ಕಾಡುದಾರಿ
ಈ ಸಲದ (2026) ವೈದ್ಯಕೀಯ- ಶರೀರಶಾಸ್ತ್ರ ನೊಬೆಲ್ ಪ್ರಶಸ್ತಿ ಯಾರಿಗೆ ಬಂತು, ಯಾತಕ್ಕೆ ಬಂತು ಎಂಬ ವಿವರವನ್ನು ಓದುತ್ತಿದ್ದಾಗ ಥಟ್ಟನೆ ನೆನಪಿಗೆ ಬಂದದ್ದು ನಮ್ಮ ಋಗ್ವೇದದ 3ನೇ ಮಂಡಲ ದಲ್ಲಿರುವ ಗಾಯತ್ರಿ ಮಂತ್ರ. ವಿಶ್ವಾಮಿತ್ರ ಋಷಿಯೇ ದ್ರಷ್ಟಾರನೆಂದು ತಿಳಿಸಲಾಗಿರುವ ಈ ಮಂತ್ರ ಎಲ್ಲರಿಗೂ ಗೊತ್ತು- ‘ಓಂ ಭೂರ್ಭುವಸ್ವಃ ತತ್‌ಸವಿತೃವರೇಣ್ಯಂ ಭರ್ಗೋ ದೇವಸ್ಯ ಧಿಮಹಿ ಧಿಯೋಯೋನಃ ಪ್ರಚೋದಯಾತ್.’
ಇದರ ಸರಳ ಅರ್ಥ ಹೀಗೆ: ‘ಈ ಭೂ ಭುವ ಸ್ವ ಲೋಕಗಳನ್ನು ಪೊರೆಯುತ್ತಿರುವ ಬೆಳಕಿನ ಶಕ್ತಿಯೇ, ಸೂರ್ಯನಿಗೂ ದೇವತೆಗಳಿಗೂ ಚೈತನ್ಯವನ್ನು ನೀಡಿರುವ ನೀನು ನಮ್ಮಲ್ಲಿ ಧಿಶಕ್ತಿಯನ್ನು ಪ್ರಚೋದಿಸು.’ ಬೆಳಕು ನಮ್ಮ ಚೈತನ್ಯಕ್ಕ ಮೂಲ, ಅದು ಮೆದುಳನ್ನು ಚುರುಕುಗೊಳಿಸುತ್ತದೆ ಎಂದು ಋಗ್ವೇದದ ಕಾಲದಲ್ಲೇ ಚಿಂತಿಸಿದ್ದರು ಎಂಬುದರ ದಾಖಲೆ ಇದು. ಇದನ್ನು ಈ ಸಲದ ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಂಶೋಧನೆಗೆ ನೇರವಾಗಿ ಅನ್ವಯಿಸಿ ‘ನಮಗೆ ಮೊದಲೇ ಇದೆಲ್ಲ ಗೊತ್ತಿತ್ತು’ ಎಂದೆಲ್ಲ ಅನ್ವಯಿಕೆ ಮಾಡುವ ಧೈರ್ಯ ನನಗಿಲ್ಲ.
