ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ಎಣ್ಣೆಯ ಗುಣ ತಿಳಿಯುವುದು ಬಣ್ಣದಿಂದ...

ದೇವದಾಸಿ ನಾಟಕದ ಕುರಿತಾಗಿ ಮೊದಲು ಹೇಳುತ್ತೇನೆ. ಆಮೇಲೆ ಓಲ್ಡ್ ಮೊಂಕ್ ಓಪನ್ ಮಾಡೋಣ. ಯಾವ ಇಸವಿ ಎಂದು ಸರಿಯಾಗಿ ನೆನಪಿಲ್ಲ, ಏನಿಲ್ಲವೆಂದರೂ ನಾಲ್ಕರಿಂದ ನಾಲ್ಕೂವರೆ ದಶಕಕ್ಕೂ ಹಿಂದಿನ ಕತೆ. ಆಗೆಲ್ಲ ಶಿರಸಿಯ ಮಾರಿಕಾಂಬಾ ಜಾತ್ರೆಗೆ ಏನಿಲ್ಲವೆಂದರೂ ಎರಡು-ಮೂರು ನಾಟಕ ಕಂಪನಿಗಳು ಬಂದು ತಿಂಗಳಾನುಗಟ್ಟಲೆ ಟೆಂಟ್ ಹಾಕುತ್ತಿದ್ದವು. ಆ ವರ್ಷ ಜಾತ್ರೆಯಲ್ಲಿ ಮಾಸ್ಟರ್ ಹಿರಣ್ಣಯ್ಯನವರ ‘ಹಿರಣ್ಣಯ್ಯ ಮಿತ್ರ ಮಂಡಳಿ’ ತಂಡದವರೂ ಟೆಂಟ್ ಹಾಕಿದ್ದರು.

ವಿದೇಶವಾಸಿ

ಶಾಸನ ವಿಧಿಸಿದ ಎಚ್ಚರಿಕೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ!

‘ಓಲ್ಡ್ ಮೊಂಕ್ ಬ್ಯಾನ್ ಆಗಿದೆಯಂತೆ!’ ಹದಿನೈದರಿಂದ ಇಪ್ಪತ್ತು ದಿನದ ಹಿಂದೆ ಬಂದ ಈ ಸುದ್ದಿ ಯಿಂದಾಗಿ ಗುಂಡುಪ್ರಿಯರಿಗೆ ಸಿಡಿಲು ಬಡಿದಂತಾಗಿತ್ತು. ಅದರಲ್ಲೂ ಭಾರತದ ಮದ್ಯಪ್ರಿಯ ರಿಗೆ ಈ ಸುದ್ದಿ ಹೇಗಿತ್ತು ಎಂದರೆ, ಸದಾ ಜೇಬಿನಲ್ಲಿರುತ್ತಿದ್ದ ಪರ್ಸ್ ಕಳೆದುಕೊಂಡ ಅನುಭವ, ಕೆಲವರಿಗಂತೂ ತಮ್ಮವರ ಒಬ್ಬರಾಗಿದ್ದ ಆತ್ಮೀಯರೊಬ್ಬರ ದೇಹಾಂತ್ಯವಾದ ಅನುಭವವಾಗಿತ್ತು.

ಯಾರಿಗೆ ಹೇಗೆ ಗೊತ್ತಿಲ್ಲ, ನನಗಂತೂ ಓಲ್ಡ್ ಮೊಂಕ್ ಅಂದಾಕ್ಷಣ ನೆನಪಿಗೆ ಬರುವುದು ಮಾಸ್ಟರ್ ಹಿರಣ್ಣಯ್ಯ ಮತ್ತು ಅವರ ದೇವದಾಸಿ ನಾಟಕ. ಅದೇನು? ಓಲ್ಡ್ ಮೊಂಕ್ ಹೆಂಡಕ್ಕೂ, ಹಿರಣ್ಣಯ್ಯ‌ ನವರಿಗೂ, ದೇವದಾಸಿ ನಾಟಕಕ್ಕೂ ಏನು ಸಂಬಂಧ?

