ಪದಸಾಗರ
ಅವನ ಹೆಸರೇನು ಅಂತ ಗೊತ್ತಿರಲಿಲ್ಲ. ಯಾವತ್ತೂ ಕೇಳಬೇಕು ಅಂತಲೂ ಅನಿಸಿರಲಿಲ್ಲ. ಮುಂದೆಂದಾದರೂ ಅವನ ಹೆಸರು ಕೇಳ್ತೀನಿ ಅಂತ ಕೂಡ ಅಂದುಕೊಂಡಿರಲಿಲ್ಲ. ಯಾಕಂದ್ರೆ ಅವನು ನನ್ನ ಪಾಲಿಗೆ ಜಸ್ಟ್ ಒಂದು ಇರಿಟೇಷನ್ ಆಗಿದ್ದ. ನಾನು ಅವಾಯ್ಡ್ ಮಾಡುವ ಕ್ಯಾರಕ್ಟರ್ ಆಗಿದ್ದ.
ಅದು ಕೋವಿಡ್‌ನ ಸೆಕೆಂಡ್ ಲಾಕ್‌ಡೌನ್ ಸಮಯ. ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಆಗಷ್ಟೇ ಶಿಫ್ಟ್ ಆಗಿದ್ದೆ. ಗಾಯತ್ರಿ ನಗರದ ಗಲ್ಲಿ ರಸ್ತೆಗಳ ಏರಿಯಾದಲ್ಲಿದ್ದ ನನಗೆ ಆರ್ ಆರ್ ನಗರ ವಿಶೇಷವಾಗಿ ಕಂಡಿತ್ತು. ದೊಡ್ಡ ದೊಡ್ಡ ರಸ್ತೆಗಳು, ವ್ಯವಸ್ಥಿತವಾಗಿ ಬೆಳೆದುಕೊಂಡಿದೆ ಅನಿಸುವ ಪಟ್ಟಣ. ಮಲ್ಲೇಶ್ವರ, ಗಾಂಧಿ ಬಜಾರಿನಂತೆಯೇ ಸಾಂಸ್ಕೃತಿಕ ರಾಯಭಾರಿಯಂತೆ ಕಾಣುತ್ತಿತ್ತು. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಹಾಗೆಯೇ ಆರ್‌ಆರ್ ನಗರ ಕೂಡ ಮೆಲ್ಲನೆ ಚಿಗಿತು ಕೊಂಡಿತ್ತು. ಆಹಾರ ಪ್ರಿಯರ ಸ್ವರ್ಗದಂತಿದ್ದ ಆರ್‌ಆರ್ ನಗರಕ್ಕೆ ಆಹಾರ್ ನಗರ ಅಂತ್ಯಾಕೆ ಹೆಸರಿಡಬಾರದು ಅಂತಲೂ ಅನಿಸಿದ್ದಿದೆ. ಅನೂಪ್ ಸೀಳಿನ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರು ಹಾಗೂ ‘ರಿ ರೆಕಾರ್ಡಿಂಗ್’ ಸ್ಟುಡಿಯೋಗಳು ಇರುವ ಈ ಏರಿಯಾಗೆ ‘ಆರ್.ಆರ್’ ನಗರ ಎಂಬ ಹೆಸರು ಸರಿ ಇದೆ ಬಿಡಿ ಅಂತಲೂ ಅನಿಸಿದ್ದುಂಟು.
ರಾತ್ರಿ ಎಂಟು ಗಂಟೆ ತನಕ ಗಿಜಿಗುಡುತ್ತಾ ವರ್ಣರಂಜಿತವಾಗಿ ಕಂಗೊಳಿಸುತ್ತಿದ್ದ ಈ ಏರಿಯಾ, ಎಂಟರಿಂದ ಹತ್ತರ ಒಳಗೆ ಇಂಚಿಂಚಾಗಿ ಸ್ತಬ್ಧವಾಗುತ್ತಾ ರಾತ್ರಿ ಹತ್ತಕ್ಕೆ ಪೂರ್ತಿಯಾಗಿ ಮಲಗಿ ಬಿಡುತ್ತಿತ್ತು. ಮಲಗದ ಬೆಂಗಳೂರನ್ನು ನೋಡಿ ಅಭ್ಯಾಸವಿದ್ದ ನನಗೆ, ಹೀಗೆ ಜಾಣಮರಿಯಂತೆ ಬೇಗ ಉಂಡು ಮಲಗುವ ಆರ್ ಆರ್ ನಗರ ಒಂಥರಾ ಖುಷಿ ಕೊಟ್ಟಿತ್ತು. ಆದರೆ ಬರೀ ಮೂರು ವರ್ಷಗಳಲ್ಲಿ ಆರ್ ಆರ್ ನಗರ ಬೆಳೆದ ರೀತಿ ಅನೂಹ್ಯ. ಒಂದು ದ್ವೀಪದ ರೀತಿಯಲ್ಲಿ ಬೆಳೆದುಕೊಂಡ ಆರ್ ಆರ್ ನಗರ ಬೆಂಗಳೂರಿನ ಮೆಜೆಸ್ಟಿಕ್ಕು, ಮಾರ್ಕೆಟ್ಟು ಶಿವಾಜಿನಗರ ಚಿಕ್ಕಪೇಟೆ ಯಾವುದರ ಹಂಗಿಲ್ಲದೇ ಇರಬಲ್ಲದು.
