ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಶಾಂತಿಯ ತೋಟಕ್ಕೆ ಓಲೈಕೆಯೇ ತೊಡಕು

ಈ ಹಿಂದೆ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಪಕ್ಷಾತೀತವಾಗಿ ಸರಕಾರಗಳು ತೀರ್ಮಾನ ತೆಗೆದುಕೊಳ್ಳುವಾಗ ‘ಕಠಿಣ’ ಕ್ರಮ ಕೈಗೊಳ್ಳುತ್ತಿದ್ದವು. ಆದರೆ ಕಾಲ ಬದಲಾದಂತೆ, ರಾಜಕೀಯ ಪಕ್ಷಗಳು ‘ಓಲೈಕೆ’ ರಾಜಕೀಯಕ್ಕೆ ಹೆಚ್ಚೆಚ್ಚು ಒತ್ತು ನೀಡಲು ಶುರು ಮಾಡಿದ ಬಳಿಕ ಪದೇಪದೆ ಕೋಮುಗಳ ಹೆಸರಲ್ಲಿ ಗಲಾಟೆಗಳ ಪ್ರಮಾಣ ಹೆಚ್ಚಾಗುತ್ತಿವೆ.

ಶಾಂತಿಯ ತೋಟಕ್ಕೆ ಓಲೈಕೆಯೇ ತೊಡಕು

ಅಶ್ವತ್ಥಕಟ್ಟೆ

ranjith.hoskere@gmail.com

ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವೆಂದು ನಮ್ಮ ನಾಡಗೀತೆಯಲ್ಲಿ ಬಣ್ಣಿಸಿದ್ದಾರೆ. ಕುವೆಂಪು ಅವರ ಮಾತಿನಂತೆ, ಕರ್ನಾಟಕ ಶಾಂತಿ ಪ್ರಿಯ ಜತೆಗೆ ಎಲ್ಲರನ್ನೂ ಒಳಗೊಂಡ ರಾಜ್ಯವಾಗಿ ರೂಪುಗೊಂಡಿದೆ. ಉತ್ತರ ಪ್ರದೇಶ ಅಥವಾ ನೆರೆ ರಾಜ್ಯ ಗಳಲ್ಲಿನ ದೊಂಬಿ ಗಲಭೆಗಳನ್ನು ಗಮನಿಸಿದರೆ, ಕರ್ನಾಟಕ ‘ಸುರಕ್ಷಿತ ರಾಜ್ಯ’ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ರೀತಿಯ ‘ಇಕೋ ಸಿಸ್ಟಂ’ನಿಂದಾಗಿಯೇ ಕೈಗಾರಿಕೆಗಳು, ಬಂಡವಾಳ ಹೂಡಿಕೆ ದಾರರು ಕರ್ನಾಟಕ ವನ್ನು ತಮ್ಮ ಮೊದಲ ಆದ್ಯತಾ ರಾಜ್ಯವನ್ನಾಗಿ ಆರಿಸಿಕೊಳ್ಳುತ್ತಾರೆ. ದೊಂಬಿ, ಗಲಾಟೆ ಹೊರತಾಗಿ ಅಂತಾರಾಷ್ಟ್ರೀಯ ಕಂಪನಿಗಳು ಬಯಸುವ ಕೌಶಲ್ಯಾಧಾರಿತ ಮಾನವ ಸಂಪನ್ಮೂಲ, ವಾತಾವರಣ, ಸಂಪರ್ಕ ಸೇರಿದಂತೆ ಎಲ್ಲ ರೀತಿಯಿಂದಲೂ ದೇಶದ ಬಹುಪಾಲು ರಾಜ್ಯಗಳಿಗಿಂತ ಕರ್ನಾಟಕ ಹಲವು ಪಟ್ಟು ಮುಂದಿದೆ ಎನ್ನುವುದು ಸ್ಪಷ್ಟ.

ಹಾಗೆಂದ ಮಾತ್ರಕ್ಕೆ, ಕರ್ನಾಟಕ ರಚನೆಯಾದ ದಿನದಿಂದ ಕೋಮು ಸೌಹಾರ್ದತೆಯಲ್ಲಿ ಸಮಸ್ಯೆ, ಗಲಾಟೆ-ದೊಂಬಿಗಳು ನಡೆದೇ ಇಲ್ಲ ಎಂದಲ್ಲ. ಆದರೆ ಈ ಎಲ್ಲವನ್ನು ‘ಹತೋಟಿ’ಯಲ್ಲಿಡುವ ವಿಷಯದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕವು ಯಶಸ್ವಿಯಾಗಿತ್ತು ಎನ್ನುವುದು ಸ್ಪಷ್ಟ.

