ವಿದೇಶವಾಸಿ
ಮೊದಲೇ ಹೇಳುತ್ತೇನೆ, ಇದು ರಾಜಕೀಯ ಪಕ್ಷದ, ರಾಜಕಾರಣಿಗಳ ಸೂಟ್‌ಕೇಸ್ ಸಮರದ ಕತೆಯಲ್ಲ. ಸಣ್ಣವರಾಗಿದ್ದಾಗ ಮನೆಗೆ ಯಾರೇ ಬಂದರೂ ನಾವು ಮೊದಲು ನೋಡುತ್ತಿದ್ದುದು ಅವರ ಟ್ರಂಕ್. ಆಗ ಹಸಿರು ಕಬ್ಬಿಣದ ಟ್ರಂಕ್ ಚಾಲ್ತಿಯಲ್ಲಿತ್ತು. ಅತಿಥಿಗಳ ಟ್ರಂಕ್ ಗಾತ್ರ ನೋಡಿ ಅವರು ಎಷ್ಟು ದಿನ ಉಳಿಯಬಹುದು ಎಂದು ಅಂದಾಜು ಮಾಡಲಾಗುತ್ತಿತ್ತು. ಆಗ ಟ್ರಂಕ್‌ನ ಬಣ್ಣಕ್ಕೆ ಹೆಚ್ಚು ಪ್ರಾಧಾನ್ಯ ಇರಲಿಲ್ಲವಾದರೂ, ಹಳೆಯದಾಗುತ್ತಿದ್ದಂತೆ, ತುಕ್ಕು ಹಿಡಿಯುತ್ತಿದ್ದಂತೆ ಅದಕ್ಕೆ ಬಣ್ಣದ ಪುನರ್ ಲೇಪನವಾಗುತ್ತಿತ್ತು.
ಬಣ್ಣ ಹಚ್ಚಿ, ಬಿಸಿಲಿಗೆ ಇಟ್ಟು ಒಣಗಿಸುವುದು ಒಂದೆರಡು ದಿನದ ಕೆಲಸ. ಆ ಕಾಲದಲ್ಲಿ ಮರದ ಟ್ರಂಕ್ ಇದ್ದವಾದರೂ, ಪ್ರಯಾಣಕ್ಕೆ ಬಳಸುವುದು ಕಮ್ಮಿಯೇ. ಅವನ್ನು ಶಾಲೆ, ಕಾಲೇಜು, ಮನೆಗಳಲ್ಲಿ ವಸ್ತುಗಳನ್ನು ದಾಸ್ತಾನು ಮಾಡಿಡಲು ಹೆಚ್ಚು ಬಳಸುತ್ತಿದ್ದರು.
ಕಾಲಕ್ರಮೇಣ ಕಬ್ಬಿಣ, ಅಲ್ಯುಮಿನಿಯಮ್, ಹಿಂಡಾಲಿಯಮ್ ಟ್ರಂಕ್ ಜಾಗವನ್ನು ಪ್ಲಾಸ್ಟಿಕ್ ಸೂಟ್ʼಕೇಸ್‌ಗಳು ಆಕ್ರಮಿಸಿಕೊಂಡವು. ಚಿಲಕದ ಜಾಗದಲ್ಲಿ ಝಿಪ್, ನಂಬರ್ ಲಾಕ್ ಬಂದವು. ಆಕರ್ಷಕ ವಿನ್ಯಾಸ, ಬಣ್ಣ, ಕಮ್ಮಿ ತೂಕ ಜನರನ್ನು ಆಕರ್ಷಿಸಿದವು. ನಂತರ ಹೊತ್ತುಕೊಂಡು ನಡೆಯುವ ಬದಲು ತಳ್ಳಿಕೊಂಡು ಹೋಗಲು ಅವುಗಳಿಗೆ ಚಕ್ರ ಜೋಡಿಸಲಾಯಿತು.
ಗೀರು ಬೀಳದಂತೆ ರಕ್ಷಣೆ ನೀಡಲಾಯಿತು. ಸೂಟ್ ಕೇಸ್ ಕಂಪನಿಗಳ ಹೆಸರೂ ಜನಪ್ರಿಯವಾಗ ತೊಡಗಿದವು. ಸೂಟ್‌ಕೇಸ್ ಶಕೆ ಭಾರತದಲ್ಲಿ ಆರಂಭವಾದಾಗ ಹೆಸರು ಮಾಡಿದ ಕಂಪನಿ ವಿಐಪಿ. ಆಗೆಲ್ಲ ಸೂಟ್‌ಕೇಸ್ ಅಂದರೆ ವಿಐಪಿ *(VIP) ಎನ್ನುವಂತಿತ್ತು. ಎಂಬತ್ತರ ದಶಕದಲ್ಲಿ ವಿಐಪಿ ಭಾರತವನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿತ್ತು. ಅದರ ‘ಉಡ್ ಉಡ್ ಜಾಯೆ’, ‘ವಿಐಪಿ ಅಲಾ ಸೂಟ್ ಕೇಸ್, ಕೇವಲ 289 ರೂಪಾಯಿಗೆ’ ಇತ್ಯಾದಿ ಜಾಹೀರಾತುಗಳೂ ಜನಪ್ರಿಯವಾಗಿದ್ದವು.