ಹಾಗೆ ಅನ್ವಯಿಸುವುದೂ ಸರಿಯಲ್ಲ. ಆದರೆ ಮೆದುಳಿನ ಕಾರ್ಯವೈಖರಿಯ ಕುರಿತಾದ ಈ ಸಂಶೋಧನೆ ಕುತೂಹಲಕಾರಿ ದಿಕ್ಕಿನ ಕಡೆಗೆ ಸಾಗಿದೆ ಎಂಬುದಂತೂ ಸತ್ಯ. ಮನುಷ್ಯನ ದೇಹದಲ್ಲಿ ರುವ ಎಲ್ಲ ಅಂಗಗಳ ಪೈಕಿ ವಿeನಕ್ಕೆ ಅತ್ಯಂತ ಪರಿಚಿತವೂ, ಅದೇ ವೇಳೆಗೆ ಅತ್ಯಂತ ಅಪರಿಚಿತವೂ ಆಗಿರುವ ಅಂಗವೆಂದರೆ ಮೆದುಳು. ಮೆದುಳು ವಿದ್ಯುತ್ ಮತ್ತು ರಾಸಾಯನಿಕ ಸಂಕೇತಗಳ ಮೂಲಕ ದೇಹವನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: Harish Kera Column: ಇತಿಹಾಸ ಬದಲಿಸಿದ ಒಂದು ವಾಕಿಂಗ್
ನೆನಪುಗಳನ್ನು ಸೃಷ್ಟಿಸುತ್ತದೆ, ಭಾವನೆಗಳನ್ನು ಹುಟ್ಟಿಸುತ್ತದೆ, ಭಾಷೆಯನ್ನು ಅರ್ಥಮಾಡಿಕೊಳ್ಳು ತ್ತದೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ, ಕನಸು ಕಾಣುತ್ತದೆ ಮತ್ತು ತನ್ನದೇ ಅಸ್ತಿತ್ವದ ಬಗ್ಗೆ ಯೋಚಿಸುತ್ತದೆ ಎಂದೆಲ್ಲ ನಮಗೆ ಗೊತ್ತು. ಆದರೆ ಇದೆಲ್ಲ ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ಹುಡುಕುವ ನರವ್ಯೂಹಶಾಸ್ತ್ರದ ದೀರ್ಘ ಪ್ರಯಾಣದಲ್ಲಿ 2026ರ ನೊಬೆಲ್ ಪ್ರಶಸ್ತಿ ಒಂದು ಮಹತ್ವದ ಮೈಲಿಗಲ್ಲು.
2026ರ ವೈದ್ಯಕೀಯ- ಶರೀರಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಕಾರ್ಲ್ ಡೈಸೆರೋತ್, ಪೀಟರ್ ಹೆಗಮನ್ ಮತ್ತು ಜಾರ್ಜ್ ನಾಗೆಲ್ ಅವರಿಗೆ ನೀಡಲಾಗಿದೆ. ಅವರ ಕೆಲಸ ‘ಆಪ್ಟೋಜೆನೆಟಿಕ್ಸ್’ ಎಂಬ ತಂತ್ರಜ್ಞಾನಕ್ಕೆ ಅಡಿಪಾಯ ಹಾಕಿದೆ. ಈ ತಂತ್ರಜ್ಞಾನದ ಮೂಲಕ ಜೀವಂತ ಮೆದುಳಿನ ನಿರ್ದಿಷ್ಟ ನರಕೋಶಗಳನ್ನು ಬೆಳಕಿನ ಸಹಾಯದಿಂದ ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.
ಒಂದು ನರಕೋಶಕ್ಕೆ ಆನ್ ಅಥವಾ ಆಫ್ ಹೇಳಬಹುದು. ನರಶಾಸ್ತ್ರದ ಇತಿಹಾಸದಲ್ಲಿ ಇದೊಂದು ಕ್ರಾಂತಿ. ಹೇಗೆ ಎಂದು ತಿಳಿಯಬೇಕಿದ್ದರೆ ಮೆದುಳಿನ ಅಧ್ಯಯನದ ಇತಿಹಾಸ ಚೂರು ತಿಳಿಯಬೇಕು. 19ನೇ ಶತಮಾನದ ಕೊನೆಯ ಭಾಗದಲ್ಲಿ ವಿಜ್ಞಾನಿಗಳು ಮೆದುಳಿನ ಒಳಭಾಗವನ್ನು ಸೂಕ್ಷ್ಮ ದರ್ಶಕದ ಮೂಲಕ ನೋಡಲು ಆರಂಭಿಸಿದರು.
