ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಆಧುನಿಕತೆಯ ಸಂತೆಯಲ್ಲಿ ಹಸಿರಿನ ಸಂತ

ಕುಟುಂಬದ ಜಮೀನಿನಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಒಡನಾಟ ಬಾಲ್ಯದಲ್ಲಿ ಆಳವಾದ ಪ್ರಭಾವ ಬೀರಿತು. ಯೌವನದ ಆರಂಭದ ವರ್ಷಗಳಲ್ಲಿ ಅವರ ಬದುಕು ಸಾಕಷ್ಟು ನಗರಕೇಂದ್ರಿತ ಹಾಗೂ ಜಗತ್ತನ್ನು ಸುತ್ತಿದ ಅನುಭವಗಳಿಂದ ಕೂಡಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಕೆಂಟಕಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅವರು, ನಂತರ ಸ್ಟ್ಯಾನ್ʼ ಫೋರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಪ್ರಸಿದ್ಧ ಕಾದಂಬರಿಕಾರ ವಾಲೆಸ್ ಸ್ಟೆಗ್ನರ್ ಮಾರ್ಗದರ್ಶನ ದಲ್ಲಿ ಅಧ್ಯಯನ ಮಾಡಿದರು.

ಕಾಡುದಾರಿ

ಮೊನ್ನೆ ಮೊನ್ನೆ (ಆ.31) ಅಮೆರಿಕದಲ್ಲಿದ್ದ ವೆಂಡೆಲ್ ಬೆರ್ರಿ ಎಂಬ ಹಿರಿಯನೊಬ್ಬ ತೀರಿಕೊಂಡ. ನ್ಯೂಯಾರ್ಕ್ ಟೈಮ್ಸ್‌ನಂಥ ಕೆಲವೇ ಪತ್ರಿಕೆಗಳಲ್ಲಿ ಅದು ಸುದ್ದಿಯಾಯಿತು. ಭಾರತದಲ್ಲಿ ಯಾರೂ ಆ ಸುದ್ದಿಯನ್ನು, ಆತನ ಬಾಳುವೆಯ ಮೌಲ್ಯವನ್ನು ಗ್ರಹಿಸಿದಂತೆ ಕಾಣೆ. 92 ವರ್ಷಗಳ ತುಂಬು ಬದುಕನ್ನು ಹಸಿರಿನ ಹಂಬಲದಲ್ಲಿ ಬದುಕಿದ ಇವನು ಕವಿ, ಕಾದಂಬರಿಕಾರ, ಕೃಷಿಕ, ಸಹಜ ಕೃಷಿಯ ಚಿಂತಕ, ಚಳವಳಿಗಾರ ಎಲ್ಲವೂ ಆಗಿದ್ದ. ಜಪಾನಿನ ಮಸನುಬು ಫುಕುವೋಕಾನನ್ನು ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದಲ್ಲಿ ತರದೇ ಹೋಗಿದ್ದರೆ ನಾವ್ಯಾರೂ ಆತನ ಬಗ್ಗೆ ತಿಳಿಯು ತ್ತಿರಲಿಲ್ಲ. ಹಾಗೇ ಈತನ ಬಗೆಗೂ ಕನ್ನಡದಲ್ಲಿ ಯಾರಾದರೂ ಬರೆಯಬೇಕಿದೆ.

ನಮ್ಮ ನಾರಾಯಣ ರೆಡ್ಡಿ ಮೊದಲಾದವರಂತೆ ಇವನು. ಅಮೆರಿಕವೆಂಬ ಜಗಮಗಿಸುವ ಸಂತೆಯ ನಡುವೆ ಹಸಿರಿನ ಸಂತನಂತಿದ್ದವನು ಈತ. ‘ದಿ ಪೀಸ್ ಆಫ್ ವೈಲ್ಡ್ ಥಿಂಗ್ಸ್’ ಎಂಬ, ಪ್ರಸಿದ್ಧವಾದ ಅವನ ಕವಿತೆಯ ಭಾವಾನುವಾದ ನೋಡಿ: ‘ಜಗತ್ತಿನ ಬಗ್ಗೆ ನನ್ನೊಳಗೆ ನಿರಾಶೆ ಹೆಚ್ಚಾದಾಗ, ನನ್ನ ಬದುಕಿಗೂ, ನನ್ನ ಮಕ್ಕಳ ಬದುಕಿಗೂ ಏನಾಗಬಹುದೋ ಎಂಬ ಭಯದಿಂದ ಸಣ್ಣದೊಂದು ಸದ್ದಿಗೂ ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ, ನೀರಿನ ಮೇಲೆ ತನ್ನ ಸೌಂದರ್ಯದೊಂದಿಗೆ ವಿಶ್ರಮಿ ಸುತ್ತಿರುವ ಬಾತುಕೋಳಿಯ ಬಳಿಯೂ, ಆಹಾರ ಹುಡುಕುತ್ತಿರುವ ದೊಡ್ಡ ಕೊಕ್ಕರೆಯ ಬಳಿಯೂ ನಾನು ಹೋಗಿ ಮಲಗುತ್ತೇನೆ. ‌

