ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಕೃಷ್ಣನ ಬೆಣ್ಣೆ ಕಳ್ಳತನದ ಹಿಂದಿರುವ ಗುಟ್ಟು, ಆಯುರ್ವೇದದಲ್ಲಿ ರಟ್ಟು

ಕೃಷ್ಣನಿಗೆ ಬೆಣ್ಣೆಯ ಮೇಲೆ ಯಾಕೆ ಅಷ್ಟೊಂದು ಒಲವು? ಅವನಿಗೆ ಊಟ ತಿಂಡಿ ಇಲ್ಲದಿದ್ದರೂ ಬೆಣ್ಣೆ ಒಂದೇ ಸಾಕಾಗುತ್ತಿತ್ತಂತೆ. ಇದರ ಹಿಂದಿರುವ ಗುಟ್ಟೇನು? ಎಂಬ ಪ್ರಶ್ನೆಗೆ ಆಯುರ್ವೇದದಲ್ಲಿ ಉತ್ತರ ವನ್ನು ಹುಡುಕಲು ಹೊರಟೆ. ಆಗ ಸಿಕ್ಕ ಕೆಲವು ಸ್ವಾರಸ್ಯಕರ ವಿಷಯ ಗಳನ್ನು ನಿಮ್ಮ ಜತೆ ಈ ಸಂಚಿಕೆ ಯಲ್ಲಿ ಹಂಚಿಕೊಳ್ಳುತ್ತೇನೆ. ಬನ್ನಿ, ಬೆಣ್ಣೆಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಆಯುರ್ವೇದದ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದನ್ನು ತಿಳಿದುಕೊಳ್ಳೋಣ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಶ್ರೀಕೃಷ್ಣ ಪರಮಾತ್ಮನದ್ದು ಆದರ್ಶ ವ್ಯಕ್ತಿತ್ವ. ಸಮಗ್ರವಾದ ಜೀವನವನ್ನು ಹೇಗೆ ನಡೆಸ ಬೇಕೆಂಬ ದಾರಿಯನ್ನು ಹಲವಾರು ಉದಾಹರಣೆಗಳೊಂದಿಗೆ ಮಾನವಕುಲಕ್ಕೆ ತೋರಿಸಿರುವ ಚತುರ ಶ್ರೀಕೃಷ್ಣ. ಅವನು ಹಾಕಿಕೊಟ್ಟ ಮಾರ್ಗದಲ್ಲಿ, ನಿತ್ಯ ನವನೀತ ಸೇವನೆಯೂ ಒಂದು. ಅವನ ಭಗವದ್ಗೀತೆಯು ಆತ್ಮದ ಉದ್ಧಾರ ಮಾಡುವಂತೆ, ಅವನಂತೆ ಬಳಸುವ ಬೆಣ್ಣೆಯು ನಮ್ಮ ಆರೋಗ್ಯದ ಉನ್ನತಿಗೆ ಕಾರಣವಾಗುವುದು ನಿಸ್ಸಂಶಯ.

ನನ್ನ ಮಗಳಿಗೆ ಈಗ ಇನ್ನೇನು ಐದು ವರ್ಷ. ಯುಟ್ಯೂಬ್‌ನಲ್ಲಿ ಕೃಷ್ಣನನ್ನು ನೋಡುವುದೆಂದರೆ ಅವಳಿಗೆ ಬಹಳ ಪ್ರೀತಿ. ಕೃಷ್ಣನ ಕಥೆಗಳನ್ನು ಬಹಳ ಏಕಾಗ್ರತೆಯಿಂದ ಗಮನಿಸುತ್ತಾಳೆ. ಹೀಗೆ, ಅವನ ಬಾಲಲೀಲೆಗಳನ್ನು ಮತ್ತು ಚೇಷ್ಟೆಗಳನ್ನು ನೋಡುತ್ತಾ ಅವಳ ಮನಸ್ಸಿಗೆ ಒಂದು ಪ್ರಶ್ನೆ ಬಂತು. “ಅಮ್ಮ, ಕೃಷ್ಣ ಯಾವಾಗಲೂ ಬರೀ ಬೆಣ್ಣೆಯನ್ನೇ ಏಕೆ ಕದಿಯುತ್ತಾನೆ? ಬೇರೆ ಬೇರೆ ಎಷ್ಟೊಂದು ವಿಧದ ತಿಂಡಿಗಳು ಇವೆಯಲ್ಲ? ಆದರೆ, ಕೃಷ್ಣನಿಗೆ ಬೆಣ್ಣೆ ಮಾತ್ರ ಏಕೆ ಅಷ್ಟೊಂದು ಇಷ್ಟ?" ಎಂದು ಮುಗ್ಧವಾಗಿ ಪ್ರಶ್ನಿಸಿದಳು. ಅವಳು ಕೇಳಿದ ಪ್ರಶ್ನೆಯು ನನಗೂ ಸರಿ ಎಂದೆನಿಸಿತು.