ಇದನ್ನೂ ಓದಿ: Naveen Sagar Column: ಭಾರತ ಕಂಡ ಕಡು ಪ್ರಾಮಾಣಿಕ ಪ್ರಧಾನಿ ಶ್ರೀವಾಸ್ತವ್ !
ಚಿನ್ನದಂಗಡಿಗಳಿಂದ ಬಟ್ಟೆಯ ಶೋರೂಮ್ ತನಕ, ಸಿನಿಮಾದಿಂದ ಪಬ್ಬುಗಳ ತನಕ, ಆಸ್ಪತ್ರೆಗಳಿಂದ ದೇವಸ್ಥಾನಗಳ ತನಕ ಇಲ್ಲಿ ಏನಿಲ್ಲ? ಜಗತ್ತಿನ ಎಲ್ಲ ಬ್ರ್ಯಾಂಡ್‌ಗಳೂ ಇಲ್ಲಿ ಲಭ್ಯ. ಪರಮ ಲೋಕಲ್ ಐಟಮ್‌ಗಳೂ ಲಭ್ಯ. ಅದರಲ್ಲೂ ಈ ಏರಿಯಾದಲ್ಲಿರುವಷ್ಟು ಹೊಟೇಲ್ ಮತ್ತು ಆಹಾರ ಅಡ್ಡಾಗಳು ಬೆಂಗಳೂರಿನ ಇನ್ನೆಲ್ಲೂ ಇರಲು ಸಾಧ್ಯವೇ ಇಲ್ಲ. ಧಾರವಾಡದಲ್ಲಿ ಎಲ್ಲೇ ಕಲ್ಲೋಗೆದರೂ ಕವಿಗಳೊಬ್ಬರ ಮನೆಗೆ ಬೀಳುತ್ತದೆ ಅಂತಿದ್ದರಲ್ಲ. ಹಾಗೆ ಇಲ್ಲಿ ಎಲ್ಲಿ ಕಲ್ಲು ಒಗೆದರೂ ಬೀಳುವುದು ತಿಂಡಿಗಳ ಮೇಲೆಯೇ.
ಕಡವಿ ಬಿದ್ದರೂ ನಾವು ಬೀಳುವುದು ತಿಂಡಿಗಳ ಮೇಲೆಯೇ. ಬೆಂಗಳೂರಿನ ಮೂಲೆಮೂಲೆಗಳಿಂದ ತಿಂಡಿ ತಿನ್ನಲೆಂದೇ ಇಲ್ಲಿಗೆ ಬರುತ್ತಾರೆ. ಹತ್ತಾರು ನಟನಟಿಯರ ಮನೆಗಳು ಇಲ್ಲಿಯೇ ಇವೆ. ರಾಜರಾಜೇಶ್ವರಿ ದೇವಸ್ಥಾನದಿಂದ ಪಟ್ಟಣಗೆರೆಯ ಷೆಡ್ ತನಕ ಹತ್ತಾರು ಪ್ರೇಕ್ಷಣೀಯ ತಾಣಗಳು ಇಲ್ಲಿವೆ! ಇಲ್ಲಿಗೊಂದು ಏರ್‌ಪೋರ್ಟ್ ಬರುವುದೊಂದು ಬಾಕಿ ಅಷ್ಟೆ. ಬಂದರೆ ವಿಶ್ವೇಶ್ವರ ಭಟ್ಟರಷ್ಟು ಖುಷಿಪಡುವವರು ಇನ್ನೊಬ್ಬರು ಇರಲಿಕ್ಕಿಲ್ಲ. ಹಹ್ಹ!