ಮುಂದೆ ಏನಾಗಬಹುದು, ಯಾವ ದುಃಖ ಎದುರಾಗಬಹುದು ಎಂಬ ಚಿಂತೆಯಿಂದ ತಮ್ಮ ಬದುಕನ್ನು ಭಾರವಾಗಿಸಿಕೊಳ್ಳದ ಆ ಕಾಡಿನ ಜೀವಿಗಳ ಶಾಂತಿಯೊಳಗೆ ನಾನು ಪ್ರವೇಶಿಸುತ್ತೇನೆ. ನಿಶ್ಚಲವಾಗಿ ನಿಂತಿರುವ ನೀರಿನ ಸಾನ್ನಿಧ್ಯಕ್ಕೆ ಬರುತ್ತೇನೆ. ನನ್ನ ಮೇಲೆ ಆಕಾಶದಲ್ಲಿ, ಹಗಲಿನ ಬೆಳಕಿಗೆ ಕಾಣಿಸದ ನಕ್ಷತ್ರಗಳು, ತಮ್ಮ ಬೆಳಕು ಹಂಚಲು ಕಾದಿರುವುದನ್ನು ಅನುಭವಿಸುತ್ತೇನೆ. ಸ್ವಲ್ಪ ಹೊತ್ತು, ಈ ಜಗತ್ತಿನ ಕೃಪೆಯ ಮಡಿಲಲ್ಲಿ ವಿಶ್ರಮಿಸುತ್ತೇನೆ. ಆ ಕ್ಷಣದಲ್ಲಿ ನಾನು ಮುಕ್ತನಾಗಿರು ತ್ತೇನೆ.’ ಬೆರ್ರಿ ಅವರ ಬರಹಗಳು ಹೀಗೆ ಪ್ರಕೃತಿಯ ನಡುವೆ ಸಿಗಬಹುದಾದ ಒಂದು ಅವರ್ಣನೀಯ ಶಾಂತಿಯ ಬಗ್ಗೆ ಮಾತಾಡುತ್ತವೆ.

71_R

ಇಂಥ ಶಾಂತಿ ಮತ್ತು ಸಮಾಧಾನದಿಂದ ಮನುಷ್ಯ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಯಾಕೆ ಅವನು ವೇಗದ ಹಿಂದೆ, ನಿಸರ್ಗದಿಂದ ಧೂಳೀಪಟ ಮಾಡಿ ಅದರಿಂದ ದೊರೆಯುವ ಹಣ ಕೀರ್ತಿಗಳ ಹಿಂದೆ ಬಿದ್ದಿದ್ದಾನೆ ಎಂಬುದು ಅವರ ಮೂಲಭೂತ ಕಾಳಜಿಯ ಪ್ರಶ್ನೆ. ಆ ನಿಟ್ಟಿನಲ್ಲಿ ಅವರು ಹೆನ್ರಿ ಡೇವೀಡ್ ಥೋರೋ ಮೊದಲಾದ ನ್ಯಾಚುರಲಿಸ್ಟ್ ಸಾಹಿತಿಗಳ ಗುಂಪಿಗೆ ಸೇರಿದವರು. ಬೆರ್ರಿಯವರ ಬರಹವನ್ನು ಅವರು ಬದುಕಿದ ರೈತ ಜೀವನದಿಂದ ಪ್ರತ್ಯೇಕಿಸಿ ನೋಡುವುದು ಕಷ್ಟ. ಅವರು ತಮ್ಮ ಪೂರ್ವಜರು ಹಲವು ತಲೆಮಾರುಗಳಿಂದ ವಾಸಿಸುತ್ತ ಉಳುಮೆ ಮಾಡುತ್ತಿದ್ದ ಭೂಮಿಯಲ್ಲೇ ಅತ್ಯಂತ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ದುಡಿಯುತ್ತಾ ಬದುಕಿ ಬಾಳಿದವರು.