ಸ್ಪ್ಯಾನಿಷ್ ವಿಜ್ಞಾನಿ ಸಾಂಟಿಯಾಗೊ ರಾಮೋನ್ ಇ ಕಹಾಲ ನರಕೋಶಗಳ ಸೂಕ್ಷ್ಮ ರಚನೆಯ ಅಧ್ಯಯನ ಮಾಡಿದರು. ಮೆದುಳು ಕೋಟ್ಯಂತರ ಪ್ರತ್ಯೇಕ ನರಕೋಶಗಳಿಂದ ನಿರ್ಮಿ ತವಾಗಿದೆ ಎಂಬ ಕಲ್ಪನೆಗೆ ಅವರ ಕೆಲಸ ಬಲ ನೀಡಿತು. ಆದರೆ ಅವು ಪರಸ್ಪರ ಹೇಗೆ ಮಾತನಾಡುತ್ತವೆ? ಅದೊಂದು ವಿದ್ಯುತ್ ತಂತಿಯಂತೆ ಕೆಲಸ ಮಾಡುತ್ತದೆ. ಅದು ನಿರ್ದಿಷ್ಟ ಮಿತಿಯನ್ನು ತಲುಪಿ ದಾಗ ಒಂದು ವಿದ್ಯುತ್ ಸಂಕೇತ ಉಂಟಾಗಿ ಈ ಸಂಕೇತ ನರಕೋಶದ ಉದ್ದಕ್ಕೂ ಸಾಗುತ್ತದೆ.
ಕೊನೆಯಲ್ಲಿ ನ್ಯೂ ರೋಟ್ರಾನ್ಸ್‌ಮಿಟರ್ ಎಂಬ ರಾಸಾಯನಿಕ ಸಂದೇಶವಾಹಕಗಳು ಬಿಡುಗಡೆ ಯಾಗಿ ಮುಂದಿನ ನರಕೋಶಕ್ಕೆ ಸಂದೇಶ ನೀಡುತ್ತವೆ. ಆದರೆ, ಯಾವ ನರಕೋಶ ಸಕ್ರಿಯವಾದು ದರಿಂದ ಒಂದು ನಿರ್ದಿಷ್ಟ ವರ್ತನೆ ಉಂಟಾಯಿತು ಎಂದು ಸಾಬೀತುಪಡಿಸುವುದು ಹೇಗೆ? ಮೆದುಳನ್ನು ನೋಡುವುದು ಬೇರೆ, ಮೆದುಳನ್ನು ನಿಯಂತ್ರಿಸುವುದು ಬೇರೆ. ವ್ಯಕ್ತಿ ಒಂದು ಭಯಾನಕ ದೃಶ್ಯ ನೋಡಿದಾಗ ಮೆದುಳಿನ ನಿರ್ದಿಷ್ಟ ಭಾಗದಲ್ಲಿ ನರಕೋಶಗಳು ಸಕ್ರಿಯವಾಗುತ್ತವೆ ಎಂದುಕೊಳ್ಳಿ. ಅದರಿಂದ ಆ ಭಾಗವೇ ಭಯಕ್ಕೆ ಕಾರಣ ಎಂದು ಹೇಳಬಹುದೇ? ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆದರೆ, ಒಂದರಿಂದ ಇನ್ನೊಂದು ಉಂಟಾಗಿದೆ ಎಂದು ಸಾಬೀತಾಗುವು ದಿಲ್ಲ.