ಹೌದಲ್ವಾ, ಕೃಷ್ಣನಿಗೆ ಬೆಣ್ಣೆಯ ಮೇಲೆ ಯಾಕೆ ಅಷ್ಟೊಂದು ಒಲವು? ಅವನಿಗೆ ಊಟ ತಿಂಡಿ ಇಲ್ಲದಿದ್ದರೂ ಬೆಣ್ಣೆ ಒಂದೇ ಸಾಕಾಗುತ್ತಿತ್ತಂತೆ. ಇದರ ಹಿಂದಿರುವ ಗುಟ್ಟೇನು? ಎಂಬ ಪ್ರಶ್ನೆಗೆ ಆಯುರ್ವೇದದಲ್ಲಿ ಉತ್ತರವನ್ನು ಹುಡುಕಲು ಹೊರಟೆ. ಆಗ ಸಿಕ್ಕ ಕೆಲವು ಸ್ವಾರಸ್ಯಕರ ವಿಷಯ ಗಳನ್ನು ನಿಮ್ಮ ಜತೆ ಈ ಸಂಚಿಕೆಯಲ್ಲಿ ಹಂಚಿಕೊಳ್ಳುತ್ತೇನೆ. ಬನ್ನಿ, ಬೆಣ್ಣೆಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಆಯುರ್ವೇದದ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದನ್ನು ತಿಳಿದುಕೊಳ್ಳೋಣ.

ಅಮೃತಕ್ಕಾಗಿ ದೇವತೆಗಳು ಮತ್ತು ರಾಕ್ಷಸರು ಮಂಥನ ಮಾಡಿದ್ದು ಕ್ಷೀರ ಸಮುದ್ರವನ್ನು. ಅಲ್ಲಿ ಹುಟ್ಟಿದವನೇ ಮೋಹಿನಿ ರೂಪದ, ನಂತರ ಧನ್ವಂತರಿ ಎಂದು ಹೆಸರುವಾಸಿಯಾದ ಅಬ್ಜ ನಾರಾಯಣ. ಅಮೃತ ಹುಟ್ಟಿದ್ದು ಅಲ್ಲಿಯೇ. ಈ ಹಿನ್ನೆಲೆಯಲ್ಲಿ ಗಮನಿಸಿದರೂ ಬೆಣ್ಣೆ ಹಾಲಿನ ಉತ್ತಮ ಉತ್ಪನ್ನ. ಬೆಣ್ಣೆಯು ಹಾಲಿನ ಪುತ್ರ ಮತ್ತು ಮಜ್ಜಿಗೆಯ ಸಹೋದರ. ಆದರೂ ಹಾಲಿಗೂ, ಬೆಣ್ಣೆಗೂ ಮತ್ತು ಮಜ್ಜಿಗೆಗೂ ಬಹಳ ವ್ಯತ್ಯಾಸವಿದೆ.

ಇದನ್ನೂ ಓದಿ: Dr Sadhanashree Column: ನಿಮಗೆ ಸಂಧಿರೋಗ ಯಾಕೆ ಬಂತು ಗೊತ್ತೇ ?

ಹಾಲಿಗಿಂತ ವಿಶಿಷ್ಟ ಗುಣವನ್ನು ಬೆಣ್ಣೆ ಹೊಂದಿರುತ್ತದೆ. ಆಯುರ್ವೇದದಲ್ಲಿ, ‘ಸ್ನೇಹ ಸಾರೋಧಿಯಂ ಪುರುಷಃ’ ಎಂದು ಪುರುಷನನ್ನು ವರ್ಣಿಸಲಾಗಿದೆ. ಕಾರಣ ನಮ್ಮ ಇಡೀ ಅಸ್ತಿತ್ವವನ್ನು ಹಿಡಿದಿಟ್ಟಿರುವ ಮುಖ್ಯವಾದ ವಸ್ತುವೇ ‘ಸ್ನೇಹ’. ಸಂಸ್ಕೃತದಲ್ಲಿ ಸ್ನೇಹ ಶಬ್ದಕ್ಕೆ ‘ಸ್ನಿಹ್-ಬಂಧನೇ’ ಎಂಬ ವ್ಯುತ್ಪತ್ತಿಯನ್ನು ಕಾಣಬಹುದು.