ಇಂಥ ಏಳೇಳು ಏರಿಯಾ ಮೀರಿಸೋ ಲೆವೆಲ್ಲಿನ ಆರಾರು ನಗರದಲ್ಲಿ ಆತ ಮೊದಲ ಬಾರಿ ಕಂಡಿದ್ದ. ಬಾಯಿ ಕೆಳಗೊಂದು ಮಾಸ್ಕ್. ಎಡಗೈ ಜಾಯಿಂಟಿನ ಮೇಲೆ ಚೀಲ ಸಿಕ್ಕಿಸಿಕೊಂಡು, ಬಲಗೈಲಿ ಮೂರು ಪ್ಯಾಕೆಟ್ ಹಪ್ಪಳ ಹಿಡಿದುಕೊಂಡು ಎದುರು ಬಂದು ನಿಂತ. ‘ಸಾರ್ ತಗೊಳಿ ಸಾರ್. ಪ್ಲೀಸ್ ತಗೊಳಿ ಸಾರ್. ಉಪಕಾರ ಮಾಡಿ ಸಾರ್. ಒಂದ್ಸಲ ತಗೊಳಿ ಸಾರ್.’
‘ಇದ್ಯಾವ ರೀತಿ ವ್ಯಾಪಾರ ಗುರೂ. ಬೆಂಗಳೂರು ಟ್ರಾಫಿಕ್ಕಲ್ಲಿ ಪೆನ್ನು, ಇಯರ್ ಬಡ್ಸು ಮಾರುವವರು ಕಾಡುವ ಬೇಡುವ ರೀತಿಯಲ್ಲಿ ಬೇಡುತ್ತಾನಲ್ಲ..’ ಅನಿಸಿತು. ತೆಗೆದುಕೊಳ್ಳಬೇಕು ಅನಿಸಲಿಲ್ಲ. ಅಲ್ಲಿ ಸುತ್ತಲಿದ್ದ ಇತರರಿಗೂ ಅದೇ ರೀತಿ ಕಾಡಿ ಬೇಡಿ ಮಾರಲು ಪ್ರಯತ್ನಿಸುತ್ತಿದ್ದ. ಒಮ್ಮೆ ಅವನ ಗೋಳಾಟ ನೋಡಲಾಗದೇ ಸಾಗಹಾಕೋಣವೆಂದು, ಹಪ್ಪಳ ತೆಗೆದುಕೊಂಡೆ.
ಇನ್ನು ಕಾಟ ಕೊಡಬಾರದು ಎಂಬ ಕಂಡಿಷನ್ನಿನ ಮೇಲೆ. ಆದರೆ ಆತನಿಗೆ ನನ್ನ ಮುಖ ಪರಿಚಯ ಹೇಗಿದ್ದೀತು? ಮರುದಿನ ಮತ್ತೆ ಅದೇ ರೀತಿ ಒತ್ತಾಯ. ಕಡೆಕಡೆಗೆ ಸಣ್ಣಗೆ ರೇಗಿ ಕಳಿಸೋದು, ಅವಾಯ್ಡ್ ಮಾಡೋದು ಎಲ್ಲ ಮಾಡತೊಡಗಿದೆ. ಬಹುತೇಕ ಮಂದಿ ಅದೇ ರೀತಿ ಭಿಕ್ಷುಕನನ್ನು ಮುಂದಕ್ಕೋಗು ಎಂದು ಕಳಿಸುವಂತೆ ಕಳಿಸುತ್ತಿದ್ದರು. ಆದರೆ ಆತ ಮಾತ್ರ ಬದಲಾಗಲಿಲ್ಲ. ಆಗಾಗ ಗಮನಿಸುತ್ತಿದ್ದ. ಈತ ಹಪ್ಪಳ ನೆಪವಾಗಿಟ್ಟುಕೊಂಡು ಭಿಕ್ಷೆ ಏನಾದರೂ ಬೇಡುತ್ತಿದ್ದಾನಾ ಅಂತ.
ಉಹುಂ. ಕಾಫಿ ತಿಂಡಿ ಕೊಡಿಸಿ ಅಂತಲೂ ಕೇಳಿದ್ದು ಕಾಣಲಿಲ್ಲ. ಕ್ರಮೇಣ ಆತ ಒಂದು ರೀತಿಯಲ್ಲಿ ಆರ್ ಆರ್ ನಗರದ ಐಡೆಂಟಿಟಿ ಎಂಬಂತೆ ಕಾಣತೊಡಗಿದ. ಆರ್ ಆರ್ ನಗರದಲ್ಲಿ ಏನೇನಿದೆ.. ಏನು ವಿಶೇಷ ಅಂತೆಲ್ಲ ಪಟ್ಟಿ ಮಾಡುವಾಗ ‘ಅಬ್ಬ ಹಪ್ಪಳ ಮಾರುವವನು ಇರುತ್ತಾನೆ. ಅವನು ಕಾಣಿಸಿದ ಅಂದರೆ ನೀವು ಆರ್ ಆರ್ ನಗರದಲ್ಲಿದ್ದೀರಿ ಎಂದರ್ಥ’ ಎನ್ನುವಷ್ಟು ಆತ ಆರ್ ಆರ್ ನಗರದ ಭಾಗವಾಗಿ ಹೋದ.