ಅದೇ ರೀತಿ, ಒಂದು ನಿರ್ದಿಷ್ಟ ನರಜಾಲ ನೆನಪಿನ ಸಂದರ್ಭದಲ್ಲಿ ಸಕ್ರಿಯವಾಗುತ್ತದೆ ಎಂದರೆ, ಆ ನರಜಾಲವೇ ನೆನಪನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುವುದಿಲ್ಲ. ಕಾರಣ ಮತ್ತು ಪರಿಣಾಮ ವನ್ನು ನೇರವಾಗಿ ಪರೀಕ್ಷಿಸುವ ವಿಧಾನ ವಿಜ್ಞಾನಕ್ಕೆ ಬೇಕಾಗಿತ್ತು. ನಿರ್ದಿಷ್ಟ ನರಕೋಶವನ್ನು ನಾವೇ ಸಕ್ರಿಯಗೊಳಿಸಿದರೆ ಏನಾಗುತ್ತದೆ ಎಂದು ತಿಳಿಯಬೇಕಿತ್ತು. ಇದಕ್ಕೆ ಉತ್ತರ ಬಂದದ್ದು ಒಂದು ಸಣ್ಣ ಶೈವಲ ಅಥವಾ ಪಾಚಿಯಿಂದ. ಪೀಟರ್ ಹೆಗಮನ್ ಮತ್ತು ಜಾರ್ಜ್ ನಾಗೆಲ್ ಅವರ ಸಂಶೋಧನೆ ಒಂದು ಏಕಕೋಶೀಯ ಶೈವಲದ ಕಡೆಗೆ ವಿಜ್ಞಾನಿಗಳ ಗಮನ ಸೆಳೆಯಿತು. ಈ ಜೀವಿಯಲ್ಲಿದ್ದ ಚಾನೆಲ್ ರೋಡೋಸ್ಪಿನ್ (channelrhodopsin) ಎಂಬ ಬೆಳಕಿಗೆ ಸಂವೇದನಾಶೀಲ ಪ್ರೊಟೀನ್ ವಿಜ್ಞಾನಕ್ಕೆ ಅಸಾಧಾರಣ ಅವಕಾಶ ನೀಡಿತು. ಈ ಪ್ರೊಟೀನ್ ಬೆಳಕನ್ನು ಕಂಡಾಗ ಅದರಲ್ಲಿರುವ ಅಯಾನ್ ಚಾನೆಲ್ ತೆರೆಯುತ್ತದೆ.
ಅದರ ಮೂಲಕ ವಿದ್ಯುತ್ ಆವೇಶ ಹೊಂದಿರುವ ಅಯಾನ್‌ಗಳು ಕೋಶದೊಳಗೆ ಚಲಿಸುತ್ತವೆ. ಪರಿಣಾಮವಾಗಿ ಕೋಶದ ವಿದ್ಯುತ್ ಸ್ಥಿತಿ ಬದಲಾಗುತ್ತದೆ. ಈ ಬೆಳಕಿನ ಸ್ವಿಚ್ ಅನ್ನು ನರಕೋಶ ದಲ್ಲಿ ಅಳವಡಿಸಿದರೆ ಏನಾಗುತ್ತೆ? ಆಗ ಬೆಳಕಿನಿಂದ ನರಕೋಶವನ್ನು ನಿಯಂತ್ರಿಸಬಹುದಲ್ವೇ ಎಂಬ ಪ್ರಶ್ನೆಯನ್ನು ವಿಜ್ಞಾನಿಗಳು ಕೇಳಿಕೊಂಡರು. ಅದು ಆಪ್ಟೋಜೆನೆಟಿಕ್ಸ್‌ಗೆ ನಾಂದಿ ಹಾಡಿತು.
ಕಾರ್ಲ್ ಡೈಸೆರೋತ್ ಈ ಬೆಳಕಿನ ಸಂವೇದನಾಶೀಲ ಪ್ರೊಟೀನ್ ಗಳನ್ನು ನರಶಾಸ್ತ್ರದಲ್ಲಿ ಬಳಸುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆ ಇಟ್ಟರು. ಒಂದು ನಿರ್ದಿಷ್ಟ ಜೀನ್ ಅನ್ನು ನರಕೋಶಗಳಲ್ಲಿ ವ್ಯಕ್ತ ವಾಗುವಂತೆ ಮಾಡಬಹುದು. ಆ ಜೀನ್ ಚಾನೆಲ್‌ರೋಡೋಸ್ಪಿನ್‌ನಂತಹ ಬೆಳಕಿಗೆ ಪ್ರತಿಕ್ರಿಯಿಸುವ ಪ್ರೊಟೀನ್ ಉತ್ಪಾದಿಸುವಂತೆ ಮಾಡುತ್ತದೆ. ಬೆಳಕು ಬಿದ್ದಾಗ ನರಕೋಶ ಸಕ್ರಿಯವಾಗುತ್ತದೆ.