ದೇವದಾಸಿ ನಾಟಕದ ಕುರಿತಾಗಿ ಮೊದಲು ಹೇಳುತ್ತೇನೆ. ಆಮೇಲೆ ಓಲ್ಡ್ ಮೊಂಕ್ ಓಪನ್ ಮಾಡೋಣ. ಯಾವ ಇಸವಿ ಎಂದು ಸರಿಯಾಗಿ ನೆನಪಿಲ್ಲ, ಏನಿಲ್ಲವೆಂದರೂ ನಾಲ್ಕರಿಂದ ನಾಲ್ಕೂವರೆ ದಶಕಕ್ಕೂ ಹಿಂದಿನ ಕತೆ. ಆಗೆಲ್ಲ ಶಿರಸಿಯ ಮಾರಿಕಾಂಬಾ ಜಾತ್ರೆಗೆ ಏನಿಲ್ಲವೆಂದರೂ ಎರಡು-ಮೂರು ನಾಟಕ ಕಂಪನಿಗಳು ಬಂದು ತಿಂಗಳಾನುಗಟ್ಟಲೆ ಟೆಂಟ್ ಹಾಕುತ್ತಿದ್ದವು. ಆ ವರ್ಷ ಜಾತ್ರೆಯಲ್ಲಿ ಮಾಸ್ಟರ್ ಹಿರಣ್ಣಯ್ಯನವರ ‘ಹಿರಣ್ಣಯ್ಯ ಮಿತ್ರ ಮಂಡಳಿ’ ತಂಡದವರೂ ಟೆಂಟ್ ಹಾಕಿದ್ದರು.

ಇದನ್ನೂ ಓದಿ: Kiran Upadhyay Column: ಗಗನದಲ್ಲಿರುವಾಗ ಘನತೆ ಮರೆತರೆ ಹೇಗೆ ?

‘ಭ್ರಷ್ಟಾಚಾರ’, ‘ಲಂಚಾವತಾರ’ ಇತ್ಯಾದಿ ಜನಪ್ರಿಯ ನಾಟಕಗಳ ಜತೆಗೆ ‘ದೇವದಾಸಿ’ ನಾಟಕವನ್ನೂ ಆಡಿದ್ದರು. ಹಿರಣ್ಣಯ್ಯನವರ ಉಳಿದ ನಾಟಕಗಳಿಗಿಂತ ವಿಭಿನ್ನವಾದ ನಾಟಕ ದೇವದಾಸಿ. ಕಥೆ, ರಂಗಸಜ್ಜಿಕೆ ಅದೆಲ್ಲ ಒಂದು ಕಡೆ ಇರಲಿ, ಆ ನಾಟಕದಲ್ಲಿ ಹಿರಣ್ಣಯ್ಯನವರ ಸಂಭಾಷಣೆ ಮತ್ತು ಅವರು ಹಾಡುತ್ತಿದ್ದ ಹಾಡು, ಹಿಂದೆಂದೂ ಕೇಳಿರಲಿಲ್ಲ. ಆ ಹಾಡನ್ನು ಬೇರೆಯವರು ಹಾಡಿದ್ದು ಈಗ ಯೂಟ್ಯೂಬ್‌ನಲ್ಲಿ ಸಿಗುತ್ತದೆ‌ ಯಾದರೂ, ಹಿರಣ್ಣಯ್ಯ ರಂಗದಲ್ಲಿ ಹಾಡಿದಂತೆ ಹಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು.