ಟ್ರ್ಯಾಕ್ಟರ್‌ಗಳು, ಯಾಂತ್ರಿಕ ಕೊಯ್ಲು ಯಂತ್ರಗಳ ಬದಲು ಎತ್ತುಗಳನ್ನು ಬಳಸಿಕೊಂಡು, ತಮ್ಮ ಕೈಕೆಲಸ ದಿಂದಲೇ ಭೂಮಿಯನ್ನು ಉಳುಮೆ ಮಾಡುತ್ತಿದ್ದರು. ಅವರ ಬದುಕಿನಂತೆಯೇ ಅವರ ಆಲೋಚನೆಗಳು. 1934ರಲ್ಲಿ ಕೆಂಟಕಿಯ ಹೆನ್ರಿ ಕೌಂಟಿಯಲ್ಲಿ ಜನಿಸಿದ ಬೆರ್ರಿ, ಅಲ್ಲಿನ ಪ್ರಸಿದ್ಧ ವಕೀಲ ಮತ್ತು ರೈತನ ಮಗ. ಬಾಲ್ಯದ ಬಹುಪಾಲು ಸಮಯವನ್ನು ಅವರು ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡಿದ್ದ ಹಿಂದಿನ ತಲೆಮಾರಿನ ಜನರ ಜೊತೆ ಕಳೆದರು. ಅವರ ಅಜ್ಜ ಭೂ ಮಾಲೀಕ.

ಇದನ್ನೂ ಓದಿ: Harish Kera Column: ನಮ್ಮ ಪಾಪಕ್ಕೆ ಅವರೇಕೆ ಬಲಿಯಾಗಬೇಕು?

ಕುಟುಂಬದ ಜಮೀನಿನಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಒಡನಾಟ ಬಾಲ್ಯದಲ್ಲಿ ಆಳವಾದ ಪ್ರಭಾವ ಬೀರಿತು. ಯೌವನದ ಆರಂಭದ ವರ್ಷಗಳಲ್ಲಿ ಅವರ ಬದುಕು ಸಾಕಷ್ಟು ನಗರಕೇಂದ್ರಿತ ಹಾಗೂ ಜಗತ್ತನ್ನು ಸುತ್ತಿದ ಅನುಭವಗಳಿಂದ ಕೂಡಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಬದುಕು ಕಟ್ಟಿ ಕೊಳ್ಳುವ ಆಸೆಯಿಂದ ಕೆಂಟಕಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅವರು, ನಂತರ ಸ್ಟ್ಯಾನ್ʼ ಫೋರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಪ್ರಸಿದ್ಧ ಕಾದಂಬರಿಕಾರ ವಾಲೆಸ್ ಸ್ಟೆಗ್ನರ್ ಮಾರ್ಗದರ್ಶನ ದಲ್ಲಿ ಅಧ್ಯಯನ ಮಾಡಿದರು.

ಬಳಿಕ ನ್ಯೂಯಾರ್ಕ್‌ನಲ್ಲಿ ಬೋಧಕರಾಗಿ ಕೆಲಸ ಮಾಡಿದರು. ಆದರೆ 30ಕ್ಕೆ ಕಾಲಿಡುತ್ತಿದ್ದಂತೆ ಮತ್ತೆ ಕೆಂಟಕಿಗೆ ಮರಳಿದರು. 1965ರಲ್ಲಿ ಕೆಂಟಕಿ ನದಿಯ ತೀರದಲ್ಲಿರುವ ಲೇ ಲ್ಯಾಂಡಿಂಗ್‌ನಲ್ಲಿ ತಮ್ಮದೇ ಕೃಷಿಭೂಮಿ ಸ್ಥಾಪಿಸಿದರು. ನೆಲದೊಂದಿಗೆ ಆಳವಾಗಿ ಬೆಸೆದುಕೊಂಡು ‘ರೈತ ಲೇಖಕ’ ಎನಿಸಿ ಕೊಂಡು, ಸ್ಥಳೀಯ ಬದುಕಿನ ಬೇರುಬಿಟ್ಟು ಅದೇ ಕಾರಣಕ್ಕೆ ದೇಶಾದ್ಯಂತ ಪ್ರಸಿದ್ಧರಾದರು.