ಈ ಹಿಂದೆ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಪಕ್ಷಾತೀತವಾಗಿ ಸರಕಾರಗಳು ತೀರ್ಮಾನ ತೆಗೆದುಕೊಳ್ಳುವಾಗ ‘ಕಠಿಣ’ ಕ್ರಮ ಕೈಗೊಳ್ಳುತ್ತಿದ್ದವು. ಆದರೆ ಕಾಲ ಬದಲಾದಂತೆ, ರಾಜಕೀಯ ಪಕ್ಷಗಳು ‘ಓಲೈಕೆ’ ರಾಜಕೀಯಕ್ಕೆ ಹೆಚ್ಚೆಚ್ಚು ಒತ್ತು ನೀಡಲು ಶುರು ಮಾಡಿದ ಬಳಿಕ ಪದೇಪದೆ ಕೋಮುಗಳ ಹೆಸರಲ್ಲಿ ಗಲಾಟೆಗಳ ಪ್ರಮಾಣ ಹೆಚ್ಚಾಗುತ್ತಿವೆ.

ಇದನ್ನೂ ಓದಿ: Ranjith H Ashwath Column: ಮತಬ್ಯಾಂಕ್‌ʼನ ಮಾತಾಗದಿರಲಿ ದೇಶದ ಭದ್ರತೆ

ಅದರಲ್ಲಿಯೂ ಕರಾವಳಿಯಲ್ಲಿ ವರ್ಷಕ್ಕೆ ನಾಲ್ಕೈದು ಪ್ರಕರಣಗಳು ಸಾಮಾನ್ಯ ಎನ್ನುವ ರೀತಿ ಯಲ್ಲಾಗಿದೆ. ಈ ಓಲೈಕೆ ರಾಜಕೀಯ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಅಧಿಕಾರ ದಲ್ಲಿರುವ ಎಲ್ಲ ಪಕ್ಷಗಳು ತಮ್ಮ ಮತಬ್ಯಾಂಕ್‌ಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಓಲೈಕೆ ಮಾಡುವುದು ಸಾಮಾನ್ಯವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ.

ಸುಹಾಸ್ ಶೆಟ್ಟಿ ಕೊಲೆಯಾಗುತ್ತಿದ್ದಂತೆ ಮಂಗಳೂರು ಸೇರಿದಂತೆ ಸಂಪೂರ್ಣ ಕರಾವಳಿ ಭಾಗದಲ್ಲಿ ನಾಲ್ಕೈದು ಗಲಾಟೆಗಳಾದವು. ಅದರಲ್ಲಿಯೂ ಸುಹಾಸ್ ಮೃತದೇಹ ಸಾಗಿಸುವಾಗಲೇ, ಕೆಲವರ ಮೇಲೆ ಹಲ್ಲೆ, ವಾಹನಗಳ ಮೇಲೆ ದಾಳಿಯಾದ ಘಟನೆಗಳು ವರದಿಯಾಗಿದೆ. ಈ ದಾಳಿ ಯಾಗು ತ್ತಿದ್ದಂತೆ, ಬಿಜೆಪಿಗರೆಲ್ಲ ಮುಸ್ಲಿಮರ ಮೇಲೆ ಮುಗಿ ಬಿದ್ದರೆ, ಕಾಂಗ್ರೆಸ್ ನಾಯಕರು ತನಿಖೆಯಾಗುವ ಮೊದಲೇ ‘ಈ ಕೊಲೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ’ ಎನ್ನುವ ಹೇಳಿಕೆಯನ್ನು ನೀಡಿ ಕೈತೊಳೆದು ಕೊಳ್ಳುವ ಪ್ರಯತ್ನ ಮಾಡಿದರು.