ಬಲಗೈಲಿ ಮೂರು ಪ್ಯಾಕೆಟ್, ಎಡಗೈ ಜಾಯಿಂಟಿನಲ್ಲಿ ಚೀಲ ಇರುವ ಆಕೃತಿ ಅದೆ ಕಂಡರೂ ಅದು ಆತನೇ! ಈ ‘ಪಾಪಡ’ ಜೀವದ ಕೈಲಿ ನಾನು ಹಪ್ಪಳ ಖರೀದಿಸಿದ್ದು ಬೆರಳೆಣಿಕೆಗಿಂತ ಕಮ್ಮಿ ಬಾರಿ. ಅವನ ಮೇಲಿನ ಕರುಣೆಗೋ, ಬೇಸರವಿಲ್ಲದೇ ಸಾವಿರ ಸಲ ಕಾಡುವ ಆತನ ಕಾಟಕ್ಕೆ ಸೋತೋ, ಇನ್ನೇನಕ್ಕೋ ಅವನ ಬಳಿ ಹಪ್ಪಳ ಖರೀದಿಸಿ ಅದನ್ನು ಹಾಗೆಯೇ ಕಾರಲ್ಲಿ ಇಟ್ಟು ಮರೆತದ್ದೂ ಇದೆ. ಆದರೆ ಬರುಬರುತ್ತಾ ಈತ ನನ್ನ ಆರ್ ಆರ್ ನಗರದ ಜೀವನದ ಭಾಗವಾಗಿ ಹೋದ. ನಾನು ಹೊರಗೆ ಬಂದಾಗ ಆತ ಕಾಣಲಿಲ್ಲ ಅಂದರೆ ಆರ್ ಆರ್ ನಗರ ಅಪೂರ್ಣ ಅನಿಸುತ್ತಿತ್ತು ಅಥವಾ ನಾನು ಪೂರ್ಣವಾಗಿ ನಗರವನ್ನು ನೋಡಲೇ ಇಲ್ಲ ಅನಿಸುವ ಭಾವ.
ಎಲ್ಲಕ್ಕಿಂತ ತಮಾಷೆ ಅಂದರೆ, ಆತ ಸುಮಾರು ಆರೇಳು ಕಿಲೋಮೀಟರ್ ವ್ಯಾಪ್ತಿಯ ಈ ಆರ್ ಆರ್ ನಗರದಲ್ಲಿ ಎಲ್ಲೇ ಹೋದರೂ ಅಲ್ಲಿ ಆತ ಕಾಣಿಸುತ್ತಿದ್ದ. ಆಗಷ್ಟೇ ಎಲ್ಲೋ ನೋಡಿರುತ್ತೇನೆ. ಕೊಂಚ ಸಮಯ ಬಿಟ್ಟು ಇನ್ನೆ ಹೋದರೆ ಅಲ್ಲಿಯೂ ಇರುತ್ತಿದ್ದ. ಬೆಳಗ್ಗೆ ಎಂಟಕ್ಕೆ ಹೋದರೂ ಎಲ್ಲೋ ಒಂದುಕಡೆ ಕಾಣುತ್ತಿದ್ದ. ರಾತ್ರಿ ಹತ್ತೂವರೆ ಹನ್ನೊಂದಾದರೂ ಅದೇ ಭಂಗಿಯಲ್ಲಿ ನಡೆದು ಹೋಗುತ್ತಾ ಇರುತ್ತಿದ್ದ. ಎಲ್ಲೂ ನಾನೇ ಎಲ್ಲೂ ನಾನೇ ಎಂಬಂತೆ ಓಡಾಡುತ್ತಿದ್ದ ಈತನಿಗೆ ನಾನು ಸರ್ವಾಂತರ್ಯಾಮಿ ಅಂತ ಹೆಸರಿಟ್ಟೆ. ಅದೊಮ್ಮೆ ಗೆಳೆಯ ನಾಗರಾಜ್ ವೈದ್ಯರ ಬಳಿ ಕೇಳಿದೆ.