ಸ್ಥಳೀಯ ಬದುಕನ್ನು ಜಗತ್ತಿನ ಮಟ್ಟಿಗೆ ಪರಿಚಯಿಸಿದ ವ್ಯಕ್ತಿಯಾಗಿ ಗುರುತಿಸಿಕೊಂಡರು. ಸ್ವಲ್ಪ ಮಟ್ಟಿಗೆ ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಹಾಗೆ ಅನ್ನಬಹುದು. ಪ್ರಕೃತಿ- ಮನುಷ್ಯನನ್ನು ಬೆಸೆದ ಕಾಲಾತೀತ eನ ಹೊಂದಿದ ಹಿರಿಯ ಚಿಂತಕನೆಂದು ಅವರ ಚಿತ್ರಣ ರೂಪುಗೊಂಡಿತು. ತಮ್ಮ ನಂಬಿಕೆಗಳ ಪರವಾಗಿ ತೀವ್ರವಾಗಿ ಹೋರಾಡುವುದಕ್ಕೂ ಹಿಂಜರಿಯಲಿಲ್ಲ. ವಿಯೆಟ್ನಾಂ ಯುದ್ಧದ ವಿರುದ್ಧದ ಹೋರಾಟ ದಲ್ಲೂ, ತಮ್ಮ ಪ್ರದೇಶದ ಮೇಲೆ ಹೆಚ್ಚುತ್ತಿರುವ ಕಲ್ಲಿದ್ದಲು ಉದ್ಯಮದ ವಿರುದ್ಧದ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದರು.

ವೆಂಡೆಲ್ ಬೆರ್ರಿಯ ಅತ್ಯಂತ ಪ್ರಭಾವಶಾಲಿ ಕೃತಿಗಳಲ್ಲಿ ಒಂದು ‘ದಿ ಅನ್‌ಸೆಟ್ಲಿಂಗ್ ಆಫ್ ಅಮೆರಿಕಾ’ 1977ರಲ್ಲಿ ಪ್ರಕಟವಾಯಿತು. ಈ ಕೃತಿಯಲ್ಲಿ ಅಮೆರಿಕದ ಜೀವನ ಪದ್ಧತಿಯನ್ನು ಕಟುವಾಗಿ ವಿಮರ್ಶಿಸಿ‌ದರು. ಜನ ಹೇಗೆ ಬದುಕುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ, ಅವರು ತಮ್ಮ ಆಹಾರವನ್ನು ಹೇಗೆ, ಎಲ್ಲಿಂದ ಪಡೆಯುತ್ತಾರೆ ಎಂಬುದನ್ನು ತಿಳಿಯಬೇಕು. ಇದು ಭೂಮಿಯಿಂದ ಹಿಡಿದು ನಮ್ಮ ದೇಹದವರೆಗೆ ಎಲ್ಲವನ್ನೂ ರೂಪಿಸುತ್ತದೆ.

ಭೂಮಿ ನಮ್ಮ ದೇಹವಾಗಿ ಪರಿವರ್ತನೆಯಾಗುವ ತಾಣವೇ ಇದು. ಹಾಗೆಯೇ ನಮ್ಮ ದೇಹವೂ ಮತ್ತೆ ಭೂಮಿಯ ಭಾಗವಾಗುವ ಪ್ರಕ್ರಿಯೆಯೂ ಇಲ್ಲಿಯೇ ನಡೆಯುತ್ತದೆ. ಈ ಮಾನದಂಡದಿಂದ ನೋಡಿದರೆ, ಅಮೆರಿಕದ ಕೃಷಿ ವ್ಯವಸ್ಥೆ ಒಂದು ದೊಡ್ಡ ದುರಂತವಾಗಿ ಪರಿಣಮಿಸಿದೆ. ಅಮೆರಿಕದ ಕೃಷಿ ಕ್ರಮೇಣ ಕಾರ್ಖಾನೆ ಉತ್ಪಾದನೆ ಮತ್ತು ಗಣಿಗಾರಿಕೆಯ ಮಿಶ್ರಣವಾಗಿದೆ. ಮಣ್ಣಿನಲ್ಲಿರುವ ನೈಸರ್ಗಿಕ ಸಾವಯವ -ಲವತ್ತತೆಯನ್ನು ಹೀರಿಕೊಂಡು ಖಾಲಿ ಮಾಡುತ್ತಿದೆ. ನಂತರ ಅದರ ಜಾಗವನ್ನು ಕೃತಕ ರಾಸಾಯನಿಕ ಗೊಬ್ಬರಗಳಿಂದ ತುಂಬಲಾಗುತ್ತದೆ. ಇದರ ತ್ಯಾಜ್ಯವೂ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.