ಹಾಗೇ ನೋಡಿದರೆ, ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಧರ್ಮಗಳ ನಡುವಿನ ವೈಷಮ್ಯಕ್ಕಿಂತ ಹೆಚ್ಚಾಗಿ ವೈಯಕ್ತಿಕ ದ್ವೇಷ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲ ವರ್ಷದ ಹಿಂದೆ ನಡೆದಿದ್ದ ಫಾಝಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರ ಬಂದರೂ, ದ್ವೇಷಕ್ಕೆ ಕೊನೆಯಾಗಿರಲಿಲ್ಲ. ಈ ಕಾರಣಕ್ಕಾಗಿಯೇ ಶಸ ಹಾಗೂ ಸಹಚರರೊಂದಿಗೆ ಸುಹಾಸ್ ಓಡಾಡಿಕೊಂಡಿದ್ದ. ಇದೀಗ ಸುಹಾಸ್ ಶೆಟ್ಟಿಯ ಕೊಲೆಯ ಪ್ರಮುಖ ಆರೋಪಿ ಆದಿಲ್ ಮೆಹರೂಫ್ ಸಹ ಫಾಝಿಲ್ ಸಹೋದರ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ನೀಡಿರುವ ಸುಪಾರಿ ದುಡ್ಡು ಸಹ ಫಾಝಿಲ್ ಕೊಲೆಗೆ ಸರಕಾರ ನೀಡಿದ ಪರಿಹಾರದ ಮೊತ್ತವೇ ಆಗಿತ್ತು ಎನ್ನುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗುತ್ತಿದೆ.

ಆದ್ದರಿಂದ ಇದೊಂದು ಪಕ್ಕಾ ವೈಯಕ್ತಿಕ ಪ್ರಕರಣವಾದರೂ, ರಾಜಕೀಯಗೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣ ‘ಮತಬ್ಯಾಂಕ್’ನ ಓಲೈಕೆ. ಈ ಕೊಲೆಯಾದ ಮರುದಿನವೇ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿ, ‘ಇದೊಂದು ಕೊಲೆ ಪ್ರಕರಣ. ಆದರೆ ಇದಕ್ಕೂ ಫಾಝಿಲ್ ಕುಟುಂಬಕ್ಕೂ ಸಂಬಂಧವಿಲ್ಲ. ಈ ಬಗ್ಗೆ ಫಾಝಿಲ್ ತಂದೆಯೇ ಕರೆ ಮಾಡಿ ಹೇಳಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಆ ಆಯಾಮದಲ್ಲಿ ನೋಡುವುದು ಸರಿಯಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಬಹಿರಂಗ ಹೇಳಿಕೆ ನೀಡಿದರು.

ತನಿಖೆ ಆರಂಭಗೊಂಡ ಕೆಲವೇ ಗಂಟೆಯಲ್ಲಿ ಈ ಪ್ರಕರಣದಲ್ಲಿ ಫಾಝಿಲ್ ರಕ್ತ ಸಂಬಂಧಿ ಗಳಿರುವುದು ಬಹಿರಂಗವಾಗಿದೆ. ಆದರೆ ಪೂರ್ಣಪ್ರಮಾಣದಲ್ಲಿ ತನಿಖೆಯೇ ಆರಂಭಗೊಳ್ಳದ ಸಮಯದಲ್ಲಿ ಈ ರೀತಿ ಹೇಳಿಕೆ ನೀಡಿ ಯಾರ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ? ಯಾರನ್ನು ರಕ್ಷಿಸುವುದಕ್ಕೆ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಇದು ಕೇವಲ ಸ್ಪೀಕರ್ ಖಾದರ್ ಅವರ ಹೇಳಿಕೆ ಮಾತ್ರವಲ್ಲ, ಬಹುತೇಕ ಕಾಂಗ್ರೆಸಿಗರು ಈ ವಿಷಯ‌ ದಲ್ಲಿ ‘ಮುಸ್ಲಿಂ’ ಎನ್ನುವ ಕಾರಣಕ್ಕೆ ಫಾಝಿಲ್ ಕುಟುಂಬದ ತಪ್ಪಿಲ್ಲ ಎನ್ನುವ ರೀತಿಯಲ್ಲಿ ಡಿಫೆಂಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಇದಾದ ಬಳಿಕ ಗೃಹ ಸಚಿವ ಪರಮೇಶ್ವರ ಅವರು ಮಂಗಳೂರಿಗೆ ಹೋದರೂ, ಸುಹಾಸ್ ನಿವಾಸಕ್ಕೆ ಭೇಟಿ ನೀಡಲಿಲ್ಲ.