ಇದನ್ನೂ ಓದಿ: Kiran Upadhyay Column: ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?
ಹಸಿರು ಬಣ್ಣದ ಟ್ರಂಕುಗಳು ಮದುಮಗನಿಗೆ ಬಳುವಳಿ ಪ್ರತೀಕವಾಗಿ ಉಳಿದುಕೊಂಡಿತು. ಈಗ ಅದೂ ಸೂಟ್‌ಕೇಸ್‌ಗೆ ಬದಲಾಗಿ, ಟ್ರಂಕ್ ಸ್ಥಾನ ವಸ್ತುಸಂಗ್ರಹಾಲಯಕ್ಕೆ ಸೀಮಿತವಾಗಿದೆ. ಈಗ ಸ್ಯಾಮ್ಸೊನೈಟ, ಡೆಲ್ಸಿ, ಅಮೆರಿಕನ್ ಟೂರಿಸ್ಟರ್, ಲೂಯಿ ವಿಟ್ಟೋ, ಹಾರ್ಟ್ಮನ್ ಇತ್ಯಾದಿ ಇಪ್ಪತ್ತಕ್ಕೂ ಹೆಚ್ಚು ಸೂಟ್‌ಕೇಸ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರೂ, ಭಾರತದಲ್ಲಿ ಹೆಚ್ಚು ನಡೆಯುವುದು ವಿಐಪಿ, ಅರಿಸ್ಟೊಕ್ರಾಟ್ ಮತ್ತು ಸಫಾರಿ ಸೂಟ್‌ಕೇಸ್ ಗಳೇ.
ಈ ಮೂರೂ ಬ್ರ್ಯಾಂಡ್‌ಗಳು ಭಾರತದಲ್ಲಿ ತಯಾರಾಗುತ್ತವೆ ಎನ್ನುವುದಕ್ಕಿಂತ ಹೆಚ್ಚಿನ ಒಂದು ಸಂಬಂಧವಿದೆ. ಈ ಮೂರೂ ಜನಪ್ರಿಯವಾಗುವುದಕ್ಕೆ ಕಾರಣೀಕರ್ತರಾದವರು ಸುಧೀರ್ ಜಾಟಿಯಾ. ಭಾರತದ ಸೂಟ್‌ಕೇಸ್ ಕಥೆ ಆರಂಭವಾಗುವುದು ದಿಲಿಪ್ ಪಿರಾಮಲ್ ಅವರಿಂದ. ಭಾರವಾದ, ಲೋಹದ ಟ್ರಂಕ್ ಅಥವಾ ಮರದ ಪೆಟ್ಟಿಗೆಯ ಬದಲಾಗಿ, ಹಗುರಾದ, ಗಟ್ಟಿಯೂ ಆದ ಪ್ಲಾಸ್ಟಿಕ್ ಸೂಟ್‌ಕೇಸ್ ತಯಾರಿಸಿದರೆ ಹೇಗೆ ಎಂದು ಯೋಚಿಸಿದ ಪಿರಾಮಲ್ 1971ರಲ್ಲಿ ವಿಐಪಿ ಸಂಸ್ಥೆ ಆರಂಭಿಸಿದರು.
ಆರಂಭವಾದ ಒಂದು ದಶಕದೊಳಗೆ ಪ್ರತಿ ಮನೆಯಲ್ಲೂ ಒಂದಾದರೂ ವಿಐಪಿ ಸೂಟ್‌ಕೇಸ್ ಅಥವಾ ಬ್ರೀಫ್ʼಕೇಸ್ ಇರುತ್ತಿತ್ತು. ಕಚೇರಿ ಕೆಲಸಕ್ಕೆ ಹೋಗುವವರು ಕಾಗದ ಪತ್ರ ಕೊಂಡೊಯ್ಯಲು ವಿಐಪಿ ಬ್ರಿಫ್ʼಕೇಸ್ ಬಳಸುತ್ತಿದ್ದರು. ಮಹಾರಾಷ್ಟ್ರದ ನಾಸಿಕ್, ನಾಗಪುರ್ ಮತ್ತು ಜಲಗಾವ್ ನಗರದ ಕಾರ್ಖಾನೆಗಳಲ್ಲಿ ವಿಐಪಿ ಸೂಟ್‌ಕೇಸ್ ತಯಾರಾಗುತ್ತಿದ್ದವು. ಆ ಕಾಲದಲ್ಲಿ ಭಾರತ ದಲ್ಲಷ್ಟೇ ಅಲ್ಲ, ವಿಶ್ವದಲ್ಲಿಯೂ ವಿಐಪಿ ಹೆಸರು ಮಾಡಿತ್ತು.