ಆರ್ ಆರ್ ನಗರದಲ್ಲಿ ಒಬ್ಬ ಸರ್ವಾಂತರ್ಯಾಮಿ ಇದ್ದಾನೆ. ಆ ಮಾಯಾವಿ ಗೊತ್ತಾ? ಅಂತ. ವೈದ್ಯರು ತಕ್ಷಣ ಮರುಪ್ರಶ್ನೆ ಹಾಕಿದ್ದರು.. ‘ಯಾರು ಆ ಹಪ್ಪಳ ಮಾರೋವ್ನಾ?’ ಅಂದಿನಿಂದ ಆತ ಎಲ್ಲೇ ಕಂಡರೂ ದೂರದಿಂದಲೇ ಆತನದ್ದೊಂದು ಫೋಟೋ ತೆಗೆದು ನಾವು ಶೇರ್ ಮಾಡಿಕೊಳ್ತಿದ್ವಿ. ಅವ್ರಿಗೆ ಕಂಡರೆ ನಂಗೆ -ಫೋಟೋ ಕಳಿಸುತ್ತಿದ್ದರು. ನಂಗೆ ಕಂಡರೆ ನಾನು ಕಳಿಸುತ್ತಿದ್ದೆ.
ಇವತ್ತಿನ ದಿನ ಸಂಪನ್ನ ಎಂದು ನಗುತ್ತಿದ್ದೆವು. ಆತನನ್ನು ನೆನೆಸಿಕೊಳ್ಳುತ್ತಿದ್ದ ಹಾಗೆಯೇ ಎದುರು ಕಾಣಿಸಿ ಕೊಂಡು ಬಿಡುತ್ತಿದ್ದ ಆ ಅಚ್ಚರಿ ನಮಗೆ ಜೀರ್ಣಿಸಿಕೊಳ್ಳಲಾಗುತ್ತಿರಲಿಲ್ಲ. ನಾವೇನಾದರೂ ಅವನನ್ನು ಬಹಳವಾಗಿ ಹಚ್ಚಿಕೊಂಡು ಬಿಟ್ಟಿದ್ದೇವಾ? ಆತ ಕಾಣಿಸುತ್ತಿರುವುದು ನಮ್ಮ ಭ್ರಮೆ ಇರಬಹುದಾ ಎಂದೆಲ್ಲ ಭಯವಾಗತೊಡಗಿತು. ಇಬ್ಬರೂ ಜೊತೆಗೆ ಹೋಗುವಾಗ ಕಾಣಿಸಿಬಿಟ್ಟರೆ, ಕ್ರಾಸ್ ಚೆಕ್ ಮಾಡಿಕೊಳ್ಳು ತ್ತಿದ್ದೆವು.
ನಿಮಗೆ ಕಾಣಿಸ್ತಾ ಇದ್ದಾನಾ? ಎಲ್ಲಿ ಕಾಣಿಸ್ತಿದ್ದಾನೆ, ಯಾವ ಬಟ್ಟೆ ಹಾಕಿದ್ದಾನೆ, ಹೀಗೆಲ್ಲ! ಅಪರೂಪಕ್ಕೆ, ನಮ್ಮೊಂದಿಗೆ ಮೂರನೇ ಹೊಸ ವ್ಯಕ್ತಿ ಬಂದಿದ್ದರೆ, ಅವನ ಬಳಿ ನಿಂಗೆ ಅಬ್ಬ ಹಪ್ಪಳ ಹಿಡ್ಕೊಂಡಿರೋವ್ನು ಕಾಣ್ತಿದ್ದಾನಾ ಅಂತೆಲ್ಲ ಕೇಳಿ ಕನರ್ಮ್ ಮಾಡ್ಕೊಳ್ತಿದ್ದೆವು.