ಕಾರಣ ಕೇಳಿದ್ದಕ್ಕೆ, ‘ಇದು ಕೊಲೆ ಪ್ರಕರಣ. ಕೊಲೆಯಾದ ವ್ಯಕ್ತಿ ವಿರುದ್ಧ ಹಲವು ದೂರುಗಳಿದ್ದವು. ಆದ್ದರಿಂದ ಭೇಟಿ ನೀಡಲಿಲ್ಲ’ ಎಂದು ಸಮರ್ಥಿಸಿಕೊಂಡರು. ಆದರೆ ಅದೇ ಫಾಝಿಲ್ ಕೊಲೆ ಯಾದಾಗ ಕುಟುಂಬವನ್ನು ಬೆಂಗಳೂರಿಗೆ ಕರೆಸಿಕೊಂಡು ‘ಪರಿಹಾರ’ ನೀಡಿದ್ದು ಇದೇ ಸರಕಾರ!

ಹಿಂದು ವ್ಯಕ್ತಿ ಕೊಲೆಯಾದಾಗ ಒಂದು ನಡೆ, ಮುಸ್ಲಿಂ ವ್ಯಕ್ತಿ ಕೊಲೆಯಾದಾಗ ಒಂದು ನಡೆಯನ್ನು ಅನುಸರಿಸುವುದೇ ಬಹುತೇಕರ ವಿರೋಧಕ್ಕೆ ಕಾರಣವಾಗಿದೆ. ಇದು ಕೇವಲ ಕಾಂಗ್ರೆಸ್ ಸಮಸ್ಯೆ ಯಲ್ಲ. ಮುಸ್ಲಿಮರ ಓಲೈಕೆಯಲ್ಲಿ ಯಾವ ರೀತಿಯಲ್ಲಿ ‘ವಿತಂಡ’ವಾದವನ್ನು ಕಾಂಗ್ರೆಸಿಗರು ಮಾಡುತ್ತಿದ್ದಾರೋ, ಅದೇ ರೀತಿ ಬಿಜೆಪಿಯವರು ಹಿಂದೂಗಳ ವಿಷಯದಲ್ಲಿ ಮಾಡುವುದನ್ನು ನೋಡಿದ್ದೇವೆ. ಹಿಂದೂ ಕಾರ್ಯಕರ್ತರ ಕೊಲೆ ನಡೆಯುವುದಕ್ಕಿಂತ ಹೆಚ್ಚಾಗಿ, ಕೊಲೆ ಯಾಗು ತ್ತಿದ್ದಂತೆ ಆ ಕೊಲೆಯನ್ನು ಯಾರ ತಲೆಗೆ ಕಟ್ಟಬಹುದು ಎನ್ನುವ ರೀತಿಯಲ್ಲಿ ಮಾತನಾಡುವುದನ್ನು ನೋಡಿದ್ದೇವೆ.

ಬಹುತೇಕ ಸಮಯದಲ್ಲಿ ಪಕ್ಷದ ನಾಯಕರ ಹೇಳಿಕೆಗಳೇ, ಧರ್ಮಗಳ ನಡುವಿನ ಪ್ರಚೋದನೆಗೆ ಕಾರಣವಾಗಿದೆ. extreme ಇಸ್ಲಾಂ ವಾದವಾಗಲಿ, ಹಿಂದುತ್ವವಾದ ಎರಡೂ ಶಾಂತಿಯ ತೋಟಕ್ಕೆ ಸಮಸ್ಯೆ ಎನ್ನುವ ಸ್ಪಷ್ಟ ತಿಳುವಳಿಕೆ ಎರಡೂ ಪಕ್ಷದ ನಾಯಕರಿಗೆ ಇದ್ದರೂ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ‘ಕಿಡಿ’ ಹೊತ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗುವು ದಿಲ್ಲ.

ಮತಬ್ಯಾಂಕ್‌ಗಾಗಿ ಪಕ್ಷಗಳು ಕೇವಲ ಪ್ರಚೋದನೆಯ ಮೂಲಕ ಕೋಮು ಗಲಭೆಯಾಗುವಂತೆ ಮಾಡುತ್ತವೆ ಎನ್ನುವಂತಿಲ್ಲ. ಅನೇಕ ಸಮಯದಲ್ಲಿ ಜಾತಿ-ಜಾತಿಗಳ ನಡುವಿನ ಭಿನ್ನತೆಯನ್ನು ಬಳಸಿಕೊಂಡು ತಮ್ಮ ಲಾಭಕ್ಕೆ ಅವುಗಳನ್ನು ಪರಿವರ್ತನೆ ಮಾಡಿಕೊಂಡಿರುವುದನ್ನು ನೋಡಿ ದ್ದೇವೆ. ಓಲೈಕೆ ರಾಜಕಾರಣದಿಂದ ಕೇವಲ ಕಾನೂನು ಸುವ್ಯವಸ್ಥೆಗೆ ಮಾತ್ರವಲ್ಲದೇ, ಹಲವು ರೀತಿಯ ಸಮಸ್ಯೆಗಳಿಗೂ ನಾಂದಿ ಹಾಡಿರುವ ಹತ್ತಾರು ಉದಾಹರಣೆಗಳು ನಮ್ಮ ಮುಂದಿದೆ.