ಒಂದು ಸಮಯದಲ್ಲಂತೂ ವಿಐಪಿ ವಿಶ್ವದ ಸೂಟ್‌ಕೇಸ್ ತಯಾರಿ ಸಂಸ್ಥೆಗಳ ಪಟ್ಟಿಯಲ್ಲಿ 2ನೆ ಸ್ಥಾನ ತಲುಪಿತ್ತು. ಆಗ ಸೂಟ್‌ಕೇಸ್ ತಯಾರಿಸುವ ಇನ್ನೊಂದು ಸಂಸ್ಥೆ ಅರಿಸ್ಟೋ ಪ್ಲಾ ಪ್ರೈವೇಟ್ ಲಿಮಿಟೆಡ್. ಆದರೆ ಅದಕ್ಕೆ ವಿಐಪಿ ಸೂಟ್‌ಕೇಸ್‌ಗಳಿಗೆ ಇರುವಷ್ಟು ಬೇಡಿಕೆ ಇರಲಿಲ್ಲ.
ಆದರೂ ಇನ್ನೊಂದು ಸೂಟ್‌ಕೇಸ್ ಕಂಪನಿ ಮಾರುಕಟ್ಟೆಯಲ್ಲಿ ಇರುವುದು ಪಿರಾಮಲ್‌ಗೆ ಇಷ್ಟ ವಿರಲಿಲ್ಲ. ಅದಕ್ಕೆ ಸುಲಭ ಪರಿಹಾರದ ಮಾರ್ಗವೆಂದರೆ, ಅರಿಸ್ಟೋ ಪ್ಲಾ ಸಂಸ್ಥೆಯನ್ನು ತಾನು ಖರೀದಿಸುವುದು ಎಂದು ಪಿರಾಮಲ್ ನಿರ್ಧರಿಸಿದರು. ಆದರೆ ಅದನ್ನು ನೋಡಿಕೊಳ್ಳಲು ಒಬ್ಬ ಅನುಭವಿ ವ್ಯಕ್ತಿಯ ಅವಶ್ಯಕತೆ ಅವರಿಗಿತ್ತು.
ಆಗ ಸಹಾಯಕ್ಕೆ ಬಂದವರು ಮೋಹನ್ ಲಾಲ್ ಜಾಟಿಯಾ. ಬಟ್ಟೆಯ ವ್ಯಾಪಾರ ಮಾಡುತ್ತಿದ್ದ ಮೋಹನ್ ಲಾಲ್‌ಗೆ, ಸೂಟ್ ಕೇಸ್ ವ್ಯಾಪಾರ ಮತ್ತು ವಿತರಣೆ ಕುರಿತು ಸಾಕಷ್ಟು ಅನುಭವವಿತ್ತು. ಅವರು ಪಿರಾಮಲ್ ಸ್ನೇಹಿತರೂ ಆಗಿದ್ದರು. ಪಿರಾಮಲ್ ಮತ್ತು ಜಾಟಿಯಾ ಇಬ್ಬರೂ ತಲಾ ಐವತ್ತು ಪ್ರತಿಶತದಂತೆ ಅರಿಸ್ಟೋ ಪ್ಲಾ ಸಂಸ್ಥೆಯ ಒಡೆಯರಾಗಿ, 1974ರಲ್ಲಿ ಅರಿಸ್ಟೊಕ್ರಾಟ್ ಹೆಸರಿನಲ್ಲಿ ಮಾರುಕಟ್ಟೆಗೆ ತರಲು ಆರಂಭಿಸಿದರು. ಆದರೆ ಪಿರಾಮಲ್ ವಿಐಪಿ ಸಂಸ್ಥೆಯ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದು, ಅರಿಸ್ಟೊಕ್ರಾಟ್ ಕಡೆ ಹೆಚ್ಚಿನ ಲಕ್ಷ್ಯ ವಹಿಸದಿರುವುದು ಜಾಟಿಯಾಗೆ ಮನವರಿಕೆಯಾಗತೊಡಗಿತ್ತು. ಅದಕ್ಕೆ ಕಾರಣ ಬಹಳ ಸರಳವಾಗಿತ್ತು.