ಕೈಗಾರಿಕೆಯಂತೆ ಭಾರಿ ಪ್ರಮಾಣದಲ್ಲಿ ಸಾಕುವ ಪ್ರಾಣಿಗಳ ತ್ಯಾಜ್ಯ ಹಾಗೂ ಜೋಳ ಮತ್ತು ಸೋಯಾಬೀನ್‌ನಂಥ ಒಂದೇ ರೀತಿಯ ಬೆಳೆಯ ಫಾರಂಗಳಿಂದ ಹರಿದುಬರುವ ರಾಸಾಯನಿಕ ಗೊಬ್ಬರಗಳು ಜಲಮೂಲ, ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ. ಕೃಷಿಭೂಮಿಯನ್ನು ಫ್ಯಾಕ್ಟರಿಗಳಾಗಿ ಪರಿವರ್ತಿಸಿದಾಗ, ಇತರ ಕಾರ್ಖಾನೆಗಳಂತೆಯೇ ಅವೂ ಭೂ ಹವಾಮಾನಕ್ಕೆ ಮಾರಕ ಆಗುತ್ತವೆ ಎನ್ನುತ್ತಾರೆ.

ಕೃಷಿ ಕೇವಲ ಆಹಾರ ಉತ್ಪಾದನೆಯ ವ್ಯವಸ್ಥೆಯಲ್ಲ. ನಾವು ಭೂಮಿಯೊಂದಿಗೆ ಹೇಗೆ ಬದುಕುತ್ತೇವೆ, ನಮ್ಮ ದೇಹವನ್ನು ಹೇಗೆ ಪೋಷಿಸುತ್ತೇವೆ ಮತ್ತು ಮುಂದಿನ ಪೀಳಿಗೆಗೆ ಯಾವ ರೀತಿಯ ಜಗತ್ತನ್ನು ಉಳಿಸುತ್ತೇವೆ ಎಂಬುದನ್ನು ನಿರ್ಧರಿಸುವ ಮೂಲ ವ್ಯವಸ್ಥೆ ಎಂಬುದು ಬೆರ್ರಿಯ ಮಾತು. ‘ಪ್ರಶ್ನೆಗಳು’ ಎಂಬ ಕವನದಲ್ಲಿ ಅವರು ಕೇಳುವುದು ಹೀಗೆ- ‘ಮುಕ್ತ ಮಾರುಕಟ್ಟೆ ಮತ್ತು ಜಾಗತಿಕ ವ್ಯಾಪಾರದ ಯಶಸ್ಸಿಗಾಗಿ ನೀವು ಎಷ್ಟು ವಿಷವನ್ನು ಸೇವಿಸಲು ಸಿದ್ಧರಿದ್ದೀರಿ? ನಿಮಗೆ ಇಷ್ಟವಾದ ವಿಷಗಳ ಹೆಸರನ್ನು ದಯವಿಟ್ಟು ಬರೆಯಿರಿ.

ಒಳ್ಳೆಯತನಕ್ಕಾಗಿ, ನೀವು ಎಷ್ಟು ಕೆಟ್ಟ ಕೆಲಸ ಮಾಡಲು ಸಿದ್ಧರಿದ್ದೀರಿ? ಕೆಳಗಿನ ಖಾಲಿ ಜಾಗಗಳಲ್ಲಿ ನಿಮಗೆ ಅತ್ಯಂತ ಇಷ್ಟವಾದ ಕೆಡುಕುಗಳು ಮತ್ತು ದ್ವೇಷದ ಕೃತ್ಯಗಳ ಹೆಸರನ್ನು ತುಂಬಿರಿ. ಸಂಸ್ಕೃತಿ ಮತ್ತು ನಾಗರಿಕತೆಯ ಹೆಸರಿನಲ್ಲಿ ನೀವು ಯಾವ ತ್ಯಾಗಗಳನ್ನು ಮಾಡಲು ಸಿದ್ಧರಿದ್ದೀರಿ? ನೀವು ಅತ್ಯಂತ ಸುಲಭವಾಗಿ ನಾಶಪಡಿಸಲು ಸಿದ್ಧರಾಗಿರುವ ಸ್ಮಾರಕಗಳು, ಪುಣ್ಯಕ್ಷೇತ್ರಗಳು ಮತ್ತು ಕಲಾಕೃತಿಗಳ ಪಟ್ಟಿಯನ್ನು ನೀಡಿ.