ಮತ್ತೊಂದು ರೀತಿಯ ಬೆಳಕಿಗೆ ಪ್ರತಿಕ್ರಿಯಿಸುವ ಪ್ರೊಟೀನ್ ಬಳಸಿ ನರಕೋಶದ ಚಟುವಟಿಕೆಯನ್ನು ನಿಲ್ಲಿಸಬಹುದು. ಅಂದರೆ ಮೆದುಳಿನ ಒಂದು ನಿರ್ದಿಷ್ಟ ನರಕೋಶ ಅಥವಾ ನರಜಾಲವನ್ನು ಆಯ್ಕೆ ಮಾಡಿಕೊಂಡು ಅದರ ಚಟುವಟಿಕೆಯನ್ನು ನಿಯಂತ್ರಿಸಬಹುದು. ಉದಾಹರಣೆಗೆ, ಇಲಿಯ ಮೆದುಳಿನಲ್ಲಿ ಭಯದ ನೆನಪಿಗೆ ಸಂಬಂಧಿಸಿದ ನರಕೋಶಗಳ ಒಂದು ಗುಂಪಿದೆ ಎಂದುಕೊಳ್ಳಿ.
ಆಪ್ಟೋಜೆನೆಟಿಕ್ಸ್ ಬಳಸಿ ವಿಜ್ಞಾನಿ ಆ ನರಕೋಶಗಳನ್ನು ಕೃತಕವಾಗಿ ಸಕ್ರಿಯಗೊಳಿಸಬಹುದು. ಇಲಿ ಭಯದ ಪ್ರತಿಕ್ರಿಯೆ ತೋರಿಸಿದರೆ ಅದು ಆ ನರಜಾಲದ ಪಾತ್ರದ ಬಗ್ಗೆ ಬಲವಾದ ಸಾಕ್ಷ್ಮ. ಹಾಗೇ ಅದೇ ನರಕೋಶಗಳನ್ನು ಬೆಳಕಿನಿಂದ ನಿಷ್ಕ್ರಿಯಗೊಳಿಸುವುದು ಕೂಡ. ಅಂದರೆ ನರಶಾಸ್ತ್ರದಲ್ಲಿ ಇದು ಒಂದು ಹೆಜ್ಜೆ ಮುಂದೆ ಹೋದಂತೆ.
ನರಕೋಶವನ್ನು ಪ್ರಚೋದಿಸುವುದು ಅಥವಾ ನಿಲ್ಲಿಸುವುದರಿಂದ ಅದಕ್ಕೆ ಸಂಬಂಧಿಸಿದ ವರ್ತನೆ ಯನ್ನು ಪ್ರಚೋದಿಸಬಹುದು ಅಥವಾ ನಿಲ್ಲಿಸಬಹುದು ಎಂದರ್ಥ. ನೊಬೆಲ್ ಸಮಿತಿಯ ಪ್ರಕಾರ, ಜೀವಂತ ಮೆದುಳಿನಲ್ಲಿ ನರಕೋಶಗಳು ನೆನಪು, ಭಾವನೆ ಮತ್ತು ವರ್ತನೆಯನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲು ಈ ಅಧ್ಯಯನ ಹೊಸ ಅವಕಾಶ ನೀಡಿದೆ. ಹಾಗಾದರೆ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪೂರ್ತಿಯಾಗಿ ತಿಳಿದುಬಿಟ್ಟೆವಾ? ಖಂಡಿತಾ ಇಲ್ಲ.