ಅಂದರೆ, ವಸ್ತುತಃ ಯಾವುದು ನಮ್ಮನ್ನು ಬಂಧಿಸುವುದೋ ಅದೇ ಸ್ನೇಹ. ತಂದೆ- ತಾಯಿ, ಗಂಡ-ಹೆಂಡತಿ, ಗೆಳೆಯ-ಗೆಳತಿ, ಗುರು- ಶಿಷ್ಯ ಹೀಗೆ ಎಲ್ಲಾ ಸಂಬಂಧಗಳ ನಡುವೆ ಇರುವ ಕೊಂಡಿ ಯಾವುದು ಎಂದು ನೋಡಿದರೆ ಅದು ಸ್ನೇಹದ ಬಂಧನವೇ ಆಗಿದೆ. ಆಯುರ್ವೇದದಲ್ಲಿ ಹೆಚ್ಚಿನ ಎಲ್ಲಾ ಜಿಡ್ಡಿನ ಪದಾರ್ಥಗಳಿಗೂ ಸ್ನೇಹ ಎಂದು ಕರೆಯುತ್ತಾರೆ.

ಕಾರಣ, ನಮ್ಮ ದೇಹದಲ್ಲಿನ ಚಿಕ್ಕ ಚಿಕ್ಕ ಅಣುಗಳಿಂದ ಹಿಡಿದು ದೊಡ್ಡ ದೊಡ್ಡ ಅವಯವ ಗಳವರೆಗೂ ಎಲ್ಲವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಒಗ್ಗೂಡಿಸುವ, ಬಂಧಿಸುವ ಪದಾರ್ಥವೇ ಸ್ನೇಹ. ಹಾಗೆಯೇ, ದೇಹದಲ್ಲಿ ಧಾತುಗಳ ಪರಸ್ಪರ ಜೋಡಣೆಗೆ ಕಾರಣವೂ ಈ ಸ್ನೇಹವೇ. ಶರೀರದ ಬೆಳವಣಿಗೆಗೆ, ವೃದ್ಧಿಗೆ, ಪೋಷಣೆಗೆ, ಸ್ಥಿರತೆಗೆ ಮತ್ತು ಬಲಕ್ಕೆ ಈ ಸ್ನೇಹ ಅತ್ಯಗತ್ಯ. ಈ ಜಗತ್ತಿನಲ್ಲಿ ಲಭ್ಯವಿರುವ ಹಲವಾರು ವಿಧಗಳ ಸ್ನೇಹಗಳಲ್ಲಿ ‘ನವನೀತ’ ಅಂದರೆ ಬೆಣ್ಣೆಯು ಬಹಳ ಮುಖ್ಯವಾ ದದ್ದು ಮತ್ತು ಉತ್ಕೃಷ್ಟವಾದದ್ದು.

7 R

ಗರ್ಭಧಾರಣೆಯಿಂದ ಹಿಡಿದು ಮಗುವಿನ ಬೆಳವಣಿಗೆ ಮತ್ತು ಪೋಷಣೆಯ ತನಕ ಇದರ ಉಪಯುಕ್ತತೆ ಅಗಾಧ. ಬೆಣ್ಣೆಯನ್ನು ಆಯುರ್ವೇದ ಶಾಸ್ತ್ರಗಳಲ್ಲಿ ‘ನವನೀತ’ ಎಂದು ಕರೆಯುತ್ತಾರೆ. ಈ ಹೆಸರೇ ಸೂಚಿಸುವಂತೆ ಅದೇ ದಿನ ಕಡೆದು ತೆಗೆದ ಬೆಣ್ಣೆಯನ್ನು ಅಂದೇ ಉಪಯೋಗಿಸತಕ್ಕದ್ದು. ಆಗಲೇ ಅದರ ಸಂಪೂರ್ಣ ಗುಣಲಾಭಗಳು ಲಭ್ಯ. ಬೆಣ್ಣೆಯನ್ನು ನಾವು ಹಾಲಿನಿಂದ ಅಥವಾ ಮೊಸರಿನಿಂದ ತಯಾರಿಸಿದ್ದೇ ಆದರೂ, ಇದರ ಗುಣ-ಧರ್ಮಗಳು ಹಾಲು ಮತ್ತು ಮೊಸರುಗಳಿಗಿಂತ ಅಪೂರ್ವವಾಗಿವೆ.