ವಿಐಪಿ ನೂರು ಪ್ರತಿಶತ ಪಿರಾಮಲ್ ಒಡೆತನದಲ್ಲಿತ್ತು. ಅರಿಸ್ಟೊಕ್ರಾಟ್‌ನಲ್ಲಿ ಶೇ. ಐವತ್ತು ಮಾತ್ರ ಪಿರಾಮಲ್ ಒಡೆತನವಿತ್ತು. ಆದ್ದರಿಂದ ಸ್ವಾಭಾವಿಕವಾಗಿಯೇ ಪಿರಾಮಲ್ ವಿಐಪಿ ಸಂಸ್ಥೆಯನ್ನು ಬೆಳೆಸಲು ಹೆಚ್ಚು ಶ್ರಮವಹಿಸುತ್ತಿದ್ದಾರೆ ಎಂದು ಜಾಟಿಯಾ ತಿಳಿದರು. ಈ ಸಂಕೀರ್ಣದಿಂದ ಹೊರಗೆ ಬಂದು ಅರಿಸ್ಟೋಕ್ರಾಟ್ ಸಂಸ್ಥೆ ಬೆಳೆಸಲು ಬಯಸಿದರು. ಆದರೆ ಜಾಟಿಯಾಗೆ ತಮ್ಮದೇ ಆದ ಬಟ್ಟೆಯ ಉದ್ಯಮ ಇದ್ದುದರಿಂದ, ಇಲ್ಲಿ ಐವತ್ತು ಪ್ರತಿಶತ ಮಾತ್ರ ಭಾಗಿದಾರರಾಗಿದ್ದರಿಂದ ಜತೆಗೆ ವಯಸ್ಸೂ ಆಗಿದ್ದರಿಂದ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರು ತಮ್ಮ ಮಗ ಸುಧೀರ್ ಜಾಟಿಯಾ ಅವರನ್ನು ತಮ್ಮ ಸ್ಥಾನದಲ್ಲಿ ಸಂಸ್ಥೆಯ ನಿರ್ದೇಶಕರನ್ನಾಗಿ ಸೇರಿಸಿದರು.
ಸುಧೀರ್ ಜಾಟಿಯ ಅರಿಸ್ಟೊಕ್ರಾಟ್ ಸಂಸ್ಥೆಯನ್ನು ಸೇರಿಕೊಂಡಾಗ ಕೇವಲ 21 ವರ್ಷದ ಯುವಕ ರಾಗಿದ್ದರು. ಅವರ ಬಳಿ ವ್ಯಾಪಾರದ ಯಾವುದೇ ಅನುಭವ ಇರಲಿಲ್ಲ. ಸಾಮಾನ್ಯವಾಗಿ ಹೊಸದಾಗಿ ಬಂದ ಮಾಲೀಕರ ಮಗನನ್ನು ನೋಡುವ ರೀತಿಯಲ್ಲಿಯೇ ಅಲ್ಲಿಯ ನೌಕರರು ಸುಧೀರ್ ಅವರನ್ನು ನೋಡಿದರು.
ಸುಧೀರ್ ಅವರೆಲ್ಲರ ವಿಚಾರಗಳನ್ನೂ ಮೀರಿ ನಿಂತರು. ಅರಿಸ್ಟೊಕ್ರಾಟ್ ಕಂಪನಿಯನ್ನು ವಿಐಪಿಯ ನೆರಳಿನಿಂದ ಹೊರಗೆ ತಂದು ಸದೃಢವಾಗಿ ನಿಲ್ಲಿಸುವುದು ಸುಧೀರ್ ಜಾಟಿಯಾಗೆ ದೊಡ್ಡ ಸವಾಲಾಗಿತ್ತು. ಸುಧೀರ್ ಜಾಟಿಯಾ ಮೂರು ಕೆಲಸದಿಂದ ಇದನ್ನು ಸಾಧಿಸಿದರು.