ಶಿರಸಿಯಲ್ಲಿ ನಾಟಕ ಪ್ರದರ್ಶನ ಮಾಡಿಹೋದ ಕೆಲವೇ ತಿಂಗಳಿನ ಒಳಗೆ ಹಿರಣ್ಣಯ್ಯನವರ ನಾಟಕಗಳ ಆಡಿಯೋ ಟೇಪ್ ನಮ್ಮ ಮನೆಗೆ ಬಂದಿತ್ತು. ದೇವದಾಸಿ ನಾಟಕದ ಆಡಿಯೋ ಕ್ಯಾಸೆಟ್ ಕೊಂಡು ತಂದು, ಹಿರಣ್ಣಯ್ಯನವರ ಸಂಭಾಷಣೆ ಮತ್ತು ಹಾಡನ್ನು ಕಂಠಪಾಠ ಮಾಡಿಕೊಂಡಿದ್ದೆ. ಆಗಿನ ಕಾಲದಲ್ಲಿ ಅದು ದೊಡ್ಡ ಸಂಗತಿಯಾಗಿತ್ತು. ಅದರಲ್ಲೂ ‘ಸುಖವೀವ ಸುರಪಾನವಿದು...’ ಹಾಡು ಶಿರಸಿಯಲ್ಲಿ ಬಹಳವೇ ಜನಪ್ರಿಯವಾಗಿತ್ತು. ಆ ಪದ್ಯದ ಕೊನೆಯಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿದ ಸಾಲುಗಳು, ಆ ಪದ್ಯ ಅಷ್ಟು ಜನಪ್ರಿಯವಾಗಲು ಕಾರಣ ಇದ್ದಿರಬಹುದು. ಇದು ನನ್ನೊಬ್ಬನ ಕಥೆಯಾಗಿರಲಿಲ್ಲ. ಆ ಸಮಯದಲ್ಲಿ ನಮ್ಮೂರಿನಲ್ಲಿ ಬಹಳಷ್ಟು ಜನರ ನಾಲಿಗೆಯ ಮಧ್ಯದಲ್ಲಿ ಆ ಮದ್ಯದ ಹಾಡು ಮನೆ ಮಾಡಿತ್ತು.

Old Monk

‘ಸುಖವೀವ ಸುರಪಾನವಿದೆ ಸ್ವರ್ಗ ಸಮಾನಂ,

ಆಡಿಸಿ, ಕಾಡಿಸಿ, ತಡಕಾಡಿಸಿ ತಲೆದೂಗಿಸೋ ಪಾನಂ,

ಬಲು ತಂಪಿನ ಪಾನಂ, ತನು ತಂಪಿನ ಪಾನಂ’

ಎಂದು ಆರಂಭವಾಗುವ ಹಾಡು ಇಂದಿಗೂ ನನ್ನ ಕಂಠದಲ್ಲಿ ಕುಳಿತಿದೆ. ಒಂದೆರಡು ಪದಗಳು ಮರೆತಿರಬಹುದು ಅಥವಾ ಆಚೆ-ಈಚೆ ಆಗಿರಬಹುದು ಅಷ್ಟೇ. ಹಾಗೆಯೇ ಹಿರಣ್ಣಯ್ಯ ಧರಿಸುತ್ತಿದ್ದ ಉಡುಪು ಕೂಡ. ಅಂಗಿ, ಡಂಗ್ರೀ ಪ್ಯಾಟು, ಅದರ ಮೇಲೆ ಮೊಣಕಾಲಿಗಿಂತಲೂ ಕೆಳಗೆ ಇಳಿದು ಬರುವ, ಬಿಚ್ಚುಗುಂಡಿಯ ನಿಲುವಂಗಿ. ಕೈಯಂದು ಬಾಟಲಿ ಹಿಡಿದು...

‘ಸುರನಾರಿಯ ತಲೆ ಹಾರಿಸಿ ಪರಿಜೋಡಿದ ಜ್ಞಾನಂ,

ಈ ಲೋಕದಲಿದೊಂದೇ ಅಮೃತಪಾನಂ,

ಬರಿ ಮಾತಿನ ಜನ ಎಂತರಿವರು ಇದರಭಿಮಾನಂ...’ ಎಂದು ಹಾಡುತ್ತ ರಂಗದ ಮೇಲೆ ಹಿರಣ್ಣಯ್ಯ ತೂರಾಡುತ್ತಿದ್ದರೆ, ಅದೊಂದು ಮಾಯಾಲೋಕ. ಈ ಪದ್ಯದ ಮುಂದಿನ ಸಾಲು,