ಬೆಣ್ಣೆಯನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ತಯಾರಿಸುತ್ತೇವೆ. ಮೊದಲಿಗೆ ಮೊಸರನ್ನು ತಯಾರಿಸಿ ಅದನ್ನು ಕಡೆದು, ನಂತರ ಬೆಣ್ಣೆಯನ್ನು ಬೇರ್ಪಡಿಸುವುದು. ಇದು ಒಂದು ವಿಧಾನ. ಇನ್ನೊಂದು ವಿಧಾನದಲ್ಲಿ, ನೇರವಾಗಿ ಹಾಲಿನಿಂದಲೇ ಬೆಣ್ಣೆಯನ್ನು ಪ್ರತ್ಯೇಕಿಸುವುದು. ಈ ವಿಧಾನದ ಬೆಣ್ಣೆಗೆ ‘ಕೆನೆ’ ಎಂದು ಸಾಮಾನ್ಯವಾಗಿ ಕರೆಯುತ್ತಾರೆ.

ಸಾಮಾನ್ಯವಾಗಿ ಮೊಸರಿನಿಂದ ಆಗ ತಾನೆ ತೆಗೆದ ಬೆಣ್ಣೆಯು ಸಿಹಿ ರುಚಿ ಮತ್ತು ಸ್ವಲ್ಪ ಒಗರು ರುಚಿಯನ್ನು ಹೊಂದಿರುತ್ತದೆ. ಜತೆಗೆ ಇದು ಸ್ವಲ್ಪ ಆಮ್ಲ ಗುಣವುಳ್ಳದ್ದು. ಇದು ಹೆಚ್ಚಿನ ಪ್ರಮಾಣ ದಲ್ಲಿ ಜಿಡ್ಡಿನಿಂದ ಕೂಡಿರುತ್ತದೆ. ಆದರೆ ಇದು ಬಹಳ ಸುಲಭವಾಗಿ ಜೀರ್ಣಗೊಳ್ಳುತ್ತದೆ. ಜೀರ್ಣ ವಾದ ನಂತರ ಇದು ದೇಹದಲ್ಲಿ ಶೀತದ ಪರಿಣಾಮವನ್ನು ಬೀರುತ್ತದೆ.

ಇದರ ವಿಶೇಷತೆ ಏನೆಂದರೆ ಇದು ಮೇಧಾಶಕ್ತಿಯನ್ನು ಹೆಚ್ಚು ಮಾಡುತ್ತದೆ. ಅಂತೆಯೇ ಇದು ಹೃದಯಕ್ಕೆ ಹಿತ. ದೇಹದಲ್ಲಿ ಆಗುತ್ತಿರುವ ಹೆಚ್ಚಿನ ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಜೀರ್ಣಶಕ್ತಿ ಯನ್ನು ಹೆಚ್ಚು ಮಾಡುತ್ತದೆ. ದೋಷಗಳಲ್ಲಿ ಇದು ವಾತ-ಪಿತ್ತಗಳನ್ನು ಪ್ರಶಮನಗೊಳಿಸುತ್ತದೆ. ಕರುಳಿನ ಕಾರ್ಯವು ನಿಯತವಾಗಿ ನಡೆಯಲು ಸಹಾಯಕಾರಿ. ಶರೀರಕ್ಕೆ ಜಿಡ್ಡನ್ನು ಪೂರೈಸುವು ದಲ್ಲದೆ ದೇಹದೊಳಗಿನ ಕ್ರಿಯೆಗಳನ್ನು ಸಕಾಲದಲ್ಲಿ ಆಗುವಂತೆ ವಾತವನ್ನು ಸರಿಪಡಿಸುತ್ತದೆ.

ಜೀರ್ಣಶಕ್ತಿಗೆ ಉತ್ತೇಜನ, ಪೋಷಕಾಂಶಗಳ ಹೀರುವಿಕೆ, ಉರಿ, ದಾಹಗಳ ಶಮನದಿಂದ ಪಿತ್ತವನ್ನು ಸಮಸ್ಥಿತಿಗೆ ತರುತ್ತದೆ. ಜೀವನಕ್ಕೆ ಮೂಲಾಧಾರವಾದ ಶುಕ್ರದ ಉತ್ಪತ್ತಿಯಲ್ಲಿ ಬೆಣ್ಣೆಯ ಸಾಮರ್ಥ್ಯ ಅಸದೃಶ. ದೇಹದ ಕಾಂತಿಯನ್ನು ಮತ್ತು ಬಲವನ್ನು ಇದು ಹೆಚ್ಚು ಮಾಡುತ್ತದೆ. ಇನ್ನು ಪುರಾಣ ನವನೀತದ ಬಗ್ಗೆ ಹೇಳಬೇಕಾದರೆ ಹಳೆಯ ಬೆಣ್ಣೆಯೂ ದೇಹದಲ್ಲಿ ಕಫ ಮತ್ತು ಮೇದಸ್ಸು ಅಂದರೆ ಕೊಬ್ಬನ್ನು ಹೆಚ್ಚಿಸುತ್ತದೆ.