ಮೆದುಳಿನಲ್ಲಿ ಕೋಟ್ಯಂತರ ನರಕೋಶಗಳಿವೆ. ಪ್ರತಿಯೊಂದು ನರಕೋಶವೂ ಸಾವಿರಾರು ಸಂಪರ್ಕ ಗಳನ್ನು ಹೊಂದಿರಬಹುದು. ಒಂದು ನರಕೋಶ ಮತ್ತೊಂದರ ಮೇಲೆ ಪರಿಣಾಮ ಬೀರುತ್ತದೆ. ಆ ನರಕೋಶ ಮತ್ತೊಂದರ ಮೇಲೆ. ಹೀಗೆ ಅಪಾರ ಪ್ರಮಾಣದ ನರಜಾಲ ರೂಪುಗೊಳ್ಳುತ್ತದೆ. ಒಂದು ನಿರ್ದಿಷ್ಟ ನರಕೋಶವನ್ನು ನಿಯಂತ್ರಿಸುವುದು ಈಗ ಸಾಧ್ಯ. ಆದರೆ, ಲಕ್ಷಾಂತರ ನರಕೋಶಗಳ ಒಟ್ಟಾರೆ ಚಟುವಟಿಕೆಯಿಂದ ಆಲೋಚನೆ ಹೇಗೆ ಹುಟ್ಟುತ್ತದೆ? ಇದು ಬಹು ದೊಡ್ಡ ಪ್ರಶ್ನೆ. ನೆನಪು ಎಂದರೇನು? ಬಾಲ್ಯದ ಒಂದು ಘಟನೆ ನೆನಪಿಸಿಕೊಳ್ಳುತ್ತೀರಿ.
ಒಂದು ಮನೆ, ಒಂದು ಮುಖ, ವಾಸನೆ, ಹಾಡು, ಮಾತು ಇವೆಲ್ಲ ಸೇರಿ ಒಂದು ನೆನಪು ಆಗುತ್ತದೆ. ಆದರೆ ಮೆದುಳಿನ ಯಾವ ನರಕೋಶದಲ್ಲಿ ಆ ನೆನಪು ಇದೆ? ಒಂದೇ ನರಕೋಶದಲ್ಲಿ ಅದು ಇರುವುದಲ್ಲ. ನೆನಪುಗಳು ನರಜಾಲಗಳಲ್ಲಿನ ಸಂಪರ್ಕಗಳ ಬದಲಾವಣೆಗಳಿಗೆ ಸಂಬಂಧಿಸಿವೆ. ಹೀಗಾಗಿ ನೆನಪು ಒಂದು -ಲ್‌ನಂತೆ ಒಂದು ಜಾಗದಲ್ಲಿ ಇಟ್ಟುಕೊಂಡಿರುವ ವಸ್ತುವಲ್ಲ. ಅದು ಅನೇಕ ನರಕೋಶಗಳು ಮತ್ತು ಸೈನಾಪ್ಸ್‌ಗಳ ನಡುವಿನ ಬದಲಾಗುವ ಸಂಬಂಧಗಳ ಫಲ. ಈ ರೀತಿಯ ಮೆಮೊರಿ ಸರ್ಕಿಟ್‌ಗಳನ್ನು ಹೆಚ್ಚು ನಿಖರವಾಗಿ ಅಧ್ಯಯನ ಮಾಡಲು ಆಪ್ಟೋಜೆನೆಟಿಕ್ಸ್ ವಿಜ್ಞಾನಿಗಳಿಗೆ ಅವಕಾಶ ನೀಡಿದೆ.
ಇದರಿಂದ ನೆನಪು ಹೇಗೆ ರೂಪುಗೊಳ್ಳುತ್ತದೆ, ನೆನಪಾದಾಗ ಯಾವ ನರಜಾಲಗಳು ಸಕ್ರಿಯವಾಗು ತ್ತವೆ, ಭಾವನೆಗಳು ನೆನಪುಗಳೊಂದಿಗೆ ಹೇಗೆ ಬೆಸೆದುಕೊಳ್ಳುತ್ತವೆ ಎಂಬುದನ್ನೆಲ್ಲ ಅಧ್ಯಯನ ಮಾಡುವ ಸಾಮರ್ಥ್ಯ ಹೆಚ್ಚಿದೆ. ಭಯ, ಸಂತೋಷ, ಪ್ರೇರಣೆ, ವ್ಯಸನ, ಆತಂಕ ಮೊದಲಾದ ಭಾವನೆಗಳ ಮೂಲವನ್ನು ಅಧ್ಯಯನ ಮಾಡಲೂ ಇದು ವೇದಿಕೆ ಹಾಕಿದೆ. ಈ ಅಧ್ಯಯನದ ಅನ್ವಯ ಚೆನ್ನಾಗಿ ಆಗಬಹುದಾದದ್ದು- ನೀವೀಗ ಊಹಿಸಿರುವಂತೆ- ವೈದ್ಯಕೀಯ ಚಿಕಿತ್ಸೆಯಲ್ಲಿ.