ಅಪರೂಪಕ್ಕೊಮ್ಮೆ ಆತ ನಮ್ಮ ಕಣ್ಣಿಗೆ ಕಾಣದೇ ಹೋದರೆ, ಮನೆಗೆ ಹೋಗೋಕೇ ಸಮಾಧಾನ ವಿಲ್ಲ. ಆ ರೋಡಮ್ಮೆ ನೋಡಿಬಿಡೋಣ ಈ ರೋಡಿಂದ ನೋಡ್ಕೊಂಡ್ ಬರೋಣ ಅಂತೆಲ್ಲ ಹುಚ್ಚುತನ ಮೆರೆಯುತ್ತಿದ್ದೆವು. ಇದರ ಜೊತೆಗೆ ಇನ್ನೊಂದು ಆಲೋಚನೆ. ಆತ ನಮ್ಮಿಬ್ಬರನ್ನೂ ಹೀಗೆಯೇ ಹುಡುಕಾಡ್ತಾ ಇರಬಹುದಾ? ಅಥವಾ ಅವ್ನು ಇರೋ ಕಡೆ ಎಲ್ಲ ನಾವು ಕಂಡಾಗ, ಅದನ್ನು ಭ್ರಮೆ ಎಂದು ಭಾವಿಸಿರಬಹುದಾ? ಅವ್ನ ಪಾಲಿಗೆ ನಾವು ಸರ್ವಾಂತರ್ಯಾಮಿ ಇದ್ದಿರಬಹುದಾ? ಆದರೆ ಆತನ ಅಸಾಧ್ಯ ನಡಿಗೆ ನಮ್ಮಲ್ಲಿ ಬೆರಗು ಮೂಡಿಸಿತ್ತು. ಅವನಿಗೆ ಕಾಲು ನೋಯೋದಿಲ್ಲವಾ? ಅವನು ನಡೆಯೋ ಪರಿಗೆ ತಿಂಗಳಿಗೆ ಏನಿಲ್ಲವೆಂದ್ರೂ ಮೂರು ಜೊತೆ ಚಪ್ಪಲಿ ಆದರೂ ಬೇಕೇನೋ! ಅಷ್ಟು ಸುತ್ತೋದಕ್ಕೆ ಆ ಚಪ್ಪಲಿ ದುಡ್ಡಾದರೂ ಹುಟ್ಟುತ್ತಾ ಅವನಿಗೆ? ಅವನ ಕೈಗೆ ಒಂದು ಸ್ಮಾರ್ಟ್ ವಾಚ್ ಕಟ್ಟಿ ದಿನಕ್ಕೆ ಅದೆಷ್ಟು ಕಿಲೋಮೀಟರ್ ನಡೀತಾನೆ ಅಂತ ಚೆಕ್ ಮಾಡಬೇಕು.
ಬಹುಶಃ ಸ್ಮಾರ್ಟ್ ವಾಚ್ ಎರರ್ ತೋರಿಸಿ ಸಿಡಿದು ಹೋಗುತ್ತದೇನೋ. ಅವನ್ಯಾಕೆ ಒಂದು ಸೈಕಲ್ ಆದ್ರೂ ತಗೋಬಾರ್ದು? ಅವನ್ಯಾಕೆ ಒಂದು ಕಡೆ ಕೂತು ವ್ಯಾಪಾರ ಮಾಡಬಾರ್ದು? ಅವನ್ಯಾಕೆ ಈ ಏರಿಯಾ ಬಿಟ್ಟು ಬೇರೆ ಕಡೆ ಟ್ರೈ ಮಾಡಬಾರ್ದು ಹೀಗೆ ಏನೇನೋ ಪ್ರಶ್ನೆ. ಒಟ್ಟಾರೆ ಆರ್ ಆರ್ ನಗರದ ಗಲ್ಲಿಗೆ ಬದರೆ ಆತನ ಬಗ್ಗೆ ಮಾತನಾಡದೇ ಅವನನ್ನು ನೋಡುವ ಪ್ರಯತ್ನ ಮಾಡದೇ ಹೋದ ದಿನವೇ ಇಲ್ಲ.
ಹೀಗಿರುವಾಗ ಸುಮಾರು ಒಂದು ತಿಂಗಳು ದಿಢೀರ್ ನಾಪತ್ತೆಯಾಗಿಬಿಟ್ಟ. ನಾವು ದಿನದಲ್ಲಿ ಹತ್ತಾರು ಬಾರಿ ಅವನು ಕಂಡಾನೆಂಬ ನಿರೀಕ್ಷೆಯಲ್ಲಿ ಗಲ್ಲಿ ಗಲ್ಲಿ ಸುತ್ತಿ ನಿರಾಸೆಯಿಂದ ಮನೆ ಸೇರುತ್ತಿದ್ದೆವು. ಅವನು ಇಲ್ಲಿ ಬರದೇ ಇರೋಕೆ ಸಾಧ್ಯವೇ ಇಲ್ಲ. ನಮ್ಮ ಕಣ್ಣಿಗೆ ಸಿಗುತ್ತಿಲ್ಲ ಅಷ್ಟೇ ಎಂಬ ನಂಬಿಕೆ. ಆದರೆ ತಿಂಗಳಲ್ಲಿ ಒಮ್ಮೆಯೂ ಕಾಣದಿzಗ, ಕೆಟ್ಟ ಯೋಚನೆ ಹರಿದಾಡಿದವು.