ಇದು ಬಲಕರ ಮತ್ತು ಬೃಂಹಣ- ಅಂದರೆ ಶರೀರದ ಬೆಳವಣಿಗೆಗೆ ಸಹಾಯಕಾರಿ. ಇದು ಶೋಷ ವನ್ನು ನಿವಾರಿಸಿ, ಶಕ್ತಿಯನ್ನು ನೀಡುತ್ತದೆ. ಇದು ವಿಶೇಷವಾಗಿ ಬಾಲಕರಿಗೆ ಅತ್ಯುತ್ತಮ. ಇನ್ನು ಕ್ಷೀರೋತ್ಥ ನವನೀತ- ಅಂದರೆ ಹಾಲಿನಿಂದ ತೆಗೆದ ಬೆಣ್ಣೆಯ ಗುಣಗಳನ್ನು ನೋಡೋಣ. ಈ ರೀತಿಯ ಬೆಣ್ಣೆಯೂ ಸ್ನಿಗ್ಧವಾಗಿದ್ದು, ಸಿಹಿ ಗುಣ ಹೊಂದಿದೆ.

ಇದು ದೇಹಕ್ಕೆ ಅತಿಯಾದ ತಂಪನ್ನೆರೆಯುತ್ತದೆ, ದೇಹವನ್ನು ಮೃದುಗೊಳಿಸುತ್ತದೆ. ಈ ರೀತಿ ನೇರವಾಗಿ ಹಾಲಿನಿಂದ ತಯಾರಾದ ಬೆಣ್ಣೆಯು ನೇತ್ರರೋಗೋಪಚಾರದಲ್ಲಿ ಎತ್ತಿದ ಕೈ. ಸಾಮಾನ್ಯ ವಾಗಿ ಗರ್ಭಿಣಿಯರಿಗೆ, ಗರ್ಭಧಾರಣೆಯಾದ ಮೇಲೆ ಒಂಬತ್ತು ತಿಂಗಳೂ ಬೆಣ್ಣೆಯನ್ನು ಸೇವಿಸುವಂತೆ ನಿರ್ದೇಶಿಸುತ್ತೇವೆ. ಕಾರಣ, ಇದು ಗರ್ಭದ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಬಹಳ ಅವಶ್ಯಕ. ಅಂತೆಯೇ, ಗರ್ಭಿಣಿಯ ಧಾತುಗಳನ್ನು ಸಹ ಇದು ಪೋಷಿಸಿ, ಮೂಳೆ ಮತ್ತು ಮಾಂಸ ಪೇಷಿಗಳಿಗೆ ಬಲವನ್ನು ನೀಡುತ್ತದೆ. ಚರ್ಮನ್ನು ಕಾಂತಿಯುಕ್ತವಾಗಿಸಿ, ಕೂದಲನ್ನು ಸದೃಢಗೊಳಿಸಿ, ಸಂಪೂರ್ಣ ರಕ್ಷಣೆಯನ್ನು ತಾಯಿಗೆ ಮತ್ತು ಮಗು- ಇಬ್ಬರಿಗೂ ಧಾರೆಯೆರೆಯುತ್ತದೆ.

ಅಂತೆಯೇ, ಆಗ ತಾನೇ ಹುಟ್ಟಿದ ಮಗುವಿಗೂ ನವನೀತಪ್ರಾಶನ ಬಹಳ ಲಾಭಕಾರಿ. ತಾಯಿಯ ಹಾಲು ಕಡಿಮೆಯಾಗಿದ್ದ ಸಂದರ್ಭದಲ್ಲಿ ಹಾಲಿನ ಬದಲಿಗೆ, ಮಗುವಿನ ತುಟಿಗೆ ಸ್ವಲ್ಪ ಸ್ವಲ್ಪ ಬೆಣ್ಣೆಯನ್ನು ಸವರಿ ನೆಕ್ಕಿಸಿಬಹುದು. ಬಾಲ್ಯಾವಸ್ಥೆಯ ಪರಿಪೂರ್ಣ ಅವಧಿಯಲ್ಲಿ ಮಕ್ಕಳಿಗೆ ಬೆಣ್ಣೆಯನ್ನು ಆಹಾರದೊಂದಿಗೆ ನೀಡುವುದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ನವನೀತವು ಶರೀರವನ್ನು ಪೋಷಿಸುವುದರ ಜತೆಗೆ ಮಗುವಿನ ಬುದ್ಧಿ, ಮೇಧಾಶಕ್ತಿಗಳನ್ನು ವಽಸಿ ಮನಸ್ಸನ್ನು ಸಹ ಪುಷ್ಟಿಗೊಳಿಸುತ್ತದೆ.