ಬ್ಯಾಗ್ ಮತ್ತು ಸೂಟ್‌ಕೇಸ್‌ನ ವಿನ್ಯಾಸ ಬದಲಿಸಿ, ಬೆಲೆ ನಿಯಂತ್ರಿಸಿ, ಮಾರುಕಟ್ಟೆಯಲ್ಲಿ ವಿತರಣೆ ಯನ್ನು ಅಭಿವೃದ್ಧಿಪಡಿಸಿ, ಬದುಕುಳಿಯುವುದೇ ಕಷ್ಟ ಎಂದು ತಿಳಿದಿದ್ದ ಅರಿಸ್ಟೊಕ್ರಾಟ್ ಸಂಸ್ಥೆಯ ಜೀವಕ್ಕೆ ಆಧಾರವಾಗಿ ನಿಂತರು. ದಶಕ ಕಳೆಯುವುದರೊಳಗೆ ಅರಿಸ್ಟೊಕ್ರಾಟ್ ಒಂದು ಸದೃಢ ಸಂಸ್ಥೆಯಾಗಿ ಬೆಳೆಯಿತು.
ಈ ನಡುವೆ ದಿಲೀಪ್ ಪಿರಾಮಲ್ ವಯಸ್ಸಿನ ಕಾರಣದಿಂದಾಗಿ ನಿವೃತ್ತಿ ಪಡೆಯುವ ಯೋಚನೆ ಯಲ್ಲಿದ್ದರು. ಅವರು ಒಬ್ಬ ಪ್ರತಿಭಾನ್ವಿತ, ಜವಾಬ್ದಾರಿ ಯುತ ವ್ಯಕ್ತಿಯ ಹುಡುಕಾಟದಲ್ಲಿದ್ದರು. ಆಗ ಅವರಿಗೆ ಕಂಡದ್ದು ಸುಧೀರ್ ಜಾಟಿಯಾ. 2003ರಲ್ಲಿ ಸುಧೀರ್ ಜಾಟಿಯಾ ಅವರನ್ನು ಅರಿಸ್ಟೊ ಕ್ರಾಟ್ ಮತ್ತು ವಿಐಪಿ, ಎರಡೂ ಸಂಸ್ಥೆಗಳ ನಿರ್ದೇಶಕರನ್ನಾಗಿ ಪಿರಾಮಲ್ ನೇಮಿಸಿದರು.
ಇದು ಆ ಕಾಲದಲ್ಲಿ ದೇಶದಾದ್ಯಂತ ಆಶ್ಚರ್ಯದ ಸಂಚಲನವನ್ನುಂಟುಮಾಡಿತ್ತು. ಆದರೆ ಸುಧೀರ್ ಜಾಟಿಯ ಮನದಲ್ಲಿ ಒಂದು ಆತಂಕವಿತ್ತು. ವಿಐಪಿ ಮತ್ತು ಅರಿಸ್ಟೊಕ್ರಾಟ್ ಎರಡೂ ಒಂದೇ ಒಡೆತನದ ಸಂಸ್ಥೆಗಳು, ಒಂದೇ ಉತ್ಪನ್ನವನ್ನು ಒಂದೇ ಮಾರುಕಟ್ಟೆಯಲ್ಲಿ ಒಂದೇ ರೀತಿಯ ಬಳಕೆದಾರರಿಗೆ ಮಾರುತ್ತಿರುವುದನ್ನು ತಡೆಗೆಟ್ಟುವುದು ಹೇಗೆ ಎಂಬುದನ್ನು ಅವರು ಆಲೋಚಿಸು ತ್ತಿದ್ದರು. ಅದಕ್ಕಾಗಿ ಅವರು ಒಂದು ಉಪಾಯವನ್ನು ಕಂಡುಕೊಂಡರು.
ವಿಐಪಿಯನ್ನು ವ್ಯಾಪಾರಸ್ಥರ, ಶ್ರೀಮಂತರ ಬ್ಯಾಗ್ʼಗಳೆಂದೂ, ಅರಿಸ್ಟೊಕ್ರಾಟ್ ಸಾಮಾನ್ಯ ಜನರ, ವಿದ್ಯಾರ್ಥಿಗಳ ಬ್ಯಾಗ್‌ಗಳೆಂದೂ ಗುರುತಿಸುವಂತೆ ಮಾಡಿದರು. ಎರಡರದ್ದೂ ವಿನ್ಯಾಸ, ಬೆಲೆ, ಬೇರೆಯಾಗಿ ನಿಗದಿಪಡಿಸಿದರು. ಅಂಗಡಿಗಳಲ್ಲಿ ಇಡುವ ಜಾಗ ಮತ್ತು ಇಡುವ ರೀತಿಯನ್ನೂ ಬೇರೆ ಬೇರೆ ಮಾಡಿದರು. ಇದರಿಂದ ಎರಡೂ ಕಂಪನಿಗಳು ಬೇರೆ ಬೇರೆಯೇ ಎನ್ನುವ ರೀತಿಯಲ್ಲಿ ಬೆಳೆದವು. ಇದರಿಂದಾಗಿ ಕೆಲವು ವರ್ಷಗಳಲ್ಲಿಯೇ ಸುಧೀರ್ ವಿಐಪಿ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ಪಡೆದರು.