‘ಸರಕಾರದ ವರಮಾನದೊಳ್ ಇದಕುತ್ತಮ ಸ್ಥಾನಂ...’ ನಾಲ್ಕೂವರೆ ದಶಕದ ಹಿಂದೆಯೂ ಸರಕಾರ ಮತ್ತು ಅಬಕಾರಿಯ ಸಂಬಂಧ ಹೇಳುತ್ತಿತ್ತು. ಆ ಕಾಲದಲ್ಲೂ ಮದ್ಯ ವ್ಯಾಪಾರ ಸರಕಾರಕ್ಕೆ ಲಾಭ ತಂದುಕೊಡುವ ಸಾಧನವಾಗಿತ್ತು. ಈ ವಿಷಯದಲ್ಲಿ ಗಾಂಧೀಜಿಯನ್ನು ಕಚೇರಿಯಲ್ಲಿ ಫೋಟೋಕ್ಕೆ, ಭಾಷಣಕ್ಕೆ ಸೀಮಿತವಾಗಿಟ್ಟ ಜನ ಆಗಲೂ ಸಾಕಷ್ಟಿದ್ದರು ಎಂದಾಯಿತು.

ಆದರೆ ಪದ್ಯದಲ್ಲಿ ನಾಲ್ಕು ಸಾಲು ಹೀಗೂ ಇದೆ-

‘ನಶ್ವರ ಸಂಸಾರದ ವ್ಯಾಮೋಹವ ಮರೆಸಿ,

ವೇಶ್ಯೆಯ ಸುಖ ಜಾಲದ ಮಾಯೆಯೊಳಿರಿಸಿ,

ಮನೆ-ಮಠಗಳ ಮಾರಿಸಿ, ಮನದಾಸೆಯ ಮುಗಿಸಿ,

ಕೊನೆಗುಳಿದ ಸಾಲಕೆ ಸನ್ಯಾಸವ ಕೊಡಿಸಿ,

ಬಹುರೋಗದ ಋಣ ಬಾಧೆಯೊಳು ಪ್ರಾಣವ ಬಿಡಿಸಿ,

ಪರಲೋಕಕೆ ಕರೆದೊಯ್ಯುವ ಬಹು ಸುಲಭ ವಿಧಾನಂ,

ಈ ತಂಪಿನ ಪಾನಂ

ಈ ಸಾಲುಗಳಲ್ಲಿ ಬರುವ ಅಣಕ, ವ್ಯಂಗ್ಯ ನೋಡಿ. ಮದ್ಯಪಾನದಿಂದ ಆಗುವ ಎಲ್ಲ ಹಾನಿಗಳನ್ನೂ ನಾಲ್ಕು ಸಾಲಿನಲ್ಲಿ ಕವಿ ಹೇಳಿದ್ದಾರೆ. ಈ ಪದ್ಯದ ಕೊನೆಯ ಪ್ಯಾರಾ ಇಂಗ್ಲೀಷಿನಲ್ಲಿದೆ. ಆ ಕಾಲದಲ್ಲಿ ಇದೂ ಒಂದು ಹೊಸ ಪ್ರಯೋಗವೇ, ಒಂದು ಸೋಜಿಗವೇ. ಕನ್ನಡ ನಾಟಕವೊಂದರಲ್ಲಿ ಬರುವ ಕನ್ನಡ ಹಾಡಿನ ಕೊನೆಯ ಪ್ಯಾರಾ ಇಂಗ್ಲೀಷ್‌ನಲ್ಲಿ!

* Government is welcome its increasing income,

Great Indian enchanting blood purification,

Best possible balancing brain stimulation,

Nobody should suspect my notification,

If anybody wants anything else

Let him question my gratification ’