ಅಷ್ಟೆ ಇಲ್ಲದೆ ಸುಮ್ಮನೆ ಕೃಷ್ಣ ಬೆಣ್ಣೆಯನ್ನು ಕದೀತಾನಾ, ಹೇಳಿ? ಸಾಮಾನ್ಯವಾಗಿ ಸಸ್ತನಿಗಳ ಹಾಲು ಬೆಣ್ಣೆಯ ಮೂಲ. ಹಸು, ಎಮ್ಮೆ, ಆಡು, ಕುರಿ, ಮೇಕೆ, ಒಂಟೆಗಳ ಹಾಲು ಬೆಣ್ಣೆ ಉತ್ಪತ್ತಿಯ ಮೂಲ. ಆಯಾ ಹಾಲಿನ ಗುಣವೇ ಬೆಣ್ಣೆಯಲ್ಲೂ ಇರುತ್ತದೆ. ಆದರೆ ನಿತ್ಯೋಪಯೋಗಕ್ಕೆ ಹಸುವಿನ ಬೆಣ್ಣೆಯೇ ಹಿತಕರ. ಇನ್ನು ಕೆಲವು ಚಿಕಿತ್ಸೋಪಯೋಗಗಳನ್ನು ಹೇಳಬೇಕಾದರೆ- ನವನೀತವು ಮೂಲವ್ಯಾಧಿ ಮತ್ತು ರಕ್ತಬೇಧಿಗಳಲ್ಲಿ ಪರಿಣಾಮಕಾರಿ. ಸ್ವಲ್ಪ ಬೆಣ್ಣೆ, ಜೇನುತುಪ್ಪ, ಕೆಂಪುಕಲ್ಲು ಸಕ್ಕರೆ ಪುಡಿಮಿಶ್ರಣವನ್ನು ಆಹಾರಕ್ಕೆ ಮೊದಲು ದಿನದಲ್ಲಿ ಒಂದೆರೆಡು ಬಾರಿ ನೆಕ್ಕುವುದರಿಂದ ರಕ್ತಸ್ರಾವ ನಿಲ್ಲುತ್ತದೆ.

ಕ್ರಮೆಣ ರೋಗವೂ ನಿವಾರಣೆಯಾಗುತ್ತದೆ. 50 ಮಿಲಿ ಆಡಿನ ಹಾಲಿಗೆ ಒಂದು ಚಮಚ ಬೆಣ್ಣೆಯನ್ನು ಸೇರಿಸಿ ಸವಿಯುವುದು ಸಹ ಒಳ್ಳೆಯದು. ಪದೇಪದೆ ಬಾಯಿಹುಣ್ಣು ಕಾಡುವವರಿಗೆ ಮತ್ತು ಬಿಸಿ ಮೈಯುಳ್ಳವರಿಗೆ ಪ್ರತಿದಿನ ಆಹಾರದಲ್ಲಿ ಬೆಣ್ಣೆಯನ್ನು ನೀಡುವುದರಿಂದ ಈ ತೊಂದರೆ ಪದೇಪದೆ ಕಾಡುವುದಿಲ್ಲ.

ಮೈ ಕೈ ನೋವು, ಕಣ್ಣು ಉರಿ, ವಿಪರೀತ ತಾಪದ ಜ್ವರ ಇದ್ದಾಗ ಹಸಿವಿಗೆ ತಕ್ಕಷ್ಟೇ ಬೆಣ್ಣೆಯನ್ನು ಕಲ್ಲು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಎರಡು-ಮೂರು ತಾಸಿಗೊಮ್ಮೆ ನೆಕ್ಕುವುದು ಪರಿಣಾಮ ಕಾರಿ. ಸದಾ ಮೈ ತೂಕ ಹೆಚ್ಚದೇ ಇರುವ ಮಕ್ಕಳಿಗೆ ಮತ್ತು ಮೈಮೇಲೆ ಸದಾ ಅಲ್ಲಲ್ಲಿ ಕೆಂಪುವರ್ಣದ ಗಂಧೆಗಳಿರುವ ಮಕ್ಕಳಿಗೆ ಬೆಣ್ಣೆ ಹಚ್ಚಿ ಸ್ನಾನ ಮಾಡಿಸುವ ಅಭ್ಯಾಸವು ಬಹಳ ಪ್ರಯೋಜನಗಳನ್ನು ನೀಡುತ್ತದೆ.