2008ರಲ್ಲಿ ಜಾಗತೀಕರಣದಿಂದಾಗಿ ಅಮೆರಿಕದ ಸ್ಯಾಮ್ಸನೈಟ್ ಮತ್ತು ಅದರ ಅಂಗಸಂಸ್ಥೆಯಾದ ಅಮೆರಿಕನ್ ಟೂರಿಸ್ಟರ್ ಭಾರತವನ್ನು ಪ್ರವೇಶಿಸಿದ್ದು ವಿಐಪಿ ಮತ್ತು ಅರಿಸ್ಟೊಕ್ರಾಟ್ ಸಂಸ್ಥೆಗಳಿಗೆ ವ್ಯಾಪಾರದಲ್ಲಿ ದೊಡ್ಡ ಪೆಟ್ಟನ್ನೇ ಕೊಟ್ಟಿತ್ತು. ಜತೆಗೆ ಚೀನಾದಿಂದ ಬಂದ ಕಮ್ಮಿ ಬೆಲೆಯ ಸೂಟ್ ಕೇಸ್‌ಗಳು ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದ್ದವು.
ಇದರಿಂದಾಗಿ 2008ರಲ್ಲಿ ಮೊದಲ ಬಾರಿಗೆ ವಿಐಪಿ ಮೂವತ್ತು ಪ್ರತಿಶತ ನಷ್ಟವನ್ನು ಅನುಭವಿಸಿತ್ತು. ಆಗ ಕೆಲವರು ಸುಧೀರ್ ಅವರನ್ನು ಟೀಕಿಸಲು ಆರಂಭಿಸಿದರು. ಅವರ ಕೆಲವು ನಿರ್ಣಯಗಳಿಂದಾಗಿ ಕಂಪನಿ ನಷ್ಟ ಅನುಭವಿಸುತ್ತದೆ ಎಂದರು. ಆಗ ಸುಧೀರ್ ಜಾಟಿಯಾ ಒಂದು ನಿರ್ಣಯವನ್ನು ಕೈಗೊಂಡರು.
ಹೆಚ್ಚಿನ ಬೆಲೆಯ ಬ್ಯಾಗ್ ಮತ್ತು ಸೂಟ್‌ಕೇಸ್ ನಿರ್ಮಾಣವನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹ್ಯಾಂಡ್‌ಬ್ಯಾಗ್‌ಗಳನ್ನು ಹೆಚ್ಚು ತಯಾರಿಸು ವಂತೆ ಹೇಳಿದರು. ಅದಕ್ಕೆ ಬೇಕಾದ ಕೆಲವು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿದರು. ಆದರೆ ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದಿರಲು ನಿರ್ಧರಿಸಿ ದರು.
ಪ್ರತಿಯೊಂದು ಸಣ್ಣ ವಿಷಯದಲ್ಲೂ, ನಾಜೂಕಿನ ಸ್ಥಿತಿಯಲ್ಲೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದರು. ಇದರಿಂದಾಗಿ ವಿಐಪಿ ಸಂಸ್ಥೆಯಲ್ಲಿ ಇತಿಹಾಸ ನಿರ್ಮಾಣ ವಾಯಿತು. 2019ರಲ್ಲಿ ವಿಐಪಿ ಸಂಸ್ಥೆ ಮೊದಲ ಬಾರಿಗೆ ಐವತ್ತು ಕೋಟಿ ರೂಪಾಯಿ ಲಾಭ ಗಳಿಸಿತು. ಈ ಯಶಸ್ಸಿನಿಂದಾಗಿ ಸುಧೀರ್ ಜಾಟಿಯಾ ಲಗೇಜ್ ಇಂಡಸ್ಟ್ರಿಯಲ್ಲಿ ಮನೆಮಾತಾದರು. ಆದರೆ ಯಶಸ್ಸಿನ ಜೊತೆಗೆ ಕೆಲವೊಮ್ಮೆ ಬದಲಾವಣೆಯ ನಿರ್ಣಯಗಳು ಬರುತ್ತವೆ ಎಂಬುದಕ್ಕೆ ಸಾಕ್ಷಿ ಯಾಗುವಂತೆ ವಿಐಪಿ ಸಂಸ್ಥೆಯಲ್ಲಿಯೂ ಬದಲಾವಣೆಯ ಗಾಳಿ ಬೀಸಿತ್ತು.