ಈ ರೀತಿಯ ಪ್ರಯೋಗಗಳನ್ನೆಲ್ಲ ಮಾಡಲು ಹಿರಣ್ಣಯ್ಯನವರಿಂದಲೇ ಸಾಧ್ಯ. ಆಗ ಇದರ ಅರ್ಥ ಸಣ್ಣವರಾಗಿದ್ದ ನಮಗೆ ಸರಿಯಾಗಿ ಆಗುತ್ತಿರಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನ ಮುಂದಂತೂ ಈ ಹಾಡು ಹಾಡುವಂತೆಯೇ ಇರಲಿಲ್ಲ, ಇನ್ನು ಅರ್ಥ ಕೇಳುವುದು ಹೇಗೆ? ಸರಿಯಾದ ಇಂಗ್ಲಿಷ್ ಮಾತಾಡುವ ಯಾರದರೂ ಕೇಳೋಣವೆಂದರೆ, ‘ಹೋಗಿ ಹೋಗಿ ಕಲಿಯಲು ನಿನಗೆ ಇದೇ ಪದ್ಯ ಬೇಕಾಗಿತ್ತೇ?’ ಎಂದು ಕೇಳಿದರೆ ಎಂಬ ಭಯ. ಆದ್ದರಿಂದ ಮೊದಲು ಶಬ್ದಕೋಶ ಹುಡುಕಿ, ನಂತರ ಅದರಲ್ಲಿ ಅರ್ಥ ಹುಡುಕಿ, ತಕ್ಕ ಮಟ್ಟಿಗೆ ಅರ್ಥ ತಿಳಿದುಕೊಂಡಿದ್ದೆವು.

ಆ ನಾಟಕದಲ್ಲಿ, ಅತ್ಯಂತ ಜನಪ್ರಿಯವಾಗಿದ್ದ, ಮರೆಯಲಾಗದ ಒಂದು ಡೈಲಾಗ್ ಇತ್ತು. ನಾಜೂ ಕಯ್ಯನ ಪಾತ್ರ ಮಾಡುತ್ತಿದ್ದ ಹಿರಣ್ಣಯ್ಯ ಹೇಳುತ್ತಿದ್ದರು, ‘ಇದನ್ನು (ಮದ್ಯವನ್ನು) ಮೂಸಿ ನೋಡಬಾರದು. ಪವಿತ್ರ ವಾದ ವಸ್ತುವನ್ನು ಯಾರಾದರೂ ಮೂಸಿ ನೋಡುತ್ತಾರೆಯೇ? ಇದು ಹೇಗೆ ಪವಿತ್ರ ಎಂದು ಕೇಳುತ್ತೀರೇನು? ಇದು ಗಂಗಾ ನದಿಯ ನೀರು. ಗಂಗೆ ಹರಿಯುವುದು ಉತ್ತರದಲ್ಲಿ. ಉತ್ತರ ಭಾರತೀಯರು ಯಾವಾಗ ಬೇಕಾದರೂ ಹೋಗಿ ಗಂಗೆಯಲ್ಲಿ ಮುಳುಗೆದ್ದು ಬರಬಹುದು. ಆದರೆ ದಕ್ಷಿಣ ಭಾರತದವರ ಕತೆ ಏನು? ಅದಕ್ಕೆ ನಮ್ಮವರು ಅಲ್ಲಿ ಹೋಗಿ, ಗಂಗೆಯ ನೀರನ್ನು ಬಾಟಲಿಯಲ್ಲಿ ತುಂಬಿಸಿ, ಕೆಡಬಾರದು ಎಂದು ಒಂದಿಷ್ಟು ಕೆಮಿಕಲ್ ಸೇರಿಸಿ, ಮುಚ್ಚಳವನ್ನು ಸೀಲ್ ಮಾಡಿ ಇಲ್ಲಿ ತಂದು ನಮ್ಮವರಿಗೆ ಕೊಡುತ್ತಿದ್ದಾರೆ.’

‘ಹಾಗಾದರೆ ಇದಕ್ಕೆಲ್ಲ ಬೇರೆ ಬೇರೆ ಬಣ್ಣ ಯಾಕೆಂದರೆ, ಕಣ್ಣಿಗೆ ರಮ್ಯವಾಗಿರಲಿ ಅಂತ. ಹಾಗೆ ಬಣ್ಣ ಹಾಕುವಾಗ ಬಣ್ಣ ಹೆಚ್ಚಾದರೆ ಅದನ್ನು ರಮ್ ಅನ್ನುತ್ತಾರೆ. ಬಣ್ಣ ಸ್ವಲ್ಪ ಕಡಿಮೆಯಾದರೆ ಅದನ್ನು ಬ್ರಾಂಡಿ ಅನ್ನುತ್ತಾರೆ. ಬಣ್ಣ ಇನ್ನೂ ಕಡಿಮೆಯಾದರೆ ವಿಸ್ಕಿ ಅನ್ನುತ್ತಾರೆ. ಬಣ್ಣ ಪೂರ್ತಿ ಖಾಲಿ ಆದರೆ ಅದನ್ನು ಜಿನ್ ಅನ್ನುತ್ತಾರೆ. ಇದೆಲ್ಲ ಕೆಡದೆ ಇರಲಿ ಅಂತ ಕೊನೆಗೆ ಒಂದಷ್ಟು ಫಿನಾಯಿಲ್ ಸೇರಿಸುತ್ತಾರೆ. ಅಲ್ಲ... ಫಿನೈಲ್ ಅಲ್ಲ, ಯಾವುದೋ ಒಂದು ಸುಡುಗಾಡು ಆಯಿಲ್ ಸೇರಿಸುತ್ತಾರೆ ಬಿಡಿ.’ ಇವೆಲ್ಲ ತಮಾಷೆಗಾಗಿ ಆಡುವ ಮಾತುಗಳು.