ತೂಕ ಕಡಿಮೆ ಇರುವ ಮಕ್ಕಳಿಗೆ ಬೆಳಗ್ಗೆ ಎದ್ದ ಕೂಡಲೇ ಕಡಲೆಕಾಳು ಗಾತ್ರದಷ್ಟು ಬೆಣ್ಣೆಯನ್ನು ನೆಕ್ಕಿಸಬೇಕು. ಇದು ಸಂಪೂರ್ಣವಾಗಿ ಜೀರ್ಣವಾದ ನಂತರ ಮುಂದಿನ ಆಹಾರವನ್ನು ನೀಡಬೇಕು. ಹೀಗೆ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸುತ್ತಾ ಒಂದು ವರ್ಷದಲ್ಲಿ ಒಂದು ಚಮಚದಷ್ಟು ಬೆಣ್ಣೆ ನೆಕ್ಕಿಸಿ ಜೀರ್ಣಿಸಿಕೊಳ್ಳುವಂತಾಗಬೇಕು. ಹೀಗೆ ಮಾಡಿದ್ದೇ ಆದರೆ ಮಕ್ಕಳ ತೂಕ ಸಹಜವಾಗಿ ಹೆಚ್ಚುತ್ತದೆ. ದೇಹದ ಬಲವೂ ವೃದ್ಧಿಸುತ್ತದೆ.

ಕುರುವಿನ ತೊಂದರೆ ಇzಗ ಬೆಣ್ಣೆ ಮತ್ತು ಅರಿಶಿಣದ ಜತೆಗೆ ಸುಣ್ಣವನ್ನು ಬೆರೆಸಿ ಲೇಪನ ಮಾಡಿಕೊಂಡರೆ ಕುರುವಿನ ಅಸಹನೀಯ ನೋವು ಕಡಿಮೆಯಾಗುತ್ತದೆ. ಕರ್ಣಶೂಲದಲ್ಲಿ ಬಿಸಿ ಮಾಡಿದ ಚಮಚಕ್ಕೆ, ಸ್ವಲ್ಪ ಬೆಣ್ಣೆ ಹಾಕಿದಾಗ ಅದು ಕರಗುತ್ತದೆ. ಕರಗಿದ ಆ ಬೆಣ್ಣೆಯನ್ನು ನಾಲ್ಕರಿಂದ ಆರು ತೊಟ್ಟು ಕಿವಿಗೆ ಬಿಡುವುದರಿಂದ ಕಿವಿನೋವು ತಕ್ಷಣವೇ ನಿವಾರಣೆ ಆಗುತ್ತದೆ.

ಹಾಕಿದ ಈ ಬೆಣ್ಣೆಯನ್ನು ಅರ್ಧ ಗಂಟೆ ಬಿಟ್ಟು ತೆಗೆದು ಕಿವಿಯನ್ನು ಒಣಗಿಸಿಕೊಳ್ಳಬೇಕು. ಅರೆ ತಲೆನೋವಿನಲ್ಲಿಯೂ ಬೆಣ್ಣೆ ಪರಿಣಾಮಕಾರಿ. ಕರಗಿಸಿದ ಬೆಣ್ಣೆಯನ್ನು ಮೂರರಿಂದ ನಾಲ್ಕು ಹನಿಗಳಂತೆ ಒಂದೊಂದು ಮೂಗಿನ ಹೊಳ್ಳೆಗಳಿಗೂ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಕುವು ದರಿಂದ ಅರ್ಧ ತಲೆನೋವು ನಿವಾರಣೆ ಆಗುತ್ತದೆ.