ನರವ್ಯೂಹಕ್ಕೆ ನೇರವಾಗಿ ಸಂಬಂಧಿಸಿದ ರೋಗಗಳ ಅಧ್ಯಯನವನ್ನು ಇದು ಬಹುದೂರಕ್ಕೆ ಕೊಂಡೊಯ್ಯ ಬಹುದು. ಪಾರ್ಕಿನ್ಸನ್ ಕಾಯಿಲೆ, ಸ್ಕಿಜೋಫ್ರೇನಿಯಾ, ಅಪಸ್ಮಾರ, ಖಿನ್ನತೆ ಮೊದಲಾದ ಸಮಸ್ಯೆಗಳಲ್ಲಿ ಯಾವ ನರಜಾಲದ ಸರ್ಕಿಟ್ ಎಲ್ಲಿ ಹೇಗೆ ತಪ್ಪಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಪ್ಟೋಜೆನೆಟಿಕ್ಸ್ ಸಹಾಯಕವಾಗಲಿದೆ.
ಬೆಳಕಿನ ಚಿಕಿತ್ಸೆಯ ಮೂಲಕ ಆ ನರವ್ಯೂಹವನ್ನು ಪ್ರಚೋದಿಸಲು, ಸುಮ್ಮನಿರಿಸಲು ಸಾಧ್ಯವಾದರೆ, ಈ ಕಾಯಿಲೆಗಳಿಗೆ ಮದ್ದರೆದಂತೆಯೇ. ಆದರೆ ಅದಕ್ಕಿನ್ನೂ ದಾರಿ ಬಹಳ ದೂರವಿದೆ. ಈಗಾಗಲೇ ದೃಷ್ಟಿ ಪುನಃಸ್ಥಾಪನೆಗೆ ಸಂಬಂಧಿಸಿದ ಚಿಕಿತ್ಸೆಯ ಒಂದು ಸಾಧ್ಯತೆ ಇದರಿಂದ ಸೃಷ್ಟಿಯಾಗಿದೆ, ಪ್ರಾಯೋಗಿಕ ವಾಗಿಯೂ ನಡೆದಿದೆ.
ರೆಟಿನಾದ ಬೆಳಕನ್ನು ಗ್ರಹಿಸುವ ಕೋಶಗಳು ಹಾನಿಗೊಳಗಾದ ಕೆಲವು ಕಾಯಿಲೆಗಳಲ್ಲಿ, ಆಪ್ಟೋಜೆ ನಿಕ್ ಜೀನ್ ಥೆರಪಿ ಮೂಲಕ ಉಳಿದಿರುವ ರೆಟಿನಲ್ ಕೋಶಗಳಿಗೆ ಬೆಳಕಿನ ಸಂವೇದನಾಶೀಲ ಪ್ರೊಟೀನ್‌ಗಳನ್ನು ನೀಡುವ ಪ್ರಯತ್ನಗಳು ನಡೆದಿವೆ. ಇದರಿಂದ ಸಂಪೂರ್ಣ ಸಾಮಾನ್ಯ ದೃಷ್ಟಿಯನ್ನು ಮರಳಿ ಬರುತ್ತದೆಂದಲ್ಲ. ಆದರೆ ಬೆಳಕನ್ನು ನರಸಂಕೇತವಾಗಿ ಪರಿವರ್ತಿಸುವ ಪರ್ಯಾಯ ಮಾರ್ಗವನ್ನು ನಿರ್ಮಿಸುವ ಸಾಧ್ಯತೆ ಬಂದಿದೆ. ಇದರ ಕ್ಲಿನಿಕಲ್ ಸಂಶೋಧನೆ ನಡೆಯುತ್ತಿದೆ.