ಬೈ ಚಾಯ್ಸ್ ಏನಾದ್ರೂ ಹೆಚ್ಚೂಕಮ್ಮಿ ಆಗಿದ್ರೆ? ಈ ಪರಿ ಸುತ್ತುತ್ತಾ ಆರೋಗ್ಯ ಕೆಡಿಸಿಕೊಂಡನಾ? ಯಾವುದಾದರೂ ಅಪಘಾತಕ್ಕೀಡಾದನಾ? ಆತಂಕ ಹೆಚ್ಚಾಯಿತು. ನನ್ನ ಮತ್ತು ವೈದ್ಯರ ರಸ್ತೆ ಸಂಚಾರ ದಲ್ಲಿ ಸಮ್ ಥಿಂಗ್ ಈಸ್ ಮಿಸ್ಸಿಂಗ್ ಅನಿಸತೊಡಗಿತು. ಇಬ್ಬರೂ ಒದ್ದಾಡತೊಡಗಿದೆವು. ನಾವು ಅವನ ಫೋನ್ ನಂಬರ್ ಆದರೂ ಇಸ್ಕೋಬೇಕಿತ್ತು ಅಂತೆಲ್ಲ ಹಲುಬಿದೆವು.
ಎಲ್ಲಿಂದ ಬರ್ತಾನೆ.. ಏನು ಕಥೆ ಆಂತಾದ್ರೂ ತಿಳ್ಕೋಬೇಕಿತ್ತು ಎಂದು ಪರಿತಪಿಸಿದೆವು. ಎರಡು ತಿಂಗಳ ಬಳಿಕ ಅದೊಂದು ಪ್ರತ್ಯಕ್ಷನಾಗಿಬಿಟ್ಟ ಅಣ್ಣ! ನಮ್ಮಿಬ್ಬರ ಖುಷಿಗೆ ಪಾರವೇ ಇಲ್ಲ. ಇಬ್ಬರೂ ಎಮೋಷನಲ್ ಆಗಿದ್ದೆವು. ರಸ್ತೆಯ ಆ ಬದಿಯಲ್ಲಿದ್ದವನನ್ನು ಕೂಗಿ ಕರೆದೆವು. ಹಪ್ಪಳಾ ಅಂತ! ಸ್ವಂತ ಅಣ್ಣನೋ ತಮ್ಮನೋ ಕಳೆದೋಗಿದ್ದ ಎಂಬಂತಾಡಿ ಎಲ್ಲೋಗಿದ್ದೆ ಇಷ್ಟು ದಿನ ಅಂತ ಕೇಳಿದೆವು. ಅದಕ್ಕೂ ಮುನ್ನ, ಮೊದ್ಲು ನಿನ್ನ ಫೋನ್ ನಂಬರ್ ಕೊಡು ಅಂತ ಇಸ್ಕೊಂಡ್ವಿ. ಆಗಲೇ ಗೊತ್ತಾಗಿದ್ದು ಆತನ ಹೆಸರು ವಲ್ಲೀಶ!
ಸಾರ್ ಅಪ್ಪನಿಗೆ ಎಂಬತ್ತೊಂದು ವರ್ಷ. ಸ್ಟ್ರೋಕ್ ಆಗಿದೆ. ಆಸ್ಪತ್ರೆಗೆ ಸೇರಿಸಿದ್ದೇನೆ. ನಾಲ್ಕೈದು ಲಕ್ಷ ಖರ್ಚಾಗಿದೆ. ಗುಣವಾಗುವ ಥರ ಇಲ್ಲ. ಮನೇಲಿ ಅಮ್ಮ ಮಾತ್ರ ಇರೋದು. ಚಿಕ್ಕ ಮಗು ಇರ್ತಾ ಅಮ್ಮನನ್ನು ಕಳ್ಕೊಂಡೆ. ಆಮೇಲಿಂದ ಚಿಕ್ಕಮ್ಮನೇ ಅಮ್ಮ. ಬೆಳಗ್ಗೆ ಮೂರಕ್ಕೆ ಏಳ್ತೀನಿ. ಸ್ನಾನ ಸಂಧ್ಯಾವಂದನೆ ತಿಂಡಿ ಮುಗಿಸಿ ಆರಕ್ಕೆ ಮನೆ ಬಿಟ್ಟರೆ ಮನೆ ಸೇರೋದು ರಾತ್ರಿ ಹನ್ನೆರಡಕ್ಕೆ. ಬೆಳಗ್ಗೆ ಎಂಟರಿಂದ ರಾತ್ರಿ ಹನ್ನೊಂದರ ತನಕ ಆರ್ ಆರ್ ನಗರದ ಈ ತುದಿಯಿಂದ ಆ ತುದಿಯತನಕ ಗಲ್ಲಿ ಗಲ್ಲಿ ಸುತ್ತಿ ಮಾರುತ್ತೇನೆ.