ಅತಿಯಾದ ಮೈ ಉರಿ ಮತ್ತು ನವೆ ಇದ್ದಾಗ ಬೆಣ್ಣೆಯೊಡನೆ ಶ್ರೀಗಂಧದ ಪುಡಿಯನ್ನು ಬೆರೆಸಿ ಹಚ್ಚುವುದರಿಂದ ಮೈನವೆ ಮತ್ತು ಉರಿಗಳು ಕಡಿಮೆಯಾಗುತ್ತವೆ. ಇದೇ ಮಿಶ್ರಣವನ್ನು ಜ್ವರದಲ್ಲಿಯೂ ಹಣೆಗೆ ಲೇಪಿಸಬಹುದು. ಬಜೆಯನ್ನು ಬೆಣ್ಣೆಯಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಸುತ್ತು ತೇಯ್ದು ನೆಕ್ಕಿಸುವುದು ಎಳೆ ಮಕ್ಕಳಲ್ಲಿ ಬುದ್ಧಿ ವರ್ಧಕವಾಗುತ್ತದೆ ಮತ್ತು ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಣ್ಣೆಯು ಮಕ್ಕಳಿಗೆ ಎಷ್ಟು ಪ್ರಯೋಜಕಾರಿಯೋ ವೃದ್ಧರಿಗೂ ಅಷ್ಟೇ ಒಳ್ಳೆಯದು. ವೃದ್ಧರಿಗೆ ಜೀವಕೋಶಗಳ ಪದರಗಳ ಸವಕಳಿಯನ್ನು ತಡೆಯಲು ನವನೀತವು ಅತ್ಯುತ್ತಮ ಆಹಾರವಾಗಿದೆ. ಸ್ವರಭೇದವಾಗಿ ಗಂಟಲು ಉರಿಯುತ್ತಿದ್ದಲ್ಲಿ, ಸ್ವಲ್ಪ ಬೆಚ್ಚಗಿನ ಹಾಲಿನ ಜತೆ ಬೆಣ್ಣೆ ಹಾಕಿ ಕುಡಿಯುವುದು ಒಳ್ಳೆಯದು.

ದೇಹಧಾತುಗಳು ಕ್ಷೀಣಿಸಿ ಬರುತ್ತಿರುವ ಕೆಮ್ಮಿನಲ್ಲಿ, ಅರ್ದಿತ ರೋಗದಲ್ಲಿ ಬೆಣ್ಣೆಯ ಸೇವನೆ ಅಮೃತಸಮಾನ. ಹೀಗೆ, ಬೆಣ್ಣೆಯ ಪ್ರಯೋಗದ ಪ್ರಯೋಜನಗಳ ಪಟ್ಟಿ ಬಹಳ ದೊಡ್ಡದಾಗಿದೆ. ಆದರೆ ಇದು ಕೊಬ್ಬನ್ನು ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಯಾರೋ ಹೊರಿಸಿದ ಅಪವಾದದಿಂದ ನಾವು ಬೆಣ್ಣೆಯ ಶ್ರೇಷ್ಠ ಗುಣಗಳನ್ನು ಮರೆತು, ಅದರಿಂದ ದೂರ ಉಳಿದುಬಿಟ್ಟಿದ್ದೇವೆ. ಅದಕ್ಕೆ ಬೆಲೆಯನ್ನೂ ನಾವೇ ತೆರಬೇಕಾಗಿದೆ. ಬೆಣ್ಣೆಯ ಮೇಲೆ ಹಾಗೆ ಸುಮ್ಮನೆ ಆಪಾದನೆ ಹೊರಿಸುವ ಮೊದಲು, ಅದರ ಗುಣ-ಧರ್ಮಗಳನ್ನು ತಿಳಿದು, ಉಪಯೋಗಿ ಸುವ ಸರಿಯಾದ ಕ್ರಮವನ್ನು ಕಲಿತು, ವಿವೇಚನೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವುದು ಬುದ್ಧಿವಂತರ ಲಕ್ಷಣ.

ಶ್ರೀಕೃಷ್ಣ ಪರಮಾತ್ಮನದ್ದು ಆದರ್ಶ ವ್ಯಕ್ತಿತ್ವ. ಸಮಗ್ರವಾದ ಜೀವನವನ್ನು ಹೇಗೆ ನಡೆಸಬೇಕೆಂಬ ದಾರಿಯನ್ನು ಹಲವಾರು ಉದಾಹರಣೆಗಳೊಂದಿಗೆ ಮಾನವಕುಲಕ್ಕೆ ತೋರಿಸಿರುವ ಚತುರ ಶ್ರೀಕೃಷ್ಣ. ಅವನು ಹಾಕಿಕೊಟ್ಟ ಮಾರ್ಗದಲ್ಲಿ, ನಿತ್ಯ ನವನೀತ ಸೇವನೆಯೂ ಒಂದು. ಅವನ ಭಗವದ್ಗೀತೆಯು ಆತ್ಮದ ಉದ್ಧಾರ ಮಾಡುವಂತೆ, ಅವನಂತೆ ಬಳಸುವ ಬೆಣ್ಣೆಯು ನಮ್ಮ ಆರೋಗ್ಯದ ಉನ್ನತಿಗೆ ಕಾರಣವಾಗುವುದು ನಿಸ್ಸಂಶಯ..!

ಡಾ. ಸಾಧನಾಶ್ರೀ ಪಿ,

View all posts by this author