ಉದಾಹರಣೆಗೆ 2013ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರಕಾರ, ಒಳಮೀಸಲು, ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ, ಪ್ರತ್ಯೇಕ ಲಿಂಗಾಯತ ಧರ್ಮ ಸೇರಿದಂತೆ ಹಲವು ರೀತಿಯ ವಿವಾದಾತ್ಮಕ ವಿಷಯಗಳನ್ನು ಕಾಂಗ್ರೆಸ್ ಸರಕಾರ ಕೈಗೆತ್ತಿಕೊಂಡಿತ್ತು. ಇದರ ಫಲವಾಗಿಯೇ 2018ರ ಚುನಾವಣೆಯಲ್ಲಿ, ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿತ್ತು.

ಇನ್ನು ಅದಾದ ಬಳಿಕ ಸಮ್ಮಿಶ್ರ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿಗರು, ಒಳ ಮೀಸಲು ವಿಷಯದಲ್ಲಿ ‘ಕೊಟ್ಟು ಕೊಡದಂತೆ’ ಮಾಡಲು ಹೋಗಿ ಹಾಗೂ ಒಬಿಸಿಯಲ್ಲಿ 3ಸಿ, 3ಡಿ ನೀಡಲು ಮುಂದಾಗಿದ್ದು ಹಾಗೂ ಮುಸ್ಲಿಮರ ಮೀಸಲನ್ನು ರದ್ದು ಮಾಡುವ ಮೂಲಕ ಹಿಂದುಗಳನ್ನು ಓಲೈಸಲು ಮುಂದಾಗಿತ್ತು. ಕೊನೆಗೆ ಒಬಿಸಿ ಮೀಸಲು ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಲಿಖಿತ ಮಾಹಿತಿ ನೀಡುವ ಮೂಲಕ ಅಂದಿನ ಬಿಜೆಪಿ ಸರಕಾರ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿಕೊಳ್ಳು ವಂತಾಯಿತು.

ಇದಾದ ಬಳಿಕ ಚುನಾವಣೆಗೆ ಹೋದ ಬಿಜೆಪಿ ನಾಯಕರು ‘ತಮ್ಮ ಬೆಂಬಲಿಗರನ್ನು’ ಓಲೈಸಲು ಟಿಕೆಟ್ ಹಂಚಿಕೆಯಲ್ಲಿ ಮಾಡಿಕೊಂಡ ಎಡವಟ್ಟು ಕಾಂಗ್ರೆಸ್‌ಗೆ ನೇರ ಲಾಭ ಮಾಡಿಕೊಡುವುದಷ್ಟೇ ಅಲ್ಲದೇ, ದಶಕಗಳ ಬಳಿಕ ‘ಐತಿಹಾಸಿಕ’ ಸ್ಪಷ್ಟ ಬಹುಮತ ಕಾಂಗ್ರೆಸ್ ಸಿಗುವಂತಾಯಿತು.

ಓಲೈಕೆ ರಾಜಕಾರಣ ಕೇವಲ ಕಾಂಗ್ರೆಸ್‌ಗೆ ಸೀಮಿತವೆಂದಿಲ್ಲ. ಬಿಜೆಪಿ ಅವಧಿಯಲ್ಲಿಯೂ ಈ ರೀತಿ ಹತ್ತಾರು ಓಲೈಕೆಯಾಗಿರುವ ಉದಾಹರಣೆಗಳಿವೆ. ಹಿಂದೂಗಳ ಪರ ಬಿಜೆಪಿಗರು, ಅಲ್ಪಸಂಖ್ಯಾತರ ಪರ ಕಾಂಗ್ರೆಸಿಗರು ಧ್ವನಿ ಎತ್ತಿ-ಎತ್ತಿಯೇ ಕರ್ನಾಟಕದಲ್ಲಿ ಇಂದು ಎಲ್ಲವೂ ಧರ್ಮಾಧಾರಿತ ಅಥವಾ ಜಾತಿಯ ಆಧಾರದಲ್ಲಿ ನೋಡುವ ಸನ್ನಿವೇಶವನ್ನು ಸೃಷ್ಟಿಸಿಕೊಂಡಿದ್ದೇವೆ.

