸಮಾನತೆಯಿಂದ ಬಾಧಿಸಲ್ಪಡುವ ಹಾಗೆ ಮಾಡಿದ್ದ 370ನೇ ವಿಧಿಯನ್ನು ಇದೇ ಸರಕಾರವು ರದ್ದುಗೊಳಿಸಿದೆ.

ಪ್ರತಿ ವರ್ಷದ ನವೆಂಬರ್ 26ರಂದು ‘ಸಂವಿಧಾನದ ದಿವಸ’ ಎಂದು ಅಧಿಕೃತವಾಗಿ ಘೋಷಣೆ ಮಾಡುವ ಮುಖಾಂತರ, ಸಂವಿಧಾನದ ಮಹತ್ವವನ್ನು ಅದು ಯುವಪೀಳಿಗೆಯಲ್ಲಿ ತಿಳಿಯ ಪಡಿಸುತ್ತಿದೆ.

ಸಾಮಾಜಿಕ ಸಾಮರಸ್ಯದ ಸಂಕಲ್ಪ: ಅಂಬೇಡ್ಕರರು ಪ್ರಧಾನವಾಗಿ ಆಗ್ರಹಿಸುತ್ತಿದ್ದ ಸಾಮಾಜಿಕ ಸಾಮರಸ್ಯವನ್ನು ಆರೆಸ್ಸೆಸ್ ತನ್ನ ಬಹುಮುಖ್ಯ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿದೆ. ಸಂವಿಧಾನ, ಸರಕಾರಗಳು ಬದಿಗೆ ಸರಿಸಲಾಗದ ಜಾತಿ ಪದ್ಧತಿಯನ್ನು, ಅದರ ಬೇರುಗಳನ್ನು ಕೀಳಲು ಆರೆಸ್ಸೆಸ್ ಅನೇಕ ಉಪಕ್ರಮಗಳನ್ನು ಯೋಜಿಸುತ್ತಿದೆ.

ಭಾರತದಲ್ಲಿ ಜಾತಿಯನ್ನು ಕೇಳದೆ ಎಲ್ಲರನ್ನೂ ತೊಡಗಿಸಿಕೊಳ್ಳುವ ಏಕೈಕ ಸಂಘಟನೆಯೆಂದರೆ ಅದು ಆರೆಸ್ಸೆಸ್. ದೇಶದೆಲ್ಲೆಡೆ ಆವರಿಸಿರುವ ಆರೆಸ್ಸೆಸ್ ಪ್ರಸ್ತುತ 73,117 ಶಾಖೆಗಳನ್ನು, 27,720 ಮಂಡಲ ಶಾಖೆಗಳನ್ನು, 27,717 ಸಂಪರ್ಕ ಮಿಲನ್ ಶಾಖೆಗಳನ್ನು, 10,567 ಸಂಗಮ ಮಂಡಳಿ ಗಳನ್ನು ನಡೆಸುತ್ತಿದೆ.

ತನ್ನ ಸ್ಥಾಪನೆಯ ಶತಮಾನೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಯೋಜಿಸಿರುವ ‘ಪಂಚಪರಿವರ್ತನೆ’ಯಲ್ಲಿ ನಾಗರಿಕ ಶಿಷ್ಟಾಚಾರ ಎಂಬುದು ಒಂದು ಆಯಾಮ. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ, ಕಾನೂನು ಮತ್ತು ನಿಯಮಗಳನ್ನು ಸ್ವಯಂಪ್ರೇರಿತವಾಗಿ ಪಾಲಿಸಬೇಕು ಎಂಬುದೇ ಇದರ ತಿರುಳು. ಈ ಆಯಾಮದ ಸಾಕಾರಕ್ಕಾಗಿ ಆರೆಸ್ಸೆಸ್ ರಾಷ್ಟ್ರದ ತುಂಬೆಲ್ಲಾ ಅಭಿಯಾನವನ್ನು ಹಮ್ಮಿಕೊಂಡಿದೆ.

ಆರೆಸ್ಸೆಸ್ ಕೇವಲ ಶಿಸ್ತುಪಾಲನೆ, ಹಿಂದೂ ಧರ್ಮದ ಅಭಿವೃದ್ಧಿಯ ಗುರಿಯನ್ನಷ್ಟೆ ಹೊಂದಿಲ್ಲ. ರಾಷ್ಟ್ರೀಯತೆಯ ವೃದ್ಧಿ, ಪರಮಾಧಿಕಾರದ ರಕ್ಷಣೆ, ನಾಗರಿಕ ಕರ್ತವ್ಯಗಳ ಜಾರಿ ಹಾಗೂ ಸಂವಿಧಾನ ರಕ್ಷಣೆಗೆ ಜಾಗೃತಿ ಮುಂತಾದ ಸಂಕಲ್ಪಗಳನ್ನೂ ತೊಟ್ಟ ಸಂಘಟನೆಯಿದು. ಅಂಬೇಡ್ಕರ್ ಮತ್ತು ಆರೆಸ್ಸೆಸ್ ನಡುವಿನ ಬಲವಂತದ ಅಂತರ ವಿಸ್ತಾರಗೊಳ್ಳದೆ ಕುಗ್ಗುತ್ತಿದೆ.

(ಲೇಖಕರು ಸಂವಿಧಾನ ತಜ್ಞರು)