ಅದೆಲ್ಲ ಇರಲಿ, ಇದಕ್ಕೂ ಓಲ್ಡ್ ಮೊಂಕ್‌ಗೂ ಏನು ಸಂಬಂಧ? ನಾನು ಮೊದಲ ಬಾರಿ ದೇವದಾಸಿ ನಾಟಕ ನೋಡಿದಾಗ ನಾಜೂಕಯ್ಯನ ಕೈಯಲ್ಲಿದ್ದದ್ದು ಓಲ್ಡ್ ಮೊಂಕ್ ಬಾಟಲಿ. ನಂತರ ಕೆಲವೊಮ್ಮೆ ನಾಜೂಕಯ್ಯ ಬೇರೆ ಬ್ರ್ಯಾಂಡ್‌ನ ಬಾಟಲಿ ಹಿಡಿದು ಬಂದಿದ್ದು ಇದೆಯಾದರೂ, ಅಂದು ನಾಟಕದಲ್ಲಿ ಹಿರಣ್ಣಯ್ಯನವರ ಕೈಯಲ್ಲಿ ಓಲ್ಡ್ ಮೊಂಕ್ ಇವತ್ತಿಗೂ ನನ್ನ ತಲೆಯಲ್ಲಿ ಅಚ್ಚೊತ್ತಿ ಕುಂತಿದೆ.

ಈಗ ಓಲ್ಡ್ ಮೊಂಕ್ ಓಪನ್ ಮಾಡೋಣ. ಅದಕ್ಕೂ ಮೊದಲು ಇತಿಹಾಸದ ಸಣ್ಣ ಪಾಠ. 1855ರ ಹೊತ್ತಿಗೆ, ಬ್ರಿಟಿಷರಿಗೆ ಅಗ್ಗದ ಬಿಯರ್ ಪೂರೈಸಲು ಎಡ್ವರ್ಡ್ ಡೈಯರ್ ಎಂಬ ವ್ಯಕ್ತಿ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಒಂದು ಬ್ರೂವರಿ (ಬಿಯರ್ ತಯಾರಿಸುವ ಘಟಕ) ಸ್ಥಾಪಿಸಿದರು. ಇದು ಕಾಲಕ್ರಮೇಣ ಕೈ ಬದಲಾಯಿಸಿ, ಅಂತಿಮವಾಗಿ ‘ಮೋಹನ್ ಮೀಕಿನ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಿನ ಡಿಸ್ಟಿಲರಿ (ಮದ್ಯ ತಯಾರಿಕಾ ಘಟಕ) ಯಾಗಿ ಮಾರ್ಪಟ್ಟಿತು. ಓಲ್ಡ್ ಮೊಂಕ್ ಬಾಟಲಿಯ ಮುಚ್ಚಳ ಮೊದಲು ಓಪನ್ ಆದದ್ದು 1954ರ ಡಿಸೆಂಬರ್ ತಿಂಗಳಿನಲ್ಲಿ.