ಹಿಂದುಪರ ಸಂಘಟನೆಗಳ ವಿರುದ್ಧದ ಪ್ರಕರಣವನ್ನು ಬಿಜೆಪಿ ಸರಕಾರದ ಅವಧಿಯಲ್ಲಿ ತೆಗೆಸಿದರೆ, ಕಾಂಗ್ರೆಸ್ ಅವಧಿಯಲ್ಲಿ ಎಸ್ ಡಿಪಿಐ ಅಥವಾ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದನ್ನು ನೋಡಿದ್ದೇವೆ. ಈ ರೀತಿ ಆಯಾ ಪಕ್ಷಗಳು ಆಯಾ ಸಮಯದಲ್ಲಿ ತಮಗೆ ಬೇಕಾದ ಸಮುದಾಯದ ಓಲೈಕೆಗೆ ತೀರ್ಮಾನ ಕೈಗೊಳ್ಳುತ್ತಾ ಹೋದರೆ, ರಾಜ್ಯದ ಹಿತದೃಷ್ಠಿಯ ಕಡೆಗೆ ಕ್ರಮ ಯಾವಾಗ ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ.

ಕೆಲ ವರ್ಷಗಳ ಹಿಂದಿನ ಉತ್ತರ ಪ್ರದೇಶ, ಬಿಹಾರದ ಸ್ಥಿತಿ, ಇಂದಿನ ಪಶ್ಚಿಮ ಬಂಗಾಳದ ಪರಿಸ್ಥಿತಿ ನೋಡಿದರೆ, ಕರ್ನಾಟಕ ಈಗಲೂ ‘ಶಾಂತಿ ಸುವ್ಯವಸ್ಥೆ’ ಪಾಲನೆಯ ವಿಷಯದಲ್ಲಿ ಉತ್ತಮ ಪರಿಸ್ಥಿತಿ ಯಲ್ಲಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರದ ಆಡಳಿತದಲ್ಲಿ ತೆಗೆದುಕೊಂಡಿರುವ ನಿರ್ಣಯದಿಂದ ಆ ರಾಜ್ಯಗಳು ಸುಧಾರಣೆಯ ಹಾದಿಯಲ್ಲಿದೆ. ಈ ಹಂತದಲ್ಲಿಯೂ ಕರ್ನಾಟಕ ಕಾನೂನು ನಿರ್ವಹಣೆಯಲ್ಲಿ ಉತ್ತಮವೆಂದು ‘ಬೆನ್ನು’ ತಟ್ಟಿಕೊಳ್ಳು ತ್ತಿದ್ದರೂ, ಇತ್ತೀಚಿನ ದಿನದಲ್ಲಿ ರಾಜಕೀಯ ಪಕ್ಷಗಳ ಓಲೈಕೆಯ ಕಾರಣಕ್ಕೆ ಭವಿಷ್ಯದಲ್ಲಿ ಈ ಉತ್ತಮ ಎನ್ನುವ ಹಣೆಪಟ್ಟಿ ಕಳಚಿ ಬೀಳುವ ಆತಂಕವನ್ನು ಅಲ್ಲಗಳೆಯುವಂತಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಓಲೈಕೆ ಮೀರಿದ ರಾಜಕೀಯ ಮಾಡುವ ಸ್ಥಿತಿಯಲ್ಲಿ ಯಾವ ಪಕ್ಷವೂ ಇಲ್ಲ ಎನ್ನುವುದು ವಾಸ್ತವವಾದರೂ, ಸಮಾಜಘಾತುಕ ಶಕ್ತಿಗಳ ವಿಷಯದಲ್ಲಾದರೂ ಎಲ್ಲ ಪಕ್ಷಗಳು ನಿರ್ದಾಕ್ಷಿಣ್ಯ ಕ್ರಮವಹಿಸುವುದು ಅನಿವಾರ್ಯ. ಇಲ್ಲವಾದರೂ, ಓಲೈಕೆ ಮಾಡುತ್ತಿರುವ ಸಮುದಾ ಯಗಳೇ ಆಯಾ ಪಕ್ಷಗಳಿಗೆ ಮುಂದೊಂದು ದಿನ ಮಾರಕವಾಗುವುದರಲ್ಲಿ ಅನುಮಾನವಿಲ್ಲ.