ಪಿರಾಮಲ್ ಮನೆತನದ ಯಾರಾದರೂ ಒಬ್ಬರು ವ್ಯವಸ್ಥಾಪಕ ನಿರ್ದೇಶಕರಾಗಬೇಕು ಎನ್ನುವ ಸಹಮತ ಮೂಡಿತ್ತು. ಅದಕ್ಕಾಗಿ ದಿಲೀಪ್ ಪಿರಾಮಲ್ ಅವರ ಪುತ್ರಿ, ರಾಧಿಕಾ ಪಿರಾಮಲ್ ಅವರನ್ನು ಸುಧೀರ್ ಜಾಗದಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಆಗ ಸುಧೀರ್‌ಗೆ ವಿಐಪಿಯಲ್ಲಿ ಹೆಚ್ಚಿನ ಕೆಲಸವೇನೂ ಇರಲಿಲ್ಲ. ಅವರಿಗೆ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಬೇರೆ ಮಾರ್ಗ ಹುಡುಕುವುದು ಅನಿವಾರ್ಯವಾಯಿತು. ಆಗ ಅವರ ಕಣ್ಣಿಗೆ ಬಿದ್ದದ್ದು ಸಫಾರಿ ಸಂಸ್ಥೆ.
1980ರಿಂದಲೇ ಮಾರುಕಟ್ಟೆಯಲ್ಲಿದ್ದರೂ ಸಫಾರಿ ಸಂಸ್ಥೆ ಹೆಚ್ಚಿನ ಲಾಭವನ್ನೂ ಗಳಿಸುತ್ತಿರಲಿಲ್ಲ, ಪ್ರಚಾರದಲ್ಲೂ ಇರಲಿಲ್ಲ. ಗುಜರಾತಿನ ಬರೋಡಾದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸಫಾರಿ ಬ್ಯಾಗ್ ಗಳು ಭಾರತದ ಸೇನೆ ಮತ್ತು ಕೆಲವೇ ನಗರದ ಸಣ್ಣಪುಟ್ಟ ಅಂಗಡಿಗಳಲ್ಲಿ ಮಾತ್ರ ಕಾಣಿಸಿಕೊಳ್ಳು ತ್ತಿದ್ದವು.
ಕಂಪನಿಯ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದರೆ, 2011ರ ವೇಳೆಗೆ ವಾರ್ಷಿಕವಾಗಿ ಸುಮಾರು 70 ಕೋಟಿ ವಹಿವಾಟು ನಡೆಸುತ್ತಿದ್ದ ಸಂಸ್ಥೆಯ ಲಾಭ ಮೂರು ಕೋಟಿಗೂ ಕಡಿಮೆ ಇತ್ತು. ಸುಧೀರ್‌ಗೆ ಸಫಾರಿ ಹೆಸರೇ ಆಕರ್ಷಕವಾಗಿ ಕಂಡಿತು. ಈ ಸಂಸ್ಥೆ ತನ್ನ ಕೈಗೆ ಸಿಕ್ಕರೆ ಇದನ್ನು ಉದ್ಧಾರ ಮಾಡು ತ್ತೇನೆ ಎನ್ನುವ ಬಲವಾದ ನಂಬಿಕೆ ಇತ್ತು. ಆದ್ದರಿಂದ, ಈ ಸಂಸ್ಥೆಯಲ್ಲಿ ಹಣ ಹೂಡಿ ತಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು.
ಸ್ವತಃ ಇಪ್ಪತ್ತೊಂಬತ್ತು ಕೋಟಿ ರೂಪಾಯಿ ಸುರಿದು, ಕಂಪನಿಯ ಐವತ್ತಾರು ಪ್ರತಿಶತ ಶೇರು ಖರೀದಿಸಿ, ಸಫಾರಿ ಸಂಸ್ಥೆಯ ಸಿಇಓ ಆದರು. ಆದರೆ ಅವರ ಹಾದಿ ಸುಗಮವಾಗಿರಲಿಲ್ಲ. ಸಫಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಹಳಬರಾಗಿದ್ದರು. ಸುಧೀರ್ ಹೊಸಬರನ್ನು ಕೆಲಸಕ್ಕೆ ಸೇರಿಸಿಕೊಂಡರು.
ಸಫಾರಿ ಸೂಟ್‌ಕೇಸ್‌ಗಳು ಹೆಚ್ಚಿನ ರಿಪೇರಿಗೆ ಬರುತ್ತಿದ್ದುದರಿಂದ ರಿಪೇರಿ ಕೇಂದ್ರಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಸುಧೀರ್ ಬಂದ ನಂತರ ಗುಣಮಟ್ಟ ಹೆಚ್ಚಿಸಿದರೆ ಬ್ಯಾಗ್ ರಿಪೇರಿಗೆ ಬರುವುದಿಲ್ಲ ಎಂದು ನಿರ್ಧರಿಸಿ ಗುಣಮಟ್ಟ ಹೆಚ್ಚಿಸಿದರು. ಒಂದು ವೇಳೆ ಬ್ಯಾಗ್ ಹಾಳಾದರೆ ಬದಲಾಗಿ ಹೊಸತನ್ನೇ ನೀಡಲು ಸೂಚಿಸಿದರು.