ಇಷ್ಟರಿಂದ ಮೆದುಳಿನ ರಹಸ್ಯವನ್ನೆಲ್ಲ ಭೇದಿಸಿದೆವು ಎಂದು ಬೀಗಲಾಗುವುದಿಲ್ಲ. ಅದು ಬಹು ಸಂಕೀರ್ಣ ವಾದ ವ್ಯವಸ್ಥೆ. ಒಂದು ನರಕೋಶವನ್ನು ಅರ್ಥಮಾಡಿಕೊಂಡರೆ ಸಾಲದು. ಅಲ್ಲಿಂದಾಚೆ ನರಕೋಶಗಳ ಗುಂಪು, ನಂತರ ನರಜಾಲ, ಅವುಗಳ ಪರಸ್ಪರ ಸಂಪರ್ಕ, ಇದೆಲ್ಲವೂ ಸೇರಿ ಆಗುವ ಭಾವನೆ, ವರ್ತನೆ, ಆಲೋಚನೆ. ಇನ್ನೊಂದು ಕಾರಣವೆಂದರೆ ಮೆದುಳು ಸದಾ ಬದಲಾಗುತ್ತಲೇ ಇರುತ್ತದೆ. ನಾವು ಕಲಿತಾಗ, ಹೊಸ ಅನುಭವ ಬಂದಾಗ, ನಿದ್ರೆಯಿಂದ, ಒತ್ತಡ ದಿಂದ, ವಯಸ್ಸಿನಿಂದ ಬದಲಾಗುತ್ತಲೇ ಇರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಕೂಡ ವ್ಯತ್ಯಾಸವಿರುತ್ತೆ. ಇಬ್ಬರ ಮೆದುಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.
ಒಬ್ಬನಿಗೆ ಭಯ ಹುಟ್ಟಿಸುವ ಸಂಗತಿ ಮತ್ತೊಬ್ಬಳಿಗೆ ಸಾಮಾನ್ಯವಾಗಿರಬಹುದು. ಚೇತನ, ಪ್ರಜ್ಞೆ ಎಂದರೆ ಏನು ಎಂಬುದು ಎಲ್ಲಕ್ಕಿಂತ ಹಿರಿದಾದ ನಿಗೂಢ ಪ್ರಶ್ನೆ. ನಾನು ನೋಡುತ್ತಿದ್ದೇನೆ, ನನಗೆ ನೋವಾಗುತ್ತಿದೆ, ನಾನು ಸಂತೋಷವಾಗಿದ್ದೇನೆ ಎಂಬ ವೈಯಕ್ತಿಕ ಅನುಭವ ಹೇಗೆ ಹುಟ್ಟುತ್ತದೆ? ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಮೆದುಳನ್ನು ಅರ್ಥಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ವಿಜ್ಞಾನ ಒಂದು ಸಣ್ಣ ಹೆಜ್ಜೆ ಮುಂದಿಟ್ಟಿದೆ. ಏಕಕೋಶ ಶೈವಲದಿಂದ ಬೆಳಕಿನ ಸಂವೇದನಾಶೀಲ ಪ್ರೊಟೀನ್, ಅದರಿಂದ ನರಕೋಶಗಳನ್ನು ನಿಯಂತ್ರಿಸುವ ವಿಧಾನ, ಅದರಿಂದ ಮೆದುಳಿನ ಸರ್ಕಿಟ್‌ಗಳನ್ನು ಪರೀಕ್ಷಿಸುವ ಹೊಸ ಯುಗ ಆರಂಭವಾಗುತ್ತಿದೆ. ಇದು ಬೆಳಕು ಅಥವಾ ಸವಿತೃ ನೀಡಿದ ಭರವಸೆ. ಇದೀಗ ಗಾಯತ್ರಿ ಜಪವನ್ನು ಇನ್ನಷ್ಟು ಆತ್ಮವಿಶ್ವಾಸದಿಂದ ಜಪಿಸಬಹುದು.