ದೇಶಪ್ರೇಮ ಮತ್ತು ಧ್ವಜದ ಹೆಸರಿನಲ್ಲಿ ನಮ್ಮ ಪ್ರೀತಿಯ ಭೂಮಿಯಲ್ಲಿ ಎಷ್ಟು ಭಾಗವನ್ನು ನೀವು ಅಪವಿತ್ರಗೊಳಿಸಲು ಸಿದ್ಧರಿದ್ದೀರಿ? ನೀವು ಸುಲಭವಾಗಿ ತ್ಯಜಿಸಬಹುದಾದ ಪರ್ವತಗಳು, ನದಿಗಳು, ಪಟ್ಟಣಗಳು ಮತ್ತು ಕೃಷಿಭೂಮಿಗಳ ಹೆಸರನ್ನು ಕೆಳಗಿನ ಜಾಗಗಳಲ್ಲಿ ಬರೆಯಿರಿ. ಯಾವ ವಿಚಾರ ಗಳು, ಆದರ್ಶಗಳು ಅಥವಾ ಆಶಯಗಳಿಗಾಗಿ, ಯಾವ ಇಂಧನ ಮೂಲಗಳಿಗಾಗಿ, ಯಾವ ರೀತಿಯ ಭದ್ರತೆಗಾಗಿ ನೀವು ಒಂದು ಮಗುವನ್ನು ಕೊಲ್ಲಲು ಸಿದ್ಧರಾಗಿದ್ದೀರಿ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿ. ನೀವು ಕೊಲ್ಲಲು ಸಿದ್ಧರಾಗಿರುವ ಆ ಮಕ್ಕಳ ಹೆಸರನ್ನೂ ದಯವಿಟ್ಟು ಬರೆಯಿರಿ.’

ಒಂದು ಪ್ರಶ್ನೆಪತ್ರಿಕೆಯಂತೆ ಆರಂಭವಾಗುವ ಈ ಕವನ ತನ್ನ ಅನಿರೀಕ್ಷಿತ ದುರ್ಭರ ಅಂತ್ಯ ದೊಂದಿಗೆ ನಮ್ಮನ್ನು ತಲ್ಲಣಿಸುವಂತೆ ಮಾಡುತ್ತದೆ. ಬೆರ್ರಿಗೆ ಅಮೆರಿಕದ ಆಧುನಿಕತೆಯ ಶೈಲಿ, ಅದು ಸಾಗುತ್ತಿರುವ ವೇಗದ ಬಗ್ಗೆ ಆತಂಕವಿತ್ತು. ಪ್ರಕೃತಿಯನ್ನು ನೆಚ್ಚಿಕೊಂಡ ಅವನ ಕಾವ್ಯ ಹಾಗೂ ಪ್ರಬಂಧಗಳಲ್ಲಿ ಅಲ್ಲಿನ ಕೊಳ್ಳುಬಾಕತನ, ನಿಸರ್ಗಕ್ಕೆ ಮುಖ ತಿರುಗಿಸಿದ ಜೀವನಶೈಲಿಯ ಬಗ್ಗೆ ಹೇವರಿಕೆಯಿತ್ತು. ಈ ಜೀವನಶೈಲಿ ಇಡೀ ಜಗತ್ತಿಗೆ ವ್ಯಾಪಿಸುತ್ತಿರುವುದರ ಕುರಿತ ಅರಿವೂ ಇತ್ತು.

ಕೆಲವೊಮ್ಮೆ ಅವನು ಪ್ರವಾದಿಯಂತೆ, ನೀತಿಬೋಧಕನಂತೆ ಮಾತನಾಡುತ್ತಿದ್ದ. ಆದರೆ ಅವನು ಮನೆಯೊಂದು ಛಿದ್ರವಾಗುತ್ತಿರುವುದನ್ನು ಕಳವಳದಿಂದ ನೋಡುತ್ತಿರುವ ಹಿರಿಯನಂತಿದ್ದ. ಒಂದರ್ಥ ದಲ್ಲಿ ಅವನು ಧಾರ್ಮಿಕ, ಸಾಂಪ್ರದಾಯಿಕನೂ ಆಗಿದ್ದ. ಅಬಾರ್ಷನ್ ವಿರುದ್ಧ ನಿಲುವು ತೆಗೆದುಕೊಂಡು ಟೀಕೆಗೂ ಒಳಗಾಗಿದ್ದ. ಬರಬರುತ್ತ ನಾವು ಕಣ್ಣಿಗೆ ಕಾಣಲಾಗದ ಕರಾಳ ವ್ಯವಸ್ಥೆ ಯೊಂದರ ಕೈಯಲ್ಲಿ ಸಿಲುಕುತ್ತಿರುವುದನ್ನು ಅವನು ಕಂಡಿದ್ದ.