ಸಾಂಪ್ರದಾಯಿಕ ವಿತರಣಾಕಾರರ ಹೊರತಾಗಿ ಸಾಮಾನ್ಯ ಮಧ್ಯಮವರ್ಗದ ಜನ ಓಡಾಡುವ ಜಾಗದಲ್ಲಿ, ಬಿಗ್ ಬಝಾರ್, ರಿಲಾಯ ಟ್ರೆಂq ಇತ್ಯಾದಿ ಮಳಿಗೆಗಳನ್ನು ಸಂಪರ್ಕಿಸಿ ಅಲ್ಲಿಯೂ ಸಫಾರಿ ಸಿಗುವಂತೆ ಮಾಡಿದರು. ಅಮೆಝಾನ್, ಫ್ಲಿಪ್‌ಕಾರ್ಟ್ ಜತೆ ಒಪ್ಪಂದ ಮಾಡಿಕೊಂಡು ಮೊದಲ ಬಾರಿಗೆ ಆನ್ ಲೈನಿನಲ್ಲಿ ಸೂಟ್‌ಕೇಸ್ ಸಿಗುವಂತೆ ಮಾಡಿದರು.
ಇದರಿಂದಾಗಿ ಸಫಾರಿಯ ವ್ಯಾಪಾರದಲ್ಲಿ ಶೇ. ಮೂವತ್ತರಷ್ಟು ಆನ್‌ಲೈನ್‌ನಿಂದ ಬರುವಂತಾ ಯಿತು. ಇದರಿಂದಾಗಿ ಸುಧೀರ್ ಸೇರಿಕೊಂಡಾಗ ಎಪ್ಪತ್ತು ಕೋಟಿ ವ್ಯಾಪಾರ ಮಾಡುತ್ತಿದ್ದ ಸಫಾರಿ 2020ರ ವೇಳೆಗೆ ಆರುನೂರು ಕೋಟಿ ದಾಟಿತ್ತು. ಕೋವಿಡ್ ಸಂದರ್ಭದಲ್ಲಿ ಬ್ಯಾಗ್ ತಯಾರಿಸುವ ಕಂಪನಿಗಳೆಲ್ಲ ನಷ್ಟದಲ್ಲಿದ್ದು ನೌಕರರನ್ನು ತೆಗೆದುಹಾಕುತ್ತಿದ್ದರೆ, ಸಫಾರಿ ಎಲ್ಲರನ್ನೂ ಹಾಗೆಯೇ ಉಳಿಸಿಕೊಂಡಿತ್ತು. ಇದು ಕೋವಿಡ್ ನಂತರವೂ ಸಫಾರಿ ಉಳಿದ ಕಂಪನಿಗಳಿಗಿಂತ ಮೊದಲೇ ಕಾರ್ಯ ಆರಂಭಿಸಿ, ಹೆಚ್ಚಿನ ಲಾಭ ಗಳಿಸಲು ಸಹಾಯಕಾರಿ ಯಾಯಿತು.
2024ರಲ್ಲಿ ಸಫಾರಿ 1500 ಕೋಟಿಗೂ ಹೆಚ್ಚು ವ್ಯಾಪಾರ ಮಾಡಿ, ವಿಐಪಿಗಿಂತ ಮುಂದೆ ಸಾಗಿ, ಭಾರತದ ನಂಬರ್ ವನ್ ಸೂಟ್‌ಕೇಸ್ ತಯಾರಿಸುವ ಸಂಸ್ಥೆಯಾಗಿ ಗುರುತಿಸಿಕೊಂಡಿತು. ಅದಕ್ಕೇ ಹೇಳಿದ್ದು, ಭಾರತದಲ್ಲಿ ಸೂಟ್‌ಕೇಸ್ ವ್ಯಾಪಾರದಲ್ಲಿ ನೆನಪಿಡಬೇಕಾದದ್ದು ರಾಜಕಾರಣಿಗಳನ್ನೂ ಅಲ್ಲ, ಪಕ್ಷವನ್ನೂ ಅಲ್ಲ, ಸುಧೀರ್ ಜಾಟಿಯಾ ಅವರನ್ನು.