ಪ್ರತಿ ದಿನ ಮೂವತ್ತು ಕಿಲೋಮೀಟರ್ ನಡೀತೀನಿ. ವಯಸ್ಸು ನಲವತ್ತೆಂಟು. ಮದುವೆ ಆಗಿಲ್ಲ. ನಂಗೂ ಆರೋಗ್ಯ ಸಮಸ್ಯೆ ಇದೆ. ಎರಡುಮೂರು ಬಾರಿ ರಸ್ತೇಲೇ ಮೂರ್ಛೆ ತಪ್ಪಿ ಬಿದ್ದಿದ್ದೇನೆ. ಮಧ್ಯಾಹ್ನ ಊಟ ಮಾಡೋ ಅಭ್ಯಾಸ ಇಲ್ಲ. ಮೂರು ಸಾವಿರ ರುಪಾಯಿ ವ್ಯಾಪಾರ ಮಾಡಿಯೇ ಮನೆಗೆ ಹೋಗೋದು. ಐನೂರರಿಂದ ಎಂಟುನೂರು ರುಪಾಯಿ ಕೈಗೆ ಬರುತ್ತದೆ.
ಸ್ವಚ್ಛವಾಗಿ ತಯಾರಿಸಿ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಸಾಂಬಾರಪುಡಿ ಎಲ್ಲವನ್ನೂ ಮಾರುತ್ತೇನೆ. ಸ್ವಚ್ಛವಾಗಿದೆಯೋ ಇಲ್ವೋ ಅಂತ ಅನುಮಾನ ಪಟ್ಟಾಗ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತೇನೆ. ಆದರೆ ಜಾತಿ ಹೆಸರಿಂದ ಮಾರುತ್ತಾನೆ ಎಂದು ಬಯ್ದು ಕಳಿಸಿದ್ದೂ ಇದೆ. ಚಪ್ಪಲಿ ಸವೆದು ಕಿತ್ತೋಗುವ ತನಕ ಬೇರೆ ಚಪ್ಪಲಿ ತೆಗೆದುಕೊಳ್ಳೋದಿಲ್ಲ.
ಹಪ್ಪಳ ತೆಗೆದುಕೊಳ್ಳದೇ ನನ್ನ ಕಷ್ಟ ನೋಡಿ ಕಾಸು ಕೊಡಲು ಬಂದವರಿದ್ದಾರೆ. ನೂರು ರುಪಾಯಿ ಹಪ್ಪಳ ತಗೊಂಡು ಸದ್ದಿಲ್ಲದೆ ಸಾವಿರ ರುಪಾಯಿ ಫೋನ್ ಪೇ ಮಾಡಿ ಹೋದವರೂ ಇದ್ದಾರೆ. ನಂಗೆ ದುರಭ್ಯಾಸ ಗಳಿಲ್ಲ. ಅದಕ್ಕೆ ಸಮಯವೂ ಇಲ್ಲ. ದುಡಿಮೆ ರಾಯರ ಮೇಲಿನ ನಂಬಿಕೆ ಇಷ್ಟೇ ಗೊತ್ತಿರೋದು ಅಂತ ಆತ ಹೇಳಿಕೊಳ್ಳುತ್ತಾ ಹೋದಾಗ, ಮನಸು ಭಾರಭಾರ, ಸಣ್ಣ ಗಿಲ್ಟ್. ಆತನ ಬದುಕು ರಿಪೇರಿಯಾಗಿ ಚೆಂದ ವಾಗಲಿ ಎಂದು ಪ್ರಾರ್ಥಿಸುವುದರ ಜೊತೆಗೆ, ನಮ್ಮಿಂದೇನಾಗ ಬಹುದೋ ಅದನ್ನು ಮಾಡೋಣವೆಂಬ ಸಂಕಲ್ಪ ಮಾಡಿಕೊಂಡೆವು. ಆತನನ್ನು ಯಾರೂ ಹೀಗೆಲ್ಲ ಮಾತನಾಡಿಸಿರಲಿಲ್ಲವೇನೋ.
ಆತನೂ ಭಾವುಕನಾಗಿ ಬಿಕ್ಕಳಿಸಿ, ಸಾರ್ ನವೀನ್ ಸಾಗರ್ ಬೆಸ್ಟ್ ಫ್ರೆಂಡ್ ಅಂತ ಸೇವ್ ಮಾಡ್ಕೋ ತೀನಿ ಸಾರ್ ಅಂದ. ಹೂಂ ಅಂದೆ. ಆತನ ಬೆಸ್ಟ್ ಫ್ರೆಂಡ್ ಆಗಲು ಪ್ರಯತ್ನಿಸಬೇಕು.