‘ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬರ ಮನಸ್ಸಿನ ನಿಯಂತ್ರಣಕ್ಕೆ, ಅಥವಾ ದೇಹವಿಲ್ಲದ, ಅಮೂರ್ತವಾದ ಯಾವುದೋ ವ್ಯವಸ್ಥೆಯ ಪ್ರಭಾವಕ್ಕೆ ಒಳಗಾಗಿರುವ ಸಮಾಜದಲ್ಲಿ, ಸರಕಾರಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಏನು ಮಾಡುತ್ತಿವೆ ಎಂಬ ಸತ್ಯವನ್ನು ತಿಳಿದುಕೊಳ್ಳುವುದು ಕ್ರಮೇಣ ಕಷ್ಟವಾಗುತ್ತದೆ. ಉತ್ಪನ್ನಗಳ ನಿಜವಾದ ಗುಣಮಟ್ಟ ಮತ್ತು ಮೌಲ್ಯದ ಬಗ್ಗೆ ತಿಳಿದು ಕೊಳ್ಳುವುದೂ, ನಾವು ವಾಸಿಸುವ ಸ್ಥಳದ ಆರೋಗ್ಯ ಮತ್ತು ನಮ್ಮದೇ ಆರ್ಥಿಕತೆಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದೂ ಕಷ್ಟವಾಗುತ್ತದೆ. ಅಂತಹ ಸಮಾಜದಲ್ಲಿ ನಮ್ಮ ವೈಯಕ್ತಿಕ ಆರ್ಥಿಕ ಜೀವನವೂ ಕ್ರಮೇಣ ನಿಜವಾದ, ಉಪಯೋಗಕ್ಕೆ ಬರುವ ಆಸ್ತಿಯ ಖಾಸಗಿ ಒಡೆತನದ ಮೇಲೆ ಕಡಿಮೆ ಅವಲಂಬಿತವಾಗುತ್ತದೆ.

ಬದಲಾಗಿ ವ್ಯಕ್ತಿಯ ನಿಯಂತ್ರಣದ ವ್ಯಾಪ್ತಿಯನ್ನು ಮೀರಿರುವ, ಸಂಸ್ಥೆಗಳ ಕೈಯಲ್ಲಿರುವ ಅಮೂರ್ತ ಆಸ್ತಿಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತವಾಗುತ್ತದೆ. ಉದಾಹರಣೆಗೆ ಹಣ, ವಿಮಾ ಪಾಲಿಸಿಗಳು, ಠೇವಣಿ ಪ್ರಮಾಣಪತ್ರಗಳು, ಷೇರುಗಳು ಮತ್ತು ಇತರ ಹಣಕಾಸಿನ ಹಕ್ಕುಗಳು. ನಮ್ಮ ವೈಯಕ್ತಿಕ ಆರ್ಥಿಕತೆ ಎಷ್ಟು ಅಮೂರ್ತವಾಗುತ್ತದೆಯೋ, ಅಷ್ಟೇ ಪ್ರಮಾಣದಲ್ಲಿ ಕುಟುಂಬ ಮತ್ತು ಸಮುದಾಯ ಜೀವನದಲ್ಲಿ ಸಹಜ ವಾಗಿ ದೊರೆಯುತ್ತಿದ್ದ ಪರಸ್ಪರ ಸಹಾಯ, ಸ್ವತಂತ್ರ ಸಹಕಾರ ಮತ್ತು ಸಂತೋಷಗಳು ಕಣ್ಮರೆಯಾಗುತ್ತವೆ. ಅವುಗಳ ಜಾಗವನ್ನು, ಲೋಕಲ್ ಅಲ್ಲದ, ಬೇರು ಗಳಿಲ್ಲದ, ತಮ್ಮ ಸ್ವಾರ್ಥವನ್ನೇ ಮುಖ್ಯವಾಗಿಟ್ಟು ಕೊಳ್ಳುವ ವ್ಯಾಪಾರಿ ಸಂಬಂಧಗಳು ಆಕ್ರಮಿಸಿಕೊಳ್ಳುತ್ತವೆ’ ಎಂದ.