ಪರ್ವತ ಪ್ರದೇಶಗಳಲ್ಲಿ ತೃಪ್ತಿಕರವಾದ ಜೀವನ ನಡೆಸುತ್ತಿದ್ದ ಸನ್ಯಾಸಿಗಳ ಶಾಂತಿಯುತ ಜೀವನಶೈಲಿ ಮತ್ತು ಅವರು ತಯಾರಿಸುತ್ತಿದ್ದ ಪಾನೀಯಗಳಿಂದ ಪ್ರೇರೇಪಿತರಾದ ಕರ್ನಲ್ ವೇದ್ ರತನ್ ಮೋಹನ್ ಅವರು ಈ ಪಾನೀಯಕ್ಕೆ ‘ಓಲ್ಡ್ ಮೊಂಕ್’ ಎಂದು ಹೆಸರಿಟ್ಟರು. ಭಾರತೀಯ ಸೇನೆಯಲ್ಲಿ ‘ಓಲ್ಡ್ ಮೊಂಕ್’ ಬಹು ಬೇಗ ಜನಪ್ರಿಯತೆಯನ್ನು ಗಳಿಸಿತು.‌

ಇದು ಅಷ್ಟಕ್ಕೇ ನಿಲ್ಲದೆ, ವಿಶ್ವದ ಪ್ರಮುಖ ರಮ್‌ಗಳಲ್ಲಿ ಒಂದಾಯಿತು. ಸಾಮಾನ್ಯ ಜನರಿಗೂ ಕೈ ಗೆಟುಕುವ ಬೆಲೆ, ಕಣ್ಣಿಗೆ ಹೊಸತನ್ನು ತೋರಿಸುವ ಬಾಟಲಿಯ ವಿನ್ಯಾಸ, ಮೂಗಿಗೆ ಮುದ ನೀಡುವ ವೆನಿಲಾ ಮತ್ತು ಕೆರಮೆಲ್ ಪರಿಮಳದಿಂದಾಗಿ ಭಾರತದಲ್ಲಂತೂ ಮೊದಲ ಸ್ಥಾನಕ್ಕೇರಿತು, ವಿಶ್ವದ ರಮ್ ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದವರೆಗೂ ಹೋಗಿ ತಲುಪಿತು. ಬಹುಶಃ ಭಾರತದ ಯಾವುದೇ ಮದ್ಯವೂ ವಿದೇಶದಲ್ಲಿ ಇದರಷ್ಟು ಹೆಸರು ಮಾಡಿರ‌ ಲಿಕ್ಕಿಲ್ಲ.

ಒಂದು ಉತ್ಪನ್ನ ಮಾರುಕಟ್ಟೆಯಲ್ಲಿ ಸದ್ದು ಮಾಡಬೇಕಾದರೆ ಜಾಹೀರಾತು ಅತ್ಯವಶ್ಯ ಎಂದು ಜಗತ್ತೇ ನಂಬಿರುವ ಈ ಕಾಲದಲ್ಲೂ ಯಾವುದೇ ಜಾಹೀರಾತು ನೀಡದೆಯೇ ಓಲ್ಡ್ ಮೊಂಕ್ ಈ ಸ್ಥಾನಕ್ಕೆ ಏರಿದೆ, ಇಷ್ಟು ಜನಪ್ರಿಯವಾಗಿದೆ ಎನ್ನುವುದು, ಸೋಜಿಗವಾದರೂ ಸತ್ಯ. ಓಲ್ಡ್ ಮೊಂಕ್ ಬರೀ ಬಾಯಿ ಮಾತಿನಿಂದಲೇ ಪ್ರಸಿದ್ಧವಾಯಿತು. ಓಲ್ಡ್ ಮೊಂಕ್ ಚಪ್ಪರಿಸಿದ ನಾಲಿಗೆಯೇ ಅದರ ಪ್ರಚಾರ ಮಾಡಿತು. ಅದಕ್ಕಿಂತ ದೊಡ್ಡ ಪ್ರಚಾರದ ಸಾಧನ ಬೇಕೇ?

ಯಾವುದೇ ಜಾಹೀರಾತು ನೀಡದಿದ್ದರೂ, ಓಲ್ಡ್ ಮೊಂಕ್ ಕುರಿತಾದ ಜನಪ್ರಿಯ ಮಾತೊಂದಿದೆ, ‘ನನ್ನ ಸುತ್ತಲೂ ಬೀಸುವ ಗಾಳಿಯಲ್ಲಿ ಬಹಳ ಪ್ರೀತಿ ಇದೆ. ಆದರೆ ಆ ಗಾಳಿಯಿಂದ ನನಗೆ ಶೀತವಾಗುತ್ತದೆ. ಆದರೂ ನನಗೆ ಶೀತದ ಭಯವಿಲ್ಲ, ಏಕೆಂದರೆ ನನ್ನ ರಕ್ಷಣೆಗೆ ಓಲ್ಡ್ ಮೊಂಕ್ ಇದೆ.’ ಹಾಗೆಯೇ ಇನ್ನೊಂದು, ‘ನೀವು ಓಲ್ಡ್ ಮೊಂಕ್ ಕುಡಿಯಿರಿ, ಕುಡಿದು ತೂರಾಡಿ ನಡೆಯುವಾಗ ನೀವು ಬಿದ್ದು ಗಾಯ ಮಾಡಿಕೊಂಡರೆ ಗಾಬರಿ ಪಡಬೇಡಿ. ಗಾಯವಾದ ಜಾಗಕ್ಕೆ ಓಲ್ಡ್ ಮೊಂಕ್ ರಮ್ ಸವರಿ. ನೀವು ಮತ್ತೆ ನಡೆಯಲು (ಕುಡಿಯಲು!?) ಸಿದ್ಧರಾಗುತ್ತೀರಿ.’

ಇಂತಹ ಓಲ್ಡ್ ಮೊಂಕ್ ಮೇಲೆ ಇದ್ದಕ್ಕಿದ್ದಂತೆ ನಿರ್ಬಂಧ ಹೇರಲು ಕಾರಣ ಏನು? ಒಂದು ತಿಳಿದಿರಲಿ, ಈ ನಿರ್ಬಂಧ ಓಲ್ಡ್ ಮೊಂಕ್‌ನ ಎಲ್ಲ ಉತ್ಪನ್ನಗಳ ಮೇಲೆ ಅಲ್ಲ. ಕೆಲವು ಆಯ್ದ ರಮ್ ಉತ್ಪನ್ನಗಳ ಮೇಲೆ ಮಾತ್ರ. (ಸಂಸ್ಥೆ ರಮ್ ಹೊರತಾಗಿ ಇನ್ನೂ ಕೆಲವು ಪೇಯ ತಯಾರಿಸುತ್ತದೆ). ಕಂಪನಿಯ ಮೇಲಿರುವ ಆಪಾದನೆ ಏನೆಂದರೆ, ನೈಸರ್ಗಿಕವಾಗಿ ಬರುವ ಪರಿಮಳದ ಬದಲು ಕೃತಕ ಪರಿಮಳ ಪದಾರ್ಥವನ್ನು ಬಳಸಲಾಗುತ್ತಿದೆ ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ.

ಹಾಗಿರುವಾಗ, ‘ಏಳು ವರ್ಷ ಹಳೆಯ ಮದ್ಯ’ ಎಂಬ ಹೇಳಿಕೆ ಗ್ರಾಹಕರ ದಾರಿ ತಪ್ಪಿಸುತ್ತದೆ ಎನ್ನು ವುದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರದ ವಾದ. ಅದಕ್ಕೆ ಈಗ ಮೋಹನ್ ಮೀಕಿನ್ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿದೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು. ಒಟ್ಟಿನಲ್ಲಿ ಓಲ್ಡ್ ಮೊಂಕ್ ಪ್ರಿಯರಿಗೆ ಭಗ್ನಪ್ರೇಮದ ಕಾಲ!

ಈಗ ಅನಿಸುವುದು, ಹಿರಣ್ಣಯ್ಯನವರು ಅಂದು ನಾಟಕದಲ್ಲಿ ಎಣ್ಣೆಯ ಬಣ್ಣದ ಕುರಿತಾಗಿ ಹೇಳಿದ ತಮಾಷೆಯ ಮಾತುಗಳು ಸತ್ಯವಾಯಿತೇ? ಅದೇನೇ ಆದರೂ, ಮತ್ತೊಮ್ಮೆ ಹೇಳುತ್ತೇನೆ, ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author