‘ಈಗ ನಾವು ಗುಲಾಮರಲ್ಲ. ನಮ್ಮನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ, ನಮ್ಮ ಸ್ವಾತಂತ್ರ್ಯ ಬಹಳ ಸೀಮಿತವಾದ ಗಡಿಗಳೊಳಗೆ ಮಾತ್ರ ಇದೆ. ನಾವು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಎಷ್ಟೇ ಮಾತನಾಡಿದರೂ, ನಿಜವಾಗಿ ನಾವು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಬಹು ದಾದ ವಿಷಯಗಳು ಬಹಳ ಕಡಿಮೆ.

ಉದಾಹರಣೆಗೆ, ಒಂದು ದೇಶದ ಬಹುಸಂಖ್ಯೆಯ ಜನರು ಸ್ವಯಂ ಉದ್ಯೋಗಿಗಳಾಗಿರ್ತೀವಿ ಅಂತ ನಿರ್ಧರಿಸಿದರೆ ಏನಾಗುತ್ತದೆ? ಆ ಆಯ್ಕೆಯನ್ನು ನಿಜವಾಗಿಯೂ ಅನುಸರಿಸಲು ಸಾಧ್ಯವಾ? ಸ್ವಾತಂತ್ರ್ಯದ ಅತ್ಯಂತ ದೊಡ್ಡ ಶತ್ರು ಎಂದರೆ ರಾಜಕೀಯ ಅಧಿಕಾರ ಮತ್ತು ಸಂಪತ್ತು ಒಂದಕ್ಕೊಂದು ಕೈಜೋಡಿಸು ವುದು. ಈ ಮೈತ್ರಿ ‘ಸಾರ್ವಜನಿಕ ಸಂಪತ್ತನ್ನು’ ನಾಶಪಡಿಸುತ್ತದೆ.

ಅಂದರೆ, ಒಂದು ಪ್ರದೇಶದ ನೈಸರ್ಗಿಕ ಸಂಪತ್ತು, ಮನೆ, ನೆರೆಹೊರೆ ಮತ್ತು ಸಮುದಾಯವನ್ನು ಆಧರಿಸಿದ ಸ್ಥಳೀಯ ಆರ್ಥಿಕ ವ್ಯವಸ್ಥೆಯನ್ನು ಅದು ದುರ್ಬಲಗೊಳಿಸುತ್ತದೆ. ಹೀಗೆ ಸಾಮೂಹಿಕ ಸಂಪತ್ತು ನಾಶವಾದಾಗ, ಅದರ ಅಡಿಪಾಯದ ಮೇಲೆ ನಿಂತಿರುವ ಪ್ರಜಾಪ್ರಭುತ್ವವೂ ದುರ್ಬಲ ಗೊಳ್ಳುತ್ತದೆ’ ಎಂಬುದು ಬೆರ್ರಿಯ ಮಾತು. ‘ಪವಿತ್ರ ಸ್ಥಳಗಳು ಮತ್ತು ಅಪವಿತ್ರ ಸ್ಥಳಗಳು ಎಂದು ಬೇರೆ ಬೇರೆ ಇಲ್ಲ. ಪವಿತ್ರ ಸ್ಥಳಗಳು ಮತ್ತು ಅಪವಿತ್ರಗೊಳಿಸಲಾದ ಸ್ಥಳಗಳು ಮಾತ್ರ ಇರೋದು. ಜಗತ್ತೂ, ಅದರೊಳಗಿನ ನಮ್ಮ ಬದುಕೂ ನಮಗೆ ದೊರೆತಿರುವ ಷರತ್ತುಬದ್ಧ ಕಾಣಿಕೆಗಳು ಎಂಬುದು ನನ್ನ ನಂಬಿಕೆ’ ಎಂದ ವೆಂಡೆಲ್ ಬೆರ್ರಿ, ಪಾರಂಪರಿಕ ವಿವೇಕವನ್ನು ನಮಗುಳಿಸಿ ಹೋಗಿದ್ದಾನೆ.

ಹರೀಶ್‌ ಕೇರ

View all posts by this author